ಶುಕ್ರವಾರ, ಜೂನ್ 18, 2021

VI. ಪೌರತ್ವ:
ಪೌರತ್ವದ ಅರ್ಥ ಮತ್ತು ಸ್ವರೂಪ: ಪೌರತ್ವ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಸಿಟಿಜನ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ ಸಿವಿಸ್ ಪದದಿಂದ ಉತ್ಪತ್ತಿ ಹೊಂದಿವೆ. ಸಾಮಾನ್ಯಾರ್ಥದಲ್ಲಿ ರಾಜ್ಯದ ಸದಸ್ಯನನ್ನು ಪೌರ ಎನ್ನಬಹುದು. ಆದರೆ ಪೌರತ್ವದ ಅರ್ಥವನ್ನು ಪರಿಪೂರ್ಣವಾಗಿ ಅರಿಯಲು ಕೆಳಗಿನ ಸಂಕುಚಿತ ಅಥವಾ ಪ್ರಾಚೀನ ಅರ್ಥವನ್ನು ಮತ್ತು ವಿಶಾಲ ಅಥವಾ ಆಧುನಿಕ ಅರ್ಥವನ್ನು ಮನವರಿಕೆ ಮಾಡಿಕೊಳ್ಳಬೇಕಾದದ್ದು ಅವಶ್ಯಕ. ಇದಲ್ಲದೇ ಪ್ರಜೆ ಹಾಗು ಪೌರ ಮತ್ತು ವಿದೇಶಿಗ ಹಾಗೂ ಪೌರ ಪದಗಳ ಸ್ಪಷ್ಟ ವಿವರಣೆಯಿಂದ ಪೌರತ್ವ ಪರಿಕಲ್ಪನೆಯನ್ನು ಸರಳವಾಗಿ ಅರಿಯಬಹುದಾಗಿದೆ.

ಸಂಕುಚಿತ ಅಥವಾ ಪ್ರಾಚೀನ ಅರ್ಥದಲ್ಲಿ ಪೌರ ಎಂದರೆ ನಗರವಾಸಿ ಎಂದರ್ಥ. ನಗರದಲ್ಲಿ ವಾಸಿಸಲು ಅವಕಾಶ ಹೊಂದಿದವರು ಮಾತ್ರ ಪೌರತ್ವ ಗಳಿಸಲು ಅರ್ಹರಾಗಿದ್ದು ಗ್ರಾಮಗಳಲ್ಲಿದ್ದ ಕಾರ್ಮಿಕರು, ಮಹಿಳೆಯರು, ಗುಲಾಮರು ಅಥವಾ ವಿದೇಶಿಯರು ಪೌರತ್ವಕ್ಕೆ ಅನರ್ಹರಾಗಿದ್ದರು. ಪ್ರಾಚೀನ ಗ್ರೀಕರನ್ವಯ ನಗರಗಳಲ್ಲಿರುವ ಕೆಲವರು ಮಾತ್ರ ಪೌರತ್ವ ಗಳಿಸಿದರೆ ಬಹುಸಂಖ್ಯಾತರು ಪೌರತ್ವ ಪಡೆದಿರಲಿಲ್ಲ. ಅರಿಸ್ಟಾಟಲ್ ರಾಜ್ಯದ ಆಡಳಿತದಲ್ಲಿ ಅಥವಾ ನ್ಯಾಯದಾನದಲ್ಲಿ ಭಾಗವಹಿಸುವವರು ಮಾತ್ರವೇ ಪೌರರೆಂದು ಪ್ರತಿಪಾದಿಸಿದ್ದು ಪ್ರಾಚೀನ ಗ್ರೀಕರ ಪೌರತ್ವ ಸೀಮಿತವಾಗಿದ್ದುದನ್ನು ಸೂಚಿಸುತ್ತದೆ. 

