ರಾಜಕೀಯ ಚಿಂತನೆಯ ಪ್ರಧಾನ ವಿಷಯ ವಸ್ತು ರಾಜ್ಯವಾಗಿದೆ. ಹೀಗಾಗಿ ಪ್ರಾಚೀನ ಗ್ರೀಕ್ ಚಿಂತಕರಿಂದ ಮೊದಲುಗೊಂಡು ಸಮಕಾಲಿನ ಚಿಂತಕರೂ ಸಹ ರಾಜ್ಯವನ್ನು ಹೊರತುಪಡಿಸಿ ತಮ್ಮ ರಾಜಕೀಯ ಚಿಂತನೆ ಮಂಡಿಸಲಾರರು. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ಪಿತಾಮಹನೆನಿಸಿರುವ ಅರಿಸ್ಟಾಟಲ್ ಕೂಡ ತನ್ನ ರಾಜಕೀಯ ಚಿಂತನೆಯಲ್ಲಿ ರಾಜ್ಯಕ್ಕೆ ಮಹತ್ವ ನೀಡಿ ತನ್ನದೇಯಾದ ರಾಜ್ಯ ಸಿದ್ಧಾಂತವನ್ನು ಮಂಡಿಸಿದ್ದಾನೆ. ಪ್ರಸ್ತುತ ರಾಜ್ಯ ಸಿದ್ಧಾಂತ ಎಂಬ ಶಿರ್ಶಿಕೆಯಡಿ ಅರಿಸ್ಟಾಟಲ್ನು ಪ್ರತಿಪಾದಿಸಿರುವ ರಾಜ್ಯದ ಉಗಮ, ಅದರ ಸ್ವರೂಪ ಮತ್ತು ಉತ್ತಮ ರಾಜ್ಯದ ಸಂಕ್ಷಿಪ್ತ ವಿಚಾರಗಳನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗಿದೆ.
ರಾಜ್ಯದ ಉಗಮ: ಅರಿಸ್ಟಾಟಲ್ ರಾಜ್ಯವನ್ನು ಕುಟುಂಬ ಹಾಗೂ ಗ್ರಾಮಗಳ ವಿಸ್ತರಣೆಯ ಫಲ ಎಂಬುದಾಗಿ ವ್ಯಾಖ್ಯಾನಿಸಿರುವ. ಇದರಿಂದ ರಾಜ್ಯವು ಒಮ್ಮೆಲೇ ಸೃಷ್ಟಿಸಲ್ಪಟ್ಟ ಸಂಸ್ಥೆಯಾಗಿರದೇ ನೈಸರ್ಗಿಕವಾಗಿ ಕಾಲಾಂತರದಲ್ಲಿ ರೂಪುಗೊಂಡ ಸಂಸ್ಥೆ ಎಂಬುವ ಅರಿಸ್ಟಾಟಲ್ನ ವಿಚಾರ ಸ್ಪಷ್ಟವಾಗುತ್ತದೆ. ಆತನ ಪ್ರಕಾರ ರಾಜ್ಯವು ನಿರ್ದಿಷ್ಟ ಕಾಲ ಅಥವಾ ಸ್ಥಳದಲ್ಲಿ ಉಗಮವಾಗಿರದೇ ಕಾಲಾನುಕ್ರಮದಲ್ಲಿ ವಿವಿಧ ಹಂತಗಳನ್ನು ದಾಟಿ ರಚನೆಗೊಂಡ ಸಂಸ್ಥೆಯಾಗಿದೆ. ರಾಜ್ಯೋತ್ಪತ್ತಿ ಕುರಿತಂತೆ ತನ್ನ ರಾಜ್ಯ ಸಿದ್ಧಾಂತದಲ್ಲಿ ಅರಿಸ್ಟಾಟಲ್ ಕೆಳಗಿನ ತನ್ನದೇ ವಿಚಾರಗಳನ್ನು ಮಂಡಿಸಿರುವ.
ಪ್ರಾರಂಭದಲ್ಲಿ ಒಂಟಿಯಾಗಿದ್ದ ಮಾನವ ಕ್ರಮೇಣ ಸಂಗ ಜೀವನಕ್ಕೆ ಮುಂದಾದನು. ತನ್ನ ಆಹಾರ, ಉಡುಗೆ, ವಸತಿಯಂತಹ ಮೂಲಭೂತ ಅಗತ್ಯಗಳಿಗಾಗಿ ಸಮಾಜದಲ್ಲಿನ ಇತರರನ್ನು ಅವಲಂಬಿಸಿದನು. ಜೊತೆಗೆ ತನ್ನ ಸುಖ ಮತ್ತು ದುಖಃಗಳನ್ನು ಹಂಚಿಕೊಳ್ಳಲು ಸಮಾಜದಲ್ಲಿನ ಇತರರ ಬಾಂಧವ್ಯ ಆತನಿಗೆ ಅನಿವಾರ್ಯವೆನಿಸಿತು. ಮಾನವನ ಈ ಪ್ರವೃತ್ತಿಯನ್ನಾಧರಿಸಿ ಅರಿಸ್ಟಾಟಲ್ ಮಾನವ ಸಮಾಜ ಜೀವಿ (MAN IS A SOCIAL ANIMAL) ಎಂದಿರುವ. ಈ ಸಂಗ ಜೀವನದಿಂದ ಮೂಲಭೂತ ಬಯಕೆಗಳನ್ನು ಈಡೇರಿಸಿಕೊಂಡ ಮಾನವ ಮುಂದೆ ಲೈಂಗಿಕ ಬಯಕೆ ಮತ್ತು ವಂಶಾನೋತ್ಪತ್ತಿಗಾಗಿ ಕುಟುಂಬಗಳನ್ನು ಕಟ್ಟಿಕೊಂಡನು. ಕುಟುಂಬದಲ್ಲಿ ಮಾನವ ಸಹಕಾರ, ತ್ಯಾಗ, ಸರ್ವರ ಹಿತದಂತಹ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಮತ್ತು ಯಜಮಾನ ಹಾಗೂ ಗುಲಾಮ ಪರಿಕಲ್ಪನೆ ಹೊಂದಲು ಸಾಧ್ಯವಾಯಿತು. ನಂತರದಲ್ಲಿ ಕುಟುಂಬ ಪೂರೈಸಲಾಗದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕುಟುಂಬಗಳು ಒಟ್ಟುಗೂಡಿದಾಗ ಗ್ರಾಮ ಉದಯವಾಯಿತು. ಗ್ರಾಮ ಕುಟುಂಬಕ್ಕಿಂತ ಭಿನ್ನ ಮತ್ತು ಸಂಕೀರ್ಣ ಸಂಸ್ಥೆ ಎನಿಸಿತು. ಅಲ್ಲದೇ ಕುಟುಂಬದಲ್ಲಿ ವ್ಯಕ್ತಿ ಈಡೇರಿಸಿಕೊಳ್ಳಲಾಗದ ಅನೇಕ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ಗ್ರಾಮದ್ದಾಗಿತ್ತು. ಕ್ರಮೇಣ ನಾನಾ ಕಾರಣಗಳ ಪ್ರಭಾವದಿಂದ ಹಲವು ಗ್ರಾಮಗಳು ಸೇರಿ ರಾಜ್ಯವೆಂಬ ಸರ್ವಶ್ರೇಷ್ಠ ಸಂಸ್ಥೆ ಜನ್ಮ ತಾಳಿತು. ಅರಿಸ್ಟಾಟಲ್ನ ಪ್ರಕಾರ ರಾಜ್ಯದ ಉಗಮದಲ್ಲಿ ಕುಟುಂಬವು ಮೊದಲ ಹಾಗೂ ರಾಜ್ಯವು ಅಂತಿಮ ಸೋಪಾನವಾಗಿದೆ. ಹೀಗೆ ರಾಜ್ಯೋತ್ಪತ್ತಿಗೆ ಕಾರಣವಾದ ಮಾನವನನ್ನು ಅರಿಸ್ಟಾಟಲ್ ರಾಜಕೀಯ ಜೀವಿ (POLITICAL ANIMAL) ಎಂದಿರುವನು. ಕುಟುಂಬ ಹಾಗೂ ಗ್ರಾಮಗಳ ವಿಸ್ತರಣೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ರಾಜ್ಯಗಳನ್ನು ಗ್ರೀಕರು ನಗರ ರಾಜ್ಯ (CITY STATE) ಎಂದರಲ್ಲದೇ ಆಯಾ ರಾಜ್ಯದ ಅಗತ್ಯಾನುಸಾರ ಆಡಳಿತಾತ್ಮಕ ವ್ಯವಸ್ಥೆ ರೂಪಿಸಿ ಜಾರಿಗೊಳಿಸಿದ್ದರು..
ಅರಿಸ್ಟಾಟಲ್ನ ಪ್ರಕಾರ ನಿರ್ದಿಷ್ಟ ಉದ್ದೇಶಗಳ ಈಡೇರಿಕೆಗೆ ರಾಜ್ಯವು ಉಗಮವಾಗಿರದೇ ಮಾನವರ ಅಗತ್ಯಗಳ ಈಡೇರಿಕೆಗಾಗಿ ಅಸ್ತಿತ್ವಕ್ಕೆ ಬಂದಿದೆ. ಮಾನವರ ಸರ್ವಾಂಗೀಣ ಕಲ್ಯಾಣವೇ ರಾಜ್ಯದ ಗುರಿಯಾಗಿದ್ದು ಬಂಧುತ್ವ, ಸಂಘಟನೆ, ನ್ಯಾಯಗಳ ಆಧಾರವನ್ನು ರಾಜ್ಯವು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಅರಿಸ್ಟಾಟಲ್ನು (ರಾಜ್ಯವು ಮಾನವರ ಅಗತ್ಯಗಳನ್ನು ಈಡೇರಿಸಲು ಅಸ್ತಿತ್ವಕ್ಕೆ ಬಂದಿದ್ದು ಅವರ ಉತ್ತಮ ಜೀವನಕ್ಕಾಗಿ ಮುಂದುವರೆಯುತ್ತದೆ) ಎಂದಿರುವನು. ಮುಂದುವರೆದು (ರಾಜ್ಯವನ್ನು ಬಿಟ್ಟು ಬಾಳುವ ಮಾನವ ಪಶು ಅಥವಾ ಪಶುಪತಿಯಾಗಿರಬೇಕು) ಎಂದಿರುವ. ಈ ಮೂಲಕ ಮಾನವರ ಅತ್ಯಗತ್ಯ ಸಂಸ್ಥೆ ರಾಜ್ಯ ಎಂಬುದನ್ನು ಅರಿಸ್ಟಾಟಲ್ನು ಪ್ರತಿಪಾದಿಸಿರುವ.
ರಾಜ್ಯದ ಸ್ವರೂಪ: ಅರಿಸ್ಟಾಟಲ್ ಪ್ರತಿಪಾದಿಸಿರುವ ರಾಜ್ಯ ಸಿದ್ಧಾಂತದನ್ವಯ ರಾಜ್ಯವು ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ. ಅರಿಸ್ಟಾಟಲ್ನ ರಾಜ್ಯದ ಸ್ವರೂಪ ಅಥವ ಲಕ್ಷಣಗಳನ್ನು ಸ್ಪಷ್ಟಪಡಿಸಿಕೊಳ್ಳಲು ಈ ಅಂಶಗಳ ಅಧ್ಯಯನ ಸಹಕಾರಿಯಾಗಿವೆ.
