ಶಸ್ತ್ರ ನಿಯಂತ್ರಣ ಮತ್ತು ನಿಶಸ್ತ್ರಿಕರಣ [Arms Control and Disarmament]:
ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಸ್ಪರ್ಧೆಯು ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಶಸ್ತ್ರ ನಿಯಂತ್ರಣ ಮತ್ತು ನಿಶಸ್ತ್ರಿಕರಣ ಎಂಬ ಪರಿಕಲ್ಪನೆಯ ುಗಮಕ್ಕೆ ಕಾರಣವಾಯಿತು. ಪರಸ್ಪರ ಪೂರಕವಾಗಿರುವ ಶಸ್ತ್ರ ನಿಯಂತ್ರಣ ಮತ್ತು ನಿಶಸ್ತ್ರಿಕರಣಗಳು ಸಮಾನಾರ್ಥಕವಾಗಿ ಬಳಸಲ್ಪಡುತ್ತಿರುವ ಪ್ರತ್ಯೇಕ ಪರಿಕಲ್ಪನೆಗಳಾಗಿವೆ. ತಮ್ಮ ಭದ್ರತೆಯ ಕಾರಣಕ್ಕೆ ರಾಷ್ಟ್ರಗಳು ಪಾಲಿಸುವ ಶಸ್ತ್ರಾಸ್ತ್ರ ಸ್ಪರ್ಧೆಗೆ ಪರಿಹಾರೋಪಾಯವಾಗಿ ಈ ಪರಿಕಲ್ಪನೆಗಳು ಅಸ್ತಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಕೆಳಗೆ ಶಸ್ತ್ರ ನಿಯಂತ್ರಣ ಮತ್ತು ನಿಶಸ್ತ್ರಿಕರಣಗಳ ಅರ್ಥ, ವ್ಯತ್ಯಾಸ ಹಾಗೂ ಸಂಬಂಧಗಳನ್ನು ವಿವರಿಸಲಾಗಿದ್ದು ಅವುಗಳ ಸ್ಪಷ್ಟ ತಿಳುವಳಿಕೆಗೆ ಸಹಕಾರಿಯಾಗುತ್ತದೆ. ಜೊತೆಗೆ ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಉದ್ದೇಶ ಹೊಂದಿರುವ ಅವುಗಳ ಸಾಧನೆಯ ಐತಿಹಾಸಿಕ ಪ್ರಯತ್ನಗಳ ವಿವರಣೆಯನ್ನು ನೀಡಲಾಗಿದೆ.
[A.] ಶಸ್ತ್ರಾಸ್ತ್ರ ನಿಯಂತ್ರಣದ ಅರ್ಥ [Meaning of Arms Control]: ಸರಳಾರ್ಥದಲ್ಲಿ ಯುದ್ಧಕ್ಕೆ ಕಾರಣವಾಗಬಲ್ಲ ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ನಿಯಂತ್ರಿಸುವುದೇ ಶಸ್ತ್ರ ನಿಯಂತ್ರಣ. ವಿಶಾಲಾರ್ಥದಲ್ಲಿ ಯುದ್ಧದ ಸಾಧ್ಯತೆ, ತೀವ್ರತೆ ಹಾಗೂ ಭಯಾನಕತೆಗಳನ್ನು ತಗ್ಗಿಸಲು ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಮಿತಿಗೊಳಪಡಿಸುವ ಪ್ರಯತ್ನವೇ ಶಸ್ತ್ರ ನಿಯಂತ್ರಣ. ಶಸ್ತ್ರಾಸ್ತ್ರ ನಿಯಂತ್ರಣವು ರಾಷ್ಟ್ರಗಳ ನಡುವೆ ನಿರ್ದಿಷ್ಟ ಮಾದರಿಯ ಶಸ್ತ್ರಾಸ್ತ್ರಗಳ ಕಡಿತ ಅಥವಾ ಮಿತಿಗಳನ್ನು ಪ್ರತಿನಿಧಿಸುತ್ತದೆ. ಶಸ್ತ್ರಾಸ್ತ್ರ ಕಡಿತ ಮತ್ತು ಶಸ್ತ್ರಾಸ್ತ್ರಗಳ ಮೇಲಿನ ಮಿತಿಗಳು ಶಸ್ತ್ರ ನಿಯಂತ್ರಣದ ಎರಡು ಆಯಾಮಗಳಾಗಿದ್ದು ಈಗಾಗಲೇ ಹೊಂದಿರುವ ಶಸ್ತ್ರಗಳನ್ನು ಒಪ್ಪಿತ ಪ್ರಮಾಣದಲ್ಲಿ ನಾಶಗೊಳಿಸುವುದು ಶಸ್ತ್ರಾಸ್ತ್ರ ಕಡಿತವನ್ನು ಮತ್ತು ಭವಿಷ್ಯದಲ್ಲಿ ಶಸ್ತ್ರಗಳನ್ನು ಉತ್ಪಾದಿಸಲು ಮುಂದಾಗದಂತೆ ತಡೆಯುವುದನ್ನು ಶಸ್ತ್ರಾಸ್ತ್ರಗಳ ಮೇಲಿನ ಮಿತಿ ಎನ್ನಲಾಗುತ್ತದೆ. ಶಸ್ತ್ರಾಸ್ತ್ರ ಕಡಿತವು ರಾಷ್ಟ್ರಗಳ ಸಹಕಾರವನ್ನು ಆಧರಿಸಿದ್ದರೆ ಶಸ್ತ್ರಾಸ್ತ್ರಗಳ ಮೇಲಿನ ಮಿತಿಯು ಅಂತರ್ರಾಷ್ಟ್ರೀಯ ಒಪ್ಪಂದಗಳ ಫಲವಾಗಿರುತ್ತದೆ. ಒಟ್ಟಾರೆ ಶಸ್ತ್ರಾಸ್ತ್ರ ನಿಯಂತ್ರಣವು ನಿಶಸ್ತ್ರಿಕರಣಕ್ಕೆ ಪೂರಕವಾದ ಮತ್ತು ಅದಕ್ಕೆ ಸಮಾನಾರ್ಥದಲ್ಲಿ ಪರಿಗಣಿಸಬಹುದಾದ ಪರಿಕಲ್ಪನೆಯಾಗಿದ್ದರೂ ತನ್ನದೇಯಾದ ಭಿನ್ನ ಅರ್ಥವನ್ನು ಶಸ್ತ್ರ ನಿಯಂತ್ರಣ ಹೊಂದಿದುದು ಸ್ಪಷ್ಟ.
[B.] ನಿಶಸ್ತ್ರಿಕರಣದ ಅರ್ಥ [Meaning of Disarmament]: ಸರಳಾರ್ಥದಲ್ಲಿ ಯುದ್ಧಕ್ಕೆ ಕಾರಣವಾಗಬಲ್ಲ ವಿವಿಧ ಶಸ್ತ್ರಾಸ್ತ್ರಗಳ ಕಡಿತ ಅಥವಾ ತ್ಯಜಿಸುವಿಕೆಯನ್ನು ನಿಶಸ್ತ್ರಿಕರಣ ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ಜಾಗತಿಕವಾಗಿ ಎಲ್ಲ ಮಾದರಿಯ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸುವ ಮತ್ತು ಸೈನಿಕ ಬಲವನ್ನು ವಿಸರ್ಜಿಸುವ ಪರಿಕಲ್ಪನೆಯೇ ನಿಶಸ್ತ್ರಿಕರಣ. ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಸ್ಪರ್ಧೆಗೆ ನಿಶಸ್ತ್ರಿಕರಣವು ಪರಿಹಾರವಾಗಿದ್ದು ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಭಯಾನಕತೆಯನ್ನು ಹೋಗಲಾಡಿಸುವ ಗುರಿಯನ್ನು ಹೊಂದಿರುತ್ತದೆ. ಆಸಕ್ತಿದಾಯಕ ಅಂಶವೇನೆಂದರೆ, ನಿಶಸ್ತ್ರಿಕರಣವು ಶಸ್ತ್ರ ನಿಯಂತ್ರಣಕ್ಕಿಂತ ವಿಶಾಲ ವ್ಯಾಪ್ತಿಯುಳ್ಳ ಮತ್ತು ಸಂಕೀರ್ಣವಾಗಿರುವ ಪರಿಕಲ್ಪನೆಯಾಗಿದೆ. ಚಿಂತಕರು ನೀಡಿರುವ ಕೆಳಗಿನ ವ್ಯಾಖ್ಯಾನಗಳು ನಿಶಸ್ತ್ರಿಕರಣದ ಸ್ಪಷ್ಟ ಅರ್ಥವನ್ನು ಮನವರಿಕೆ ಮಾಡಿಕೊಳ್ಳಲು ನೆರವಾಗಿದ್ದು ಅವುಗಳಲ್ಲಿ ಪ್ರಧಾನವಾದವು ಕೆಳಕಂಡಂತಿವೆ.
