ಸೋಮವಾರ, ಫೆಬ್ರವರಿ 27, 2023

g e chapter 4

ಅಧ್ಯಾಯ 4: ಪ್ರಜಾಪ್ರಭುತ್ವ: 
, ಪ್ರಸ್ತಾವನೆ: ಸಮಕಾಲಿನ ಜಗತ್ತನ್ನು ಪ್ರಜಾಪ್ರಭುತ್ವದ ಯುಗ ಎನ್ನಲಾಗುತ್ತದೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವದ ಕುರುಹುಗಳನ್ನು ಗುರುತಿಸಬಹುದಾಗಿದೆ. ಕಾಲಾನುಕ್ರಮದಲ್ಲಿ ಪ್ರಜಾಪ್ರಭುತ್ವ ವಿವಿಧ ಸ್ವರೂಪವನ್ನು ತಾಳುತ್ತಾ ಬೆಳೆದು ಬಂದಿದೆ. ಪ್ರಸ್ತುತ ಪ್ರಜಾಪ್ರಭುತ್ವ ಕೇವಲ ಸರ್ಕಾರದ ಮಾದರಿಯಾಗಿ ಮಾತ್ರ ಉಳಿದುಕೊಳ್ಳದೇ ಜೀವನ ವಿಧಾನವಾಗಿ ಮತ್ತು ರಾಜ್ಯದ ಮಾದರಿಯಾಗಿ ಗುರುತಿಸಿಕೊಂಡಿರುವ ವ್ಯವಸ್ಥೆಯಾಗಿದೆ. ಜನರ ಆಶಯ ಹಾಗು ನಾನಾ ಆದರ್ಶಗಳ ನೆರವಿನಿಂದ ಸಮಕಾಲಿನ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಜನಪ್ರಿಯ ಸಿದ್ಧಾಂತವಾಗಿದೆ. ಪ್ರಜಾಪ್ರಭುತ್ವದ ಮೂಲ ಹಾಗು ಬೆಳವಣಿಗೆ, ಅರ್ಥ, ಸ್ವರೂಪ, ಪ್ರಕಾರಗಳು ಮತ್ತು ಪ್ರಜಾಪ್ರಭುತ್ವದ ಯಶಸ್ಸಿಗೆ ಬೇಕಾದ ಅಗತ್ಯಾಂಶಗಳನ್ನು  ಈ ಅಧ್ಯಾಯದಲ್ಲಿ ಸ್ತೂಲವಾಗಿ ಚರ್ಚಿಸಲಾಗಿದೆ.
, ಪ್ರಜಾಪ್ರಭುತ್ವದ ಅರ್ಥ ಮತ್ತು ವ್ಯಾಖ್ಯೆಗಳು: ಪ್ರಜಾಪ್ರಭುತ್ವ ಎಂಬ ಕನ್ನಡ ಪದವು ಡೆಮಾಕ್ರಸಿ ಎಂಬ ಆಂಗ್ಲ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲವನ್ನು ಗ್ರೀಕ್ ಭಾಷೆಯ ಡೆಮೋಸ್ ಮತ್ತು ಕ್ರಾಟಿಯಾ ಪದಗಳಲ್ಲಿ ಕಾಣಬಹುದಾಗಿದೆ. ಡೆಮೋಸ್ ಎಂದರೆ ಜನರು ಹಾಗು ಕ್ರಾಟಿಯಾ ಎಂದರೆ ಶಕ್ತಿ, ಬಲ ಅಥವ ಆಡಳಿತಾಧಿಕಾರ ಎಂದಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದ ಪದಶಃ ಅರ್ಥ ಜನರ ಆಳ್ವಿಕೆ ಎಂದಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ ಪ್ರಜಾಪ್ರಭುತ್ವ ಕಾಲಾನುಕ್ರಮದಲ್ಲಿ ಜನರ ಆಶಯ ಹಾಗು ಆದರ್ಶಾನುಸಾರ ವಿಭಿನ್ನ ರೂಪವನ್ನು ತಾಳಿ ಹಲವು ಅರ್ಥಗಳನ್ನು ಪ್ರತಿನಿಧಿಸುವ ಪರಿಕಲ್ಪನೆಯಾಗಿ ಬಳಸಲ್ಪಡುತ್ತಿದೆ. ವಿವಿಧ ಕಾಲಗಟ್ಟಗಳಲ್ಲಿ ಹಲವು ರಾಜಕಿಯ ಚಿಂತಕರು ಪ್ರಜಾಪ್ರಭುತ್ವಕ್ಕೆ ನೀಡಿರುವ ವ್ಯಾಖ್ಯಾನಗಳನ್ನು ಅರಿತುಕೊಂಡಾಗ ಪ್ರಜಾಪ್ರಭುತ್ವದ ಸ್ಪಷ್ಟ ಹಾಗು ಪರಿಪೂರ್ಣ ಅರ್ಥ ಮನವರಿಕೆಯಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದ ಪ್ರಮುಖ ವ್ಯಾಖ್ಯೆಗಳನ್ನು ಕೆಳಗೆ ನೀಡಲಾಗಿದೆ.
, ಪ್ರಾಚೀನ ಗ್ರೀಕರನ್ವಯ ಜನರು ತಮ್ಮನ್ನು ತಾವೇ ಆಳಿಕೊಳ್ಳುವ ಸರ್ಕಾರ ಪದ್ಧತಿಯೇ ಪ್ರಜಾಪ್ರಭುತ್ವ.
, ಹೆರಡೊಟಸ್ ಪ್ರಕಾರ ರಾಜ್ಯದ ಬಹುತೇಕ ಆಡಳಿತಾಧಿಕಾರವು ಇಡೀ ಸಮುದಾಯದ ಸದಸ್ಯರಿಗೆ ಸೇರಿರುವ ಸರ್ಕಾರವು ಪ್ರಜಾಪ್ರಭುತ್ವ.
, ಅಮೇರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಪ್ರಕಾರ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರ್ಕಾರ ಪ್ರಜಾಪ್ರಭುತ್ವ.
, ಫ್ರೊ. ಜಾನ್ ಸೀಲೆ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಯೂ ಪಾಲು ಹೊಂದಿರುವ ಸರ್ಕಾರವೇ ಪ್ರಜಾಪ್ರಭುತ್ವ.
, ಅರ್ನೆಸ್ಟ್ ಬಾರ್ಕರ್ ಪ್ರಕಾರ ಚರ್ಚೆ ಹಾಗು ವಿಮರ್ಷೆಗಳ ಮೂಲಕ ನಡೆಯುವ ಸರ್ಕಾರವೇ ಪ್ರಜಾಪ್ರಭುತ್ವ.
, ಹಾಲ್ ಪ್ರಕಾರ ಜನಾಭಿಪ್ರಾಯದಿಂದ ನಿಯಂತ್ರಿಸಲ್ಪಡುವ ಒಂದು ಬಗೆಯ ರಾಜಕಿಯ ಸಂಘಟನೆಯೇ ಪ್ರಜಾಪ್ರಭುತ್ವ.
, ಏ. ವಿ. ಡೈಸಿ ಪ್ರಕಾರ ರಾಜ್ಯದ ಆಡಳಿತಾಧಿಕಾರವು ಸಮಗ್ರ ದೇಶದ ಬಹುಸಂಖ್ಯಾತರ ಕೈಯಲ್ಲಿರುವ ಸರ್ಕಾರ ಪದ್ಧತಿಯೇ ಪ್ರಜಾಪ್ರಭುತ್ವ.
, ಲಾರ್ಡ್ ಬ್ರೈಸ್ ಪ್ರಕಾರ ರಾಜ್ಯವೊಂದರ ಆಡಳಿತಾಧಿಕಾರವು ಕಾನೂನಾತ್ಮಕವಾಗಿ ನಿರ್ದಿಷ್ಟ ವರ್ಗ ಅಥವ ವರ್ಗಗಳಲ್ಲಿರದೇ ಇಡೀ ಸಮುದಾಯಕ್ಕೆ ಸೇರಿರುವ ಸರ್ಕಾರದ ಪದ್ಧತಿಯು ಪ್ರಜಾಪ್ರಭುತ್ವ.
, ಮೇಲಿನ ವಿವಿಧ ವ್ಯಾಖ್ಯಾನಗಳನ್ನು ಅವಲೋಕಿಸಿದಾಗ ಸರಳಾರ್ಥದಲ್ಲಿ ಪ್ರಜೆಗಳಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶವಿರುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎನಿಸುತ್ತದೆ. ವಿಶಾಲಾರ್ಥದಲ್ಲಿ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆಡಳಿತದಲ್ಲಿ ಭಾಗವಹಿಸುವ ಒಂದು ಬಗೆಯ ಸರ್ಕಾರದ ಮಾದರಿಯೇ ಪ್ರಜಾಪ್ರಭುತ್ವವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಗೊಂಡ ಪ್ರಜಾ ಪ್ರತಿನಿಧಿಗಳೇ ಆಡಳಿತಾಧಿಕಾರ ಪಡೆದಿದ್ದು ಪ್ರಜಾ ಕಲ್ಯಾಣವೇ ಅವರ ಗುರಿಯಾಗಿರುತ್ತದೆ. ಪ್ರಜೆಗಳ ಅಗತ್ಯಗಳಿಗೆ ಪ್ರತಿನಿಧಿಗಳು ಸ್ಪಂದಿಸಿದರೆ ಪ್ರತಿನಿಧಿಗಳ ನಿರ್ಧಾರಗಳಿಗೆ ಪ್ರಜೆಗಳು ಪ್ರಜಾಪ್ರಭುತ್ವದಲ್ಲಿ ಸಹಕರಿಸುತ್ತಾರೆ. ಅಲ್ಲದೇ ಭಿನ್ನಾಭಿಪ್ರಾಯಗಳ ನಡುವೆ ಚರ್ಚೆ ಮತ್ತು ವಿಮರ್ಷೆಯ ನಂತರ ಆಳುವ ಹಾಗು ಆಳಿಸಿಕೊಳ್ಳುವವರು ಒಮ್ಮತದ ನಿರ್ಧಾರಕ್ಕೆ ಬರುವ ವಿಶಿಷ್ಠ ರಾಜಕಿಯ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಸ್ವಾತಂತ್ರ್ಯ, ಸಮಾನತೆ ಹಾಗು ಬ್ರಾತೃತ್ವ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳೆಂದು ಪರಿಗಣಿಸಲ್ಪಟ್ಟಿವೆ.