1. ಸ್ವಾಭಾವಿಕ ರಚನೆ: ಮಾನವರ ಸಹಜ ಪ್ರವೃತ್ತಿ ಅಥವಾ ಸ್ವಭಾವವನ್ನು ಾಧರಿಸಿದ ಅಗತ್ಯಗಳನ್ನು ಈಡೇರಿಸಲು ಕುಟುಂಬ ಅಸ್ತಿತ್ವಕ್ಕೆ ಬಂದಿತು. ಕ್ರಮೇಣ ಕುಟುಂಬದಂತೆ ಮಾನವರ ಸ್ವಾಭಾವಿಕ ಬೇಡಿಕೆಗಳನ್ನು ಆಧರಿಸಿ ಗ್ರಾಮಗಳು ಉದಯಗೊಂಡವು. ಅಂತೆಯೇ ರಾಜ್ಯವೂ ಕುಟುಂಬ ಮತ್ತು ಗ್ರಾಮಗಳು ಈಡೇರಿಸಲಾಗದ ಮಾನವರ ಸ್ವಾಭಾವಿಕ ಅಗತ್ಯಗಳ ಪೂರೈಕೆಗೆ ಜನ್ಮ ತಾಳಿತು. ಆದ್ದರಿಂದ ರಾಜ್ಯವು ಕುಟುಂಬದ ಬೆಳವಣಿಗೆಯ ಅಂತಿಮ ಹಂತವಾಗಿ ಮಾನವ ಸಹಜ ಸ್ವಾಭಾವಿಕ ಅಗತ್ಯಗಳ ಈಡೇರಿಕೆಯ ಫಲವಾಗಿ ಕಾಲಾನುಕ್ರಮದಲ್ಲಿ ರಚನೆಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯವು ಸ್ವಾಭಾವಿಕ ರಚನೆ ಹೊಂದಿರುವುದು ಎಂಬುದಾಗಿ ಅರಿಸ್ಟಾಠಲ್ ಅಭಿಪ್ರಾಯಪಟ್ಟಿರುವ.
2. ಸರ್ವಶ್ರೇಷ್ಠ ಸಂಸ್ಥೆ: ಕುಟುಂಬ, ಗ್ರಾಮ, ರಾಜ್ಯಗಳುಳ್ಳ ಸಾಮಾಜಿಕ ಸಂಘಟನೆಯ ಅತ್ಯುನ್ನತ ಸ್ಥಾನದಲ್ಲಿ ರಾಜ್ಯವಿದೆ. ರಾಜ್ಯವು ಉಳಿದೆಲ್ಲ ಸಂಸ್ಥೆಗಳಿಗಿಂತ ಶ್ರೇಷ್ಠವಾದದ್ದು. ಏಕೆಂದರೆ ಆಯಾ ಸಾಮಾಜಿಕ ಸಂಸ್ಥೆಗಳು ತಮ್ಮ ಸದಸ್ಯರ ಕಲ್ಯಾಣಕ್ಕೆ ಮಾತ್ರ ಗಮನ ಹರಿಸುತ್ತವೆ. ಆದರೆ ಸರ್ವರ ಒಳಿತು ರಾಜ್ಯದ ಗುರಿಯಾಗಿರುತ್ತದೆ. ರಾಜ್ಯವು ತನ್ನ ಗಡಿಯೊಳಗಿನ ಸಕಲ ಪ್ರಜೆಗಳು ಮತ್ತು ಸಂಸ್ಥೆಗಳ ಕಲ್ಯಾಣವನ್ನು ಸಾಧಿಸುವ ಉದಾತ್ತ ಸಂಸ್ಥೆಯಾಗಿದೆ. ಪ್ರಜೆಗಳ ಸಂತೃಪ್ತ, ಸ್ವಾವಲಂಬಿ ಹಾಗೂ ಪರಿಪೂರ್ಣ ಜೀವನ ರಾಜ್ಯದ ಗುರಿಯಾದ್ದರಿಂದ ಅರಿಸ್ಟಾಟಲ್ ರಾಜ್ಯವನ್ನು ಸರ್ವಶ್ರೇಷ್ಠ ಸಂಸ್ಥೆ ಎಂಬುದಾಗಿ ಪರಿಗಣಿಸಿದ್ದನು.
3. ಹಲವು ಭಾಗಗಳುಳ್ಳ ಸಮಗ್ರ ವ್ಯವಸ್ಥೆ: ರಾಜ್ಯವು ತನ್ನೆಲ್ಲ ಪ್ರಜೆಗಳು ಮತ್ತು ಸಂಸ್ಥೆಗಳನ್ನು ಒಳಗೊಂಡ ವ್ಯವಸ್ಥೆಯಾಗಿದೆ. ಯಾವುದೇ ವ್ಯಕ್ತಿ ಅಥವ ಸಂಸ್ಥೆ ರಾಜ್ಯದಿಂದ, ಹೊರಗುಳಿಯಲಾಗದು. ಮಾನವ ದೇಹದ ಅಂಗವನ್ನು ಪ್ರತ್ಯೇಕಿಸಿದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ರಾಜ್ಯದಿಂದ ಹೊರಗುಳಿದ ಸಂಸ್ಥೆ ಅಸ್ತಿತ್ವದಲ್ಲಿರಲಾರದು. ಹೀಗಾಗಿ ರಾಜ್ಯವು ಎಲ್ಲ ವ್ಯಕ್ತಿ ಅಥವಾ ಸಂಸ್ಥೆಗಳನ್ನೊಳಗೊಂಡ ಸಮಗ್ರ ವ್ಯವಸ್ಥೆ ಎಂಬುದಾಗಿ ಅರಿಸ್ಟಾಟಲ್ ಅಭಿಪ್ರಾಯಪಟ್ಟಿರುವ. ಈ ಹಿನ್ನೆಲೆಯಲ್ಲಿಯೇ ರಾಜ್ಯವನ್ನು ಬಿಟ್ಟು ಬಾಳುವ ಮಾನವ ಪಶು ಅಥವ ಪಶುಪತಿಯಾಗಿರಬೇಕು ಎಂಬುದಾಗಿ ಎಚ್ಚರಿಸಿರುವ. ಅಂತೆಯೇ ಅರಿಸ್ಟಾಟಲ್ ರಾಜ್ಯವನ್ನು ಸಂಘಗಳ ಸಂಘ ಮಹಾ ಸಂಘ ಎಂಬುದಾಗಿ ವ್ಯಾಖ್ಯಾನಿಸಿದ್ದಾನೆ.