ವಿಶಾಲ ಅಥವಾ ಆಧುನಿಕ ಅರ್ಥದಲ್ಲಿ ವಿದೇಶಿಯರನ್ನು ಹೊರತುಪಡಿಸಿ ರಾಜ್ಯವೊಂದರ ಭೂಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿಗಳೆಲ್ಲ ಪೌರರು. ದೇಶವೊಂದು ಜಾತಿ, ಲಿಂಗ, ಭಾಷೆ, ಧರ್ಮ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ತೋರದೇ ತನ್ನ ಗಡಿಯೊಳಗೆ ವಾಸಿಸುವ ಎಲ್ಲರಿಗೆ ಪೌರತ್ವ ನೀಡುತ್ತದೆ. ಜೊತೆಗೆ ಆಯಾ ದೇಶ ತನ್ನ ಭೂಪ್ರದೇಶಕ್ಕೆ ಸೇರಿರುವ ಯಾವುದೇ ನಗರ, ಪಟ್ಟಣ, ಗ್ರಾಮ ಅಥವಾ ಅರಣ್ಯದಂತಹ ಭಾಗದಲ್ಲಿ ನೆಲೆಸಿರುವ ವ್ಯಕ್ತಿಗಳೆಲ್ಲರನ್ನು ಪೌರರೆಂದು ಪರಿಗಣಿಸುತ್ತದೆ. ಉದಾ: ಭಾರತದ ಗಡಿಯೊಳಗಿನ ಶ್ರೀಮಂತ ಅಥವಾ ಬಡವನಾಗಲಿ, ಪುರುಷ ಅಥವಾ ಮಹಿಳೆಯಾಗಲಿ, ಮಾಲಿಕ ಅಥವಾ ಕಾರ್ಮಿಕನಾಗಲಿ, ನಗರ ಅಥವಾ ಗ್ರಾಮ ವಾಸಿಯಾಗಲಿ ಭಾರತದ ಸದಸ್ಯತ್ವ ಪಡೆದುದರಿಂದ ಅವರೆಲ್ಲ ಭಾರತದ ಪೌರರು. ಆಧುನಿಕ ಪೌರತ್ವವು ಪ್ರಾಚೀನ ಪೌರತ್ವ ಪರಿಕಲ್ಪನೆಯಂತೆ ಕೆಲವರನ್ನು ಒಳಗೊಂಡಿರದೇ ಭೌಗೋಳಿಕ ತಳಹದಿಯ ಮೇಲೆ ಸರ್ವರನ್ನು ಒಳಗೊಂಡ ಸಾರ್ವತ್ರಿಕ ಪರಿಕಲ್ಪನೆಯಾಗಿದೆ. ಸಮಕಾಲಿನ ಪೌರರು ರಾಜ್ಯ ಒದಗಿಸುವ ನಾಗರಿಕ, ರಾಜಕಿಯ, ಸಾಮಾಜಿಕ ಅಥವಾ ಆರ್ಥಿಕ ಹಕ್ಕುಗಳನ್ನು ಅನುಭವಿಸುವರಲ್ಲದೇ ರಾಜ್ಯ ಸೂಚಿಸುವ ಕರ್ತವ್ಯಗಳನ್ನು ಪಾಲಿಸುತ್ತಾರೆ. ಗಮನಾರ್ಹ ಅಂಶವೇನೆಂದರೆ ಪೌರ ಎಂದರೆ ರಾಜ್ಯದ ಸದಸ್ಯ ಮತ್ತು ಪೌರತ್ವ ಎಂದರೆ ರಾಜ್ಯದ ಸದಸ್ಯತ್ವ ಎಂಬುದು.

ಪೌರ ಹಾಗೂ ಪ್ರಜೆಯ ವ್ಯತ್ಯಾಸ: ಪೌರ ಎಂಬುದು ವ್ಯಕ್ತಿ ದೇಶವೊಂದರ ನಾಗರಿಕ ಹಾಗೂ ರಾಜಕಿಯ ಹಕ್ಕುಗಳನ್ನು ಅನುಭವಿಸಬಲ್ಲ ಗೌರವ ಸೂಚಕ ಸ್ಥಾನವನ್ನು ಪ್ರತಿನಿಧಿಸುತ್ತದೆ. ಆದರೆ ಪ್ರಜೆ ಎಂಬುದು ನಿರಂಕುಶ ರಾಜನ ಅಧೀನತೆಯಲ್ಲಿನ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಪ್ರಜೆಗಳು ವಿವಿಧ ಸ್ವಾತಂತ್ರ್ಯ ಮತ್ತು ರಾಜಕಿಯ ಹಕ್ಕುಗಳನ್ನು ರಾಜನ ಆಶಯದಂತೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರಜೆ ಎಂಬುದು ಅಧೀನತೆಯನ್ನು ಸೂಚಿಸುವ ಪರಿಕಲ್ಪನೆ. ಸಾಮಾನ್ಯವಾಗಿ ಆಧುನಿಕ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಸದಸ್ಯರನ್ನು ಪೌರರೆಂದು ಮತ್ತು ಅರಸೊತ್ತಿಗೆ ಜಾರಿಯಲ್ಲಿರುವ ದೇಶಗಳ ಸದಸ್ಯರನ್ನು ಪ್ರಜೆ ಎಂದು ಕರೆಯಲಾಗುತ್ತದೆ. ಉದಾ: 15 ಆಗಸ್ಟ್ 1947 ರ ಮೊದಲು ಭಾರತ ಬ್ರಿಟಿಷ್ ಅರಸೊತ್ತಿಗೆಯ ಅಧೀನದಲ್ಲಿದ್ದರಿಂದ ಭಾರತಿಯರು ಬ್ರಿಟಿಷ್ ಅರಸನ ಪ್ರಜೆಗಳಾಗಿದ್ದರು. ಇಂದಿಗೂ ಬ್ರಿಟನ್ ಮತ್ತು ನೇಪಾಳದ ಜನರನ್ನು ಪೌರರೆನ್ನದೇ ಪ್ರಜೆ ಎನ್ನಲಾಗುತ್ತದೆ.

