ಪ್ರಸ್ತಾವನೆ: ಪ್ರಜೆಗಳು ತಮ್ಮ ದೇಶಕ್ಕಾಗಿ ನಿರ್ವಹಿಸಲೇಬೇಕಾದ ಕಾರ್ಯಗಳನ್ನು ಮೂಲಭೂತ ಕರ್ತವ್ಯಗಳು ಎನ್ನಲಾಗುತ್ತದೆ. ಪ್ರತಿಯೊಂದು ಹಕ್ಕು ನಿರ್ದಿಷ್ಟ ಕರ್ತವ್ಯವನ್ನು ಬಯಸುತ್ತದೆ. ಸಾಮಾನ್ಯವಾಗಿ ಪ್ರಜೆಗಳು ತಮ್ಮ ದೇಶದ ಸಂವಿಧಾನದಿಂದ ಪಡೆದಿರುವ ಹಕ್ಕುಗಳೊಡನೆ ಕರ್ತವ್ಯಗಳು ಜೊತೆಯಾಗಿ ಸಾಗುತ್ತವೆ. ಆದ್ದರಿಂದ ಹಕ್ಕು ಮತ್ತು ಕರ್ತವ್ಯಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುವರು. ಇದನ್ನರಿತ ಭಾರತ ಸಂವಿಧಾನ ರಚನಾಕಾರರು ಪ್ರಜೆಗಳಿಗೆ ಅಗತ್ಯವಾದ ಮೂಲಭೂತ ಹಕ್ಕುಗಳನ್ನು ಮೂರನೇ ಭಾಗದಲ್ಲಿ ಒದಗಿಸಿದರಾದರೂ ಪ್ರತ್ಯೇಕವಾಗಿ ಕರ್ತವ್ಯಗಳನ್ನು ಪಟ್ಟಿ ಮಾಡಲಿಲ್ಲ. ಇದಕ್ಕೆ ಹಕ್ಕುಗಳನ್ನು ಪಡೆದ ಪ್ರಜೆಗಳು ತಮ್ಮ ಕರ್ತವ್ಯಗಳನ್ನು ಪಾಲಿಸುವರೆಂಬ ಸಂವಿಧಾನ ರಚನಾಕಾರರ ನಂಬಿಕೆ ಕಾರಣವಾಗಿರಬಹುದು.
ಸಂವಿಧಾನ ಜಾರಿಗೊಂಡ ಮೂರು ದಶಕಗಳ ಬಳಿಕವೂ ಭಾರತೀಯ ಪ್ರಜೆಗಳು ತಮ್ಮ ಕರ್ತವ್ಯಗಳ ಕುರಿತು ಉದಾಸೀನತೆ ತೋರ್ಪಡಿಸುತ್ತಲೇ ಸಾಗಿದರು. ವಸ್ತು ಸ್ಥಿತಿ ಹೀಗಿರುವಾಗ ಫೇಬ್ರವರಿ 1975 ರಲ್ಲಿ ಕೇಂದ್ರದಲ್ಲಿದ್ದ ಇಂದಿರಾ ಸರ್ಕಾರವು ಭಾರತ ಸಂವಿಧಾನ ಸುಧಾರಣೆಗೆ ಸ್ವರ್ಣಸಿಂಗ್ ಅಧ್ಯಕ್ಷತೆಯಲ್ಲಿ ಸಮೀತಿಯೊಂದನ್ನು ರಚಿಸಿತು. ಈ ಸಮಿತಿಯು ಅದೇ ವರ್ಷ ಮೇ ತಿಂಗಳಲ್ಲಿ ತನ್ನ ವರದಿ ಸಲ್ಲಿಸಿತು. ಸ್ವರ್ಣಸಿಂಗ್ ಸಮಿತಿಯ ವರದಿಯು ಭಾರತದ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಪ್ರಜೆಗಳು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರ್ಪಡಿಸಲು ಶಿಫಾರಸು ಮಾಡಿತು. ಸ್ವರ್ಣಸಿಂಗ್ ಸಮೀತಿಯ ಶಿಫಾರಸಿನನ್ವಯ ಸಂಸತ್ತು 1976 ರಲ್ಲಿ ೪೨ ನೇ ಸಂವಿಧಾನ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಿತು. ಈ ತಿದ್ದುಪಡಿಯಂತೆ ಸಂವಿಧಾನಕ್ಕೆ ೪ [A] ಭಾಗ ಮತ್ತು ೫೧ [A] ವಿಧಿಯನ್ನು ಹೊಸದಾಗಿ ಸೇರಿಸಿ ಹತ್ತು ಮೂಲಭೂತ ಕರ್ತವ್ಯಗಳನ್ನು ನಿಗಧಿಪಡಿಸಲಾಯಿತು. ಮುಂದೆ 2002 ರಲ್ಲಿ ಸಂವಿದಾನದ ೮೬ ನೇ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳು ಪಾಲಿಸಬೇಕಾದ ಇನ್ನೊಂದು ಕರ್ತವ್ಯವನ್ನು ಮೂಲಭೂತ ಕರ್ತವ್ಯಗಳ ಪಟ್ಟಿಗೆ ಸೇರಿಸಲಾಗಿದೆ. ಪ್ರಸ್ತುತ ಭಾರತದ ಪ್ರಜೆಗಳು ಪಾಲಿಸಬೇಕಿರುವ ೧೧ ಮೂಲಭೂತ ಕರ್ತವ್ಯಗಳು ಮತ್ತು ಅವುಗಳ ಸಂಕ್ಷಿಪ್ತ ವಿವರಣೆ ಕೆಳಗಿನಂತಿದೆ.
[A] ರಾಷ್ಟ್ರಗೀತೆ, ರಾಷ್ಟ್ರ ಧ್ವಜ ಮತ್ತು ಸಂವಿಧಾನಾತ್ಮಕ ಆದರ್ಶ ಹಾಗು ಸಂಸ್ಥೆಗಳನ್ನು ಗೌರವಿಸುವುದು: ಭಾರತದ ಪ್ರಜೆಗಳು ರಾಷ್ಟ್ರ ಗೀತೆಯನ್ನು ನಿಗಧಿತ ಸಮಯದಲ್ಲಿ ಹಾಡಬೇಕಲ್ಲದೇ ಎದ್ದು ನಿಂತು ಗೌರವ ಸಲ್ಲಿಸಬೇಕು. ಜೊತೆಗೆ ರಾಷ್ಟ್ರ ಧ್ವಜವನ್ನು 2002 ರ ಧ್ವಜ ಸಂಹಿತೆಯನ್ವಯ ಉಪಯೋಗಿಸುವ ಮೂಲಕ ಗೌರವ ಸಲ್ಲಿಸಬೇಕು. ಅಲ್ಲದೇ ಸಂವಿಧಾನ ಸ್ಥಾಪಿಸಲು ಬಯಸುವ ಆದರ್ಶಗಳಾದ ಸಮಾಜವಾದ, ಜಾತ್ಯಾತೀತತೆ, ಗಣತಂತ್ರ ವ್ಯವಸ್ಥೆ, ಸಾಮಾಜಿಕ ನ್ಯಾಯ ಮುಂತಾದ ಆದರ್ಶಗಳನ್ನು ಪಾಲಿಸುವ ಮೂಲಕ ಅವುಗಳನ್ನು ಗೌರವಿಸಬೇಕು. ಇದಲ್ಲದೇ ಸಂವಿಧಾನಾತ್ಮಕ ಸಂಸ್ಥೆಗಳಾದ ಸಂಸತ್ತು, ಸರ್ವೋಚ್ಛ ನ್ಯಾಯಾಲಯ, ಚುನಾವಣಾ ಆಯೋಗ ಮುಂತಾದ ಸಂಸ್ಥೆಗಳಿಗೆ ವಿಧೇಯತೆ ತೋರುವ ಮೂಲಕ ರಾಷ್ಟ್ರೋದ್ಧರಕ್ಕೆ ಶ್ರಮಿಸುವುದು ಪ್ರಜೆಗಳ ಮೂಲಭೂತ ಕರ್ತವ್ಯವಾಗಿದೆ.
