ಸೋಮವಾರ, ಆಗಸ್ಟ್ 7, 2023

chapter 2 a

[A.] ರಾಷ್ಟ್ರೀಯ ಶಕ್ತಿಯ ಅರ್ಥ [Meaning of National Power]: ರಾಷ್ಟ್ರೀಯ ಶಕ್ತಿಯಅರ್ಥವನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ ಶಕ್ತಿಯ ಅರ್ಥ ಸ್ಪಷ್ಟವಾಗಿ ತಿಳಿದಿರಬೇಕಾದದ್ದು ಅತ್ಯಗತ್ಯ. ಆದ್ದರಿಂದ ಈ ಕೆಳಗೆ ಮೊದಲು ಶಕ್ತಿ ಎಂಬ ಪರಿಕಲ್ಪನೆಯ ಅರ್ಥವನ್ನು ಸ್ಪಷ್ಟಗೊಳಿಸಿ ನಂತರ ರಾಷ್ಟ್ರೀಯ ಶಕ್ತಿಯ ಅರ್ಥವನ್ನು ನೀಡಲಾಗಿದೆ.

ಶಕ್ತಿ ಎಂಬ ಪದವು ಆಂಗ್ಲ ಭಾಷೆಯ ಪವರ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲವನ್ನು ಲ್ಯಾಟಿನ್ ಭಾಷೆಯ ಪೊಟರೆ ಪದದಲ್ಲಿ ಗುರುತಿಸಲಾಗುತ್ತದೆ. ಪೊಟರೆ ಎಂದರೆ ಸಮರ್ಥನಾಗು ಅಥವಾ ಶಕ್ತನಾಗು ಎಂದರ್ಥ. ಗಮನಾರ್ಹ ಅಂಶವೇನೆಂದರೆ, ಚಿಂತಕರಿಂದ ನೈಸರ್ಗಿಕ ವಿಜ್ಙಾನದಲ್ಲಿ ಪವರ್ ಪದಕ್ಕೆ ಬಲ ಅಥವಾ ಶಕ್ತಿ ಎಂಬ ಅರ್ಥವನ್ನು ನೀಡಲಾಗಿದೆ. ಆದರೆ, ಸಮಾಜ ವಿಜ್ಙಾನದಲ್ಲಿ ಪವರ್ ಪದಕ್ಕೆ ಸಾಮರ್ಥ್ಯ, ಬಲ, ಶಕ್ತಿ, ಪ್ರಭಾವ, ಅಧಿಕಾರ ಎಂಬ ವೈವಿಧ್ಯಮಯ ಅರ್ಥವನ್ನು ನೀಡಲಾಗಿದೆ. ಫಲವಾಗಿ ಶಕ್ತಿಯ ಸ್ಪಷ್ಟ ಅಥವಾ ನಿಖರ ಅರ್ಥ ವಿವರಣೆ ಸವಾಲಿನ ಸಂಗತಿ ಎನಿಸಿದೆ.

ಸರಳಾರ್ಥದಲ್ಲಿ ದೇಶವೊಂದು ತನ್ನ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳಲು ಹೊಂದಿರುವ ಸಾಮರ್ಥ್ಯವೇ ರಾಷ್ಟ್ರೀಯ ಶಕ್ತಿ. ವಿಶಾಲಾರ್ಥದಲ್ಲಿ ನೆರವು, ಮನವೊಲಿಕೆ, ಬೆದರಿಕೆ ಅಥವಾ ಬಲ ಪ್ರಯೋಗದ ಮೂಲಕ ದೇಶವೊಂದು ಇತರ ದೇಶಗಳನ್ನು ನಿಯಂತ್ರಿಸುವ ಸಾಮರ್ಥ್ಯವೇ ರಾಷ್ಟ್ರೀಯ ಶಕ್ತಿ. ತನ್ನ ಹಿತಾಸಕ್ತಿಗಳಿಗೆ ಇತರ ರಾಷ್ಟ್ರಗಳಿಂದ ಧಕ್ಕೆಯಾಗದಂತೆ ಸಂರಕ್ಷಿಸಿಕೊಳ್ಳಲು ದೇಶವೊಂದಕ್ಕೆ ರಾಷ್ಟ್ರೀಯ ಶಕ್ತಿಯು ನೆರವಾಗುತ್ತದೆ. ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಚಲಾವಣೆಯಲ್ಲಿರುವ ರಾಷ್ಟ್ರೀಯ ಶಕ್ತಿಯ ಪರಿಕಲ್ಪನೆಯನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಲು ಅದನ್ನು ಕುರಿತಂತೆ ತಜ್ಞರು ನೀಡಿರುವ ಕೆಳಗಿನ ವ್ಯಾಖ್ಯಾನಗಳು ಸಹಕಾರಿ.
ಪೆಡಲ್ಫೋರ್ಡ್ ಮತ್ತು ಲಿಂಕನ್ ಪ್ರಕಾರ (ದೇಶವೊಂದು ತನ್ನ ಹಿತಾಸಕ್ತಿ ಅಥವಾ ಗುರಿಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸುವ ಸಾಮರ್ಥ್ಯವೇ ರಾಷ್ಟ್ರೀಯ ಶಕ್ತಿ).
ಹಾರ್ಟ್ಮನ್ ಪ್ರಕಾರ (ರಾಷ್ಟ್ರೀಯ ಗುರಿಗಳನ್ನು ಈಡೇರಿಸುವ ದೇಶವೊಂದರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿದ್ದು ನಿರ್ದಿಷ್ಟ ದೇಶವೊಂದು ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ಶಕ್ತಿಶಾಲಿ ಅಥವಾ ದುರ್ಬಲ ರಾಷ್ಟ್ರವೇ ಎಂಬುದನ್ನು ಸೂಚಿಸುವ ಪರಿಕಲ್ಪನೆ).
