ಅಧ್ಯಾಯ 3: ಆಡಳಿತದ ಪರಿಕಲ್ಪನೆ:
,
, ಪೀಠಿಕೆ: ಅಭಿವೃದ್ಧಿ ಆಡಳಿತ ಎಂಬ ಪರಿಕಲ್ಪನೆಯು ಸಾರ್ವಜನಿಕ ಆಡಳಿತದಲ್ಲಿನ ನೂತನ ಪರಿಕಲ್ಪನೆಗಳಲ್ಲಿ ಒಂದು. ಎರಡನೇ ಮಹಾ ಯುದ್ಧದ ಬಳಿಕ ಜನ್ಮ ತಾಳಿದ ಈ ಪರಿಕಲ್ಪನೆಯು ಪ್ರಸ್ತುತ ಸಾರ್ವಜನಿಕ ಆಡಳಿತದ ಅವಿಭಾಜ್ಯ ಪರಿಕಲ್ಪನೆಯೆನಿಸಿದೆ. ಎರಡನೇ ಮಹಾ ಯುದ್ಧದ ಬಳಿಕ ತೃತೀಯ ಜಗತ್ತು ಅಂದರೆ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾದ ಹಲವು ದೇಶಗಳು ಸ್ವತಂತ್ರ ಪಡೆದುಕೊಂಡವು. ಸಾಮಾನ್ಯವಾಗಿ ಈ ದೇಶಗಳೆಲ್ಲ ಹಿಂದುಳಿದ ಅಥವಾ ಮುಂದುವರಿಯುತ್ತಿರುವ ಆರ್ಥಿಕ ವ್ಯವಸ್ಥೆ ಮೈಗೂಡಿಸಿಕೊಂಡಿದ್ದವು. ಇದೇ ವೇಳೆಯಲ್ಲಿ ಮಹಾ ಯುದ್ಧದ ಪರಿಣಾಮ ದುರ್ಬಲವಾಗಿದ್ದ ಮುಂದುವರಿದ ರಾಷ್ಟ್ರಗಳು ತೃತೀಯ ಜಗತ್ತಿನ ನೂತನ ರಾಷ್ಟ್ರಗಳಿಗೆ ಸಮರ್ಪಕ ನೆರವನ್ನು ಒದಗಿಸಲು ಮುಂದಾಗಲಿಲ್ಲ. ಹೀಗಾಗಿ ಬಹುತೇಕ ನೂತನ ರಾಷ್ಟ್ರಗಳು ತಮ್ಮಲ್ಲಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆರ್ಥಿಕ ಯೋಜನೆಗಳನ್ನು ರೂಪಿಸಿದವು. ವಿವಿಧ ಯೋಜನೆಗಳ ಜಾರಿಗೆ ಅಸಂಖ್ಯ ನಾಗರಿಕ ಸೇವಾ ವರ್ಗವನ್ನು ನೇಮಿಸಿಕೊಂಡವಲ್ಲದೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದೇಶವನ್ನು ಪ್ರಗತಿಗೊಳಿಸಲು ಪ್ರಯತ್ನಿಸಿದವು. ಈ ಎಲ್ಲ ಬೆಳವಣಿಗೆಗಳ ನೆರಳಿನಲ್ಲಿ ಸಾರ್ವಜನಿಕ ಆಡಳಿತದ ಮತ್ತು ತೌಲನಿಕ ಸಾರ್ವಜನಿಕ ಆಡಳಿತದ ಭಾಗವಾಗಿ ಅಭಿವೃದ್ಧಿ ಆಡಳಿತದ ಪರಿಕಲ್ಪನೆ ಉದಯವಾಯಿತು. ಕ್ರಮೇಣ ಇದರ ಪ್ರಸ್ತುತತೆ ಸಾರ್ವಜನಿಕ ಆಡಳಿತದಲ್ಲಿ ಇಮ್ಮಡಿಗೊಂಡು ಸಮಕಾಲೀನ ಸಾರ್ವಜನಿಕ ಆಡಳಿತದ ಕೇಂದ್ರಬಿಂದು ಪರಿಕಲ್ಪನೆ ಎನಿಸಿಕೊಂಡಿದೆ.