[B] ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ ಉದಾತ್ತ ಮೌಲ್ಯಗಳನ್ನು ಪಾಲಿಸುವುದು: ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಸುದೀರ್ಘ ಹೋರಾಟ ಜರುಗಿತು. ಈ ಸಮಯದಲ್ಲಿ ನಮ್ಮ ಸ್ವತಂತ್ರ್ಯ ಹೋರಾಟಗಾರರು ಸ್ಪೂರ್ತಿ ಪಡೆದ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮುಂತಾದ ಮೌಲ್ಯಗಳನ್ನು ಇಂದಿನ ಪ್ರಜೆಗಳು ಅನುಸರಿಸಬೇಕು. ಜೊತೆಗೆ ನಮ್ಮ ಹೋರಾಟಗಾರರು ಪಾಲಿಸಿದ ಶಾಂತಿ, ತ್ಯಾಗ, ಅಹಿಂಸೆ ಇತ್ಯಾದಿ ಉದಾತ್ತ ಮೌಲ್ಯಗಳನ್ನು ತಮ್ಮ ನಿತ್ಯ ಜೀವನದಲ್ಲಿ ಪಾಲಿಸುವುದು ಭಾರತೀಯರ ಮೂಲಭೂತ ಕರ್ತವ್ಯವಾಗಿದೆ.
[C] ಭಾರತದ ಸಾರ್ವಭೌಮತೆ, ಐಖ್ಯತೆ ಹಾಗು ಅಖಂಡತೆಯನ್ನು ಎತ್ತಿ ಹಿಡಿಯುವುದು: ಭಾರತದ ಪ್ರಜೆಗಳು ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಕೂಡದು. ಅಂತೆಯೇ ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಭಾಷೆ, ಪ್ರದೇಶ ಮುಂತಾದ ಭಿನ್ನತೆಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಬಾಳಲು ಮುಂದಾಗಬೇಕು. ಅದರೊಡನೆ ಭಾರತವು ಹೊಂದಿರುವ ಅಖಂಡತೆಗೆ ಧಕ್ಕೆಯಾಗುವ ಪ್ರತ್ಯೇಕತಾ ಚಳುವಳಿಗಳಿಂದ ವಿಮುಖರಾಗಬೇಕಾದದ್ದು ಪ್ರಜೆಗಳ ಮೂಲಭೂತ ಕರ್ತವ್ಯವಾಗಿದೆ.
[D] ದೇಶದ ರಕ್ಷಣೆಗೆ ಕರೆ ಬಂದಾಗ ದೇಶ ಸೇವೆಗೆ ಸದಾ ಸಿದ್ಧರಾಗಿರುವುದು: ಭಾರತದ ಭದ್ರತೆಗೆ ಆಪತ್ತು ಒದಗಿದಾಗ ಪ್ರಜೆಗಳು ಜೀವ ನೀಡಿದರೆ ಭಾರತ ಜೀವಂತವಾಗಿ ವಿಶ್ವದ ಭೂಪಟದಲ್ಲಿರುತ್ತದೆ. ಮಾತೃ ಭೂಮಿಗೆ ತ್ಯಾಗ ಮಾಡುವುದು ಪ್ರಜೆಗಳ ಪವಿತ್ರ ಹಾಗು ಸಂವಿಧಾನಾತ್ಮಕ ಕರ್ತವ್ಯ. ಇಲ್ಲಿ ದೇಶ ಸೇವೆಯ ಕರೆ ಯುದ್ಧ ಕಾಲದಲ್ಲಿ ಮಾತ್ರವಲ್ಲದೇ ಶಾಂತಿ ಕಾಲದಲ್ಲಿ ಅಂದರೆ ಪ್ರವಾಹ, ಭೂಕಂಪ, ಬರಗಾಲ ಮುಂತಾದ ಸಮಯಕ್ಕೂ ಅನ್ವಯವಾಗುತ್ತದೆ. ಪ್ರಜೆಗಳು ಇತರ ಪ್ರಜೆಗಳು ಆಪತ್ತಿನಲ್ಲಿದ್ದಾಗ ಾರ್ಥಿಕ ನೆರವಿಗೆ ಧಾವಿಸಿ ದೇಶ ಸೇವೆ ಮಾಡಬೇಕಾಗುತ್ತದೆ.
