ಸಮಕಾಲೀನ ಅಂತರ್ರಾಷ್ಟ್ರೀಯ ಸಂಬಂಧಗಳ ಮೂಲವನ್ನು ಪ್ರಾಚೀನ ಕಾಲದಲ್ಲಿಯೇ ಗುರುತಿಸಲಾಗುತ್ತದೆ. ರಾಜ್ಯ ಪರಿಕಲ್ಪನೆಯಷ್ಟೇ ಪುರಾತನವಾದ ಅಂತರ್ರಾಷ್ಟ್ರೀಯ ಸಂಬಂಧಗಳು ಗ್ರೀಕ್ ಚಿಂತಕ ತೂಸಿಡೈಡಸ್ನ ಫೆಲೊಪೊನೇಷಿಯನ್ ಯುದ್ಧದ ಇತಿಹಾಸ ಮತ್ತು ಭಾರತದ ಚಿಂತಕನಾದ ಕೌಟಿಲ್ಯನ ಅರ್ಥಶಾಸ್ತ್ರ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಪರಿಪೂರ್ಣವಾಗಿ ಮನವರಿಕೆ ಮಾಡಿಕೊಳ್ಳಲು ಅವುಗಳ ಐತಿಹಾಸಿಕ ಬೆಳವಣಿಗೆಯ ತಿಳುವಳಿಕೆಯು ಅತ್ಯಗತ್ಯ. ಆರಂಭದ ನಗರ ರಾಜ್ಯ ವ್ಯವಸ್ಥೆಯ ಬದಲು ರಾಷ್ಟ್ರ ರಾಜ್ಯಗಳ ವ್ಯವಸ್ಥೆ ಪ್ರಸ್ತುತ ಕಾರ್ಯಾಚರಿಸುತ್ತಿದ್ದು ಅಂದಿನಿಂದ ಇಂದಿನವರೆಗಿನ ಅಂತರ್ರಾಷ್ಟ್ರೀಯ ಸಂಬಂಧಗಳ ವಿಕಸನವು ಅವುಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವಿಕಾಸ ಎಂಬ ಪ್ರಸಕ್ತ ಅಧ್ಯಾಯದಲ್ಲಿ ಪ್ರಾಚೀನ ನಗರ ರಾಜ್ಯಗಳಿಂದ ಆಧುನಿಕ ರಾಷ್ಟ್ರ ರಾಜ್ಯಗಳ ವ್ಯವಸ್ಥೆಯವರೆಗಿನ ಅಂತರ್ರಾಷ್ಟ್ರೀಯ ಸಂಬಂಧಗಳ ಸಂಕ್ಷೀಪ್ತ ವಿವರಗಳನ್ನು ನೀಡಲು ಪ್ರಯತ್ನಿಸಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಧಾಕಲಿತ ೈತಿಹಾಸಿಕ ಕಾಲದಿಂದ ಆಧುನಿಕ ಯುಗದಲ್ಲಿ ರಾಷ್ಟ್ರರಾಜ್ಯಗಳ ವ್ಯವಸ್ಥೆ ಜಾರಿಗೊಳ್ಳುವವರೆಗಿನ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಕೆಲ ಪ್ರಮುಖ ಅವಧಿಗಳಾಗಿ ವಿಂಗಡಿಸಿ ಕೆಳಗೆ ವಿವರಿಸಲಾಗಿದೆ.
