ಶುಕ್ರವಾರ, ಜೂನ್ 18, 2021

ರಾಜಕುಮಾರನಿಗೆ ನಿಕೊಲೊ ಮೆಕೆವೆಲ್ಲಿಯ ಉಪದೇಶಗಳು: 

ಮಾನವ ನಿರ್ಮಿತ ಅನೇಕ ಸಂಸ್ಥೆಗಳಲ್ಲಿ ರಾಜ್ಯ ಶ್ರೇಷ್ಠವಾದದ್ದು. ರಾಜ್ಯವಿಲ್ಲದೇ ಮಾನವರ ಕಲ್ಯಾಣದ ಸಾಧನೆ ಅಸಾಧ್ಯ. ಆದ್ದರಿಂದಲೇ ವ್ಯಕ್ತಿ ಹಿತಕ್ಕಿಂತ ರಾಜ್ಯದ ಹಿತಕ್ಕೆ ಮಹತ್ವ ನೀಡಲಾಗುತ್ತದೆ. ಹೀಗೆ ಮಹತ್ವವುಳ್ಳ ರಾಜ್ಯವೊಂದರ ಸಮರ್ಪಕ ನಿರ್ವಹಣೆ ಮತ್ತು ಮುಂದುವರಿಕೆ ಅಧಿಕಾರವನ್ನು ಅವಲಂಬಿಸಿದೆ. ರಾಜಕೀಯ ಅಧಿಕಾರವನ್ನು ಹೊಂದಿದ ಆಳುವವರು ವಿವಿಧ ಸಾಧನಗಳನ್ನು ಬಳಸಿ ರಾಜ್ಯದ ಗುರಿಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ರಾಜಕೀಯ ಅಧಿಕಾರವನ್ನುಳ್ಳ ಆಳುವವರು ರಾಜ್ಯವನ್ನು ಸಮರ್ಪಕವಾಗಿ ಸಂಘಟಿಸಿ ಅದಕ್ಕೆ ಭದ್ರತೆ ಹಾಗೂ ರಕ್ಷಣೆ ಒದಗಿಸಲು ಶ್ರಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಿಕೊಲೊ ಮೆಕೆವೆಲ್ಲಿಯು ತನ್ನ ದಿ ಪ್ರಿನ್ಸ್ ಕೃತಿಯಲ್ಲಿ ಆಳುವ ಅರಸರಿಗೆ ಮತ್ತು ಭವಿಷ್ಯದಲ್ಲಿ ಆಳಲು ಮುಂದಾಗುವ ಅರಸು ಕುಮಾರರಿಗೆ ರಾಜ್ಯಾಡಳಿತಕ್ಕೆ ಸಂಬಂಧಿಸಿದಂತೆ ಅಂದರೆ ರಾಜಕೀಯ ಅಧಿಕಾರವನ್ನು ಗಳಿಸುವ, ಉಳಿಸಿಕೊಳ್ಳುವ ಮತ್ತು ಮುಂದುವರೆಸುವ ಕುರಿತು ಹಲವು ಉಪದೇಶಗಳನ್ನು ನೀಡಿದ್ದಾನೆ.

ದಿ ಪ್ರಿನ್ಸ್ ಕೃತಿಯು ರಾಜ್ಯಶಾಸ್ತ್ರ ವಿಷಯದ ಶೈಕ್ಷಣಿಕ ಕೃತಿಯಾಗಿರದೇ ರಾಜ್ಯಾಡಳಿತದ ಪ್ರಾಯೋಗಿಕ ವಿವರಗಳನ್ನೊಳಗೊಂಡ ಕೃತಿಯಾಗಿದೆ. ಮುಂದುವರೆದು ಅರಸನಾದವ ಅಥವಾ ಅರಸನಾಗುವವ ಪಾಲಿಸಬೇಕಾದ ಉಪದೇಶಗಳ ರೂಪದಲ್ಲಿ ದಿ ಪ್ರಿನ್ಸ್ ಬರೆಯಲ್ಪಟ್ಟಿದೆ. ಇಂದಿಗೂ ಪ್ರಸ್ತುತವೆನಿಸುವ ಮತ್ತು ಅಧಿಕಾರ ರಾಜಕೀಯ ಕುರಿತಂತೆ ಚರ್ಚಿಸುವಾಗ ಕಡೆಗಣಿಸಲಾಗದ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ಇದರೊಡನೆ ಮೆಕೆವೆಲ್ಲಿಯ ಡಿಸ್ಕೋರ್ಸಸ್ ಹಾಗೂ ಆರ್ಟ್ ಆಫ್ ವಾರ್ ಕೃತಿಗಳೂ ರಾಜಕುಮಾರರಿಗೆ ಉಪಯುಕ್ತ ಮಾರ್ಗದರ್ಶನಗಳನ್ನು ಒಳಗೊಂಡಿವೆ. ತನ್ನ ವಿವಿಧ ಕೃತಿಗಳಲ್ಲಿ ರಾಜ್ಯವನ್ನಾಳುತ್ತಿರುವ ಅರಸರಿಗೆ ಮತ್ತು ರಾಜ್ಯವನ್ನಾಳಲು ಸಿದ್ಧರಾಗುತ್ತಿರುವ ರಾಜಕುಮಾರರಿಗೆ ಮೆಕೆವೆಲ್ಲಿ ಪ್ರತಿಪಾದಿಸಿರುವ ಉಪದೇಶಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಚರ್ಚಿಸಲಾಗಿದೆ. ತನ್ನ ಸಮಕಾಲಿನ ಇಟಲಿಯ ಪರಿಸ್ಥಿತಿ, ಪ್ರಾಯೋಗಿಕ ಅನುಭವ, ಪುನರುಜ್ಜೀವನದ ಪ್ರಭಾವ, ಆದರ್ಶವಾದದಲ್ಲಿನ ಅಪನಂಬಿಕೆಗಳ ಹಿನ್ನೆಲೆಯಲ್ಲಿ ಮೆಕೆವೆಲ್ಲಿಯು ಪ್ರತಿಪಾದಿಸಿರುವ ಪ್ರಮುಖ ಉಪದೇಶಗಳೆಂದರೆ

