ರಾಯಭಾರತ್ವ [Diplomacy]:
[A.] ರಾಯಭಾರತ್ವದ ಅರ್ಥ [Meaning of Diplomacy]: ರಾಯಭಾರತ್ವ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಡಿಪ್ಲೊಮೆಸಿ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲವನ್ನು ಚಿಂತಕರು ಗ್ರೀಕ್ ಭಾಷೆಯ ಡಿಪ್ಲೌನ್ ಅಥವಾ ಲ್ಯಾಟಿನ್ ಭಾಷೆಯ ಡಿಪ್ಲೊಮಾ ಪದಗಳಲ್ಲಿ ಗುರುತಿಸಿದ್ದಾರೆ. 1796 ರಲ್ಲಿ ಎಡ್ಮಂಡ್ ಬರ್ಕ್ ಎಂಬ ರಾಜಕೀಯ ಚಿಂತಕ ಮೊದಲ ಬಾರಿಗೆ ರಾಯಭಾರ ಎಂಬ ಪದವನ್ನು ಅಂತರ್ರಾಷ್ಟ್ರೀಯ ವ್ಯವಹಾರದಲ್ಲಿನ ಸಂಧಾನ ಕೌಶಲ್ಯ, ಭಾಷಣ ಅಥವಾ ಪತ್ರವನ್ನು ಸೂಚಿಸಲು ಬಳಸಿದರು. ಕಾಲಾನುಕ್ರಮದಲ್ಲಿ ರಾಯಭಾರದೊಡನೆ ಅಂತರ್ಸಂಬಂಧವುಳ್ಳ ರಾಯಭಾರತ್ವ ಮತ್ತು ರಾಯಭಾರತ್ವವನ್ನು ಜಾರಿಗೊಳಿಸುವ ರಾಯಭಾರಿ ಪರಿಕಲ್ಪನೆಗಳು ಅಸ್ತಿತ್ವಕ್ಕೆ ಬಂದವು. ಗಮನಾರ್ಹ ಅಂಶವೇನೆಂದರೆ, ವೈವಿಧ್ಯಮಯವಾದ ಅರ್ಥವನ್ನು ಹೊಂದಿರುವ ರಾಯಭಾರತ್ವದ ಅರ್ಥವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ಹೀಗಾಗಿ ಹೆರಾಲ್ಡ್ ನಿಕೊಲ್ಸನ್ ವಿದೇಶಾಂಗ ನೀತಿಯನ್ನು ಸೂಚಿಸುವ, ಸಂಧಾನವನ್ನು ಪ್ರತಿನಿಧಿಸುವ, ಸಂಧಾನದ ವಿಧಾನವನ್ನು ವಿವರಿಸುವ, ಅಂತರ್ರಾಷ್ಟ್ರೀಯ ಸಂಬಂಧಗಳ ಸೇವೆಗಳನ್ನು ತಿಳಿಸುವ ಮತ್ತು ನೈಪುಣ್ಯತೆಯನ್ನು ಪ್ರತಿಪಾದಿಸುವ ಪರಿಕಲ್ಪನೆಯೇ ರಾಯಭಾರತ್ವ ಎಂಬುದಾಗಿ ಅಭಿಪ್ರಾಯಪಟ್ಟಿರುವರು. ಚಿಂತಕರು ರಾಯಭಾರತ್ವ ಕುರಿತಂತೆ ನೀಡಿರುವ ಪ್ರಧಾನ ವ್ಯಾಖ್ಯಾನಗಳ ಬೆಳಕಿನಲ್ಲಿ ಅದರ ಅರ್ಥವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ.