1. ಪ್ರಾಚೀನ ಗ್ರೀಕ್ ನಗರ ರಾಜ್ಯಗಳ ಅವಧಿ [Period of Ancient Greec City States]: ಪ್ರಾಚೀನ ಗ್ರೀಸ್ ರಾಜಕೀಯವಾಗಿ ಹಲವು ಪುಟ್ಟ ನಗರ ರಾಜ್ಯಗಳಿಂದ ಕೂಡಿತ್ತು. ಗ್ರೀಕ್ ನಗರ ರಾಜ್ಯಗಳ ನಡುವೆ ಶಾಂತಿಯುತ ಆರ್ಥಿಕ ಸಂಬಂಧಗಳು ಅಸ್ತಿತ್ವದಲ್ಲಿದ್ದವು. ಜೊತೆಗೆ ಸಾ. ಶ. ಪೂ. ಆರನೇ ಶತಮಾನದಲ್ಲಿಯೇ ಗ್ರೀಕ್ ನಗರ ರಾಜ್ಯಗಳು ಅಂಫಿಕ್ಟ್ಯಾನಿಕ್ ಲೀಗ್ (Amphictanic League) ರಚಿಸಿಕೊಂಡ ನಿದರ್ಶನವಿದೆ. ಅಂದಿನ ಗ್ರೀಕ್ ನಗರ ರಾಜ್ಯಗಳ ನಡುವೆ ನಿರಂತರವಾಗಿ ಹೋರಾಟ ನಡೆಯುತ್ತಿದ್ದುದು ಅವುಗಳ ನಡುವಿನ ದುರ್ಬಲ ರಾಜಕೀಯ ಸಂಬಂಧವನ್ನು ಸೂಚಿಸುತ್ತದೆ. ಇದರೊಡನೆ ಸ್ವತಂತ್ರವಾಗಿದ್ದ ನಗರ ರಾಜ್ಯಗಳು ಆಕ್ರಮಣದ ಭಯದಿಂದ ತಮ್ಮ ರಕ್ಷಣೆಗಾಗಿ ಮೈತ್ರಿಕೂಟ ರಚಿಸಿಕೊಳ್ಳುತ್ತಿದ್ದುದು ನಗರ ರಾಜ್ಯಗಳ ನಡುವಿನ ಸಂಬಂಧಗಳ ಉಪಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.
ಸಾ. ಶ. ಪೂ. 499 ರ ಹೊತ್ತಿಗೆ ಪರ್ಷಿಯನ್ನರ ಾಕ್ರಮಣವನ್ನು ತಡೆಯಲು ಗ್ರೀಕ್ ನಗರ ರಾಜ್ಯಗಳು ಹೆಲೆನಿಕ್ ಲೀಗ್ (Hellenic League) ಎಂಬ ರಾಜ್ಯಗಳ ಒಕ್ಕೂಟವನ್ನು ಸ್ಥಾಪಿಸಿಕೊಳ್ಳಲು ಮುಂದಾಗಿದ್ದವು. ಪರ್ಷಿಯನ್ನರ ಆಕ್ರಮಣದ ಭೀತಿ ಮಾಯವಾದ ನಂತರ ಅಥೆನ್ಸ್ ನೇತೃತ್ವದಲ್ಲಿ ಡೆಲಿಯನ್ ಲೀಗ್ (Delian League) ಎಂಬ ಮೈತ್ರಿಕೂಟವನ್ನು ರಚಿಸಿಕೊಂಡ ಹಲವು ಗ್ರೀಕ್ ನಗರ ರಾಜ್ಯಗಳು ತಮ್ಮ ರಕ್ಷಣೆಗೆ ಪ್ರಯತ್ನಿಸಿದವು. ಅಂತೆಯೇ ಉಳಿದ ನಗರ ರಾಜ್ಯಗಳೊಡನೆ ಮೈತ್ರಿ ಮಾಡಿಕೊಂಡ ಸ್ಪಾರ್ಟಾ ಅಥೆನ್ಸಿನೊಡನೆ ಸ್ಪರ್ಧೆಗಿಳಿಯಿತು. ಅಂತಿಮವಾಗಿ ಸಾ. ಶ. ಪೂ. 431 ರ ಹೊತ್ತಿಗೆ ಸ್ಪಾರ್ಟಾ ಮತ್ತು ಅಥೆನ್ಸಿನ ನಡುವೆ ಫೆಲೊಪನೇಶಿಯನ್ ಯುದ್ಧ ಆರಂಭವಾಯಿತು. ಈ ವೇಳೆಯಲ್ಲಿ ಪರ್ಷಿಯಾವು ಅಥೆನ್ಸಿನೊಡನೆ ಸೇರಿ ತನ್ನ ವಿರುದ್ಧವೇ ಹೋರಾಡಿದ್ದ ಸ್ಪಾರ್ಟಾಗೆ ಬೆಂಬಲಿಸಿತು. ಫಲವಾಗಿ ಸಾ. ಶ. ಪೂ. 