1. ಪ್ರಬಲ ರಾಜ್ಯ ಹೊಂದಲು ಉತ್ಸುಕತೆ: ಪ್ರಬಲ ರಾಜ್ಯವೆಂದರೆ ತನ್ನ ಭದ್ರತೆ ಹಾಗೂ ರಕ್ಷಣೆಗೆ ಪೂರಕವಾದ ನೀತಿ ಹಾಗೂ ಕಾರ್ಯಗಳನ್ನುಳ್ಳ ರಾಜ್ಯ ಎಂದಾಗುತ್ತದೆ. ಪ್ರಜೆಗಳನ್ನು ರಕ್ಷಿಸಬೇಕಾದ ರಾಜ್ಯವು ಮೊದಲು ತಾನು ಸುಭದ್ರವಾಗಿರಬೇಕಾಗುತ್ತದೆ. ಹೀಗಾಗಿ ಪ್ರಬಲ ರಾಜ್ಯವನ್ನು ಹೊಂದಲು ರಾಜಕುಮಾರ ಉತ್ಸುಕನಾಗಿರಬೇಕೆಂದು ಮೆಕೆವೆಲ್ಲಿ ಉಪದೇಶಿಸಿದ್ದನು. ಮುಂದುವರೆದು ಪ್ರಬಲ ರಾಜ್ಯವನ್ನು ಸ್ಥಾಪಿಸಿಕೊಳ್ಳಲು ಯಾವುದೇ ಬಗೆಯ ಸಾಧನಗಳನ್ನು ಬಳಸಿಕೊಳ್ಳಲು ರಾಜಕುಮಾರ ಮುಕ್ತನಾಗಿರುವನೆಂದು ಮೆಕೆವೆಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದನು. ಈ ನಿಟ್ಟಿನಲ್ಲಿ ಅಧಿಕಾರಕ್ಕಾಗಿ ಜರುಗುವ ಹೋರಾಟವಾದ ರಾಜಕೀಯ ಜೀವನದ ವಾಸ್ತವಿಕ ಕಹಿಗಳಿಂದ ರಾಜನಾದವನು ಸದಾ ಮಾರ್ಗದರ್ಶನಗೊಳ್ಳಬೇಕೆಂದು ಮೆಕೆವೆಲ್ಲಿ ರಾಜನನ್ನು ಎಚ್ಚರಿಸಿದ್ದನು. ಸ್ವತಂತ್ರ್ಯ, ಸ್ವಾವಲಂಬಿ ಮತ್ತು ಸುವ್ಯವಸ್ಥಿತ ರಾಜ್ಯದ ಗುರಿಗಳನ್ನು ಮಾತ್ರ ರಾಜಕುಮಾರನ ಕಾರ್ಯಗಳು ಆಧರಿಸಿರಬೇಕೆಂದು ಸೂಚಿಸಿದ್ದನು. ಪ್ರಬಲವಾದ ರಾಜ್ಯವನ್ನು ಹೊಂದಲು ರಾಜನಾದವ ನೈತಿಕತೆಗಿಂತ ಹೆಚ್ಚು ರಾಜಕೀಯ ಅಧಿಕಾರಕ್ಕೆ ಮಹತ್ವ ನೀಡಬೇಕೆಂದು ಮೆಕೆವೆಲ್ಲಿ ತಿಳಿಸಿದ್ದನು. ಜೊತೆಗೆ ಪ್ರಬಲ ಸೈನ್ಯ, ಸ್ಥಿರವಾದ ಸರ್ಕಾರ, ಪ್ರಜೆಗಳಲ್ಲಿ ಐಖ್ಯತೆ ಮತ್ತು ಆರ್ಥಿಕ ಸುಭದ್ರತೆಯೊಡನೆ ರಾಜಕುಮಾರ ಪ್ರಬಲ ರಾಜ್ಯವನ್ನು ಹೊಂದಬಹುದೆಂಬ ಅಭಿಪ್ರಾಯವನ್ನು ಪ್ರತಿಪಾದಿಸಿದ್ದನು.

2. ಸಾಧನಗಳಿಗಿಂತ ಗುರಿಗೆ ಆಧ್ಯತೆ: 

 ರಾಜ್ಯವು ಸರ್ವ ಶ್ರೇಷ್ಟ ಸಂಸ್ಥೆ. ಹೀಗಾಗಿ ವೈಯಕ್ತಿಕ ಹಿತಕ್ಕಿಂತ ರಾಜ್ಯದ ಹಿತಕ್ಕೆ ಮಹತ್ವ ನೀಡಲಾಗುತ್ತದೆ. ಆದ್ದರಿಂದ ರಾಜ್ಯದ ಅಧಿಕಾರ ಅಥವಾ ಗುರಿಗಳ ಸಾಕಾರಕ್ಕೆ ಅರಸರಾದವರು ಮಹತ್ವ ನೀಡಬೇಕೇ ಹೊರತು ಅವುಗಳನ್ನು ತಲುಪಲು ಉಪಯೋಗಿಸುವ ಸಾಧನ ಅಂದರೆ ಮಾರ್ಗಗಳಿಗಲ್ಲ ಎಂಬಂಶವನ್ನು ಮೆಕೆವೆಲ್ಲಿ ಪ್ರತಿಪಾದಿಸಿದ್ದನು.. ರಾಜ್ಯಾಧಿಕಾರದ ಗುರಿ ಸಾಧನೆಗೆ ಉತ್ತಮ ಅಥವಾ ಕೆಟ್ಟ ಮಾರ್ಗಗಳನ್ನು ಆಳುವವರು ಪಾಲಿಸಬಹುದೆಂದು ಪ್ರತಿಪಾದಿಸುವ ಮೂಲಕ ಸಾಧನಗಳಿಗಿಂತ ಗುರಿಗೆ ತನ್ನ ಚಿಂತನೆಯಲ್ಲಿ ಆಧ್ಯತೆಯನ್ನು ವ್ಯಕ್ತಪಡಿಸಿದ್ದನು. ಮುಂದುವರೆದು ರಾಜಕೀಯವು ಮೇಲಾಟದ ಚಟುವಟಿಕೆಯಾಗಿದ್ದು ರಾಜನಾದವ ಸನ್ಮಾರ್ಗದಲ್ಲಿ ಮಾತ್ರ ವರ್ತಿಸಬೇಕೆಂದಿಲ್ಲ ಎಂದಿರುವ. ರಾಜ್ಯದ ಪ್ರಾಥಮಿಕ ಗುರಿ ಉದ್ದೇಶಗಳಾದ ಪ್ರಜೆಗಳ ರಕ್ಷಣೆ, ಉತ್ತಮ ಜೀವನದ ಭರವಸೆ, ಶಾಂತಿ ಹಾಗೂ ಸುವ್ಯವಸ್ಥೆಯ ಪಾಲನೆ ಮುಂತಾದ ಗುರಿಗಳನ್ನು ಯಾವುದೇ ಮಾರ್ಗ ಅಥವಾ ಸಾಧನಗಳನ್ನು ಬಳಸಿ ತಲುಪಲು ಮೆಕೆವೆಲ್ಲಿ ಸಮ್ಮತಿಸಿದ್ದನು.

ಸಾಧನಗಳಿಗಿಂತ ಗುರಿಗೆ ಮಹತ್ವ ಒದಗಿಸಿರುವ  ಚಿಂತನೆಯು ಮೆಕೆವೆಲ್ಲಿಯ ಮಹತ್ವದ ಹಾಗೂ ಭಿನ್ನ ರಾಜಕೀಯ ಚಿಂತನೆ ಎನಿಸಿದೆ. ಏಕೆಂದರೆ ಬಹುತೇಕರು ಉತ್ತಮ ಗುರಿಗಳನ್ನು ತಲುಪಲು ಉತ್ತಮ ಮಾರ್ಗ ಅಥವಾ ಸಾಧನಗಳನ್ನೇ ಉಪಯೋಗಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಉದಾ: ಗಾಂಧಿ ಸಾಧನಗಳು ಗುರಿಯಷ್ಟೇ ನ್ಯಾಯ ಸಮ್ಮತವಾಗಿರಬೇಕು ಎಂಬುದಾಗಿ ಪ್ರತಿಪಾದಿಸಿದ್ದರು. ಆದರೆ ಮೆಕೆವೆಲ್ಲಿಯು ರಾಜರು ರಾಜ್ಯದ ಉತ್ತಮ ಗುರಿ ಸಾಧನೆಗೆ ಹಿಂಸೆ, ಸುಳ್ಳು ಹೇಳುವಿಕೆ, ತೆರಿಗೆ ಭಾರ, ಶತ್ರುಗಳ ಆಕ್ರಮಣದ ಭಯ ಬಿತ್ತುವಿಕೆ ಮುಂತಾದ ಅಶುದ್ಧ ಮಾರ್ಗ ಅಥವಾ ಸಾಧನಗಳ ಮೂಲಕ ರಾಜ್ಯಕ್ಕೆ ಪೂರಕವಾದ ಗುರಿಗಳನ್ನು ಸಾಕಾರಗೊಳಿಸಲು ಸೂಚಿಸಿರುವನು.

