ಸಾಮಾನ್ಯ ಆಯ್ಕೆ ಪತ್ರಿಕೆ (ಜಿ. ಇ.)
, ಅಧ್ಯಾಯ 1: ರಾಜ್ಯಶಾಸ್ತ್ರದ ಮೂಲ ತತ್ವಗಳು:
,
, ರಾಜ್ಯಶಾಸ್ತ್ರದ ಅರ್ಥ ಮತ್ತು ವ್ಯಾಖ್ಯೆಗಳು: ರಾಜ್ಯಶಾಸ್ತ್ರ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಪೊಲಿಟಿಕಲ್ ಸೈನ್ಸ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ ಪೊಲಿಟಿಕಸ್ ಅಥವ ನಗರ ರಾಜ್ಯ ಎಂಬರ್ಥವುಳ್ಳ ಗ್ರೀಕ್ ಭಾಷೆಯ ಪಾಲಿಸ್ ಪದದಿಂದ ಉತ್ಪತ್ತಿ ಹೊಂದಿವೆ. ಪ್ರಾಚೀನ ಗ್ರೀಕ್ ನಗರ ರಾಜ್ಯಗಳ ವಿವಿಧ ಚಟುವಟಿಕೆಗಳ ಅಧ್ಯಯನ ಮಾಡುವ ವಿಷಯವನ್ನು ಅಂದು ಪಾಲಿಟಿಕ್ಸ್ ಎಂಬುದಾಗಿ ಗುರುತಿಸಲಾಗಿತ್ತು. ಹೀಗಾಗಿ ಅರಿಸ್ಟಾಟಲ್ನು ತನ್ನ ಗ್ರಂಥಕ್ಕೆ ದಿ ಪಾಲಿಟಿಕ್ಸ್ ಎಂಬ ಶಿರ್ಶಿಕೆ ನೀಡಿದ್ದನು. ಜೊತೆಗೆ ಪ್ರಾಚೀನ ಗ್ರೀಕರು ನಗರ ರಾಜ್ಯಗಳ ನಾನಾ ಚಟುವಟಿಕೆ ಅಥವ ವ್ಯವಹಾರಗಳನ್ನು ೊಳಗೊಂಡಂತೆ ಸಮಗ್ರ ರಾಜಕೀಯ ವಿದ್ಯಮಾನಗಳಿಗೆ ಪೊಲಿಟಿಕಾ ಎನ್ನುತ್ತಿದ್ದರು. ಪುಟ್ಟ ನಗರ ರಾಜ್ಯಗಳ ಬದಲು ಪ್ರಸ್ತುತ ಬೃಹತ್ ರಾಷ್ಟ್ರ ರಾಜ್ಯಗಳು ಅಸ್ತಿತ್ವದಲ್ಲಿದ್ದು ರಾಜಕೀಯದ ಗ್ರೀಕರ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ.
,
, ಸಾಮಾನ್ಯ ಅರ್ಥದಲ್ಲಿ ಮಾನವನ ರಾಜಕೀಯ ಚಟುವಟಿಕೆಗಳನ್ನು ಅಭ್ಯಸಿಸುವ ಶಾಸ್ತ್ರವೇ ರಾಜ್ಯಶಾಸ್ತ್ರ. ವಿಶಾಲಾರ್ಥದಲ್ಲಿ ರಾಜ್ಯ ಮತ್ತು ಸರ್ಕಾರಗಳ ವಿವಿಧ ವ್ಯವಹಾರಗಳ ವ್ಯವಸ್ಥಿತ ಅಧ್ಯಯನ ವಿಷಯವನ್ನು ರಾಜ್ಯಶಾಸ್ತ್ರ ಎನ್ನಬಹುದು. ರಾಜ್ಯಶಾಸ್ತ್ರವು ಮಾನವ ರಾಜ್ಯ ಮತ್ತು ಸರ್ಕಾರಗಳೊಡನೆ ಹೊಂದಿರುವ ಸಂಬಂಧಗಳನ್ನು ಅಧ್ಯಯನ ಮಾಡುವ ವಿಷಯವಾಗಿದೆ. ರಾಜ್ಯವೇ ರಾಜ್ಯಶಾಸ್ತ್ರದ ಕೇಂದ್ರಬಿಂದು ವಿಷಯವಸ್ತುವಾಗಿದ್ದರೂ ರಾಜ್ಯಕ್ಕೆ ಪೂರಕವಾದ ಸರ್ಕಾರ, ಸಂವಿಧಾನ, ಚುನಾವಣೆ, ರಾಯಭಾರ, ಯುದ್ಧ ಮುಂತಾದ ಅಂಶಗಳನ್ನೂ ಅದು ಅಭ್ಯಸಿಸುತ್ತದೆ. ಇದರೊಡನೆ ವ್ಯಕ್ತಿಗಳ ರಾಜಕೀಯ ಸ್ವಭಾವ ಹಾಗು ವರ್ತನೆಗಳ ಮೇಲೆಯೂ ರಾಜ್ಯಶಾಸ್ತ್ರ ಬೆಳಕು ಚೆಲ್ಲುತ್ತದೆ.
,
, ವ್ಯಾಖ್ಯೆಗಳು: ರಾಜ್ಯಶಾಸ್ತ್ರದ ಅರ್ಥವನ್ನು ಕುರಿತಂತೆ ರಾಜನೀತಿಜ್ಙರಲ್ಲಿ ಭಿನ್ನಾಭಿಪ್ರಾಯಗಳಿವೆ. ರಾಜ್ಯಶಾಸ್ತ್ರಕ್ಕೆ ಸರ್ವಮಾನ್ಯ ವಿವರಣೆಯನ್ನು ನೀಡುವಲ್ಲಿ ರಾಜನೀತಿಜ್ಙರು ಸಫಲರಾಗಿಲ್ಲ. ರಾಜ್ಯಶಾಸ್ತ್ರ ಎಂದರೇನು? ಎಂಬ ಪ್ರಶ್ನೆಗೆ ತಜ್ಙರು ನೀಡಿರುವ ಪ್ರಮುಖ ವ್ಯಾಖ್ಯಾನಗಳು ಕೆಳಗಿನಂತಿವೆ.
, ಜೆ. ಡಬ್ಲ್ಯೂ. ಗಾರ್ನರ್ ಪ್ರಕಾರ "ರಾಜ್ಯದೊಡನೆ ಆರಂಭವಾಗಿ ರಾಜ್ಯದೊಡನೆ ಮುಕ್ತಾಯವಾಗುವ ಅಧ್ಯಯನ ಶಾಸ್ತ್ರವೇ ರಾಜ್ಯಶಾಸ್ತ್ರ"
, ರೈಮಂಡ್ ಜೆ. ಗೆಟಲ್ ಪ್ರಕಾರ "ರಾಜ್ಯವು ಹಿಂದೆ ಹೇಗಿತ್ತು ಎಂಬ ಐತಿಹಾಸಿಕ ಅವಲೋಕನ, ರಾಜ್ಯವು ಪ್ರಸ್ತುತ ಹೇಗಿದೆ ಎಂಬ ವಿಶ್ಲೇಷಣೆ ಮತ್ತು ರಾಜ್ಯವು ಮುಂದೆ ಹೇಗಿರಬೇಕು ಎಂಬ ನೈತಿಕ ಚರ್ಚೆಯೇ ರಾಜ್ಯಶಾಸ್ತ್ರ"
, ಪಾಲ್ ಜಾನೆಟ್ ಪ್ರಕಾರ "ರಾಜ್ಯದ ಮೂಲಾಧಾರ ಹಾಗು ಸರ್ಕಾರದ ತತ್ವಗಳನ್ನು ವಿವರಿಸುವ ಸಮಾಜ ವಿಜ್ಙಾನಗಳ ಒಂದು ಭಾಗವೇ ರಾಜ್ಯಶಾಸ್ತ್ರ".
, ಸರ್ ಜಾನ್ ಸೀಲೆ ಪ್ರಕಾರ "ಅರ್ಥಶಾಸ್ತ್ರ ಆರ್ಥಿಕ ಚಟುವಟಿಕೆಗಳನ್ನು, ಜೀವಶಾಸ್ತ್ರ ಜೀವಿಗಳನ್ನು, ಸಂಖ್ಯಾಶಾಸ್ತ್ರ ಅಂಕಿಸಂಖೆಗಳನ್ನು ಅಭ್ಯಸಿಸುವಂತೆ ಸರ್ಕಾರದ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ"
, ಕ್ಯಾಟಲಿನ್ ಪ್ರಕಾರ "ಸಂಘಟಿತ ಮಾನವ ಸಮಾಜದ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ"
,
, ರಾಜ್ಯಶಾಸ್ತ್ರದ ಸ್ವರೂಪ:
, ಶಿರ್ಶಿಕೆಯ ಭಿನ್ನತೆಯಂತೆ ತಜ್ಙರಲ್ಲಿ ರಾಜ್ಯಶಾಸ್ತ್ರ ವಿಜ್ಙಾನವೇ ಅಥವ ಕಲೆಯೇ ಎಂಬುದರ ಕುರಿತಾದ ಭಿನ್ನಾಭಿಪ್ರಾಯವು ವ್ಯಕ್ತವಾಗುತ್ತದೆ. ಕೆಲವು ಚಿಂತಕರು ರಾಜ್ಯಶಾಸ್ತ್ರಕ್ಕೆ ವಿಜ್ಙಾನದ ಸ್ಥಾನ ನೀಡಲು ಸಮ್ಮತಿಸಿದರೆ ಇತರರು ವಿಜ್ಙಾನವೆಂದು ರಾಜ್ಯಶಾಸ್ತ್ರವನ್ನು ಪರಿಗಣಿಸಲು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ಸ್ವರೂಪವನ್ನು ಅರಿತುಕೊಳ್ಳಲು ಅದು ವಿಜ್ಙಾನವೇ ಎಂಬುದರ ಪರವಾದ ಮತ್ತು ವಿರುದ್ಧವಾದ ಅಂಶಗಳನ್ನು ಮನವರಿಕೆ ಮಾಡಿಕೊಳ್ಳುವುದು ಅನಿವಾರ್ಯ. ಆಗ ರಾಜ್ಯಶಾಸ್ತ್ರವು ಕಲೆಯೇ ಅಥವ ವಿಜ್ಙಾನವೇ ಎಂಬುದನ್ನರಿತು ಅದರ ಸ್ಪಷ್ಟ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
,
, ರಾಜ್ಯಶಾಸ್ತ್ರವು ವಿಜ್ಙಾನವಲ್ಲ, ಒಂದು ಕಲೆ: ನಾವು ನಿತ್ಯ ಜೀವನದಲ್ಲಿ ನಾನಾ ಚಟುವಟಿಕೆಗಳನ್ನು ನಿರ್ವಹಿಸುತ್ತೇವೆ. ಆ ಚಟುವಟಿಕೆಗಳಿಗೆ ಕ್ರಮಬದ್ಧ ಅಧ್ಯಯನವಾಗಲಿ, ನಿರ್ದಿಷ್ಟ ಫಲಿತಾಂಶವಾಗಲಿ, ಏಕರೂಪತೆಯಾಗಲಿ ಕಂಡು ಬರುವುದಿಲ್ಲ. ವಿವಿಧ ಸ್ಥಳ ಮತ್ತು ಕಾಲಗಳಲ್ಲಿ ನಿರ್ದಿಷ್ಟ ಚಟುವಟಿಕೆ ರೂಪಾಂತರಗೊಂಡು ಆಚರಿಸಲ್ಪಡುತ್ತದೆ. ಇಂತಹ ಚಟುವಟಿಕೆ ತರಬೇತಿ, ಅನುಭವ ಹಾಗು ಕೌಶಲ್ಯಗಳಿಂದ ಕೂಡಿದಾಗ ಕಲೆ ಎಂಬುದಾಗಿ ಪರಿಗಣಿಸಲ್ಪಡುತ್ತವೆ. ರಾಜಕೀಯ ಚಟುವಟಿಕೆಗಳನ್ನು ಅಭ್ಯಸಿಸುವ ರಾಜ್ಯಶಾಸ್ತ್ರವೂ ಸಹ ಇಂತಹ ಚಟುವಟಿಕೆಯ ಭಾಗವಾಗಿದ್ದು ನೈಸರ್ಗಿಕ ವಿಜ್ಙಾನಗಳ ಸ್ವರೂಪವನ್ನು ಪಡೆಯದಿದ್ದರಿಂದ ಕಲೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಈ ಕೆಳಗಿನ ಅಂಶಗಳು ರಾಜ್ಯಶಾಸ್ತ್ರ ವಿಜ್ಙಾನದ ಸ್ವರೂಪವನ್ನು ಪಡೆದಿರದೇ ಕಲೆಯಾಗಿದೆ ಎಂಬುದನ್ನು ವಿವರಿಸುತ್ತವೆ.
