ಶುಕ್ರವಾರ, ಜೂನ್ 11, 2021

ಪ್ರಸ್ತಾವನೆಯ ತಾತ್ವಿಕತೆ: ಭಾರತ ಸಂವಿಧಾನದ ಪುಟ್ಟ ಪ್ರಸ್ತಾವನೆಯು ಹಲವು ಅವ್ಯಕ್ತ ತತ್ವಗಳ ಆಗರವಾಗಿದೆ. ಹೀಗಾಗಿ ಭಾರತ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಅರಿವು ಅಗತ್ಯ. ಈ ಕೆಳಗೆ ಪ್ರಸ್ತಾವನೆಯಲ್ಲಿ ಸ್ಥಾನ ಪಡೆದಿರುವ ತತ್ವಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು ಪ್ರಸ್ತಾವನೆಯ ತಾತ್ವಿಕತೆಯನ್ನು ಮನವರಿಕೆ ಮಾಡಿಕೊಳ್ಳಲು ಸುಲಭವಾಗುತ್ತದೆ.

1. ಭಾರತದ ಪ್ರಜೆಗಳಾದ ನಾವು: ನಮ್ಮ ಸಂವಿಧಾನವು ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗಿ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಸಂವಿಧಾನ ರಚನಾ ಸಭೆಯ ಸದಸ್ಯರಿಂದ ನಮ್ಮ ಸಂವಿಧಾನ ರಚನೆಗೊಂಡಿದ್ದರೂ ಆ ಅಧಿಕಾರದ ಮೂಲ ಭಾರತದ ಸಮಸ್ತ ಜನತೆ ಎಂಬುದನ್ನು ಈ ಪದಗಳ ಪ್ರಯೋಗ ಪ್ರತಿಪಾದಿಸುತ್ತದೆ. ಅಂದರೆ ಜನರ ಪರವಾಗಿ ಸಂವಿಧಾನ ರಚನಾಕಾರರು ಸಂವಿಧಾನವನ್ನು ರಚಿಸಿ ಜನರ ಪರವಾಗಿ ಅಂಗೀಕರಿಸಿರುವರೆಂಬುದು ಇದರರ್ಥ. ಈ ಮೂಲಕ ರಾಜಕೀಯ ಪರಮಾಧಿಕಾರ ಜನರಲ್ಲಿರುವ ಜನತಾ ಪರಮಾಧಿಕಾರ ತತ್ವಕ್ಕೆ ಮಹತ್ವವನ್ನು ಒದಗಿಸಲಾಗಿದೆ. ಆದರೆ ಈ ತತ್ವವನ್ನು ಸೀಮಿತ ಮತದಾನದಿಂದ ಸಂವಿಧಾನ ರಚನಾಕಾರರ ಆಯ್ಕೆಯ ಕಾರಣಕ್ಕೆ ವಿಮರ್ಷಕರು ಟೀಕಿಸಿರುವರು. ಜೊತೆಗೆ ಕಾಂಗ್ರೆಸ್ಸಿನ ನಾಯಕರ ಪ್ರಭಾವವನ್ನು ಉಲ್ಲೇಕಿಸಿ ಟೀಕಿಸಲಾಯಿತು. ಅಂತಿಮವಾಗಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಸಂವಿಧಾನಾನುಸಾರ ಚುನಾವಣೆಯಲ್ಲಿ ಭಾಗವಹಿಸಿ ಸಂವಿಧಾನದ ಸಮ್ಮತಿಯನ್ನು ವ್ಯಕ್ತಪಡಿಸಿದರು.