3. ರಾಜ್ಯದ ಸಾರ್ವಭೌಮ, ಸ್ವತಂತ್ರ ಹಾಗೂ ಜಾತ್ಯಾತೀತ ತತ್ವಗಳಿಗೆ ಪ್ರಾಶಸ್ತ್ಯ: ಸಮಾಜದಲ್ಲಿನ ಇತರ ಸಂಸ್ಥೆಗಳಿಗಿಂತ ರಾಜ್ಯವು ಶ್ರೇಷ್ಠವಾಗಿದ್ದು ಆ ಸ್ಥಾನಮಾನಕ್ಕೆ ಚ್ಯುತಿಯಾಗದಂತೆ ರಾಜರು ಗಮನ ನೀಡಬೇಕೆಂದು ಮೆಕೆವೆಲ್ಲಿ ಸೂಚಿಸಿದ್ದನು. ಇತರ ಸಂಘ ಅಥವಾ ಸಂಸ್ಥೆಗಳಿಗೆ ಆಧ್ಯತೆ ನೀಡಿದರೆ ರಾಜ್ಯದ ಅಸ್ತಿತ್ವಕ್ಕೆ ಹಾನಿ ನಿಶ್ಚಿತ ಎಂಬುದು ಈ ಉಪದೇಶದ ಹಿಂದಿದ್ದ ಕಾಳಜಿಯಾಗಿತ್ತು. ಇದರೊಡನೆ ರಾಜ್ಯವು ನೈತಿಕ,  ಮತ್ತು ಧಾರ್ಮಿಕ ಕಟ್ಟುಪಾಡುಗಳಿಂದ ಸ್ವತಂತ್ರವಾಗಿರುವಂತೆ ರಾಜನಾದವನು ಎಚ್ಚರಿಕೆ ವಹಿಸಬೇಕೆಂದು ಮೆಕೆವೆಲ್ಲಿ ಉಪದೇಶಿಸಿದ್ದ. ಏಕೆಂದರೆ ನೈತಿಕ ಅಥವಾ ಧಾರ್ಮಿಕ ಕಟ್ಟುಪಾಡುಗಳಿಗೆ ಆಳುವವರು ಒಳಗಾದರೆ ರಾಜ್ಯದ ನಿರಂತರತೆಗೆ ತೊಡಕುಗಳು ಸಾಮಾನ್ಯವೆಂಬುದು ಆತನ  ನಂಬಿಕೆಯಾಗಿತ್ತು . ಹೀಗಾಗಿ ಅರಸನು ನೈತಿಕತೆಯ ಬಂಧನಕ್ಕೊಳಗಾಗದೇ ಸ್ವತಂತ್ರವಾಗಿ ಆಳ್ವಿಕೆ ನಡೆಸಬೇಕೆಂಬ ಕಿವಿ ಮಾತನ್ನು ಮೆಕೆವೆಲ್ಲಿ ವ್ಯಕ್ತಪಡಿಸಿರುವ. ಮುಂದುವರೆದು ಧರ್ಮದ ಅಧೀನವಾಗಿರದೇ ಅರಸನಾದವ ತನ್ನ ಗುರಿ ಸಾಧನೆಗೆ ಅದನ್ನು ಉಪಯೋಗಿಸಿಕೊಳ್ಳಲು ಸ್ವತಂತ್ರನೆಂಬ ಅಭಿಪ್ರಾಯ ಮಂಡಿಸಿದ್ದನು. ಜೊತೆಗೆ ರಾಜಕೀಯವನ್ನು ಧರ್ಮ ಪ್ರಭಾವಿಸಿ ರಾಜ್ಯವು ಚರ್ಚಿನ ನಿಯಂತ್ರಣಕ್ಕೆ ಒಳಗಾಗದಂತೆ ಎಚ್ಚರಿಕೆಯನ್ನು ವಹಿಸಲು ಆಳುವವರಿಗೆ ಮೆಕೆವೆಲ್ಲಿ ಸೂಚಿಸಿದ್ದನು.

ರಾಜ್ಯವು ತನ್ನ ಗಡಿಯೊಳಗಿನ ಎಲ್ಲ ವ್ಯಕ್ತಿ ಮತ್ತು ಸಂಸ್ಥೆಗಳಿಗಿಂತ ಶ್ರೇಷ್ಠವಾಗಿರುವ ಸಂಸ್ಥೆ. ಜೊತೆಗೆ ರಾಜ್ಯವು ಸಮಗ್ರವಾದ ಮತ್ತು ಸ್ವತಂತ್ರವಾದ ಪರಿಕಲ್ಪನೆಯಾಗಿದ್ದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ಸಂಸ್ಥೆಯಾಗಿದೆ. ಅಧಿಕಾರವು ರಾಜ್ಯದ ಗುರಿಯಾಗಿದ್ದು ಧರ್ಮವು ಅದರ ಒಂದು ಭಾಗ ಅಥವಾ ಸಾಧನವಾಗಿರುತ್ತದೆ. ರಾಜ್ಯವು ಪ್ರಜೆಗಳ ಬೌತಿಕ ಅಗತ್ಯಗಳನ್ನು ಈಡೇರಿಸಲು ಅಸ್ತಿತ್ವಕ್ಕೆ ಬಂದಿದ್ದು ಅದಕ್ಕಿಂತ ಉನ್ನತವಾದ ಸಂಸ್ಥೆ ರಾಜ್ಯದೊಳಗೆ ಮತ್ತೊಂದಿಲ್ಲ. ಈ ವಿಚಾರಧಾರೆಯ ಹಿನ್ನೆಲೆಯಲ್ಲಿ ಮೆಕೆವೆಲ್ಲಿಯು ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಿಸಿದ್ದಾನೆ. ಜೊತೆಗೆ ರಾಜ್ಯವು ನೈತಿಕ ಗುರಿ ಹಾಗೂ ಉದ್ದೇಶಗಳ ಬದಲು ಮಾನವರ ಲೌಕಿಕ ಜೀವನಕ್ಕೆ ಮಹತ್ವ ಒದಗಿಸಬೇಕೆಂದು ಸೂಚಿಸಿದ್ದನು. ಮುಂದುವರೆದು ರಾಜಕೀಯವು ತನ್ನದೇ ತತ್ವ ಮತ್ತು ನಿಯಮಾಧಾರಿತ ಸ್ವತಂತ್ರ ಚಟುವಟಿಕೆಯಾಗಿದೆ ಎಂದಿರುವ. 

