ಗುರುವಾರ, ಜೂನ್ 17, 2021

ಭಾರತ ಸಂವಿಧಾನದ ಲಕ್ಷಣಗಳು:

ಪೀಠಿಕೆ: ಸುದೀರ್ಗ ಹೋರಾಟದ ಬಳಿಕ ರಚನೆಗೊಂಡ ಭಾರತ ಸಂವಿಧಾನ ರಚನಾ ಸಭೆಯು ಭಾರತಕ್ಕೆ ಯೋಗ್ಯ ಸಂವಿಧಾನ ರಚಿಸಲು ಸಾಕಷ್ಟು ಶ್ರಮಿಸಿತು. ಜಗತ್ತಿನ ಹಲವು ಸಂವಿಧಾನಗಳ ಅಧ್ಯಯನ ನಡೆಸಿ ಅವುಗಳಲ್ಲಿನ ಉತ್ತಮಾಂಶಗಳನ್ನು ಭಾರತದ ಸನ್ನಿವೇಶಕ್ಕೆ ಸರಿ ಹೊಂದುವಂತೆ ಮಾರ್ಪಡಿಸಲು ಪ್ರಯತ್ನಿಸಿತು. ಇದರೊಡನೆ ವಿವಿಧ ರಂಗಗಳಿಗೆ ಸಂಬಂಧಿಸಿದ ಸರ್ವ ಸಮ್ಮತ ನಿಯಮಾವಳಿಗಳನ್ನು ಅಳವಡಿಸಲು ಯಶಸ್ವಿಯಾಯಿತು. ಪರಿಣಾಮ ಹಲವು ನ್ಯೂನ್ಯತೆಗಳ ನಡುವೆಯೂ ಆದರ್ಶ ಸಂವಿಧಾನವೆಂದು ಭಾರತದ ಸಂವಿಧಾನವು ಗುರುತಿಸಲ್ಪಟ್ಟಿದೆ. ಇಂತಹ ಭಾರತ ಸಂವಿಧಾನ ತನ್ನದೇ ಹಲವು ಲಕ್ಷಣಗಳಿಂದ ಕೂಡಿದ್ದು ಅವುಗಳ ಸಂಕ್ಷಿಪ್ತ ವಿವರಣೆ ಕೆಳಕಂಡಂತಿದೆ.