,
, 1. ಭಿನ್ನತೆ: ರಾಜ್ಯಶಾಸ್ತ್ರ ವಿಷಯದ ವ್ಯಾಖ್ಯಾನ, ವ್ಯಾಪ್ತಿ, ವಿಧಾನ, ತತ್ವಗಳನ್ನು ಕುರಿತು ತಜ್ಙರಲ್ಲಿ ಭಿನ್ನಾಭಿಪ್ರಾಯಗಳಿವೆ. ವಿದ್ಯಾರ್ಥಿಗಳು ಈ ವಿಷಯವನ್ನು ಅಧ್ಯಯನ ಮಾಡಲು ಅನುಸರಿಸಬೇಕಾದ ನಿರ್ದಿಷ್ಟ ಸಾರ್ವತ್ರಿಕ ವಿಧಾನವಿಲ್ಲದೇ ವೈವಿಧ್ಯಮಯ ವಿಧಾನಗಳನ್ನು ಅವಲಂಬಿಸಬೇಕಾಗಿದೆ. ಜೊತೆಗೆ ರಾಜ್ಯಶಾಸ್ತ್ರದ ತತ್ವಗಳ ಪಾಲನೆಯೂ ಸಹ ಏಕಮುಖವಾಗಿಲ್ಲ. ಉದಾ: ಮಾನವ ಹಕ್ಕುಗಳು, ರಾಜ್ಯದ ಹಸ್ತಕ್ಷೇಪ, ಚುನಾವಣಾ ವಿಧಾನದಂತಹ ವಿಷಯಗಳಲ್ಲಿ ಚಿಂತಕರು ತಮ್ಮದೇ ಹಲವು ತತ್ವಗಳನ್ನು ಬೆಂಬಲಿಸಿದ್ದಾರೆ. ಹೀಗಾಗಿ ವಿಜ್ಙಾನದ ಲಕ್ಷಣವಾದ ಸರ್ವಸಮ್ಮತತೆ ಪಡೆಯುವಲ್ಲಿ ರಾಜ್ಯಶಾಸ್ತ್ರ ವಿಫಲವಾಗಿದೆ ಎನ್ನಬಹುದು.
, 2. ಪರಿಕಲ್ಪನೆಗಳಲ್ಲಿ ವೈವಿಧ್ಯತೆ: ರಾಜ್ಯಶಾಸ್ತ್ರವು ಅನೇಕ ಪರಿಕಲ್ಪನೆಗಳಿಂದ ಕೂಡಿರುವ ವಿಷಯವಾಗಿದೆ. ಮೂಲಭೂತ ರಾಜಕೀಯ ಪರಿಕಲ್ಪನೆಗಳಾದ ಅಧಿಕಾರ, ಸಮಾನತೆ, ಸ್ವತಂತ್ರ್ಯ, ಹಕ್ಕು ಮುಂತಾದವುಗಳೊಡನೆ ಪ್ರಜಾಪ್ರಭುತ್ವ, ಸಮಾಜವಾದ, ಸಮತಾವಾದ, ಉದಾರವಾದ, ಇತ್ಯಾದಿ ಪ್ರಧಾನ ಪರಿಕಲ್ಪನೆಗಳು ರಾಜ್ಯಶಾಸ್ತ್ರದ ಭಾಗವಾಗಿವೆ. ರಾಜನೀತಿಜ್ಙರಲ್ಲಿ ವಿವಿಧ ಪರಿಕಲ್ಪನೆಗಳ ಕುರಿತು ಏಕಾಭಿಪ್ರಾಯವಿಲ್ಲದೇ ನಿರ್ದಿಷ್ಟ ಪರಿಕಲ್ಪನೆಯನ್ನು ವೈವಿಧ್ಯಮಯವಾಗಿ ಪ್ರತಿಪಾದಿಸಿದ್ದಾರೆ. ಉದಾ: ಸಮಾನತೆಯಲ್ಲಿ ಸಕಾರಾತ್ಮಕ ಹಾಗು ನಕಾರಾತ್ಮಕ ಸಮಾನತೆ, ಪ್ರಜಾಪ್ರಭುತ್ವದಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷ ಪ್ರಜಾಪ್ರಭುತ್ವ, ಸಮಾಜವಾದದಲ್ಲಿ ಪ್ರಜಾಸತ್ತಾತ್ಮಕ, ಉದಾರವಾದಿ, ಗಿಲ್ಡ್ ಮುಂತಾದ ಸಮಾಜವಾದದ ಪ್ರತಿಪಾದನೆಯನ್ನು ಮಾಡಲಾಗಿದೆ. ಗಮನಿಸಬೇಕಾದ ಅಂಶವೇನೆಂದರೆ ವಿಜ್ಙಾನದಲ್ಲಿ ಪರಿಕಲ್ಪನೆಯೊಂದರ ವೈವಿಧ್ಯಮಯ ಪ್ರತಿಪಾದನೆ ಅಸಾಧ್ಯವಾಗಿರುತ್ತದೆ.
, 3. ನಿಖರತೆಯ ಕೊರತೆ: ಬೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರಗಳಲ್ಲಿ ಬಳಸಲ್ಪಡುವ ನಿಯಮ ಅಥವ ತತ್ವಗಳು ನಿಖರವಾಗಿರುತ್ತವೆ. ಜಗತ್ತಿನಾದ್ಯಂತ ಏಕರೂಪ ಪರಿಣಾಮ ಬೀರಿ ಸಂದೇಹಗಳಿಗೆ ಆ ತತ್ವಗಳ ಪಾಲನೆ ಅವಕಾಶ ನೀಡುವುದಿಲ್ಲ. ರಾಜ್ಯಶಾಸ್ತ್ರದಲ್ಲಿ ತತ್ವಗಳಿದ್ದರೂ ಅವು ವಿಶಾಲ, ಸುದೀರ್ಘ ಹಾಗು ಆಳವಾಗಿವೆ. ಜೊತೆಗೆ ಇತರೆ ವಿಜ್ಙಾನಗಳ ತತ್ವದಂತೆ ಸ್ಪಷ್ಟತೆ, ಸಾರ್ವತ್ರಿಕತೆ ಅಥವ ಸರ್ವ ಸಮ್ಮತತೆ ಹೊಂದುವಲ್ಲಿ ಸಮರ್ಥವಾಗಿಲ್ಲ. ಉದಾ: ಪ್ರಜಾಪ್ರಭುತ್ವದ ತತ್ವಗಳು ಸರ್ವಮಾನ್ಯವಾಗಿಲ್ಲದಿರುವುದು, ೇಕ ಸದನ ಮತ್ತು ದ್ವೀ ಸದನ ರಚಿಸಿ ಶಾಸಕಾಂಗದ ತತ್ವದ ಪಾಲನೆ ಒಪ್ಪದಿರುವುದು ಇತ್ಯಾದಿ. ಹೀಗೆ ನಿಖರತೆಯ ಕೊರತೆಯಿಂದ ರಾಜ್ಯಶಾಸ್ತ್ರ ಬಳಲುತ್ತಿದೆ.
, 4. ಪ್ರಯೋಗಗಳ ಅಸಾಧ್ಯತೆ: ಬೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದ ವಿಜ್ಙಾನಗಳಲ್ಲಿ ವಸ್ತುಗಳನ್ನು ಬಳಸಿ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ಫಲಿತಾಂಶ ಪಡೆಯಬಹುದಾಗಿದೆ. ಆದರೆ ರಾಜನೀತಿಜ್ಙರು ಪ್ರಯೋಗ ನಡೆಸಲು ವಸ್ತುಗಳ ಬದಲು ಮಾನವರನ್ನು ಬಳಸಬೇಕಾಗುತ್ತದೆ. ಮಾನವರ ಭಾವನೆ ಅಥವ ವರ್ತನೆಗಳನ್ನು ವಸ್ತುವಿನಂತೆ ನಿಯಂತ್ರಿಸಲಾಗದು. ಇದರೊಡನೆ ಪ್ರತಿಯೊಬ್ಬ ಮಾನವ ಭಿನ್ನವಾಗಿದ್ದು ಒಬ್ಬನೇ ವ್ಯಕ್ತಿ ಸಮಯಾನುಸಾರ ಭಿನ್ನವಾಗಿ ವರ್ತಿಸುತ್ತಾನೆ. ಹೀಗಾಗಿ ವಿವಿಧ ವಿಜ್ಙಾನಗಳಲ್ಲಿ ನಡೆಸುವ ಪ್ರಯೋಗಗಳನ್ನು ರಾಜ್ಯಶಾಸ್ತ್ರಜ್ಙರು ನಡೆಸಲು ಸಾಧ್ಯವಿಲ್ಲ.
, 5. ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ: ನೈಸರ್ಗಿಕ ವಿಜ್ಙಾನಗಳ ವಿದ್ಯಾರ್ಥಿಗಳು ಜಾರಿಯಲ್ಲಿರುವ ತತ್ವಗಳನ್ನಾಧರಿಸಿ ಪ್ರಯೋಗಗಳ ವೇಳೆ ನಿರಿಕ್ಷಿತ ಫಲಿತಾಂಶವನ್ನು ಊಹಿಸಬಲ್ಲರು. ಆದರೆ ರಾಜಕೀಯ ಚಟುವಟಿಕೆಗಳನ್ನಾಧರಿಸಿ ರಾಜ್ಯಶಾಸ್ತ್ರದಲ್ಲಿ ತಜ್ಙರು ಭವಿಷ್ಯವನ್ನು ಊಹಿಸಲಾಗದು. ಸಾಮಾಜಿಕ, ಆರ್ಥಿಕ, ಭಾವನಾತ್ಮಕ ಅಂಶಗಳ ಪ್ರಭಾವದಿಂದ ರಾಜಕೀಯ ವಿದ್ಯಮಾನಗಳು ಸದಾ ಚಲನಶೀಲವಾಗಿರುತ್ತವೆ. ಉದಾ: ಚುನಾವಣೆಗಳಲ್ಲಿ ಗೆಲುವು ಖಚಿತವೆಂದವರಿಗೆ ಸೋಲು ಹಾಗು ಸೋಲು ನಿಶ್ಚಿತವೆಂದವರಿಗೆ ಗೆಲುವು ದೊರಕುತ್ತದೆ. ಇದರೊಡನೆ ಅಧಿಕಾರಕ್ಕಾಗಿ ಮಿತ್ರರು ಶತ್ರುಗಳಾಗುವುದು ಹಾಗು ಶತ್ರುಗಳು ಮಿತ್ರರಾಗುವುದು ಊಹೆಗೆ ನಿಲುಕದಂತೆ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿರುತ್ತದೆ. ಆದ್ದರಿಂದ ಭವಿಷ್ಯದ ಊಹೆ ರಾಜ್ಯಶಾಸ್ತ್ರದಲ್ಲಿ ಸಾಮಾನ್ಯವಾಗಿ ನೈಸರ್ಗಿಕ ವಿಜ್ಙಾನಗಳಂತೆ ಘಟಿಸಲಾರದು.