404 ರ ಫೆಲಪೊನೇಷಿಯನ್ ಯುದ್ಧದಲ್ಲಿ ಸ್ಪಾರ್ಟಾದ ಎದುರು ಅಥೆನ್ಸ್ ಸೋಲುವಂತಾಯಿತು. ಈ ಬೆಳವಣಿಗೆಗಳು ಗ್ರೀಕ್ ನಗರ ರಾಜ್ಯಗಳ ನಡುವೆ ಅಸ್ತಿತ್ವದಲ್ಲಿದ್ದ ಸಂಬಂಧಗಳನ್ನು ಸ್ಪಷ್ಟಪಡಿಸುತ್ತವೆ. ಆಸಕ್ತಿದಾಯಕ ಅಂಶವೇನೆಂದರೆ, ನಿರಂತರ ಹೋರಾಟದ ನಡುವೆ ಒಲಿಂಪಿಕ್ ಕ್ರೀಡಾಕೂಟದ ಅವಧಿಯಲ್ಲಿ ನಗರ ರಾಜ್ಯಗಳು ಹೋರಾಟಕ್ಕೆ ವಿರಾಮ ನೀಡುತ್ತಿದ್ದವು. ಈ ಬೆಳವಣಿಗೆಯು ಅಂದಿನ ನಗರ ರಾಜ್ಯಗಳ ನಡುವೆ ರಾಯಭಾರಕ ಸಂಬಂಧ ಅಸ್ತಿತ್ವದಲ್ಲಿರುವುದನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಪ್ರಾಚೀನ ನಗರ ರಾಜ್ಯಗಳ ನಡುವೆ ದುರ್ಬಲ ಸ್ವರೂಪದ ಸಂಬಂಧಗಳು ಅಸ್ತಿತ್ವದಲ್ಲಿದ್ದುದು ನಮಗೆ ಸ್ಪಷ್ಟವಾಗುತ್ತದೆ.
2. ರೋಮನ್ ಸಾಮ್ರಾಜ್ಯದ ಅವಧಿ [Period of Roman Empire]: ಬಹುತೇಕ ಗ್ರೀಕ್ ನಗರ ರಾಜ್ಯಗಳು ರೋಮನ್ ಚಕ್ರವರ್ತಿಗಳಿಂದ ಜಯಿಸಲ್ಪಟ್ಟವು. ಫಲವಾಗಿ ರೋಮನ್ ಸಾಮ್ರಾಜ್ಯವು ಗ್ರೀಕರಿಗಿಂತ ವಿಶಾಲ ರಾಜಕೀಯ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಫಲವಾಯಿತು. ರೋಮನ್ ಸಾಮ್ರಾಟ ಅಗಸ್ಟಸ್ನು ತನ್ನ ಸಾಮರ್ಥ್ಯವನ್ನು ಬಳಸಿ ವಿಶಾಲ ಪ್ರದೇಶದ ಜನರಲ್ಲಿ ಏಕತೆಯನ್ನು ಉಂಟು ಮಾಡಿದನಲ್ಲದೇ ಆಡಳಿತಾತ್ಮಕ ಸ್ಥಿರತೆ ತಂದನು. ಫಲವಾಗಿ ಪ್ರಾಚೀನ ಭಾರತ ಮತ್ತು ಚೀನಾದೊಡನೆ ರೋಮನ್ನರು ನಿರಂತರ ವ್ಯಾಪಾರ ಸಂಬಂಧ ಹೊಂದಲು ಸಾಧ್ಯವಾಗಿತ್ತು. ಯುರೋಪಿನ ಬಹು ಭಾಗ, ಏಷ್ಯಾ, ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ಆಡಳಿತ ಘಟಕಗಳನ್ನು ತಮ್ಮ ಪ್ರಭಾವಕ್ಕೊಳಪಡಿಸುವ ಮೂಲಕ ಅವುಗಳ ನಡುವಿನ ಸಂಬಂಧವನ್ನು ರೋಮನ್ನರು ಹೆಚ್ಚಿಸಿದರು.