, ಪ್ರಜಾಪ್ರಭುತ್ವದ ಸ್ವರೂಪ: ಪ್ರಜೆಗಳೇ ಪ್ರಭುಗಳಾಗಿರುವ ಆಡಳಿತ ಪದ್ಧತಿಗೆ ಪ್ರಜಾಪ್ರಭುತ್ವ ಎನ್ನಬಹುದು. ಮುಂದುವರೆದು ಸರ್ಕಾರದ ಮಾದರಿಯಾಗಿ, ಜೀವನದ ವಿಧಾನವಾಗಿ, ರಾಜ್ಯದ ಮಾದರಿಯಾಗಿ ತನ್ನದೇ ಪ್ರಭಾವವನ್ನು ಪ್ರಜಾಪ್ರಭುತ್ವ ಬೀರಿರುವುದು ಗಮನಾರ್ಹ. ಪ್ರಜಾಪ್ರಭುತ್ವದ ಸ್ವರೂಪವನ್ನು ಅದರ ವಿವಿಧ ಪಾತ್ರ ಮತ್ತು ತತ್ವಗಳಲ್ಲಿ ಗುರುತಿಸಬಹುದಾಗಿದೆ. ಪ್ರಜಾಪ್ರಭುತ್ವದ ಪರಿಪೂರ್ಣ ತಿಳುವಳಿಕೆಗೆ ಅದರ ಸ್ವರೂಪದ ಸಂಕ್ಷಿಪ್ತ ಜ್ಙಾನ ಅಗತ್ಯವಾಗಿದ್ದು ಅದನ್ನು ಕೆಳಗೆ ವಿವರಿಸಲಾಗಿದೆ.
, ಸರ್ಕಾರದ ಮಾದರಿಯಾಗಿ ಪ್ರಜಾಪ್ರಭುತ್ವ: ಜಗತ್ತಿನಲ್ಲಿ ಜಾರಿಯಲ್ಲಿದ್ದ ಅರಸೊತ್ತಿಗೆ ಸರ್ಕಾರ ಅಥವ ಸರ್ವಾಧಿಕಾರಿ ಸರ್ಕಾರ ಪದ್ಧತಿಗಳಂತೆ ಪ್ರಜಾಪ್ರಭುತ್ವವನ್ನು ಒಂದು ಬಗೆಯ ಸರ್ಕಾರ ಪದ್ಧತಿ ಎಂದು ಗುರುತಿಸಲಾಗುತ್ತದೆ. ಜನರು ಆಡಳಿತದಲ್ಲಿ ಭಾಗವಹಿಸುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಸರ್ಕಾರ ಪದ್ಧತಿ ಎನ್ನಲಾಗುತ್ತದೆ. ಪ್ರಜೆಗಳೇ ನೇರವಾಗಿ ಭಾಗವಹಿಸುವ ಪ್ರತ್ಯಕ್ಷ ಪ್ರಜಾಪ್ರಭುತ್ವ ಮತ್ತು ಪ್ರಜೆಗಳು ತಮ್ಮ ಪ್ರತಿನಿಧಿಗಳ ಮೂಲಕ ಭಾಗವಹಿಸುವ ಪರೋಕ್ಷ ಪ್ರಜಾಪ್ರಭುತ್ವ ಎಂಬ ವಿಧಗಳನ್ನು ಪ್ರಜಾಪ್ರಭುತ್ವ ಸರ್ಕಾರ ಪದ್ಧತಿಯಲ್ಲಿ ಗುರುತಿಸಬಹುದಾಗಿದೆ. ಪ್ರತ್ಯಕ್ಷ ಪ್ರಜಾಪ್ರಭುತ್ವವು ಪ್ರಾಚೀನ ಗ್ರೀಕ್ ನಗರ ರಾಜ್ಯಗಳಲ್ಲಿ ಹಾಗು ಭಾರತದ ಕೆಲ ಜನಪದಗಳಲ್ಲಿ ಜಾರಿಯಲ್ಲಿದ್ದ ನಿದರ್ಶನಗಳಿವೆ. ಪರೋಕ್ಷ ಪ್ರಜಾಪ್ರಭುತ್ವ ಸಮಕಾಲಿನ ಜಗತ್ತಿನ ಬಹುತೇಕ ದೇಶಗಳಲ್ಲಿ ಕಂಡು ಬರುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ಪರೋಕ್ಷ ಅಥವ ಪ್ರಾತಿನಿಧಿಕ ಪ್ರಜಾಪ್ರಭುತ್ವ ಸರ್ಕಾರ ಸಂಸಧೀಯ ಮಾದರಿ ಪ್ರಜಾಪ್ರಭುತ್ವ ಮತ್ತು ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವ ಎಂಬ ಸ್ವರೂಪದೊಡನೆ ಪಾಲಿಸಲ್ಪಡುತ್ತಿದೆ. ಒಟ್ಟಾರೆ ಸರ್ಕಾರದ ಮಾದರಿಯಾಗಿ ಪ್ರಜಾಪ್ರಭುತ್ವವನ್ನು ಜಾನ್ ಆಸ್ಟೀನ್, ಜೇಮ್ಸ್ ಬ್ರೈಸ್, ಜಾನ್ ಶೀಲೆ, ಎ. ಎಲ್ ಲೊವೆಲ್ ಮುಂತಾದ ಚಿಂತಕರು ಬೆಂಬಲಿಸಿದ್ದಾರೆ.
, •
, ಜೀವನದ ವಿಧಾನವಾಗಿ ಪ್ರಜಾಪ್ರಭುತ್ವ: ಪ್ರಸ್ತುತ ಪ್ರಜಾಪ್ರಭುತ್ವವು ರಾಜಕಿಯ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಮೀರಿ ಜನರ ಜೀವನದ ವಿಧಾನವನ್ನು ಪ್ರಭಾವಿಸುವ ವ್ಯವಸ್ಥೆ ಎನಿಸಿದೆ. ಪ್ರಜಾಪ್ರಭುತ್ವ ವ್ಯಕ್ತಿಗೆ ಮಾತನಾಡುವ, ಸಂಚರಿಸುವ, ಸಭೆ ಸೇರುವ, ಸಂಘ ಸ್ಥಾಪಿಸುವ, ಉದ್ಯೋಗ ಕೈಗೊಳ್ಳುವ, ಆಸ್ತಿ ಹೊಂದುವ ಮುಂತಾದ ಸ್ವಾತಂತ್ರ್ಯಗಳನ್ನು ಒದಗಿಸುತ್ತದೆ. ಜೊತೆಗೆ ಸಮಾಜದಲ್ಲಿನ ಇತರರಿಗೆ ದೊರೆಯುವ ಸಮಾನವಕಾಶಗಳನ್ನು ಪ್ರತಿಯೊಬ್ಬ ವ್ಯಕ್ತಿಗೆ ಕಲ್ಪಿಸಲು ಪ್ರಯತ್ನಿಸುತ್ತದೆ. ಇದರೊಡನೆ ವ್ಯಕ್ತಿ ಗೌರವವನ್ನು ಖಾತ್ರಿಗೊಳಿಸಲು ಅಗತ್ಯ ವಾತಾವರಣ ಒಳಗೊಂಡಿದೆ. ಒಟ್ಟಾರೆ ಪ್ರಜೆಗಳಿಗೆ ರಾಜಕಿಯ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆ ಹಾಗು ಆರ್ಥಿಕ ನ್ಯಾಯವನ್ನು ಒದಗಿಸುವ ಮೂಲಕ ಜನರ ಜೀವನದ ವಿಧಾನವಾಗಿ ಪ್ರಜಾಪ್ರಭುತ್ವ ಗುರುತಿಸಿಕೊಳ್ಳುತ್ತದೆ.
, •
, ರಾಜ್ಯದ ಮಾದರಿಯಾಗಿ ಪ್ರಜಾಪ್ರಭುತ್ವ: ದೇಶದ ಸಮಗ್ರ ಜನತೆಯಲ್ಲಿ ಅಂತಿಮ ಅಧಿಕಾರ ಅಂದರೆ ಜನತಾ ಪರಮಾಧಿಕಾರ ನೆಲೆಸಿದ್ದರೆ ಆ ದೇಶವನ್ನು ಪ್ರಜಾಸತ್ತಾತ್ಮಕ ರಾಜ್ಯ ಎನ್ನಲಾಗುತ್ತದೆ. ಸರ್ಕಾರವನ್ನು ರಚಿಸುವ, ನಿಯಂತ್ರಿಸುವ ಹಾಗು ಪದಚ್ಯುತಗೊಳಿಸುವ ಅಧಿಕಾರ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಜನರಲ್ಲಿದ್ದರೆ ಆ ದೇಶವನ್ನು ಪ್ರಜಾಸತ್ತಾತ್ಮಕ ರಾಜ್ಯ ಎನ್ನಲಾಗುತ್ತದೆ. ಉದಾ: ಭಾರತದಲ್ಲಿ ಜನರಿಂದ ಆಯ್ಕೆಯಾದ ಬಹುಮತ ಪಕ್ಷದ ಪ್ರತಿನಿಧಿಗಳು ಸರ್ಕಾರ ರಚಿಸಿದರೆ ಅಲ್ಪಮತ ಹೊಂದಿದ ವಿರೋಧ ಪಕ್ಷಗಳು ಸಾರ್ವಜನಿಕಾಭಿಪ್ರಾಯ ರೂಪಿಸಿ ಆಳುವ ಸರ್ಕಾರವನ್ನು ನಿಯಂತ್ರಿಸುತ್ತವೆ. ನಿಯತಕಾಲಿಕ ಚುನಾವಣೆಯಲ್ಲಿ ಪ್ರಜೆಗಳು ತಮಗೆ ಬೇಡವಾದ ಪಕ್ಷವನ್ನು ಅಧಿಕಾರದಿಂದ ಅಂದರೆ ಸರ್ಕಾರ ರಚನೆಯಿಂದ ದೂರವಿಡುತ್ತಾರೆ. ಹೀಗಾಗಿ ಭಾರತ ಪ್ರಜಾಸತ್ತಾತ್ಮಕ ರಾಜ್ಯ ಎನ್ನಬಹುದು. ಗಮನಿಸಬೇಕಾದ ಅಂಶವೇನೆಂದರೆ ಪ್ರಜಾಸತ್ತಾತ್ಮಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಬದಲು ಅರಸೊತ್ತಿಗೆ ಸರ್ಕಾರ ಅಥವ ಸರ್ವಾಧಿಕಾರ ಸರ್ಕಾರ ಆಡಳಿತ ನಡೆಸಬಹುದಾಗಿದೆ. ಉದಾ: ಸಮತಾವಾದಿ ರಾಷ್ಟ್ರಗಳು ತಮ್ಮನ್ನು ಪ್ರಜಾಸತ್ತಾತ್ಮಕ ರಾಜ್ಯವೆಂದು ಕರೆದುಕೊಂಡಿದ್ದು ಅಲ್ಲಿ ಪ್ರಜಾಪ್ರಭುತ್ವ ಸರ್ಕಾರಕ್ಕಿಂತ ಭಿನ್ನವಾದ ಸರ್ಕಾರ ಜಾರಿಯಲ್ಲಿರುತ್ತದೆ. 
, •
, ಮೇಲೆ ವಿವರಿಸಿದಂತೆ ಸರ್ಕಾರದ ಪ್ರಕಾರವಾಗಿ, ಜೀವನದ ವಿಧಾನವಾಗಿ ಮತ್ತು ರಾಜ್ಯದ ಮಾದರಿಯಾಗಿ ಗುರುತಿಸಲ್ಪಡುವ ಪ್ರಜಾಪ್ರಭುತ್ವವು ಕೆಲವು ಪ್ರಧಾನ ತತ್ವಗಳನ್ನು ಆಧರಿಸಿದೆ. ಈ ಪ್ರಧಾನ ತತ್ವಗಳ ನೆರವಿನಿಂದಲೂ ಪ್ರಜಾಪ್ರಭುತ್ವದ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.