,
, ಅ. ಅಭಿವೃದ್ಧಿ ಆಡಳಿತದ ಅರ್ಥ: ಅಭಿವೃದ್ಧಿ ಎಂದರೆ ಸುಧಾರಣೆ, ಬದಲಾವಣೆ ಅಥವಾ ಪ್ರಗತಿ ಎಂದಾಗುತ್ತದೆ. ಆಡಳಿತದಲ್ಲಿ ಅಭಿವೃದ್ಧಿಗೆ ಆಧ್ಯತೆ ಒದಗಿಸುವುದನ್ನು ಅಭಿವೃದ್ಧಿ ಆಡಳಿತವೆಂದು ಸಾಮಾನ್ಯಾರ್ಥದಲ್ಲಿ ಹೇಳಬಹುದು. ರಾಜ್ಯಶಾಸ್ತ್ರೀಯ ದೃಷ್ಟಿಕೋನದಲ್ಲಿ ರಾಷ್ಟ್ರವೊಂದರ ಪ್ರಗತಿಗೆ ಆಡಳಿತ ಯಂತ್ರವು ಪಾಲಿಸಬೇಕಾದ ನಿಯಮಾವಳಿಗಳ ಪರಿಕಲ್ಪನೆಯೇ ಅಭಿವೃದ್ಧಿ ಆಡಳಿತ. ವಿಶಾಲಾರ್ಥದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ರೂಪಿಸಲ್ಪಟ್ಟ ಯೋಜನೆ ಅಥವಾ ಕಾರ್ಯಕ್ರಮಗಳನ್ನು ಆಡಳಿತ ಯಂತ್ರದ ಮೂಲಕ ಜಾರಿಗೊಳಿಸುವ ವೇಳೆಯಲ್ಲಿನ ಸಕಲ ಚಟುವಟಿಕೆಗಳನ್ನು ಅಭಿವೃದ್ಧಿ ಆಡಳಿತ ಎನ್ನಬಹುದು. ಅಭಿವೃದ್ಧಿ ಆಡಳಿತವು ವಿಶೇಷವಾಗಿ ದೇಶದ ಆರ್ಥಿಕ ಕ್ಷೇತ್ರದ ಪ್ರಗತಿಗೆ ಅನ್ವಯವಾಗುವ ಪರಿಕಲ್ಪನೆಯಾದರೂ ಸರ್ಕಾರವು ಕೈಗೊಳ್ಳುವ ವಿವಿಧ ರಂಗಗಳ ಸಾರ್ವಜನಿಕ ಚಟುವಟಿಕೆಗಳಿಗೆ ವ್ಯಾಪಿಸಿರುತ್ತದೆ. ಸುಧಾರಿತ ಆಡಳಿತಾತ್ಮಕ ತಂತ್ರ, ಕೌಶಲ್ಯ, ಕಾರ್ಯ ಅಥವಾ ಪದ್ಧತಿಗಳನ್ನು ಪ್ರತಿಪಾದಿಸುವ ಮೂಲಕ ದೇಶದ ಆಡಳಿತ ಸಾಮರ್ಥ್ಯವನ್ನು ಹೆಚ್ಚಿಸುವುದು ಅಭಿವೃದ್ಧಿ ಆಡಳಿತವೆನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಚಿಂತಕ ಮೋಹಿತ್ ಭಟ್ಟಾಚಾರ್ಯರು ಅಭಿವೃದ್ಧಿಶೀಲ ರಾಷ್ಟ್ರಗಳ ಆಡಳಿತಾತ್ಮಕ ಸಿದ್ಧಾಂತವೇ ಅಭಿವೃದ್ಧಿ ಆಡಳಿತವೆಂದು ಅಭಿಪ್ರಾಯಪಟ್ಟಿರುವರು.
,
, ಆ. ಅಭಿವೃದ್ಧಿ ಆಡಳಿತದ ಸ್ವರೂಪ: ಈ ಕೆಳಗಿನ ಅಂಶಗಳು ಅಭಿವೃದ್ಧಿ ಆಡಳಿತದ ಸ್ವರೂಪವನ್ನು ಸ್ಪಷ್ಟಪಡಿಸುತ್ತವೆ.