ಪೌರ ಹಾಗೂ ವಿದೇಶಿಗನ ವ್ಯತ್ಯಾಸ: ದೇಶವೊಂದರ ವಾಸಿಗಳಾದ ಪೌರ ಹಾಗೂ ವಿದೇಶಿಗನ ನಡುವೆ ವ್ಯತ್ಯಾಸವನ್ನು ಕಾಣಬಹುದಾಗಿದೆ. ಈ ವ್ಯತ್ಯಾಸಗಳಿಂದ ಪೌರ ಪರಿಕಲ್ಪನೆಯನ್ನು ಸುಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇವರಿಬ್ಬರ ನಡುವಿನ ಪ್ರಮುಖ ವ್ಯತ್ಯಾಸಗಳೆಂದರೆ
1. ದೇಶದಲ್ಲಿ ಪೌರ ಶಾಶ್ವತವಾಗಿ ನೆಲೆಸಿರುತ್ತಾನೆ. ಆದರೆ ವಿದೇಶಿಗ ದೇಶದಲ್ಲಿ ಪ್ರವಾಸ, ವ್ಯಾಪಾರ, ವಿದ್ಯಾಭ್ಯಾಸ, ಕ್ರೀಡೆ ಮುಂತಾದ ಕಾರಣಗಳಿಗೆ ತಾತ್ಕಾಲಿಕವಾಗಿ ನೆಲೆಸಿರುತ್ತಾನೆ.
2. ಪೌರ ತನ್ನ ದೇಶಕ್ಕೆ ನಿಷ್ಟನಾಗಿರುತ್ತಾನೆ. ಆದರೆ ವಿದೇಶಿಗ ತಾತ್ಕಾಲಿಕವಾಗಿ ನೆಲೆಸಿರುವ ದೇಶದ ಬದಲು ತನ್ನ ಮೂಲ ದೇಶಕ್ಕೆ ನಿಷ್ಟನಾಗಿರುತ್ತಾನೆ.
3. ಪೌರ ನಾಗರಿಕ ಹಾಗೂ ರಾಜಕಿಯ ಹಕ್ಕುಗಳನ್ನು ಪಡೆದಿರುತ್ತಾನೆ. ಆದರೆ ವಿದೇಶಿಗ ನಾಗರಿಕ ಹಕ್ಕುಗಳನ್ನು ಮಾತ್ರ ಪಡೆದಿದ್ದು ರಾಜಕಿಯ ಹಕ್ಕುಗಳನ್ನು ಅನುಭವಿಸಲಾರನು.

ಮೇಲೆ ವಿವರಿಸಲಾದ ಪೌರತ್ವ ಪರಿಕಲ್ಪನೆಯ ಹಲವು ವಿಷಯಗಳ ನೆರಳಿನಲ್ಲಿ ಭಾರತದಲ್ಲಿನ ಪೌರತ್ವವನ್ನು ಅರ್ಥೈಸಿಕೊಳ್ಳುವುದು ಸುಲಭವಾಗುತ್ತದೆ. ವಿಶೇಷವೇನೆಂದರೆ ಭಾರತ ಸಂವಿಧಾನವು ಪೌರ ಪರಿಕಲ್ಪನೆಯ  ವ್ಯಾಖ್ಯಾನವನ್ನು ನೀಡಿಲ್ಲ. ಆದರೆ ಪೌರತ್ವ ಕುರಿತಂತೆ ಹಲವು ನಿಯಮಗಳನ್ನು ಎರಡನೇ ಭಾಗದಲ್ಲಿ ವಿವರಿಸಿದೆ. ಇದರೊಡನೆ ಏಕ ಪೌರತ್ವಕ್ಕೆ ಭಾರತ ಸಂವಿಧಾನ ಮಹತ್ವ ನೀಡಿದ್ದು ಅದೊಂದು ಸಂವಿಧಾನದ ಪ್ರಧಾನ ಲಕ್ಷಣವೆನಿಸಿದೆ. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಭಾರತ ಸಂವಿಧಾನದ ಪೌರತ್ವಕ್ಕೆ ಸಂಬಂಧಿಸಿರುವ ಅವಕಾಶಗಳು ಮತ್ತು ಪೌರತ್ವ ಕಾಯಿದೆಯಲ್ಲಿನ ಬದಲಾವಣೆಗಳನ್ನು ಕೆಳಗೆ ಚರ್ಚಿಸಲಾಗಿದೆ.