, 1. ಸ್ವತಂತ್ರ್ಯ: ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಜೀವಾಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ರಾಜಕಿಯ ಅಥವ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಲು ನೆರವಾಗುವ ಮಾತನಾಡುವ, ಸಂಚರಿಸುವ, ಸಂಘ ಸ್ಥಾಪಿಸಿಕೊಳ್ಳುವ, ಯಾವುದೇ ಧರ್ಮ ಪಾಲಿಸುವ, ಉದ್ಯೋಗ ಕೈಗೊಳ್ಳುವ, ವಾಸಿಸುವ, ಆಸ್ತಿ ಹೊಂದುವ ಇತ್ಯಾದಿ ಸ್ವಾತಂತ್ರ್ಯಗಳನ್ನು ಒದಗಿಸಲಾಗಿರುತ್ತದೆ.
, 2. ಸಮಾನತೆ: ಸಮಾನತೆ ಪ್ರಜಾಪ್ರಭುತ್ವದ ಕನಿಷ್ಟ ಲಕ್ಷಣವಾಗಿದೆ. ಸ್ವತಂತ್ರ್ಯ ಹಾಗು ಸಮಾನತೆ ಒಂದು ನಾಣ್ಯದ ಎರಡು ಮುಖಗಳಂತೆ ಪರಸ್ಪರ ಜೊತೆಯಾಗಿ ಸಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ಜನ್ಮ, ಜನಾಂಗ, ಲಿಂಗ, ಧರ್ಮ ಅಥವ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಎಲ್ಲ ವ್ಯಕ್ತಿಗಳಿಗೆ ವಿವಿಧ ಸ್ವಾತಂತ್ರ್ಯ ಒದಗಿಸಲು ಸಮಾನತೆ ನೆರವಾಗುತ್ತದೆ. ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಹಾಗು ರಾಜಕಿಯ ಸಮಾನತೆ ತರುವುದು ಪ್ರಜಾಪ್ರಭುತ್ವದ ಗುರಿಯಾಗಿದೆ.
, 3. ಸಹೋದರತೆ: ಸಹೋದರತೆ ಪ್ರಜಾಪ್ರಭುತ್ವದ ಪ್ರಧಾನ ತತ್ವವಾಗಿದೆ. ಪ್ರಜೆಗಳಲ್ಲಿ ಹೊಂದಾಣಿಕೆ ಮೂಲಕ ಐಖ್ಯತೆ ಮೂಡಿಸಲು ಸಹೋದರತೆ ಸಹಕಾರಿಯಾಗಿದೆ. ಜೊತೆಗೆ ಬಡವ ಬಲ್ಲಿದ, ಮೇಲು ಕೀಳು, ಸಾಕ್ಷರ ನಿರಕ್ಷರ ಮುಂತಾದ ಅಂತರವನ್ನು ನಿರ್ಮೂಲನೆಗೊಳಿಸಲು ಸಹೋದರತೆ ತತ್ವ ಶ್ರಮಿಸುತ್ತದೆ. ಇದಲ್ಲದೇ ಪ್ರತಿಯೊಬ್ಬ ವ್ಯಕ್ತಿ ಪರಸ್ಪರ ಗೌರವ ತೋರಲು ಸಹೋದರತೆ ಪ್ರೇರೇಪಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ತಳಹದಿ ಒದಗಿಸುತ್ತದೆ.
, 4. ಸಹಿಷ್ಣುತೆ: ಸಹಿಷ್ಣುತೆ ಅಥವ ತಾಳ್ಮೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ತತ್ವ. ಭಿನ್ನಾಭಿಪ್ರಾಯಗಳಿಗೆ ಅವಕಾಶವುಳ್ಳ ಪ್ರಜಾಪ್ರಭುತ್ವದಲ್ಲಿ ಸಹಿಷ್ಣುತೆಯನ್ನು ಪ್ರಜೆಗಳು ಪಾಲಿಸಬೇಕಾಗುತ್ತದೆ. ಬಹುಸಂಖ್ಯಾತರು ಸಾಮಾನ್ಯವಾಗಿ ಪ್ರಜಾಪ್ರಭುತ್ವದಲ್ಲಿ ಆಡಳಿತಾಧಿಕಾರ ಪಡೆದಿದ್ದು ಅಲ್ಪಸಂಖ್ಯಾತರ ಭಾವನೆ ಹಾಗು ಬೇಡಿಕೆಗಳನ್ನು ಗೌರವಿಸುವ ತಾಳ್ಮೆ ತೋರಬೇಕಾಗುತ್ತದೆ. ಅಂತೆಯೇ ಬಹುಸಂಖ್ಯಾತರ ನಿರ್ಧಾರಗಳನ್ನು ಅಲ್ಪಸಂಖ್ಯಾತರು ಸಮ್ಮತಿಸುವ ಧೋರಣೆ ಬೆಳೆಸಿಕೊಳ್ಳಬೇಕಾಗುತ್ತದೆ. ಆಗ ಪ್ರಜಾಪ್ರಭುತ್ವ ಯಶಸ್ಸಿನ ಪಥದಲ್ಲಿ ಸಾಗಬಹುದಾಗಿದೆ.
, 5. ವ್ಯಕ್ತಿ ಗೌರವ: ಪ್ರಜಾಪ್ರಭುತ್ವ ವ್ಯವಸ್ಥೆಯ ಕೇಂದ್ರ ಬಿಂದು ಪ್ರಜೆ. ಹೀಗಾಗಿ ಪ್ರತಿಯೊಬ್ಬ ಪ್ರಜೆಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಲಾಗುತ್ತದೆ. ವಿವಿಧ ಸ್ವಾತಂತ್ರ್ಯಗಳನ್ನೊದಗಿಸಿ ವ್ಯಕ್ತಿಯ ಪ್ರಗತಿಗೆ ಸೂಕ್ತ ವಾತಾವರಣ ಕಲ್ಪಿಸಲಾಗುತ್ತದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ವ್ಯಕ್ತಿ ಪಾಲು ಹೊಂದಿದ್ದು ಆತನ ಆಶಯಗಳನ್ನು ಸರ್ಕಾರ ಅನುಷ್ಟಾನಗೊಳಿಸಲು ಬದ್ಧವಾಗಿರುತ್ತದೆ. ಹೀಗೆ ಪ್ರಜಾಪ್ರಭುತ್ವ ವ್ಯಕ್ತಿ ಗೌರವ ಎತ್ತಿ ಹಿಡಿಯುವ ವ್ಯವಸ್ಥೆಯಾಗಿರುತ್ತದೆ.
, 6. ಬಹುಮತ: ಪ್ರಜಾಪ್ರಭುತ್ವ ಬಹುಮತ ತತ್ವಕ್ಕೆ ಬದ್ಧವಾಗಿ ಕಾರ್ಯಾಚರಿಸುತ್ತದೆ. ಚುನಾವಣೆಯಲ್ಲಿ ಪ್ರತಿನಿಧಿಗಳ ಆಯ್ಕೆ, ಸರ್ಕಾರದ ರಚನೆ, ಶಾಸನಗಳ ಅಂಗೀಕಾರ, ವಿವಿಧ ನಿರ್ಧಾರಗಳ ಅನುಷ್ಟಾನ ಮುಂತಾದ ಪ್ರಕ್ರಿಯೆಗಳು ಪ್ರಜಾಪ್ರಭುತ್ವದಲ್ಲಿ ಬಹುಮತ ತತ್ವವನ್ನು ಆಧರಿಸಿರುತ್ತವೆ. ಜೊತೆಗೆ ಬಹುಮತದೊಡನೆ ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸುವ ನಿಲುವುಗಳನ್ನು ಪ್ರಜಾಪ್ರಭುತ್ವ ಸರ್ಕಾರ ಎತ್ತಿ ಹಿಡಿಯುತ್ತದೆ.
, ಈ ಮೇಲೆ ಚರ್ಚಿಸಲಾದ ವಿವಿಧ ಪಾತ್ರ ಹಾಗು ತತ್ವಗಳ ನೆರವಿನಿಂದ ಪ್ರಜಾಪ್ರಭುತ್ವದ ಸ್ವರೂಪವನ್ನು ಅರಿತುಕೊಳ್ಳಬಹುದಾಗಿದೆ. ಇವುಗಳೊಡನೆ ಪ್ರಜಾಪ್ರಭುತ್ವ ಇನ್ನಿತರ ಹಲವು ತತ್ವಗಳನ್ನು ಆಧರಿಸಿರುವ ವಿಶಾಲ ರಾಜಕೀಯ ಪರಿಕಲ್ಪನೆ ಎಂಬುದು ಗಮನಾರ್ಹ ಸಂಗತಿ.
, ಪ್ರಜಾಪ್ರಭುತ್ವದ ವಿಧಗಳು: ಸರ್ಕಾರದ ಮಾದರಿಯಾಗಿ ಪ್ರಜಾಪ್ರಭುತ್ವವನ್ನು ಗುರುತಿಸಿದಾಗ ಪ್ರಜಾಪ್ರಭುತ್ವದಲ್ಲಿ ಎರಡು ಪ್ರಧಾನ ವಿಧಗಳನ್ನು ಕಾಣಬಹುದಾಗಿದೆ. ಅವುಗಳ ಸಂಕ್ಷಿಪ್ತ ವಿವರಣೆ ಕೆಳಗಿನಂತಿದೆ.