ಹಾನ್ಸ್ ಜೆ. ಮಾರ್ಗೆಂತೊ ಪ್ರಕಾರ (ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯುವ ಉದ್ದೇಶಕ್ಕಾಗಿ ರಾಷ್ಟ್ರಗಳು ನಿರ್ದಿಷ್ಟ ಅಥವಾ ಎಲ್ಲ ಶಸ್ತ್ರಗಳನ್ನು ಕಡಿತಗೊಳಿಸುವ ಅಥವಾ ತ್ಯಜಿಸುವ ಪ್ರಕ್ರಿಯೆಯೇ ನಿಶಸ್ತ್ರಿಕರಣ)
ಶ್ಲೈಚರ್ ಪ್ರಕಾರ (ದೈಹಿಕ ಹಿಂಸೆಗೆ ಕಾರಣವಾಗಬಲ್ಲ ರಾಷ್ಟ್ರಗಳು ಹೊಂದಿರುವ ಬೌತಿಕ ಹಾಗೂ ಕೃತಕ ಸಾಧನಗಳ ಕಡಿತ ಅಥವಾ ತ್ಯಜಿಸುವಿಕೆಯೇ ನಿಶಸ್ತ್ರಿಕರಣ)
ವಿ. ವಿ. ಡೈಕ್ ಪ್ರಕಾರ (ಶಸ್ತ್ರಾಸ್ತ್ರ ಶಕ್ತಿಯ ಮೇಲಿನ ಕಡಿತ ಅಥವಾ ಮಿತಿಗಾಗಿ ಜರುಗುವ ಪ್ರಯತ್ನಗಳೆಲ್ಲ ನಿಶಸ್ತ್ರಿಕರಣ)
[C. ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣಗಳ ನಡುವಿನ ವ್ಯತ್ಯಾಸಗಳು ಮತ್ತು ಸಂಬಂಧ ] [Differences and Relation Between Arms Control and Disornament]: ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣಗಳ ಗುರಿ ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದಾಗಿದೆ. ಹೀಗಾಗಿ ಅವೆರಡೂ ಪರಿಕಲ್ಪನೆಗಳು ಸ್ವತಂತ್ರವಾಗಿದ್ದರೂ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ಆದರೆ, ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣಗಳ ನಡುವೆ ಕೆಲ ವ್ಯತ್ಯಾಸಗಳಿದ್ದು ಪರಸ್ಪರ ಸಂಬಂಧವುಳ್ಳ ಪರಿಕಲ್ಪನೆಗಳಾಗಿವೆ. ಸಮಾನಾಂತರವಾಗಿ ಬಳಸಲ್ಪಡುವ ಇವೆರಡೂ ಪರಿಕಲ್ಪನೆಗಳ ನಡುವಿನ ಪ್ರಧಾನ ವ್ಯತ್ಯಾಸಗಳೆಂದರೆ
1. ನಿಶಸ್ತ್ರಿಕರಣವು ಈಗಾಗಲೇ ರಾಷ್ಟ್ರಗಳು ಹೊಂದಿರುವ ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ಸಂಬಂಧಿಸಿದೆ. ಆದರೆ, ಶಸ್ತ್ರ ನಿಯಂತ್ರಣವು ರಾಷ್ಟ್ರಗಳು ಪರಸ್ಪರ ಸಮ್ಮತಿಸಿ ಭವಿಷ್ಯದಲ್ಲಿ ಉತ್ಪಾದಿಸಲ್ಪಡುವ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದೆ.