1. ಲಿಖಿತ ಹಾಗೂ ಬೃಹತ್ ಗಾತ್ರ: ಇಂಗ್ಲೆಂಡ್ ಹಾಗು ಇಸ್ರೇಲ್ ಸಂವಿಧಾನದ ಬಹುತೇಕ ನಿಯಮಾವಳಿಗಳು ರೂಢಿ ಮತ್ತು ಸಂಪ್ರದಾಯಗಳ ರೂಪದಲ್ಲಿದ್ದು ಆ ಸಂವಿಧಾನಗಳನ್ನು ಅಲಿಖಿತ ಸಂವಿಧಾನ ಎನ್ನಲಾಗುತ್ತದೆ. ಆದರೆ ಭಾರತದ ಸಂವಿಧಾನವು ಬರಹ ರೂಪದ ನಿಯಮಾವಳಿಗಳ ದಾಖಲೆಯಾಗಿದ್ದು ಲಿಖಿತ ಸಂವಿಧಾನವಾಗಿದೆ. ಮಾತ್ರವಲ್ಲ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವೂ ಭಾರತ ಸಂವಿಧಾನವಾಗಿದೆ. ಸರ್ಕಾರದ ರಚನೆ, ಪ್ರಜೆಗಳ ಹಕ್ಕುಗಳು ಹಾಗೂ ಸರ್ಕಾರ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ಮಾತ್ರ ವಿವರಿಸದೇ ಭಾರತ ಸಂವಿಧಾನ ಪೌರತ್ವ, ಚುನಾವಣೆ, ತುರ್ತು ಪರಿಸ್ಥಿತಿ, ತಿದ್ದುಪಡಿ ವಿಧಾನ, ಬುಡಕಟ್ಟು ಜನರ ಕಲ್ಯಾಣ, ಸ್ಥಳೀಯ ಸರ್ಕಾರಗಳಂತಹ ವಿಷಯಗಳ ವಿವರಣೆಯಿಂದಾಗಿ ಬೃಹತ್ ಗಾತ್ರವನ್ನು ಹೊಂದಿದೆ. ಮೂಲ ಭಾರತೀಯ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳಿಂದ ಕೂಡಿತ್ತು. ಕಾಲಾನುಕ್ರಮದಲ್ಲಿ ಅಂದಿನ ಅಗತ್ಯಕ್ಕೆ ತಕ್ಕಂತೆ ಸಂವಿಧಾನದ ಹಲವು ವಿಧಿಗಳನ್ನು ರದ್ದುಗೊಳಿಸುವುದರೊಡನೆ ಹೊಸದಾಗಿ ನಿಯಮಾವಳಿಗಳನ್ನು ಸೇರಿಸಿರುವ ಕಾರಣ ಸಂವಿಧಾನದ ಗಾತ್ರ ಹೆಚ್ಚುತ್ತಲೇ ಸಾಗಿದೆ. ಪ್ರಸ್ತುತ 460 ಕ್ಕೂ ಅಧಿಕ ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳು ಭಾರತದ ಸಂವಿಧಾನದಲ್ಲಿವೆ. ವಿಶೇಷವೆಂದರೆ ಇಂದಿಗೂ ಸಂವಿಧಾನದ ವಿಧಿಗಳ ಕೊನೆಯ ಸಂಖೆ 395 ಹಾಗೂ ಭಾಗಗಳ ಸಂಖೆ 22 ಉಳಿದುಕೊಂಡಿದೆ. ಆದರ್ಶ ಸಂವಿಧಾನ ಚಿಕ್ಕ ಗಾತ್ರ ಹೊಂದಿರಬೇಕೆಂಬ ಚಿಂತಕರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿರುವ ಜಗತ್ತಿನ ಅತಿ ದೊಡ್ಡ ಭಾರತ ಸಂವಿಧಾನವನ್ನು ಆನೆ ಗಾತ್ರದ ಸಂವಿಧಾನ ಎನ್ನಲಾಗುತ್ತದೆ.

2. ಪ್ರಸ್ತಾವನೆ: ಸಂವಿಧಾನದ ಮೌಲ್ಯಗಳು, ತತ್ವಗಳು, ಗುರಿ ಹಾಗೂ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎನ್ನುವರು. ವಿಶ್ವದ ಇತರೆ ಲಿಖಿತ ಸಂವಿಧಾನಗಳು ಹೊಂದಿರುವಂತೆ ಅಮೇರಿಕ ಸಂವಿಧಾನದ ಪ್ರಭಾವದಿಂದ ಭಾರತ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತ ಸಂವಿಧಾನದ ಪ್ರಸ್ತಾವನೆಯು ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯವಾಗುತ್ತದೆ. ಸಂವಿಧಾನದ ಪಕ್ಷಿ ನೋಟವನ್ನು ಒದಗಿಸುವ ಪ್ರಸ್ತಾವನೆಯನ್ನು ಸಂವಿಧಾನದ ಕೈಗನ್ನಡಿ ಹಾಗೂ ಸಂವಿಧಾನದ ಅಳತೆಗೋಲು ಎನ್ನಲಾಗುತ್ತದೆ. ಪ್ರಸ್ತಾವನೆಯನ್ನು ಕೆ. ಎಂ. ಮುನ್ಶಿ ರಾಜಕೀಯ ಜಾತಕ ಎಂದು ಬಣ್ಣಿಸಿರುವರು.

3. ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ: ಭಾರತದ ಸಂವಿಧಾನವು ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವೆಂದು ಘೋಷಿಸಿದೆ. ಭಾರತವು ಆಂತರಿಕ ಅಥವಾ ಬಾಃಯ ವಿಚಾರಗಳನ್ನು ಕುರಿತು ಯಾರ ನಿಯಂತ್ರಣಕ್ಕೊಳಪಡದೇ ತನಗೆ ಸರಿ ತೋರಿದ ನಿರ್ಧಾರವನ್ನು ಕೈಗೊಳ್ಳುವ ಪರಮಾಧಿಕಾರ ಹೊಂದಿದೆ ಎಂಬುದು ಸಾರ್ವಭೌಮ ರಾಷ್ಟ್ರದ ತಿರುಳಾಗಿದೆ. ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುವುದರಿಂದ ಭಾರತವು ಪ್ರಜಾಸತ್ತಾತ್ಮಕ ಅಂದರೆ ಪ್ರಜಾಪರ ದೇಶವೆಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆ ಧ್ವನಿಸುತ್ತದೆ. ಹಾಗೆಯೇ ದೇಶದ ಮುಖ್ಯಸ್ಥ ಜನರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ ಅದನ್ನು ಗಣರಾಜ್ಯ ಎನ್ನಬಹುದಾಗಿದೆ. ಭಾರತದ ಮುಖ್ಯಸ್ಥನಾದ ರಾಷ್ಟ್ರಪತಿಯು ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಮತಗಳಿಸಿ ಆಯ್ಕೆಯಾಗುವರು. ಈ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ಭಾರತ ಗಣರಾಜ್ಯವಾಗಿದೆ ಎಂಬುದನ್ನು ಎತ್ತಿ ಹಿಡಿಯಲಾಗಿದೆ.

4. ಸಂಸದೀಯ ಮಾದರಿ ಸರ್ಕಾರ: ಕಾರ್ಯಾಂಗವು ಶಾಸಕಾಂಗದಿಂದ ರಚನೆಗೊಂಡಿದ್ದು ಶಾಸಕಾಂಗಕ್ಕೆ ಕಾರ್ಯಾಂಗವು ಜವಾಬ್ದಾರಿಯಾಗಿದ್ದರೆ ಅದನ್ನು ಸಂಸದೀಯ ಸರ್ಕಾರ ಎನ್ನಲಾಗುತ್ತದೆ. ಇಂಗ್ಲೆಂಡ್ ಸಂಸದೀಯ ಮಾದರಿ ಸರ್ಕಾರದ ತವರೂರು. ಭಾರತೀಯರು ಶತಮಾನಗಳ ಕಾಲ ಇಂಗ್ಲೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಂಸದೀಯ ಸರ್ಕಾರದ ಅನುಭವ ಹೊಂದಿದ್ದರು. ಹೀಗಾಗಿ ಸಂವಿಧಾನ ರಚನಾಕಾರರು ಭಾರತಕ್ಕೆ ಸಂಸದೀಯ ಮಾದರಿ ಸರ್ಕಾರವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ನೈಜ ಕಾರ್ಯಾಂಗ ಹಾಗೂ ನಾಮ ಮಾತ್ರ ಕಾರ್ಯಾಂಗ, ಬಹುಮತ ಪಡೆದ ಪಕ್ಷದ ಆಳ್ವಿಕೆ, ಸಾಮೂಹಿಕ ಜವಾಬ್ದಾರಿತ್ವ, ಪ್ರಧಾನಿಯ ನಾಯಕತ್ವ ಮುಂತಾದ ಲಕ್ಷಣಗಳು  ಕಂಡು ಬರುತ್ತವೆ. ಈ ಮಾದರಿ ಸರ್ಕಾರವನ್ನು ಮಂತ್ರಿ ಮಂಡಳ ಸರ್ಕಾರ, ಜವಾಬ್ದಾರಿ ಸರ್ಕಾರ, ಪ್ರಧಾನ ಮಂತ್ರಿಯ ಸರ್ಕಾರವೆಂದು ಕರೆಯಲಾಗುತ್ತದೆ.