4. ಜೀವಿಯ ಹೋಲಿಕೆ: ವಿವಿಧ ಸಾಮಾಜಿಕ ಸಂಸ್ಥೆಗಳ ಸಮಗ್ರ ವ್ಯವಸ್ಥೆಯಾಗಿರುವ ರಾಜ್ಯವನ್ನು ಅರಿಸ್ಟಾಟಲ್ನು ಜೀವಿಗೆ ಹೋಲಿಸಿದ್ದಾನೆ. ಜೀವಿಯೊಂದರ ಅಂಗಾಂಗಗಳಂತೆ ರಾಜ್ಯವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಸೈನ್ಯ ಮುಂತಾದ ಅಂಗಗಳನ್ನು ಹೊಂದಿರುತ್ತದೆ. ಜೀವಿಯೊಂದರ ಅಂಗಗಳ ಬೆಳವಣಿಗೆ ಅದರ ದೇಹದ ಬೆಳವಣಿಗೆಯೊಡನೆ ಸಂಬಂಧ ಹೊಂದಿರುವಂತೆ ಸಂಸ್ಥೆಗಳ ಬೆಳವಣಿಗೆಯು ರಾಜ್ಯದ ಪ್ರಗತಿಯೊಡನೆ ಸಂಬಂಧ ಹೊಂದಿದೆ ಎಂಬುದು ಅರಿಸ್ಟಾಟಲ್ನ ಪ್ರತಿಪಾದನೆಯಾಗಿದೆ. ಮುಂದುವರೆದು ಜೀವಿಯೊಂದರ ಅಂಗಗಳು ಮತ್ತು ದೇಹದ ಹೊಂದಾಣಿಕೆಯನ್ನು ರಾಜ್ಯ ಮತ್ತು ಅದರ ಅಂಗಗಳ ನಡುವಿನ ಹೊಂದಾಣಿಕೆಗೆ ಅರಿಸ್ಟಾಟಲ್ ಹೋಲಿಸಿರುವ. ಆದ್ದರಿಂದ ಅರಿಸ್ಟಾಟಲ್ ಪ್ರತಿಪಾದಿಸಿರುವ ರಾಜ್ಯ ಸಿದ್ಧಾಂತವು ಜೈವಿಕ ಸ್ವರೂಪ ಹೊಂದಿದೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.
5. ಸಕಾರಾತ್ಮಕ ಕಾರ್ಯಗಳ ಸಾಧನ: ಅರಿಸ್ಟಾಟಲ್ನು ರಾಜ್ಯವು ಮಾನವನ ಪ್ರಗತಿಗೆ ಪೂರಕವಾದ ಸಕಾರಾತ್ಮಕ ಕಾರ್ಯಗಳನ್ನು ಮಾತ್ರವೇ ಪ್ರತಿಪಾದಿಸಿರುವ. ಆಧುನಿಕ ರಾಜ್ಯಗಳು ನಿರ್ವಹಿಸುವ ನಿಯಂತ್ರಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ಒದಗಿಸಿಲ್ಲ. ಶಿಕ್ಷಣ ಸಂಸ್ಥೆಯಂತೆ ರಾಜ್ಯವು ಸಕಾರಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಪ್ರಜೆಗಳ ಉತ್ತಮ ಜೀವನಕ್ಕೆ ಶ್ರಮಿಸಬೇಕು ಎಂಬುದಾಗಿ ಅರಿಸ್ಟಾಟಲ್ ಪ್ರತಿಪಾದಿಸಿರುವ. ಮುಂದುವರೆದು ರಾಜ್ಯವೆಂಬುದು ಪ್ರಜೆಗಳ ನೈತಿಕ, ದೈಹಿಕ ಮತ್ತು ಬೌದ್ಧಿಕ ತರಬೇತಿ ಒದಗಿಸುವ ಸಾಧನ ಎಂಬುದಾಗಿ ತಿಳಿಸಿರುವ.
6. ರಾಜ್ಯ ಮತ್ತು ಸರ್ಕಾರಗಳ ನಡುವೆ ವ್ಯತ್ಯಾಸ: ಅರಿಸ್ಟಾಟಲ್ನು ತನ್ನ ರಾಜ್ಯ ಸಿದ್ಧಾಂತದಲ್ಲಿ ರಾಜ್ಯವನ್ನು ಸರ್ಕಾರದಿಂದ ಪ್ರತ್ಯೇಕಿಸಿರುವನು. ಆತನ ಪ್ರಕಾರ ಸರ್ಕಾರ ಎಂಬುದು ರಾಜ್ಯದ ಒಂದು ಸಾಧನ. ಮುಂದುವರೆದು ಸರ್ಕಾರವನ್ನು ಅಥವ ಸರ್ಕಾರವನ್ನು ನಡೆಸುವ ಜನರನ್ನು ಬದಲಾಯಿಸಲು ಸಾಧ್ಯವಿದೆ. ಆದರೆ ರಾಜ್ಯವನ್ನು ಸರ್ಕಾರದಂತೆ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ರಾಜ್ಯವನ್ನು ಬದಲಾಯಿಸಬೇಕಾದರೆ ಸಂವಿಧಾನವನ್ನೇ ಬದಲಾಯಿಸಬೇಕಿದ್ದು ಅದು ಕಠಿಣವಾದ ಪ್ರಕ್ರಿಯೆ ಎಂಬುದಾಗಿ ಅರಿಸ್ಟಾಟಲ್ ಅಭಿಪ್ರಾಯಪಟ್ಟಿರುವ. ಇದರೊಡನೆ ಸರ್ಕಾರವು ಆಳುವ ಕೆಲವರನ್ನು ಪ್ರತಿನಿಧಿಸಿದರೆ ರಾಜ್ಯವು ಸಮಸ್ತ ಪ್ರಜೆಗಳನ್ನು ಒಳಗೊಳ್ಳುತ್ತದೆ ಎಂದಿರುವ.