1955 ರ ಪೌರತ್ವ ಕಾಯಿದೆಯಡಿ ಪೌರತ್ವ ಪಡೆದುಕೊಳ್ಳುವ ಹಾಗೂ ಕಳೆದುಕೊಳ್ಳುವ ವಿಧಾನಗಳು: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪೌರತ್ವದ ವ್ಯವಹಾರಗಳನ್ನು ನಿಯಂತ್ರಿಸಲು ಸಂವಿಧಾನದ 11ನೇ ವಿಧಿಯಂತೆ ಸಂಸತ್ತು ಕಾಯಿದೆ ರಚಿಸಲು ಅಧಿಕಾರವನ್ನು ಪಡೆದಿದೆ. ಆ ಅವಕಾಶವನ್ನು ಬಳಸಿಕೊಂಡು 1955 ರಲ್ಲಿ ಸಂಸತ್ತು ಪೌರತ್ವ ಕಾಯಿದೆ ರಚಿಸಿ 26 ಜನೇವರಿ 1950 ರಿಂದಲೇ ಪೂರ್ವಾನ್ವಯವಾಗುವಂತೆ ಪೌರತ್ವದ ನಿಯಮಾವಳಿಗಳನ್ನು ಜಾರಿಗೊಳಿಸಿತು. ಆ ಕಾಯಿದೆಯು 1986, 1992, 2003, 2005 ಮತ್ತು 2019 ರಲ್ಲಿ ತಿದ್ದುಪಡಿಗೊಂಡು ಭಾರತದ ಪೌರತ್ವವನ್ನು  ನಿಯಂತ್ರಿಸುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ಭಾರತದ ಪೌರತ್ವವನ್ನು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ವಿಧಾನಗಳನ್ನು ಕಾಲಾನುಕ್ರಮದಲ್ಲಿ ತಿದ್ದುಪಡಿಗೊಂಡ ಪೌರತ್ವ ಕಾಯಿದೆಯು ವಿವರಿಸುತ್ತದೆ. ಹೀಗಾಗಿ ಭಾರತದ ಪೌರತ್ವ ಪಡೆಯುವ ಮತ್ತು ಕಳೆದುಕೊಳ್ಳುವ ಕುರಿತಂತೆ ಜಾರಿಯಲ್ಲಿರುವ ವಿಧಾನಗಳ ಮನವರಿಕೆಗೆ ಪೌರತ್ವ ಕಾಯಿದೆಯ ಅರಿವು ಅಗ್ಯಗತ್ಯ. ಈ ಕಾಯಿದೆಯಲ್ಲಿ ತಿಳಿಸಿರುವಂತೆ ಭಾರತದ ಪೌರತ್ವವನ್ನು ಕೆಳಗಿನ ಐದು ವಿಧಾನದಲ್ಲಿ ಪಡೆಯಬಹುದಾಗಿದೆ. ಅವುಗಳೆಂದರೆ

1. ಜನನದ ಮೂಲಕ: 26 ಜನೇವರಿ 1950 ರಂದು ಅಥವಾ ನಂತರದಲ್ಲಿ 1 ಜುಲೈ 1987 ರವರೆಗೆ ಭಾರತದಲ್ಲಿ ಜನಿಸಿದ ಮಗುವು ಅದರ ಪೋಷಕರು ಯಾವುದೇ ದೇಶದ ಪೌರತ್ವ ಹೊಂದಿದ್ದರೂ ಜನನದ ಆಧಾರದ ಮೇಲೆ ಭಾರತದ ಪೌರತ್ವ ಪಡೆಯಲು ಅವಕಾಶವಿತ್ತು. ತಿದ್ದುಪಡಿಯ ಬಳಿಕ 1 ಜುಲೈ 1987 ರಂದು ಅಥವಾ ನಂತರ ಭಾರತದಲ್ಲಿ ಜನಿಸಿದ ಮಗುವಿನ ಪೋಷಕರಲ್ಲಿ ಒಬ್ಬರು ಭಾರತದ ಪೌರತ್ವವನ್ನು ಪಡೆದಿದ್ದರೆ ಮಾತ್ರ ಜನನದ ಆಧಾರದಲ್ಲಿ ಭಾರತದ ಪೌರತ್ವ ನೀಡಲಾಗುತ್ತಿತ್ತು. ಮುಂದೆ 3 ಡಿಸೆಂಬರ್ 2004 ರ ನಂತರ ಭಾರತದಲ್ಲಿ ಜನಿಸಿದ ಮಗುವಿನ ಇಬ್ಬರೂ ಪೋಷಕರು ಭಾರತದ ಪೌರತ್ವ ಪಡೆದಿದ್ದರೆ ಅಥವಾ ಒಬ್ಬರು ಭಾರತದ ಪೌರತ್ವ ಪಡೆದಿದ್ದು ಇನ್ನೊಬ್ಬರು ಅಕ್ರಮ ವಲಸಿಗರೆಂದು ಪರಿಗಣಿಸದಿದ್ದರೆ ಮಾತ್ರ ಭಾರತದ ಪೌರತ್ವವನ್ನು ನೀಡಲಾಗುತ್ತಿದೆ. ಗಮನಿಸಬೇಕಾದ ಅಂಶವೇನೆಂದರೆ ಭಾರತದಲ್ಲಿ ನೆಲೆಸಿರುವ ವಿದೇಶಿ ರಾಯಭಾರಿಗಳಿಗೆ ಅಥವಾ ಶತ್ರು ರಾಷ್ಟ್ರಗಳ ವಿದೇಶಿ ಪ್ರಜೆಗಳಿಗೆ ಜನಿಸುವ ಮಕ್ಕಳಿಗೆ ಭಾರತದ ಪೌರತ್ವವು ಜನನದ ಕಾರಣಕ್ಕೆ ದೊರೆಯುವುದಿಲ್ಲ.