ಆರ್ಗೆನ್ಸ್ಕಿ ಪ್ರಕಾರ (ತನ್ನ ಹಿತಾಸಕ್ತಿಗೆ ಪೂರಕವಾಗಿ ಇತರ ರಾಷ್ಟ್ರಗಳ ವರ್ತನೆಯನ್ನು ಪ್ರಭಾವಿಸುವ ದೇಶವೊಂದರ ಸಾಮರ್ಥ್ಯವೇ ರಾಷ್ಟ್ರೀಯ ಶಕ್ತಿ).

ರಾಷ್ಟ್ರೀಯ ಶಕ್ತಿಯ ಮೂಲಾಂಶಗಳು [Elliments of National Power]: ದೇಶವೊಂದರ ರಾಷ್ಟ್ರೀಯ ಶಕ್ತಿಯು ವಿವಿಧ ಅಂಶಗಳ ಸಂಯೋಜನೆಯಾಗಿದ್ದು ಅವುಗಳನ್ನು ರಾಷ್ಟ್ರೀಯ ಶಕ್ತಿಯ ಘಟಕಗಳು ಅಥವಾ ಮೂಲಾಂಶಗಳು ಎನ್ನಲಾಗುತ್ತದೆ. ಫ್ರಾಂಕಲ್ ಎಂಬ ಚಿಂತಕ ರಾಷ್ಟ್ರೀಯ ಶಕ್ತಿಯ ಮೂಲಾಂಶಗಳನ್ನು ಸಾಮರ್ಥ್ಯಗಳೆಂದು ಕರೆದರೆ ಇತರ ಕೆಲವು ಚಿಂತಕರು ರಾಷ್ಟ್ರೀಯ ಶಕ್ತಿಯ ಮೂಲಾಂಶಗಳನ್ನು ನಿರ್ಧಾರಕಗಳೆಂದು ಗುರುತಿಸಿದ್ದಾರೆ. ಇದರೊಡನೆ ರಾಷ್ಟ್ರೀಯ ಶಕ್ತಿಯ ವಿವಿಧ ಮೂಲಾಂಶಗಳನ್ನು ಚಿಂತಕರು ವರ್ಗಿಕರಿಸಲು ಮುಂದಾಗಿದ್ದು ಮಾರ್ಗೆಂಥೊ ಶಾಶ್ವತ ಮತ್ತು ಅಶಾಶ್ವತ ಮೂಲಾಂಶಗಳೆಂದು, ಆರ್ಗೆನ್ಸ್ಕಿ ಸ್ವಾಭಾವಿಕ ಮತ್ತು ಸಾಮಾಜಿಕ ಮೂಲಾಂಶಗಳೆಂದು, ಪಾಮರ್ ಹಾಗೂ ಪರ್ಕಿನ್ಸ್ ಗೋಚರ ಮತ್ತು ಅಗೋಚರ ಮೂಲಾಂಶಗಳೆಂದು ವಿಂಗಡಿಸಿದ್ದಾರೆ. ಚಿಂತಕರಿಂದ ಭಿನ್ನ ಶಿರ್ಷಿಕೆ ಮತ್ತು ಪ್ರಕಾರಗಳಲ್ಲಿ ಗುರುತಿಸಲ್ಪಡುವ ದೇಶವೊಂದರ ರಾಷ್ಟ್ರೀಯ ಶಕ್ತಿಯ ಪ್ರಧಾನ ಮೂಲಾಂಶಗಳನ್ನು ಈ ಕೆಳಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

1. ಭೌಗೋಳಿಕ ಅಂಶ: ದೇಶವೊಂದರ ಭೌಗೋಳಿಕತೆಯು ರಾಷ್ಟ್ರೀಯ ಶಕ್ತಿಯ ಮೂಲಾಂಶಗಳಲ್ಲಿ ಪ್ರಾಥಮಿಕವಾದದ್ದು. ಜೊತೆಗೆ ಭೌಗೋಳಿಕತೆಯು ರಾಷ್ಟ್ರೀಯ ಶಕ್ತಿಯ ಸ್ವಾಭಾವಿಕ, ಶಾಶ್ವತ ಮತ್ತು ಗೋಚರ ಮೂಲಾಂಶವೆನಿಸಿದೆ. ಇದರೊಡನೆ ಅಂತರ್ರಾಷ್ಟ್ರೀಯ ರಾಜಕೀಯದಲ್ಲಿ ದೇಶವೊಂದರ ರಾಷ್ಟ್ರೀಯ ಶಕ್ತಿಯನ್ನು ಅದರ ಭೌಗೋಳಿಕ ಅಂಶವನ್ನು ಆಧರಿಸಿಯೇ ನಿರ್ಧರಿಸಲಾಗುತ್ತದೆ. ನೆಪೋಲಿಯನ್ (ಯುದ್ಧದಲ್ಲಿ ದೇವರು ಯಾವಾಗಲೂ ವಿಶಾಲ ಭೂ ಪ್ರದೇಶವುಳ್ಳ ರಾಷ್ಟ್ರದೊಡನೆಯೇ ಇರುತ್ತಾನೆ) ಎನ್ನುವ ಮೂಲಕ ರಾಷ್ಟ್ರೀಯ ಶಕ್ತಿಯಲ್ಲಿ ಭೌಗೋಳಿಕ ಅಂಶದ ಮಹತ್ವವನ್ನು ಪ್ರತಿಪಾದಿಸಿರುವ. ಅಲ್ಲದೇ ದೇಶವೊಂದರ ವಿದೇಶಾಂಗ ನೀತಿಯು ಅದರ ಭೌಗೋಳಿಕ ಅಂಶಗಳಿಂದ ಪ್ರಭಾವಿತಗೊಂಡಿರುತ್ತದೆ. ಗಮನಾರ್ಹ ಅಂಶವೇನೆಂದರೆ, ಕೇವಲ ಭೌಗೋಳಿಕ ಅಂಶವೊಂದೇ ರಾಷ್ಟ್ರೀಯ ಶಕ್ತಿ ಎನಿಸಿಕೊಳ್ಳಲಾರದು. ದೇಶವೊಂದರ ರಾಷ್ಟ್ರೀಯ ಶಕ್ತಿಯ ವಿವಿಧ ಮೂಲಾಂಶಗಳಲ್ಲಿ ಒಂದಾಗಿರುವ ಭೌಗೋಳಿಕತೆಯು ಕೆಳಗಿನ ತನ್ನ ಸ್ವರೂಪದೊಡನೆ ಪ್ರಧಾನವಾದ ಮೂಲಾಂಶ ಎನಿಸಿಕೊಂಡಿದೆ.