4. ಸಿಂಹ ಮತ್ತು ನರಿಯ ಗುಣಗಳ ಅನುಸರಣೆಗೆ ಒತ್ತಾಯ: ಸಿಂಹವು ಬಲದ ಮತ್ತು ನರಿಯು ಚಾಣಾಕ್ಷತೆಯ ಪ್ರತೀಕ. ಅರಸನಾದವನು ರಾಜ್ಯಾಡಳಿತದ ಯಶಸ್ಸಿಗೆ ಸಿಂಹದ ಬಲ ಮತ್ತು ನರಿಯ ಚಾಣಾಕ್ಷತೆಯ ಗುಣಗಳನ್ನು ಅನುಕರಿಸಬೇಕೆಂಬುದು ಮೆಕೆವೆಲ್ಲಿಯ ಉಪದೇಶವಾಗಿತ್ತು. ನರಿಯೊಂದರ ಚಾಣಾಕ್ಷತೆ ಅಥವಾ ಬುದ್ಧಿವಂತಿಕೆಯ ಅನುಕರಣೆಯು ಅರಸನಾದವನಿಗೆ ತನ್ನ ಗುರಿಗಳನ್ನು ಹಾಗೂ ಅವುಗಳ ಈಡೇರಿಕೆಗೆ ಅಗತ್ಯವಾದ ಸಾಧನಗಳನ್ನು ಅಂತಿಮಗೊಳಿಸಲು ಸಹಕಾರಿಯಾಗುತ್ತದೆ. ಇದರೊಡನೆ ಸಿಂಹದ ಶಕ್ತಿ ಅಥವಾ ಬಲದ ಗುಣದಿಂದ ಅರಸನು ತನ್ನ ಗುರಿಗಳನ್ನು ಸುಲಭವಾಗಿ ತಲುಪಲು ಸಾಧ್ಯ. ಕೇವಲ ನರಿಯ ಚಾಣಾಕ್ಷತೆ ಮೈಗೂಡಿಸಿಕೊಂಡರೆ ಬಲದ ಕೊರತೆಯಿಂದ ಅರಸನಾದವ ತೊಂದರೆ ಅನುಭವಿಸಬೇಕಾಗುತ್ತದೆ. ಅಂತೆಯೇ ಕೇವಲ ಬಲವನ್ನು ಅವಲಂಬಿಸಿದರೆ ನಾನಾ ಸಂಕಷ್ಟಗಳನ್ನು ರಾಜ್ಯಾಡಳಿತದಲ್ಲಿ ಅರಸನಾದವ ಎದುರಿಸಬೇಕಾಗುತ್ತದೆ. ಹೀಗಾಗಿ ಮೆಕೆವೆಲ್ಲಿಯು ಸಿಂಹ ಮತ್ತು ನರಿಗಳೆರಡರ ಗುಣಗಳನ್ನು ಅರಸನಾದವ ಅನುಕರಿಸಬೇಕೆಂಬುದಾಗಿ ಒತ್ತಾಯಿಸಿದ್ದನು. ರಾಜ್ಯದ ಮೇಲಿನ ಆಕ್ರಮಣಗಳ ನಿಯಂತ್ರಣ ಹಾಗೂ ರಾಜ್ಯದೊಳಗಿನ ಧಂಗೆ ಅಥವಾ ಕ್ರಾಂತಿಗಳನ್ನು ತಡೆಯಲು ರಾಜನಾದವ ಸಿಂಹದಂತೆ ಬಲವನ್ನೇ ಉಪಯೋಗಿಸಬೇಕಾಗುತ್ತದೆ. ಮುಂದುವರೆದು ಪ್ರಜೆಗಳಲ್ಲಿ ನಾಗರಿಕ ಸದ್ಗುಣಗಳನ್ನು ಮತ್ತು ನೈತಿಕತೆಯನ್ನು ಬಲಗೊಳಿಸಲು ನರಿಯ ಗುಣವಾದ ಚಾಣಾಕ್ಷತೆಯನ್ನೇ ರಾಜನಾದವನು ಬಳಸಬೇಕಾಗುತ್ತದೆ. ಒಟ್ಟಾರೆ ಮೆಕೆವೆಲ್ಲಿಯ ಈ ಉಪದೇಶವು ರಾಜ್ಯಾಡಳಿತದಲ್ಲಿ ಅರಸನಿಗೆ ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಮಿಸಬಲ್ಲ ಅಂಶವೆಂದರೆ  ತಪ್ಪಾಗಲಾರದು.

5. ರಾಜಕೀಯದಲ್ಲಿ ದ್ವಿಮುಖ ನೀತಿಗೆ ಆಸ್ಪದ: ಅರಸನಾದವನು ಆಳುವ ತನಗೊಂದು ಮತ್ತು ಆಳಿಸಿಕೊಳ್ಳುವ ಪ್ರಜೆಗಳಿಗೆ ಮತ್ತೊಂದು ನೀತಿಯನ್ನು ಪಾಲಿಸಲು ಮೆಕೆವೆಲ್ಲಿ ಸೂಚಿಸಿದ್ದನು. ರಾಜನಾದವನೇ ಎಲ್ಲ ಕಾನೂನು ಮತ್ತು ನೀತಿಗಳ ಸೃಷ್ಟಿಕರ್ತನಾಗಿದ್ದು ಆತ ಅವುಗಳಿಂದ ಬಂಧಿತನಾಗಿರಬೇಕಿಲ್ಲ. ರಾಜ್ಯ ಮತ್ತು ಪ್ರಜೆಗಳ ಸಂರಕ್ಷಣೆಯು ರಾಜನ ಪ್ರಾಥಮಿಕ ಜವಾಬ್ದಾರಿಯಾಗಿದ್ದು ಆ ನಿಟ್ಟಿನಲ್ಲಿ ರಾಜನಾದವ ಯಾವುದೇ ನೀತಿಯನ್ನು ಅನುಸರಿಸಲು ಮುಕ್ತ. ರಾಜ್ಯ ಮತ್ತು ಪ್ರಜೆಗಳ ಹಿತಕ್ಕಾಗಿ ಸುಳ್ಳು ಹೇಳುವ, ಹತ್ಯೆ ಮಾಡುವ, ಪಿತೂರಿ ರೂಪಿಸುವ ಸ್ವಾತಂತ್ರ್ಯ ರಾಜನಿಗಿರುತ್ತದೆ. ರಾಜ್ಯಾಡಳಿತದಲ್ಲಿ ಪರಿಪೂರ್ಣ ನೈತಿಕತೆಯ ಅನುಸರಣೆ ಅಸಾಧ್ಯವಾದ್ದರಿಂದ ಆಳುವ ರಾಜರಿಗೆ ಅಗತ್ಯವಿದ್ದಾಗ ಅನೈತಿಕ ನೀತಿಯನ್ನು ಪಾಲಿಸಲು ಮೆಕೆವೆಲ್ಲಿ ಅನುಮೋದಿಸಿದ್ದನು. ಇನ್ನೊಂದೆಡೆ ಪ್ರಜೆಗಳು ಸದಾ ನಾಗರಿಕ ಪ್ರಜ್ಙೆ ಮತ್ತು ದೇಶ ಭಕ್ತಿಯನ್ನು ಪಾಲಿಸಬೇಕೆಂದು ಮೆಕೆವೆಲ್ಲಿ ಪ್ರತಿಪಾದಿಸಿದ್ದ. ಜೊತೆಗೆ ಕಾನೂನುಗಳ ಪಾಲನೆ ಹಾಗೂ ರಾಜ್ಯಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಿರಬೇಕೆಂದು ಸೂಚಿಸಿದ್ದನು. ಹೀಗೆ ಆಳುವ ರಾಜರಿಗೊಂದು ಮತ್ತು ಆಳಿಸಿಕೊಳ್ಳುವ ಪ್ರಜೆಗಳಿಗೆ ಮತ್ತೊಂದು ಅಂದರೆ ದ್ವಿಮುಖ ನೀತಿಯನ್ನು ರಾಜ್ಯಾಡಳಿತದಲ್ಲಿ ಮೆಕೆವೆಲ್ಲಿ ಅನುಮೋದಿಸಿರುವನು.