2. ಸಾರ್ವಭೌಮ: ರಾಜ್ಯವೊಂದರ ಸರ್ವೋಚ್ಛ ಅಧಿಕಾರವನ್ನು ಪರಮಾಧಿಕಾರ ಅಥವಾ ಸಾರ್ವಭೌಮ ಅಧಿಕಾರ ಎನ್ನಲಾಗುತ್ತದೆ. ಸಾರ್ವಭೌಮಾಧಿಕಾರವು ರಾಜ್ಯದ ಜೀವಾಳವಾಗಿದ್ದು ರಾಜ್ಯದ ಅಸ್ತಿತ್ವ ಮತ್ತು ಮುಂದುವರಿಕೆಗೆ ಅನಿವಾರ್ಯವಾಗಿದೆ. ದೇಶದ ಬಾಹ್ಯ ಅಥವಾ ಆಂತರಿಕ ವ್ಯವಹಾರದಲ್ಲಿ ಯಾವುದೇ ನಿಯಂತ್ರಣಕ್ಕೊಳಪಡದೇ ತನಗೆ ಸರಿ ತೋರಿದ ನಿರ್ಧಾರವನ್ನು ಕೈಗೊಳ್ಳಲು ಸಾರ್ವಭೌಮಾಧಿಕಾರ ನೆರವಾಗುತ್ತದೆ. 15 ಆಗಸ್ಟ್ 1947 ರಿಂದ ಭಾರತವು ಹೊರಗಿನ ಅಥವಾ ಒಳಗಿನ ನಿಯಂತ್ರಣಗಳಿಂದ ಮುಕ್ತವಾಗಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಬಲ್ಲ ಅವಕಾಶ ಪಡೆದಿದೆ. ಆದ್ದರಿಂದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ತತ್ವಾಧಾರಿತ ರಾಷ್ಟ್ರವೆಂದು ಸಂವಿಧಾನ ರಚನಾಕಾರರು ಘೋಷಿಸಿರುವರು.

3. ಸಮಾಜವಾದ: ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಶೋಷಣೆ ರಹಿತ ಸಮಾನವಕಾಶಗಳನ್ನೊದಗಿಸುವ ವ್ಯವಸ್ಥೆಯೇ ಸಮಾಜವಾದ. ಇನ್ನೊಂದು ರೂಪದಲ್ಲಿ ಸಮಾಜವಾದವು ಖಾಸಗಿ ಒಡೆತನದ ಬದಲು ಸರ್ಕಾರದ ಒಡೆತನವನ್ನು ಹೊಂದಿರುವ ವ್ಯವಸ್ಥೆ.  ಸುದೀರ್ಘ ಚರ್ಚೆಯ ಬಳಿಕ ಭಾರತವನ್ನು ಸುಖಿ ರಾಜ್ಯವನ್ನಾಗಿಸಲು ಸಂವಿಧಾನ ರಚನಾಕಾರರು ಪ್ರಜಾಪ್ರಭುತ್ವದೊಡನೆ ಸಮಾಜವಾದವನ್ನು ಅಳವಡಿಸಲು ಬಯಸಿದ್ದರು. ಫಲವಾಗಿ ಸಂವಿಧಾನದ 4 ನೇ ಭಾಗದ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಲ್ಲಿ ಸಮಾಜವಾದಿ ತತ್ವಗಳನ್ನು ಸೇರಿಸಲು ನಿರ್ಧರಿಸಿದ್ದರು. ಜೊತೆಗೆ ಸ್ವಾತಂತ್ರ್ಯಾ ನಂತರ ಸರ್ಕಾರಗಳು ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಪಾಲಿಸಲು ಸಂವಿಧಾನದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ ಸಮಾಜವಾದದ ಅಂಶಗಳು ನಮ್ಮ ಸಂವಿಧಾನದಲ್ಲಿದ್ದರೂ ಸಮಾಜವಾದ ಪದವನ್ನು ಮೂಲ ಸಂವಿಧಾನವು ಒಳಗೊಂಡಿರಲಿಲ್ಲ. ಮುಂದೆ 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಸಮಾಜವಾದಿ ಎಂಬ ಪದವನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು. ಸಮಾಜವಾದಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ 1978 ರ 44 ನೇ ಸಂವಿಧಾನ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ರದ್ದುಗೊಳಿಸಲಾಗಿದೆ.

4. ಜಾತ್ಯಾತೀತತೆ: ಯಾವುದೇ ಒಂದು ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯಾತೀತತೆ ಎನ್ನಬಹುದು. ಜಾತ್ಯಾತೀತತೆಯು ನಕಾರಾತ್ಮಕ ಹಾಗೂ ಸಕಾರಾತ್ಮಕ ಸ್ವರೂಪವನ್ನು ಹೊಂದಿದೆ. ರಾಜ್ಯವು ಧರ್ಮಗಳ ವಿಚಾರದಲ್ಲಿ ತಾರತಮ್ಯ ತೋರದೇ ತಟಸ್ಥವಾಗಿದ್ದರೆ ಅದನ್ನು ನಕಾರಾತ್ಮಕ ಜಾತ್ಯಾತೀತತೆ ಎನ್ನಲಾಗುತ್ತದೆ. ರಾಜ್ಯವು ತನ್ನ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸಮಾನವಾಗಿ ಒದಗಿಸಿದ್ದರೆ ಅದನ್ನು ಸಕಾರಾತ್ಮಕ ಜಾತ್ಯಾತೀತತೆ ಎನ್ನಲಾಗುತ್ತದೆ. ಭಾರತ ಸಂವಿದಾನ ರಚನಾಕಾರರು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿರುವರು. ಭಾರತದಲ್ಲಿರುವ ಪ್ರಜೆಗಳು ತಮಗೆ ಸರಿ ತೋರಿದ ಧರ್ಮವನ್ನು ಪಾಲಿಸಲು, ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಲು, ತಮ್ಮ ಧರ್ಮವನ್ನು ಪ್ರಚುರಪಡಿಸಲು ಸ್ವತಂತ್ರರಾಗಿದ್ದಾರೆ. ಜೊತೆಗೆ ಸರ್ಕಾರವು ಹಿಂದೂ, ಇಸ್ಲಾಮ್, ಜೈನ, ಬೌದ್ಧ, ಸೀಕ್ಕ್, ಪಾರಸೀಗಳ ಹಿತ ರಕ್ಷಣೆಗಾಗಿ ಸಮಾನವಕಾಶ ಒದಗಿಸುತ್ತವೆ. ಹೀಗಾಗಿ ಭಾರತವು ಜಾತ್ಯಾತೀತ ರಾಷ್ಟ್ರವೆನಿಸಿದೆ. ಪಾಕ್ ಇಸ್ಲಾಮ್ ಧರ್ಮವನ್ನು ತನ್ನ ರಾಜ್ಯ ಧರ್ಮವೆಂದು ಪರಿಗಣಿಸಿದ್ದು ಅದನ್ನು ಜಾತ್ಯಾತೀತ ರಾಷ್ಟ್ರ ಎನ್ನಲಾಗದು. ವಿಶೇಷವೆಂದರೆ ಜಾತ್ಯಾತೀತ ಪದವನ್ನೂ ಸಹ  ಸಂವಿಧಾನದ ಪ್ರಸ್ತಾವನೆಯಲ್ಲಿ 1976 ರ 42 ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು.

5. ಪ್ರಜಾಸತ್ತಾತ್ಮಕತೆ: ದೇಶದ ಆಡಳಿತದಲ್ಲಿ ಪ್ರಜೆಗಳು ಪಾಲು ಹೊಂದಿರುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಪ್ರಜಾಪ್ರಭುತ್ವ ಕುರಿತು ಅಬ್ರಹಾಂ ಲಿಂಕನ್ ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ಾಳುವ ಸರ್ಕಾರ ಎಂದಿದ್ದು ಜನಪ್ರೀಯ ವ್ಯಾಖ್ಯಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಪ್ರಜೆಗಳಿಗೆ ಜವಾಬ್ದಾರಿಯಾಗಿದ್ದು ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಭಾರತ ಸಂವಿಧಾನವು ತನ್ನೆಲ್ಲ ವಯಸ್ಕ ಪ್ರಜೆಗಳಿಗೆ ಮತದಾನದ ಹಕ್ಕನ್ನು ಒದಗಿಸಿದೆ. ಜೊತೆಗೆ ಸಂಸಧೀಯ ಮಾದರಿ ಸರ್ಕಾರವನ್ನು ಭಾರತ ಹೊಂದಿರುವುದರಿಂದ ನಿಯತಕಾಲಿಕ ಚುನಾವಣೆಗಳು ಜರುಗುತ್ತವೆ. ಚುನಾವಣೆಗಳಲ್ಲಿ ತಮ್ಮ ಹಿತರಕ್ಷಣೆ ಮಾಡದ ಸರ್ಕಾರವನ್ನು ಕಿತ್ತೊಗೆದು ಬೇರೊಂದು ಸರ್ಕಾರವನ್ನು  ಅಧಿಕಾರಕ್ಕೆ ತರಲು ಪ್ರಜೆಗಳು ಅಧಿಕಾರ ಪಡೆದಿದ್ದಾರೆ. ಹೀಗಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರಜಾಸತ್ತಾತ್ಮಕ ತತ್ವವನ್ನು ಸಂವಿಧಾನ ರಚನಾಕಾರರು ಸೇರಿಸಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಸತ್ತಾತ್ಮಕತೆಯ ಗುರಿಯನ್ನು ಸಾಧಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ರಾಜಕೀಯ ಪ್ರಜಾಸತ್ತಾತ್ಮಕತೆಯನ್ನು ಮಾತ್ರವೇ ಭಾರತೀಯರಾದ ನಾವು ಅನುಭವಿಸುತ್ತಿದ್ದೇವೆ.