ಆಕ್ಸ್ಫರ್ಡ್ ಇಂಗ್ಲಿಷ್ ಅರ್ಥಕೋಶದ ಪ್ರಕಾರ (ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಸಂಧಾನದ ಮೂಲಕ ನಿರ್ವಹಿಸುವುದೇ ರಾಯಭಾರತ್ವ)
ಪೆಡಲ್ ಫೋರ್ಡ್ ಮತ್ತು ಲಿಂಕನ್ ಪ್ರಕಾರ(ಶಾಂತಿಯ ಕಾಲದಲ್ಲಿ ರಾಷ್ಟ್ರಗಳು ಪರಸ್ಪರ ವ್ಯವಹರಿಸುವಾಗ ಸಾಂಪ್ರದಾಯಿಕವಾಗಿ ಅನುಸರಿಸುವ ಪ್ರಾತಿನಿಧ್ಯ ಹಾಗೂ ಸಂಧಾನ ಪ್ರಕ್ರಿಯೆಗಳೇ ರಾಯಭಾರತ್ವ)
ಹಾನ್ಸ್ ಜೆ. ಮಾರ್ಗೆಂತೊ ಪ್ರಕಾರ (ಶಾಂತಿಯುತ ಮಾರ್ಗದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಉತ್ತೇಜಿಸುವ ವಿಧಾನವೇ ರಾಯಭಾರತ್ವ)
ಕೆ. ಎಂ. ಫಣಿಕರ್ ಪ್ರಕಾರ (ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಒಬ್ಬರ ಹಿತಾಸಕ್ತಿಯನ್ನು ಇನ್ನೊಬ್ಬರ ಮೇಲೆ ಹೇರುವ ಕಲೆಯೇ ರಾಯಭಾರತ್ವ)
ಹೆರಾಲ್ಡ್ ನಿಕೋಲ್ಸನ್ ಪ್ರಕಾರ (ರಾಷ್ಟ್ರೀಯ ಹಿತಾಸಕ್ತಿಗಳನ್ನು ಅಂತರ್ರಾಷ್ಟ್ರೀಯ ಹಿತಾಸಕ್ತಿಗಳೊಡನೆ ಹೊಂದಾಣಿಕೆ ಮಾಡುವ ಪ್ರಕ್ರಿಯೆಯೇ ರಾಯಭಾರತ್ವ)
ಈ ಮೇಲೆ ಪ್ರಸ್ತಾಪಿಸಲಾಗಿರುವ ರಾಯಭಾರತ್ವದ ವ್ಯಾಖ್ಯಾನಗಳ ಆಧಾರದ ಮೇಲೆ ಸರಳಾರ್ಥದಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ನಿರ್ವಹಿಸುವ ಸಾಮಾನ್ಯ ಸಾಧನವನ್ನು ರಾಯಭಾರತ್ವ ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ನಿರ್ವಹಿಸುವಾಗ ಅನುಸರಿಸಲಾಗುವ ತಂತ್ರಗಳು ಮತ್ತು ಕಾರ್ಯ ವಿಧಾನಗಳನ್ನು ಒಳಗೊಂಡ ಪರಿಕಲ್ಪನೆಯೇ ರಾಯಭಾರತ್ವ. ವಿದೇಶಿ ಸಂಬಂಧಗಳನ್ನು ನಿರ್ವಹಿಸುವ ಮತ್ತು ರಾಷ್ಟ್ರಗಳ ನಡುವೆ ಸಂಧಾನ ಏರ್ಪಡಿಸುವ ಕಲೆಯಾಗಿರುವ ರಾಯಭಾರತ್ವವು ರಾಷ್ಟ್ರವೊಂದರ ವಿದೇಶಾಂಗ ನೀತಿಯನ್ನು ಅನುಷ್ಟಾನಗೊಳಿಸುವ ಪ್ರಮುಖ ಸಾಧನವಾಗಿದೆ. ಒಟ್ಟಾರೆ ರಾಷ್ಟ್ರಗಳ ಸಂಬಂಧಗಳಲ್ಲಿ ಸಂಧಾನದ ಮೂಲಕ ದೇಶವೊಂದು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಾಧನವನ್ನು ರಾಯಭಾರತ್ವವು ಪ್ರತಿನಿಧಿಸುತ್ತದೆ.
ಗಮನಾರ್ಹ ಅಂಶವೇನೆಂದರೆ, ರಾಯಭಾರತ್ವದ ಸಫಲತೆ ಹಾಗೂ ವಿಫಲತೆ ಅದನ್ನು ಅನುಷ್ಟಾನಗೊಳಿಸುವ ರಾಯಭಾರಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ರಾಯಭಾರಿಯು ತನ್ನ ರಾಷ್ಟ್ರದ ವಿದೇಶಾಂಗ ನೀತಿಯಿಂದ ಮಾರ್ಗದರ್ಶಿಸಲ್ಪಡುವ ರಾಯಭಾರತ್ವದ ಅನುಷ್ಟಾನಕ್ಕೆ ಶ್ರಮಿಸಬೇಕಿದ್ದು ಆತನ ಮಾತು ಮತ್ತು ಕೃತಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ರಾಯಭಾರಿಯು ತನ್ನ ದೇಶದ ರಾಷ್ಟ್ರೀಯ ಹಿತಾಸಕ್ತಿಗಳ ಸಾಧನೆಗೆ ಕೆಲವೊಮ್ಮೆ ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಆದ್ದರಿಂದಲೇ ಹೆನ್ರಿ ವಾಟನ್ ಎಂಬಾತ (ದೇಶವೊಂದು ತನ್ನ ಪರವಾಗಿ ಸುಳ್ಳು ಹೇಳಲು ವಿದೇಶಕ್ಕೆ ಕಳುಹಿಸಿರುವ ಪ್ರಾಮಾಣಿಕ ವ್ಯಕ್ತಿ) ಎಂಬುದಾಗಿ ರಾಯಭಾರಿಯನ್ನು ಕುರಿತಂತೆ ವ್ಯಂಗ್ಯವಾಗಿ ನುಡಿದಿದ್ದಾರೆ. ಅಂತೆಯೇ ಒಣ ನೀರು ಮತ್ತು ಕಟ್ಟಿಗೆಯಂತಹ ಕಬ್ಬಿಣವನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆ ರಾಯಭಾರತ್ವವನ್ನು ಅನುಷ್ಟಾನಗೊಳಿಸುವ ರಾಯಭಾರಿಗಳಲ್ಲಿ ಪ್ರಾಮಾಣಿಕತೆ ಕಾಣಲಾಗದು ಎಂಬ ನಿಲುವು ಅನೇಕರದಾಗಿದೆ.
