[C] ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣ:
ಪೀಠಿಕೆ: ಅರಿಸ್ಟಾಟಲ್ನು ಬದುಕಿದ್ದ ಸಮಯದಲ್ಲಿ ಗ್ರೀಕ್ ನಗರ ರಾಜ್ಯಗಳ ಸರ್ಕಾರಗಳು ಪದೇ ಪದೇ ಬದಲಾಗುತ್ತಿದ್ದವು. ಸರ್ಕಾರದ ಆಡಳಿತದಲ್ಲಿ ಸ್ಥಿರತೆ, ದಕ್ಷತೆ, ಪ್ರಜಾ ಹಿತ, ನ್ಯಾಯ ಮಾಯವಾಗಿದ್ದವು. ಈ ಬೆಳವಣಿಗೆಗಳು ಅರಿಸ್ಟಾಟಲ್ ಸರ್ಕಾರಗಳ ಆಳವಾದ ಅಧ್ಯಯನಕ್ಕೆ ಪ್ರೋತ್ಸಾಹಿಸಿದವು.. ಆತ 158 ಗ್ರೀಕ್ ನಗರ ರಾಜ್ಯಗಳ ಸಂವಿಧಾನಗಳನ್ನು ಅಭ್ಯಸಿಸಿ ತನ್ನ ಸರ್ಕಾರಗಳ ವರ್ಗೀಕರಣ ಸಿದ್ಧಾಂತವನ್ನು ಪ್ರತಿಪಾದಿಸಿದನು. ಅರಿಸ್ಟಾಟಲ್ನ ಈ ವರ್ಗೀಕರಣವು ಮುಂದೆ ಸರ್ಕಾರಗಳ ವರ್ಗೀಕರಣಕ್ಕೆ ಪ್ರಯತ್ನಿಸಿದ ಚಿಂತಕರಿಗೆ ತಳಹದಿ ಒದಗಿಸಿತು. ಗಾತ್ರ ಮತ್ತು ಗುಣಾಧಾರಿತ ಸರ್ಕಾರಗಳ ವರ್ಗೀಕರಣವು ರಾಜಕೀಯ ಚಿಂತನೆಗೆ ಅರಿಸ್ಟಾಟಲ್ನು ನೀಡಿರುವ ಅತ್ಯಮೂಲ್ಯ ಕೊಡುಗೆಯಾಗಿದೆ.
ಸರ್ಕಾರದ ಪರಿಕಲ್ಪನೆ: ಆಡಳಿತದ ಉನ್ನತ ಹುದ್ದೆಗಳುಳ್ಳ ವ್ಯವಸ್ಥೆಯೇ ಸರ್ಕಾರ. ಆದರೆ ಅರಿಸ್ಟಾಟಲ್ನ ಪ್ರಕಾರ ಸಂವಿಧಾನ ಮತ್ತು ರಾಜ್ಯ ಸರ್ಕಾರಕ್ಕೆ ಸಮಾನವಾದ ಪರಿಕಲ್ಪನೆಗಳಾಗಿವೆ. ಇದಕ್ಕೆ ಕಾರಣವೇನೆಂದರೆ ಆಡಳಿತದ ಉನ್ನತ ಹುದ್ದೆಗಳು ಸಂವಿಧಾನದ ಚೌಕಟ್ಟಿನಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತವೆ. ಅಂತೆಯೇ ರಾಜ್ಯವೊಂದರ ಸ್ವರೂಪವು ಆ ರಾಜ್ಯದ ಸಂವಿಧಾನವನ್ನು ಅವಲಂಬಿಸಿದೆ. ಹೀಗಾಗಿ ಅರಿಸ್ಟಾಟಲ್ ಸರ್ಕಾರ, ಸಂವಿಧಾನ ಮತ್ತು ರಾಜ್ಯವನ್ನು ಸಮಾನಾರ್ಥದಲ್ಲಿ ಪರಿಗಣಿಸಿದ್ದಾನೆ. ಓದುಗರು ಸರ್ಕಾರ, ಸಂವಿಧಾನ ಅಥವಾ ರಾಜ್ಯ ಪದಗಳನ್ನು ಸಮಾನಾರ್ಥಕವಾಗಿ ಭಾವಿಸಿ ಅಧ್ಯಯನ ನಡೆಸಿದರೆ ಮಾತ್ರ ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣವನ್ನು ಗೊಂದಲವಿಲ್ಲದೇ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ ಅಂತರ್ಸಂಬಂಧವುಳ್ಳ ಸರ್ಕಾರ, ಸಂವಿಧಾನ ಅಥವಾ ರಾಜ್ಯವನ್ನು ಸಮಾನ ಪರಿಕಲ್ಪನೆಗಳೆಂಬ ಪೂರ್ವ ಜ್ಙಾನದೊಂದಿಗೆ ಸರ್ಕಾರಗಳ ವರ್ಗೀಕರಣವನ್ನು ಅಭ್ಯಸಿಸುವುದು ಸುಲಭ ಅರ್ಥೈಸಿಕೊಳ್ಳುವಿಕೆಗೆ ಸಹಕಾರಿ.