, 1. ಶುದ್ಧ ಅಥವ ಪ್ರತ್ಯಕ್ಷ ಪ್ರಜಾಪ್ರಭುತ್ವ: ಜನರು ತಾವೇ ನೇರವಾಗಿ ಸರ್ಕಾರವನ್ನು ನಿಯಂತ್ರಿಸಲು ಅಥವ ಸಾರ್ವಜನಿಕ ನಿರ್ಧಾರಗಳನ್ನು ಕೈಗೊಳ್ಳಲು ಭಾಗವಹಿಸುವುದನ್ನು ಶುದ್ಧ ಅಥವ ಪ್ರತ್ಯಕ್ಷ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಮಧ್ಯವರ್ತಿಗಳ ನೆರವಿಲ್ಲದೇ ಜನರು ತಾವೇ ಖುದ್ದಾಗಿ ಭಾಗವಹಿಸುವುದರಿಂದ ಇದನ್ನು ನೇರ ಪ್ರಜಾಪ್ರಭುತ್ವ ಎಂತಲೂ ಕರೆಯಲಾಗುತ್ತದೆ. ಆದ್ದರಿಂದಲೇ ಚಿಂತಕ ಗಾರ್ನರ್ ಪ್ರತ್ಯಕ್ಷ ಪ್ರಜಾಪ್ರಭುತ್ವವು ರಾಜ್ಯದ ಇಚ್ಚೆಯು ಜನರ ಮೂಲಕ ನೇರವಾಗಿ ಮತ್ತು ಶೀಘ್ರವಾಗಿ ಚಲಾಯಿಸಲ್ಪಡುವ ಸರ್ಕಾರ ಪದ್ಧತಿ ಎಂದಿರುವರು. ಪ್ರತ್ಯಕ್ಷ ಪ್ರಜಾಪ್ರಭುತ್ವ ಜಾರಿಯಲ್ಲಿದ್ದೆಡೆ ಅಗತ್ಯವೆನಿಸಿದಾಗ ಎಲ್ಲ ಜನರೂ ಒಂದೆಡೆ ಸವಾವೇಶಗೊಳ್ಳುವರು. ಆ ಸಭೆಯಲ್ಲಿ ಆಡಳಿತಕ್ಕೆ ಸಂಭಂಧಿಸಿದ ನಿರ್ಧಾರ ಕೈಗೊಳ್ಳಲು ಅಥವ ಕಾನೂನು ರಚಿಸಲು ಮುಂದಾಗುತ್ತಾರೆ. ಈ ಮಾದರಿಯ ಪ್ರಜಾಪ್ರಭುತ್ವವನ್ನು ಪ್ರಾಚೀನ ಗ್ರೀಕ್ ನಗರ ರಾಜ್ಯಗಳಲ್ಲಿ ಮತ್ತು ಮಧ್ಯಯುಗದ ಇಟಲಿಯ ನಗರ ರಾಜ್ಯಗಳಲ್ಲಿ ಗುರುತಿಸಬಹುದಾಗಿದೆ. ಪ್ರತ್ಯಕ್ಷ ಪ್ರಜಾಪ್ರಭುತ್ವ ಜಾರಿಯಲ್ಲಿದ್ದ ನಗರ ರಾಜ್ಯದ ನಾಗರಿಕರು ವಿಶಾಲ ಮೈದಾನವೊಂದರಲ್ಲಿ ಸಮಾವೇಶಗೊಂಡು ನಿರ್ಧಾರ ಕೈಗೊಳ್ಳುವ, ಕಾನೂನು ರಚಿಸುವ, ನಿರ್ಧಾರ ಅಥವ ಕಾನೂನು ಜಾರಿಗೊಳಿಸುವ, ರಾಯಭಾರಿಗಳನ್ನು ಸ್ವಾಗತಿಸುವ, ವಿವಾದಗಳ ಇತ್ಯರ್ಥಕ್ಕಾಗಿ ನ್ಯಾಯದಾನ ಮಾಡುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಆಧುನಿಕ ಯುಗದಲ್ಲಿ ಸ್ವಿಟ್ಜರ್ಲ್ಯಾಂಡಿನ ಅಪ್ಪೆಂಝೆಲ್,ಯೂರಿ, ಅಂಟರ್ವಾಲ್ಡನ್ ಹಾಗು ಗ್ಲಾರಸ್ ಎಂಬ ನಾಲ್ಕು ಕ್ಯಾಂಟನ್ಗಳಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವದ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ. ಆಯಾ ಕ್ಯಾಂಟನ್ನಿನ ಅರ್ಹ ಮತದಾರರು ಏಪ್ರಿಲ್ ಅಥವ ಮೇ ತಿಂಗಳ ಭಾನುವಾರ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಸಮಾವೇಶಗೊಂಡು ಹೊಸ ಕಾನೂನು ರಚನೆ, ಅನುಪಯುಕ್ತ ಕಾಯಿದೆಗಳ ರದ್ದತಿ, ಆಯವ್ಯಯ ಪತ್ರಕ್ಕೆ ಅಂಗೀಕಾರ, ಆಡಳಿತಾಧಿಕಾರಿಗಳ ನೇಮಕದಂತಹ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಆಧುನಿಕ ಜಗತ್ತಿನಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವದ ಅನುಷ್ಠಾನ ಅತ್ಯಂತ ಕಠಿಣ. ಆದರೂ ನಾಲ್ಕು ಸಾಧನಗಳ ನೆರವಿನಿಂದ ಭಾಗಶಃ ಪ್ರತ್ಯಕ್ಷ ಪ್ರಜಾಪ್ರಭುತ್ವದ ಆಚರಣೆಯನ್ನು ಇಂದಿಗೂ ಕೆಲ ದೇಶಗಳಲ್ಲಿ ಗುರುತಿಸಲಾಗುತ್ತದೆ. ಪ್ರತ್ಯಕ್ಷ ಪ್ರಜಾಪ್ರಭುತ್ವದ ನಾಲ್ಕು ಸಾಧನಗಳ ಸರಳ ವಿವರಣೆಯನ್ನು ಮುಂದೆ ನೀಡಲಾಗಿದೆ.
, ಅ. ಪ್ರಜಾ ನಿರ್ದೇಶನ: ದೇಶವೊಂದರ ನಿರ್ದಿಷ್ಟ ಸಂಖೆಯ ಜನರು ಕಾನೂನೊಂದರ ಕರಡನ್ನು ತಯಾರಿಸಿ ಅದನ್ನು ಅಂಗೀಕರಿಸಿ ಅನುಷ್ಟಾನಗೊಳಿಸಬೇಕೆಂದು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಸರ್ಕಾರದ ನಿರ್ಲಕ್ಷ ಧೋರಣೆ ಜನಹಿತಕ್ಕೆ ತೊಡಕಾದಾಗ ಜನರೇ ಕಾನೂನು ರಚನಾ ಪ್ರಕ್ರಿಯೆಗೆ ಮುಂದಾಗುವ ಈ ಸಾಧನವನ್ನು ಪ್ರಜಾ ನಿರ್ದೇಶನ ಎನ್ನಲಾಗುತ್ತದೆ. ಉದಾ: ಅಣ್ಣಾ ಹಜಾರೆ ನಾಯಕತ್ವದಲ್ಲಿ ಜನಲೋಕಪಾಲ್ ಮಸೂದೆಯನ್ನು ರಚಿಸಿ ಸಂಸತ್ತು ಅನುಮೋದಿಸಲು ಒತ್ತಾಯಿಸಿದ ಘಟನೆ ೨೦೧೨ ರಲ್ಲಿ ಜರುಗಿದ್ದುದು. ಗಮನಿಸಬೇಕಾದ ಅಂಶವೇನೆಂದರೆ ಪ್ರಜಾ ನಿರ್ದೇಶನಕ್ಕೆ ಆಯಾ ದೇಶದ ಸಂವಿಧಾನದಲ್ಲಿ ಅವಕಾಶವಿದ್ದಲ್ಲಿ ಮಾತ್ರ ಅದೊಂದು ಪ್ರತ್ಯಕ್ಷ ಪ್ರಜಾಪ್ರಭುತ್ವದ ಸಾಧನವಾಗುತ್ತದೆ. ಇಲ್ಲವಾದಲ್ಲಿ ರಾಜಕಾರಣಿಗಳ ನಿರ್ಲಕ್ಷ ಅಥವ ಸ್ವಾರ್ಥ ಸಾಧನೆಯ ಮಧ್ಯೆ ಅರ್ಥಹೀನ ಸಾಧನವಾಗುತ್ತದೆ.
, ಆ. ಪ್ರಜಾ ನಿರ್ಧಾರ: ಸರ್ಕಾರ ಸೂಚಿಸಿದ ಪ್ರಸ್ತಾವವನ್ನು ದೇಶದ ಪ್ರಜೆಗಳೆಲ್ಲ ನೇರವಾಗಿ ಮತದಾನದ ಮೂಲಕ ಅಂಗೀಕರಿಸುವ ಅಥವ ತಿರಸ್ಕರಿಸುವ ಸಾಧನವೇ ಪ್ರಜಾ ನಿರ್ಧಾರ. ಸಾಮಾನ್ಯವಾಗಿ ಹೊಸ ಸಂವಿಧಾನ ಜಾರಿಗೊಳಿಸುವಾಗ, ಸಂವಿಧಾನಾತ್ಮಕ ತಿದ್ದುಪಡಿ ಮಾಡುವಾಗ, ಮಹತ್ವದ ಕಾನೂನು ಅನುಷ್ಟಾನಗೊಳಿಸುವಾಗ, ಚುನಾಯಿತ ಪ್ರತಿನಿಧಿಯನ್ನು ಪದಚ್ಯುತಿಗೊಳಿಸುವಾಗ ಅಥವ ಸರ್ಕಾರದ ನೀತಿಯನ್ನು ಪಾಲಿಸುವಾಗ ಕೆಲ ದೇಶಗಳಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವದ ಸಾಧನವಾದ ಪ್ರಜಾ ನಿರ್ಧಾರವನ್ನು ಅನುಸರಿಸಲಾಗುತ್ತದೆ. ಪ್ರಜಾ ನಿರ್ಧಾರ ಸಾಧನವು ಕಡ್ಡಾಯ ಪ್ರಜಾ ನಿರ್ಧಾರ ಹಾಗು ಸಲಹಾ ಪ್ರಜಾ ನಿರ್ಧಾರ ಎಂಬ ಎರಡು ಸ್ವರೂಪ ಹೊಂದಿರುತ್ತದೆ. ಪ್ರಜಾ ನಿರ್ಧಾರದ ಫಲಿತಾಂಶದಂತೆ ಸರ್ಕಾರ ನಡೆದುಕೊಳ್ಳಲೇಬೇಕಿದ್ದರೆ ಅದನ್ನು ಕಡ್ಡಾಯ ಪ್ರಜಾ ನಿರ್ಧಾರ ಎನ್ನಲಾಗುತ್ತದೆ. ಇದನ್ನು ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಕಾಣಬಹುದಾಗಿದೆ. ಒಂದುವೇಳೆ ಪ್ರಜಾ ನಿರ್ಧಾರದ ಫಲಿತಾಂಶದ ನಂತರವೂ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲು ಅವಕಾಶವಿದ್ದರೆ ಅದನ್ನು ಸಲಹಾ ಪ್ರಜಾ ನಿರ್ಧಾರ ಎನ್ನಲಾಗುತ್ತದೆ. ಇದನ್ನು ಬ್ರಿಟನ್ನ್ ದೇಶದಲ್ಲಿ ಗುರುತಿಸಬಹುದಾಗಿದೆ. ದೇಶವೊಂದರ ಇತಿಹಾಸ ಹಾಗು ಸಂವಿಧಾನ ಆಧರಿಸಿ ಕಡ್ಡಾಯ ಅಥವ ಸಲಹಾ ಪ್ರಜಾ ನಿರ್ಧಾರ ಪಾಲನೆ ಕಂಡುಬರುತ್ತದೆ. ಸ್ವಿಟ್ಜರ್ಲ್ಯಾಂಡ್ ಜನರೇ ಆಡಳಿತದ ಅಂತಿಮ ಅಧಿಕಾರ ಹೊಂದಿರುವರೆಂಬ ನಂಬಿಕೆ ಹೊಂದಿದ್ದು ಕಡ್ಡಾಯ ಪ್ರಜಾ ನಿರ್ಧಾರ ಅಳವಡಿಸಿಕೊಂಡಿದೆ. ಆದರೆ ಬ್ರಿಟನ್ನಿನಲ್ಲಿ ಪಾರ್ಲಿಮೆಂಟ್ ಪರಮಾಧಿಕಾರ ಹೊಂದಿದ್ದು ಪ್ರಜಾ ನಿರ್ಧಾರ ಸಲಹಾತ್ಮಕವಾಗಿದೆ.