ರೋಮನ್ನರು ತಾವು ಆಕ್ರಮಿಸಿದ ನೂತನ ರಾಜ್ಯಗಳ ಪ್ರತಿನಿಧಿಗಳೊಡನೆ ಒಪ್ಪಂದ ಮಾಡಿಕೊಂಡು ಸ್ವಯಂ ಆಳ್ವಿಕೆಗೆ ಅವಕಾಶ ಒದಗಿಸುತ್ತಿದ್ದರು. ವಿದೇಶಿ ವ್ಯವಹಾರ ಇಲಾಖೆಯಿದ್ದರೂ ರೋಮನ್ ಸೆನೆಟ್ ವಿದೇಶಿ ವ್ಯವಹಾರಗಳನ್ನು ನಿರ್ವಹಿಸುತ್ತಿತ್ತು. ಇದರೊಡನೆ ರೋಮನ್ ಸಾಮ್ರಾಜ್ಯವು ಲಿಖಿತ ಸೂಚನೆಯೊಡನೆ ತನ್ನ ರಾಯಭಾರಿಗಳನ್ನು ವಿದೇಶಗಳಿಗೆ ಕಳುಹಿಸುತ್ತಿತ್ತು. ವಿದೇಶಿ ರಾಯಭಾರಿಗಳನ್ನು ತನ್ನಲ್ಲಿಗೆ ಬರಮಾಡಿಕೊಂಡು ವಿವಿಧ ವಿನಾಯಿತಿಗಳನ್ನು ಕಲ್ಪಿಸಲಾಗುತ್ತಿತ್ತು. ಜೊತೆಗೆ ಆಧುನಿಕ ಯುರೋಪಿನ ರಾಜ್ಯಗಳ ನಡುವಿನ ಸಂಬಂಧಗಳಿಗೆ ಪೂರಕವಾದ ಹಲವು ಬೆಳವಣಿಗೆಗೆ ರೋಮನ್ ಸಾಮ್ರಾಜ್ಯವು ತಳಹದಿ ಒದಗಿಸಿತ್ತು.
3. ಮಧ್ಯ ಯುಗದ ಅವಧಿ [Period of Middle Age]: ಸಾ. ಶ. ಪೂ ಐದನೇ ಶತಮಾನದ ಕೊನೆಯಲ್ಲಿ ರೋಮನ್ ಸಾಮ್ರಾಜ್ಯವು ಪಥನವಾದಾಗ ಯುರೋಪಿನಲ್ಲಿ ಅಧಿಕಾರದ ಕೇಂದ್ರಿಕರಣ ಮಾಯವಾಗಿ ವಿಕೇಂದ್ರಿಕರಣ ಕಂಡು ಬಂದಿತು. ರೋಮನ್ ಏಕಚಕ್ರಾಧಿಪತ್ಯ ಕೊನೆಗೊಂಡ ಫಲವಾಗಿ ಪ್ರವಾಸ, ವ್ಯಾಪಾರ, ಸಂಪರ್ಕ ಚಟುವಟಿಕೆಗಳು ಬಲಗೊಳ್ಳತೊಡಗಿದವು. ಇದರೊಡನೆ ಅರಬ್ ನಾಗರಿಕತೆ, ಬೈಜಾಂಟಿಕ್ ಸಾಮ್ರಾಜ್ಯ ಮತ್ತು ಕೇಂದ್ರಿಕೃತ ಅಧಿಕಾರವಿಲ್ಲದ ಯುರೋಪ್ ನಾಗರಿಕತೆ, ಅಸ್ತಿತ್ವಕ್ಕೆ ಬಂದವು. ಮಧ್ಯ ಯುಗದ ಯುರೋಪಿನಲ್ಲಿ ಊಳಿಗಮಾನ್ಯ ಪದ್ಧತಿ ಜಾರಿಗೊಂಡು ರಾಜ್ಯಗಳು ತಮ್ಮ ಪ್ರಾಮುಖ್ಯತೆ ಕಳೆದುಕೊಂಡವು. ಹೀಗಾಗಿ ರಾಜ್ಯಗಳ ನಡುವಿನ ಸಂಬಂಧ ವ್ಯಾಪಕತೆಯನ್ನು ಪಡೆಯಲು ಸಾಧ್ಯವಾಗದಾಯಿತು. ಚರ್ಚಿನ ನಿಯಂತ್ರಣ ಮಧ್ಯ ಯುಗದಲ್ಲಿ ಹೆಚ್ಚಾಗಿ ರಾಜ್ಯಗಳನ್ನು