6. ಗಣರಾಜ್ಯ: ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತನಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎನ್ನಲಾಗುತ್ತದೆ. ಭಾರತವು ಅಮೇರಿಕ, ಫ್ರಾನ್ಸ್, ಸ್ವಿಟ್ಜರ್ ಲ್ಯಾಂಡ್ನಂತೆ ಗನರಾಜ್ಯವಾಗಿದೆ. ಗಣರಾಜ್ಯವು ಅನುವಂಶೀಯ ಅರಸೊತ್ತಿಗೆಗೆ ವಿರುದ್ಧವಾಗಿದೆ. ಭಾರತದ ಮುಖ್ಯಸ್ಥ ರಾಷ್ಟ್ರಪತಿಯು ಇಂಗ್ಲೆಂಡ್ ಹಾಗೂ ಜಪಾನ್ ಮುಖ್ಯಸ್ಥರಂತೆ ಅನುವಂಶೀಯವಾಗಿ ನೇಮಕಗೊಳ್ಳುವುದಿಲ್ಲ. ಬದಲಾಗಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಮತ್ತು ಎಲ್ಲ ರಾಜ್ಯ ಶಾಸಕಾಂಗದ ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ವಿಶೇಷ ಮತದಾತೃ ವರ್ಗದಿಂದ ಮತ ಪಡೆದು ಚುನಾಯಿತರಾಗುತ್ತಾರೆ. ಹೀಗಾಗಿ ಭಾರತವು ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿದಂತೆ ಗಣರಾಜ್ಯ ಎಂಬುದು ಸುಸ್ಪಷ್ಟ.

7. ನ್ಯಾಯ: ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲ್ಪಟ್ಟ ನ್ಯಾಯವು ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಲ್ಲಿ ಒದಗಿಸಲಾಗಿರುವ ರಕ್ಷಣೆಯನ್ನು ಸೂಚಿಸುತ್ತದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವರೂಪವನ್ನು ಪ್ರಸ್ತಾವನೆಯಲ್ಲಿನ ನ್ಯಾಯವು ಪ್ರತಿನಿಧಿಸುತ್ತದೆ. ಅಸ್ಪೃಷ್ಯತೆಯ ನಿರ್ಮೂಲನೆ, ದುರ್ಬಲ ವರ್ಗಗಳಿಗೆ ರಕ್ಷಣೆ, ಜಮೀನ್ದಾರಿ ಪದ್ಧತಿಯ ರದ್ದತಿ ಮುಂತಾದವುಗಳ ಮೂಲಕ ಸಮಾಜದಲ್ಲಿನ ತಾರತಮ್ಯಗಳನ್ನು ಹೋಗಲಾಡಿಸಿಅಭಿವೃದ್ಧಿಯ ಪಾಲು