ಸೋಮವಾರ, ಮಾರ್ಚ್ 6, 2023

chapter 4

ಅಧ್ಯಾಯ 4: ತೌಲನಿಕ ಸಾರ್ವಜನಿಕ ಆಡಳಿತ:
, ಪ್ರಸ್ತಾವನೆ: ಆಡಳಿತಾತ್ಮಕ ಹೋಲಿಕೆಯು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು. ರಾಜ್ಯಶಾಸ್ತ್ರದ ಪಿತಾಮಹ ಅರಿಸ್ಟಾಟಲ್‌ನು ಪ್ರಾಚೀನ ಗ್ರೀಕ್‌ ನಗರ ರಾಜ್ಯಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಿ ಸರ್ಕಾರಗಳ ವರ್ಗೀಕರಣ ಸಿದ್ಧಾಂತ ಮಂಡಿಸಿದ್ದ. ಆದರೆ, ಕಳೆದ ಅರ್ಧ ಶತಮಾನದ ಈಚೆಗೆ ಅಂದರೆ ಎರಡನೇ ಮಹಾ ಯುದ್ಧದ ಬಳಿಕ ತೌಲನಿಕ ಸಾರ್ವಜನಿಕ ಆಡಳಿತವು ಔಪಚಾರಿಕವಾಗಿ ಒಂದು ಅಧ್ಯಯನ ವಿಷಯವಾಗಿ ಉಗಮಗೊಂಡಿತು. ತೃತೀಯ ಜಗತ್ತಿನ ಉದಯದಿಂದ ನೂರಾರು ಸ್ವತಂತ್ರ ದೇಶಗಳು ಜಗತ್ತಿನಲ್ಲಿ ಆಡಳಿತ ನಡೆಸಲು ಆರಂಭಿಸಿದುದು ಇದರ ಬಲವರ್ಧನೆಗೆ ಕಾರಣವೆನಿಸಿತು. ಜೊತೆಗೆ ಅಮೇರಿಕಾದ ತಜ್ಞರ ತಂಡವೊಂದು ತೌಲನಿಕ ಸಾರ್ವಜನಿಕ ಆಡಳಿತದ ಅಗತ್ಯವನ್ನು ಮತ್ತು ಮಹತ್ವವನ್ನು ವ್ಯವಸ್ಥಿತವಾಗಿ ಮಂಡಿಸಿತು. ಇವೆಲ್ಲವುಗಳ ಪರಿಣಾಮ 1980 ರ ದಶಕದ ಬಳಿಕ ತೌಲನಿಕ ಸಾರ್ವಜನಿಕ ಆಡಳಿತವು ಸ್ವತಂತ್ರ ಅಧ್ಯಯನದ ಮಟ್ಟಕ್ಕೆ ಬೆಳೆಯುವಂತಾಯಿತು. ಸಾರ್ವಜನಿಕ ಆಡಳಿತವು ರಾಜ್ಯಶಾಸ್ತ್ರದ ಒಂದು ಶಾಖೆಯಾದರೆ ತೌಲನಿಕ ಸಾರ್ವಜನಿಕ ಆಡಳಿತವು ಸಾರ್ವಜನಿಕ ಆಡಳಿತದ ನಾಲ್ಕು ಅಂಗಗಳಲ್ಲಿ ಒಂದಾಗಿದೆ.