7. ವ್ಯಕ್ತಿ ಮತ್ತು ರಾಜ್ಯಗಳ ನಡುವೆ ಸಾಮ್ಯತೆ: ಅರಿಸ್ಟಾಟಲ್ನು ವ್ಯಕ್ತಿಗೆ ಸಮನಾದ ರಾಜ್ಯದ ಚಿತ್ರಣವನ್ನು ತನ್ನ ರಾಜ್ಯ ಸಿದ್ಧಾಂತದಲ್ಲಿ ನೀಡಿರುವನು. ವ್ಯಕ್ತಿ ನೀತಿ ಹಾಗು ನ್ಯಾಯಗಳಿಗೆ ಬದ್ಧನಾಗಿರುವಂತೆ ರಾಜ್ಯವೂ ಅವುಗಳನ್ನು ಪಾಲಿಸುವುದೆಂಬುದು ಅರಿಸ್ಟಾಟಲ್ನ ನಂಬಿಕೆಯಾಗಿತ್ತು. ಜೊತೆಗೆ ವ್ಯಕ್ತಿ ತನ್ನ ವಿವಿಧ ಗುರಿಗಳನ್ನು ಸಾಧಿಸಲು ಜೀವಿಸುವಂತೆ ರಾಜ್ಯವೂ ಸ್ವಾವಲಂಬನೆ, ಸರ್ವರ ಒಳಿತು, ನ್ಯಾಯದ ಸ್ಥಾಪನೆಯಂತಹ ಗುರಿಗಳ ಸಾಧನೆಗೆ ಮುಂದುವರೆಯುತ್ತದೆ. ಇದರೊಡನೆ ವ್ಯಕ್ತಿಗಳ ಿಚ್ಛೆಗಳಿಗೆ ಪೂರಕವಾದ ವಿಶಾಲ ಸ್ವರೂಪದ ಇಚ್ಛೆಗಳನ್ನು ರಾಜ್ಯವು ಪ್ರತಿನಿಧಿಸುತ್ತದೆ. ಹೀಗಾಗಿ ಅರಿಸ್ಟಾಟಲ್ನು ವ್ಯಕ್ತಿ ಹಾಗೂ ರಾಜ್ಯಗಳ ನಡುವೆ ಸಾಮ್ಯತೆಯನ್ನು ಗುರುತಿಸುತ್ತಾನೆ.
ಉತ್ತಮ ರಾಜ್ಯ: ಅರಿಸ್ಟಾಟಲ್ನು ತನ್ನ ರಾಜ್ಯ ಸಿದ್ಧಾಂತದಲ್ಲಿ ರಾಜ್ಯದ ಉಗಮ ಹಾಗು ಸ್ವರೂಪದ ಜೊತೆಗೆ ಅನುಷ್ಟಾನ ಯೋಗ್ಯ ಉತ್ತಮ ರಾಜ್ಯವನ್ನು ಮಂಡಿಸಿದ್ದಾನೆ. ಈ ಉತ್ತಮ ರಾಜ್ಯವು ಪ್ಲೇಟೊನ ಆದರ್ಶ ರಾಜ್ಯಕ್ಕಿಂತ ಭಿನ್ನವಾದ ವಾಸ್ತವಿಕ ಅಂಶಗಳನ್ನುಳ್ಳ ರಾಜ್ಯವಾಗಿತ್ತು. ಅಂದಿನ ನಗರ ರಾಜ್ಯಗಳಿಗೆ ಅನುರೂಪವಾದ ವಿಚಾರಗಳನ್ನು ಅರಿಸ್ಟಾಟಲ್ ತನ್ನ ಉತ್ತಮ ರಾಜ್ಯದಲ್ಲಿ ಪ್ರತಿಪಾದಿಸಿದ್ದ. ಹೀಗಾಗಿ ಸಬೈನ್ ಎಂಬ ಚಿಂತಕ (ಅರಿಸ್ಟಾಟಲ್ನ ಉತ್ತಮ ರಾಜ್ಯವು ಪ್ಲೇಟೊನ ಎರಡನೇ ಆದರ್ಶ ರಾಜ್ಯ) ಎಂಬುದಾಗಿ ಅಭಿಪ್ರಾಯಪಟ್ಟಿರುವ. ಅರಿಸ್ಟಾಟಲ್ನ ಉತ್ತಮ ರಾಜ್ಯದ ಮನವರಿಕೆ ಮಾಡಿಕೊಳ್ಳದೇ ಹೋದರೆ ಆತನ ರಾಜ್ಯ ಸಿದ್ಧಾಂತದ ಅಧ್ಯಯನವು ಪರಿಪೂರ್ಣವಾಗಲಾರದು. ಆದ್ದರಿಂದ ಅರಿಸ್ಟಾಟಲ್ ತನ್ನ ಮೇರು ಕೃತಿಯಾದ ದಿ ಪಾಲಿಟಿಕ್ಸ್ನಲ್ಲಿ ಚರ್ಚಿಸಿರುವ ಉತ್ತಮ ರಾಜ್ಯದ ಚಿತ್ರಣವನ್ನು ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.