, 6. ಪೂರ್ವಾಗ್ರಹ ಮತ್ತು ವ್ಯಕ್ತಿ ನಿಷ್ಠತೆ: ನೈಸರ್ಗಿಕ ವಿಜ್ಙಾನಗಳಲ್ಲಿ ತಜ್ಙರು ವಸ್ತುನಿಷ್ಟತೆ ಹಾಗು ನಿಶ್ಪಕ್ಷಪಾತತೆ ಅನುಸರಿಸುತ್ತಾರೆ. ಆದರೆ ರಾಜ್ಯಶಾಸ್ತ್ರದಲ್ಲಿ ಪ್ರಮುಖ ಚಿಂತಕರೂ ಸಹ ತಮ್ಮ ಚಿಂತನೆಯನ್ನು ಮಂಡಿಸುವಾಗ ವಸ್ತುನಿಷ್ಟತೆ ಮತ್ತು ನಿಶ್ಪಕ್ಷಪಾತತೆ ಉಲ್ಲಂಘಿಸಿರುವುದನ್ನು ಗುರುತಿಸಬಹುದಾಗಿದೆ. ವಸಾಹತುಶಾಹಿತ್ವ, ರಾಷ್ಟ್ರಿಯತೆ, ಅಲ್ಪಸಂಖ್ಯಾತರು ಇತ್ಯಾದಿ ರಾಜಕೀಯ ಪ್ರಶ್ನೆಗಳನ್ನು ಕುರಿತಂತೆ ರಾಜನೀತಿಜ್ಙರು ಸಾಮಾಜಿಕ, ಆರ್ಥಿಕ ಹಾಗು ಧಾರ್ಮಿಕ ಪೂರ್ವಾಗ್ರಹಕ್ಕೆ ಒಳಗಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಹೀಗಾಗಿ ನೈಸರ್ಗಿಕ ವಿಜ್ಙಾನದ ಸ್ಥಾನಕ್ಕೇರಲು ರಾಜ್ಯಶಾಸ್ತ್ರ ಕಠಿಣವಾಗಿದೆ.
,
, ಈ ಮೇಲೆ ಚರ್ಚಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರವು ವಿಜ್ಙಾನವಲ್ಲ ಬದಲಾಗಿ ಒಂದು ಕಲೆ ಎಂದು ಹಲವು ತಜ್ಙರು ಅಭಿಪ್ರಾಯಪಟ್ಟಿರುವರು. ರಾಜ್ಯಶಾಸ್ತ್ರ ವಿಜ್ಙಾನವಲ್ಲ ಎಂಬುದನ್ನು ಜೆ. ಎಸ್. ಮಿಲ್ ಮುಂತಾದ ಚಿಂತಕರು ಬೆಂಬಲಿಸಿದ್ದಾರೆ. ಈ ಗುಂಪಿನ ರಾಜನೀತಿಜ್ಙರು ರಾಜಕೀಯ ವಿದ್ಯಮಾನಗಳನ್ನು ನೈತಿಕ ತತ್ವಗಳನ್ನಾಧರಿಸಿ ಚರ್ಚಿಸುತ್ತಾರೆ. ಇದರೊಡನೆ ಮೌಲ್ಯಗಳಲ್ಲಿನ ದೋಷಗಳಿಂದಲೂ ರಾಜ್ಯಶಾಸ್ತ್ರ ಅನಿಶ್ಚಿತ ಮತ್ತು ನಿಖರವಲ್ಲದ ವಿಷಯವೆಂದು ಪರಿಗಣಿಸಲ್ಪಟ್ಟಿದೆ. ಒಟ್ಟಾರೆ ರಾಜ್ಯಶಾಸ್ತ್ರ ಒಂದು ವಿಜ್ಙಾನದ ಬದಲು ಕಲೆಯ ಸ್ವರೂಪ ಹೊಂದಿರುವುದೆಂದು ಪರಿಗಣಿಸಲ್ಪಟ್ಟಿದೆ.
,
, ರಾಜ್ಯಶಾಸ್ತ್ರ ಕಲೆಯಲ್ಲ, ಒಂದು ವಿಜ್ಙಾನ: ಸರಳಾರ್ಥದಲ್ಲಿ ಕ್ರಮಬದ್ಧವಾದ ಜ್ಙಾನವನ್ನು ವಿಜ್ಙಾನ ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಅವಲೋಕನದೊಡನೆ ಪ್ರಯೋಗಕ್ಕೊಳಪಡಿಸಿ, ವಿಮರ್ಷಾತ್ಮಕವಾಗಿ ಪರೀಕ್ಷಿಸಿ, ಸಾರ್ವತ್ರಿಕವಾಗಿ ಅನ್ವಯಿಸಬಲ್ಲ ವ್ಯವಸ್ಥಿತ ಜ್ಙಾನವನ್ನು ವಿಜ್ಙಾನ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಜ್ಙಾನವು ನಿಖರ ನಿಯಮಗಳು ಹಾಗು ತತ್ವಗಳನ್ನು ಆಧರಿಸಿರುತ್ತದೆ. ವಿಜ್ಙಾನಿಯು ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು, ಅಂಕಿ ಅಂಶಗಳನ್ನು ಸಂಗ್ರಹಿಸಿ, ಪ್ರಾಕಲ್ಪನೆಗಳನ್ನು ರಚಿಸಿಕೊಂಡು, ಸತ್ಯಾಂಶಗಳ ವರ್ಗೀಕರಣದೊಡನೆ ಫಲಿತಾಂಶದ ನೈಜತೆಯನ್ನು ವಿಶ್ಲೇಶಿಸುತ್ತಾ, ಅವಲೋಕನದೊಡನೆ ಪ್ರಯೋಗ ನಡೆಸಿ ತತ್ವಗಳನ್ನು ರಚಿಸುತ್ತಾನೆ. ಗಮನಿಸಬೇಕಾದ ಅಂಶವೇನೆಂದರೆ ರಾಜ್ಯಶಾಸ್ತ್ರವೂ ಸಹ ವಿಜ್ಙಾನದ ಸ್ವರೂಪ ಹೊಂದಿದೆ ಎಂಬುದನ್ನು ಬಹಳ ಹಿಂದೆಯೇ ಅರಿಸ್ಟಾಟಲ್ ಪ್ರತಿಪಾದಿಸಿರುವ. ಆತ ರಾಜ್ಯಶಾಸ್ತ್ರವನ್ನು ಶ್ರೇಷ್ಠ ವಿಜ್ಙಾನ ಎಂಬುದಾಗಿ ವ್ಯಾಖ್ಯಾನಿಸಿದ್ದನು. ಕೆಳಗಿನ ಅಂಶಗಳ ನೆರವಿನಿಂದ ರಾಜ್ಯಶಾಸ್ತ್ರ ಹೊಂದಿರುವ ವಿಜ್ಙಾನದ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ.
, 1. ಕ್ರಮಬದ್ಧ ಅಧ್ಯಯನದ ಸಾಧ್ಯತೆ: ನೈಸರ್ಗಿಕ ವಿಜ್ಙಾನಗಳಂತೆ ರಾಜ್ಯಶಾಸ್ತ್ರದಲ್ಲಿಯೂ ವೈಜ್ಙಾನಿಕ ತತ್ವಗಳನ್ನು ಬಳಸಿ ಅಧ್ಯಯನ ನಡೆಸಬಹುದಾಗಿದೆ. ಅವಲೋಕನ, ಮಾಹಿತಿ ಸಂಗ್ರಹ, ಪ್ರಯೋಗ, ಸಂಶೋಧನಾತ್ಮಕ ಸತ್ಯಾನ್ವೇಷಣೆಗೆ ರಾಜ್ಯಶಾಸ್ತ್ರದಲ್ಲೂ ಅವಕಾಶಗಳಿವೆ. ಕಾರಣ ಹಾಗು ಪರಿಣಾಮಗಳ ನಡುವೆ ಸಂಪರ್ಕ ಸ್ಥಾಪಿಸಿ ಅಧ್ಯಯನ ನಡೆಸಬಹುದಾಗಿದೆ. ಉದಾ: ಜನ ವಿರೋಧಿ ಕಾರಣಗಳನ್ನು ಆಧರಿಸಿ ರಾಜಕೀಯ ಪಕ್ಷಗಳ ಸೋಲಿನ ಪರಿಣಾಮವನ್ನು ಗುರುತಿಸಬಹುದಾಗಿದೆ.
, 2. ಸೀಮಿತ ಪ್ರಯೋಗಗಳಿಗೆ ಅವಕಾಶ: ನೈಸರ್ಗಿಕ ವಿಜ್ಙಾನಗಳಲ್ಲಿ ಸಹಜವಾಗಿರುವ ಪ್ರಯೋಗಗಳನ್ನು ರಾಜ್ಯಶಾಸ್ತ್ರದಲ್ಲಿಯೂ ಸೀಮಿತವಾಗಿ ಕೈಗೊಳ್ಳಲು ಸಾಧ್ಯವಿದೆ. ಪ್ರಯೋಗಾಲಯಗಳಲ್ಲಿ ರಾಜಕೀಯ ವಿದ್ಯಮಾನಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ದೇಶದ ಜನರ ಮೇಲೆ ರಾಜಕೀಯ ಪ್ರಯೋಗಗಳನ್ನು ನಡೆಸಲಾಗುತ್ತದೆ. ಉದಾ: ಸ್ವಿಟ್ಜರ್ಲ್ಯಾಂಡ್ನಲ್ಲಿ ಪ್ರಜಾ ನಿರ್ಧಾರದಂತಹ ಪ್ರತ್ಯಕ್ಷ ಪ್ರಜಾಪ್ರಭುತ್ವದ ಪ್ರಯೋಗ, ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು ತಡೆಯಲು ಜನತಾ ಪಕ್ಷದ ರಚನೆಯ ಪ್ರಯೋಗ, ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಇತ್ಯಾದಿ.