6. ನಿರಂಕುಶ ಆಳ್ವಿಕೆಗೆ ಕರೆ: ಸರ್ಕಾರದ ತಳಹದಿಯು ವಿವೇಕದಿಂದ ಕೂಡಿದೆ. ಜೊತೆಗೆ ಮಾನವರು ಎಸಗಿದ ಪಾಪಗಳಿಗೆ ಶಿಕ್ಷಿಸಲು ಸರ್ಕಾರ ಸೃಷ್ಟಿಸಲ್ಪಟ್ಟಿಲ್ಲ. ಪ್ರಜೆಗಳ ದೌರ್ಬಲ್ಯ ಮತ್ತು ಅಸಮರ್ಥತೆ ನಿರ್ವಹಣೆಗೆ ಸರ್ಕಾರವು ರಚನೆಗೊಂಡಿದೆ. ಸಮಾಜವೊಂದರ ಜನರಲ್ಲಿನ ಬ್ರಷ್ಟಾಚಾರ, ಸ್ವಾರ್ಥ ಮತ್ತು ಕಾನೂನು ರಹಿತತೆ ಜಾರಿಯಲ್ಲಿದ್ದಾಗ ಸಾಮಾನ್ಯ ಆಡಳಿತವು ಕಠಿಣವಾಗುತ್ತದೆ. ಸಮಾಜದಲ್ಲಿ ಶ್ರೇಷ್ಠ ಅಧಿಕಾರದ ಮೂಲಕವೇ ಮಾತ್ರ ಸುವ್ಯವಸ್ಥಿತತೆ ಸಾಧ್ಯವೆಂಬ ವಿಚಾರವನ್ನು ಮೆಕೆವೆಲ್ಲಿಯು ಹೊಂದಿದ್ದನು. ಮುಂದುವರೆದು ನಿರಂಕುಶ ಸರ್ಕಾರವು ಪ್ರಜೆಗಳ ಅನವಶ್ಯಕ ಬೇಡಿಕೆಗಳನ್ನು ಮತ್ತು ದುರ್ವರ್ತನೆಗಳನ್ನು ನಿಯಂತ್ರಿಸಬಲ್ಲದು ಎಂಬ ನಂಬಿಕೆ ಹೊಂದಿದ್ದನು. ಹೀಗಾಗಿ ನಿರಂಕುಶ ಆಳ್ವಿಕೆಗೆ ಒಲವು ವ್ಯಕ್ತಪಡಿಸಿ ರಾಜನಾದವನು ನಿರಂಕುಶ ಅಧಿಕಾರವನ್ನು ತನ್ನ ಕೈಯಲ್ಲಿಟ್ಟುಕೊಂಡು ಆಳ್ವಿಕೆ ನಡೆಸಬೇಕೆಂದು ಉಪದೇಶಿಸಿದ್ದನು. ಗಮನಾರ್ಹ ಅಂಶವೇನೆಂದರೆ ನಿರಂಕುಶ ಆಳ್ವಿಕೆಯಿಂದ ಕ್ರಮೇಣ ಪ್ರಜೆಗಳು ಸದ್ಗುಣವುಳ್ಳ, ಪ್ರಾಮಾಣಿಕತೆ ಹಾಗೂ ದೇಶ ಭಕ್ತಿಯುಳ್ಳ ಗಣರಾಜ್ಯವನ್ನು ಸ್ಥಾಪಿಸಬೇಕೆಂಬ ಉಪದೇಶವನ್ನು ಆಳುವವರಿಗೆ  ಮೆಕೆವೆಲ್ಲಿ ಉಪದೇಶಿಸಿದ್ದನು.

7. ಪ್ರಬಲ ಸೈನ್ಯದ ನಿರ್ವಹಣೆ: ನಿರಂತರ ಹಾಗೂ ಶಕ್ತಿಶಾಲಿ ಸೈನ್ಯವು ರಾಜ ಮತ್ತು ರಾಜ್ಯದ ರಕ್ಷಣೆಗೆ ಅಗತ್ಯ. ರಾಜ್ಯದ ಭದ್ರತೆ ಮತ್ತು ವಿಸ್ತರಣೆಗೆ ರಾಜ್ಯವೊಂದರ ಸೈನ್ಯವು ಸಹಾಯಕ. ಈ ಹಿನ್ನೆಲೆಯಲ್ಲಿ ರಾಜನು ಸ್ವತಂತ್ರ, ಶಾಶ್ವತ ಮತ್ತು ನಂಬಿಗಸ್ತ ಸೈನ್ಯವನ್ನು ಹೊಂದಲು ರಾಜರಿಗೆ ಮೆಕೆವೆಲ್ಲಿ ಸೂಚಿಸಿದ್ದನು. ಮುಂದುವರೆದು ಸೈನ್ಯವು ಸ್ವದೇಶಿ ನಾಗರಿಕರಿಂದ ಕೂಡಿದ್ದು ಬಾಡಿಗೆ ಸೈನಿಕರನ್ನು ನೇಮಿಸಕೂಡದೆಂದು ಉಪದೇಶಿಸಿದ್ದನು. ಪ್ರಜೆಗಳಿಗೆ ರಾಜನು ಸೈನಿಕ ತರಬೇತಿ ಒದಗಿಸಬೇಕಲ್ಲದೇ ಅಗತ್ಯವಿದ್ದಲ್ಲಿ ಕಡ್ಡಾಯ ಸೇವೆಯನ್ನು ಸಮರ್ಥ ಪ್ರಜೆಗಳಿಂದ ಪಡೆಯಲು ಹಿಂಜರಿಯಬಾರದೆಂದು ತಿಳಿಸಿದ್ದನು. ರಾಜನು ರಾಜ್ಯದ ಸಂರಕ್ಷಣೆಗಾಗಿ ಸೈನ್ಯದ ನಿರಂತರ ಸಿದ್ಧತೆಯಲ್ಲಿ ತೊಡಗಿರಬೇಕೆಂದು ಅಭಿಪ್ರಾಯಪಟ್ಟಿದ್ದನು. ಜೊತೆಗೆ ರಾಜನಾದವ ತನ್ನ ಅಧಿಕಾರಕ್ಕೆ ಎದುರಾಗುವ ರಾಜ್ಯದೊಳಗಿನ ಮತ್ತು ಹೊರಗಿನ ಶತ್ರುಗಳನ್ನು ಮಣಿಸಬಲ್ಲ ಪ್ರಬಲ ಸೈನ್ಯ ಹೊಂದಿರಬೇಕೆಂಬ ಸಲಹೆ ನೀಡಿದ್ದನು.