ಬೆಸೆಯುವ ಸಾಧನವಾಗಿ ಅದು ರೂಪುಗೊಂಡಿತು. ಮಧ್ಯ ಯುಗದಲ್ಲಿ ಅಧಿಕಾರವು ಊಳಿಗಮಾನ್ಯ ದೊರೆಗಳು ಮತ್ತು ಧಾರ್ಮಿಕ ಮುಖಂಡರಿಂದ ಒಂದೆಡೆ ನಿಯಂತ್ರಿಸಲ್ಪಟ್ಟರೆ ಮತ್ತೊಂದೆಡೆ ವ್ಯಾಪಾರ, ಪ್ರವಾಸ, ಸಂಪರ್ಕ ಚಟುವಟಿಕೆಗಳು ಅಧಿಕಗೊಂಡವು. ಇದರಿಂದಾಗಿ ಮಧ್ಯ ಯುಗವು ವಿಕೇಂದ್ರಿಕರಣ ಹಾಗೂ ಕೇಂದ್ರಿಕರಣಗಳನ್ನು ಕಾಣುವಂತಾಗಿ ಅಂತರ್ರಾಜ್ಯ ಸಂಬಂಧಗಳು ತೃಪ್ತಿಕರ ಪ್ರಗತಿಯನ್ನು ಹೊಂದಲಿಲ್ಲ.
4. ಮಧ್ಯ ಯುಗಾಂತ್ಯದ ಅವಧಿ [Period of Late Middle Age]: ಸಾ. ಶ. ಒಂದು ಸಾವಿರದ ನಂತರದ ಕಾಲದಲ್ಲಿ ಯುರೋಪಿನ ಊಳಿಗಮಾನ್ಯ ಪದ್ಧತಿ ಮತ್ತು ಕ್ರಿಶ್ಚಿಯನ್ನರ ಸಾರ್ವತ್ರಿಕತೆ ಶಿಥಿಲಗೊಳ್ಳತೊಡಗಿದವು. ವಿವಿಧ ರಾಜ್ಯಗಳ ನಡುವೆ ವ್ಯಾಪಾರ ಚಟುವಟಿಕೆಗಳು ವಿಸ್ತರಣೆಗೊಂಡವು. ಜೊತೆಗೆ ಹಲವು ಕ್ಷೇತ್ರಗಳಲ್ಲಿ ತಾಂತ್ರಿಕತೆ ಬಲಗೊಂಡಿತು. ಉತ್ತರ ಇಟಲಿಯ ನಗರಗಳು ವ್ಯಾಪಾರ ಸಂಬಂಧವನ್ನು ಬೆಳೆಸಿಕೊಂಡವು. ಅನ್ವೇಷಕರು ಮತ್ತು ವಲಸಿಗರು ನೂತನ ಭಾಗಗಳನ್ನು ತಲುಪಿದರು. ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿನ ಬದಲಾವಣೆಯು ಜನರ ದೈನಂದಿನ ಜೀವನವನ್ನು ಸರಳಗೊಳಿಸಿ ಸಾಮಾಜಿಕ ಸಂಬಂಧಗಳನ್ನು ಪರಿವರ್ತಿಸಿದವು. ವ್ಯಾಪಾರಿ ಸಮುದಾಯವು ಸ್ಥಳೀಯ ಲಭ್ಯತೆಗಿಂತ ಭಿನ್ನವಾದ ವಸ್ತುಗಳ ಬಳಕೆಗೆ ಒಲವು ತೋರಿದವು. ಬರಹಗಾರರು ಸಾಂಪ್ರದಾಯಿಕ ಗ್ರೀಕ್ ಮತ್ತು ರೋಮನ್ ವಿಚಾರಗಳನ್ನು ಸಂಶೋಧಿಸಲು ಮುಂದಾದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಅಂತರ್ರಾಷ್ಟ್ರೀಯ ಸಂಬಂಧಗಳು ಗರಿಗೆದರಲು ಸಾಧ್ಯವಾಯಿತು.