, 3. ಸಾಮಾನ್ಯ ತತ್ವಗಳಿಗೆ ಆಸ್ಪದ: ರಾಜ್ಯಶಾಸ್ತ್ರದಲ್ಲೂ ಇತರ ವಿಜ್ಙಾನಗಳಂತೆ ಸಾಮಾನ್ಯ ತತ್ವಗಳನ್ನು ಗುರುತಿಸಬಹುದಾಗಿದೆ. ಈ ತತ್ವಗಳು ಸರ್ವ ರಾಜಕೀಯ ವಿದ್ಯಮಾನಗಳಿಗೆ ಅನ್ವಯಿಸದಿದ್ದರೂ ರಾಜಕೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುತ್ತವೆ. ಉದಾ: ಸರ್ಕಾರಿ ನೌಕರರ ರಾಜಕೀಯ ತಾಟಸ್ತ್ಯ, ಅಲ್ಪ ವಯಸ್ಕರರು ಮತದಾನಕ್ಕೆ ಅನರ್ಹರು, ನ್ಯಾಯಾಧೀಶರ ನಿಶ್ಪಕ್ಷಪಾತತೆ ಮುಂತಾದ ಸಾಮಾನ್ಯ ತತ್ವಗಳನ್ನು ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಗುರುತಿಸಬಹುದು. ಅಲ್ಲದೇ ಗಣಿತಶಾಸ್ತ್ರದಂತೆ ಕೋರಂ ನಿಗಧಿ, ಬಹುಮತ ಗಳಿಕೆ, ಶಾಸನಗಳ ಅಂಗೀಕಾರ, ರಾಷ್ಟ್ರಪತಿ ಚುನಾವಣೆ ಮುಂತಾದವುಗಳಲ್ಲಿ ಕೆಲವು ಸೂತ್ರಗಳನ್ನು ಗಮನಿಸಬಹುದಾಗಿದೆ.
, 4. ಭವಿಷ್ಯ ಊಹಿಸಲು ಅನುವು: ರಾಜ್ಯಶಾಸ್ತ್ರದಲ್ಲಿಯೂ ಸಮಕಾಲಿನ ಚಿಂತಕರು ರಾಜಕೀಯ ವಿದ್ಯಮಾನಗಳ ಭವಿಷ್ಯ ಊಹಿಸಲು ಶಕ್ತರಾಗಿದ್ದಾರೆ. ವೈಜ್ಙಾನಿಕ ತಂತ್ರಗಳನ್ನು ಬಳಸಿ ಮತದಾನ ಪೂರ್ವ ಹಾಗು ಮತದಾನೋತ್ತರ ಚುನಾವಣಾ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ರಾಜನೀತಿಜ್ಙರು ಊಹಿಸುತ್ತಾರೆ. ವಿಜ್ಙಾನಿಯಂತೆ ಸಮಸ್ಯೆ ಗುರುತಿಸಿ, ಮಾಹಿತಿ ಸಂಗ್ರಹಿಸಿ, ವರ್ಗೀಕರಣದೊಡನೆ ಅವಲೋಕಿಸಿ ಅಂತಿಮ ತೀರ್ಮಾನ ಪ್ರಕಟಿಸಲು ರಾಜನೀತಿಜ್ಙ ಪ್ರಸ್ತುತ ಶಕ್ತನಾಗಿರುವ. ಉದಾ: ರಾಜಕೀಯ ಪಕ್ಷಗಳ ಉಗಮ, ಪ್ರತ್ಯೇಕ ರಾಜ್ಯದ ಬೇಡಿಕೆ, ಸಂಮಿಶ್ರ ಸರ್ಕಾರಗಳ ವಿಫಲತೆ ಮುಂತಾದವುಗಳನ್ನು ವೈಜ್ಙಾನಿಕವಾಗಿ ಅಧ್ಯಯನ ನಡೆಸಿ ಊಹಿಸಲು ಅವಕಾಶಗಳಿವೆ.
,
, ಒಟ್ಟಿನಲ್ಲಿ ರಾಜ್ಯಶಾಸ್ತ್ರವನ್ನು ವಿಜ್ಙಾನವಲ್ಲ ಎಂದು ನಿರಾಕರಿಸುವುದು ಅಥವ ಪರಿಪೂರ್ಣ ವಿಜ್ಙಾನವೆಂದು ಪರಿಗಣಿಸುವುದು ಕಷ್ಟಕರ ಸಂಗತಿ. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರವನ್ನು ನಿಖರವಲ್ಲದ ಸಮಾಜ ವಿಜ್ಙಾನ ಎಂಬುದಾಗಿ ಪರಿಗಣಿಸಬಹುದಾಗಿದೆ. ರಾಜನೀತಿಜ್ಙರೂ ಸಹ ರಾಜಶಾಸ್ತ್ರವನ್ನು ಪರಿಪೂರ್ಣ ವಿಜ್ಙಾನ ಎಂಬುದಾಗಿ ಸಮರ್ಥಿಸಲು ಸಿದ್ಧರಿಲ್ಲ. ಆದ್ದರಿಂದಲೇ ಫೆಡ್ರಿಕ್ ಪೊಲಾಕ್ ನೈತಿಕ ವಿಜ್ಙಾನ, ಬರ್ಕ್ ಎಸ್ತಟಿಕ್ ವಿಜ್ಙಾನ ಮತ್ತು ಬ್ರೈಸ್ eteorologyಂತೆ ನಿಖರವಲ್ಲದ ನೈಸರ್ಗಿಕ ವಿಜ್ಙಾನ ಎಂಬುದಾಗಿ ರಾಜ್ಯಶಾಸ್ತ್ರವನ್ನು ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರ ಕಲೆ ಎಂಬುದು ಸುಸ್ಪಷ್ಟ. ವಿಜ್ಙಾನವಾಗಿ ತತ್ವಗಳನ್ನು ರಚಿಸಲು ನೆರವಾಗುವ ರಾಜ್ಯಶಾಸ್ತ್ರ ಕಲೆಯಾಗಿ ಅವುಗಳನ್ನು ಅಸ್ತಿತ್ವಕ್ಕೆ ತರಲು ಸಹಕಾರಿಯಾಗಿದೆ. ಆದ್ದರಿಂದ ರಾಜ್ಯಶಾಸ್ತ್ರ ಕಲೆ ಮತ್ತು ವಿಜ್ಙಾನಗಳ ಸ್ವರೂಪವನ್ನು ಮೈಗೂಡಿಸಿಕೊಂಡ ವಿಷಯವಾಗಿದೆ ಎನ್ನಬಹುದು.
,
, ರಾಜ್ಯಶಾಸ್ತ್ರದ ವ್ಯಾಪ್ತಿ: ವ್ಯಾಪ್ತಿ ಎಂದರೆ ಪದಶಃ ಗಡಿ, ಸೀಮೆ, ಎಲ್ಲೆ ಎಂದಾಗುತ್ತದೆ. ಒಂದು ವಿಷಯದ ಅಧ್ಯಯನವು ಒಳಗೊಂಡಿರುವ ವಿಷಯ ವಸ್ತುವನ್ನು ಸೂಚಿಸಲು ವ್ಯಾಪ್ತಿ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ದಿಷ್ಟ ವಿಷಯವೊಂದರ ಜ್ಙಾನದ ಗಡಿಯನ್ನು ಆ ವಿಷಯದ ವ್ಯಾಪ್ತಿ ನಿರ್ಧರಿಸುತ್ತದೆ. ರಾಜ್ಯಶಾಸ್ತ್ರ ವಿಷಯದ ಗಡಿ ಅಥವ ವ್ಯಾಪ್ತಿಯಲ್ಲಿ ಯಾವೆಲ್ಲ ಅಂಶಗಳಿರಬೇಕೆಂಬ ವಿಚಾರವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ರಾಜ್ಯಶಾಸ್ತ್ರದ ವ್ಯಾಪ್ತಿ ಕುರಿತಂತೆ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಮತ್ತು ಆಧುನಿಕ ದೃಷ್ಟಿಕೋನಗಳನ್ನು ಅರಿತುಕೊಂಡಾಗ ಅದರ ವ್ಯಾಪ್ತಿ ಮನವರಿಕೆಯಾಗುತ್ತದೆ.
,
, ಸಾಂಪ್ರದಾಯಿಕ ದೃಷ್ಟಿಕೋನ: ರಾಜ್ಯಶಾಸ್ತ್ರದ ವ್ಯಾಪ್ತಿ ಕುರಿತಾದ ಈ ದೃಷ್ಟಿಕೋನವು ಅತ್ಯಂತ ಸೀಮಿತವಾಗಿದೆ. ರಾಜ್ಯಶಾಸ್ತ್ರವು ಕೇವಲ ರಾಜ್ಯ ಮತ್ತು ಸರ್ಕಾರಗಳ ಅಧ್ಯಯನ ವಿಷಯವೆಂದು ಸಾಂಪ್ರದಾಯಿಕ ದೃಷ್ಟಿಕೋನವು ಪರಿಗಣಿಸಿದೆ. ಅದರಲ್ಲೂ ಚಿಂತಕರ ಮೂರು ಗುಂಪುಗಳನ್ನು ಕಾಣಬಹುದಾಗಿದ್ದು ಪ್ರತಿಯೊಂದು ಗುಂಪಿನ ಚಿಂತಕರು ನಿರ್ದಿಷ್ಟ ವಿಷಯಕ್ಕೆ ಮಾತ್ರ ಬೆಂಬಲ ನೀಡಿರುವರು. ಆ ಕುರಿತಂತೆ ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ.
, 1. ರಾಜ್ಯದ ಅಧ್ಯಯನ: ಗ್ಯಾರಿಸ್, ಗುಡ್ನೌ, ಗಾರ್ನರ್ ಹಾಗು ಬ್ಲಂಟ್ಷ್ಲಿಯಂತಹ ಚಿಂತಕರು ರಾಜ್ಯಶಾಸ್ತ್ರದ ವ್ಯಾಪ್ತಿಯನ್ನು ರಾಜ್ಯದ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಇವರನ್ವಯ ರಾಜ್ಯದ ಉಗಮ, ಸ್ವರೂಪ, ಉದ್ದೇಶ, ಕಾರ್ಯಗಳು ಮಾತ್ರ ರಾಜ್ಯಶಾಸ್ತ್ರದ ವಿಷಯ ವಸ್ತುಗಳೆನಿಸಿದವು. ಈ ಗುಂಪಿನ ಚಿಂತಕರು ರಾಜ್ಯವೇ ರಾಜ್ಯಶಾಸ್ತ್ರದ ಕೇಂದ್ರ ಬಿಂದು ಎಂಬುದನ್ನು ಪ್ರತಿಪಾದಿಸಿ ರಾಜ್ಯದ ಸಾಧನವಾದ ಸರ್ಕಾರವನ್ನು ಕಡೆಗಣಿಸಿದ್ದರು.
, 2. ಸರ್ಕಾರದ ಅಧ್ಯಯನ: ಜಾನ್ ಸೀಲೆ ಹಾಗು ಸ್ಟೀಫನ್ ಲಿಕಾಕ್ ರಾಜ್ಯಶಾಸ್ತ್ರವು ಕೇವಲ ಸರ್ಕಾರಕ್ಕೆ ಸಂಬಂಧಿಸಿದ ವಿಷಯವೆಂದು ಪ್ರತಿಪಾದಿಸಿದರು. ಇವರನ್ವಯ ಸರ್ಕಾರದ ಮಾದರಿಗಳು, ಅಂಗಗಳು, ಅವುಗಳ ರಚನೆ, ಕಾರ್ಯಗಳು ಮುಂತಾದ ಸರ್ಕಾರ ಸಂಬಂಧಿತ ಅಂಶಗಳು ಮಾತ್ರ ರಾಜ್ಯಶಾಸ್ತ್ರದ ವಿಷಯ ವಸ್ತುಗಳೆನಿಸುತ್ತವೆ. ಈ ಗುಂಪಿನ ಚಿಂತಕರು ಸರ್ಕಾರಕ್ಕೆ ಒಡೆಯನ ರೂಪದಲ್ಲಿರುವ ರಾಜ್ಯವನ್ನೇ ರಾಜ್ಯಶಾಸ್ತ್ರದ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ಗಮನಿಸಬಹುದಾಗಿದೆ.