ವರ್ಗೀಕರಣದ ಆಧಾರಗಳು: ಅರಿಸ್ಟಾಟಲ್ನು ತನ್ನ ಸರ್ಕಾರಗಳ ವರ್ಗೀಕರಣಕ್ಕೆ ಾಳುವವರ ಗುಣ ಮತ್ತು ಗಾತ್ರವನ್ನು ಅವಲಂಬಿಸಿದ್ದನು. ಈ ಹಿನ್ನೆಲೆಯಲ್ಲಿ ಸರ್ಕಾರಗಳ ವರ್ಗೀಕರಣವು ಕೆಳಗಿನ ಅಂಶಗಳನ್ನು ಆಧರಿಸಿವೆ.
1. ಆಳುವವರ ಉದ್ದೇಶ: ಅರಿಸ್ಟಾಟಲ್ ತನ್ನ ಸರ್ಕಾರಗಳ ವರ್ಗೀಕರಣಕ್ಕೆ ಆಳುವವರ ಗುಣಗಳಿಗೆ ಮಹತ್ವ ನೀಡಿದ್ದನು. ಸದ್ಗುಣ, ನಿಸ್ವಾರ್ಥ, ಪ್ರಜಾ ಕಲ್ಯಾಣದಂತಹ ಉತ್ತಮ ಗುಣಗಳನ್ನಾಧರಿಸಿ ಶುದ್ಧ ಮತ್ತು ದುರಾಸೆ, ಸ್ವಾರ್ಥ, ಪ್ರಜಾ ಪೀಡಕ ಗುಣಗಳನ್ನಾಧರಿಸಿ ಅಶುದ್ಧ ಸರ್ಕಾರಗಳನ್ನು ಅರಿಸ್ಟಾಟಲ್ ಮಂಡಿಸಿರುವನು.
2. ಆಳುವವರ ಸಂಖೆ: ಅರಿಸ್ಟಾಟಲ್ನು ಆಳುವವರ ಗಾತ್ರವನ್ನು ಆಧರಿಸಿಯೂ ಸರ್ಕಾರಗಳನ್ನು ವರ್ಗೀಕರಿಸಲು ಪ್ರಯತ್ನಿಸಿರುವ. ಒಬ್ಬರ, ಕೆಲವರ ಅಥವಾ ಬಹು ಜನರ ಕೈಯಲ್ಲಿ ಅಧಿಕಾರವನ್ನು ಕಂಡು ಗಾತ್ರಾಧಾರಿತ ವರ್ಗೀಕರಣ ಪ್ರತಿಪಾದಿಸಿರುವನು.
ವರ್ಗೀಕರಣ: ಸರ್ಕಾರಗಳ ಗುಣ ಮತ್ತು ಗಾತ್ರವನ್ನಾಧರಿಸಿ ಅರಿಸ್ಟಾಟಲ್ನು ಆರು ಬಗೆಯ ಸರ್ಕಾರಗಳನ್ನು ತನ್ನ ವರ್ಗೀಕರಣದಲ್ಲಿ ತಿಳಿಸಿರುವ. ಆ ಸರ್ಕಾರಗಳ ಚಿತ್ರಣವನ್ನು ಕೆಳಗಿನ ಕೋಷ್ಟಕವು ಸುಲಭವಾಗಿ ಮನವರಿಕೆ ಮಾಡಿ ಕೊಡುತ್ತದೆ.