[E] ಭಾರತದ ಪ್ರಜೆಗಳತ್ತ ಸಾಮರಸ್ಯ ಹಾಗು ಸಹೋದರತ್ವ ಬೆಳೆಸಿಕೊಳ್ಳುವುದು ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆಯಾಗುವ ಆಚರಣೆಗಳನ್ನು ಕೈಗೊಳ್ಳದಿರುವುದು: ಭಾರತೀಯ ಸಮಾಜವು ಧಾರ್ಮಿಕ, ಸಾಂಸ್ಕೃತಿಕ, ಪ್ರಾದೇಶಿಕ ಹಾಗು ಭಾಷಾ ವೈವಿಧ್ಯತೆಯಿಂದ ಕೂಡಿದೆ. ಈ ಲಕ್ಷಣದ ನಡುವೆಯೂ ಸಮಾಜದಲ್ಲಿ ನಾವೆಲ್ಲ ಭಾರತೀಯರೆಂಬ ಭಾವನಾತ್ಮಕ ಹಾಗು ಮಾನಸಿಕ ಐಖ್ಯತೆ ಬೆಳೆಸಿಕೊಳ್ಳಬೇಕಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಉಳಿಸಿ ಬೆಳೆಸಲು ಭಾರತೀಯ ಪ್ರಜೆಗಳಲ್ಲಿ ಸಾಮರಸ್ಯ ಹಾಗು ಸಹೋದರತ್ವ ಪಾಲನೆಯು ನೆರವಾಗುತ್ತದೆ. ಜೊತೆಗೆ ಮಹಿಳೆಯರ ನ್ಯಾಯ ಸಮ್ಮತ ಜೀವನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಪ್ರಜೆಗಳಾದವರು ವರ್ತಿಸಬೇಕಾಗುತ್ತದೆ. ಪ್ರಾಚೀನ ಕಾಲದಿಂದ ಮಹಿಳೆಯರ ಸ್ಥಾನ ಮಾನಕ್ಕೆ ತೊಡಕಾದ ಕ್ರೂರ ಆಚರಣೆಗಳನ್ನು ಪಾಲಿಸದೇ ಅವರಿಗೆ ಗೌರವ ನೀಡಬೇಕಾದದ್ದು ಪ್ರಜೆಗಳ ಆಧ್ಯ ಕರ್ತವ್ಯವಾಗಿದೆ.
[F] ನಮ್ಮ ಶ್ರೀಮಂತ ಸಂಮಿಶ್ರ ಸಂಸ್ಕೃತಿಯ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು: ವಿಶ್ವದಲ್ಲಿ ಭಾರತವು ತನ್ನ ಶ್ರೀಮಂತ ಸಂಮಿಶ್ರ ಸಂಸ್ಕೃತಿಗೆ ಹೆಸರಾಗಿದೆ. ಜೊತೆಗೆ ಭಾರತ ಪ್ರಾಚೀನ ಕಾಲದಿಂದಲೂ ಹಲವು ಕ್ಷೇತ್ರಗಳಲ್ಲಿ ವೈಭವಯುತ ಸಾಧನೆ ತೋರಿದೆ. ಈ ಅಂಶಗಳನ್ನು ಮುಂದಿನ ಜನಾಂಗಗಳಿಗೆ ತಲುಪಿಸಬೇಕಾದರೆ ಪ್ರತಿಯೊಬ್ಬ ಭಾರತೀಯ ಪ್ರಜೆ ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಗತಕಾಲದ ವೈಭವವನ್ನು ಗೌರವಿಸಿ ರಕ್ಷಿಸಬೇಕಾಗಿದೆ.