, 3. ರಾಜ್ಯ ಮತ್ತು ಸರ್ಕಾರದ ಅಧ್ಯಯನ: ಆರ್. ಜೆ. ಗೆಟಲ್, ಗಿಲ್ಕ್ರೈಸ್ಟ್, ಪಾಲ್ ಜಾನೆಟ್, ಎಚ್, ಜೆ, ಲಾಸ್ಕಿ ಮುಂತಾದ ಮೂರನೇ ಗುಂಪಿನ ಚಿಂತಕರು ರಾಜ್ಯಶಾಸ್ತ್ರದ ವ್ಯಾಪ್ತಿ ರಾಜ್ಯ ಮತ್ತು ಸರ್ಕಾರಗಳೆರಡರ ಅಧ್ಯಯನವನ್ನು ಒಳಗೊಂಡಿದೆ ಎಂಬುದಾಗಿ ನಂಬುತ್ತಾರೆ. ಇವರನ್ವಯ ರಾಜ್ಯ ಮತ್ತು ಸರ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯವೆಂಬ ಹಡಗಿಗೆ ಸರ್ಕಾರ ದಿಕ್ಸೂಚಿಯಂತಿದ್ದು ವಾಸ್ತವದಲ್ಲಿ ಸರ್ಕಾರವೇ ರಾಜ್ಯವನ್ನು ಪ್ರತಿನಿಧಿಸುತ್ತದೆ. ರಾಜ್ಯವು ರಾಜ್ಯಶಾಸ್ತ್ರದ ಕೇಂದ್ರ ಬಿಂದುವಾಗಿದ್ದು ಸರ್ಕಾರದ ಯಂತ್ರವು ಸತತವಾಗಿ ರಾಜ್ಯದೊಡನೆ ಸಾಗುತ್ತದೆ. ಈ ಗುಂಪಿನ ಚಿಂತಕರ ವಿವರಣೆಯನ್ನು ಬಹುತೇಕರು ಸಮ್ಮತಿಸುತ್ತಾರೆ.
,
, ರಾಜ್ಯಶಾಸ್ತ್ರವು ಅತ್ಯಂತ ಹಳೆಯ ಸಮಾಜ ವಿಜ್ಙಾನಗಳಲ್ಲಿ ಒಂದಾಗಿದ್ದು ಮೇಲಿನ ಸಾಂಪ್ರದಾಯಿಕ ದೃಷ್ಟಿಕೋನದಿಂದ ಮಾತ್ರ ಅದರ ವ್ಯಾಪ್ತಿಯನ್ನು ಅರಿಯಲಾಗದು. ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೆ ಅನೇಕ ತಜ್ಙರು ಮಾನವನ ರಾಜಕೀಯ ಚಟುವಟಿಕೆ ಹಾಗು ವಿದ್ಯಮಾನಗಳನ್ನು ಚರ್ಚಿಸಿದ್ದು ರಾಜ್ಯಶಾಸ್ತ್ರದ ವ್ಯಾಪ್ತಿಗೆ ಇಂಬು ನೀಡಿದ್ದಾರೆ. ರಾಜ್ಯಶಾಸ್ತ್ರದ ವ್ಯಾಪ್ತಿಯು ವಿಶಾಲವಾಗಿದ್ದು ನಿರಂತರವಾಗಿ ಇಂದಿಗೂ ವಿಖಾಸಗೊಳ್ಳುತ್ತಲಿದೆ.
,
, ಆಧುನಿಕ ದೃಷ್ಟಿಕೋನ: ರಾಜ್ಯಶಾಸ್ತ್ರದ ವ್ಯಾಪ್ತಿ ಕುರಿತಾದ ಈ ದೃಷ್ಟಿಕೋನವು ಅತ್ಯಂತ ವಿಶಾಲವಾಗಿದೆ. ರಾಜ್ಯ ಮತ್ತು ಸರ್ಕಾರಗಳೊಡನೆ ಮಾನವನ ರಾಜಕೀಯ ಜೀವನವನ್ನು ಪ್ರಭಾವಿಸುವ ಸಮಸ್ತ ವಿಷಯಗಳನ್ನು ಆಧುನಿಕ ದೃಷ್ಟಿಕೋನವು ರಾಜ್ಯಶಾಸ್ತ್ರದ ವ್ಯಾಪ್ತಿಗೆ ಪರಿಗಣಿಸುತ್ತದೆ. 1948 ರಲ್ಲಿ ಯುನೆಸ್ಕೊದಿಂದ ಅಂತರರಾಷ್ಟ್ರಿಯ ರಾಜ್ಯಶಾಸ್ತ್ರ ಸಂಘಟನೆಯ ಕರಡನ್ನು ರಚಿಸಲು ಸಮಿತಿಯೊಂದನ್ನು ಸ್ಥಾಪಿಸಲಾಯಿತು. ಈ ಸಮೀತಿಯು ರಾಜ್ಯಶಾಸ್ತ್ರ ವಿಷಯದ ವ್ಯಾಪ್ತಿಗೊಳಪಡಬಲ್ಲ ವಸ್ತು ವಿಷಯಗಳ ಪಟ್ಟಿಯೊಂದನ್ನು ನೀಡಿತು. ಆ ಪಟ್ಟಿಯನ್ವಯ ರಾಜ್ಯಶಾಸ್ತ್ರದ ವ್ಯಾಪ್ತಿಗೊಳಪಡುವ ಆಧುನಿಕ ದೃಷ್ಟಿಕೋನದ ವಿಷಯ ವಸ್ತುವನ್ನು ಸರಳವಾಗಿ ಕೆಳಗಿನಂತೆ ಕಾಣಬಹುದಾಗಿದೆ.
, 1. ರಾಜಕೀಯ ಸಿದ್ಧಾಂತ: ರಾಜ್ಯಶಾಸ್ತ್ರವು ಪ್ರಧಾನವಾಗಿ ರಾಜ್ಯದ ಉಗಮ, ಸ್ವರೂಪ, ಉದ್ದೇಶ, ಕಾರ್ಯಗಳನ್ನು ಕುರಿತ ವೈವಿಧ್ಯಮಯ ರಾಜಕೀಯ ಸಿದ್ಧಾಂತಗಳ ವಿವರಣೆಯನ್ನು ಒಳಗೊಂಡಿದೆ. . ಇಲ್ಲಿ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳಿಗೆ ಸಂಬಂಧಿಸಿದ ಸಿದ್ಧಾಂತಗಳು ಮತ್ತು ಪ್ರಜಾಪ್ರಭುತ್ವ, ಸಮಾಜವಾದ, ಸಮತಾವಾದ, ಅರಾಜಕತಾವಾದ, ವ್ಯಕ್ತಿವಾದ, ಮಹಿಳಾವಾದ, ಸಮುದಾಯವಾದದಂತಹ ರಾಜಕೀಯ ಸಿದ್ಧಾಂತಗಳ ಅಧ್ಯಯನ ಕಂಡು ಬರುತ್ತದೆ.
, 2. ಸರ್ಕಾರ: ರಾಜ್ಯಶಾಸ್ತ್ರವು ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಳ್ಳುತ್ತದೆ. ಸರ್ಕಾರದ ಅಂಗಗಳು ಅಂದರೆ ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗಗಳ ರಚನೆ ಮತ್ತು ಕಾರ್ಯಗಳನ್ನು ವಿವರಿಸುತ್ತದೆ. ಜೊತೆಗೆ ಸರ್ಕಾರದ ಮಾದರಿಗಳು ಅಂದರೆ ಸಂಸಧೀಯ, ಅಧ್ಯಕ್ಷೀಯ, ಸರ್ವಾಧಿಕಾರಿ, ಪ್ರಜಾಪ್ರಭುತ್ವ, ಏಕಾತ್ಮಕ ಹಾಗು ಸಂಯುಕ್ತ ಮಾದರಿ ಸರ್ಕಾರಗಳ ವಿವರಣೆಯನ್ನು ಹೊಂದಿರುತ್ತದೆ.
, 3. ರಾಜಕೀಯ ಸಂಸ್ಥೆಗಳು: ರಾಜ್ಯಶಾಸ್ತ್ರದ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಸಂಸ್ಥೆಗಳನ್ನು ಗುರುತಿಸಬಹುದಾಗಿದೆ. ಸಂವಿಧಾನ ಅದರಲ್ಲೂ ಲಿಖಿತ, ಅಲಿಖಿತ, ನಮ್ಯ ಹಾಗು ಸಂವಿಧಾನಗಳ ಅಧ್ಯಯನ ಸೇರಿರುತ್ತದೆ. ಜೊತೆಗೆ ಸರ್ಕಾರ ಅಂದರೆ ರಾಷ್ಟ್ರ, ಪ್ರಾಂತ್ಯ ಹಾಗು ಸ್ಥಳೀಯ ಮಟ್ಟದ ಸರ್ಕಾರಗಳನ್ನು ರಾಜ್ಯಶಾಸ್ತ್ರ ಒಳಗೊಳ್ಳುತ್ತದೆ. ಇದರೊಡನೆ ಒತ್ತಡ ಗುಂಪುಗಳು, ಸಾರ್ವಜನಿಕ ಅಭಿಪ್ರಾಯದ ನಿಯೋಗಿಗಳು, ಆಡಳಿತ ಸೇವಾ ವರ್ಗ, ತೌಲುನಿಕ ಸರ್ಕಾರಿ ಸಂಸ್ಥೆಗಳು ಇದರೊಳಗೆ ಕಂಡು ಬರುತ್ತವೆ.
, 4. ಅಂತರರಾಷ್ಟ್ರಿಯ ಸಂಬಂಧಗಳು: ರಾಜ್ಯಶಾಸ್ತ್ರದ ಅಧ್ಯಯನವು ದೇಶ ದೇಶಗಳ ನಡುವಿನ ಸಂಬಂಧಗಳನ್ನು ಒಳಗೊಳ್ಳುತ್ತದೆ. ಅಂದರೆ ದೇಶಗಳ ನಡುವಿನ ವಿವಾದ, ಒಪ್ಪಂದ ಮತ್ತು ವೈವಿಧ್ಯಮಯ ಸಂಬಂಧಗಳನ್ನು ರಾಜ್ಯಶಾಸ್ತ್ರವು ಆವರಿಸುತ್ತದೆ. ಇದರೊಡನೆ ಯುದ್ಧ, ರಾಯಭಾರ, ನಿಶಸ್ತ್ರೀಕರಣ, ಸಾಮೂಹಿಕ ಭದ್ರತೆ, ಶಕ್ತಿ ಸಮತೋಲನ, ಅಂತರರಾಷ್ಟ್ರಿಯ ಶಾಂತಿಯ ಮಾರ್ಗೋಪಾಯಗಳನ್ನು ರಾಜ್ಯಶಾಸ್ತ್ರದ ಅಧ್ಯಯನ ಒಳಗೊಂಡಿರುತ್ತದೆ. ಜೊತೆಗೆ ವಿಶ್ವ ಸಂಸ್ಥೆ ಮತ್ತು ವಿವಿಧ ಪ್ರಾದೇಶಿಕ ಸಂಸ್ಥೆಗಳ ಅಧ್ಯಯನವನ್ನು ಪ್ರತಿನಿಧಿಸುತ್ತದೆ.