[B.] ರಾಯಭಾರತ್ವದ ಸ್ವರೂಪ [Nature of Diplomacy]: ರಾಯಭಾರತ್ವವು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ನಿರ್ವಹಿಸುವ ಪ್ರಧಾನ ಸಾಧನ. ವೈವಿಧ್ಯಮಯವಾದ ರಾಯಭಾರತ್ವದ ಅರ್ಥ ಮತ್ತು ವ್ಯಾಖ್ಯಾನಗಳನ್ನು ಆಧರಿಸಿ ಅದು ಹೊಂದಿರುವ ಸ್ವರೂಪವನ್ನು ಕೆಳಗಿನ ಅದರ ಲಕ್ಷಣಗಳ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.
1. ರಾಯಭಾರತ್ವವು ಅಂತರ್ರಾಷ್ಟ್ರೀಯ ಸಂಬಂಧಗಳ ಸಾಧನ: ರಾಯಭಾರತ್ವವು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ನಿರ್ವಹಿಸುವ ಸಾಮಾನ್ಯ ಸಾಧನವೆನಿಸಿದೆ. ಸಾರ್ವತ್ರಿಕವಾಗಿ ಎಲ್ಲ ರಾಷ್ಟ್ರಗಳು ತಮ್ಮ ಪರಸ್ಪರ ಸಂಬಂಧಗಳಲ್ಲಿ ರಾಯಭಾರತ್ವವನ್ನು ಹಿಂದಿನಿಂದ ಅನುಸರಿಸಿಕೊಂಡು ಬಂದಿವೆ. ರಾಷ್ಟ್ರಗಳ ಸಂಬಂಧವನ್ನು ನಿರ್ಧರಿಸುವ ತಂತ್ರ ಮತ್ತು ಕಾರ್ಯ ವಿಧಾನಗಳನ್ನು ಈ ರಾಯಭಾರತ್ವ ಒಳಗೊಂಡಿರುತ್ತದೆ.
2. ರಾಯಭಾರತ್ವವು ಕಾರ್ಯ ಯೋಜನೆ: ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ವಹಿಸುವ ಔಪಚಾರಿಕ ಕಾರ್ಯ ಯೋಜನೆಯನ್ನು ರಾಯಭಾರತ್ವವು ಪ್ರತಿನಿಧಿಸುತ್ತದೆ.
3. ರಾಯಭಾರತ್ವವು ಸ್ಥಾಪಿತ ಕಾರ್ಯ ವಿಧಾನಗಳ ಆಧಾರವುಳ್ಳದ್ದು: ರಾಷ್ಟ್ರಗಳ ನಡುವೆ ಸಂಬಂಧಗಳನ್ನು ನಿರ್ವಹಿಸುವ ಸಾಧನವಾದ ರಾಯಭಾರತ್ವವು ನಿಶ್ಚಿತ ಕಾರ್ಯ ವಿಧಾನಗಳನ್ನು ಆಧರಿಸಿರುವ ಪರಿಕಲ್ಪನೆಯಾಗಿರುತ್ತದೆ. ರಾಯಭಾರಿ ಕಛೇರಿಗಳು, ರಾಯಭಾರಕ ನಿಯಮಾವಳಿಗಳು, ರಾಯಭಾರಕ ಸ್ಥಾನಮಾನಗಳು ಅದರ ಕಾರ್ಯ ವಿಧಾನಗಳನ್ನು ಪ್ರತಿನಿಧಿಸುತ್ತವೆ.
4. ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸ್ವರೂಪವುಳ್ಳದ್ದು: ಆರಂಭದಲ್ಲಿ ರಾಯಭಾರತ್ವವು ದ್ವಿಪಕ್ಷೀಯ ಸ್ವರೂಪದ್ದಾಗಿತ್ತು. ಸಮಕಾಲೀನ ಜಗತ್ತಿನಲ್ಲಿ ರಾಯಭಾರತ್ವವು ಬಹುಪಕ್ಷೀಯ ಸ್ವರೂಪವನ್ನು ತಾಳಿದೆ. ಸಮ್ಮೇಳನ ರಾಯಭಾರತ್ವ, ಅಂತರ್ರಾಷ್ಟ್ರೀಯ ಸಂಘಟನೆಗಳು, ರಾಷ್ಟ್ರಗಳ ಗುಂಪುಗಳ, ಕಾರ್ಯಾಚರಣೆಯು ರಾಯಭಾರತ್ವದ ಬಹುಪಕ್ಷೀಯ ಸ್ವರೂಪಕ್ಕೆ ಪ್ರಧಾನ ಕಾರಣವಾಗಿವೆ.
5. ರಾಯಭಾರತ್ವವು ಬಹು ಆಯಾಮದ ವಿಷಯಗಳಿಗೆ ಸಂಬಂಧಿಸಿದ್ದುದು: ರಾಯಭಾರತ್ವವು ರಾಷ್ಟ್ರಗಳ ನಡುವಿನ ರಾಜಕೀಯ ವಿಷಯಗಳಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಾಣಿಜ್ಯ ಮುಂತಾದ ವಿವಿಧ ವಿಷಯಗಳಿಗೆ ರಾಯಭಾರತ್ವದ ಕಾರ್ಯ ವ್ಯಾಪ್ತಿ ತನ್ನ ಬಾಹುಗಳನ್ನು ಚಾಚಿಕೊಂಡಿರುವ ಪರಿಕಲ್ಪನೆಯಾಗಿದೆ.
6. ರಾಯಭಾರತ್ವದ ಕಡಿತವು ಬಿಕ್ಕಟ್ಟುಗಳಿಗೆ ಆಸ್ಪದ ಒದಗಿಸುವುದು: ರಾಷ್ಟ್ರಗಳ ನಡುವೆ ರಾಯಭಾರಕ ಸಂಬಂಧ ಕಡಿತಗೊಂಡರೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ. ರಾಷ್ಟ್ರಗಳು ಪರಸ್ಪರ ದ್ವೇಷ, ಸಂಶಯ ಅಥವಾ ಸ್ಪರ್ಧೆಗೆ ಮುಂದಾಗುತ್ತವೆ. ಫಲವಾಗಿ ರಾಷ್ಟ್ರಗಳ ನಡುವೆ ಗಂಭೀರ ಬಿಕ್ಕಟ್ಟುಗಳು ಜನ್ಮ ತಾಳುತ್ತವೆ.
7. ರಾಯಭಾರತ್ವವು ಯುದ್ಧ ಮತ್ತು ಶಾಂತಿ ಕಾಲದಲ್ಲಿ ಸಕ್ರಿಯವಾಗಿರುತ್ತದೆ: ಕೆಲವು ಚಿಂತಕರು ರಾಯಭಾರತ್ವವು ಶಾಂತಿ ಕಾಲದಲ್ಲಿ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದು ಪ್ರತಿಪಾದಿಸಿರುವರು. ಅವರ ಅಭಿಪ್ರಾಯದಲ್ಲಿ ಯುದ್ಧ ಆರಂಭವಾದೊಡನೆ ರಾಯಭಾರತ್ವ ಮುರಿದು ಬಿದ್ದು ನಿಶ್ಕ್ರಿಯವಾಗುತ್ತದೆ. ಆದರೆ, ವಾಸ್ತವದಲ್ಲಿ ಯುದ್ಧ ಆರಂಭದೊಡನೆ ರಾಯಭಾರತ್ವದ ಸ್ವರೂಪದಲ್ಲಿ ಬದಲಾವಣೆಯಾಗುತ್ತದೆಯೇ ಹೊರತು ಅದರ ಜವಾಬ್ದಾರಿ ಮತ್ತಷ್ಟು ಅಧಿಕಗೊಳ್ಳುತ್ತದೆ.