2. ನಿಶಸ್ತ್ರಿಕರಣವು ರಾಷ್ಟ್ರಗಳ ಸೈನಿಕ ಪಡೆಗಳು, ಸೈನಿಕ ಸಾಧನಗಳು, ಸೈನಿಕ ವೆಚ್ಚ, ಸೈನಿಕ ನೆಲೆಗಳಿಗೆ ಸಂಬಂಧಿಸಿದ ಕಡಿತ, ಮಿತಿ, ನಾಶ ಅಥವಾ ನಿರ್ಮೂಲನೆಯನ್ನು ಒಳಗೊಂಡ ವಿಶಾಲ ಪರಿಕಲ್ಪನೆಯಾಗಿದೆ. ಆದರೆ, ಶಸ್ತ್ರ ನಿಯಂತ್ರಣವು ಶಸ್ತ್ರಾಸ್ತ್ರ ಕಡಿತ ಅಥವಾ ಶಸ್ತ್ರಾಸ್ತ್ರಗಳ ಮೇಲಿನ ಮಿತಿಯನ್ನು ಒಳಗೊಂಡ ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ನೀತಿಯನ್ನು ಪ್ರತಿನಿಧಿಸುವ ಸೀಮಿತ ಪರಿಕಲ್ಪನೆಯಾಗಿದೆ.
3. ನಿಶಸ್ತ್ರಿಕರಣವು ಯುದ್ಧ ಸಂಬಂಧಿತ ಶಸ್ತ್ರ ಮತ್ತು ಸೈನ್ಯವನ್ನು ಅಂತರ್ರಾಷ್ಟ್ರೀಯ ಒಪ್ಪಂದದಂತೆ ನಾಶಗೊಳಿಸುವ ಅಥವಾ ಮಿತಿಗೊಳಪಡಿಸುವ ವ್ಯವಸ್ಥೆಯಾಗಿದೆ. ಆದರೆ, ಶಸ್ತ್ರ ನಿಯಂತ್ರಣವು ಶಸ್ತ್ರಾಸ್ತ್ರಗಳ ಉಪಯೋಗವನ್ನು ನಿಯಂತ್ರಿಸುವ ಅಂತರ್ರಾಷ್ಟ್ರೀಯ ಒಪ್ಪಂದಗಳ, ಫಲಶೃತಿಯಾಗಿದೆ.
ಈ ಮೇಲೆ ಪ್ರಸ್ತಾಪಿತ ಪ್ರಧಾನ ವ್ಯತ್ಯಾಸಗಳನ್ನು ಹೊಂದಿರುವ ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣಗಳ ಮಧ್ಯೆ ಸೂಕ್ಷ್ಮ ಭಿನ್ನತೆಯಿರುವುದು ಸ್ಪಷ್ಟವಾಗುತ್ತದೆ. ಇದರೊಡನೆ ಇವೆರಡೂ ಪರಿಕಲ್ಪನೆಗಳ ನಡುವೆ ಅಂತರ್ಸಂಬಂಧವನ್ನೂ ನಾವು ಗುರುತಿಸಬಹುದಾಗಿದೆ. ಶಸ್ತ್ರ ನಿಯಂತ್ರಣವಿಲ್ಲದ ನಿಶಸ್ತ್ರಿಕರಣವು ತನ್ನ ಗುರಿಯನ್ನು ತಲುಪಲಾರದು. ಭವಿಷ್ಯದ ಶಸ್ತ್ರ ಉತ್ಪಾದನೆಯನ್ನು ಮಿತಿಗೊಳಪಡಿಸುವ ಶಸ್ತ್ರ ನಿಯಂತ್ರಣವು ನಿಶಸ್ತ್ರಿಕರಣದ ನಿರಂತರತೆಗೆ ನೆರವಾಗುತ್ತದೆ. ಅಂತೆಯೇ ನಿಶಸ್ತ್ರಿಕರಣವಿಲ್ಲದ ಶಸ್ತ್ರ ನಿಯಂತ್ರಣ ಪರಿಪೂರ್ಣವೆನಿಸಲಾರದು. ಅಸ್ತಿತ್ವದಲ್ಲಿರುವ ಶಸ್ತ್ರಗಳ ನಾಶದಿಂದ ಮಾತ್ರ ಭವಿಷ್ಯದ ಶಸ್ತ್ರ ಉತ್ಪಾದನೆಗೆ ರಾಷ್ಟ್ರಗಳು ಮುಂದಾಗಬಲ್ಲವು. ಹೀಗೆ ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣಗಳು ಪರಸ್ಪರ ಸಹಕರಿಸಿದರೆ ಮಾತ್ರ ಯುದ್ಧದ ಮೂಲವಾಗಿರುವ ಶಸ್ತ್ರಾಸ್ತ್ರಗಳ ನಾಮಾವಶೇಷದೊಡನೆ ಅಂತರ್ರಾಷ್ಟ್ರೀಯ ವ್ಯವಸ್ಥೆಯನ್ನು ಅಭದ್ರತೆಯಿಂದ ಸಂರಕ್ಷಿಸಬಹುದಾಗಿದೆ.
ಈ ಮೇಲೆ ಪ್ರಸ್ತಾಪಿಸಲಾಗಿರುವ ವಿವಿಧ ಒಪ್ಪಂದ ಅಥವಾ ಮಾತುಕತೆಗಳ ಬೆಳಕಿನಲ್ಲಿ ಶಸ್ತ್ರ ನಿಯಂತ್ರಣ ಅಥವಾ ನಿಶಸ್ತ್ರಿಕರಣ ಪ್ರಯತ್ನಗಳ ಇತಿಹಾಸವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಈ ವೈವಿಧ್ಯಮಯ ಪ್ರಯತ್ನಗಳ ನಡುವೆಯೂ ಜಗತ್ತು ಪ್ರಸ್ತುತ ಅಣ್ವಸ್ತ್ರಗಳ ಭೀತಿಯಿಂದ ಮುಕ್ತಗೊಂಡಿಲ್ಲ. 1994 ರ ಅಂಕಿ ಸಂಖ್ಯೆಯಂತೆ ಅಮೇರಿಕಾವು 7900, ರಷ್ಯಾವು 9000, ಫ್ರಾನ್ಸ್ 471, ಬ್ರಿಟನ್ 169 ಮತ್ತು ಚೀನಾ 300 ಅಣ್ವಸ್ತ್ರಗಳನ್ನು ಹೊಂದಿದ್ದು ಅಣ್ವಸ್ತ್ರ ಸ್ಪರ್ಧೆ ಕಂಡು ಬರುತ್ತಿದೆ. ಇದರೊಡನೆ 1998 ರಲ್ಲಿ ಭಾರತ ಹಾಗೂ ಪಾಕಿಸ್ತಾನಗಳು ಅಣ್ವಸ್ತ್ರ ರಾಷ್ಟ್ರಗಳೆನಿಸಿದ್ದು ಹಲವು ಅಣ್ವಸ್ತ್ರಗಳನ್ನು ಸಂಗ್ರಹಿಸಿಕೊಂಡಿವೆ. ಉತ್ತರ ಕೋರಿಯಾವು ವಿರೋಧದ ನಡುವೆಯೂ 2006 ರಿಂದ 2009 ರ ಮಧ್ಯೆ ಪರೀಕ್ಷೆ ನಡೆಸಲು ಯಶಸ್ವಿಯಾಗಿದೆ. ಇರಾನ್ ಸಹ ಅಣ್ವಸ್ತ್ರ ಉತ್ಪಾದನೆಯಲ್ಲಿ ತೊಡಗಿದೆ. ಹೀಗಾಗಿ ಜಗತ್ತು ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣದ ಗುರಿಯನ್ನು ಇಂದಿಗೂ ತಲುಪಿಲ್ಲವೆಂದರೆ ತಪ್ಪಾಗಲಾರದು.
ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣ ಸಾಧನೆಯ ಸವಾಲುಗಳು [Challenges to Achieve Arms Control and Disarmament]: ಶತಮಾನಗಳಷ್ಟು ಹಿಂದಿನಿಂದಲೇ ಜಾಗತಿಕ ಶಾಂತಿಗೆ ಪೂರಕವಾದ ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣ ಸಾಧನೆಗೆ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಆದರೆ, ಕೈಗೊಂಡ ವೈವಿಧ್ಯಮಯ ಪ್ರಯತ್ನಗಳು ನಾನಾ ಅಂಶಗಳ ಪ್ರಭಾವಗಳಿಂದಾಗಿ ಫಲಪ್ರದವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶ್ಲೈಚರ್ ಎಂಬ ಚಿಂತಕ ಶಸ್ತ್ರ ನಿಯಂತ್ರಣ ಅಥವಾ ನಿಶಸ್ತ್ರಿಕರಣದ ಅಂತರ್ರಾಷ್ಟ್ರೀಯ ಒಪ್ಪಂದಗಳು ಪರಿಣಾಮಕಾರಿಯಾಗಿ ಅಸ್ತಿತ್ವಕ್ಕೆ ಬಾರದಿರಲು ಅವುಗಳನ್ನು ಪ್ರಭಾವಿಸುವ ವೈವಿಧ್ಯಮಯ ತೊಡಕುಗಳೇ ಕಾರಣವೆಂದಿರುವರು. ಅಂತೆಯೇ ವಿ. ವಿ. ಡೈಕ್ ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣದ ಒಪ್ಪಂದಗಳಿಗೆ ಆರು ಪ್ರಧಾನ ತೊಡಕುಗಳನ್ನು ಗುರುತಿಸಿರುವರು. ಒಟ್ಟಾರೆ ನಿಶಸ್ತ್ರಿಕರಣದ ಕನಸು ನನಸಾಗದಿರಲು ಈ ಕೆಳಗೆ ಪ್ರಸ್ತಾಪಿಸಲಾದ ಹಲವು ಅಂಶಗಳು ಸವಾಲಾಗಿರುವುದು ಸ್ಪಷ್ಟವಾಗುತ್ತದೆ.
1. ಶಸ್ತ್ರಾಸ್ತ್ರಗಳಲ್ಲಿನ ನಂಬಿಕೆ: ಜಗತ್ತಿನ ಪ್ರತಿ ರಾಷ್ಟ್ರ ತನ್ನ ಹಿತಾಸಕ್ತಿಯನ್ನು ಪೂರೈಸಿಕೊಳ್ಳಲು ಶಕ್ತಿಯ ಬಳಕೆಯಲ್ಲಿ ನಂಬಿಕೆ ಹೊಂದಿವೆ. ಶಕ್ತಿ ಸಹಜವಾಗಿ ಮಿಲಿಟರಿ ಸ್ವರೂಪವನ್ನು ತಾಳಿದ್ದರೆ ತನ್ನ ಹಿತಾಸಕ್ತಿಯ ಪೂರೈಕೆ ಸುಲಭವೆಂಬ ನಂಬಿಕೆ ಬೆಳೆದಿರುವುದು ನಿಶಸ್ತ್ರಿಕರಣಕ್ಕೆ ಸವಾಲಾಗಿ ಮಾರ್ಪಟ್ಟಿದೆ.
2. ಶಕ್ತಿಯ ಅನುಪಾತದ ಸಮಸ್ಯೆ: ರಾಷ್ಟ್ರಗಳ ನಡುವೆ ನಿಶಸ್ತ್ರಿಕರಣ ಒಪ್ಪಂದ ಮುರಿದು ಬೀಳಲು ಅವುಗಳು ಹೊಂದಿರುವ ಶಕ್ತಿಯ ಅನುಪಾತ ಕುರಿತಾದ ಸಮಸ್ಯೆಯು ಪ್ರಧಾನ ಕಾರಣವಾಗಿರುತ್ತದೆ. ರಾಷ್ಟ್ರಗಳ ವೈವಿಧ್ಯಮಯ ಶಸ್ತ್ರ ಶಕ್ತಿಯನ್ನು ಅಳೆಯುವ ವೈಜ್ಞಾನಿಕ ವಿಧಾನವಿಲ್ಲದಿರುವುದು ಅವುಗಳ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡಿ ಒಪ್ಪಂದ ಏರ್ಪಡದಿರಲು ಕಾರಣವಾಗುತ್ತದೆ.