ಆಳುವವರ ಸಂಖೆ ಶುದ್ಧ ಸರ್ಕಾರ ುದ್ದೇಶ ಅಶುದ್ಧ ಸರ್ಕಾರ ುದ್ದೇಶ
ೊಬ್ಬ ಅರಸೊತ್ತಿಗೆ ಜನರ ಕಲ್ಯಾಣ ನಿರಂಕುಶ ಪ್ರಭುತ್ವ ಸ್ವಾರ್ಥ
ಕೆಲವರು ಶ್ರೀಮಂತ ಪ್ರಭುತ್ವ ಸರ್ವರ ಕಲ್ಯಾಣ ಅಲ್ಪ ಜನಾಧಿಪತ್ಯ ಸ್ವಾರ್ಥ
ಬಹು ಜನರು ಮಧ್ಯಮ ವರ್ಗದ ಅಧಿಪತ್ಯ ಸರ್ವರ ಹಿತ ಪ್ರಜಾಪ್ರಭುತ್ವ ಬಡವರ ಕಲ್ಯಾಣ
ವಿವರಣೆ
1. ಅರಸೊತ್ತಿಗೆ: ಅಧಿಕಾರವು ಒಬ್ಬ ವ್ಯಕ್ತಿಯ ಕೈಯಲ್ಲಿದ್ದು ಆತ ಅದನ್ನು ಜನರ ಕಲ್ಯಾಣಕ್ಕೆ ಉಪಯೋಗಿಸುತ್ತಿದ್ದರೆ ಅದುವೇ ಅರಸೊತ್ತಿಗೆ ಎಂದು ಅರಿಸ್ಟಾಟಲ್ ತಿಳಿಸಿದ್ದಾನೆ. ಅರಸೊತ್ತಿಗೆಯು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣದ ಮೊದಲ ಶುದ್ಧ ಸರ್ಕಾರವಾಗಿತ್ತು. ಅರಸೊತ್ತಿಗೆಯಲ್ಲಿ ಆಳುವ ಒಬ್ಬ ವ್ಯಕ್ತಿಯು ಅಧಿಕಾರವನ್ನು ವಂಶ ಪಾರಂಪರ್ಯ ಅಥವ ಚುನಾವಣೆಯ ಮೂಲಕ ಪಡೆದಿರುತ್ತಾನೆ. ತುರ್ತು ಸಂದರ್ಭದಲ್ಲಿ ಅರಸೊತ್ತಿಗೆಯಲ್ಲಿನ ಅರಸನು ಶೀಘ್ರ ಹಾಗೂ ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ಸಾಧ್ಯವೆಂಬುದು ಅರಿಸ್ಟಾಟಲ್ನ ನಂಬಿಕೆಯಾಗಿತ್ತು. ಅರಸನು ತನ್ನ ವೈಯಕ್ತಿಕ ಹಿತಕ್ಕಿಂತ ರಾಜ್ಯದ ಹಿತಕ್ಕೆ ಮಹತ್ವ ನೀಡುವನಲ್ಲದೇ ಪ್ರಜೆಗಳ ಸಲಹೆಗಳನ್ನು ಗೌರವಿಸುವನೆಂಬುದು ಅರಿಸ್ಟಾಟಲ್ನ ವಾದವಾಗಿತ್ತು. ಸಾಮಾನ್ಯವಾಗಿ ಸಮುದಾಯದ ಹಿತಕ್ಕೆ ಪ್ರಾಶಸ್ತ್ಯ ನೀಡುವ ಅರಸ ಮುಂದುವರೆದು ಭಾವೋದ್ರೇಕಕ್ಕೊಳಗಾಗದೇ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಲಾರ. ಅರಸನೂ ಕಾನೂನುಗಳಿಗೆ ವಿಧೇಯನಾಗಿರಬೇಕು ಎಂಬುದಾಗಿ ಅರಿಸ್ಟಾಟಲ್ ಎಚ್ಚರಿಸಿದ್ದಾನೆ. ಕ್ರಮೇಣ ಅರಸೊತ್ತಿಗೆಯು ಸರ್ವಾಧಿಕಾರಿ ಪ್ರಭುತ್ವವಾಗಿ ಪರಿವರ್ತನೆ ಹೊಂದುವುದೆಂದು ಸ್ವತಃ ಅರಿಸ್ಟಾಟಲ್ನು ಅಭಿಪ್ರಾಯಪಟ್ಟಿರುವನು.