2. ರಕ್ತ ಸಂಬಂಧದ ಅಥವಾ ವಂಶಪಾರಂಪರ್ಯದ ಮೂಲಕ: 26 ಜನೇವರಿ 1950 ರಂದು ಅಥವಾ ನಂತರದಲ್ಲಿ  10 ಡಿಸೆಂಬರ್ 1992 ರ ಮುಂಚೆ ವಿದೇಶಗಳಲ್ಲಿ ಜನಿಸಿದ ಮಗುವು ತನ್ನ ತಂದೆಯು ಭಾರತದ ಪೌರತ್ವ ಹೊಂದಿರುವ ಕಾರಣಕ್ಕೆ ರಕ್ತ ಸಂಬಂಧದ ಆಧಾರದ ಮೇಲೆ ಭಾರತದ ಪೌರತ್ವ ಹೊಂದಬಹುದಾಗಿತ್ತು. ಮುಂದೆ 10 ಡಿಸೆಂಬರ್ 1992 ರಂದು ಅಥವಾ ನಂತರ ವಿದೇಶದಲ್ಲಿ ಜನಿಸಿದ ಮಗುವು ತನ್ನ ಪೋಷಕರಲ್ಲಿ ಒಬ್ಬರು ಅಂದರೆ ತಂದೆ ಅಥವಾ ತಾಯಿ ಭಾರತದ ಪೌರರಾಗಿದ್ದರೆ ಭಾರತದ ಪೌರತ್ವವನ್ನು ರಕ್ತ ಸಂಬಂಧದ ಆಧಾರದ ಮೇಲೆ ಪಡೆಯುವಂತಾಯಿತು. 3 ಡಿಸೆಂಬರ್ 2004 ರ ನಂತರದಲ್ಲಿ ರಕ್ತ ಸಂಬಂಧದ ಆಧಾರದ ಮೇಲೆ ವಿದೇಶದಲ್ಲಿ ಜನಿಸಿದ ಮಗುವು ಭಾರತದ ಪೌರತ್ವವನ್ನು ಪೋಷಕರ ಪೌರತ್ವದ ಆಧಾರದಲ್ಲಿ ಪಡೆಯಲು ಅವಕಾಶವಿಲ್ಲ. ಬದಲಾಗಿ ಮಗು ಜನಿಸಿದ ಒಂದು ವರ್ಷದೊಳಗೆ ಜನಿಸಿದ ರಾಷ್ಟ್ರದಲ್ಲಿರುವ ಭಾರತದ ದೂತಾವಾಸ ಕಛೇರಿಯಲ್ಲಿ  ಪೋಷಕರು ನೊಂದಾವಣೆ ಮಾಡಿಕೊಂಡರೆ ಮಾತ್ರವೇ ಕೇಂದ್ರ ಸರ್ಕಾರದ ಅನುಮತಿಯೊಡನೆ ಪೌರತ್ವ ದೊರೆಯುತ್ತದೆ.