, 1. ವಿಶಾಲ ವ್ಯಾಪ್ತಿ: ಅಭಿವೃದ್ಧಿಯು ಪ್ರಾಚೀನ ಕಾಲದಿಂದ ಆಡಳಿತದಲ್ಲಿ ಅಸ್ತಿತ್ವದಲ್ಲಿದ್ದರೂ ಅದು ವಿಶಾಲ ಸ್ವರೂಪವನ್ನು ಪಡೆದಿರಲಿಲ್ಲ. ಕೇವಲ ಅಂದಿನ ಅವಶ್ಯಕತೆಗೆ ತಕ್ಕಂತೆ ಸಾಮಾಜಿಕ, ಸಾಂಸ್ಕೃತಿಕ, ಸೈನಿಕ ಅಥವಾ ಧಾರ್ಮಿಕ ರಂಗಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಅಭಿವೃದ್ಧಿ ಆಡಳಿತದ ಪರಿಕಲ್ಪನೆಯು ಸರ್ಕಾರದ ಪಾತ್ರವಿರುವ ಎಲ್ಲ ರಂಗಗಳಿಗೆ ವ್ಯಾಪಿಸಿದೆ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಉತ್ಪಾದನೆ, ಆಮದು, ಜೀವನ ಮಟ್ಟದ ಹೆಚ್ಚಳ ಇತ್ಯಾದಿ ಕ್ಷೇತ್ರಗಳಿಗೆ ತನ್ನ ಬಾಹುಗಳನ್ನು ಇದು ಚಾಚಿದೆ.
, 2. ಚಲನಶೀಲತೆ: ಅಭಿವೃದ್ಧಿ ಆಡಳಿತದ ಪರಿಕಲ್ಪನೆಯು ಆಡಳಿತದಲ್ಲಿ ಬದಲಾವಣೆಯನ್ನು ಅಪೇಕ್ಷಿಸುತ್ತದೆ. ಅಂದಿನ ಅವಶ್ಯಕತೆಗೆ ತಕ್ಕಂತೆ ಆಡಳಿತದಲ್ಲಿ ಬದಲಾವಣೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಲು ಒತ್ತಾಯಿಸುತ್ತದೆ. ಜೊತೆಗೆ ಆಡಳಿತಾತ್ಮಕ ವ್ಯವಸ್ಥೆ ಸದಾ ಚಲನಶೀಲವಾಗಿರುವಂತೆ ಅಭಿವೃದ್ಧಿ ಆಡಳಿತವು ಬಯಸುತ್ತದೆ.
, 3. ಪ್ರಜಾಪರ: ಆಡಳಿತವೆಂಬುದು ಆಳುವವರ ಪರವಾದ ಪರಿಕಲ್ಪನೆಯಾಗಿತ್ತು. ಆದರೆ, ಅಭಿವೃದ್ಧಿ ಆಡಳಿತವು ಜನರಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಜನರ ಭಾಗವಹಿಸುವಿಕೆಯನ್ನು ಸಮ್ಮತಿಸುವ ಮೂಲಕ ಆಡಳಿತವನ್ನು ಪ್ರಜಾಪರಗೊಳಿಸಲು ಪ್ರಯತ್ನಿಸುತ್ತದೆ.
, 4. ಕ್ರಿಯಾಧಾರಿತ: ಅಭಿವೃದ್ಧಿ ಆಡಳಿತವು ಸೈದ್ಧಾಂತಿಕ ವಿಚಾರಗಳನ್ನು ಪ್ರತಿಪಾದಿಸುವ ಪರಿಕಲ್ಪನೆಯಲ್ಲ. ಕಾರ್ಯಗತಗೊಳಿಸುವ ಯೋಜನೆಗಳ ರಚನೆ, ಅನುಷ್ಠಾನದ ವಿಧಾನ, ತಲುಪಬಹುದಾದ ಗುರಿಗಳು, ಪಡೆಯಬಹುದಾದ ಫಲಿತಾಂಶ ಇತ್ಯಾದಿ ಕ್ರಿಯಾತ್ಮಕ ಸ್ವರೂಪದ ಅಂಶಗಳನ್ನು ಮೈಗೂಡಿಸಿಕೊಂಡಿರುವ ಪರಿಕಲ್ಪನೆಯಾಗಿದೆ.
, 5. ಸಾರ್ವತ್ರಿಕತೆ: ಅಭಿವೃದ್ಧಿ ಆಡಳಿತವು ಉದಯಗೊಂಡಿದ್ದುದು ಅಭಿವೃದ್ಧಿಶೀಲ ಅಥವಾ ಹಿಂದುಳಿದ ದೇಶಗಳ ಕಾರಣಕ್ಕಾದರೂ ಅಭಿವೃದ್ಧಿ ಹೊಂದಿದ ದೇಶಗಳಿಗೂ ಸಹಕಾರಿಯಾಗಿರುವ ಪರಿಕಲ್ಪನೆಯಾಗಿದೆ. ಹೀಗಾಗಿ ಸಾರ್ವಜನಿಕ ಆಡಳಿತವನ್ನು ಮೈಗೂಡಿಸಿಕೊಂಡಿರುವ ಜಗತ್ತಿನ ಎಲ್ಲ ದೇಶಗಳೂ ಅಭಿವೃದ್ಧಿ ಆಡಳಿತವನ್ನು ಕಡೆಗಣಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇದೊಂದು ಸಾರ್ವತ್ರಿಕ ಸ್ವರೂಪವುಳ್ಳ ಪರಿಕಲ್ಪನೆಯಾಗಿದೆ ಎನ್ನಬಹುದು.
,
, ಇ. ಅಭಿವೃದ್ಧಿ ಆಡಳಿತದ ಲಕ್ಷಣಗಳು:
, 1. ಬದಲಾವಣೆಗೆ ಆಧ್ಯತೆ: ಅಭಿವೃದ್ಧಿ ಆಡಳಿತವು ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಕಾಲೀನ ಅಗತ್ಯಾನುಸಾರ ಬದಲಾವಣೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತದೆ.
, 2. ಪ್ರಜೆಗಳ ಪಾತ್ರದಲ್ಲಿ ಪರಿವರ್ತನೆ: ಅಭಿವೃದ್ಧಿ ಆಡಳಿತದ ಅಂತಿಮ ಗುರಿ ಪ್ರಗತಿ. ಹೀಗಾಗಿ ದೇಶದ ಪ್ರಜೆಗಳ, ಪ್ರತಿನಿಧಿಗಳ ಅಥವಾ ನಾಗರಿಕ ಸೇವಾ ವರ್ಗದ ನೌಕರರ ಪಾತ್ರದಲ್ಲಿ ಅಗತ್ಯ ಬದಲಾವಣೆ ನಿರಂತರವಾಗಿ ಉಂಟಾಗುತ್ತದೆ. ಉದಾ: ತೆರಿಗೆದಾರ ಫಲಾನುಭವಿಯ ಪಾತ್ರವನ್ನು, ಫಲಾನುಭವಿ ತೆರಿಗೆದಾರನ ಪಾತ್ರವನ್ನು, ಜನರು ಯಜಮಾನನಾಗಿ ಅಥವಾ ಸೇವಕನಾಗಿ ಪಾತ್ರವನ್ನು ನಿರ್ವಹಿಸುವುದು.
, 3. ವೈಯಕ್ತಿಕತೆಯ ಬದಲು ಸಾಮೂಹಿಕತೆಗೆ ಒಲವು: ಅಭಿವೃದ್ಧಿ ಆಡಳಿತವು ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯದ ಬದಲು ಸಾಮೂಹಿಕ ಅಂಶಗಳಿಗೆ ಮಹತ್ವ ನೀಡುತ್ತದೆ. ಉದಾ: ರೈತನೊಬ್ಬನ ಜಮೀನನ್ನು ಉಳಿಸುವ ಬದಲು ಜಮೀನು ಸ್ವಾಧೀನಪಡಿಸಿಕೊಂಡು ಬೃಹತ್ ಆಸ್ಪತ್ರೆ ನಿರ್ಮಿಸುವ ಮೂಲಕ ಸಾಮೂಹಿಕ ಒಳಿತನ್ನು ಎತ್ತಿ ಹಿಡಿಯುವುದು.
, 4. ಸವಾಲುಗಳ ಸ್ವೀಕಾರಕ್ಕೆ ಬದ್ಧತೆ: ಅಭಿವೃದ್ಧಿ ಆಡಳಿತದ ಪರಿಕಲ್ಪನೆಯು ದೇಶದ ಪ್ರಗತಿಗಾಗಿ ಕೆಲವೊಮ್ಮೆ ಅಪಾಯಕಾರಿ ಕ್ರಮಗಳಿಗೆ ಮುಂದಾಗಲು ಅನುಮತಿಸುತ್ತದೆ. ಉದಾ: ಸಂಪನ್ಮೂಲಗಳಿಗಾಗಿ ಅಪಾಯಕಾರಿ ಗಣಿಗಳಲ್ಲಿ ಗಣಿಗಾರಿಕೆಗೆ ಅನುಮತಿಸುವುದು, ನಗರಗಳ ನೈರ್ಮಲ್ಯಕ್ಕಾಗಿ ಮ್ಯಾನ್‌ಹೋಲ್‌ಗಳಲ್ಲಿ ಕಾರ್ಮಿಕರ ಕಾರ್ಯ ನಿರ್ವಹಣೆಗೆ ತೀರ್ಮಾನಿಸುವುದು, ಹೊಸ ಲಸಿಕೆಗಳ ಸಂಶೋಧನೆಗೆ ಅನುಮತಿಸುವುದು ಇತ್ಯಾದಿ.