2. ನಿರಂಕುಶ ಪ್ರಭುತ್ವ: ಅಧಿಕಾರವು ಒಬ್ಬ ವ್ಯಕ್ತಿಯ ಕೈಯಲ್ಲಿದ್ದು ಆತ ಅದನ್ನು ಸ್ವಾರ್ಥ ಸಾಧನೆಗೆ ಉಪಯೋಗಿಸುತ್ತಿದ್ದರೆ ಅದುವೇ ನಿರಂಕುಶ ಪ್ರಭುತ್ವ ಎಂದು ಅರಿಸ್ಟಾಟಲ್ ತಿಳಿಸಿರುವನು. ನಿರಂಕುಶ ಪ್ರಭುತ್ವವು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣದ ಮೊದಲ ಅಶುದ್ಧ ಸರ್ಕಾರವಾಗಿದೆ. ಆಳುವ ನಿರಂಕುಶಾಧಿಕಾರಿಯು ಬಲ ಪ್ರಯೋಗದಿಂದ ಅಧಿಕಾರವನ್ನು ಪಡೆದು ವೈಯಕ್ತಿಕ ಸ್ವಾರ್ಥ ಸಾಧನೆಗೆ ಶ್ರಮಿಸುತ್ತಾನೆ. ಇದರೊಡನೆ ನಿರಂಕುಶ ಪ್ರಭುತ್ವದಲ್ಲಿ ಆಳುವವ ತನ್ನ ಇಚ್ಛಾನುಸಾರ ನಿರ್ಧಾರ ಕೈಗೊಳ್ಳುತ್ತಾನೆ. ಮುಂದುವರೆದು ನಿರಂಕುಶ ಪ್ರಭು ತನ್ನ ನಿರ್ಧಾರಗಳನ್ನು ಪ್ರಶ್ನಿಸುವ ಅಥವಾ ವಿಮರ್ಷಿಸುವ ಪ್ರಜೆಗಳ ಅಧಿಕಾರವನ್ನು ಕಸಿದುಕೊಂಡಿರುವನು. ಆದ್ದರಿಂದ ಈ ಬಗೆಯ ಸರ್ಕಾರವನ್ನು ಅರಿಸ್ಟಾಟಲ್ನು ದಬ್ಬಾಳಿಕೆಯ ಸರ್ಕಾರ ಎಂದೂ ಸಂಬೋಧಿಸಿದ್ದಾನೆ. ಒಟ್ಟಾರೆ ಜನರ ಅಗತ್ಯಗಳನ್ನು ಈಡೇರಿಸುವ ಏಕ ವ್ಯಕ್ತಿಯ ಆಡಳಿತವನ್ನುಳ್ಳ ಸರ್ಕಾರವು ಅರಸೊತ್ತಿಗೆಯಾದರೆ ಜನರ ಹಿತವನ್ನು ಕಡೆಗಣಿಸಿ ಸ್ವಾರ್ಥ ಸಾಧನೆಗೆ ಆಳುವ ಸರ್ಕಾರವನ್ನು ನಿರಂಕುಶ ಪ್ರಭುತ್ವ ಎಂಬುದಾಗಿ ಅರಿಸ್ಟಾಟಲ್ ಗುರುತಿಸಿದ್ದಾನೆ.
3. ಶ್ರೀಮಂತ ಪ್ರಭುತ್ವ: ಅರಿಸ್ಟಾಟಲ್ನ ಪ್ರಕಾರ ಅಧಿಕಾರವು ಸದ್ಗುಣ ಹಾಗೂ ಸಂಪತ್ತನ್ನುಳ್ಳ ಕೆಲವರ, ಕೈಯಲ್ಲಿದ್ದು ಅವರು ಅದನ್ನು ಸರ್ವರ ಕಲ್ಯಾಣಕ್ಕೆ ಉಪಯೋಗಿಸುತ್ತಿದ್ದರೆ ಅದು ಶ್ರೀಮಂತ ಪ್ರಭುತ್ವವಾಗಿದೆ. ಇದು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣದ ಎರಡನೇ ಶುದ್ಧ ಸರ್ಕಾರ. ಸಂಪತ್ತನ್ನುಳ್ಳ ಶ್ರೀಮಂತರು ವಿರಾಮವನ್ನು ಹೊಂದಿದ್ದು ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಅವರು ರಾಜ್ಯದ ಸಾಮಾನ್ಯ ಹಿತಕ್ಕಾಗಿ ಶ್ರಮಿಸುತ್ತಾರೆ. ಆಗ ಸರ್ವರ ಕಲ್ಯಾನ ಸಾಧ್ಯವಾಗುವುದೆಂಬ ನಂಬಿಕೆ ಅರಿಸ್ಟಾಟಲ್ನದಾಗಿತ್ತು.