, ಇ. ಮರು ಕರೆ: ಪ್ರಜೆಗಳು ತಾವೇ ಚುನಾಯಿಸಿದ ಪ್ರತಿನಿಧಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಅಂದರೆ ಅಧಿಕಾರದಿಂದ ಕೆಳಗಿಳಿಸುವ ಪದ್ಧತಿಯನ್ನು ಮರು ಕರೆ ಎನ್ನಲಾಗುತ್ತದೆ. ಪ್ರಜೆಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ, ಕಷ್ಟಗಳಿಗೆ ಕಿವಿಯಾಗದ ಅಥವ ಅಗತ್ಯಗಳನ್ನು ಈಡೇರಿಸದ ಪ್ರತಿನಿಧಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗುತ್ತಾರೆ. ಈ ಸಾಧನವು ಜನತಾ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಾದಗ್ರಸ್ಥ ಅಂಶವಾಗಿದೆ.
, ಈ. ಪ್ರಜಾ ಸಮ್ಮತಿ: ಸಾರ್ವಜನಿಕ ಮಹತ್ವವುಳ್ಳ ಸಮಸ್ಯೆಯೊಂದನ್ನು ಜನರ ತೀರ್ಮಾನಕ್ಕೆ ನೀಡಲಾಗುತ್ತದೆ. ಜನರು ಸಮಸ್ಯೆ ಕುರಿತು ಬಹುಮತದೊಡನೆ ವ್ಯಕ್ತಪಡಿಸುವ ಅಭಿಪ್ರಾಯದಂತೆ ತೀರ್ಮಾನವನ್ನು ಸರ್ಕಾರ ಕೈಗೊಳ್ಳುತ್ತದೆ. ಹೀಗೆ ಜನರ ಅಥವ ಪ್ರಜೆಗಳ ಅಭಿಪ್ರಾಯವನ್ನಾಧರಿಸಿ ಸರ್ಕಾರ ಪ್ರಜಾಪರ ನಿರ್ಧಾರ ಕೈಗೊಳ್ಳುವ ಸಾಧನವೇ ಪ್ರಜಾ ಸಮ್ಮತಿ. ಇದನ್ನು ಜನಮತ ಗಣನೆ ಎಂದೂ ಕರೆಯಲಾಗುತ್ತದೆ. ುದಾ: ಜುನಾಗಡ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಮೊದಲು ಜನಮತ ಗಣನೆ ಅಥವ ಪ್ರಜಾ ಸಮ್ಮತಿ ಸಾಧನವನ್ನು ಬಳಸಲಾಗಿತ್ತು.
, 2. ಪರೋಕ್ಷ ಅಥವ ಪ್ರಾತಿನಿಧಿಕ ಪ್ರಜಾಪ್ರಭುತ್ವ: ಶುದ್ಧ ಅಥವ ಪ್ರತ್ಯಕ್ಷ ಪ್ರಜಾಪ್ರಭುತ್ವವು ಚಿಕ್ಕ ಭೂಪ್ರದೇಶ ಮತ್ತು ಕಡಿಮೆ ಜನಸಂಖೆ ಹೊಂದಿರುವ ದೇಶಗಳಲ್ಲಿ ಮಾತ್ರ ಸಾಧ್ಯ. ಚಿಕ್ಕ ಭೂಪ್ರದೇಶದಿಂದ ಜನರೆಲ್ಲ ಒಂದೆಡೆ ಸುಲಭವಾಗಿ ಸೇರಲು ಪೂರಕವಾಗಿರುತ್ತದೆ. ಜೊತೆಗೆ ಕಡಿಮೆ ಜನಸಂಖೆಯಿಂದ ಪರಸ್ಪರ ಸಾಮರಸ್ಯ ಹೊಂದಲು ಹಾಗು ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ಆದರೆ ಆಧುನಿಕ ದೇಶಗಳು ರಾಷ್ಟ್ರ ರಾಜ್ಯಗಳಾಗಿದ್ದು ವಿಶಾಲ ಬೂಪ್ರದೇಶ ಮತ್ತು ಸಂಕೀರ್ಣ ಸಮಾಜದ ಅಧಿಕ ಜನಸಂಖೆ ಹೊಂದಿವೆ. ಹೀಗಾಗಿ ಪ್ರಸ್ತುತ ಶುದ್ಧ ಅಥವ ಪ್ರತ್ಯಕ್ಷ ಪ್ರಜಾಪ್ರಭುತ್ವದ ಪಾಲನೆ ಅಸಾಧ್ಯ ಸಂಗತಿಯಾಗಿದೆ. ಆದ್ದರಿಂದ ಪರೋಕ್ಷ ಅಥವ ಪ್ರಾತಿನಿಧಿಕ ಪ್ರಜಾಪ್ರಭುತ್ವ ಜನಪ್ರಿಯವಾಗಿದೆ.
, ಸರಳಾರ್ಥದಲ್ಲಿ ಪ್ರಜೆಗಳು ತಮ್ಮ ಪ್ರತಿನಿಧಿಗಳ ಮೂಲಕ ಆಡಳಿತದಲ್ಲಿ ಭಾಗವಹಿಸುವುದನ್ನು ಪರೋಕ್ಷ ಅಥವ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎನ್ನಬಹುದು. ಮುಂದುವರೆದು ಪ್ರಜೆಗಳು ಆಡಳಿತ ನಡೆಸಲು ಮತ್ತು ನಿರ್ಧಾರ ಕೈಗೊಳ್ಳಲು ತಮ್ಮ ಪ್ರತಿನಿಧಿಗಳನ್ನು ಚುನಾಯಿಸಿಕೊಳ್ಳುವ ವ್ಯವಸ್ಥೆಯೇ ಪರೋಕ್ಷ ಪ್ರಜಾಪ್ರಭುತ್ವ. ಇಲ್ಲಿ ಕಾನೂನು ರಚನೆ, ಆಡಳಿತಾತ್ಮಕ ನಿರ್ಣಯ, ಸರ್ಕಾರದ ನೀತಿ ನಿರೂಪಣೆಯಲ್ಲಿ ಪ್ರಜೆಗಳ ಬದಲು ಪ್ರತಿನಿಧಿಗಳೇ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಪರೋಕ್ಷ ಪ್ರಜಾಪ್ರಭುತ್ವ ಜಾರಿಯಲ್ಲಿರುವ ದೇಶಗಳಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಿಯತಕಾಲಿಕ ಚುನಾವಣೆ ಜರುಗುತ್ತವೆ. ಉದಾ: ಭಾರತ ಹಾಗು ಬ್ರಿಟನ್ನಿನಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳು ಜರುಗಿದರೆ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ಜರುಗುತ್ತವೆ. ಚಿಂತಕ ಜಾನ್ ಸ್ಟುವರ್ಟ್ ಮಿಲ್ ಪರೋಕ್ಷ ಅಥವ ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ದೇಶದ ಸಮಸ್ತ ಜನರು ಅಥವ ಅದರಲ್ಲಿನ ಬಹುಸಂಖ್ಯಾತ ಜನರು ನಿಯತಕಾಲಿಕವಾಗಿ ಜರುಗುವ ಚುನಾವಣೆಗಳಲ್ಲಿ ತಮ್ಮ ಪ್ರತಿನಿಧಿಗಳ ಆಯ್ಕೆಯ ಮೂಲಕ ಆಡಳಿತಾಧಿಕಾರವನ್ನು ಚಲಾಯಿಸುತ್ತಾರೆ ಎಂದಿರುವರು.
, ಪರೋಕ್ಷ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತದ ಉದಾಹರಣೆಯ ಮೂಲಕ ಪರಿಪೂರ್ಣವಾಗಿ ಅರಿತುಕೊಳ್ಳುವುದು ಸೂಕ್ತವೆನಿಸುತ್ತದೆ. ಭಾರತ ೧೨೫ ಕೋಟಿಗಿಂತಲೂ ಅಧಿಕ ಜನಸಂಖೆಯೊಡನೆ ಜಗತ್ತಿನ ಎರಡನೇ ಸ್ಥಾನವನ್ನು ಮತ್ತು 3287263 ಚ. ಕಿ. ಮೀ ವಿಸ್ತೀರ್ಣದೊಡನೆ ಜಗತ್ತಿನ ಏಳನೇ ಸ್ಥಾನದಲ್ಲಿರುವ  ದೇಶ. ಜೊತೆಗೆ ಭಾರತ ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿ ಮುಂತಾದವುಗಳಲ್ಲಿ ವೈವಿಧ್ಯತೆ ಹೊಂದಿರುವ ದೇಶವಾಗಿದೆ. ಇಂತಹ ವಿಶಾಲ ಭೂಪ್ರದೇಶ ಹಾಗು ಜನಸಂಖೆಯ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸಾಧ್ಯ. ಹೀಗಾಗಿ ಭಾರತ ಪ್ರಾತಿನಿಧಿಕ ಸರ್ಕಾರ ಪದ್ಧತಿಯನ್ನು ವಿವಿಧ ಹಂತಗಳಲ್ಲಿ ಅಳವಡಿಸಿಕೊಂಡಿದೆ. ತಮಗೆಲ್ಲ ತಿಳಿದಿರುವಂತೆ ಭಾರತ ಸಂವಿಧಾನ ಸಂಸಧೀಯ ಮಾದರಿ ಸರ್ಕಾರವನ್ನು ಕೊಡಮಾಡಿದೆ. ಸರ್ಕಾರ ಎಂದೇ ಜನಸಾಮಾನ್ಯರು ಪರಿಗಣಿಸುವ ಕಾರ್ಯಾಂಗದ ರಾಷ್ಟ್ರಪತಿ, ಪ್ರಧಾನಿ ಹಾಗು ಮಂತ್ರಿಗಳನ್ನು ಸಂಸಧೀಯ ಮಾದರಿ ಸರ್ಕಾರದಲ್ಲಿ ನೇರವಾಗಿ ಪ್ರಜೆಗಳು ಆಯ್ಕೆ ಮಾಡುವುದಿಲ್ಲ. ಬದಲಾಗಿ ಭಾರತದ ಪ್ರಜೆಗಳು ಚುನಾವಣೆಯಲ್ಲಿ ಸಂಸತ್ತು ಅಥವ ಕೇಂದ್ರ ಶಾಸಕಾಂಗದ ಕೆಳಮನೆ ಲೋಕಸಭಾ ಸದಸ್ಯರನ್ನು ಚುನಾಯಿಸುತ್ತಾರೆ. ಲೋಕಸಭೆಯ ಜನ ಪ್ರತಿನಿಧಿಗಳು ಸರ್ಕಾರ ಅಥವ ಕಾರ್ಯಾಂಗದ ರಚನೆಗೆ ಮುಂದಾಗುತ್ತಾರೆ. ಭಾರತದಲ್ಲಿ ಪ್ರಜೆಗಳು ಕೇಂದ್ರ ಶಾಸಕಾಂಗದ ಕೆಳಮನೆ ಲೋಕಸಭಾ, ರಾಜ್ಯ ಶಾಸಕಾಂಗದ ಕೆಳಮನೆ ವಿಧಾನಸಭಾ ಹಾಗು ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ತಮ್ಮ ಪರವಾಗಿ ಆಡಳಿತ ನಡೆಸಲು ಪ್ರತಿನಿಧಿಗಳನ್ನಾಗಿ ಚುನಾಯಿಸುತ್ತಾರೆ. ಭಾರತೀಯರು ನಿಶ್ಚಿತ ಅವಧಿಗೆ ಅಂದರೆ ಐದು ವರ್ಷಗಳ ಅವಧಿಗೆ ಮಾತ್ರ ವ್ಯಕ್ತಿಯೊಬ್ಬನನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳುವರು. ತಮ್ಮ ಹಿತರಕ್ಷಣೆ ಮಾಡದ ಪ್ರತಿನಿಧಿಯನ್ನು ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸಲು ಮುಕ್ತ ಅಧಿಕಾರವನ್ನು ಪ್ರಜೆಗಳು ಹೊಂದಿರುತ್ತಾರೆ.
, ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಅಂಶಗಳು:
, ಪ್ರಸ್ತಾವನೆ: ಸಮಕಾಲಿನ ಜಗತ್ತಿನಲ್ಲಿರುವ ವಿವಿಧ ಸರ್ಕಾರ ಪದ್ಧತಿಗಳಲ್ಲಿ ಪ್ರಜಾಪ್ರಭುತ್ವ ಅತ್ಯುತ್ತಮ ಸರ್ಕಾರ ಪದ್ಧತಿ ಎಂದು ಪರಿಗಣಿಸಲ್ಪಟ್ಟಿದೆ. ಮಾತ್ರವಲ್ಲ, ಪ್ರಜಾಪ್ರಭುತ್ವ ಅತ್ಯಂತ ಸಂಕೀರ್ಣ ಸರ್ಕಾರ ಪದ್ಧತಿ ಎಂಬುದನ್ನೂ ಸಾಬೀತುಪಡಿಸಿದೆ. ವಿಶ್ವದ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಅಸ್ತಿತ್ವದಲ್ಲಿದ್ದರೆ ಕೆಲವು ದೇಶಗಳಲ್ಲಿ  ವಿಫಲಗೊಂಡಿದೆ. ಮತ್ತೆ ಕೆಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಸರ್ಕಾರ ಆಮೆ ಗತಿಯಲ್ಲಿ ತೆವಳುತ್ತಿದೆ. ಇದರಿಂದ ಉಳಿದೆಲ್ಲ ಸರ್ಕಾರ ಪದ್ಧತಿಗಿಂತ ಹೆಚ್ಚಿನ ಅಗತ್ಯತೆಗಳು ಪ್ರಜಾಪ್ರಭುತ್ವದ ಯಶಸ್ಸಿಗೆ ಅನಿವಾರ್ಯ ಎಂಬುದು ಸುಸ್ಪಷ್ಟ. ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆಗೆ ಅಗತ್ಯವಾದ ಅಂಶಗಳನ್ನು ಸ್ತೂಲವಾಗಿ ಅಧ್ಯಯನ ದೃಷ್ಟಿಯಿಂದ ಸಾಮಾನ್ಯ ಮತ್ತು ಸಾಂಸ್ಥಿಕ ಅಗತ್ಯಾಂಶಗಳೆಂದು ವರ್ಗೀಕರಿಸಿ ಅರಿಯಬಹುದಾಗಿದೆ.
, [ಅ] ಸಾಮಾನ್ಯ ಅಗತ್ಯಾಂಶಗಳು: ಪ್ರಜೆಗಳ ಭಾಗವಹಿಸುವಿಕೆಯಿಂದ ಪ್ರಜಾಪ್ರಭುತ್ವದ ಯಶಸ್ಸು ನಿರ್ಧಾರಗೊಳ್ಳುತ್ತದೆ. ದೇಶವೊಂದರ ಪ್ರಜೆಗಳು ಪ್ರಜಾಪ್ರಭುತ್ವಕ್ಕೆ ಪೂರಕವಾದ ಕೆಲ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಹೀಗೆ ಪ್ರಜಾಪ್ರಭುತ್ವ ಪ್ರಜೆಗಳಿಂದ ಅಪೇಕ್ಷಿಸುವ ಪ್ರಾಥಮಿಕ ಗುಣಗಳನ್ನು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಸಾಮಾನ್ಯ ಅಂಶಗಳೆಂದು ಕರೆಯಬಹುದಾಗಿದೆ. ಅಂತಹ ಪ್ರಮುಖ ಸಾಮಾನ್ಯ ಅಗತ್ಯಾಂಶಗಳನ್ನು ಕೆಳಗೆ ಚರ್ಚಿಸಲಾಗಿದೆ.
, 1. ಪ್ರಜಾಪ್ರಭುತ್ವ ಕುರಿತಾದ ಹಂಬಲ: ದೇಶವೊಂದರ ಬಹುಸಂಖ್ಯಾತ ಜನರು ಪ್ರಜಾಪ್ರಭುತ್ವ ಸರ್ಕಾರ ಅಳವಡಿಸಿಕೊಳ್ಳಲು ಕಾತರರಾಗಿರಬೇಕು. ಜೊತೆಗೆ ಪ್ರಜಾಪ್ರಭುತ್ವದ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮುಂತಾದವುಗಳಲ್ಲಿ ಬಲವಾದ ನಂಬಿಕೆ ಹೊಂದಿರಬೇಕು. ಜನರು ಪ್ರಜಾಪ್ರಭುತ್ವವನ್ನೇ ತಮ್ಮ ಜೀವನ ವಿಧಾನವನ್ನಾಗಿ ಮಾಡಿಕೊಂಡು ಪ್ರಜಾಪ್ರಭುತ್ವ ಸರ್ಕಾರದಡಿ ಬದುಕಲು ಸಿದ್ಧರಾಗಿರಬೇಕು. ಇಂತಹ  ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆ ಕಂಡು ಬರುತ್ತದೆ.
, 2. ತಾಳ್ಮೆ, ಸಹಕಾರ ಹಾಗು ಸಹಾನುಬೂತಿ: ದೇಶದ ಜನರು ತಮ್ಮ ಸಮಸ್ಯೆ, ಗೊಂದಲ, ಅನ್ಯಾಯ ಅಥವ ಸಂಶಯಗಳನ್ನು ಶಾಂತಿಯುತ ಮಾರ್ಗದಲ್ಲಿ ಪರಿಹರಿಸಿಕೊಳ್ಳುವ ತಾಳ್ಮೆ ಬೆಳೆಸಿಕೊಳ್ಳಬೇಕು. ಯಾವ ಸಂದರ್ಭದಲ್ಲೂ ತಾಳ್ಮೆಗೆಟ್ಟು ಹಿಂಸಾ ಮಾರ್ಗವನ್ನು ಅನುಸರಿಸಬಾರದು. ಜೊತೆಗೆ ಆಳುವ ಬಹುಸಂಖ್ಯಾತರು ಸಮಾಜದಲ್ಲಿನ ಅಲ್ಪಸಂಖ್ಯಾತರನ್ನು ಕುರಿತಂತೆ ಸಹಾನುಬೂತಿಯಿಂದ ಆಳ್ವಿಕೆ ನಡೆಸಬೇಕು. ದೇಶದ ಆಳುವವರ ತೀರ್ಮಾನಗಳಿಗೆ ಆಳಿಸಿಕೊಳ್ಳುವವರು  ಹಾಗು ಆಳಿಸಿಕೊಳ್ಳುವ ಜನರ ಬೇಡಿಕೆಗಳಿಗೆ ಆಳುವವರು ಸಹಕಾರ ನೀಡಬೇಕು. ಒಟ್ಟಾರೆ ಜನರಲ್ಲಿ ಪ್ರಸ್ತಾಪಿತ ಗುಣಗಳ ಪರಿಣಾಮ ಶಾಂತಿ ನೆಲೆಸಿರುವ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ಸು ಕಾಣುತ್ತದೆ.
, 3. ನಿರಂತರ ಜಾಗೃತಿ ಹಾಗು ಸಕ್ರಿಯ ಭಾಗವಹಿಸುವಿಕೆ: ಪ್ರಜೆಗಳ ನಿರಂತರ ಜಾಗೃತಿ ಮತ್ತು ಭಾಗವಹಿಸುವಿಕೆ ಪ್ರಜಾಪ್ರಭುತ್ವದ ಜೀವಾಳ. ಸರ್ಕಾರದ ನೀತಿ, ನಿರ್ಧಾರ ಅಥವ ಕಾರ್ಯಕ್ರಮಗಳು ಪ್ರಜಾಹಿತಕ್ಕೆ ಪೂರಕವಾಗಿವೆಯೇ ಎಂಬ ಜಾಗೃತಿ ಅಥವ ಅರಿವು ಪ್ರಜೆಗಳಿಗಿರಬೇಕು. ಒಂದುವೇಳೆ ಜನ ವಿರೋಧಿ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಲು ಮುಂದಾದಾಗ ಜನರು ಸುಮ್ಮನಿರದೇ ಪ್ರತಿಭಟಿಸಲು ಮುಂದಾಗಬೇಕು. ಸರ್ಕಾರದ ದೈನಂದಿನ ವ್ಯವಹಾರ ಕುರಿತಂತೆ ಪ್ರಜೆಗಳು ಸಮೂಹ ಮಾಧ್ಯಮಗಳ ಮೂಲಕ ಅರಿಯಬೇಕಲ್ಲದೇ ಮತದಾನ, ತೆರಿಗೆ ನೀಡಿಕೆ, ಸಾರ್ವಜನಿಕಾಭಿಪ್ರಾಯ ರಚನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು. ಇದರಿಂದ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದುವರೆಯಲು ಸಾಧ್ಯ. ಇಲ್ಲವಾದಲ್ಲಿ ಪ್ರತಿನಿಧಿಗಳು ಪ್ರಜಾ ಕಲ್ಯಾಣ ನಿರ್ಲಕ್ಷಿಸಿ ಸರ್ವಾಧಿಕಾರಿಯಾಗಬಹುದಾಗಿದೆ. ಇಂತಹ ಬೆಳವಣಿಗೆಯ ಪರಿಣಾಮ ಪ್ರಜಾಪ್ರಭುತ್ವ ನಾಶವಾಗುವ ಸಾಧ್ಯತೆ ಅಧಿಕವಾಗುತ್ತದೆ.
, 4. ವಿದ್ಯಾವಂತ ಹಾಗು ಬುದ್ಧಿವಂತ ಮತದಾರರು: ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅಪಾರ. ನಿಯತಕಾಲಿಕ ಚುನಾವಣೆಗಳಲ್ಲಿ ಮತದಾನದ ಮೂಲಕ ಮತದಾರರು ತಮಗೆ ಸರಿತೋರಿದ ಸರ್ಕಾರವನ್ನು ಅಧಿಕಾರಕ್ಕೆ ತರಲು ಮತ್ತು ಬೇಡವಾದ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಅವಕಾಶ ಹೊಂದಿರುತ್ತಾರೆ. ಈ ಅವಕಾಶದ ಸದ್ಬಳಕೆಯು ಸುಶಿಕ್ಷಿತ ಹಾಗು ಬುದ್ಧಿವಂತ ಮತದಾರರನ್ನು ಅವಲಂಬಿಸಿದೆ. ಜನಹಿತ ರಕ್ಷಿಸುವ, ದೇಶದ ಪ್ರಗತಿಗೆ ಶ್ರಮಿಸುವ, ಪ್ರಾಮಾಣಿಕ ಹಾಗು ಸಮರ್ಥ ಪ್ರತಿನಿಧಿಗಳ ಆಯ್ಕೆಗೆ ವಿದ್ಯಾವಂತ ಹಾಗು ಬುದ್ಧಿವಂತ ಮತದಾರರ ಅಗತ್ಯವಿದೆ. ಹೀಗೆ ಪ್ರಜಾಪ್ರಭುತ್ವದ ಬಲವರ್ಧನೆ ಪ್ರಜ್ಞಾವಂತ ಮತದಾರರನ್ನು ಅವಲಂಬಿಸಿದೆ.