8. ಮಾನವನ ಸ್ವಭಾವದ ತಿಳುವಳಿಕೆ: ಮೆಕೆವೆಲ್ಲಿಯ ಅಭಿಪ್ರಾಯದಲ್ಲಿ ರಾಜಕೀಯದ ವಿವೇಚನಾತ್ಮಕ ವಿಶ್ಲೇಷಣೆಯು ಮಾನವ ಸ್ವಭಾವದ ಚರ್ಚೆಯೊಡನೆ ಪ್ರಾರಂಭವಾಗುತ್ತದೆ. ಮಾನವನ ಚಟುವಟಿಕೆಗಳನ್ನು ವಿಶೇಷ ಆಸಕ್ತಿಯಿಂದ ಅವಲೋಕಿಸಿ ದುರ್ಬಲ, ಕೃತಗ್ನ, ಪುಕ್ಕಲ, ಅಧಿಕಾರದ ಲಾಲಸೆ, ಮಹತ್ವಾಕಾಂಕ್ಷಿ ಗುಣಗಳನ್ನಾಧರಿಸಿ ಮಾನವನ ಸ್ವಭಾವವನ್ನು ಕೆಟ್ಟದಾಗಿ ಮೆಕೆವೆಲ್ಲಿ ವಿವರಿಸಿರುವನು. ಮುಂದುವರೆದು ಮಾನವರ ಸ್ವಭಾವಕ್ಕೆ ತಕ್ಕಂತೆ ರಾಜನಾದವ ಪಾಲಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮೆಕೆವೆಲ್ಲಿ ಕೆಳಗಿನಂತೆ ಉಪದೇಶಿಸಿರುವನು.
ಅ. ಅಮಿತ ಬಯಕೆಗಳನ್ನುಳ್ಳ ಮಾನವರು ಸ್ವಾರ್ಥಿ ಮತ್ತು ಆಕ್ರಮಣಕಾರಿ ಸ್ವಭಾವ ಹೊಂದಿರುತ್ತಾರೆ. ಹೀಗಾಗಿ ರಾಜನಾದವನು ಸಂಭವನೀಯ ಧಂಗೆ, ಕ್ರಾಂತಿ ಅಥವಾ ಸ್ಪರ್ಧೆಯನ್ನು ಎದುರಿಸಲು ಸನ್ನದ್ಧನಾಗಿರಬೇಕು.
ಆ. ಮಾನವರು ತಮ್ಮ ಹಿತರಕ್ಷಣೆಗೆ ಆಸಕ್ತಿ ಹೊಂದಿದ್ದು ಕಾನೂನುಗಳಲ್ಲಿ ಅದರ ಭರವಸೆಯನ್ನು ಗುರುತಿಸಿ ಅವುಗಳ ಪಾಲನೆಗೆ ಮುಂದಾಗಿರುತ್ತಾರೆ. ಆದ್ದರಿಂದ ರಾಜನು ಜನರ ಜೀವ ಮತ್ತು ಆಸ್ತಿಯ ರಕ್ಷಣೆಗೆ ಭರವಸೆ ಒದಗಿಸಬಲ್ಲ ಕಾನೂನುಗಳನ್ನು ಜಾರಿಗೊಳಿಸಬೇಕು.
ಇ. ಮಾನವ ಭಯ ಅಥವಾ ಪುಕ್ಕಲುತನದ ಸ್ವಭಾವ ಹೊಂದಿದ್ದು ಶಿಕ್ಷೆಯ ಭಯದಿಂದ ದುರ್ವರ್ತನೆಗಳನ್ನು ತ್ಯಜಿಸುತ್ತಾನೆ. ಆದ್ದರಿಂದ ರಾಜನು ಬಲ ಅಂದರೆ ಶಿಕ್ಷೆಯ ಮೂಲಕ ಜನರಲ್ಲಿ ಸದ್ಗುಣಗಳನ್ನು ಮೂಡಿಸಬೇಕು.
ಈ. ಮಾನವ ಮಹತ್ವಾಕಾಂಕ್ಷಿ ಮತ್ತು ಅತೃಪ್ತ ಸ್ವಭಾವ ಹೊಂದಿದ್ದು ಬೌತಿಕ ಬೇಡಿಕೆಗಳಿಂದ ದ್ವೇಷ ಹಾಗೂ ಘರ್ಷಣೆ ಸಾಮಾನ್ಯವಾಗಿರುತ್ತದೆ. ಆದ್ದರಿಂದ ರಾಜನಾದವನು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಪೂರಕವಾದ ಕ್ರಮಗಳನ್ನು ಕೈಗೊಂಡು ಅವುಗಳ ಮೇಲ್ವಿಚಾರಣೆಯನ್ನು ನಿರಂತರವಾಗಿ ನಡೆಸಬೇಕು.
ಒಟ್ಟಾರೆ ಮಾನವನ ಸ್ವಭಾವವು ಕೆಟ್ಟತನದಿಂದ ಕೂಡಿದ್ದು ರಾಜನು ಬಲ ಅಥವಾ ಶಿಕ್ಷೆಯ ನೆರವಿನಿಂದ ಅವುಗಳ ದುಶ್ಪರಿಣಾಮಗಳನ್ನು ನಿಯಂತ್ರಿಸಲು ಶ್ರಮಿಸಬೇಕು ಎಂಬುದಾಗಿ ಮೆಕೆವೆಲ್ಲಿ ಉಪದೇಶಿಸಿರುವ. ಜೊತೆಗೆ ಅವರವರ ಸ್ವಭಾವಕ್ಕೆ ಅನುರೂಪವಾದ ನಟನಾ ಕೌಶಲ್ಯಗಳನ್ನು ರಾಜನಾದವ ಮೈಗೂಡಿಸಿಕೊಳ್ಳುವ ಅಗತ್ಯವನ್ನು ಆತ ಪ್ರತಿಪಾದಿಸಿದ್ದನು.

9. ಪ್ರಜೆಗಳಲ್ಲಿ ಜನಪ್ರಿಯತೆ ಹೊಂದಲು ಪ್ರಯತ್ನ: ರಾಜನಾದವ ತನ್ನ ಪ್ರಜೆಗಳ ಸದಭಿಪ್ರಾಯ, ಪ್ರೀತಿ ಮತ್ತು ಜನಪ್ರಿಯತೆಯನ್ನು ಪಡೆದಿರಬೇಕು. ಈ ನಿಟ್ಟಿನಲ್ಲಿ ರಾಜನಾದವನು ಪ್ರಜೆಗಳ ಮೂಲಭೂತ ಅಗತ್ಯಗಳನ್ನು ಪೂರೈಸಬೇಕಲ್ಲದೇ ತೆರಿಗೆಗಳನ್ನು ಹೇರಕೂಡದು. ಜೊತೆಗೆ ಪ್ರಜೆಗಳು ಸಂಪ್ರದಾಯಶೀಲರಾಗಿದ್ದು ಅವರು ಪಾಲಿಸಿಕೊಂಡು ಬಂದಿರುವ ರೂಢಿ ಮತ್ತು ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡಕೂಡದು. ಮುಂದುವರೆದು ರಾಜನಾದವ ತನ್ನ ಪ್ರಜೆಗಳ ಆಸ್ತಿ ಮತ್ತು ಮಹಿಳೆಯರ ಕುರಿತಂತೆ ನಿರ್ಲಿಪ್ತನಾಗಿರಬೇಕು. ಏಕೆಂದರೆ ಜನರು ತಮ್ಮ ತಂದೆಯ ನಿಧನವನ್ನು ಮರೆತರೂ ನಾಶಗೊಂಡ ತಂದೆಯ ಆಸ್ತಿಯನ್ನು ಮರೆಯಲಾರರು ಎಂಬುದಾಗಿ ಎಚ್ಚರಿಸಿರುವನು. ಗೂಡಾಚಾರರ ನೆರವಿನಿಂದ ಪ್ರಜೆಗಳ ನಾಡಿ ಮಿಡಿತವನ್ನರಿತು ಸೂಕ್ತ ಕ್ರಮಗಳ ಜಾರಿಯೊಡನೆ ತನ್ನ ಜನಪ್ರಿಯತೆಯನ್ನು ರಾಜನಾದವ ನಿರ್ವಹಿಸಬೇಕೆಂದು ಉಪದೇಶಿಸಿರುವನು. ಬೌತಿಕ ಸೌಲಭ್ಯಗಳಿಂದ ತಾತ್ಕಾಲಿಕ ಜನಪ್ರಿಯತೆ ಪಡೆಯಬಹುದಾದ್ದರಿಂದ ಭಯವನ್ನು ಮೂಡಿಸಿ ತನ್ನ ಜನಪ್ರಿಯತೆಯನ್ನು ನಿರಂತರವಾಗಿ ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯವನ್ನು ಮೆಕೆವೆಲ್ಲಿ ವ್ಯಕ್ತಪಡಿಸಿದ್ದನು.