4. ಅಲ್ಪ ಜನಾಧಿಪತ್ಯ: ಅರಿಸ್ಟಾಟಲ್ನ ಪ್ರಕಾರ ಅಧಿಕಾರವು ದುರಾಸೆ ಹಾಗೂ ಸ್ವಾರ್ಥವನ್ನುಳ್ಳ ಕೆಲವರ ಕೈಯಲ್ಲಿದ್ದು ಅವರು ಅದನ್ನು ಸ್ವಾರ್ಥ ಸಾಧನೆಗೆ ಉಪಯೋಗಿಸುತ್ತಿದ್ದರೆ ಅದು ಅಲ್ಪ ಜನಾಧಿಪತ್ಯವಾಗಿದೆ. ಇದು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣದ ಅಶುದ್ಧ ಸರ್ಕಾರ. ಇಲ್ಲಿ ಆಳುವವರು ಜನರ ಹಿತಕ್ಕೆ ಬದಲಾಗಿ ಶ್ರೀಮಂತರ ಹಿತಕ್ಕೆ ಮಹತ್ವ ನೀಡುತ್ತಾರೆ. ಗ್ರೀಕ್ ನಗರ ರಾಜ್ಯಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದ ಸರ್ಕಾರದ ಮಾದರಿ ಎಂಬುದಾಗಿ ಅರಿಸ್ಟಾಟಲ್ ಅಭಿಪ್ರಾಯ ವ್ಯಕ್ತಪಡಿಸಿದ್ದನು.
5. ಮಧ್ಯಮ ವರ್ಗದ ಅಧಿಪತ್ಯ: ಅಧಿಕಾರವು ಬಹು ಸಂಖೆಯ ಮಧ್ಯಮ ವರ್ಗದವರ ಕೈಯಲ್ಲಿರುವ ಸರ್ಕಾರವೇ ಮಧ್ಯಮ ವರ್ಗದ ಅಧಿಪತ್ಯ ಅಥವಾ ನಾಗರಿಕ ಪ್ರಭುತ್ವ. ಈ ಬಗೆಯ ಸರ್ಕಾರವನ್ನು ಅರಿಸ್ಟಾಟಲ್ ತನ್ನ ಸರ್ಕಾರಗಳ ವರ್ಗೀಕರಣದಲ್ಲಿನ ಶುದ್ಧ ಮತ್ತು ಅತ್ಯುತ್ತಮ ಸರ್ಕಾರ ಎಂಬುದಾಗಿ ಪರಿಗಣಿಸಿದ್ದಾನೆ. ಮಧ್ಯಮ ವರ್ಗದವರು ಶ್ರೀಮಂತರ ಬೇಡಿಕೆ ಹಾಗೂ ಬಡವರ ಹಿತಾಸಕ್ತಿಗಳನ್ನು ಗೌರವಿಸಿ ಅಧಿಕಾರ ಚಲಾಯಿಸುತ್ತಾರೆ. ಫಲವಾಗಿ ಸಮಾಜದಲ್ಲಿ ಶಾಂತಿ, ಭದ್ರತೆ ಹಾಗೂ ನ್ಯಾಯ ಸ್ಥಾಪನೆಗೊಂಡು ರಾಜ್ಯದ ಪ್ರಗತಿ ಅಬಾಧಿತವಾಗಿ ಮುಂದುವರೆಯುವುದು ಎಂಬುದು ಅರಿಸ್ಟಾಟಲ್ನ ವಾದವಾಗಿತ್ತು. ಆಳುವ ಮತ್ತು ಆಳಿಸಿಕೊಳ್ಳುವ ಸಾಮರ್ಥ್ಯವುಳ್ಳ ಮಧ್ಯಮ ವರ್ಗದವರ ಆಳ್ವಿಕೆಯು ರಾಜ್ಯವೊಂದರ ಸುವರ್ಣ ಸಾಧನ (GOLDEN MEAN) ಎಂಬುದು ಅರಿಸ್ಟಾಟಲ್ನ ಚಿಂತನೆಯಾಗಿತ್ತು.