3. ನೊಂದಾವಣೆಯ ಮೂಲಕ: ವ್ಯಕ್ತಿಯೊಬ್ಬ ಕೇಂದ್ರ ಸರ್ಕಾರವು ನಿಗಧಿಪಡಿಸುವ ಸೂಕ್ತ ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳುವ ಮೂಲಕ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದಾಗಿದೆ. ಅಕ್ರಮವಾಗಿ ವಲಸೆ ಬಂದವರನ್ನು ಹೊರತುಪಡಿಸಿ ನೊಂದಾಯಿಸಿಕೊಳ್ಳುವ ವಿಧಾನದ ಮೂಲಕ ಕೆಳಗೆ ಸೂಚಿಸಲಾಗಿರುವ ಯಾವುದೇ ವರ್ಗದ ವ್ಯಕ್ತಿಗಳು ಪೌರತ್ವ ಪಡೆಯಬಹುದಾಗಿದೆ.
ಅ. ನೊಂದಾವಣೆಗೆ ಅರ್ಜಿ ಸಲ್ಲಿಸುವ ಮುನ್ನ ಐದು ವರ್ಷಗಳ ಕಾಲ ತಾತ್ಕಾಲಿಕವಾಗಿ ಭಾರತದಲ್ಲಿ ನೆಲೆಸಿದ ವ್ಯಕ್ತಿಗಳು.
ಆ. ಭಾರತದ ಪೌರತ್ವವನ್ನುಳ್ಳ ವ್ಯಕ್ತಿಯನ್ನು ವಿವಾಹವಾದ ವಿದೇಶಿಗರು. ಗಮನಾರ್ಹ ಅಂಶವೇನೆಂದರೆ ಇವರೂ ಸಹ ವಿವಾಹವಾಗಿ ಭಾರತಕ್ಕೆ ಬಂದ ಐದು ವರ್ಷಗಳ ನಂತರವೇ ನೊಂದಾಯಿಸಿಕೊಳ್ಳಲು ಅರ್ಹರು.
ಇ. ಭಾರತೀಯ ಪೌರರ ಅಲ್ಪ ವಯಸ್ಕ ಮಕ್ಕಳು.
ಈ. ಕಾಮನ್ ವೆಲ್ತ್ ರಾಷ್ಟ್ರಗಳ ಪೌರತ್ವ ಹೊಂದಿರುವ ವ್ಯಕ್ತಿಗಳು.
ಉ. ವಿದೇಶದಲ್ಲಿ ಅಥವಾ ಅವಿಭಜಿತ ಭಾರತದ ಹೊರಗಿನ ಸ್ಥಳದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಗಳು.

4. ಸಹಜೀಕೃತ ವಿಧಾನದ ಮೂಲಕ: ಮೇಲಿನ ವಿಧಾನಗಳ ಮೂಲಕ ಭಾರತದ ಪೌರತ್ವ ಪಡೆಯಲು ಅವಕಾಶವಿಲ್ಲದ ವಿದೇಶಿ ವ್ಯಕ್ತಿಗಳು ಸಹಜೀಕೃತ ವಿಧಾನದ ಮೂಲಕ ಭಾರತೀಯ ಪೌರತ್ವವನ್ನು ಪಡೆಯಬಹುದಾಗಿದೆ. ಅಕ್ರಮ ವಲಸಿಗನಲ್ಲದ ವ್ಯಕ್ತಿಯೊಬ್ಬ ಸಹಜೀಕೃತ ವಿಧಾನದ ಮೂಲಕ ಭಾರತದ ಪೌರತ್ವವನ್ನು ಪಡೆಯಲು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ
ಅ. ಭಾರತೀಯರಿಗೆ ಸಹಜೀಕೃತ ಪೌರತ್ವವನ್ನು ನಿರಾಕರಿಸುವ ದೇಶಕ್ಕೆ ಸೇರಿರಬಾರದು.
ಆ. ತನ್ನ ಮೂಲ ದೇಶದ ಪೌರತ್ವವನ್ನು ತ್ಯಜಿಸಿರಬೇಕು.
ಇ. ಸತ್ಚಾರಿತ್ರ್ಯ ಮೈಗೂಡಿಸಿಕೊಂಡಿರಬೇಕು.
ಈ. ಭಾರತ ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿ ಯಾವುದೇ ಒಂದನ್ನು ಬಳಸಲು ಶಕ್ತನಾಗಿರಬೇಕು .
ಉ. ಸಾಹಿತ್ಯ, ವಿಜ್ಙಾನ, ವಿಶ್ವ ಶಾಂತಿ ಅಥವಾ ಮಾನವ ಕಲ್ಯಾಣಕ್ಕೆ ಗಣನೀಯ ಕಾಣಿಕೆ ನೀಡಿರಬೇಕು.