8. ರಾಯಭಾರತ್ವವು ಸಹಕಾರ ಮತ್ತು ಬಿಕ್ಕಟ್ಟುಗಳ ಸಂಗಮ: ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ವ್ಯಾಪಕವಾಗಿರದಿದ್ದರೂ ಕನಿಷ್ಟ ಮಟ್ಟಿನ ಸಹಕಾರವಿರಲೇಬೇಕಾಗುತ್ತದೆ. ಅಂತೆಯೇ ಯಾವುದೇ ಕ್ಷೇತ್ರ ಕುರಿತಾದ ಬಿಕ್ಕಟ್ಟುಗಳು ಅಸ್ತಿತ್ವದಲ್ಲಿರುವುದು ಸಹಜವಾಗಿರುತ್ತದೆ. ಒಂದೊಮ್ಮೆ ಬಿಕ್ಕಟ್ಟುಗಳಿಲ್ಲವಾದರೆ ರಾಯಭಾರತ್ವದ ತಿರುಳಾದ ಸಂಧಾನ ನಿರುಪಯುಕ್ತವೆನಿಸುತ್ತದೆ.
9. ರಾಷ್ಟ್ರೀಯ ಹಿತಾಸಕ್ತಿಯ ಪ್ರಾತಿನಿಧ್ಯ: ರಾಯಭಾರತ್ವವು ಸಾಮಾನ್ಯವಾಗಿ ಆಯಾ ದೇಶದ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಹೊಂದಿರುತ್ತದೆ. ತನ್ನ ರಾಷ್ಟ್ರದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ರಾಯಭಾರಿಕೆಲವೊಮ್ಮೆ ಕೆಟ್ಟ ಬೆಳವಣಿಗೆಗಳನ್ನು ಮರೆಮಾಚಿ ಸಂಬಂಧಗಳ ದೃಢತೆಗೆ ಪ್ರಯತ್ನಿಸುತ್ತಾನೆ.
10. ರಾಯಭಾರತ್ವವು ರಾಷ್ಟ್ರೀಯ ಶಕ್ತಿಯ ಬೆಂಬಲವುಳ್ಳದ್ದು: ರಾಷ್ಟ್ರವೊಂದರ ರಾಯಭಾರತ್ವವು ತನ್ನ ರಾಷ್ಟ್ರದ ರಾಷ್ಟ್ರೀಯ ಶಕ್ತಿಯನ್ನು ಆಧರಿಸಿರುತ್ತದೆ. ಶಕ್ತಿಶಾಲಿ ರಾಷ್ಟ್ರದ ರಾಯಭಾರತ್ವವು ಪ್ರಭಾವ ಅಥವಾ ಬೆದರಿಕೆ ಮೂಲಕ ಅಂತರ್ರಾಷ್ಟ್ರೀಯವಾಗಿ ರಾಯಭಾರತ್ವ ತನ್ನ ಅಧಿಕಾರವನ್ನು ಚಲಾಯಿಸಲು ಮುಂದಾಗುತ್ತದೆ. ಅಂತೆಯೇ ದುರ್ಬಲ ಶಕ್ತಿಯನ್ನು ಹೊಂದಿರುವ ದೇಶದ ರಾಯಭಾರತ್ವವು ತನ್ನ ಇಚ್ಚೆಯನ್ನು ಅನ್ಯ ರಾಷ್ಟ್ರಗಳ ಮೇಲೆ ಹೇರಲು ಸಫಲವಾಗುವುದಿಲ್ಲ. ಹೀಗಾಗಿ ರಾಯಭಾರತ್ವವು ರಾಷ್ಟ್ರೀಯ ಶಕ್ತಿಯನ್ನು ಆಧರಿಸುವಂತಹುದು ಎನ್ನಬಹುದಾಗಿದೆ.
ಈ ಮೇಲಿನ ಲಕ್ಷಣಗಳ ನೆರವಿನಿಂದ ರಾಯಭಾರತ್ವದ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ರಾಯಭಾರತ್ವವು ರಾಯಭಾರಿಯ ಮೂಲಕ ಅನುಷ್ಟಾನಗೊಳ್ಳುವ ಅಂಶವು ನಮಗೆ ಸ್ಪಷ್ಟವಾಗುತ್ತದೆ. ಅಲ್ಲದೇ ದೇಶವೊಂದರ ರಾಷ್ಟ್ರೀಯ ಹಿತಾಸಕ್ತಿಯ ಸಾಧನವಾಗಿ ಮತ್ತು ವಿದೇಶಾಂಗ ನೀತಿಯ ಉಪಕರಣವಾಗಿ ರಾಯಭಾರತ್ವವು ಕಾರ್ಯಾಚರಿಸುತ್ತಿರುವ ಅಂಶ ತಿಳಿದು, ಬರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