, ತೌಲನಿಕ ಸಾರ್ವಜನಿಕ ಆಡಳಿತದ ಅರ್ಥ: ಸಾಮಾನ್ಯ ಅರ್ಥದಲ್ಲಿ ಜಗತ್ತಿನ ವಿವಿಧ ದೇಶಗಳ ಆಡಳಿತಾತ್ಮಕ ವ್ಯವಸ್ಥೆಯನ್ನು ಹೋಲಿಕಾ ವಿಧಾನದ ಮೂಲಕ ಅಧ್ಯಯನ ಮಾಡುವುದನ್ನು ತೌಲನಿಕ ಸಾರ್ವಜನಿಕ ಆಡಳಿತ ಎನ್ನಬಹುದಾಗಿದೆ. ರಾಜ್ಯಶಾಸ್ತ್ರೀಯ ಭಾಷೆಯಲ್ಲಿ ವಿವಿಧ ದೇಶಗಳ ಆಡಳಿತ ವ್ಯವಸ್ಥೆಗಳು ಹೊಂದಿರುವ ವೈಯಕ್ತಿಕ ವಿಶೇಷತೆಗಳನ್ನು ಅರಿಯಲು ಹೋಲಿಕಾ ವಿಧಾನದ ಮೂಲಕ ಅಧ್ಯಯನ ನಡೆಸುವುದೇ ತೌಲನಿಕ ಸಾರ್ವಜನಿಕ ಆಡಳಿತ. ವಿಶಾಲಾರ್ಥದಲ್ಲಿ ವಿವಿಧ ರಾಷ್ಟ್ರ ಮತ್ತು ಸಂಸ್ಕೃತಿಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳನ್ನು ಅರಿಯಲು ನಡೆಸುವ ಅಧ್ಯಯನವೇ ತೌಲನಿಕ ಸಾರ್ವಜನಿಕ ಆಡಳಿತ.
, ಅಮೇರಿಕಾದ ತೌಲನಿಕ ಆಡಳಿತಾತ್ಮಕ ಸಮೂಹದ ತಜ್ಞರು ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ರಾಷ್ಟ್ರಗಳ ವಿಸ್ತರಣಾ ಮತ್ತು ಪರಿಶೀಲನಾ ಯೋಗ್ಯ ಆಧಾರಗಳ ನೆರವಿನಿಂದ ಅಧ್ಯಯನ ನಡೆಸುವುದೇ ತೌಲನಿಕ ಸಾರ್ವಜನಿಕ ಆಡಳಿತ ಎಂದು ವ್ಯಾಖ್ಯಾನಿಸಿದ್ದಾರೆ.
, ನಿಮ್ರಾನ್‌ ರಫೇಲಿ ಪ್ರಕಾರ ಹೋಲಿಕಾ ಆಧಾರದಲ್ಲಿ ಸಾರ್ವಜನಿಕ ಆಡಳಿತವನ್ನು ಅಧ್ಯಯನ ಮಾಡುವುದೇ ತೌಲನಿಕ ಸಾರ್ವಜನಿಕ ಆಡಳಿತ.
, ರಾಬರ್ಟ್‌ ಜಾಕ್ಸನ್‌ ಪ್ರಕಾರ ಸಾರ್ವಜನಿಕ ವ್ಯವಹಾರಗಳ ಆಡಳಿತದಲ್ಲಿ ಕಂಡು ಬರುವ ರಚನೆ ಮತ್ತು ಪ್ರಕ್ರಿಯೆಗಳ ಅಧ್ಯಯನವನ್ನು ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹೋಲಿಕಾ ಅಧ್ಯಯನವೇ ತೌಲನಿಕ ಸಾರ್ವಜನಿಕ ಆಡಳಿತ.
, ತೌಲನಿಕ ಸಾರ್ವಜನಿಕ ಆಡಳಿತದ ಲಕ್ಷಣಗಳು:
, ಅ. ಅತ್ಯಂತ ಕಿರಿಯ ಅಥವಾ ನೂತನ ಅಧ್ಯಯನ ವಿಷಯ: ಇದು ಇತ್ತೀಚೆಗೆ ಜನ್ಮ ತಾಳಿದುದರಿಂದ ಕಿರಿಯ ಅಧ್ಯಯನ ಶೈಕ್ಷಣಿಕ ಸಂಶೋಧನಾ ಕ್ಷೇತ್ರವೆನಿಸಿದೆ. 1952  ರಲ್ಲಿ ಪ್ರಿನ್‌ಸ್ಟನ್‌ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ಜರುಗಿದ ಆಡಳಿತಾತ್ಮಕ ಸಮ್ಮೇಳನದಲ್ಲಿ ಇದರ ಅಧ್ಯಯನಕ್ಕೆ ಚಾಲನೆ ನೀಡಲು ಸಮಿತಿಯೊಂದು ರಚನೆಗೊಂಡಿತ್ತು.