ಅ. ಗಾತ್ರ: ಭೌಗೋಳಿಕ ಗಾತ್ರವು ರಾಷ್ಟ್ರೀಯ ಶಕ್ತಿಯ ಮೂಲಾಂಶವೆನಿಸಿದೆ. ದೇಶವೊಂದು ಹೊಂದಿರುವ ಚಿಕ್ಕ ಅಥವಾ ಬೃಹತ್ ಗಾತ್ರವು ಅದರ ರಾಷ್ಟ್ರೀಯ ಶಕ್ತಿಯನ್ನು ನಿರ್ಧರಿಸಬಲ್ಲ ಅಂಶವೆನಿಸಿದೆ. ವಿಶಾಲ ಭೂ ಪ್ರದೇಶವುಳ್ಳ ದೇಶಗಳು ಅಧಿಕ ಜನಸಂಖ್ಯೆ ಹಾಗೂ ಸಂಪನ್ಮೂಲಗಳನ್ನು ಹೊಂದುವ ಮೂಲಕ ರಾಷ್ಟ್ರೀಯ ಶಕ್ತಿ ವೃದ್ಧಿಸಿಕೊಳ್ಳಬಹುದಾಗಿದೆ. ಜೊತೆಗೆ ಬೃಹತ್ ಗಾತ್ರವುಳ್ಳ ದೇಶಗಳನ್ನು ಇತರ ರಾಷ್ಟ್ರಗಳು ಆಕ್ರಮಿಸಲು ಸಾಧ್ಯವಾಗುವುದಿಲ್ಲ. ಉದಾ: ಬೃಹತ್ ಗಾತ್ರದ ರಷ್ಯಾವನ್ನು ನೆಪೋಲಿಯನ್ ಅಥವಾ ಹಿಟ್ಲರ್ ಆಕ್ರಮಿಸಲು ವಿಫಲಗೊಂಡಿದುದು. ಒಂದೊಮ್ಮೆ ದೇಶದ ಭೌಗೋಳಿಕ ಗಾತ್ರ ಚಿಕ್ಕದಾದರೆ ಅದನ್ನು ಸುಲಭವಾಗಿ ಆಕ್ರಮಿಸಲು ಸಾಧ್ಯವಾಗುತ್ತದೆ. ಇದರೊಡನೆ ಚಿಕ್ಕ ಭೌಗೋಳಿಕ ಗಾತ್ರದ ದೇಶಗಳಲ್ಲಿ ಸಂಪನ್ಮೂಲಗಳ ಕೊರತೆ ಸಹಜವಾಗಿದ್ದು ಪರಾವಲಂಬನೆ ಅಧಿಕಗೊಂಡು ರಾಷ್ಟ್ರೀಯ ಶಕ್ತಿ ಕುಗ್ಗುತ್ತದೆ. ಆಸಕ್ತಿದಾಯಕ ಅಂಶವೇನೆಂದರೆ, ಇಂಗ್ಲೆಂಡ್, ಜಪಾನ್, ಇಸ್ರೇಲ್ ಜಗತ್ತಿನ ಚಿಕ್ಕ ಗಾತ್ರವುಳ್ಳ ದೇಶಗಳಾಗಿದ್ದರೂ ಇತರ ಮೂಲಾಂಶಗಳ ನೆರವಿನಿಂದ ತಮ್ಮ ರಾಷ್ಟ್ರೀಯ ಶಕ್ತಿಯನ್ನು ವೃದ್ಧಿಸಿಕೊಂಡಿವೆ. ಅಂತೆಯೇ ಬ್ರೆಜಿಲ್, ಆಸ್ಟ್ರೇಲಿಯಾ,ಗಳು ಬೃಹತ್ ಗಾತ್ರ ಪಡೆದಿದ್ದರೂ ಅವುಗಳ ರಾಷ್ಟ್ರೀಯ ಶಕ್ತಿ ಪ್ರಸ್ತಾಪಿತ ಚಿಕ್ಕ ರಾಷ್ಟ್ರಗಳಿಗಿಂತ ಉತ್ತಮವಾಗಿಲ್ಲ.