ಪ್ರತಿಯೊಬ್ಬರಿಗೂ ಸಮಾನವಾಗಿ ದೊರೆಯುವಂತೆ ಮಾಡುವುದು ಸಾಮಾಜಿಕ ನ್ಯಾಯವಾಗಿದೆ. ಮೂಲಭೂತ ಅಗತ್ಯಗಳ ಕನಿಷ್ಟ ಲಭ್ಯತೆ, ಸಮಾನ ದುಡಿಮೆಗೆ ಸಮಾನ ವೇತನ, ಆದಾಯ ಅಥವಾ ಸಂಪತ್ತಿನ ಕಡಿಮೆ ಅಂತರ, ಉದ್ಯೋಗವಕಾಶಗಳ ಸಮಾನವಕಾಶ ಸೇರಿದಂತೆ ಮಾನವರಿಂದ ಮಾನವರ ಶೋಷಣೆಯಾಗುವ ಚಟುವಟಿಕೆಗಳ ನಿಯಂತ್ರಣವು ಆರ್ಥಿಕ ನ್ಯಾಯವನ್ನು ಸೂಚಿಸುತ್ತದೆ. ಅದೇ ರೀತಿ ದೇಶದ ರಾಜಕೀಯಾಡಳಿತದಲ್ಲಿ ಸಮಾನ ಭಾಗವಹಿಸುವಿಕೆ, ಮತದಾನದ ಸಮಾನವಕಾಶ, ಅಲ್ಪ ಸಂಖ್ಯಾತರಿಗೆ ಅಗತ್ಯ ಪ್ರಾತಿನಿಧ್ಯ ಮುಂತಾದವುಗಳ ಮೂಲಕ ರಾಜಕೀಯ ನ್ಯಾಯವನ್ನು ಒದಗಿಸಲು ಸಂವಿಧಾನ ರಚನಾಕಾರರ ಹಂಬಲವನ್ನು ನ್ಯಾಯವು ಪ್ರತಿಬಿಂಬಿಸುತ್ತದೆ.

8. ಸ್ವಾತಂತ್ರ್ಯ: ವ್ಯಕ್ತಿಯ ಚಟುವಟಿಕೆಗಳ ಮೇಲೆ ನಿರ್ಬಂಧ ರಹಿತತೆಯನ್ನು ಸ್ವಾತಂತ್ರ್ಯವು ಪ್ರತಿನಿಧಿಸುತ್ತದೆ. ಇದರೊಡನೆ ವ್ಯಕ್ತಿತ್ವ ಬೆಳವಣಿಗೆಗೆ ಸಾಕಾದಷ್ಟು ಅವಕಾಶಗಳನ್ನು ವ್ಯಕ್ತಿ ಪಡೆಯಬೇಕೆಂಬ ತತ್ವವನ್ನು ಸ್ವಾತಂತ್ರ್ಯ ಆಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿನ ಸ್ವಾತಂತ್ರ್ಯ ಪರಿಕಲ್ಪನೆಯು ಭಾರತದ ಪ್ರಜೆಗಳು ಪಡೆದಿರುವ ವಿವಿಧ ಸ್ವಾತಂತ್ರ್ಯಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸ್ವಾತಂತ್ರ್ಯದ ಉಲ್ಲಂಘನೆಯಾದರೆ ನ್ಯಾಯಾಲಯಗಳ ನೆರವಿನಿಂದ ರಕ್ಷಣೆ ಪಡೆಯಲು ಪ್ರಜೆಯೊಬ್ಬ ಹೊಂದಿರುವ ಅವಕಾಶವನ್ನು ಸೂಚಿಸುತ್ತದೆ. ಗಮನಾರ್ಹ ವಿಷಯವೇನೆಂದರೆ ಸ್ವಾತಂತ್ರ್ಯ ವ್ಯಕ್ತಿಯ ಸ್ವೇಚ್ಚಾಚಾರವಾಗಿರದೇ ನಿರ್ಬಂಧಕ್ಕೊಳಪಟ್ಟ ಅಂಶವೆಂಬುದನ್ನು ಸ್ವತಂತ್ರ್ಯದ ತತ್ವವು ಸ್ಪಷ್ಟಪಡಿಸುತ್ತದೆ.