, ಆ. ವೈವಿಧ್ಯಮಯ ವಿಧಾನಗಳ ಬಳಕೆ: ಇದರ ಅಧ್ಯಯನಕ್ಕೆ ಪ್ರಧಾನ ವಿಧಾನವಿಲ್ಲ. ಚಿಂತಕರು ವೈವಿಧ್ಯಮಯ ವಿಧಾನಗಳನ್ನು ಬಳಸಿ ಹೋಲಿಕಾ ಸಾರ್ವಜನಿಕ ಆಡಳಿತದ ಅಧ್ಯಯನ ನಡೆಸುವಂತಾಗಿದೆ.
, ಇ. ಪರಿವರ್ತನಾ ಪರವಾದದ್ದು: ಇದು ಆರಂಭದಿಂದ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ರಿಗ್ಸ್‌ ಅಭಿಪ್ರಾಯಪಟ್ಟಂತೆ ಮೌಲ್ಯಾಧಾರಿತ ದೃಷ್ಟಿಕೋನದಿಂದ ವೈಜ್ಞಾನಿಕ ದೃಷ್ಟಿಕೋನಕ್ಕೆ ಮತ್ತು ಅಪಾರಿಸರಿಕ ಅಂಶಗಳಿಂದ ಪಾರಿಸರಿಕ ಅಂಶಗಳಿಗೆ ಬದಲಾವಣೆಯನ್ನು ನಾವು ಕಾಣಬಹುದಾಗಿದೆ.
, ಈ. ಅಮೇರಿಕನ್‌ ಸಾರ್ವಜನಿಕ ಆಡಳಿತದ ಪ್ರಭಾವಕ್ಕೊಳಗಾದದ್ದು: ಇದರ ಬಹುತೇಕ ವಿಚಾರಗಳಿಗೆ ಅಮೇರಿಕಾದ ಸಾರ್ವಜನಿಕ ಆಡಳಿತದ ಚಿಂತಕರ ಕೊಡುಗೆಯನ್ನು ಕಾಣಬಹುದಾಗಿದೆ. ಸಿ. ಎ. ಜಿ ಎಂಬ ತಜ್ಞರ ಗುಂಪು ಇದರ ಕ್ಷೇತ್ರವನ್ನು ವಿಸ್ತರಿಸಲು ಶ್ರಮಿಸಿದ್ದು ಅದು ಅಮೇರಿಕಾಕ್ಕೆ ಸೇರಿದೆ.
, ಉ. ಸಿದ್ಧಾಂತಗಳ ರಚನೆ ಮತ್ತು ಅಭಿವೃದ್ಧಿ ಆಡಳಿತಕ್ಕೆ ಆಧ್ಯತೆ: ಇದು ವಿವಿಧ ಸಿದ್ಧಾಂತಗಳ ರಚನೆಗೆ ಒಲವು ಹೊಂದಿದೆ. ಸಾಮಾನ್ಯ ಮತ್ತು ಮಧ್ಯಮ ಹಂತದ ಸಿದ್ಧಾಂತಗಳ ಪ್ರತಿಪಾದನೆಗೆ ಇದರ ಚಿಂತಕರು ಶ್ರಮಿಸುತ್ತಿದ್ದಾರೆ. ಜೊತೆಗೆ ಅಭಿವೃದ್ಧಿ ಆಡಳಿತದ ಬೆಳವಣಿಗೆಗೆ ಇದರ ಕೊಡುಗೆ ಅಪಾರವಾಗಿದೆ.
, ಹೋಲಿಕಾ ಸಾರ್ವಜನಿಕ ಆಡಳಿತದ ವಿಧಗಳು: ಈ ಕೆಳಗಿನ ಐದು ಪ್ರಕಾರಗಳನ್ನು ಹೋಲಿಕಾ ಸಾರ್ವಜನಿಕ ಆಡಳಿತದಲ್ಲಿ ನಾವು ಕಾಣಬಹುದಾಗಿದೆ.