5. ಜಾತ್ಯಾತೀತ ರಾಷ್ಟ್ರ: ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯಾತೀತ ರಾಜ್ಯ ಎನ್ನಲಾಗುತ್ತದೆ. ಭಾರತ ಸಂವಿಧಾನವು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಎಲ್ಲ ಪ್ರಜೆಗಳಿಗೆ ಒದಗಿಸುವ ಮೂಲಕ ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದೆ. ಭಾರತದಲ್ಲಿ ಹಿಂದೂ, ಇಸ್ಲಾಮ್, ಜೈನ, ಬೌದ್ಧ, ಕ್ರೈಸ್ತ, ಪಾರಸಿಗಳಿಗೆ ಸಮಾನವಕಾಶ ನೀಡಲಾಗುತ್ತಿದೆ. ಜೊತೆಗೆ ವಿವಿಧ ಧರ್ಮಗಳ ಪೂಜಾ ಸ್ಥಳಗಳು ಮತ್ತು  ಕಟ್ಟುಪಾಡುಗಳ ರಕ್ಷಣೆಗೆ ಸರ್ಕಾರಗಳು ಭಾರತದಲ್ಲಿ ಬದ್ಧವಾಗಿವೆ. ಮೂಲ ಭಾರತ ಸಂವಿಧಾನದಲ್ಲಿ ಜಾತ್ಯಾತೀತತೆ ಎಂಬ ಪದವನ್ನು ಎಲ್ಲಿಯೂ ಬಳಸಿರಲಿಲ್ಲ. 1976 ರಲ್ಲಿ 42 ನೇ ತಿದ್ದುಪಡಿಯಂತೆ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಎಂಬ ಪದವನ್ನು ಸೇರಿಸಲಾಯಿತು. ಗಮನಿಸಬೇಕಾದ ವಿಚಾರವೆಂದರೆ ಪಾಕಿಸ್ತಾನವು ಜಾತ್ಯಾತೀತ ರಾಷ್ಟ್ರವಲ್ಲ. ಕಾರಣ ಇಸ್ಲಾಮ್ ಧರ್ಮವನ್ನು ಪಾಕ್ ರಾಜ್ಯ ಧರ್ಮವೆಂದು ಘೋಷಿಸಿಕೊಂಡಿದೆ.

6. ಮೂಲಭೂತ ಹಕ್ಕುಗಳು: ದೇಶಧ ಪ್ರಜೆಗಳು ನಾಗರಿಕ ಜೀವನ ನಡೆಸಲು ಅತ್ಯಗತ್ಯವಾದ ಸೌಲಬ್ಯ ಅಥವಾ ಅವಕಾಶಗಳಿಗೆ ಮೂಲಬೂತ ಹಕ್ಕು ಎನ್ನಲಾಗುತ್ತದೆ. ಅಮೇರಿಕ ಸಂವಿಧಾನದಿಂದ ಪ್ರಭಾವಿತಗೊಂಡು ಸಂವಿಧಾನ ರಚನಾಕಾರರು ಭಾರತ ಸಂವಿಧಾನದಲ್ಲಿ 3 ನೇ ಭಾಗದ 12 ರಿಂದ 35 ನೇ ವಿಧಿಯವರೆಗೆ ೭ ಮೂಲಭೂತ ಹಕ್ಕುಗಳನ್ನು ಭಾರತದ ಪ್ರಜೆಗಳಿಗೆ ನೀಡಿದ್ದರು. 1978 ರಲ್ಲಿ 44 ನೇ ತಿದ್ದುಪಡಿಯಂತೆ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಭಾರತೀಯರು ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರೋಪಾಯದ ಹಕ್ಕು ಎಂಬ ಆರು ಮೂಲಭೂತ ಹಕ್ಕುಗಳನ್ನು ಅನುಭವಿಸಬಹುದಾಗಿದೆ. ಈ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ ವಿವಿಧ ವಿಶೇಷಾಜ್ಙೆ ಹೊರಡಿಸಿ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳು ರಕ್ಷಣೆ ನೀಡುತ್ತವೆ. ಮೂಲಭೂತ ಹಕ್ಕುಗಳು ಅನಿರ್ಬಂಧಿತ ಹಕ್ಕುಗಳಾಗಿರದೇ ತುರ್ತು ಪರಿಸ್ಥಿತಿಯಲ್ಲಿ ಇವುಗಳನ್ನು ರದ್ದುಗೊಳಿಸಬಹುದಾಗಿದೆ. 