5. ಭೂ ಸ್ವಾಧೀನದ ಮೂಲಕ: ಭಾರತದೊಡನೆ ಅನ್ಯ ದೇಶದ ನಿಯಂತ್ರಣದಲ್ಲಿರುವ ಭೂ ಭಾಗವನ್ನು ಸೇರಿಸಿಕೊಂಡಾಗ ಅಲ್ಲಿನ ಜನರು ಭಾರತದ ಪೌರತ್ವಕ್ಕೆ ಅರ್ಹರಾಗುತ್ತಾರೆ. ಸರ್ಕಾರವು ಒಂದೇ ಅಧಿಸೂಚನೆಯ ಮೂಲಕ ಸ್ವಾಧೀನಪಡಿಸಿಕೊಂಡ ಭೂ ಭಾಗದ ಸಮಸ್ತ ಜನರಿಗೆ ಪೌರತ್ವವನ್ನು ನೀಡಬಹುದಾಗಿದೆ. ಉದಾ: ಸ್ವಾತಂತ್ರ್ಯೋತ್ತರ ಭಾರತದೊಡನೆ ವಿಲೀನಗೊಂಡ ಪಾಂಡಿಚೇರಿ, ಗೋವಾ, ಸಿಕ್ಕಿಂ ಭಾರತ ಸರ್ಕಾರದ ಸ್ವಾಧೀನಕ್ಕೊಳಪಟ್ಟವು. ಹೀಗಾಗಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿ ಆ ಭೂ ಭಾಗದ ವ್ಯಕ್ತಿಗಳಿಗೆಲ್ಲ ಪೌರತ್ವ ನೀಡಿತು.

ಮೇಲಿನ ಐದು ವಿಧಾನಗಳ ಮೂಲಕ ಭಾರತದ ಪೌರತ್ವವನ್ನು ಪಡೆಯಬಹುದಾಗಿದ್ದು ಕೆಳಗಿನ ಮೂರು ವಿಧಾನಗಳಿಂದ ಪೌರತ್ವವನ್ನು ಕಳೆದುಕೊಳ್ಳಬಹುದಾಗಿದೆ.

1. ತ್ಯಜಿಸುವಿಕೆ ಮೂಲಕ: ಭಾರತದ ಪೌರತ್ವ ಹೊಂದಿದ ವ್ಯಕ್ತಿಯೊಬ್ಬ ಅನ್ಯ ಕಾರಣಕ್ಕೆ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ನಿಗಧಿತ ಘೋಷಣೆ ಮಾಡುವುದರೊಡನೆ ತನ್ನ ಪೌರತ್ವವನ್ನು ತ್ಯಜಿಸಬಹುದಾಗಿದೆ. ಹೀಗೆ ತನ್ನ ಭಾರತದ ಪೌರತ್ವವನ್ನು ತ್ಯಜಿಸಿದ ವ್ಯಕ್ತಿಯ ಅಪ್ರಾಪ್ತ ಮಕ್ಕಳೂ ಸಹ ಭಾರತೀಯ ಪೌರತ್ವ ಕಳೆದುಕೊಳ್ಳುತ್ತಾರೆ. ಆದರೆ ಪ್ರಾಪ್ತ ವಯಸ್ಸನ್ನು ತಲುಪಿದ ಒಂದು ವರ್ಷದೊಳಗೆ ಬಯಸಿದಲ್ಲಿ ಭಾರತೀಯ ಪೌರತ್ವವನ್ನು ಮರಳಿ ಆ ಮಕ್ಕಳು ಪಡೆಯಬಹುದಾಗಿದೆ.

2. ರದ್ದುಗೊಳಿಸುವಿಕೆ ಮೂಲಕ: ಭಾರತೀಯ,  ಪೌರನೊಬ್ಬನು ಸ್ವಯಿಚ್ಛೆಯಿಂದ ಪ್ರಜ್ಙಾಪೂರ್ವಕವಾಗಿ ವಿದೇಶಿ ಪೌರತ್ವ ಪಡೆದರೆ ಆತನ ಭಾರತದ ಪೌರತ್ವ ತಂತಾನೆ ರದ್ದುಗೊಳ್ಳುತ್ತದೆ. ಗಮನಿಸಬೇಕಾದ ಅಂಶವೇನೆಂದರೆ ಭಾರತವು ಯುದ್ಧದಲ್ಲಿ ನಿರತವಾಗಿದ್ದ ಸಮಯದಲ್ಲಿ ಈ ನಿಯಮವು ಅನ್ವಯವಾಗುವುದಿಲ್ಲ.