10. ಹೊಗಳು ಬಟ್ಟರ ಬದಲು ಬುದ್ಧಿವಂತರ ಸಲಹೆಗೆ ಮನ್ನಣೆ: ರಾಜ್ಯವೊಂದರ ನಿರಂತರತೆಗೆ ಪ್ರಬಲ ಸರ್ಕಾರ ಮತ್ತು ಆಂತರಿಕ ಭದ್ರತೆ ಅತ್ಯವಶ್ಯಕ. ಆದ್ದರಿಂದ ರಾಜನು ಬುದ್ಧಿ ಜೀವಿಗಳನ್ನು ತನ್ನ ಮಂತ್ರಿ ಮಂಡಲಕ್ಕೆ ನೇಮಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸ್ವಾತಂತ್ರ್ಯವನ್ನು ಒದಗಿಸಬೇಕು. ರಾಜ್ಯಾಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಅವರೊಡನೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ನಂತರ ರಾಜನಾದವ ತನನ ವಿವೇಚನಾನುಸಾರ ನಿರ್ಧಾರಗಳನ್ನು ಕೈಗೊಳ್ಳಬೇಕು.  ಸಾಧ್ಯವಾದಷ್ಟು ಹೊಗಳುಬಟ್ಟರ ಮಾತುಗಳಿಂದ ರಾಜನು ದೂರವಿರಬೇಕು. ಏಕೆಂದರೆ ಅವಾಸ್ತವಿಕ ವಿಚಾರಗಳನ್ನು ಅವರು ಸದಾ ಪ್ರತಿಪಾದಿಸುತ್ತಾರೆ. ಹೀಗಾಗಿ ರಾಜ್ಯಾಡಳಿತದಲ್ಲಿ ಬುದ್ಧಿವಂತರಿಗೆ ಮಾತ್ರವೇ ಮನ್ನಣೆ ದೊರಕುವಂತೆ ರಾಜನಾದವ ಗಮನ ಹರಿಸಬೇಕು ಎಂಬ ಉಪದೇಶವನ್ನು ಮೆಕೆವೆಲ್ಲಿ ನೀಡಿದ್ದನು.

11. ರಾಜಕೀಯದಿಂದ ಧರ್ಮದ ಪ್ರತ್ಯೇಕತೆ: ಮೆಕೆವೆಲ್ಲಿಗಿಂತತ ಹಿಂದಿನ ಮಧ್ಯ ಯುಗದ ಚಿಂತಕರು ಧರ್ಮವು ರಾಜ್ಯದ ತಳಹದಿ ಎಂಬುದಾಗಿ ನಂಬಿದ್ದರು. ಆದರೆ ಮೆಕೆವೆಲ್ಲಿಯು ಧರ್ಮ ಅಥವಾ ಅದರ ಪ್ರತಿನಿಧಿಯಾದ ಚರ್ಚ್ ಜೊತೆಗಿನ ರಾಜ್ಯದ ಯಾವುದೇ ಸಂಬಂಧವನ್ನು ಸಮ್ಮತಿಸಲಿಲ್ಲ. ಮಧ್ಯ ಯುಗದ ಚಿಂತಕರ ಧರ್ಮಾಧಾರಿತ ತತ್ವಶಾಸ್ತ್ರವನ್ನು ಖಂಡಿಸಿದನಲ್ಲದೇ ಮಾನವರಿಗೆ ದೈವಿಕ ಕಾನೂನಿನ ನಿರ್ದೇಶನದ ಅಗತ್ಯವಿದೆ ಎಂಬ ಥಾಮಸ್ ಅಕ್ವಿನಾಸ್ನ ಸಿದ್ಧಾಂತವನ್ನು ಟೀಕಿಸಿದನು. ಮಾನವರ ಉತ್ತಮ ಜೀವನದಲ್ಲಿ ಬೌತಿಕ ಅಗತ್ಯಗಳನ್ನು ಪೂರೈಸಬಲ್ಲ ಉದಾತ್ತ ಗುರಿಯನ್ನು ಪ್ರತಿಪಾದಿಸಿ ನೈತಿಕ ಅಥವಾ ಧಾರ್ಮಿಕ ಗುರಿಗಳನ್ನು  ಮೆಕೆವೆಲ್ಲಿ ಕಡೆಗಣಿಸಿದ್ದನು. ಪರಿಣಾಮ ಅಲೌಕಿಕ ಗುರಿಗಳ ಬದಲು ಲೌಕಿಕ ಗುರಿಗಳಿಗೆ ಆಧ್ಯತೆ ನೀಡಬೇಕೆಂದು ರಾಜರಿಗೆ ಉಪದೇಶಿಸಿದ್ದನು. 