,
, ಗಮನಿಸಬೇಕಾದ ಅಂಶವೇನೆಂದರೆ ರಾಜ್ಯಶಾಸ್ತ್ರದ ವಿಷಯ ವಸ್ತುವನ್ನು ಸರ್ ಫೆಡ್ರಿಕ್ ಪೊಲಾಕ್ ಸೈದ್ಧಾಂತಿಕ ರಾಜಕೀಯ ಮತ್ತು ಪ್ರಾಯೋಗಿಕ ರಾಜಕೀಯ ಎಂಬುದಾಗಿ ವರ್ಗೀಕರಿಸಿ ವಿವರಿಸಿದ್ದರು. ಅಂತೆಯೇ ಎಚ್. ಜೆ. ಮಾರ್ಗೆಂಥೊ ರಾಜಕೀಯ ಸಮಾಜಶಾಸ್ತ್ರ, ರಾಜಕೀಯ ಸಿದ್ಧಾಂತ ಹಾಗು ರಾಜಕೀಯ ಸಂಸ್ಥೆಗಳೆಂಬ ಮೂರು ಕ್ಷೇತ್ರಗಳನ್ನು ರಾಜ್ಯಶಾಸ್ತ್ರದ ವ್ಯಾಪ್ತಿ ಆಧರಿಸಿದೆ ಎಂದಿರುವರು. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ವ್ಯಾಪ್ತಿಯು ಚಿಂತಕರ ಚಿಂತನೆಯಲ್ಲಿ ಮೂಡಿದ ಸೈದ್ಧಾಂತಿಕ ಅಂಶಗಳೊಡನೆ ಪ್ರಾಯೋಗಿಕ ಅಂಶಗಳನ್ನು ಸಮ ಪ್ರಮಾಣದಲ್ಲಿ ಹೊಂದುವಂತಾಗಿದೆ. ಇದರೊಡನೆ ಪ್ರಸ್ತುತ ರಾಜ್ಯಶಾಸ್ತ್ರ ಅನಿವಾರ್ಯವಾಗಿ ಕೆಲವು ಕ್ಷೇತ್ರಗಳೊಡನೆ ವರ್ತಿಸಬೇಕಾಗಿದ್ದುದರಿಂದ ಹಸಿರು ರಾಜಕಾರಣ, ರಾಜಕೀಯ ಅರ್ಥಶಾಸ್ತ್ರ, ರಾಜಕೀಯ ಸಮಾಜಶಾಸ್ತ್ರದಂತಹ ನವೀನ ವಿಷಯ ವಸ್ತುಗಳು ರಾಜ್ಯಶಾಸ್ತ್ರದ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತಿವೆ. ಅಲ್ಲದೇ ಅಂತರರಾಷ್ಟ್ರಿಯ ಸಂಬಂಧಗಳು, ಸಾರ್ವಜನಿಕ ಆಡಳಿತ, ಹೋಲಿಕಾ ಸರ್ಕಾರ ಮತ್ತು ರಾಜಕೀಯದಂತಹ ರಾಜ್ಯಶಾಸ್ತ್ರದ ಶಾಖೆಗಳಲ್ಲಿನ ಬೆಳವಣಿಗೆಗಳು ರಾಜ್ಯಶಾಸ್ತ್ರದ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿವೆ.
,
, ಒಟ್ಟಾರೆ ರಾಜ್ಯಶಾಸ್ತ್ರವು ನಿಂತ ನೀರಾಗಿರದೇ ಹರಿಯುತ್ತಿರುವ ನೀರಿನಂತೆ. ಹೀಗಾಗಿ ಪ್ರಾಚೀನ ಗ್ರೀಕರ ಕಾಲದಿಂದ ವಿವಿಧ ಹಂತಗಳಲ್ಲಿ ವಿಖಾಸಗೊಳ್ಳುತ್ತಾ ಬಂದಿದೆ. ಸಮಕಾಲಿನ ಜಗತ್ತಿನಲ್ಲೂ ನವೀನ ವಿಷಯಗಳನ್ನು ಮೈಗೂಡಿಸಿಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಆದ್ದರಿಂದ ರಾಜ್ಯಶಾಸ್ತ್ರದ ವ್ಯಾಪ್ತಿಯನ್ನು ನಿಖರವಾಗಿ ಗುರುತಿಸುವುದು ಕಷ್ಟದ ವಿಷಯ. ಮೇಲೆ ಚರ್ಚಿಸಲ್ಪಟ್ಟ ಸಾಂಪ್ರದಾಯಿಕ ಮತ್ತು ಆಧುನಿಕ ದೃಷ್ಟಿಕೋನಗಳ ನೆರವಿನಿಂದ ರಾಜ್ಯಶಾಸ್ತ್ರದ ವ್ಯಾಪ್ತಿಯನ್ನು ಪರಿಪೂರ್ಣವಾಗಿ ಅಲ್ಲದಿದ್ದರೂ ಒಂದು ಹಂತಕ್ಕೆ ಮನವರಿಕೆ ಮಾಡಿಕೊಳ್ಳಬಹುದಾಗಿದೆ.
,
, ರಾಜ್ಯಶಾಸ್ತ್ರದ ಮಹತ್ವ: ಪ್ರತಿಯೊಂದು ಅಧ್ಯಯನ ವಿಷಯವು ತನ್ನದೇ ಉಪಯುಕ್ತತೆಗಳಿಂದ ಮಹತ್ವ ಹೊಂದಿರುತ್ತದೆ. ಇದಕ್ಕೆ ರಾಜ್ಯಶಾಸ್ತ್ರವೂ ಹೊರತಾಗಿಲ್ಲ. ಸಮಾಜ ವಿಜ್ಙಾನಗಳಲ್ಲಿ ಪ್ರಧಾನವಾಗಿರುವ ರಾಜ್ಯಶಾಸ್ತ್ರವು ಮಾನವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶಗಳ ಆಗರವಾಗಿದ್ದು ವ್ಯಕ್ತಿ ಹಾಗು ಸಮಾಜದ ಪ್ರಗತಿಗೆ ಅಮೂಲ್ಯವಾದ ಕೊಡುಗೆ ನೀಡಿದೆ. ಆದ್ದರಿಂದಲೇ ಜಾರ್ಜ್ ಬರ್ನಾರ್ಡ್ ಷಾ ನಾಗರೀಕತೆಯನ್ನು ರಕ್ಷಿಸಬಲ್ಲ ಏಕಮಾತ್ರ ಅಧ್ಯಯನ ವಿಷಯವೆಂದು ರಾಜ್ಯಶಾಸ್ತ್ರವನ್ನು ಬಣ್ಣಿಸಿದ್ದಾರೆ. ರಾಜ್ಯಶಾಸ್ತ್ರ ಅಧ್ಯಯನದ ಕೆಳಗಿನ ಉಪಯುಕ್ತತೆಗಳು ಅದರ ಮಹತ್ವವನ್ನು ಸ್ಪಷ್ಟಪಡಿಸುತ್ತವೆ..
, 1. ರಾಜ್ಯ ಮತ್ತು ಸರ್ಕಾರದ ತಿಳುವಳಿಕೆ: ರಾಜ್ಯಶಾಸ್ತ್ರದ ಅಧ್ಯಯನವು ಓದುಗರಿಗೆ ರಾಜ್ಯ ಮತ್ತು ಸರ್ಕಾರಗಳ ಸ್ಪಷ್ಟ ಪರಿಕಲ್ಪನೆ ಹೊಂದಲು ಸಹಕಾರಿಯಾಗಿದೆ. ಪ್ರತಿಯೊಬ್ಬ ಮಾನವ ರಾಜ್ಯವನ್ನು ಬಿಟ್ಟು ಬಾಳಲಾರ. ಇಷ್ಟವಿರಲಿ ಅಥವ ಇಲ್ಲದಿರಲಿ ನಿರ್ದಿಷ್ಟ ರಾಜ್ಯದೊಡನೆ ವ್ಯಕ್ತಿ ಸಂಬಂಧ ಪಡೆದಿರಲೇಬೇಕಾಗುತ್ತದೆ. ತಾನು ಸೇರಿರುವ ರಾಜ್ಯದ ಮೂಲ, ಹಿನ್ನೆಲೆ, ಸ್ವರೂಪ, ಉದ್ದೇಶಗಳನ್ನು ವ್ಯಕ್ತಿ ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ರಾಜ್ಯದ ಪ್ರತಿನಿಧಿಯಾಗಿರುವ ಸರ್ಕಾರದ ರಚನೆ, ವಿವಿಧ ಅಂಗಗಳು, ತನ್ನ ಹಾಗು ಸರ್ಕಾರದ ನಡುವಿನ ಸಂಬಂಧ ಅರಿಯಲು ಇದರ ಅಧ್ಯಯನ ಉಪಯುಕ್ತವಾಗಿದೆ. ಒಟ್ಟಾರೆ ವ್ಯಕ್ತಿಯೊಬ್ಬ ಸಾಮಾಜಿಕ ಹಾಗು ರಾಜಕೀಯ ವ್ಯವಹಾರಗಳಲ್ಲಿ ಭಾಗವಹಿಸಲು ುಪಯುಕ್ತವಾದ ರಾಜ್ಯ ಮತ್ತು ಸರ್ಕಾರಗಳ ತಿಳುವಳಿಕೆ ೊದಗಿಸುವಲ್ಲಿ ರಾಜ್ಯಶಾಸ್ತ್ರವು ಸಹಕಾರಿಯಾಗಿದೆ.
, 2. ಸಂವಿಧಾನದ ಅರಿವು: ದೇಶವೊಂದರ ಆಡಳಿತಾತ್ಮಕ ನಿಯಮಾವಳಿಗಳ ಧಾಕಲೆಯೇ ಸಂವಿಧಾನ. ದೇಶದ ಸ್ವರೂಪ, ಸರ್ಕಾರದ ರಚನೆ, ಪ್ರಜೆಗಳ ಹಕ್ಕುಗಳು, ಪ್ರಜೆಗಳು ಹಾಗು ಸರ್ಕಾರದ ನಡುವಿನ ಸಂಬಂಧಗಳನ್ನು ಸಂವಿಧಾನ ನಿರ್ಧರಿಸುತ್ತದೆ. ಇಂತಹ ಸಂವಿಧಾನದ ಅರಿವನ್ನು ಹೊಂದಲು ರಾಜ್ಯಶಾಸ್ತ್ರದ ಅಧ್ಯಯನ ನೆರವಾಗುತ್ತದೆ. ಸಂವಿಧಾನದ ರಚನೆ, ಹಿನ್ನೆಲೆ, ಮುಖ್ಯಾಂಶಗಳು, ತಿದ್ದುಪಡಿ ವಿಧಾನ ಮುಂತಾದವುಗಳನ್ನು ರಾಜ್ಯಶಾಸ್ತ್ರದ ಅಧ್ಯಯನವು ಮನವರಿಕೆ ಮಾಡಿಕೊಡುತ್ತದೆ. ಈ ತಿಳುವಳಿಕೆಯನ್ನುಳ್ಳ ಪ್ರಜೆಗಳು ಕಾನೂನಿನ ವಿಧೇಯತೆ ಮೈಗೂಡಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ.