5. ಆಧುನಿಕ ರಾಷ್ಟ್ರ ರಾಜ್ಯಗಳ ವ್ಯವಸ್ಥೆಯ ಅವಧಿ [Period of Modern Nation States Systom]: 16 ನೇ ಶತಮಾನದ ಸುಧಾರಣಾ ಮತ್ತು ಪ್ರತಿ ಸುಧಾರಣಾ ಚಳುವಳಿಗಳು ಜರ್ಮನಿಯನ್ನು ಪ್ರೊಟೆಸ್ಟಂಟ್ ಮತ್ತು ಕ್ಯಾತೊಲಿಕ್ ಗುಂಪುಗಳಾಗಿ ವಿಂಗಡಿಸಿದ್ದವು. ಜರ್ಮನಿಯ ಈ ಎರಡೂ ಗುಂಪುಗಳು ತಮ್ಮ ಪ್ರಾಬಲ್ಯಕ್ಕಾಗಿ ವಿದೇಶಿ ಬೆಂಬಲವನ್ನು ಗಳಿಸಲು ಹವಣಿಸುತ್ತಿದ್ದವು. 1618 ರ ಹೊತ್ತಿಗೆ ಪವಿತ್ರ ರೋಮನ್ ಚಕ್ರವರ್ತಿ ಫರ್ಡಿನಾಂಡ್ II. ಎಂಬಾತ ಬೊಹಿಮಿಯಾದ ಪ್ರೊಟೆಸ್ಟಂಟ್ ಪಂಥದವರ ಮೇಲೆ ಕ್ಯಾಥೊಲಿಕ್ ಪಂಥವನ್ನು ಹೇರಲು ಮುಂದಾದನು. ಈ ಬೆಳವಣಿಗೆಯು ಯುರೋಪ್ ಇತಿಹಾಸದಲ್ಲಿಯೇ ಗೋರವಾದ ಯುದ್ಧಕ್ಕೆ ಕಾರಣವಾಯಿತು. ಯುರೋಪಿನ ಶಕ್ತಿಶಾಲಿ ರಾಷ್ಟ್ರಗಳಾಗಿದ್ದ ಆಸ್ಟ್ರಿಯಾ, ಸ್ಪೇನ್, ಫ್ರಾನ್ಸ್ಗಳು ಈ ಮೂವತ್ತು ವರ್ಷಗಳ ಯುದ್ಧದಲ್ಲಿ ಭಾಗಿಯಾಗಿದ್ದವು. ಧಾರ್ಮಿಕ ಹಿತಾಸಕ್ತಿಯೊಡನೆ ವ್ಯಾಪಾರಿ ವರ್ಗಗಳ ಹಿತಾಸಕ್ತಿಗಳೂ ಯುದ್ಧದ ಮುಂದುವರಿಕೆಗೆ ಕಾರಣವಾಗಿದ್ದವು. ಜರ್ಮನಿಯನ್ನು ಹೆಚ್ಚಾಗಿ ಆವರಿಸಿದ್ದ ಯುದ್ಧದಲ್ಲಿ ಗಡಿಗಳಿಗಾಗಲಿ, ಆದೇಶಗಳಿಗಾಗಲಿ ಅಥವಾ ರಕ್ಷಣೆಗಾಗಲಿ ಮಹತ್ವವಿರಲಿಲ್ಲ. ಅಂತಿಮವಾಗಿ 1648 ರ ವೆಸ್ಟ್ ಫೇಲಿಯಾ ಒಪ್ಪಂದವು 30 ವರ್ಷಗಳ ಈ ಯುದ್ಧವನ್ನು ಕೊನೆಗೊಳಿಸಲು ಯಶಸ್ವಿಯಾಯಿತು.