, 5. ಸಾರ್ವಜನಿಕ ಬೆಂಬಲ ಹಾಗು ವಿಮರ್ಷೆ: ಪ್ರಜಾಪ್ರಭುತ್ವವು ಪ್ರಜೆಗಳ ಸರ್ಕಾರ ಪದ್ಧತಿಯಾಗಿದೆ. ಪ್ರಜೆಗಳು ಅಗತ್ಯವಿದ್ದಾಗ ಬೆಂಬಲಿಸುವ ಅಥವ ವಿಮರ್ಷಿಸುವ ಮೂಲಕ ಅದರ ಯಶಸ್ಸಿಗೆ ಮುಂದಾಗಬಹುದಾಗಿದೆ. ಸರ್ಕಾರ ಜನ ವಿರೋಧಿ ನೀತಿ, ನಿರ್ಧಾರ ಅಥವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾದಾಗ ಪ್ರಜೆಗಳು ಅದನ್ನು ರಚನಾತ್ಮಕವಾಗಿ ವಿಮರ್ಷಿಸಬೇಕು. ಇದರಿಂದ ಸರ್ಕಾರ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಜನಪರ ಕಾರ್ಯವೆಸಗುತ್ತದೆ. ಅಂತೆಯೇ ಸರ್ಕಾರ ಜನಹಿತಕ್ಕೆ ಪೂರಕವಾದ ನೀತಿ, ನಿರ್ಧಾರ ಅಥವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾದಾಗ ಅದನ್ನು ಬೆಂಬಲಿಸಬೇಕು. ಇದರಿಂದ ಸರ್ಕಾರ ಪ್ರೇರಣೆಗೊಂಡು ಮತ್ತಷ್ಟು ಉತ್ಸಾಹದಿಂದ ಜನಪರ ಕಾರ್ಯವೆಸಗಲು ಸಾಧ್ಯವಾಗುತ್ತದೆ. ಇವೆರಡರ ಪರಿಣಾಮ ಪ್ರಜಾಪ್ರಭುತ್ವ ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.
, 6. ಸಮರ್ಥ ನಾಯಕತ್ವ: ದೇಶವೊಂದರ ಪ್ರಜಾಪ್ರಭುತ್ವದ ನಿರಂತರತೆಗೆ ಸೂಕ್ತ ನಾಯಕತ್ವ ಅಗತ್ಯ. ಯೋಗ್ಯ ನಾಯಕತ್ವ ಹೊಂದಲಾರದ ದೇಶಗಳಲ್ಲಿ ಪ್ರಜಾಪ್ರಭುತ್ವ ಕುಂಟಿತಗೊಳ್ಳುತ್ತದೆ. ಪ್ರಾಮಾಣಿಕ, ನಿಷ್ಠುರ, ಉದಾರವಾದಿ ಹಾಗು ಸೇವಾ ಮನೋಭಾವವನ್ನುಳ್ಳ ನಾಯಕತ್ವ ಪಡೆದ ದೇಶಗಳಲ್ಲಿ ಪ್ರಜಾಪ್ರಭುತ್ವ ಯಶಸ್ವಿಗೊಳ್ಳುತ್ತದೆ. ಉದಾ: ಅಮೇರಿಕ ಹಾಗು ಇಂಗ್ಲೆಂಡ್ ದೇಶಗಳಲ್ಲಿ ಸಮರ್ಥ ಹಾಗು ಮುಂದಾಲೋಚನೆಯುಳ್ಳ ನಾಯಕರಿಂದಾಗಿ ಪ್ರಜಾಪ್ರಭುತ್ವ ನಿರಂತರವಾಗಿ ಯಶಸ್ಸಿನ ಪಥದಲ್ಲಿ ಸಾಗಿ ಬಂದಿದೆ. ಆದ್ದರಿಂದಲೇ ಸ್ಯಾಮಿಯಲ್ ಪಿ. ಹಂಟಿಗ್ಟನ್ ಆರ್ಥಿಕಾಭಿವೃದ್ಧಿ ಪ್ರಜಾಪ್ರಭುತ್ವವನ್ನು ದೇಶವೊಂದರಲ್ಲಿ ಸಾಧ್ಯಗೊಳಿಸಿದರೆ ರಾಜಕಿಯ ನಾಯಕತ್ವವು ಅದನ್ನು ನೈಜಗೊಳಿಸುತ್ತದೆ ಎಂದಿರುವರು.
, 7. ುನ್ನತ ನೈತಿಕ ಹಾಗು ಜೀವನ ಮಟ್ಟ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಗುಣಮಟ್ಟ ಆಧರಿಸಿ ಪ್ರಜಾಪ್ರಭುತ್ವದ ಗುಣಮಟ್ಟ ರೂಪುಗೊಳ್ಳುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಜೆಗಳ ನೈತಿಕ ಹಾಗು ಜೀವನ ಮಟ್ಟವು ಉನ್ನತವಾಗಿರಬೇಕು. ಉತ್ತಮ ಜೀವನಮಟ್ಟ ಹೊಂದಿದ ಪ್ರಜೆಗಳು ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸವಾಲುಗಳಿಂದ ಹೊರಬಂದು ಪ್ರಜಾಸತ್ತಾತ್ಮಕ ಸಂಸ್ಥೆ ಅಥವ ಬೆಳವಣಿಗೆಯತ್ತ ಗಮನ ನೀಡುತ್ತಾರೆ. ಜೊತೆಗೆ ಉನ್ನತ ನೈತಿಕ ಆದರ್ಶವನ್ನುಳ್ಳ ಜನರು ಚುನಾವಣಾ ಅಕ್ರಮಗಳಿಂದ ದೂರವಾಗಿ ಸಮರ್ಥರಾದವರ ಆಯ್ಕೆಗೆ ಕಾರಣರಾಗುತ್ತಾರೆ. ಅಲ್ಲದೇ ದೇಶ ತನಗೆ ಏನನ್ನು ನೀಡಿದೆ ಎಂಬುದರ ಬದಲು ತಾನು ದೇಶಕ್ಕಾಗಿ ಏನು ಮಾಡಿರುವೆ ಎಂಬ ಚಿಂತನೆಯನ್ನು ಬೆಳಸಿ ತನ್ಮೂಲಕ ಪ್ರಜಾಪ್ರಭುತ್ವದ ಯಶಸ್ಸನ್ನು ಕಾಣಬಹುದಾಗಿದೆ.
, [ಆ] ಸಾಂಸ್ಥಿಕ ಅಗತ್ಯಾಂಶಗಳು: ಯಾವುದೇ ಒಂದು ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಸ್ವತಂತ್ರ ಹಾಗು ಪರಿಣಾಮಕಾರಿ ಕಾರ್ಯಾಚರಣೆಗೆ ಹಲವು ಸಂಸ್ಥೆಗಳು ಅವಶ್ಯಕ. ಪ್ರಜಾಸತ್ತಾತ್ಮಕ ಸಾಂಸ್ಥಿಕ ಆಧಾರವಿಲ್ಲದಿದ್ದರೆ ಪ್ರಜಾಪ್ರಭುತ್ವ ಸಫಲಗೊಳ್ಳುವುದು ಕಠಿಣವಾಗುತ್ತದೆ. ಹೀಗಾಗಿ ಪ್ರಜಾಪ್ರಭುತ್ವದ ಯಶಸ್ಸಿಗೆ ಕೆಳಗಿನ ಸಾಂಸ್ಥಿಕ ಅಂಶಗಳು ಅಗತ್ಯವಾಗಿವೆ.
, 1. ಲಿಖಿತ ಸಂವಿಧಾನ: ದೇಶವೊಂದರ ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಮೊದಲ ಸಾಂಸ್ಥಿಕ ಅಗತ್ಯಾಂಶವೇ ಲಿಖಿತ ಸಂವಿಧಾನ. ಸಾಮಾನ್ಯವಾಗಿ ಪ್ರಜಾಪ್ರತಿನಿಧಿಗಳು ಪ್ರಜ್ಙಾಪೂರ್ವಕವಾಗಿ ಲಿಖಿತ ಸಂವಿಧಾನವನ್ನು ರಚಿಸಿರುತ್ತಾರೆ. ಸಂಶಯ ಅಥವ ಗೊಂದಲಕ್ಕೆ ಅವಕಾಶ ನೀಡದಂತೆ ಲಿಖಿತ ಸಂವಿಧಾನದಲ್ಲಿ ಸರ್ಕಾರದ ಅಂಗಗಳ ರಚನೆ ಹಾಗು ಕಾರ್ಯಗಳನ್ನು ನಮೂದಿಸಲಾಗಿರುತ್ತದೆ. ಪ್ರತಿಯೊಂದು ಅಂಗ ಸಂವಿಧಾನಾತ್ಮಕ ನಿಯಮಾವಳಿಗಳನ್ವಯ ಕಾರ್ಯವೆಸಗುವ ಮೂಲಕ ಸಂವಿಧಾನ ರಚನಾಕಾರರ ಗುರಿಯಾದ ಪ್ರಜೆಗಳ ಕಲ್ಯಾಣಕ್ಕೆ ಶ್ರಮಿಸುತ್ತವೆ. ಇದರಿಂದ ಪ್ರಜಾಪ್ರಭುತ್ವ ಸಾಕಾರಗೊಳ್ಳುತ್ತದೆ.
, 2. ಚುನಾಯಿತ ಪ್ರತಿನಿಧಿಗಳ ಶಾಸಕಾಂಗ: ಶಾಸಕಾಂಗ ಎಂಬ ಸಾಂಸ್ಥಿಕ ತಳಹದಿಯನ್ನು ಪ್ರಜಾಪ್ರಭುತ್ವದ ಯಶಸ್ಸು ಅವಲಂಬಿಸಿರುತ್ತದೆ. ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಅರ್ಹ ಮತದಾರರಿಂದ ನೇರವಾಗಿ ಆಯ್ಕೆಗೊಂಡ ಜನ ಪ್ರತಿನಿಧಿಗಳು ಶಾಸಕಾಂಗದ ಕೆಳಮನೆಯ ಸದಸ್ಯರಾಗುತ್ತಾರೆ. ಜನರಿಂದ ಪರೋಕ್ಷವಾಗಿ ಆಯ್ಕೆಗೊಂಡವರು ಶಾಸಕಾಂಗದ ಮೇಲ್ಮನೆಯ ಸದಸ್ಯರಾಗಿರುತ್ತಾರೆ. ಈ ಜನ ಪ್ರತಿನಿಧಿಗಳು ಅಧಿವೇಶನಗಳ ಸಮಯದಲ್ಲಿ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುತ್ತಾರೆ. ಅಲ್ಲದೆ ಪ್ರಜೆಗಳ ಸಮಸ್ಯೆಗಳ ಕುರಿತು ಗಹನ ಚರ್ಚೆ ನಡೆಸಿ ಸೂಕ್ತ ಪರಿಹಾರೋಪಾಯಗಳನ್ನು ಜಾರಿಗೊಳಿಸಲು ಕಾರ್ಯಾಂಗಕ್ಕೆ ನೆರವಾಗುತ್ತಾರೆ. ಆದ್ದರಿಂದಲೇ ಶಾಸಕಾಂಗವನ್ನು ಪ್ರಜಾಭಿಪ್ರಾಯದ ಕೈಗನ್ನಡಿ ಎಂದು ಪರಿಗಣಿಸಲಾಗುತ್ತದೆ. ಹೀಗೆ ಶಾಸಕಾಂಗದ ಚುನಾಯಿತ ಪ್ರತಿನಿಧಿಗಳ ಸಕ್ರಿಯತೆ ದೇಶದಲ್ಲಿ ಪ್ರಜಾಪ್ರಭುತ್ವ ಬೇರೂರಲು ಕಾರಣವಾಗುತ್ತದೆ.