7. ಮೂಲಭೂತ ಕರ್ತವ್ಯಗಳು: ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಲೇಬೇಕಾದ ಕಾರ್ಯಗಳನ್ನು ಸರಳವಾಗಿ ಮೂಲಭೂತ ಕರ್ತವ್ಯಗಳು ಎನ್ನಬಹುದಾಗಿದೆ. ಮೂಲ ಭಾರತ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸ್ವರ್ಣಸಿಂಗ್ ಸಮೀತಿಯ ಶಿಫಾರಸಿನಂತೆ ಅಳವಡಿಸಲಾಯಿತು. ಭಾರತ ಸಂವಿಧಾನದ 4 [A] ಭಾಗದ 51 [A] ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದೆ. ಭಾರತೀಯ ಪ್ರಜೆಗಳ ಈ ಕರ್ತವ್ಯಗಳನ್ನು ನ್ಯಾಯಾಲಯಗಳು ಅನುಷ್ಟಾನಗೊಳಿಸಲು ಅವಕಾಶವಿಲ್ಲ. ಮೂಲಭೂತ ಕರ್ತವ್ಯಗಳ ಅಳವಡಿಕೆಯಲ್ಲಿ ಸೋವಿಯತ್ ರಷ್ಯಾ ಹಾಗೂ ಜಪಾನ್ ಸಂವಿಧಾನಗಳ ಪ್ರಭಾವ ಕಾಣಬಹುದಾಗಿದೆ.

8. ಸಂಯುಕ್ತ ಹಾಗೂ ಏಕಾತ್ಮಕ ವ್ಯವಸ್ಥೆಗಳ ಸಂಮಿಶ್ರಣ: ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ಬಗೆಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಸಂಯುಕ್ತ ವ್ಯವಸ್ಥೆಯಾದರೆ ಕೇಂದ್ರ ಸರ್ಕಾರ ಪ್ರಬಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆ ಏಕಾತ್ಮಕ ವ್ಯವಸ್ಥೆಯಾಗಿದೆ. ಭಾರತ ಸಂವಿಧಾನದ ಮೊದಲ ವಿಧಿಯು ಭಾರತವು ರಾಜ್ಯಗಳ ಒಕ್ಕೂಟ ಎಂದು ವಿವರಿಸಿದ್ದು ಸಂಯುಕ್ತ ವ್ಯವಸ್ಥೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೆ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ದ್ವೀ ಸರ್ಕಾರಗಳ ಅಸ್ತಿತ್ವ, ಅಧಿಕಾರ ಹಂಚಿಕೆ, ಸಂವಿಧಾನದ ಶ್ರೇಷ್ಠತೆ, ಅನಮ್ಯ ತಿದ್ದುಪಡಿ ವಿಧಾನ, ಸ್ವತಂತ್ರ ನ್ಯಾಯಾಂಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ಏಕಾತ್ಮಕ ವ್ಯವಸ್ಥೆಯ ಮೂಲಾಂಶಗಳಾದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು, ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಪಾಲಿಸಲಾಗಿದೆ. ಭಾರತದ ಬಹು ಸಂಸ್ಕೃತಿಯ ನಡುವೆ ದೇಶದ ಅಖಂಡತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಸಂವಿಧಾನದಲ್ಲಿ ಸಂಯುಕ್ತ ಹಾಗೂ ಏಕಾತ್ಮಕ ವ್ಯವಸ್ಥೆಯ ಅಂಶಗಳನ್ನು ಸೇರಿಸಲಾಗಿದೆ. ಹೀಗಾಗಿ ರಾಜ್ಯಶಾಸ್ತ್ರಜ್ಙ ಕೆ. ಸಿ. ವೇರ್ ಭಾರತ ಅರೆ ಸಂಯುಕ್ತ ವ್ಯವಸ್ಥೆ ಹೊಂದಿರುವ ದೇಶವೆಂದು ಅಭಿಪ್ರಾಯಪಟ್ಟಿದ್ದಾರೆ.