[G] ಅರಣ್ಯ, ಸರೋವರ, ನದಿ, ವನ್ಯ ಜೀವಿಗಳು ಸೇರಿದಂತೆ ಸ್ವಾಭಾವಿಕ ಪರಿಸರವನ್ನು ರಕ್ಷಿಸುವುದು ಹಾಗು ಅಭಿವೃದ್ಧಿ ಪಡಿಸುವುದು: ಇಂದು ವಿಶ್ವವೇ ವಿವಿಧ ಪರಿಸರ ಮಾಲಿನ್ಯಗಳಿಂದ ಬಳಲುತ್ತಿದೆ. ಭಾರತ ಅಗಾಧ ಸಸ್ಯ, ಜಲ, ಜೀವ ಸಂಪತ್ತನ್ನು ಹೊಂದಿದ್ದು ಅದರ ರಕ್ಷಣೆ ಪ್ರಜೆಗಳ ಮೂಲಭೂತ ಕರ್ತವ್ಯವಾಗಿದೆ. ಜಲ ಮೂಲಗಳು, ಅರಣ್ಯ, ವಿಶಿಷ್ಠ ವನ್ಯ ಜೀವಿಗಳ ನಾಶವನ್ನು ತಡೆದು ಅವುಗಳ ಅಭಿವೃದ್ಧಿಗೆ ನಾವೆಲ್ಲ ಮುಂದಾಗಬೇಕಾಗಿದೆ. ಈ ಮೂಲಕ ಸ್ವಾಭಾವಿಕ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ.
[H] ವೈಜ್ನಾನಿಕ ಹಾಗು ಮಾನವೀಯ ಗುಣಗಳನ್ನು ಮತ್ತು ವಿಚಾರಣಾ ಹಾಗು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದು: ಭಾರತದಲ್ಲಿ ಮನುಕುಲಕ್ಕೆ ಮಾರಕವಾದ ಹಲವು ಸಾಮಾಜಿಕ ಪಿಡುಗುಗಳು, ಮೌಢ್ಯಗಳು, ಸಂಪ್ರದಾಯಗಳು ಜಾರಿಯಲ್ಲಿದ್ದು ಅವುಗಳ ನಿರ್ಮೂಲನೆಗೆ ಪ್ರಜೆಗಳು ವೈಜ್ನಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಮಾನವೀಯ ಗುಣಗಳಾದ ದಯೆ, ಅನುಕಂಪ, ಸಹಕಾರ, ತ್ಯಾಗ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು. ಮಾತ್ರವಲ್ಲ, ಚಿಕಿತ್ಸಕ ವಿಧಾನದಿಂದ ಕಲಿಕೆಯಲ್ಲಿ ತೊಡಗಿ ದೇಶಕ್ಕೆ ನೆರವಾಗಬಲ್ಲ ಸಂಶೋಧನೆಗಳಲ್ಲಿ ತೊಡಗಬೇಕಾಗುತ್ತದೆ.