, 5. ಗುರಿಗಳಿಗೆ ಮಹತ್ವ: ಅಭಿವೃದ್ಧಿ ಆಡಳಿತವು ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಕಾರ್ಯಾಚರಿಸುವಂತೆ ಒತ್ತಾಯಿಸುತ್ತದೆ. ಗುರಿಗಳಿಲ್ಲದ ಆಡಳಿತವನ್ನು ಈ ಪರಿಕಲ್ಪನೆಯು ಸಮ್ಮತಿಸುವುದಿಲ್ಲ.
, 6. ಸಮಯದ ಚೌಕಟ್ಟು: ಅಭಿವೃದ್ಧಿ ಆಡಳಿತವು ಸಾರ್ವಜನಿಕ ಆಡಳಿತದ ಸಕಲ ಚಟುವಟಿಕೆಗೆ ಕಾಲ ಮಿತಿ ಅಳವಡಿಸಿಕೊಂಡು ಕಾರ್ಯಾಚರಿಸುವಂತೆ ಮಾಡಿದೆ. ಉದಾ: ವಾರ್ಷಿಕ ಯೋಜನೆ, 2025 ರ ಕಾಲ ಮಿತಿಯ ಸರ್ಕಾರದ ಘೋಷಣೆಗಳು, 2047 ರ ಕನಸು ಇತ್ಯಾದಿ.
, 7. ಫಲಿತಾಂಶ ಆಧರಿತತೆ: ಅಭಿವೃದ್ಧಿ ಆಡಳಿತದಲ್ಲಿ ನಿರ್ಧಾರ ಕೈಗೊಳ್ಳುವಾಗ ಫಲಿತಾಂಶವನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಫಲಿತಾಂಶ ಒದಗಿಸದ ಸಾರ್ವಜನಿಕ ಆಡಳಿತವನ್ನು ಕಡಿತಗೊಳಿಸಲು ಒತ್ತಾಯಿಸುತ್ತದೆ. ಉದಾ: ಪ್ರಯಾಣಿಕರಿಲ್ಲದ ಮಾರ್ಗದಲ್ಲಿ ಕಡಿಮೆ ಬಸ್ಸುಗಳನ್ನು ಓಡಿಸಲು, ವಿದ್ಯಾರ್ಥಿಗಳ ಪ್ರವೇಶವಿಲ್ಲದ ಕಾಲೇಜುಗಳನ್ನು ಸ್ಥಳಾಂತರಿಸಲು ಮುಂದಾಗುವುದು.
, 8. ಪ್ರಜಾಸತ್ತಾತ್ಮಕತೆ: ಅಭಿವೃದ್ಧಿ ಆಡಳಿತವು ಪ್ರಜಾಪರವಾದದ್ದು. ಪ್ರಜೆಗಳ ಆಶಯಗಳಿಗೆ ಸ್ಪಂದಿಸುವ ಈ ಪರಿಕಲ್ಪನೆಯು ಅವರ ಭಾಗವಹಿಸುವಿಕೆಗೂ ಆಸ್ಪದ ಒದಗಿಸುತ್ತದೆ. ಉದಾ: ಪ್ರಾಥಮಿಕ ಶಾಲೆಗಳಲ್ಲಿರುವ ಶಾಲಾಭಿವೃದ್ಧಿ ಸಮೀತಿಗಳು.
, 9. ಪರಿಸರ ಸ್ನೇಹಿ: ಅಭಿವೃದ್ಧಿಗೆ ಆಧ್ಯತೆ ನೀಡಿದರೂ ಈ ಪರಿಕಲ್ಪನೆಯು ಪರಿಸರಕ್ಕೆ ಧಕ್ಕೆಯನ್ನು ತರಲು ಮುಂದಾಗುವುದಿಲ್ಲ. ಯಾವುದೇ ಅಭಿವೃದ್ಧಿ ದೇಶದ ಪರಿಸರಕ್ಕೆ ಪೂರಕವಾಗಿರುವಂತೆ ಗಮನವನ್ನು ಈ ಪರಿಕಲ್ಪನೆ ಆಸ್ತೆ ವಹಿಸುತ್ತದೆ.
, 10. ಆಡಳಿತಾತ್ಮಕ ದಕ್ಷತೆಯ ಹೆಚ್ಚಳ:
,
, ಆ. ಭಾರತದಲ್ಲಿನ ಆಡಳಿತಾತ್ಮಕ ಸುಧಾರಣೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