3. ಕಸಿದುಕೊಳ್ಳುವಿಕೆ ಮೂಲಕ: ಕೇಂದ್ರ ಸರ್ಕಾರವು ಭಾರತದ ಪೌರನೊಬ್ಬನ ಪೌರತ್ವವನ್ನು ವಿವಿಧ ಕಾರಣಗಳಿಗೆ ಬಲವಂತವಾಗಿ ಕಸಿದುಕೊಳ್ಳಬಹುದಾಗಿದೆ. ಸರ್ಕಾರವು  ಪೌರನೊಬ್ಬನ ಪೌರತ್ವವನ್ನು ಕಸಿದುಕೊಳ್ಳಲು ಈ ಕೆಳಗಿನ ವರ್ತನೆಗಳಲ್ಲಿ ಯಾವುದಾದರೂ ಒಂದು ಕಾರಣವಾಗಿರುತ್ತದೆ.
ಅ. ಪೌರನೊಬ್ಬ ಮೋಸ, ಸುಳ್ಳು ಅಥವಾ ವಂಚನೆಯ ಮೂಲಕ ಪೌರತ್ವ ಪಡೆದಿರುವುದು ಸಾಬೀತಾದರೆ
ಆ. ಪೌರನೊಬ್ಬ ಭಾರತದ ಸಂವಿಧಾನಕ್ಕೆ ಅವಿಧೇಯತೆ ತೋರಿದ್ದರೆ.
ಇ. ಯುದ್ಧ ಜರುಗುತ್ತಿರುವಾಗ ಶತ್ರು ರಾಷ್ಟ್ರದೊಡನೆ ಅಕ್ರಮ ಸಂಪರ್ಕ ಅಥವಾ ವ್ಯವಹಾರದಲ್ಲಿ ತೊಡಗಿದ್ದುದು ಸಾಬೀತಾದರೆ.
ಈ. ಪೌರನೊಬ್ಬ ನೊಂದಣಿ ಅಥವಾ ಸಹಜೀಕೃತ ವಿಧಾನದಲ್ಲಿ ಪೌರತ್ವ ಪಡೆದ ಐದು ವರ್ಷದೊಳಗೆ ಎರಡು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರೆ.
ಒಟ್ಟಾರೆ ಮೇಲೆ ಸರಳವಾಗಿ ಚರ್ಚಿಸಲಾಗಿರುವ ಪೌರತ್ವ ಕಾಯಿದೆ 1955 ರನ್ವಯ ಸ್ವಾತಂತ್ರ್ಯೋತ್ತರ ಭಾರತದ ಪೌರತ್ವವು ನಿಯಂತ್ರಿಸಲ್ಪಟ್ಟಿದೆ. ಆಯಾ ಕಾಲದ ಅಗತ್ಯಾನುಸಾರ ಪೌರತ್ವದ ದೋಷಗಳ ನಿವಾರಣೆಗಾಗಿ ತಿದ್ದುಪಡಿಗಳೊಡನೆ ಮೂಲ ಕಾಯಿದೆಯ ನಿಯಮಾವಳಿಗಳು ಬದಲಾಗುತ್ತಾ ಬಂದಿವೆ. 16 ರಾಷ್ಟ್ರದೊಡನೆ ದ್ವೀ ಪೌರತ್ವ ಹೊಂದಲು 2003 ರ ಪೌರತ್ವ ತಿದ್ದುಪಡಿ ಕಾಯಿದೆ ಅವಕಾಶ ಕಲ್ಪಿಸಿದರೆ ಭಾರತೀಯ ಮೂಲದ ಹಾಗೂ ಅನಿವಾಸಿ ಭಾರತೀಯರ ತಾರತಮ್ಯ ಹೋಗಲಾಡಿಸಲು 2015 ರ ಪೌರತ್ವ ತಿದ್ದುಪಡಿ ಕಾಯಿದೆಯು ಪ್ರಯತ್ನಿಸಿದೆ. ಇತ್ತೀಚೆಗೆ ಧಾರ್ಮಿಕ ಕಿರುಕುಳದಿಂದ 30 ಡಿಸೆಂಬರ್ 2014 ರೊಳಗೆ ದಾಖಲೆಯಿಲ್ಲದೇ ಪಾಕಿಸ್ತಾನ, ಬಾಂಗ್ಲಾ ಮತ್ತು ಅಪಘಾನಿಸ್ತಾನದಿಂದ ಅಕ್ರಮವಾಗಿ ವಲಸೆ  ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಕ್ಕ್, ಬೌದ್ಧ, ಪಾರಸಿ ಧರ್ಮೀಯರಿಗೆ ಭಾರತದ ಪೌರತ್ವ ನೀಡಲು 2019 ರ ಪೌರತ್ವ ತಿದ್ದುಪಡಿ ಕಾಯಿದೆಯು ಮುಂದಾಗಿದೆ. ಗಮನಾರ್ಹ ಸಂಗತಿಯೇನೆಂದರೆ ಮುಸಲ್ಮಾನರನ್ನು ಈ ಪೌರತ್ವ ನೀಡಿಕೆಯಿಂದ ಹೊರಗುಳಿಸಿದ ಕಾರಣಕ್ಕೆ ಅಪಾರ ಪ್ರತಿಭಟನೆಯನ್ನು 2019 ರ ಪೌರತ್ವ ತಿದ್ದುಪಡಿ ಕಾಯಿದೆ  ಎದುರಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...