, 3. ಹಕ್ಕು ಮತ್ತು ಕರ್ತವ್ಯಗಳ ಮನವರಿಕೆ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಹಕ್ಕು ಎನ್ನಲಾಗುತ್ತದೆ. ಪ್ರತಿಯೊಂದು ದೇಶದ ಸಂವಿಧಾನ ತನ್ನ ಪ್ರಜೆಗಳಿಗೆ ಕೆಲವು ಮೂಲಭೂತ ಹಕ್ಕುಗಳನ್ನು ಒದಗಿಸಿರುತ್ತದೆ. ತಾನು ಪಡೆದ ಹಕ್ಕುಗಳಾವುವು? ಅವುಗಳ ಮೇಲಿನ ಮಿತಿಗಳಾವುವು? ಹಕ್ಕುಗಳ ಉಲ್ಲಂಘನೆಯಾದಾಗ ಎಲ್ಲಿ ಪ್ರಶ್ನಿಸಬೇಕು? ಮುಂತಾದ ವಿಷಯಗಳನ್ನು ವ್ಯಕ್ತಿ ಅರಿತುಕೊಳ್ಳಲು ರಾಜ್ಯಶಾಸ್ತ್ರದ ಅಧ್ಯಯನ ನೆರವಾಗುತ್ತದೆ. ಜೊತೆಗೆ ಪ್ರತಿಯೊಂದು ಹಕ್ಕು ನಿರ್ದಿಷ್ಟ ಕರ್ತವ್ಯ ಪಡೆದಿದ್ದು ಅವುಗಳ ಪಾಲನೆಯ ಕುರಿತು ಿದರ ಅಧ್ಯಯನ ಬೆಳಕು ಚೆಲ್ಲುತ್ತದೆ. ವ್ಯಕ್ತಿ ತನ್ನ ಕರ್ತವ್ಯಗಳಾವುವು? ಅವುಗಳ ಉಲ್ಲಂಘನೆಯ ಪರಿಣಾಮ ಏನಾಗುತ್ತದೆ? ಕರ್ತವ್ಯಗಳ ಅಗತ್ಯವೇನು? ಎಂಬುದನ್ನು ಮನದಟ್ಟು ಮಾಡುವಲ್ಲಿ ರಾಜ್ಯಶಾಸ್ತ್ರದ ಅಧ್ಯಯನವು ಉಪಯುಕ್ತವಾಗಿದೆ.
, 4. ರಾಜಕಾರಣಿಗಳಿಗೆ ತರಬೇತಿ: ದೈನಂದಿನ ರಾಜಕೀಯ ವ್ಯವಹಾರದಲ್ಲಿ ಆಸಕ್ತಿ ಹೊಂದಿದ್ದು ಸಕ್ರೀಯವಾಗಿ ಭಾಗವಹಿಸುವ ವ್ಯಕ್ತಿಯನ್ನು ರಾಜಕಾರಣಿ ಎನ್ನಬಹುದು. ಪ್ರಸ್ತುತ ಪ್ರಾತಿನಿಧಿಕ ಸರ್ಕಾರ ಪದ್ಧತಿ ಎಲ್ಲೆಡೆ ಜಾರಿಯಲ್ಲಿದ್ದು ಅಸಂಖ್ಯ ರಾಜಕಾರಣಿಗಳನ್ನು ನಮ್ಮ ಸುತ್ತಮುತ್ತ ಕಾಣಬಹುದಾಗಿದೆ. ಇಂತಹ ರಾಜಕಾರಣಿಗಳು ದೇಶವೊಂದರ ಶಾಸನ ರಚನೆ, ಯೋಜನೆಗಳ ರೂಪಿಸುವಿಕೆ, ಕಾರ್ಯಕ್ರಮಗಳ ಜಾರಿ ಮುಂತಾದ ರಾಜಕೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ರಾಜ್ಯಶಾಸ್ತ್ರದ ಅಧ್ಯಯನವು ಇವರಿಗೆ ಸೂಕ್ತ ಮಾರ್ಗದರ್ಶನ ಒದಗಿಸುತ್ತದೆ. ಜೊತೆಗೆ ಜನ ವಿರೋಧಿ ನೀತಿ, ಕಾರ್ಯಕ್ರಮ ಹಾಗು ಯೋಜನೆಗಳ ಪರಿಣಾಮವನ್ನು ಮನವರಿಕೆ ಮಾಡಿ ಜನಪರ ಕಾರ್ಯ ನಿರ್ವಹಣೆಗೆ ಸಿದ್ಧಗೊಳಿಸುತ್ತದೆ. ಇದರೊಡನೆ ರಾಜಕಾರಣಿಗಳಿಗೆ ಯಶಸ್ಸಿನ ಸೂತ್ರಗಳನ್ನು ರಾಜ್ಯಶಾಸ್ತ್ರದ ಅಧ್ಯಯನ ಮನದಟ್ಟು ಮಾಡಲು ಸಹಕಾರಿಯಾಗಿದೆ.
, 5. ರಾಜಕೀಯ ಜಾಗೃತಿ: ರಾಜ್ಯಶಾಸ್ತ್ರದ ಅಧ್ಯಯನವು ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುತ್ತದೆ. ತಮ್ಮ ದೇಶದ ಹಿನ್ನೆಲೆ, ಸ್ವರೂಪ ಹಾಗು ಸಮಸ್ಯೆಗಳನ್ನು ಅರಿಯಲು ರಾಜ್ಯಶಾಸ್ತ್ರದ ಅಧ್ಯಯನವು ಆಯಾ ದೇಶದ ಪ್ರಜೆಗಳಿಗೆ ನೆರವಾಗುತ್ತದೆ. ಇದರೊಡನೆ ತೆರಿಗೆ, ಆಯವ್ಯಯ, ಶಾಸನಗಳು, ಯೋಜನೆಗಳು, ರಾಜಕೀಯ ಪಕ್ಷಗಳ ಪರಿಚಯವಾಗಿ ರಾಜಕೀಯ ಜಾಗೃತಿ ಅಧಿಕಗೊಳ್ಳುತ್ತದೆ. ಅಲ್ಲದೇ ಸಹಕಾರ, ಹೊಂದಾಣಿಕೆ, ಸಹಿಷ್ಣುತೆಯಂತಹ ಗುಣಗಳನ್ನು ಜನರಲ್ಲಿ ಮೂಡಿಸುತ್ತದೆ. ಹೀಗೆ ರಾಜಕೀಯವಾಗಿ ಜಾಗೃತ ಮತದಾರ ವರ್ಗ ಸೃಷ್ಟಿಸಿ ಅವರನ್ನು ದೇಶದ ಸಂಪತ್ತನ್ನಾಗಿ ರೂಪಿಸುವಲ್ಲಿ ರಾಜ್ಯಶಾಸ್ತ್ರ ಅಧ್ಯಯನವು ನೆರವಾಗುತ್ತದೆ.
, 6. ವ್ಯಕ್ತಿಯ ಸಾರ್ವಜನಿಕ ಜವಾಬ್ದಾರಿಯ ಮನನ: ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ಮಾನವ ಸಾಮಾಜಿಕ ಹಾಗು ರಾಜಕೀಯ ಜೀವಿ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಹೊಂದಿರುವ ಸ್ಥಳೀಯ, ರಾಷ್ಟ್ರಿಯ ಹಾಗು ಅಂತರರಾಷ್ಟ್ರಿಯ ಮಟ್ಟದ ಸಾರ್ವತ್ರಿಕ ಜವಾಬ್ದಾರಿಯನ್ನು ರಾಜ್ಯಶಾಸ್ತ್ರ ತಿಳಿಸುತ್ತದೆ. ಜೊತೆಗೆ ಸರ್ಕಾರದ ಅಂಗಗಳು, ರಾಜಕೀಯ ಪಕ್ಷಗಳು, ಒತ್ತಡ ಗುಂಪುಗಳು, ನಾನಾ ಸ್ವಯಂ ಸೇವಾ ಸಂಘಟನೆಗಳಂತಹ ಸಾರ್ವಜನಿಕ ಸಂಸ್ಥೆಗಳ ರಚನೆ ಹಾಗು ನೀತಿಗಳನ್ನು ಅರಿತುಕೊಂಡು ಅವುಗಳೊಡನೆ ವ್ಯವಹರಿಸಲು ರಾಜ್ಯಶಾಸ್ತ್ರದ ಅಭ್ಯಾಸ ವ್ಯಕ್ತಿಗಳಿಗೆ ನೆರವಾಗಿದೆ. ವ್ಯಕ್ತಿ ಸಾರ್ವಜನಿಕವಾಗಿ ನಿರ್ದೇಶನ, ನಿಯಂತ್ರಣ ಅಥವ ಮೇಲ್ವಿಚಾರಣೆ ನಡೆಸಬಹುದಾದ ಸನ್ನಿವೇಶಗಳನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮಹತ್ವದ ಪಾತ್ರ ನಿರ್ವಹಿಸುತ್ತದೆ.
, 7. ಆಡಳಿತ ಸೇವಾ ವರ್ಗಕ್ಕೆ ಸಹಕಾರಿ: ದೇಶವೊಂದರ ಸರ್ಕಾರದ ಮಾದರಿ ಯಾವುದೇ ಆಗಿರಲಿ ಅದು ಆಡಳಿತ ಸೇವಾ ವರ್ಗ ಹೊಂದಿರುತ್ತದೆ. ವಾಸ್ತವದಲ್ಲಿ ಸರ್ಕಾರವನ್ನು ಆಡಳಿತ ಸೇವಾ ವರ್ಗ ಪ್ರತಿನಿಧಿಸುತ್ತದೆ. ದೇಶದ ಪ್ರಜೆಗಳ ಸಮಸ್ಯೆಗಳಿಗೆ ಕಿವಿಯಾಗಿ ಅವರ ಸುಖಮಯ ಜೀವನಕ್ಕೆ ಆಡಳಿತ ಸೇವಾ ವರ್ಗ ಕಾರಣವಾಗುತ್ತದೆ. ರಾಜ್ಯಶಾಸ್ತ್ರದ ಅಧ್ಯಯನವು ರಾಜ್ಯದ ಸ್ವರೂಪ, ಗುರಿ, ಪ್ರಜೆಗಳ ಪಾತ್ರ ಮುಂತಾದವುಗಳನ್ನು ಆಡಳಿತ ಸೇವಾ ವರ್ಗಕ್ಕೆ ಮನವರಿಕೆ ಮಾಡಿಕೊಳ್ಳಲು ಸಹಾಯಕವಾಗಿದೆ. ಜೊತೆಗೆ ಸರ್ವರ ಕಲ್ಯಾಣ ಸಾಧನೆಯ ಅಗತ್ಯ, ಮಾರ್ಗಗಳು ಹಾಗು ಜವಾಬ್ದಾರಿಯನ್ನು ಆಡಳಿತ ಸೇವಾ ವರ್ಗದವರಿಗೆ ರಾಜ್ಯಶಾಸ್ತ್ರ ಮನದಟ್ಟು ಮಾಡುತ್ತದೆ. ಅಲ್ಲದೇ ದೇಶವು ಸಮರ್ಥ ಹಾಗು ನ್ಯಾಯ ಸಮ್ಮತ ಸಾರ್ವಜನಿಕ ಆಡಳಿತ ಹೊಂದಲು ರಾಜ್ಯಶಾಸ್ತ್ರದ ಅರಿವು ಆಡಳಿತ ಸೇವಾ ವರ್ಗಕ್ಕೆ ನೆರವಾಗುತ್ತದೆ.