, ಅ. ಅಂತರ್‌ಸಾಂಸ್ಥಿಕ ಹೋಲಿಕೆ: ಇಲ್ಲಿ ವಿವಿಧ ಆಡಳಿತಾತ್ಮಕ ಸಂಸ್ಥೆಗಳ ನಡುವೆ ಹೋಲಿಕೆ ಮೂಲಕ ಅಧ್ಯಯನ ಜರುಗುತ್ತದೆ. ಈ ವೇಳೆಯಲ್ಲಿ ಸಂಸ್ಥೆಗಳ ರಚನೆ ಮತ್ತು ಕಾರ್ಯಗಳ ಹೋಲಿಕೆಗೆ ಮಹತ್ವ ನಿಡಲಾಗುತ್ತದೆ. ಉದಾ: ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಗಳ ನಡುವಿನ, ಕೇಂದ್ರೀಯ ವಿಶ್ವ ವಿದ್ಯಾಲಯ ಮತ್ತು ಖಾಸಗಿ ವಿಶ್ವ ವಿದ್ಯಾಲಯ ಇತ್ಯಾದಿಗಳ ನಡುವಿನ ಅಧ್ಯಯನ.
, ಆ. ರಾಷ್ಟ್ರದೊಳಗಿನ ಹೋಲಿಕೆ: ಇಲ್ಲಿ ದೇಶದೊಳಗಿನ ಹಲವು ಆಡಳಿತಾತ್ಮಕ ಘಟಕಗಳ ನಡುವೆ ಹೋಲಿಕೆ ಮೂಲಕ ಅಧ್ಯಯನ ನಡೆಸಲಾಗುತ್ತದೆ. ಉದಾ: ರಾಜಸ್ತಾನದ ಮತ್ತು ಗುಜರಾತಿನ ಜಿಲ್ಲಾಡಳಿತದ ಹೋಲಿಕೆ, ಸ್ವಚ್ಚ ಭಾರತ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕ ಮತ್ತು ಬಿಹಾರದ ನಡುವೆ ಹೋಲಿಕೆ ಇತ್ಯಾದಿ.
, ಇ. ಇತರ ರಾಷ್ಟ್ರಗಳೊಡನೆ ಹೋಲಿಕೆ:  ಇಲ್ಲಿ ವಿಶ್ವದ ಹಲವು ದೇಶಗಳ ನಡುವಿನ ಹೋಲಿಕೆ ಕಂಡು ಬರುತ್ತದೆ. ಉದಾ: ಬ್ರಿಟಿಷ್‌ ಮತ್ತು ಭಾರತದ ನಾಗರಿಕ ಸೇವಾ ನಿಯಮಗಳು, ನೇಮಕ, ತರಬೇತಿ, ನಿವೃತ್ತಿ ಮುಂತಾದವುಗಳ ಅಧ್ಯಯನ.
, ಈ. ಇತರ ಸಂಸ್ಕೃತಿಗಳ ನಡುವಿನ ಹೋಲಿಕೆ: ವಿರೋಧಾತ್ಮಕ ಸಿದ್ಧಾಂತಗಳನ್ನು ಅನುಸರಿಸುತ್ತಿರುವ ದೇಶಗಳ ನಡುವಿನ ಆಡಳಿತಾತ್ಮಕ ಅಧ್ಯಯನವಾಗಿದೆ. ಉದಾ: ಸಮತಾವಾದಿ ಚೀನಾ ಮತ್ತು ಪ್ರಜಾಸತ್ತಾತ್ಮಕ ಅಮೇರಿಕಾದ ನಡುವಿನ ಹೋಲಿಕೆ.
, ಉ. ವಿವಿಧ ಕಾಲಗಳ ನಡುವಿನ ಹೋಲಿಕೆ: ಬೇರೆ ಬೇರೆ ಕಾಲಾವಧಿಯ ಆಡಳಿತವನ್ನು ಹೋಲಿಸಿ ಅಧ್ಯಯನ ನಡೆಸುವುದು. ಉದಾ: ಮೌರ್ಯ ದೊರೆ ಚಂದ್ರಗುಪ್ತ ಮತ್ತು ಮೊಘಲ್‌ ದೊರೆ ಅಕ್ಬರನ, ಜವಾಹರಲಾಲ್‌ ನೆಹರು ಮತ್ತು ಮನಮೋಹನ್ಸಿಂಗ ಆಡಳಿತವನ್ನು ಹೊಲಿಕೆ ಮಾಡುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...