, 3. ಜವಾಬ್ದಾರಿಯುತ ಕಾರ್ಯಾಂಗ: ಪ್ರಜೆಗಳಿಗೆ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಜವಾಬ್ದಾರಿಯಾಗಿರುವ ಕಾರ್ಯಾಂಗ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ. ಸಂಸಧೀಯ ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ನಾಯಕತ್ವದ ನೈಜ ಕಾರ್ಯಾಂಗವು ಪ್ರತ್ಯಕ್ಷವಾಗಿ ಶಾಸಕಾಂಗಕ್ಕೆ ಹಾಗು ಪರೋಕ್ಷವಾಗಿ ಜನರಿಗೆ ಜವಾಬ್ದಾರಿಯಾಗಿರುತ್ತದೆ. ಅಧ್ಯಕ್ಷೀಯ ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗದ ಮುಖ್ಯಸ್ಥನಾದ ಅಧ್ಯಕ್ಷ ಶಾಸಕಾಂಗಕ್ಕಿಂತ ಜನರಿಗೆ ಜವಾಬ್ದಾರಿ ತೋರಬೇಕಾಗುತ್ತದೆ. ಇಂತಹ ಜವಾಬ್ದಾರಿಯುತ ಕಾರ್ಯಾಂಗ ಪ್ರಜೆಗಳಲ್ಲಿ ಸರ್ಕಾರ ತಮ್ಮದು, ತಮ್ಮ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ ಅಥವ ತಮ್ಮ ಆಶಯದಂತೆ ನಡೆದುಕೊಳ್ಳುತ್ತದೆ ಎಂಬ ಭಾವನೆ ಮೂಡಿಸಿ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ.
, 4. ಸ್ವತಂತ್ರ ನ್ಯಾಯಾಂಗ: ನಿಶ್ಪಕ್ಷಪಾತ ಮತ್ತು ನಿರ್ಭೀತ ನ್ಯಾಯದಾನಕ್ಕೆ ಸ್ವತಂತ್ರ ನ್ಯಾಯಾಂಗ ಅವಶ್ಯಕ. ಇಂತಹ ಸ್ವತಂತ್ರ ನ್ಯಾಯಾಂಗವು ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಗತ್ಯ. ಎಷ್ಟೇ ದೊಡ್ಡವರಾದ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಸಾಮಾನ್ಯ ಪ್ರಜೆಗಳಿಗೆ ನ್ಯಾಯದ ಭರವಸೆಯನ್ನು ಈ ನ್ಯಾಯಾಂಗ ವ್ಯವಸ್ಥೆ ಒದಗಿಸುತ್ತದೆ. ಸಮಾನ ನ್ಯಾಯದ ಭರವಸೆಯನ್ನು ಪ್ರಜೆಗಳಿಗೆ ಒದಗಿಸುವ ಮೂಲಕ ಸ್ವತಂತ್ರ ನ್ಯಾಯಾಂಗ ಪ್ರಜೆಗಳಲ್ಲಿ ಪ್ರಜಾಸತ್ತಾತ್ಮಕ ಒಲವನ್ನು ಇಮ್ಮಡಿಗೊಳಿಸುತ್ತದೆ.
, 5. ರಾಜಕಿಯ ಪಕ್ಷಗಳು: ಸುಸಂಘಟಿತ ಹಾಗು ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ರಾಜಕಿಯ ಪಕ್ಷಗಳು ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತವೆ. ಮತದಾನ ಹಾಗು ಚುನಾವಣಾ ಸ್ಪರ್ಧೆಯ ಮೂಲಕ ಪ್ರಜೆಗಳ ರಾಜಕಿಯ ಭಾಗವಹಿಸುವಿಕೆಯನ್ನು ರಾಜಕಿಯ ಪಕ್ಷಗಳು ಹೆಚ್ಚಿಸುತ್ತವೆ. ಜೊತೆಗೆ ಜನ ಸಾಮಾನ್ಯರಲ್ಲಿ ಚುನಾವಣಾ ಪ್ರಚಾರದ ವೇಳೆ ತಮ್ಮ ಸಾಧನೆ, ಇತರರ ವಿಫಲತೆ, ದೇಶದ ಸಮಸ್ಯೆಗಳ ರಾಜಕಿಯ ಜಾಗೃತಿ ಮೂಡಿಸುತ್ತವೆ. ಇದರಿಂದ ಪ್ರಜ್ಙಾಪೂರ್ವಕ ನಿರ್ಧಾರಗಳ ಮೂಲಕ ಪ್ರಜೆಗಳು ಪ್ರಜಾಪ್ರಭುತ್ವದ ಭವಿಷ್ಯ ರೂಪಿಸಲು ಮುಂದಾಗುತ್ತಾರೆ.
, 6. ಪರಿಣಾಮಕಾರಿ ವಿರೋಧಪಕ್ಷ: ಪರಿಣಾಮಕಾರಿ ವಿರೋಧ ಪಕ್ಷ ಪ್ರಜಾಪ್ರಭುತ್ವದ ಯಶಸ್ಸಿಗೆ ಅನಿವಾರ್ಯ ಸಾಂಸ್ಥಿಕ ಅಗತ್ಯಾಂಶ. ಶಾಸಕಾಂಗದಲ್ಲಿ ಬಹುಮತ ಪಡೆದ ಪಕ್ಷ ಆಡಳಿತ ಪಕ್ಷವಾಗಿ ಸರ್ಕಾರ ನಡೆಸುತ್ತದೆ. ಆಡಳಿತ ಪಕ್ಷದ ನೀತಿ, ನಿರ್ಧಾರ ಅಥವ ಕಾರ್ಯಕ್ರಮಗಳು ಪ್ರಜಾಹಿತಕ್ಕೆ ಪೂರಕವಾಗಿವೆಯೇ ಎಂಬುದನ್ನು ವಿರೋಧ ಪಕ್ಷ ಹದ್ದಿನ ಕಣ್ಣಿಟ್ಟು ಪರಿಶೀಲಿಸುತ್ತದೆ. ಜನ ವಿರೋಧಿ ಸರ್ಕಾರದ ಕ್ರಮಗಳನ್ನು ರಚನಾತ್ಮಕವಾಗಿ ವಿಮರ್ಷಿಸುತ್ತದೆ. ಜೊತೆಗೆ ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಜನರ ಮುಂದಿಡುತ್ತದೆ. ಹೀಗಾಗಿ ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಪರಿಗಣಿಸಲಾಗುವ ವಿರೋಧ ಪಕ್ಷ ಪ್ರಜಾಪ್ರಭುತ್ವದ ಮುಂದುವರಿಕೆಗೆ ಅನಿವಾರ್ಯ.
, 7. ಸ್ಥಳೀಯ ಸ್ವಯಂ ಸರ್ಕಾರಗಳು: ದೇಶದಲ್ಲಿನ ವಿವಿಧ ಸ್ಥಳಿಯ ಸರ್ಕಾರಗಳು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುತ್ತವೆ. ಪ್ರಜೆಗಳು ಪ್ರಜಾಪ್ರಭುತ್ವದ ಮೌಲ್ಯಗಳು, ನಂಬಿಕೆಗಳು ಹಾಗು ತತ್ವಗಳನ್ನು ಅನುಭವಿಸುವ ಮೂಲಕ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಆದ್ದರಿಂದಲೇ ಸ್ಥಳಿಯ ಸರ್ಕಾರಗಳನ್ನು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯಾಂಶವೆಂದು ಪರಿಗಣಿಸಲಾಗಿದೆ.
, 8. ಮುಕ್ತ ಹಾಗು ನಿರ್ಭೀತ ಮಾಧ್ಯಮಗಳು: ಮುದ್ರಣ ಹಾಗು ವಿದ್ಯುನ್ಮಾನ ಮಾಧ್ಯಮಗಳು ಪ್ರಜೆಗಳಿಗೆ ವಾಸ್ತವ ಸಂಗತಿಗಳನ್ನು ತಲುಪಿಸುತ್ತವೆ. ಮಹತ್ವದ ವಿಚಾರ ಕುರಿತಂತೆ ಸಾರ್ವಜನಿಕಾಭಿಪ್ರಾಯ ರೂಪಿಸಿಕೊಳ್ಳುವಲ್ಲಿ ಮಾಧ್ಯಮಗಳು ಪ್ರಜೆಗಳಿಗೆ ನೆರವಾಗುತ್ತವೆ. ಪ್ರಜೆಗಳ ದೈನಂದಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಲು ಮಾಧ್ಯಮ ಕಾರಣವಾಗುತ್ತವೆ. ಪ್ರಜೆಗಳಿಗೆ ದ್ವನಿಯಾಗಿರುವ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಯಶಸ್ಸಿಗೆ ಮಾಧ್ಯಮ ಅನಿವಾರ್ಯವಾಗಿದೆ.
, ಒಟ್ಟಾರೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳು ಮೈಗೂಡಿಸಿಕೊಂಡ ಗುಣಗಳು ಮತ್ತು ದೇಶವೊಂದರ ಸಾಂಸ್ಥಿಕ ರಚನೆಯನ್ನು ಆಧರಿಸಿರುವುದು ನಿರ್ವಿವಾದ. ಕಾರಣವೇನೆಂದರೆ ಭದ್ರ ಸಾಂಸ್ಥಿಕ ರಚನೆ ಹೊಂದಿರದ ಪ್ರಜೆಗಳ ಗುಣಾತ್ಮಕ ಅಂಶದಿಂದ ಮಾತ್ರ ಪ್ರಜಾಪ್ರಭುತ್ವ ಸಫಲವಾಗದು. ಅಂತೆಯೇ ಗುಣಾತ್ಮಕ ಪ್ರಜೆಗಳ ಸಹಕಾರವಿಲ್ಲದ ಭದ್ರ ಸಾಂಸ್ಥಿಕ ರಚನೆಯುಳ್ಳ ದೇಶದಲ್ಲೂ ಪ್ರಜಾಪ್ರಭುತ್ವ ಯಶಸ್ಸು ಕಾಣಲಾರದು. ಆದ್ದರಿಂದ ಚರ್ಚಿಸಲಾದ ಎರಡೂ ಬಗೆಯ ಅಗತ್ಯಾಂಶಗಳನ್ನು ಹೊಂದಿರುವ ದೇಶದಲ್ಲಿ ಮಾತ್ರ ಪ್ರಜಾಪ್ರಭುತ್ವ ಯಶಸ್ಸಿನ ಗುರಿ ತಲುಪಬಲ್ಲದು ಎಂಬಂಶ ಸುಸ್ಪಷ್ಟ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...