ಅರಿಸ್ಟಾಟಲ್ನ ಪ್ರಕಾರ ಸ್ಥಿರತೆಯನ್ನುಳ್ಳ ಮತ್ತು ಮಧ್ಯಮ ವರ್ಗದ ಆಳ್ವಿಕೆಯನ್ನುಳ್ಳ ರಾಜ್ಯವೇ ಉತ್ತಮ ರಾಜ್ಯವಾಗಿದೆ. ತನ್ನ ಉತ್ತಮ ರಾಜ್ಯವನ್ನು ಅರಿಸ್ಟಾಟಲ್ ಪಾಲಿಟಿ ಎಂದು ಕರೆದಿರುವನು. ುತ್ತಮ ರಾಜ್ಯದಲ್ಲಿ ಮಧ್ಯಮ ವರ್ಗದವರಲ್ಲಿ ಆಡಳಿತಾಧಿಕಾರ ನೆಲೆಸಿದ್ದು ಅವರು ತಮ್ಮ ಮೇಲಿನ ಶ್ರೀಮಂತ ಹಾಗೂ ಕೆಳಗಿನ ಬಡ ವರ್ಗವನ್ನು ಯಶಸ್ವಿಯಾಗಿ ಪ್ರಭಾವಿಸುತ್ತಾರೆ. ಮಧ್ಯಮ ವರ್ಗದವರು ಆಳುವ ಮತ್ತು ಆಳಿಸಿಕೊಳ್ಳುವ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಹೀಗಾಗಿ ಶ್ರೀಮಂತ ಹಾಗೂ ಬಡ ವರ್ಗಗಳನ್ನು ಸಮತೋಲನದಿಂದ ಮಧ್ಯಮ ವರ್ಗ ಆಳುವುದರಿಂದ ಸ್ಥಿರತೆ ಕಂಡು ಬರುವುದೆಂದು ಅರಿಸ್ಟಾಟಲ್ ಪ್ರತಿಪಾದಿಸಿರುವ. ಉತ್ತಮ ರಾಜ್ಯದಲ್ಲಿ ಬಹು ಸಂಖೆಯ ಜನರನ್ನುಳ್ಳ ಮಧ್ಯಮ ವರ್ಗ ಆಡಳಿತದಲ್ಲಿ ಭಾಗಿಯಾಗುವುದರಿಂದ ಅಸಮಧಾನ, ಅಶಾಂತಿ ಅಥವಾ ಧಂಗೆಗಳಿಗೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಮಧ್ಯಮ ವರ್ಗದ ಆಳ್ವಿಕೆಯು ಉತ್ತಮ ರಾಜ್ಯದ ಸುವರ್ಣ ಸಾಧನ (GOLDEN MEAN) ಎಂದು ಅರಿಸ್ಟಾಟಲ್ ಬಣ್ಣಿಸಿರುವ. ಒಟ್ಟಾರೆ ಸಮಕಾಲಿನ ಪ್ರಜಾಸತ್ತಾತ್ಮಕ ತಳಹದಿಯುಳ್ಳ ರಾಜ್ಯದಂತೆ ಅರಿಸ್ಟಾಟಲ್ನ ಉತ್ತಮ ರಾಜ್ಯವು ಮೇಲ್ನೋಟಕ್ಕೆ ಹೋಲುತ್ತದೆ. ಆಡಳಿತಾತ್ಮಕ ಸ್ಥಿರತೆ ಹಾಗೂ ಮಧ್ಯಮ ವರ್ಗದ ಆಳ್ವಿಕೆ ಪ್ರತಿನಿಧಿಸುವ ಅರಿಸ್ಟಾಟಲ್ನ ಉತ್ತಮ ರಾಜ್ಯವು ಕೆಳಗಿನ ಮೂಲಾಂಶಗಳನ್ನು ಅಥವಾ ಲಕ್ಷಣಗಳನ್ನು ಹೊಂದಿರುತ್ತದೆ. ಈ ಮೂಲಾಂಶ ಅಥವಾ ಲಕ್ಷಣಗಳನ್ನು ಕುರಿತಂತೆ ಅರಿಸ್ಟಾಟಲ್ ತನ್ನದೇ ವಿವರಣೆ ನೀಡಿದ್ದು ಆ ಕುರಿತಾದ ಸಂಕ್ಷಿಪ್ತ ವಿವರವನ್ನು ಮುಂದೆ ಚರ್ಚಿಸಲಾಗಿದೆ.
1.ಜನಸಂಖೆ: ಅರಿಸ್ಟಾಟಲ್ನು ಉತ್ತಮ ರಾಜ್ಯದ ಜನಸಂಖೆಯ ಗಾತ್ರ ಹಾಗೂ ಗುಣ ಕುರಿತಂತೆ ತನ್ನದೇ ಅಭಿಪ್ರಾಯ ವ್ಯಕ್ತಪಡಿಸಿರುವನು. ಆತ ನಿರ್ದಿಷ್ಟ ಜನಸಂಖೆಯನ್ನು ರಾಜ್ಯವೊಂದಕ್ಕೆ ಸೂಚಿಸಿಲ್ಲ. ಆದರೆ ಅತೀ ಹೆಚ್ಚು ಅಥವಾ ಕಡಿಮೆ ಗಾತ್ರದ ಬದಲು ಸ್ವಾವಲಂಬನೆಗೆ ಪೂರಕವಾದ ಮಧ್ಯಮ ಗಾತ್ರದ ಜನಸಂಖೆಯನ್ನು ಹೊಂದಲು ಸೂಚಿಸಿರುವ. ಜನಸಂಖೆ ಅಧಿಕವಾದರೆ ನ್ಯಾಯ ಸಮ್ಮತ ಆಡಳಿತಕ್ಕೆ ಮತ್ತು ಕಡಿಮೆಯಾದರೆ ಸಂಪನ್ಮೂಲಗಳ ಸದ್ಬಳಕೆ, ರಕ್ಷಣೆ, ಆಡಳಿತ ನಿರ್ವಹಣೆಗೆ ತೊಡಕಾಗುವುದೆಂಬುದು ಅರಿಸ್ಟಾಟಲ್ನ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತಮ ರಾಜ್ಯವು ತನ್ನ ಆರ್ಥಿಕ ಮತ್ತು ಸೈನಿಕ ಸ್ವಯಂ ಪೂರ್ಣತೆಗೆ ಅಗತ್ಯವಾದಷ್ಟು ಜನಸಂಖೆಯನ್ನು ಹೊಂದಲು ಅರಿಸ್ಟಾಟಲ್ ಸಮ್ಮತಿಸಿರುವ. ಮುಂದುವರೆದು ಜನಸಂಖೆಯ ಗುಣಾತ್ಮಕತೆ ಕುರಿತಂತೆಯೂ ಅರಿಸ್ಟಾಟಲ್ ಕೆಲ ವಿಚಾರಗಳನ್ನು ಮಂಡಿಸಿರುವ. ಆತನ ಪ್ರಕಾರ ಸದೃಢ ಆರೋಗ್ಯ, ಸನ್ನಡತೆ ಮತ್ತು ಸುಸಂಸ್ಕೃತ ಜನರನ್ನು ಉತ್ತಮ ರಾಜ್ಯ ಒಳಗೊಂಡಿರಬೇಕು. ಗಮನಾರ್ಹ ಅಂಶವೇನೆಂದರೆ ಅರಿಸ್ಟಾಟಲ್ ಜನಸಂಖೆಯ ಗುಣಾತ್ಮಕತೆಗೆ ಪೂರಕವಾಗಿ ಸದೃಢ ಮಕ್ಕಳ ಸಂತಾನೋತ್ಪತ್ತಿಗೆ ವಿವಾಹದ ಸೂಕ್ತ ವಯಸ್ಸು ಮತ್ತು ಸಮಯವನ್ನು ಸೂಚಿಸಿದ್ದಾನೆ.