ಆ. ನೆಲೆ: ಪ್ರಪಂಚದ,  ಭೂಪಟದಲ್ಲಿ ದೇಶವೊಂದು ಹೊಂದಿರುವ ಭೌಗೋಳಿಕ ನೆಲೆಯು ಅದರ ರಾಷ್ಟ್ರೀಯ ಶಕ್ತಿಯನ್ನು ಬಲಗೊಳಿಸಲು ಅಥವಾ ಕ್ಷೀಣಗೊಳಿಸಲು ಕಾರಣವಾಗುತ್ತದೆ. ಸಮುದ್ರ ತೀರದಲ್ಲಿರುವ, ಸುತ್ತಲೂ ನೀರಿನಿಂದ ಆವರಿಸಿರುವ, ನೈಸರ್ಗಿಕ ಕಣಿವೆ ಅಥವಾ ಪರ್ವತಗಳಿಂದ ಸುತ್ತುವರೆದ ಭೌಗೋಳಿಕ ನೆಲೆ ಹೊಂದಿರುವ ದೇಶಗಳ ರಾಷ್ಟ್ರೀಯ ಶಕ್ತಿ ಅಧಿಕವಾಗಿರುತ್ತದೆ. ಉದಾ: ಇಂಗ್ಲೆಂಡ್ ನೌಕಾ ಶಕ್ತಿ ಬೆಳೆಸಿಕೊಳ್ಳಲು, ಜಪಾನ್ ಹಡಗು ನಿರ್ಮಾಣದ ಮೂಲಕ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಅಮೇರಿಕಾವು ಏಕಾಂಗಿತನ ನೀತಿಯನ್ನು ಅನುಸರಿಸಲು ಅವುಗಳ ಭೌಗೋಳಿಕ ನೆಲೆ ಸಹಕಾರಿಯಾದುದು. ಸುತ್ತಲೂ ಭೂ ಗಡಿಗಳಿಂದ ಕೂಡಿದ ಅಂದರೆ ಭೂಮಿಯಿಂದ ಆವರಿಸಲ್ಪಟ್ಟ ಭೌಗೋಳಿಕ ನೆಲೆಯುಳ್ಳ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಕಠಿಣವಾಗಿ ದುರ್ಬಲ ರಾಷ್ಟ್ರವೆನಿಸಿಕೊಳ್ಳುತ್ತವೆ. ಉದಾ: ಸ್ವಿಡ್ಜರ್ಲ್ಯಾಂಡ್ ಶಾಶ್ವತ ತಟಸ್ಥ ರಾಷ್ಟ್ರವಾಗಿ ಉಳಿಯಲು ಮತ್ತು ಕೆನಡಾ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಳ್ಳದಿರಲು ಅವುಗಳ ಭೌಗೋಳಿಕ ನೆಲೆ ಕಾರಣವಾಗಿದುದು. ಹೀಗೆ ದೇಶವೊಂದರ ಭೌಗೋಳಿಕ ನೆಲೆಯು ಆ ದೇಶದ ರಾಷ್ಟ್ರೀಯ ಶಕ್ತಿಯನ್ನು ನಿರ್ಧರಿಸುವ ಭೌಗೋಳಿಕ ಅಂಶವಾಗಿ ಪರಿಗಣಿತಗೊಂಡಿದೆ.
ಇ. ವಾಯುಗುಣ: ದೇಶವೊಂದು ಹೊಂದಿರುವ ವಾಯುಗುಣವು ಆ ದೇಶದ ರಾಷ್ಟ್ರೀಯ ಶಕ್ತಿಯನ್ನು ನಿರ್ಧರಿಸುವ ಭೌಗೋಳಿಕ ಅಂಶವೆನಿಸಿದೆ. ದೇಶದ ಆಹಾರ ಉತ್ಪಾದನೆ, ಆರ್ಥಿಕತೆ ಹಾಗೂ ಸಂಸ್ಕೃತಿಯ ಮೇಲೆ ವಾಯುಗುಣ ತನ್ನದೇಯಾದ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಅತಿಯಾದ ಶೀತ ವಾಯುಗುಣವುಳ್ಳ ಧ್ರುವ ಪ್ರದೇಶ ಮತ್ತು ಅಧಿಕ ಉಷ್ಣತೆಯಿಂದ ಕೂಡಿರುವ ಸಮಭಾಜಕ ವೃತ್ತದ ಪ್ರದೇಶಗಳ ದೇಶಗಳು ಅಹಿತಕರ ವಾಯುಗುಣದಿಂದ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲಾರವು. ಆದರೆ, ಸಮಶೀತೋಷ್ಣ ವಲಯದಲ್ಲಿರುವ ದೇಶಗಳು ಆಹ್ಲಾದಕರ ವಾಯುಗುಣ ಹೊಂದಿದ್ದು ಅವುಗಳ ಜನರ ಆರೋಗ್ಯ ಮತ್ತು ದುಡಿಯುವ ಸಾಮರ್ಥ್ಯ ಅಧಿಕಗೊಳ್ಳುತ್ತದೆ. ಫಲವಾಗಿ ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ಮತ್ತು ನಿರಾಯಾಸವಾಗಿ ಜರುಗಿ ರಾಷ್ಟ್ರೀಯ ಶಕ್ತಿ ವೃದ್ಧಿಗೊಳ್ಳುತ್ತದೆ. ಗಮನಾರ್ಹ ಅಂಶವೇನೆಂದರೆ, ವಾಯುಗುಣವು ಸಕಾಲಿಕ ಮಳೆಯೊಡನೆ ಉತ್ಪಾದನೆಗೆ ನೆರವಾಗುವ ಮತ್ತು ಅಕಾಲಿಕ ಮಳೆಯೊಡನೆ  ಉತ್ಪಾದನೆಯನ್ನು ನಾಶಗೊಳಿಸುವ ಮೂಲಕ ರಾಷ್ಟ್ರೀಯ ಶಕ್ತಿಯನ್ನು ಪ್ರಭಾವಿಸುತ್ತವೆ. ಈ ಹಿನ್ನೆಲೆಯಲ್ಲಿ ಹಿತಕರ ವಾಯುಗುಣವುಳ್ಳ ದೇಶದ ರಾಷ್ಟ್ರೀಯ ಶಕ್ತಿ ಉನ್ನತವಾಗಿದ್ದರೆ ಅಹಿತಕರ ವಾತಾವರಣ ಹೊಂದಿರುವ ದೇಶಗಳ ರಾಷ್ಟ್ರೀಯ ಶಕ್ತಿ ಜಾಗತಿಕವಾಗಿ ಕೆಳ ದರ್ಜೆಯಲ್ಲಿರುತ್ತದೆ.