6. ಪ್ರಜಾ ಪ್ರಭುತ್ವ: ಅಧಿಕಾರವು ಬಹು ಸಂಖೆಯ ಬಡವರ ಕೈಯಲ್ಲಿರುವ ಸರ್ಕಾರವೇ ಪ್ರಜಾಪ್ರಭುತ್ವ. ಇದು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣದ ಅಶುದ್ಧ ಮತ್ತು ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಇಲ್ಲಿ ಆಳುವ ಬಡ ವರ್ಗದವರು ಅಲ್ಪ ಸಂಖ್ಯಾತ ಶ್ರೀಮಂತರ ಮೇಲೆ ಅಧಿಕ ತೆರಿಗೆ ವಿಧಿಸಿ ಅವರನ್ನು ಹಿಂಸಿಸುತ್ತಾರೆ. ಸರ್ವರ ಹಿತ ರಕ್ಷಣೆಯ ಬದಲು ಬಡವರ ಹಿತಾಸಕ್ತಿಗೆ ಮಾತ್ರ ಹೆಚ್ಚಿನ ಗಮನ ಹರಿಸಲಾಗುತ್ತದೆ. ದುರ್ಗುಣವುಳ್ಳ, ಆಸಕ್ತಿಯಿಲ್ಲದ ಹಾಗೂ ಕೀಳು ಉದ್ಯೋಗಿಗಳ ಆಳ್ವಿಕೆಯಾದ ಪ್ರಜಾಪ್ರಭುತ್ವವನ್ನು ಅರಿಸ್ಟಾಟಲ್ (ದೊಂಬಿಯ ಸರ್ಕಾರ) ಎಂದು ಕರೆದಿರುವ.
ಮೇಲೆ ಚರ್ಚಿಸಲಾದ ಆರು ಬಗೆಯ ಸರ್ಕಾರಗಳ ವಿಧಗಳನ್ನು ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣ ಸಿದ್ಧಾಂತದಲ್ಲಿ ಗುರುತಿಸಬಹುದಾಗಿದೆ. ಿವುಗಳಲ್ಲಿ ಮೂರು ಶುದ್ಧ ಹಾಗೂ ಮೂರು ಅಶುದ್ಧ ಸರ್ಕಾರಗಳಾಗಿವೆ. ಗಮನಿಸಬೇಕಾದ ಅಂಶವೇನೆಂದರೆ ಅರಿಸ್ಟಾಟಲ್ ಪ್ರತಿಯೊಂದು ವಿಧದ ಸರ್ಕಾರದಲ್ಲಿ ಹಲವು ಉಪ ವರ್ಗೀಕರಣವನ್ನೂ ಮಾಡಿರುವುದು. ಪ್ರಸ್ತಾಪಿತ ಸರ್ಕಾರಗಳ ಪ್ರಧಾನ ಪ್ರಕಾರಗಳು ಜನನ, ಸದ್ಗುಣ, ಸಂಪತ್ತು, ಸ್ವಾರ್ಥಗಳನ್ನು ಆಧರಿಸಿರುವುದು ಸ್ಪಷ್ಟವಾಗುತ್ತದೆ..
ಸರ್ಕಾರಗಳ ಬದಲಾವಣೆಯ ಚಕ್ರ: ಅರಿಸ್ಟಾಟಲ್ ಯಾವುದೇ ಒಂದು ಸರ್ಕಾರ ಶಾಶ್ವತವಲ್ಲ ಎಂಬುದನ್ನು ಕಂಡುಕೊಂಡಿದ್ದನು. ನಿರ್ದಿಷ್ಟ ಸ್ಥಳದಲ್ಲಿ ಕಾಲದಿಂದ ಕಾಲಕ್ಕೆ ಸರ್ಕಾರಗಳ ಬದಲಾವಣೆ ನಿಶ್ಚಿತ ಎಂಬುದು ಆತನ ಅಧ್ಯಯನದಿಂದ ಸ್ಪಷ್ಟವಾಗಿತ್ತು. ಅರಿಸ್ಟಾಟಲ್ನ ಪ್ರಕಾರ ಶುದ್ಧ ಸರ್ಕಾರವೊಂದು ಮಾಯವಾಗಿ ಅಶುದ್ಧ ಸರ್ಕಾರ ಜಾರಿಗೊಳ್ಳುವುದು. ಅಂತೆಯೇ ಅಶುದ್ಧ ಸರ್ಕಾರದ ಬಳಿಕ ಮತ್ತೊಂದು ಶುದ್ಧ ಸರ್ಕಾರ ಅನುಷ್ಟಾನಗೊಳ್ಳುವುದು. ಈ ಶುದ್ಧ ಮತ್ತು ಅಶುದ್ಧ ಸರ್ಕಾರಗಳ ಬದಲಾವಣಾ ಪ್ರಕ್ರಿಯೆ ಚಕ್ರೋಪಾದಿಯಲ್ಲಿ ನಿರಂತರವಾಗಿ ಜರುಗುತ್ತಲೇ ಸಾಗುವುದು ಎಂದು ಅರಿಸ್ಟಾಟಲ್ ಅಭಿಪ್ರಾಯಪಟ್ಟಿದ್ದನು. ಉದಾ: ಶುದ್ಧ ಸರ್ಕಾರವಾದ ಅರಸೊತ್ತಿಗೆ ಬಳಿಕ ಅಶುದ್ಧ ಸರ್ಕಾರವಾದ ನಿರಂಕುಶ ಪ್ರಭುತ್ವ, ಶುದ್ಧ ಸರ್ಕಾರವಾದ ಶ್ರೀಮಂತ ಪ್ರಭುತ್ವದ ಬಳಿಕ ಅಶುದ್ಧ ಸರ್ಕಾರವಾದ ಅಲ್ಪ ಜನಾಧಿಪತ್ಯ ಮತ್ತು ಶುದ್ಧ ಸರ್ಕಾರವಾದ ಮಧ್ಯಮ ವರ್ಗದ ಪ್ರಭುತ್ವದ ಬಳಿಕ ಅಶುದ್ಧ ಸರ್ಕಾರವಾದ ಪ್ರಜಾಪ್ರಭುತ್ವ ಜಾರಿಗೊಂಡು ಮರಳಿ ಶುದ್ಧ ಸರ್ಕಾರವಾದ ಅರಸೊತ್ತಿಗೆ ಜಾರಿಗೊಳ್ಳುವುದು. ಹೀಗೆ ಶುದ್ಧ ಹಾಗೂ ಅಶುದ್ಧ ಸರ್ಕಾರಗಳ ಚಕ್ರವು ಪುನರಾವರ್ತನೆಗೊಳ್ಳುವುದನ್ನೇ ಅರಿಸ್ಟಾಟಲ್ನು ಸರ್ಕಾರಗಳ ಬದಲಾವಣೆಯ ಚಕ್ರ ಎಂದಿರುವನು.
ವಿಮರ್ಷೆ: ಅರಿಸ್ಟಾಟಲ್ನು ಸರ್ಕಾರಗಳನ್ನು ವೈಜ್ಙಾನಿಕ ತಳಹದಿಯ ಮೇಲೆ ಅಧ್ಯಯನ ಮಾಡಿ ಅವುಗಳನ್ನು ವರ್ಗೀಕರಿಸಿದ್ದನು. ಈ ವರ್ಗೀಕರಣವು ಆಧುನಿಕ ಸರ್ಕಾರಗಳ ವರ್ಗೀಕರಣಕ್ಕೆ ದಿಕ್ಸೂಚಿಯಾಗಿದೆ. ಆದ್ದಾಗ್ಯೂ ಆತನ ಸರ್ಕಾರಗಳ ವರ್ಗೀಕರಣ ಸಿದ್ಧಾಂತ ಸಾಕಷ್ಟು ವಿಮರ್ಷೆಗೆ ಒಳಗಾಗಿದೆ. ಚಿಂತಕರು ಗುರುತಿಸಿರುವ ಇದರಲ್ಲಿನ ಪ್ರಮುಖ ದೋಷಗಳೆಂದರೆ
1. ರಾಜ್ಯ ಮತ್ತು ಸರ್ಕಾರಗಳ ನಡುವೆ ವ್ಯತ್ಯಾಸ ಗುರುತಿಸಿಲ್ಲ: ಅರಿಸ್ಟಾಟಲ್ ರಾಜ್ಯ ಮತ್ತು ಸರ್ಕಾರವೆಂಬ ಪದಗಳನ್ನು ಒಂದೇ ಅರ್ಥದಲ್ಲಿ ಗುರುತಿಸಿದ್ದಾನೆ. ಆಧುನಿಕವಾಗಿ ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ರಾಜ್ಯವು ಯಜಮಾನನೋಪಾದಿಯಲ್ಲಿದ್ದರೆ ಸರ್ಕಾರ ಅದರ ಸೇವಕನಂತಿರುತ್ತದೆ.