2. ಭೂ ಪ್ರದೇಶ: ಅರಿಸ್ಟಾಟಲ್ನು ಉತ್ತಮ ರಾಜ್ಯದ ಭೌಗೋಳಿಕ ಗಾತ್ರವು ಅತೀ ದೊಡ್ಡ ಅಥವಾ ಚಿಕ್ಕದಾಗಿರಬಾರದು ಎಂಬ ಅಭಿಪ್ರಾಯ ಹೊಂದಿದ್ದನು. ರಾಜ್ಯವು ತನ್ನ ಸ್ವಯಂಪೂರ್ಣತೆ ಹೊಂದಲು ಮತ್ತು ವಿದೇಶಿ ವ್ಯಾಪಾರದಲ್ಲಿ ತೊಡಗಲು ಪೂರಕವಾದ ಮಧ್ಯಮ ಗಾತ್ರವನ್ನು ಪಡೆದಿರಬೇಕೆಂದು ಅರಿಸ್ಟಾಟಲ್ ಪ್ರತಿಪಾದಿಸಿರುವನು. ಇದರೊಡನೆ ರಾಜ್ಯದ ನೆಲೆಯನ್ನು ವಿವರಿಸುತ್ತಾ ಸಮುದ್ರಕ್ಕೆ ಅತೀ ಹತ್ತಿರ ಅಥವಾ ದೂರವಲ್ಲದ ಸ್ಥಳದಲ್ಲಿ ರಾಜ್ಯ ನೆಲೆಸಿರಬೇಕು ಎಂಬುದಾಗಿ ತಿಳಿಸಿರುವ. ಜೊತೆಗೆ ರಾಜ್ಯದಲ್ಲಿ ಎತ್ತರದ ಪ್ರದೇಶ, ಜಲ ಮೂಲಗಳು, ನೈಸರ್ಗಿಕ ಸಂಪನ್ಮೂಲಗಳು ದೊರೆಯುವಲ್ಲಿ ರಾಜ್ಯದ ಭೂ ಪ್ರದೇಶ ನೆಲೆಸಿರಬೇಕು. ಇದರೊಡನೆ ರಾಜ್ಯದ ಭೂ ಪ್ರದೇಶ ವಿದೇಶಗಳೊಡನೆ ವ್ಯವಹರಿಸಲು ಮತ್ತು ಆಕ್ರಮಣಕಾರರನ್ನು ಸುಲಭವಾಗಿ ತಡೆಯುವ ಆಯಕಟ್ಟಿನ ನೆಲೆಯಿಂದ ಕೂಡಿರಬೇಕೆಂದು ಅರಿಸ್ಟಾಟಲ್ ಪ್ರತಿಪಾದಿಸಿರುವ.
3. ಜನತೆಯ ನಡತೆ: ಅರಿಸ್ಟಾಟಲ್ನು ಉತ್ತಮ ರಾಜ್ಯದ ಪ್ರಜೆಗಳಿಂದ ಕೆಲವು ನಡತೆಯನ್ನು ಅಪೇಕ್ಷಿಸುತ್ತಾನೆ. ಆತನ ಪ್ರಕಾರ ಪ್ರಜೆಗಳು ದೇಶ ಪ್ರೇಮಿಗಳು, ಬುದ್ಧಿವಂತರು ಮತ್ತು ಧೈರ್ಯಶಾಲಿಗಳಾಗಿರಬೇಕು. ರಾಜ್ಯವು ಸಂಕಷ್ಟದಲ್ಲಿದ್ದಾಗ ತಮ್ಮ ಜೀವವನ್ನಾದರೂ ಪಣಕ್ಕಿಟ್ಟು ರಾಜ್ಯದ ರಕ್ಷಣೆ ಮಾಡುವ ದೇಶ ಪ್ರೇಮವನ್ನು ಪ್ರಜೆಗಳಾದವರು ಬೆಳೆಸಿಕೊಂಡಿರಬೇಕು. ಅಂತೆಯೇ ಎಂತಹ ಸವಾಲುಗಳನ್ನು ಎದುರಿಸಬಲ್ಲ ಬುದ್ಧಿವಂತಿಕೆ ಹಾಗೂ ಧೈರ್ಯ ಜನರಲ್ಲಿರಬೇಕು.
4. ವಿವಿಧ ವರ್ಗಗಳು: ಅರಿಸ್ಟಾಟಲ್ನು ಉತ್ತಮ ರಾಜ್ಯದಲ್ಲಿ ಕೆಲವು ವರ್ಗಗಳಿರಬೇಕು ಎಂದಿರುವ. ಆತನ ಪ್ರಕಾರ ಆಳುವವರು, ಸೈನಿಕರು ಹಾಗೂ ಪುರೋಹಿತರು ರಾಜ್ಯದ ಮುಂದುವರಿಕೆಗೆ ಶ್ರಮಿಸುವ ವರ್ಗಗಳಾಗಿದ್ದು ಅವುಗಳ ಅಸ್ತಿತ್ವ ಅಗತ್ಯವೆಂದು ಪ್ರತಿಪಾದಿಸಿರುವ. ಜೊತೆಗೆ ಕೃಷಿಕರ ಮತ್ತು ವ್ಯಾಪಾರಿಗಳ ವರ್ಗ ಜಾರಿಯಲ್ಲಿರುವುದು ರಾಜ್ಯದ ಮುಂದುವರಿಕೆಗೆ ಸಹಾಯಕ ಎಂಬಂಶವನ್ನು ಅರಿಸ್ಟಾಟಲ್ ಪ್ರತಿಪಾದಿಸಿರುವ. ಇದರೊಡನೆ ರಾಜ್ಯದಲ್ಲಿ ವಿವಿಧ ಕರಕುಶಲ ವರ್ಗಗಳು ಕಾರ್ಯ ನಿರ್ವಹಿಸಬೇಕೆಂಬುದು ಆತನ ಅಭಿಪ್ರಾಯವಾಗಿತ್ತು. ಮುಂದುವರೆದು ವಿವಿಧ ವರ್ಗಗಳ ಕೊನೆಯಲ್ಲಿ ಗುಲಾಮರ ವರ್ಗವನ್ನೂ ಅರಿಸ್ಟಾಟಲ್ ಪ್ರತಿಪಾದಿಸಿರುವನು. ವಿರಾಮ ವೇಳೆಯನ್ನುಳ್ಳ ರಾಜ್ಯದ ಆಡಳಿತಾತ್ಮಕ ಮತ್ತು ನ್ಯಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ವರ್ಗಗಳಿಗೆ ಮಾತ್ರ ನಾಗರಿಕತ್ವ ನೀಡಬೇಕೆಂಬುದು ಅರಿಸ್ಟಾಟಲ್ನ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಸದಾ ಕಾರ್ಯೋನ್ಮುಖರಾಗಿರುವ ಕೃಷಿಕರು, ವ್ಯಾಪಾರಿಗಳು, ಕುಶಲ ಕರ್ಮಿಗಳು ಹಾಗೂ ಗುಲಾಮ ವರ್ಗದವರು ಉತ್ತಮ ರಾಜ್ಯದಲ್ಲಿ ನಾಗರಿಕತ್ವ ಪಡೆಯುವಂತಿರಲಿಲ್ಲ.