ಈ. ಮೇಲ್ಮೈ ರಚನೆ: ದೇಶವೊಂದರ ಭೌಗೋಳಿಕ ಮೂಲಾಂಶಗಳಲ್ಲಿ ಮೇಲ್ಮೈ ರಚನೆಯೂ ಒಂದಾಗಿದೆ. ಇತರ ಭೌಗೋಳಿಕ ಅಂಶಗಳೊಡನೆ ದೇಶವೊಂದರ ಮೇಲ್ಮೈ ರಚನೆಯು ರಾಷ್ಟ್ರೀಯ ಶಕ್ತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲದು. ಮೈದಾನ ಪ್ರದೇಶವಾಗಿರುವ ಮತ್ತು ಕೃತಕ ಗಡಿಗಳಿಂದ ಕೂಡಿರುವ ರಚನೆಯುಳ್ಳ ದೇಶಗಳ ರಾಷ್ಟ್ರೀಯ ಶಕ್ತಿಯು ದುರ್ಬಲವಾಗಿರುತ್ತದೆ. ಇದಕ್ಕೆ ಆಕ್ರಮಣಕಾರಿ ದೇಶಗಳಿಗೆ ಈ ಬಗೆಯ ಮೇಲ್ಮೈ ರಚನೆಯುಳ್ಳ ದೇಶಗಳು ಸುಲಭವಾಗಿ ತುತ್ತಾಗುವುದು ಪ್ರಧಾನ ಕಾರಣ. ಇನ್ನೊಂದೆಡೆ ನೈಸರ್ಗಿಕ ಗಡಿಗಳಿಂದ ಕೂಡಿರುವ ಮತ್ತು ಪರ್ವತ ಶ್ರೇಣಿ, ನದಿಗಳು, ಇಳಿಜಾರು ಪ್ರದೇಶಗಳಿಂದ ಕೂಡಿರುವ ಮೇಲ್ಮೈ ರಚನೆಯುಳ್ಳ ದೇಶಗಳ ರಾಷ್ಟ್ರೀಯ ಶಕ್ತಿ ಅಧಿಕವಾಗಿರುತ್ತದೆ. ಜೊತೆಗೆ ಸ್ವಾಭಾವಿಕ ಬಂದರು ಮತ್ತು ಗಡಿಗಳನ್ನು ಹೊಂದಿದ ದೇಶಗಳು ಶಕ್ತಿಶಾಲಿ ರಾಷ್ಟ್ರಗಳೆನಿಸಿಕೊಳ್ಳುತ್ತವೆ. ಹೀಗೆ ದೇಶವೊಂದರ ಂೇಲ್ಮೈ ಲಕ್ಷಣಗಳು ಅಂದರೆ ರಚನೆಯು ರಾಷ್ಟ್ರೀಯ ಶಕ್ತಿಯನ್ನು ನಿರ್ಧರಿಸುವ ಅಂಶವಾಗಿ ಪರಿಗಣಿತವಾಗಿದೆ.
ಉ. ಗಡಿಗಳು: ದೇಶವೊಂದು ಹೊಂದಿರುವ ಗಡಿಗಳು ಅದರ ಭೌಗೋಳಿಕ ಅಂಶವಾಗಿವೆ. ನೈಸರ್ಗಿಕ ಗಡಿಗಳು ನೆರೆಯ ರಾಷ್ಟ್ರಗಳೊಡನೆ ಸುಮಧುರ ಸಂಬಂಧ ಹೊಂದಲು ಕಾರಣವಾದರೆ ಕೃತಕ ಗಡಿಗಳು ನೆರೆಯ ರಾಷ್ಟ್ರಗಳೊಡನೆ ಗೊಂದಲ, ಘರ್ಷಣೆ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿ ರಾಷ್ಟ್ರೀಯ ಶಕ್ತಿಯನ್ನು ಪ್ರಭಾವಿಸುತ್ತವೆ. ಸಾಮಾನ್ಯವಾಗಿ ಸ್ಪಷ್ಟತೆಯಿಲ್ಲದ ಗಡಿಗಳನ್ನು ಹೊಂದಿರುವ ದೇಶಗಳ ನಡುವೆ ಘರ್ಷಣೆ ಉಂಟಾಗಿ ರಾಷ್ಟ್ರೀಯ ಶಕ್ತಿ ಧಕ್ಕೆಗೊಳಗಾಗುತ್ತದೆ. ಉದಾ: ಚೀನಾ ಮತ್ತು ಭಾರತದ ನಡುವೆ ಹಾಗೂ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವಿನ ಗಡಿ ವಿವಾದ.