, 8. ಅಂತರರಾಷ್ಟ್ರಿಯ ಸಂಬಂಧಗಳ ಅರಿವು: ಜಗತ್ತಿನಲ್ಲಿ ಇಂದು ಇನ್ನೂರಕ್ಕೂ ಹೆಚ್ಚು ದೇಶಗಳಿವೆ. ಇವುಗಳ ನಡುವಿನ ಸಂಬಂಧಗಳ ತಿಳುವಳಿಕೆಯನ್ನು ರಾಜ್ಯಶಾಸ್ತ್ರದ ಅಧ್ಯಯನ ಒದಗಿಸುತ್ತದೆ. ದೇಶ ದೇಶಗಳ ನಡುವಿನ ಸಂಬಂಧಗಳ ಸ್ವರೂಪ, ವ್ಯಾಪ್ತಿ ಹಾಗು ಮಹತ್ವವನ್ನು ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ಜೊತೆಗೆ ದೇಶ ದೇಶಗಳ ಸಂಬಂಧವನ್ನು ವ್ಯವಸ್ಥಿತಗೊಳಿಸಲು ಅಸ್ತಿತ್ವದಲ್ಲಿರುವ ವಿಶ್ವ ಸಂಸ್ಥೆ ಮತ್ತು ಅಸಂಖ್ಯ ಪ್ರಾದೇಶಿಕ ಸಂಸ್ಥೆಗಳ ಅರಿವನ್ನು ರಾಜ್ಯಶಾಸ್ತ್ರ ಒದಗಿಸುತ್ತದೆ. ಇದರೊಡನೆ ಅಂತರರಾಷ್ಟ್ರಿಯ ಶಾಂತಿ, ಕಾನೂನು, ವ್ಯಾಪಾರ, ಒಪ್ಪಂದಗಳ ಮೇಲೆ ಬೆಳಕು ಚೆಲ್ಲಿ ವಿಶ್ವ ಮಾನವ ಪರಿಕಲ್ಪನೆಯನ್ನು ಅಧ್ಯಯನಾರ್ಥಿಯಲ್ಲಿ ಮೂಡಿಸುತ್ತದೆ.
, 9. ತೌಲುನಿಕ ರಾಜಕೀಯದ ಅರಿವು: ಎರಡು ಅಥವ ಹೆಚ್ಚು ದೇಶಗಳ ನಡುವಿನ ರಾಜಕೀಯ ವ್ಯವಸ್ಥೆಯನ್ನು ಹೋಲಿಕಾ ವಿಧಾನದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸುವುದನ್ನು ತೌಲುನಿಕ ರಾಜಕೀಯ ಎನ್ನಲಾಗುತ್ತದೆ. ದೇಶ ದೇಶಗಳ ನಡುವಿನ ಸಂವಿಧಾನದ ಸ್ವರೂಪ, ಸರ್ಕಾರ ಪದ್ಧತಿ, ಚುನಾವಣೆ, ನ್ಯಾಯಾಂಗ ವ್ಯವಸ್ಥೆ, ಹಕ್ಕುಗಳು, ರಾಜಕೀಯ ಪಕ್ಷಗಳಂತಹ ರಾಜಕೀಯ ಪರಿಕಲ್ಪನೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಹೋಲಿಕಾ ರಾಜಕೀಯ ನೆರವಾಗುತ್ತದೆ. ರಾಜ್ಯಶಾಸ್ತ್ರ ಅಧ್ಯಯನವು ತನ್ನ ಬಾಗವಾಗಿರುವ ತೌಲುನಿಕ ರಾಜಕೀಯದತ್ತ ಆಕರ್ಷಿಸುವ ಮೂಲಕ ಓದುಗರಿಗೆ ಹೋಲಿಕಾ ರಾಜಕೀಯದ ಅರಿವು ಮೂಡಿಸುತ್ತದೆ.
, 10. ಪ್ರಮುಖ ರಾಜಕೀಯ ಘಟನೆಗಳ ಅರಿವು: ರಾಜ್ಯಶಾಸ್ತ್ರದ ಅಧ್ಯಯನವು ನಮಗೆ ವಿಶ್ವದ ಪ್ರಧಾನ ರಾಜಕೀಯ ಘಟನೆಗಳ ಮನವರಿಕೆ ಮಾಡಿಕೊಡುತ್ತದೆ. 1776 ರ ಅಮೇರಿಕ ಕ್ರಾಂತಿ, 1789 ರ ಪ್ರೆಂಚ್ ಮಹಾ ಕ್ರಾಂತಿ, 1911 ರ ಚೀನಾ ಕ್ರಾಂತಿ, 1917 ರ ರಷ್ಯಾ ಕ್ರಾಂತಿ ಮುಂತಾದ ರಾಜಕೀಯ ಘಟನೆಗಳ ಕಾರಣ ಮತ್ತು ಪರಿಣಾಮಗಳನ್ನು ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ಜೊತೆಗೆ ಭಾರತದ ಸ್ವತಂತ್ರ್ಯ ಹೋರಾಟದ ವಿವಿಧ ಮೈಲಿಗಲ್ಲುಗಳ ರಾಜಕೀಯ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಲು ರಾಜ್ಯಶಾಸ್ತ್ರದ ಅಧ್ಯಯನವು ಉಪಯುಕ್ತವಾಗಿದೆ. ಇದರೊಡನೆ ಪ್ರತಿಯೊಂದು ರಾಜಕೀಯ ಘಟನೆಗಳ ಮೌಲ್ಯಗಳನ್ನು ಸ್ಮರಿಸಿಕೊಂಡು ಆಚರಿಸಲು ರಾಜ್ಯಶಾಸ್ತ್ರದ ಅಧ್ಯಯನವು ಪ್ರೇರಣೆ ನೀಡುತ್ತದೆ. ಉದಾ: ಪ್ರೆಂಚ್ ಕ್ರಾಂತಿಯ ಸಮಾನತೆ, ಅಮೇರಿಕ ಕ್ರಾಂತಿಯ ಸ್ವಾತಂತ್ರ್ಯ, ಭಾರತದ ಸ್ವತಂತ್ರ್ಯ ಹೋರಾಟದ ಅಹಿಂಸಾತ್ಮಕ ಸಾಧನ ಇತ್ಯಾದಿ.
, 11. ಅಧಿಕಾರದ ದುರುಪಯೋಗದ ತಡೆ: ಸಮಾಜ ಅಥವ ದೇಶವೊಂದರ ಪ್ರಮುಖ ಲಕ್ಷಣ ಸರ್ಕಾರ. ಪ್ರಜೆಗಳ ಕಲ್ಯಾಣಕ್ಕಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಂತೂ ಸರ್ಕಾರ ಪ್ರಜೆಗಳ ಪ್ರತಿನಿಧಿಗಳಿಂದ ಅವರಿಗಾಗಿ ಕಾರ್ಯಾಚರಿಸುತ್ತದೆ. ಇಂತಹ ಸರ್ಕಾರ ಜನ ವಿರೋಧಿ ನಿರ್ಧಾರ ಅಥವ ನೀತಿಗಳನ್ನು ಜಾರಿಗೊಳಿಸಿದಾಗ ಪ್ರಜೆಗಳಿಗೆ ರಾಜ್ಯಶಾಸ್ತ್ರದ ಅರಿವು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಭವಿಷ್ಯದ ಚುನಾವಣೆಯಲ್ಲಿ ಅಧಿಕಾರವನ್ನು ತಮ್ಮ ಹಿತಕ್ಕಾಗಿ ಬಳಸದವರನ್ನು ಅಧಿಕಾರದಿಂದ ದೂರವಿಡಲು ತನ್ಮೂಲಕ ಅಧಿಕಾರದ ದುರುಪಯೋಗವನ್ನು ನಿಯಂತ್ರಿಸಲು ಅಗತ್ಯ ಮಾಹಿತಿಯನ್ನು ಜನರಿಗೆ ರಾಜ್ಯಶಾಸ್ತ್ರ ಒದಗಿಸುತ್ತದೆ.
, 12. ರಾಜಕೀಯ ಪಾರಿಭಾಷೆಗಳ ಸ್ಪಷ್ಟತೆ: ಪ್ರತಿಯೊಂದು ಅಧ್ಯಯನ ವಿಷಯ ತನ್ನದೇ ಕೆಲವು ಪಾರಿಭಾಷಿಕ ಪದಗಳನ್ನು ಃಒಂದಿರುತ್ತವೆ. ಅಂತೆಯೇ ವಿಶಾಲ ವ್ಯಾಪ್ತಿಯನ್ನುಳ್ಳ ರಾಜ್ಯಶಾಸ್ತ್ರದಲ್ಲಿ ರಾಜಕೀಯ, ಸರ್ಕಾರ, ಪೌರತ್ವ, ಸಮಾನತೆ, ಸ್ವತಂತ್ರ್ಯ, ಸಹೋದರತೆಯಂತಹ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳಲ್ಲದೇ ನಿರ್ಧಾರ ಕೈಗೊಳ್ಳುವಿಕೆ, ಕಾನೂನಿನ ಆಳ್ವಿಕೆ, ಅಧಿಕಾರ ಪ್ರತ್ಯೇಕತೆ, ಸರ್ವರ ಒಳಿತು, ಜನತಾ ಪರಮಾಧಿಕಾರ, ಗಣರಾಜ್ಯ, ಜಾತ್ಯಾತೀತತೆ ಮುಂತಾದ ಇತರ ಅನೇಕ ಸಂಕೀರ್ಣ ಪಾರಿಭಾಷಿಕ ಪದಗಳ ಬಳಕೆಯನ್ನೂ ಗುರುತಿಸಬಹುದಾಗಿದೆ. ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ರಾಜಕೀಯ ಜೀವಿಯಾಗಿರುವ ನಮಗೆಲ್ಲ ಈ ರಾಜಕೀಯ ಪಾರಿಭಾಷಿಕ ಸ್ಪಷ್ಟತೆ ಅತ್ಯಗತ್ಯ. ರಾಜ್ಯಶಾಸ್ತ್ರದ ಅಧ್ಯಯನವು ಮಾತ್ರ ರಾಜಕೀಯ ಪರಿಕಲ್ಪನೆಗಳ ಸ್ಪಷ್ಟತೆಯನ್ನು ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ.
,
, ಒಟ್ಟಾರೆ ಮೇಲಿನ ವಿವಿಧ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮಹತ್ವ ಪಡೆದಿದೆ. ಕೇವಲ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗಲ್ಲದೇ ದೇಶವೊಂದರ ಪ್ರತಿಯೊಬ್ಬ ನಾಗರಿಕನಿಗೆ ಇದರ ಅಧ್ಯಯನವು ನೆರವಾಗುತ್ತದೆ. ರಾಜ್ಯ ಮತ್ತು ಸರ್ಕಾರದ ವ್ಯಾಪ್ತಿಯಿಂದ ಹೊರಗುಳಿಯಲುಅಥವ ಅವುಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಸರ್ವರಿಗೂ ರಾಜ್ಯಶಾಸ್ತ್ರದ ಅಧ್ಯಯನ ಸಮಕಾಲಿನ ಜಗತ್ತಿನಲ್ಲಿ ಅನಿವಾರ್ಯವೆನಿಸಿದೆ.
,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