ತನ್ನದೇಯಾದ ತತ್ವ ಮತ್ತು ನಿಯಮಗಳಿಂದ ಕೂಡಿರುವ ರಾಜಕೀಯವು ಸ್ವತಂತ್ರ ಚಟುವಟಿಕೆ ಎಂಬುದಾಗಿ ಮೆಕೆವೆಲ್ಲಿ ಪರಿಗಣಿಸಿದ್ದನು. ಮುಂದುವರೆದು ರಾಜ್ಯವು ಧರ್ಮದಿಂದ ಹೊರತಾದ ಮತ್ತು ಉನ್ನತವಾದ ಸಂಸ್ಥೆ ಎಂಬುದಾಗಿ ಭಾವಿಸಿದ್ದನು. ಆದ್ದರಿಂದ ರಾಜನು ನೈತಿಕ ಅಥವಾ ಧಾರ್ಮಿಕ ಕಟ್ಟುಪಾಡುಗಳಿಗೆ ಬಂಧಿತನಾಗಬಾರದೆಂಬ ಉಪದೇಶವನ್ನು ನೀಡಿದ್ದನು. ಗಮನಾರ್ಹ ಅಂಶವೇನೆಂದರೆ ತನ್ನ ಡಿಸ್ಕೋರ್ಸಸ್ ಕೃತಿಯ ಆರಂಭದಲ್ಲಿ (ರಾಜನಾದವ ಎಲ್ಲ ಧರ್ಮಗಳಲ್ಲಿನ ಪರಿಶುದ್ಧ ಮೌಲ್ಯಗಳನ್ನು ಪಾಲಿಸಲು ಪ್ರಯತ್ನಿಸಬೇಕು) ಎಂಬ ಅಭಿಪ್ರಾಯವನ್ನು ಮೆಕೆವಲ್ಲಿ ವ್ಯಕ್ತಪಡಿಸಿದ್ದ. ೀ ಮೂಲಕ ರಾಜ್ಯದ ಭಾಗವಾಗಿ ಮತ್ತು ಸಾಧನವಾಗಿ ಧರ್ಮದ ಪಾಲನೆಯನ್ನು ಮೆಕೆವೆಲ್ಲಿ ಸಮರ್ಥಿಸಿದ್ದನು. ಇದರೊಡನೆ ಸಾಮುದಾಯಿಕ ಜೀವನದಲ್ಲಿ ಐಖ್ಯತೆ ತರಬಲ್ಲ ಧರ್ಮದ ಸಾಮರ್ಥ್ಯವನ್ನು ಸಮ್ಮತಿಸಿದ್ದನು. ಒಂದೇ ಸಾಮಾನ್ಯ ಧರ್ಮವು ರಾಜ್ಯವೊಂದರ ಪ್ರಜೆಗಳಲ್ಲಿ ಏಕತೆ ಮತ್ತು ಅಖಂಡತೆಯನ್ನು ತರಬಲ್ಲದೆಂಬ ನಂಬಿಕೆಯನ್ನು ಮೆಕೆವೆಲ್ಲಿ ಹೊಂದಿದ್ದನು. ಆದರೆ ಸಾರ್ವಭೌಮ ರಾಜ್ಯವು ತನ್ನ ಗಡಿಯೊಳಗಿನ ಪ್ರಜೆಗಳು ಮತ್ತು ಸಂಸ್ಥೆಗಳ ಮೇಲೆ ಅಧಿಕಾರ ಹೊಂದಿದೆ ಎನ್ನುವ ಮೂಲಕ ಚರ್ಚು ರಾಜ್ಯದ ಅಧೀನವೆಂಬ ತತ್ವವನ್ನು ಪ್ರತಿಪಾದಿಸಿ ರಾಜಕೀಯವನ್ನು ಧರ್ಮದಿಂದ ಪ್ರತ್ಯೇಕಿಸಿದ್ದನು. 

12. ಭಾವೋದ್ವೇಗದಿಂದ ಮುಕ್ತತೆ: ರಾಜನು ಭಾವನೆಗಳಿಗೆ ಮಣಿದರೆ ರಾಜ್ಯದ ಹಿತವನ್ನು ಬಲಿ ನೀಡಬೇಕಾಗುವ ಸಾಧ್ಯತೆಯನ್ನು ಮೆಕೆವೆಲ್ಲಿ ಊಹಿಸಿದ್ದನು. ಹೀಗಾಗಿ ಪ್ರಜೆಗಳ ಭಾವನೆಗಳನ್ನು ರಾಜ್ಯದ ಹಿತದೃಷ್ಟಿಯಿಂದ ಕೆಲವೊಮ್ಮೆ ಕಡೆಗಣಿಸಲು ತಿಳಿಸಿರುವನು. ರಾಜನಾದವ ಸಂದರ್ಭೋಚಿತವಾಗಿ ಶಾಂತ, ಲೆಕ್ಕಾಚಾರದ ಮತ್ತು ಅವಕಾಶವಾದಿ ವರ್ತನೆ ಮೈಗೂಡಿಸಿಕೊಂಡಿರಬೇಕೇ ಹೊರತು ಭಾವನೆಗಳಿಗೆ ಅಂಟಿಕೊಳ್ಳಬಾರದೆಂಬ ಉಪದೇಶವನ್ನು ಮೆಕೆವಲ್ಲಿ ರಾಜರಿಗೆ ನೀಡಿದ್ದನು. ರಾಜ್ಯದ ಹಿತರಕ್ಷಣೆಯ ಪ್ರಶ್ನೆ ಎದುರಾದಾಗ ನಿಜಾರ್ಥದಲ್ಲಿ ಮೃಗೀಯ ಸ್ವರೂಪವನ್ನು ರಾಜ ತಾಳಬೇಕೆಂಬುದು ಮೆಕೆವೆಲ್ಲಿಯ ಆಶಯವಾಗಿತ್ತು. ಇದರರ್ಥ ದಯೆ ಅಥವಾ ಅನುಕಂಪ ತೋರದೇ ರಾಜ್ಯದ ಹಿತಕ್ಕೆ ಕಂಟಕವಾದ ತನ್ನ ಪ್ರಜೆಗಳನ್ನೇ ಕ್ರೂರವಾಗಿ ಶಿಕ್ಷಿಸಬೇಕು, ಹಿಂಸಿಸಬೇಕು ಅಥವಾ ಕೊಲ್ಲಬೇಕು ಎಂದಾಗುತ್ತದೆ.

13. ಸುವ್ಯವಸ್ಥಿತ ರಾಜ್ಯಕ್ಕೆ ಒಲವು: ಇಟಲಿಯ ಅರಾಜಕ, ಕಾನೂನು ರಹಿತ, ಬ್ರಷ್ಟಾಚಾರದ ಅಥವಾ ದುರಾಡಳಿತದ ರಾಜ್ಯಗಳನ್ನು ಮೆಕೆವೆಲ್ಲಿ ಕಂಡಿದ್ದನು. ಮುಂದುವರೆದು ಫ್ರಾನ್ಸಿನ ದೊರೆ ಚಾರ್ಲ್ಸ್ VIII ಯಾವುದೇ ಪ್ರತಿಭಟನೆ ಎದುರಿಸದೇ ಫ್ಲಾರೆನ್ಸನ್ನು ಆಕ್ರಮಿಸಿದ್ದನ್ನು ಕಣ್ಣಾರೆ ವೀಕ್ಷಿಸಿದ್ದನು. ಹೀಗಾಗಿ ಸುಸಂಘಟಿತ, ವ್ಯವಸ್ಥಿತ ಹಾಗೂ ಸೈನಿಕ ಪ್ರಾಬಲ್ಯವುಳ್ಳ ರಾಜ್ಯವನ್ನು ಹೊಂದಲು ಮೆಕೆವೆಲ್ಲಿ ಆಳುವವರಿಗೆ ಉಪದೇಶಿಸಿದ್ದನು. ರಾಜ್ಯವು ಪ್ರಬಲ ರಾಜ್ಯವಾಗದಿದ್ದಲ್ಲಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದು ಕಠಿಣ ಎಂಬುದು ಮೆಕೆವೆಲ್ಲಿಯ ವಾದವಾಗಿತ್ತು. ಆಂತರಿಕ ಘರ್ಷಣೆ ಮತ್ತು ಬಾಹ್ಯ ಆಕ್ರಮಣಗಳ ವಿರುದ್ಧ ಭದ್ರತೆಯನ್ನು ಸುವ್ಯವಸ್ಥಿತ ರಾಜ್ಯ ಒದಗಿಸುತ್ತದೆ. ಹೀಗಾಗಿ ದಿ ಪ್ರಿನ್ಸ್ ಕೃತಿಯಲ್ಲಿ ರಾಜ್ಯವು ನಿರಂಕುಶ ಮತ್ತು ಪರಿಣಾಮಕಾರಿ ಸರ್ಕಾರವನ್ನು ಹೊಂದಿರುವ ಸುವ್ಯವಸ್ಥಿತ ರಾಜ್ಯವನ್ನು ಹೊಂದಿರಬೇಕೆಂದು ಆಳುವ ರಾಜರಿಗೆ ನಿಕೊಲೊ ಮೆಕೆವೆಲ್ಲಿ  ಉಪದೇಶಿಸಿದ್ದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...