ಈ ಮೇಲೆ ಪ್ರಸ್ತಾಪಿಸಲಾದ ವಿವಿಧ ಭೌಗೋಳಿಕ ಅಂಶಗಳು ರಾಷ್ಟ್ರೀಯ ಶಕ್ತಿಯ ಮಹತ್ವದ ಮೂಲಾಂಶವಾಗಿ ಭೌಗೋಳಿಕತೆಯನ್ನು ಸಮ್ಮತಿಸಲು ಕಾರಣವಾಗಿವೆ. ಆದರೆ ಭೌಗೋಳಿಕ ಅಂಶಗಳು ರಾಷ್ಟ್ರೀಯ ಶಕ್ತಿಯನ್ನು ಬಲಗೊಳಿಸುವ ಮತ್ತು ದುರ್ಬಲಗೊಳಿಸಲು ಕಾರಣವಾದುದನ್ನು ಮರೆಯಲಾಗದು. ಇದರೊಡನೆ ರಾಷ್ಟ್ರೀಯ ಶಕ್ತಿಯಲ್ಲಿ ಭೌಗೋಳಿಕ ಅಂಶದ ಪಾತ್ರವು ಇತರ ಮೂಲಾಂಶಗಳ ಅಂತರ್ಸಂಬಂಧ ಹೊಂದಿದುದು ಗಮನಾರ್ಹ. ಆದ್ದರಿಂದ ಭೌಗೋಳಿಕತೆಯು ರಾಷ್ಟ್ರೀಯ ಶಕ್ತಿಯ ಹಲವು ಮೂಲಾಂಶಗಳಲ್ಲಿ ಒಂದೇ ಹೊರತು ಅದುವೇ ಪ್ರಧಾನ ಮೂಲಾಂಶವಲ್ಲ ಎಂಬುದನ್ನು ನಾವು ಮರೆಯಕೂಡದು.

2. ಜನಸಂಖ್ಯೆ: ರಾಷ್ಟ್ರೀಯ ಶಕ್ತಿಗೆ ಕಾಣಿಕೆ ನೀಡಬಲ್ಲ ಮತ್ತೊಂದು ಮೂಲಾಂಶವೇ ಜನಸಂಖ್ಯೆ. ಸಾಮಾನ್ಯವಾಗಿ ಬೃಹತ್ ಜನಸಂಖ್ಯೆಯು ದೇಶವೊಂದರ ಶಕ್ತಿ ಎಂದು ಪರಿಗಣಿಸಲ್ಪಟ್ಟಿದೆ. ತೃಪ್ತಿಕರ ಜೀವನದ ಗುಣಮಟ್ಟ ಮತ್ತು ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳನ್ನು ಒದಗಿಸಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ದೇಶವೊಂದರ ಬೃಹತ್ ಜನಸಂಖ್ಯೆಯು ರಾಷ್ಟ್ರೀಯ ಶಕ್ತಿಗೆ ವರವಾಗಿ ಪರಿಗಣಿಸಲ್ಪಡುತ್ತದೆ. ಗಮನಾರ್ಹ ಅಂಶವೇನೆಂದರೆ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಬೃಹತ್ ಜನಸಂಖ್ಯೆಯು ರಾಷ್ಟ್ರೀಯ ಶಕ್ತಿಗೆ ಮೂಲವೆನಿಸಿದರೆ ಅನಭಿವೃದ್ಧಿಯ ರಾಷ್ಟ್ರಗಳಿಗೆ ಅಧಿಕ ಜನಸಂಖ್ಯೆಯು ಶಾಪವಾಗಿ ಪರಿಣಮಿಸುತ್ತದೆ.

ದೇಶವೊಂದರ ಜನಸಂಖ್ಯೆಯ ಮಾನವ ಸಂಪನ್ಮೂಲವು ನೈಸರ್ಗಿಕ ಸಂಪನ್ಮೂಲಗಳನ್ನು ರಾಷ್ಟ್ರೀಯ ಅಗತ್ಯಗಳಿಗೆ ಪೂರೈಸಲು ಶ್ರಮಿಸಿ ರಾಷ್ಟ್ರೀಯ ಶಕ್ತಿಯನ್ನು ವೃದ್ಧಿಸುತ್ತದೆ. ಜೊತೆಗೆ ದೇಶದ ಕೈಗಾರಿಕಾ ಮತ್ತು ಸೈನಿಕ ಸಾಮರ್ಥ್ಯವನ್ನು ಸುಧಾರಿಸಲು ಮಾನವ ಸಂಪನ್ಮೂಲ ನೆರವಾಗುತ್ತದೆ. ಇದರೊಡನೆ ಮಾನವ ಶಕ್ತಿ,  ಮಾತ್ರವೇ ದೇಶದ ಸೈನಿಕ ವಿಜಯಕ್ಕೆ ಕಾರಣವಾಗಬಲ್ಲದು. ಆದ್ದರಿಂದಲೇ ವಾಲ್ಟೇರ್ (ದೇವರು ಯಾವಾಗಲೂ ಬೃಹತ್ ಸೈನ್ಯವುಳ್ಳ ದೇಶದ ಪರವಾಗಿರುತ್ತಾನೆ) ಎಂದಿರುವರು. ಫಲವಾಗಿ ಬೃಹತ್ ಜನಸಂಖ್ಯೆಯುಳ್ಳ ಏಷ್ಯಾದ ಚೀನಾ ಮತ್ತು ಭಾರತ ಶಕ್ತಿಯುತ ರಾಷ್ಟ್ರವಾಗಿ ಪರಿಗಣಿಸಲ್ಪಟ್ಟಿವೆ. ಕೌಶಲ್ಯಯುತ ಜನರು ದೇಶವೊಂದರ ರಾಷ್ಟ್ರೀಯ ಶಕ್ತಿಯನ್ನು ಹೆಚ್ಚಿಸಲು ಕಾರಣರಾಗುತ್ತಾರೆ. ಉದಾ: ಭಾರತವು ಕೌಶಲ್ಯಯುತ ಯುವ ಶಕ್ತಿಯನ್ನು ಹೆಚ್ಚಾಗಿ ಹೊಂದಿದುದು ಅದರ ಶಕ್ತಿಯನ್ನು ವೃದ್ಧಿಸಿದುದು. ಒಟ್ಟಾರೆ ರಾಷ್ಟ್ರೀಯ ಶಕ್ತಿಯ ಮೂಲಾಂಶವಾಗಿ ಜನಸಂಖ್ಯೆ ನಿರ್ವಹಿಸುವ ಪಾತ್ರವನ್ನು ಕಡೆಗಣಿಸಲಾಗದು.