3. ಅನುಪಾತಾಧಾರಿತ ಒಪ್ಪಂದಗಳ ಅನುಷ್ಟಾನದ ಸಮಸ್ಯೆ: ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣದ ಒಪ್ಪಂದ ಒಂದೊಮ್ಮೆ ರಾಷ್ಟ್ರಗಳ ನಡುವೆ ಏರ್ಪಟ್ಟರೂ ಅದರ ಅನುಷ್ಟಾನದ ವೇಳೆ ವಿವಿಧ ಅಂಶಗಳನ್ನು ಆಧರಿಸಿರುವ ರಾಷ್ಟ್ರಗಳ ಮಿಲಿಟರಿ ಶಕ್ತಿಯನ್ನು ಸ್ಪಷ್ಟವಾಗಿ ಗುರುತಿಸಲಾಗದೇ ಒಪ್ಪಂದಗಳು ಮುರಿದು ಬೀಳುವ ಸಾಧ್ಯತೆ ಅಧಿಕವಾಗಿರುತ್ತದೆ.
4. ರಾಷ್ಟ್ರಗಳ ನಡುವಿನ ನಿರಂತರ ಅಪನಂಬಿಕೆ: ಸಾಮಾನ್ಯವಾಗಿ ಅಭದ್ರತೆಯ ಕಾರಣಕ್ಕೆ ಕೆಲ ರಾಷ್ಟ್ರಗಳು ನಿಶಸ್ತ್ರಿಕರಣ ಒಪ್ಪಂದಗಳಿಗೆ ಮುಂದಾಗುತ್ತವೆ. ಹೀಗೆ ಒಪ್ಪಂದಕ್ಕೆ ಮುಂದಾದ ರಾಷ್ಟ್ರಗಳ ಪ್ರಸ್ತಾಪಗಳು ಕೆಲ ರಾಷ್ಟ್ರಗಳಿಗೆ ಸರಿ ತೋರದಾಗುತ್ತವೆ. ಪ್ರಬಲ ರಾಷ್ಟ್ರಗಳಿಗೆ ತಮ್ಮನ್ನು ದುರ್ಬಲಗೊಳಿಸುವ ಹುನ್ನಾರವೆನಿಸಿದರೆ ದುರ್ಬಲ ದೇಶಗಳಿಗೆ ನಿಶಸ್ತ್ರಿಕರಣವು ಭವಿಷ್ಯದಲ್ಲಿ ತಮ್ಮನ್ನು ಶೋಷಿಸುವ ಸಾಧನದಂತೆ ತೋರುತ್ತದೆ. ಇಂತಹ ಅಪನಂಬಿಕೆಗಳು ರಾಷ್ಟ್ರಗಳಲ್ಲಿ ನಿರಂತರವಾಗಿ ಕಂಡು ಬರುವುದು ನಿಶಸ್ತ್ರಿಕರಣ ಪ್ರಕ್ರಿಯೆಗೆ ಸವಾಲಾಗಿ ಪರಿಣಮಿಸುತ್ತದೆ.