[I] ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು: ಸ್ವತಂತ್ರ್ಯ ಭಾರತದಲ್ಲೂ ಪ್ರಜೆಗಳು ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯನ್ನು ಹಲವು ಸನ್ನಿವೇಶದಲ್ಲಿ ಮುಂದುವರೆಸಿರುವುದು ತಿಳಿದ ವಿಚಾರವಾಗಿದೆ. ಸರ್ವರ ತೆರಿಗೆ ಹಣದಿಂದ ಕಚೇರಿ, ಸೇತುವೆ, ಉದ್ಯಾನ, ವೃತ್ತ, ರೈಲ್ವೆ, ಬಸ್ಗಳನ್ನು ಜನರ ಅನುಕೂಲಕ್ಕಾಗಿ ಸರ್ಕಾರ ಒದಗಿಸಿರುತ್ತದೆ. ಉದ್ರಿಕ್ತ ಪ್ರಜೆಗಳು ಇಂತಹ ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸಿದಾಗ ಅವುಗಳ ಪುನರ್ನಿರ್ಮಾಣಕ್ಕೆ ಜನರ ಹಣವನ್ನೇ ಬಳಸಲಾಗುತ್ತದೆ. ಜೊತೆಗೆ ಹಿಂಸಾಚಾರದಿಂದ ಪ್ರಾಣಹಾನಿಯಾದಾಗ ಸರ್ಕಾರ ಅವರ ಸಂಬಂಧಿಗಳಿಗೆ ಸಾರ್ವಜನಿಕ ತೆರಿಗೆ ಹಣವನ್ನೇ ಪರಿಹಾರವಾಗಿ ನೀಡುತ್ತದೆ. ಆದ್ದರಿಂದ ಪ್ರಜೆಗಳು ಇತರರ ಮೇಲೆ ಹಿಂಸಾಚಾರ ನಡೆಸುವುದನ್ನು ಮತ್ತು ಸಾರ್ವಜನಿಕ ಆಸ್ತಿಗೆ ಧಕ್ಕೆ ಮಾಡುವುದನ್ನು ಕೈಬಿಡಬೇಕಾಗಿದೆ.
[J] ವಿವಿಧ ಕ್ಷೇತ್ರಗಳಲ್ಲಿ ವೈಯಕ್ತಿಕ ಹಾಗು ಸಾಮೂಹಿಕ ನೈಪುಣ್ಯತೆ ಮೂಲಕ ದೇಶದಭಿವೃದ್ಧಿಗೆ ಕಾಣಿಕೆ ನೀಡಲು ಶ್ರಮಿಸುವುದು: ಯಾವುದೇ ದೇಶದ ಅಭಿವೃದ್ಧಿ ತನ್ನ ಪ್ರಜೆಗಳ ಪ್ರಗತಿಯನ್ನು ಅವಲಂಬಿಸಿದೆ. ತನಗೆ ಆಸಕ್ತಿ ಹಾಗು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಪ್ರತಿಯೊಬ್ಬ ಪ್ರಜೆ ಶ್ರದ್ಧೆಯಿಂದ ಪ್ರಯತ್ನಿಸಿ ಪ್ರಗತಿ ಹೊಂದಬೇಕು. ಆಗ ಕಲೆ, ಸಾಹಿತ್ಯ, ಕ್ರೀಡೆ, ವಿಜ್ನಾನ, ಸಂಶೋಧನೆ ಮುಂತಾದ ಸರ್ವತೋಮುಖ ಪ್ರಗತಿಯನ್ನು ದೇಶ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮೂಹಿಕ ಪ್ರಯತ್ನದಿಂದಲೂ ಪ್ರಜೆಗಳು ದೇಶದ ಅಭಿವೃದ್ಧಿಗೆ ಕಾಣಿಕೆ ನೀಡಲು ಸಾಧ್ಯವಿದೆ. ಉದಾ: ಪರಿಸರ ರಕ್ಷಣೆ, ನೈರ್ಮಲ್ಯ ನಿರ್ವಹಣೆ ಇತ್ಯಾದಿ ಕಾರ್ಯಗಳು. ಹೀಗಾಗಿ ಪ್ರಜೆಗಳು ಈ ಕರ್ತವ್ಯವನ್ನು ಚಾಚು ತಪ್ಪದೇ ಪಾಲಿಸಬೇಕೆಂಬುದು ಸಂವಿಧಾನದ ಆಶಯ.