ಗಮನಾರ್ಹ ಅಂಶವೇನೆಂದರೆ, ಜನಸಂಖ್ಯೆಯ ಗಾತ್ರಕ್ಕಿಂತ ಅದರ ಗುಣಮಟ್ಟವು ರಾಷ್ಟ್ರೀಯ ಶಕ್ತಿಯ ವೃದ್ಧಿಗೆ ಮಹತ್ವದ ಪಾತ್ರ ಒದಗಿಸಬಲ್ಲದು. ಅನಾರೋಗ್ಯ ಪೀಡಿತ, ಅವಿದ್ಯಾವಂತ, ಕೌಶಲ್ಯಹೀನ ಬೃಹತ್ ಜನಸಂಖ್ಯೆಯು ದೇಶದ ರಾಷ್ಟ್ರೀಯ ಶಕ್ತಿಗೆ ತೊಡಕುಂಟು ಮಾಡುವ ಸಾಧ್ಯತೆ ಅಧಿಕವಾಗಿರುತ್ತದೆ. ಜೊತೆಗೆ ಬಡತನ, ನಿರುದ್ಯೋಗ, ಆಹಾರದ ಕೊರತೆಯಂತಹ ಸವಾಲುಗಳನ್ನು ಸೃಷ್ಟಿಸಿ ದೇಶದ ಆರ್ಥಿಕ ಪ್ರಗತಿಯನ್ನು ಬೃಹತ್ ಜನಸಂಖ್ಯೆಯು ಕುಂಟಿತಗೊಳಿಸಬಹುದಾಗಿದೆ. ವಿದ್ಯಾವಂತ, ಕೌಶಲ್ಯಭರಿತ, ಸಮರ್ಪಣಾ ಮನೋಭಾವದ, ಶಿಸ್ತಿನ ಕಡಿಮೆ ಜನಸಂಖ್ಯೆಯು ದೇಶದ ರಾಷ್ಟ್ರೀಯ ಶಕ್ತಿಯನ್ನು ವೃದ್ಧಿಸಲು ಕಾರಣರಾಗುತ್ತಾರೆ. ಉದಾ: ಇಂಗ್ಲೆಂಡ್ ಕಡಿಮೆ ಜನಸಂಖ್ಯೆಯುಳ್ಳ ದೇಶವಾದರೂ ಭಾರತದಂತಹ ಬೃಹತ್ ಜನಸಂಖ್ಯೆಯ ದೇಶವನ್ನು ಆಳಿದುದು ಮತ್ತು ಇಸ್ರೇಲ್ ತನಗಿಂತ ಅಧಿಕ ಜನಸಂಖ್ಯೆಯುಳ್ಳ ಅರಬ್ ರಾಷ್ಟ್ರಗಳಿಗಿಂತ ಶಕ್ತಿಶಾಲಿಯಾಗಿದುದು. ಒಟ್ಟಾರೆ ರಾಷ್ಟ್ರೀಯ ಶಕ್ತಿಯ ಮೂಲಾಂಶವಾಗಿ ಜನಸಂಖ್ಯೆಯು ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಆಯಾಮಗಳೆರಡರಲ್ಲಿ ಉತ್ತೀರ್ಣಗೊಳ್ಳಬೇಕಾದದ್ದು ಅತ್ಯಗತ್ಯ.

3. ಆರ್ಥಿಕ ಅಭಿವೃಧ್ಧಿ: ದೇಶವೊಂದರ ರಾಷ್ಟ್ರೀಯ ಶಕ್ತಿಯ ಪ್ರಮುಖ ಮೂಲಾಂಶಗಳಲ್ಲಿ ಆರ್ಥಿಕ ಅಭಿವೃದ್ಧಿಯೂ ಒಂದು. ದೇಶವೊಂದರ ಸೈನಿಕ ಸಾಮರ್ಥ್ಯ ಹಾಗೂ ಜನರ ಕಲ್ಯಾಣಗಳು ಆರ್ಥಿಕ ಅಭಿವೃದ್ಧಿಯನ್ನೇ ಆಧರಿಸಿರುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶವು ಅಂತರ್ರಾಷ್ಟ್ರೀಯ ರಾಜಕೀಯದಲ್ಲಿ ಸ್ವತಂತ್ರವಾಗಿ ವ್ಯವಹರಿಸಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತದೆ. ಪರಿಣಾಮಕಾರಿ ಆರ್ಥಿಕ ಸಂಘಟನೆಗಳು ಮತ್ತು ಯೋಜನೆಗಳು ಆರ್ಥಿಕ ಅಭಿವೃದ್ಧಿಯನ್ನು ಬಲಗೊಳಿಸುತ್ತವೆ. ಅಂತೆಯೇ ಬಡತನ, ನಿರುದ್ಯೋಗ, ಅನಕ್ಷರತೆಗಳು ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿ ರಾಷ್ಟ್ರೀಯ ಶಕ್ತಿಗೆ ಕಂಟಕವೆನಿಸುತ್ತವೆ. ಉದಾ: ತೃತೀಯ ಜಗತ್ತಿನ ಹಲವು ದೇಶಗಳು ನವ ವಸಾಹತುಶಾಹಿ ನೀತಿಗೊಳಪಟ್ಟು ಆರ್ಥಿಕವಾಗಿ ಹಿಂದುಳಿಯಲು ಅವುಗಳಲ್ಲಿನ ಾರ್ಥಿಕ ಅಭಿವೃದ್ಧಿಯ ತೊಡಕುಗಳೇ ಕಾರಣವಾದದ್ದು. 