5. ಅಭದ್ರತೆಯ ಭಾವನೆ: ಶಸ್ತ್ರಗಳು ರಾಷ್ಟ್ರವೊಂದರ ಶಕ್ತಿಯ ಸಂಕೇತ. ಅವುಗಳ ನೆರವಿನಿಂದಲೇ ದೇಶವೊಂದು ತನ್ನ ಸಾಮರ್ಥ್ಯವನ್ನು ಇತರ ದೇಶಗಳ ಮುಂದೆ ಸಾಬೀತುಪಡಿಸಲು ಪ್ರಯತ್ನಿಸುತ್ತಿರುತ್ತದೆ. ಶಸ್ತ್ರಗಳಿಲ್ಲದ ರಾಷ್ಟ್ರ ಸದಾ ಅಭದ್ರತೆಯಿಂದ ಬಳಲುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಗಳು ನಿಶಸ್ತ್ರಿಕರಣವು ತಮ್ಮನ್ನು ಅಭದ್ರತೆಗೆ ದೂಡಬಹುದೆಂದು ಭಾವಿಸುವುದು ನಿಶಸ್ತ್ರಿಕರಣ ಸಫಲಗೊಳ್ಳದಂತೆ ಪ್ರಭಾವ ಬೀರುತ್ತದೆ.
6. ರಾಜಕೀಯ ವಿವಾದಗಳು: ರಾಜಕೀಯ ವಿವಾದಗಳನ್ನು ಮೈಗೂಡಿಸಿಕೊಂಡ ರಾಷ್ಟ್ರಗಳ ಮಧ್ಯೆ ಸಹಜವಾಗಿ ಶಸ್ತ್ರಾಸ್ತ್ರ ಸ್ಪರ್ಧೆ ಉಂಟಾಗುತ್ತದೆ. ಈ ಬೆಳವಣಿಗೆಯು ನಿಶಸ್ತ್ರಿಕರಣದ ಸಾಧನೆಗೆ ಪ್ರಧಾನ ಸವಾಲಾಗಿ ಮಾರ್ಪಡುತ್ತದೆ.
7. ಚಲನಶೀಲ ಶಸ್ತ್ರಾಸ್ತ್ರ ತಂತ್ರಜ್ಞಾನ: ದಿನದಿಂದ ದಿನಕ್ಕೆ ವಿನೂತನ ಶಸ್ತ್ರಾಸ್ತ್ರಗಳ ಆವಿಷ್ಕಾರವು ನಿಶಸ್ತ್ರಿಕರಣದ, ಪ್ರಯತ್ನಗಳಿಗೆ ಸವಾಲಾಗಿ ಪರಿಣಮಿಸಿವೆ.
8. ಶಸ್ತ್ರಾಸ್ತ್ರ ಕೈಗಾರಿಕೆ ಆಧರಿತ ಅರ್ಥ ವ್ಯವಸ್ಥೆ: ಜಗತ್ತಿನ ಕೆಲ ರಾಷ್ಟ್ರಗಳು ತಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಶಸ್ತ್ರಾಸ್ತ್ರ ಕೈಗಾರಿಕೆಯನ್ನೇ ಆಧರಿಸಿವೆ. ಅನ್ಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಮೂಲಕ ತನ್ನ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುತ್ತಿವೆ.
ಈ ಮೇಲೆ ಚರ್ಚಿಸಲಾಗಿರುವ ವಿವಿಧ ಅಂಶಗಳು ಶಸ್ತ್ರ ನಿಯಂತ್ರಣ ಹಾಗೂ ನಿಶಸ್ತ್ರಿಕರಣದ ಸಾಧನೆಗೆ ಪ್ರಧಾನ ಸವಾಲುಗಳೆನಿಸಿವೆ. ಆದರೂ ಯುದ್ಧ ಭೀತಿ ಮತ್ತು ಅನಿಯಂತ್ರಿತ ಶಸ್ತ್ರಾಸ್ತ್ರ ಸ್ಪರ್ಧೆಯ ಅಭದ್ರತೆಗಳು ರಾಷ್ಟ್ರಗಳನ್ನು ನಿಶಸ್ತ್ರಿಕರಣಕ್ಕೆ ಮುಂದಾಗಲು ಪ್ರೇರೇಪಿಸುತ್ತಿದ್ದುದು ಹಲವು ನಿಶಸ್ತ್ರಿಕರಣ ಪ್ರಯತ್ನಗಳಿಗೆ ಜಗತ್ತು ಸಾಕ್ಷಿಯಾಗಲು ಕಾರಣವೆಂದರೆ, ತಪ್ಪಾಗಲಾರದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