[K] ಪೋಷಕರು ೧೪ ವರ್ಷದೊಳಗಿನ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು: ೮೬ ನೇ ತಿದ್ದುಪಡಿ ಮೂಲಕ 2002 ರಲ್ಲಿ ಸಂವಿದಾನದ ಮೂರನೇ ಭಾಗಕ್ಕೆ 21 [A] ವಿಧಿ ಸೇರಿಸಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಲಾಯಿತು. ಇದರೊಡನೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನೊದಗಿಸುವುದನ್ನು ಮೂಲಭೂತ ಕರ್ತವ್ಯವೆಂದು ತಿಳಿಸಲಾಯಿತು.
ಸಮಾರೋಪ: ಸಂವಿಧಾಣಕ್ಕೆ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳ ಸೇರ್ಪಡೆಯನ್ನು ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಕಾನೂನು ಮಂತ್ರಿ ಎಚ್. ಆರ್. ಗೋಖಲೆ ಸೇರಿದಂತೆ ಹಲವು ನಾಯಕರು ಬಲವಾಗಿ ಸಮರ್ಥಿಸಿಕೊಂಡರು. ಪ್ರಜೆಗಳಲ್ಲಿ ಅವರ ಕರ್ತವ್ಯಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವಲ್ಲಿ ಈ ಪಟ್ಟಿಯ ಸೇರ್ಪಡೆ ನೆರವಾಗಲಿದೆ ಎಂಬುದು ಸಮರ್ಥಕರ ವಾದವಾಗಿತ್ತು. ಆದರೆ ಹಲವು ಚಿಂತಕರು, ನಾಯಕರು, ಬುದ್ಧಿ ಜೀವಿಗಳು ಕರ್ತವ್ಯಗಳ ಪಟ್ಟಿಯನ್ನು ಸಂವಿಧಾನಕ್ಕೆ ಸೇರಿಸಿರುವ ನಿರ್ಧಾರವನ್ನು ವಿಮರ್ಷಿಸಿದ್ದಾರೆ. ವಿಮರ್ಷಕರು ಶೇ ೯೯ ಜನ ಸಂವಿಧಾನಕ್ಕೆ ವಿಧೇಯತೆ ತೋರುತ್ತಿರುವಾಗ ಕರ್ತವ್ಯಗಳ ಪಟ್ಟಿ ಮೂಲಕ ಕಾನೂನಿನ ವಿಧೇಯತೆ ಸೂಚಿಸುವುದರ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಕರ್ತವ್ಯಗಳ ಪಟ್ಟಿ ಸಾಕಷ್ಟು ಅಸ್ಪಷ್ಟತೆಯಿಂದ ಕೂಡಿದೆಯಲ್ಲದೇ ಅನವಶ್ಯಕ, ಅಪರಿಪೂರ್ಣ, ಅನುಷ್ಟಾನಗೊಳಿಸಲಾಗದ ಕರ್ತವ್ಯಗಳೆಂದು ಮೂಲಭೂತ ಕರ್ತವ್ಯಗಳನ್ನು ಟೀಕಿಸಲಾಗಿದೆ. ಅಲ್ಲದೇ ಕಡ್ಡಾಯ ಮತ ನೀಡಿಕೆ, ತೆರಿಗೆ ಸಲ್ಲಿಕೆ, ಸೈನಿಕ ತರಬೇತಿ, ಕುಟುಂಬ ಯೋಜನೆ ಒಳಗೊಳ್ಳದಿರುವುದು ಮೂಲಭೂತ ಕರ್ತವ್ಯಗಳ ಪಟ್ಟಿಯ ದೌರ್ಬಲ್ಯವನ್ನು ತೋರುತ್ತದೆ ಎಂದು ವಿಮರ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ 1976 ರಿಂದ ಸಂವಿಧಾನದ ಭಾಗವಾಗಿ ಮುಂದುವರೆದಿರುವ ಮೂಲಭೂತ ಕರ್ತವ್ಯಗಳು ಸಂವಿಧಾನಾತ್ಮಕ ನೈತಿಕ ನಿಯಮಗಳಾಗಿ ಮತ್ತು ಸಂವಿಧಾನದ ಲಕ್ಷಣವಾಗಿ ಜಾರಿಯಲ್ಲಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