ಆರ್ಥಿಕವಾಗಿ ಅಭಿವೃದ್ಧಿಗೊಂಡಿರುವ ದೇಶಗಳು ಧನ ಸಹಾಯ, ಸಾಲ, ವಂತಿಕೆ ನೀಡುವ ಮೂಲಕ ಇತರ ದೇಶಗಳನ್ನು ನಿಯಂತ್ರಿಸುವ ಮೂಲಕ ತಮ್ಮ ಗುರಿಗಳನ್ನು ಸಾಧಿಸಿಕೊಳ್ಳುತ್ತವೆ. ಜೊತೆಗೆ ಆರ್ಥಿಕ ಸಾಧನಗಳನ್ನು ಬಳಸಿ ದೇಶಗಳು ಉತ್ಪಾದಕ ಮತ್ತು ಉಪಯುಕ್ತ ಫಲಿತಾಂಶಕ್ಕಾಗಿ ತಮ್ಮ ರಾಷ್ಟ್ರೀಯ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಹೀಗೆ ಆರ್ಥಿಕ ಅಭಿವೃದ್ಧಿಯು ರಾಷ್ಟ್ರೀಯ ಶಕ್ತಿಯ ಮೂಲಾಂಶವಾಗಿ ಪರಿಗಣಿಸಲ್ಪಟ್ಟಿದೆ.

4. ತಂತ್ರಜ್ಞಾನ: ಮನುಕುಲದ ಕಲ್ಯಾಣಕ್ಕಾಗಿ ವಿಜ್ಞಾನದ ಅನ್ವಯವನ್ನು ತಂತ್ರಜ್ಞಾನ ಎನ್ನಬಹುದಾಗಿದೆ. ವೈಜ್ಞಾನಿಕ ಸಂಶೋಧನೆಗಳನ್ನು ಬಳಸಿಕೊಂಡು ಮಾನವರ ಒಳಿತನ್ನು ಸಾಧಿಸುವ ಸಾಮರ್ಥ್ಯವನ್ನು ತಂತ್ರಜ್ಞಾನವು ಪ್ರತಿನಿಧಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕ ಪ್ರಗತಿಯು ರಾಷ್ಟ್ರೀಯ ಶಕ್ತಿಯ ಮೂಲವಾಗಿದ್ದು ದೇಶವೊಂದು ಅಂತರ್ರಾಷ್ಟ್ರೀಯವಾಗಿ ಪ್ರಭಾವ ಬೀರಲು ತಂತ್ರಜ್ಞಾನ ಸಹಕಾರಿಯಾಗುತ್ತಿದೆ. ರಾಷ್ಟ್ರೀಯ ಶಕ್ತಿಯ ಮೂಲಾಂಶವಾಗಿ ತಂತ್ರಜ್ಞಾನವನ್ನು ಪರಿಗಣಿಸಿ ಅದನ್ನು ಕೈಗಾರಿಕಾ ತಂತ್ರಜ್ಞಾನ, ಸಂಪರ್ಕ ತಂತ್ರಜ್ಞಾನ ಮತ್ತು ಸೈನಿಕ ತಂತ್ರಜ್ಞಾನವೆಂದು ಗುರುತಿಸಲಾಗುತ್ತದೆ.

ಕೈಗಾರಿಕಾ ತಂತ್ರಜ್ಞಾನವು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ದೇಶದ ಆರ್ಥಿಕ ಸುಧಾರಣೆಗೆ ಕಾರಣವಾಗುತ್ತದೆ. ಅಂತೆಯೇ ಸಂಪರ್ಕ ತಂತ್ರಜ್ಞಾನವು ಮಾಹಿತಿ, ಸರಕು ಮತ್ತು ಜನರನ್ನು ವೇಗವಾಗಿ ಸಂಪರ್ಕಿಸಲು ಸಹಕಾರಿಯಾಗುತ್ತದೆ. ಸಂಪರ್ಕ ತಂತ್ರಜ್ಞಾನವು ರಾಯಭಾರಿಗಳ ಸ್ವಾತಂತ್ರ್ಯವನ್ನು ಮಿತಿಗೊಳಿಸಿ ದೇಶದ ಮುಖ್ಯಸ್ಥರ ನಿರ್ದೇಶನದಂತೆ ವರ್ತಿಸಲು ಕಾರಣವಾಗಿವೆ. ಇದರೊಡನೆ ಸೈನಿಕ ತಂತ್ರಜ್ಞಾನವು ರಾಷ್ಟ್ರಗಳ ಸೈನಿಕ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗಿವೆ. ಕ್ಷಿಪಣಿ, ರಾಕೆಟ್, ಯುದ್ಧ ವಿಮಾನ, ನೌಕೆಗಳು, ಅಣ್ವಸ್ತ್ರಗಳನ್ನು ಹೊಂದುವ ಮೂಲಕ ಸೈನ್ಯ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಮಿಲಿಟರಿ ತಾಂತ್ರಿಕತೆ ಸಹಕಾರಿಯಾಗಿದೆ. ಎರಡನೇ ಮಹಾ ಯುದ್ಧದ ನಂತರ ರಷ್ಯಾ ಮತ್ತು ಅಮೇರಿಕಾಗಳು ಶಕ್ತಿಶಾಲಿ ರಾಷ್ಟ್ರಗಳಾಗಿ ಬೆಳೆಯಲು ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಒಟ್ಟಿನಲ್ಲಿ ತಂತ್ರಜ್ಞಾನವು ದೇಶಗಳ ರಾಷ್ಟ್ರೀಯ ಶಕ್ತಿಯನ್ನು ಬಲಗೊಳಿಸುವ ಪ್ರಮುಖ ಮೂಲವೆಂದು,  ಪರಿಗಣಿಸಲ್ಪಟ್ಟಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...