5. ಶಿಕ್ಷಣ: ಉತ್ತಮ ರಾಜ್ಯದ ಅಸ್ತಿತ್ವ ಹಾಗೂ ಮುಂದುವರಿಕೆಗೆ ಉತ್ತಮ ಶಿಕ್ಷಣ ಅಗತ್ಯವೆಂದು ಅರಿಸ್ಟಾಟಲ್ ನಂಬಿದ್ದನು. ಹೀಗಾಗಿ ಪ್ರಜೆಗಳ ನೈತಿಕ, ಮಾನಸಿಕ ಹಾಗೂ ಶಾರೀರಿಕ ಪ್ರಗತಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ರಾಜ್ಯ ಹೊಂದಬೇಕೆಂದು ಅರಿಸ್ಟಾಟಲ್ ಸೂಚಿಸಿರುವ. ಜೊತೆಗೆ ಪ್ರಜೆಗಳಲ್ಲಿ ಸದ್ಗುಣಗಳನ್ನು ಬೆಳೆಸಬಲ್ಲ ಏಕರೂಪದ, ಕಡ್ಡಾಯ ಮತ್ತು ರಾಜ್ಯ ನಿಯಂತ್ರಿತ ಶಿಕ್ಷಣವನ್ನು ಬೆಂಬಲಿಸಿರುವನು. ಗಮನಾರ್ಹ ಅಂಶವೇನೆಂದರೆ ಅರಿಸ್ಟಾಟಲ್ನು ಸಾರ್ವತ್ರಿಕ ಶಿಕ್ಷಣಕ್ಕೆ ಬದಲಾಗಿ ಪೌರರಿಗೆ ಮಾತ್ರವೇ ಶಿಕ್ಷಣವನ್ನು ಸೀಮಿತಗೊಳಿಸಿರುವುದು.
ಒಟ್ಟಿನಲ್ಲಿ ಅರಿಸ್ಟಾಟಲ್ನ ಉತ್ತಮ ರಾಜ್ಯವು ಪ್ಲೇಟೊನ ಆದರ್ಶ ರಾಜ್ಯಕ್ಕಿಂತ ಭಿನ್ನವಾದ ವಾಸ್ತವಿಕ ವಿಚಾರಗಳಿಂದ ಕೂಡಿರುವುದು ಸುಸ್ಪಷ್ಟ. ಉತ್ತಮ ರಾಜ್ಯವು ಊಹಾತ್ಮಕ ವಿಚಾರಗಳನ್ನು ಬದಿಗಿಟ್ಟು ದೈನಂದಿನ ಪ್ರಾಯೋಗಿಕ ಅಂಶಗಳಿಗೆ ಮಹತ್ವ ನೀಡಿರುವುದು ಮೇಲೆ ಚರ್ಚಿಸಲಾಗಿರುವ ಅದರ ಲಕ್ಷಣಗಳ ವಿವರಗಳಿಂದ ತಿಳಿದು ಬರುತ್ತದೆ. ಆದ್ದರಿಂದಲೇ ಮ್ಯಾಗ್ಜಿ ಎಂಬ ಚಿಂತಕರು (ಾದರ್ಶ ರಾಜ್ಯದ ರಚನೆಗೆ ಪ್ಲೇಟೊ ಒಬ್ಬ ತತ್ವಜ್ಙಾನಿಯನ್ನು ಆಧರಿಸಿದ್ದರೆ ಅರಿಸ್ಟಾಟಲ್ನು ಉತ್ತಮ ರಾಜ್ಯದ ರಚನೆಗೆ ವಿಜ್ಙಾನವನ್ನು ಅವಲಂಬಿಸಿದ್ದಾನೆ) ಎಂದಿರುವರು. ಆಸಕ್ತಿದಾಯಕ ಸಂಗತಿ ಏನೆಂದರೆ ಆಧುನಿಕ ರಾಜ್ಯಗಳ ಮೂಲಾಂಶಗಳಲ್ಲಿ ಅರಿಸ್ಟಾಟಲ್ನ ಉತ್ತಮ ರಾಜ್ಯದ ಹಲವು ಸಂಗತಿಗಳು ಇಂದಿಗೂ ಜಾರಿಯಲ್ಲಿರುವುದು. ಯುದ್ಧವನ್ನು ಬಯಸದೇ ಸದಾ ಶಾಂತಿಗೆ ಬದ್ಧವಾಗಿರುವ ಉತ್ತಮ ರಾಜ್ಯದ ಚಿಂತನೆ ಅಮೂಲ್ಯವಾದದ್ದು. ಆದರೆ ಅಸಮಾನತೆ, ಸೀಮಿತ ನಾಗರೀಕತ್ವ, ಗುಲಾಮ ವರ್ಗದ ಪ್ರಸ್ತಾಪ ಮುಂತಾದ ಕೆಲವು ದೋಷಗಳಿಂದ ಅರಿಸ್ಟಾಟಲ್ನ ಉತ್ತಮ ರಾಜ್ಯವು ಮುಕ್ತವಾಗಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