9. ಸಮಾನತೆ: ಯಾರಿಗೂ ವಿಶೇಷ ಸೌಲಭ್ಯಗಳಿಲ್ಲದಿರುವುದು ಹಾಗೂ ಸರ್ವರಿಗೂ ತಾರತಮ್ಯ ರಹಿತವಾಗಿ ಅವಕಾಶಗಳನ್ನು ನೀಡುವುದನ್ನು ಸಮಾನತೆ ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿನ ಸಮಾನತೆಯು ಅವಕಾಶ ಮತ್ತು ಸ್ಥಾನಮಾನಗಳ ಸಮಾನತೆಯ ಭರವಸೆಯನ್ನು ಭಾರತದ ಪ್ರಜೆಗಳಿಗೆ ನೀಡುತ್ತದೆ. ಮೂಲಭೂತ ಹಕ್ಕುಗಳ ಮೂಲಕ ನಾಗರಿಕ, ಆರ್ಥಿಕ, ರಾಜಕೀಯ ಸಮಾನತೆ ಒದಗಿಸಲಾಗಿರುವ ಅಂಶವನ್ನು ಸ್ಪಷ್ಟಪಡಿಸುತ್ತದೆ. ಕಾನೂನಿನ ಸಮಾನ ರಕ್ಷಣೆ, ಅಸ್ಪೃಷ್ಯತೆಯ ನಿರ್ಮೂಲನೆ, ಬಿರುದುಗಳ ರದ್ದತಿಯಂತಹ ಕ್ರಮಗಳಿಂದ ನಾಗರಿಕ ಸಮಾನತೆಯನ್ನು ಹಾಗೂ ಸಾರ್ವತ್ರಿಕ ವಯಸ್ಕ ಮತದಾನ, ಸಾರ್ವಜನಿಕ ಉದ್ಯೋಗವಕಾಶಗಳ ಸಮಾನತೆ, ಚುನಾವಣಾ ಸ್ಪರ್ಧೆಗೆ ಸರ್ವರಿಗೂ ಅನುವಿನಂತಹ ಕ್ರಮಗಳ ಮೂಲಕ ರಾಜಕೀಯ ಸಮಾನತೆಯನ್ನು ಸಾಧಿಸಲು ಭಾರತ ಸಂವಿಧಾನದ ಬದ್ಧತೆಯನ್ನು ಸಮಾನತೆ ಪ್ರತಿನಿಧಿಸಿದೆ.
10. ಬ್ರಾತೃತ್ವ: ದೇಶದ ಪ್ರಜೆಗಳಲ್ಲಿ ಸಹೋದರತೆಯನ್ನು ಬಲಪಡಿಸುವ ಅಂಶವನ್ನು ಬ್ರಾತೃತ್ವವು ಪ್ರತಿನಿಧಿಸುತ್ತದೆ. ವ್ಯಕ್ತಿ ಗೌರವ ಮತ್ತು ದೇಶದ ಅಖಂಡತೆಯ ಭರವಸೆಯನ್ನು ಬ್ರಾತೃತ್ವ ಪರಿಕಲ್ಪನೆಯು ಪ್ರತಿನಿಧಿಸುತ್ತದೆ. ಸಂವಿಧಾನ ರಚನಾಕಾರರು ಭಾರತದ ಪ್ರಜೆಗಳಲ್ಲಿ ಭಾವನಾತ್ಮಕ ಹಾಗೂ ಭೌಗೋಳಿಕ ಏಕತೆ ಮೂಡಿಸಲು ಏಕ ಪೌರತ್ವವನ್ನು ಅಳವಡಿಸಿದ್ದಾರೆ. ಜೊತೆಗೆ ಮೂಲಭೂತ ಕರ್ತವ್ಯಗಳಲ್ಲಿ ಸಹೋದರತೆಗೆ ಪೂರಕವಾದ ಅಂಶಗಳನ್ನು ಸೇರಿಸಲಾಗಿದೆ. ಇದರೊಡನೆ ರಾಜ್ಯಗಳಿಗೆ ಭಾರತದ ಒಕ್ಕೂಟದಿಂದ ಪ್ರತ್ಯೇಕವಾಗಲು ಅವಕಾಶವನ್ನು ಸಂವಿಧಾನ ಒದಗಿಸದೇ ಅಖಂಡತೆಯನ್ನು ರಕ್ಷಿಸಲು  ಮುಂದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...