ವಿವಿಧ ರಾಜ್ಯಗಳ ಸುಮಾರು 179 ಪ್ರತಿನಿಧಿಗಳು ಸಹಮತ ಸೂಚಿಸಿ ವೆಸ್ಟ್ ಫೇಲಿಯಾ ಶಾಂತಿ ಒಪ್ಪಂದಕ್ಕೆ ಮುಂದಾದರು. ಬಹುತೇಕ ಅಂತರ್ರಾಷ್ಟ್ರೀಯ ಸಂಬಂಧಗಳ ಚಿಂತಕರು ಆಧುನಿಕ ರಾಷ್ಟ್ರ ರಾಜ್ಯಗಳ ವ್ಯವಸ್ಥೆಯನ್ನು 1648 ರ ವೆಸ್ಟ್ ಫೇಲಿಯಾ ಒಪ್ಪಂದದಿಂದಲೇ ಗುರುತಿಸುತ್ತಾರೆ. ಆಧುನಿಕ ರಾಷ್ಟ್ರ ರಾಜ್ಯಗಳ ವ್ಯವಸ್ಥೆಗೆ ಮತ್ತು ಔಪಚಾರಿಕ ಅಂತರ್ರಾಷ್ಟ್ರೀಯ ಸಂಬಂಧಗಳಿಗೆ ಚಾಲನೆ ನೀಡಿದ ವೆಸ್ಟ್ ಫೇಲಿಯಾ ಶಾಂತಿ ಒಪ್ಪಂದದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
A. ರೋಮನ್ ಕ್ಯಾತೊಲಿಕ್ ಪಂಥದ ಏಕಸ್ವಾಮ್ಯದ ಕನಸು ಭಗ್ನವಾಗಿ ಪ್ರಪಂಚದಲ್ಲಿ ಪ್ರೊಟೆಸ್ಟಂಟ್ ಪಂಥವೂ ಉಳಿದುಕೊಳ್ಳಲು ಅವಕಾಶ ದೊರಕಿತು.
B. ಧಾರ್ಮಿಕ ಆಡಳಿತವನ್ನು ಅಂತ್ಯಗೊಳಿಸಿ ಜಾತ್ಯತೀತ ಆಡಳಿತವನ್ನು ಅಳವಡಿಸಿಕೊಳ್ಳಲು ಆಸ್ಪದ ಒದಗಿಸಲಾಯಿತು. ಫಲವಾಗಿ ರಾಷ್ಟ್ರಗಳು ಧಾರ್ಮಿಕ ಮುಖಂಡರ ಹಿಡಿತದಿಂದ ಮುಕ್ತವಾದವಲ್ಲದೇ ತಮಗಿಷ್ಟವಾದ ಧರ್ಮವನ್ನು ಅನುಸರಿಸಲು ಸ್ವತಂತ್ರಗೊಂಡವು.
C. ರಾಜ್ಯಗಳ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಮೂಲಕ ರಾಜ್ಯಗಳ ಸ್ವತಂತ್ರ ಕಾರ್ಯಾಚರಣೆಗೆ ಆಸ್ಪದ ಮಾಡಿಕೊಡಲಾಯಿತು.
D. ಸಾರ್ವಭೌಮ ರಾಷ್ಟ್ರಗಳಿಗೆ ಪೂರಕವಾದ ಸಾಮಾನ್ಯ ತಿಳುವಳಿಕೆಯ ಆಧಾರದ ರಾಯಭಾರತ್ವ ಮತ್ತು ವಿದೇಶಿ ನೀತಿಗಳಿಗೆ ಪ್ರಾಶಸ್ತ್ಯ ಒದಗಿಸಲಾಯಿತು.
E. ರಾಷ್ಟ್ರ ರಾಜ್ಯಗಳು ಉನ್ನತ ಸರ್ಕಾರವೆನಿಸಿಕೊಂಡವಲ್ಲದೇ ಅಕಾರಣಿಕವಾಗಿ ಯುದ್ಧಕ್ಕೆ ಮುಂದಾಗುವ ಬದಲು ತಮ್ಮ ಅಸ್ತಿತ್ವಕ್ಕೆ ಅಭದ್ರತೆ ಉಂಟಾದಾಗ ಮಾತ್ರ ಯುದ್ಧ ಕೈಗೊಳ್ಳಲು ಅನುಮತಿಸಲ್ಪಟ್ಟವು.
6. ಸಮಕಾಲೀನ ಅವಧಿ: ಎರಡನೇ ವಿಶ್ವ ಯುದ್ಧದ ನಂತರದ ಅವಧಿಯಾಗಿದೆ. ಇಲ್ಲಿ ಅಂತರ್‌ರಾಷ್ಟ್ರೀಯ ಸಂಸ್ಥೆಯಾದ ವಿಶ್ವ ಸಂಸ್ಥೆ ಮತ್ತು ಪ್ರಾದೇಶಿಕ ಸಂಸ್ಥೆಗಳು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು, ನಿರ್ವಹಿಸುತ್ತಿವೆ.
, Window b.txt
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