2. ಸಮ್ಮತಿಸಲಾಗದ ಶ್ರೀಮಂತ ಪ್ರಭುತ್ವ ಹಾಗೂ ಅಲ್ಪ ಜನಾಧಿಪತ್ಯಗಳ ವಿಂಗಡಣೆ: ಆಧುನಿಕವಾಗಿ ಈ ಎರಡೂ ಬಗೆಯ ಸರ್ಕಾರಗಳು ಏಕರೂಪದ ಸರ್ಕಾರಗಳೆನಿಸಿವೆ. ಇವೆರಡರಲ್ಲಿ ಒಂದು ಸರ್ಕಾರ ಯಾವಾಗ ಅಂತ್ಯಗೊಂಡು ಬೇರೊಂದು ಅಸ್ತಿತ್ವಕ್ಕೆ ಬರುತ್ತದೆ ಎಂಬುದನ್ನು ಊಹಿಸಲಾಗದು.
3. ಸಮರ್ಥಿಸಲಾಗದ ಪ್ರಜಾಪ್ರಭುತ್ವದ ಚಿತ್ರಣ: ಪ್ರಸ್ತುತ ಜಗತ್ತು ಪ್ರಜಾಪ್ರಭುತ್ವದ ಯುಗವೆನಿಸಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಯಂತಹ ಉದಾತ್ತ ಮೌಲ್ಯಗಳನ್ನು ಪ್ರಜಾಪ್ರಭುತ್ವ ಆಧರಿಸಿದೆ. ಇಂತಹ ಸರ್ಕಾರವನ್ನು ದೊಂಬಿಯ ಆಳ್ವಿಕೆ ಎಂಬುದಾಗಿ ಅರಿಸ್ಟಾಟಲ್ ಪರಿಗಣಿಸಿರುವ. ಬಡವರಿಂದ ಶ್ರೀಮಂತರ ಶೋಷಣೆ ಜರುಗುವುದೆಂಬ ಅರಿಸ್ಟಾಟಲ್ನ ಪ್ರಜಾಪ್ರಭುತ್ವ ಕುರಿತಾದ ಚಿಂತನೆಯನ್ನು ಸಮರ್ಥಿಸಲಾಗದು.
4. ಮಿಶ್ರ, ಸರ್ಕಾರಗಳಿಗೆ ಅವಕಾಶವಿಲ್ಲ: ಪ್ರಸ್ತುತ ಜಗತ್ತಿನಲ್ಲಿ ಮಿಶ್ರ ಸರ್ಕಾರಗಳು ಸರ್ವೇ ಸಾಮಾನ್ಯವಾಗಿವೆ. ಉದಾ: ಇಂಗ್ಲೆಂಡಿನಲ್ಲಿ ಅರಸೊತ್ತಿಗೆ, ಶ್ರೀಮಂತ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಏಕ ಕಾಲದಲ್ಲಿ ಜಾರಿಯಲ್ಲಿವೆ. ಆದರೆ ಅರಿಸ್ಟಾಟಲ್ ಮಿಶ್ರ ಸರ್ಕಾರಗಳ ಕುರಿತು ಚರ್ಚಿಸಿಲ್ಲ.
5. ಅನುಷ್ಟಾನ ಯೋಗ್ಯ ವಿಚಾರವಲ್ಲ: ಅರಿಸ್ಟಾಟಲ್ ಮಂಡಿಸಿರುವ ಸರ್ಕಾರಗಳ ವರ್ಗೀಕರಣವು ಗ್ರೀಕ್ ನಗರ ರಾಜ್ಯಗಳನ್ನು ಆಧರಿಸಿತ್ತು. ಆಧುನಿಕ ರಾಷ್ಟ್ರ ರಾಜ್ಯಗಳಲ್ಲಿ ಅದನ್ನು ಪಾಲಿಸಲು ಸಾಧ್ಯವಿಲ್ಲ ಎಂಬುದಾಗಿ ಚಿಂತಕರಾದ ಸೀಲೆ ಮತ್ತು ಸ್ಟೀಫನ್ ಲಿಕಾಕ್ ಅಭಿಪ್ರಾಯಪಟ್ಟಿರುವರು.
6. ಅವೈಜ್ಞಾನಿಕ ವರ್ಗೀಕರಣ: ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣವು ಆಳುವವರ ಸಂಖೆ ಮತ್ತು ನೈತಿಕತೆಯನ್ನು ಅವಲಂಬಿಸಿದೆ. ಆದರೆ ವ್ಯಕ್ತಿಗತವಾಗಿ ಒಂದು ಸರ್ಕಾರವು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದನ್ನು ನಿರ್ಧರಿಸುವುದನ್ನು ನಿರ್ಲಕ್ಷಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