9. ನಮ್ಯತೆ ಹಾಗೂ ಅನಮ್ಯತೆಗಳ ಸಂಮಿಶ್ರಣ: ಸಂವಿಧಾನದ ನಿಯಮಾವಳಿಗಳನ್ನು ಸುಲಭ ವಿಧಾನದ ಮೂಲಕ ಬದಲಾಯಿಸಲು ಸಾಧ್ಯವಾದರೆ ಅದನ್ನು ನಮ್ಯ ಸಂವಿಧಾನವೆಂದೂ ಮತ್ತು ಸಂವಿಧಾನದ ನಿಯಮಾವಳಿಗಳನ್ನು ಕಠಿಣ ವಿಧಾನದ ಮೂಲಕ ಬದಲಾಯಿಸುವುದಾದರೆ ಅದನ್ನು ಅನಮ್ಯ ಸಂವಿಧಾನವೆಂದೂ ಪರಿಗಣಿಸಲಾಗುತ್ತದೆ. ಭಾರತ ಸಂವಿಧಾನ ರಚನಾಕಾರರು ಆಯಾ ಪರಿಸ್ಥಿತಿಗೆ ಸಂವಿಧಾನ ಬದಲಾಯಿಸಿಕೊಳ್ಳಲು ನೆರವಾಗಲು ನಮ್ಯ ಹಾಗು ಅನಮ್ಯ ಸಂವಿಧಾನಗಳ ತಿದ್ದುಪಡಿ ವಿಧಾನಗಳನ್ನು 368 ನೇ ವಿಧಿಯಲ್ಲಿ ಅಳವಡಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಅರ್ಧದಷ್ಟು ಸದಸ್ಯರ ಅನುಮೋದನೆಯೊಡನೆಹಲವು ಸಂವಿಧಾನದ ನಿಯಮಗಳನ್ನು ಬದಲಿಸಬಹುದಾದರೆ ಕೆಲವು ನಿಯಮಾವಳಿಗಳ ಬದಲಾವಣೆಗೆ ಸಂಸತ್ತಿನ ಉಭಯ ಸದನಗಳ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಅಗತ್ಯವಾಗಿರುತ್ತದೆ. ಉಳಿದಂತೆ ಸಂವಿಧಾನದ ಪ್ರಮುಖ ನಿಯಮಾವಳಿಗಳ ಬದಲಾವಣೆಗೆ ಸಂಸತ್ತಿನ ಉಭಯ ಸದನಗಳ ಮೂರನೇ ಎರಡರಷ್ಟು ಬಹುಮತದ ಅಂಗೀಕಾರ ಹಾಗು ಅರ್ಧದಷ್ಟು ರಾಜ್ಯಗಳ ಅನುಮೋದನೆ ಅನಿವಾರ್ಯವಾಗಿದೆ. ಹೀಗೆ ಸರಳ, ಕಠಿಣ ಹಾಗೂ ಸಂಕೀರ್ಣತೆಯ ಮೂರು ತಿದ್ದುಪಡಿ ವಿಧಾನಗಳನ್ನು ಭಾರತ ಸಂವಿಧಾನ ಒಳಗೊಂಡಿದೆ. ಆದ್ದರಿಂದ ಭಾರತ ಸಂವಿಧಾನ ನಮ್ಯ ಹಾಗೂ ಅನಮ್ಯ ಸಂವಿಧಾನಗಳ ಮಿಶ್ರಣ ಎನ್ನಲಾಗುತ್ತದೆ.

10. ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು:
11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ:
12. ತುರ್ತು ಪರಿಸ್ಥಿತಿ ಅವಕಾಶಗಳು:
13. ಎರವಲು ಸಂವಿಧಾನ:
14. ಏಕೀಕೃತ ಹಾಗೂ ಸ್ವತಂತ್ರ ನ್ಯಾಯಾಂಗ:
15. ತ್ರಿ ವಿಧದ,  ಸರ್ಕಾರಗಳು:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...