ನಿಕೊಲೊ ಮೆಕೆವೆಲ್ಲಿಯ ಜೀವನ ಮತ್ತು ಕೃತಿಗಳು:
ಜನನ ಮತ್ತು ಸ್ಥಳ: ನಿಕೊಲೊ ಮೆಕೆವೆಲ್ಲಿಯು 3 ಮೇ 1469 ರಂದು ಇಟಲಿಯ ಫ್ಲಾರೆನ್ಸ್ನಲ್ಲಿ ಜನಿಸಿದನು. ಫ್ಲಾರೆನ್ಸ್ ಆರ್ಥಿಕ ಸಮೃದ್ಧಿ ಹೊಂದಿದ್ದರೂ ಬಹು ಕಾಲದವರೆಗೆ ನಾಗರಿಕ ಧಂಗೆ ಮತ್ತು ರಾಜಕೀಯ ಅವ್ಯವಸ್ಥೆಗೆ ಒಳಗಾಗಿತ್ತು. ಬರ್ನಾಡೊ ಎಂಬ ನ್ಯಾಯವಾದಿಯು ಮೆಕೆವೆಲ್ಲಿಯ ತಂದೆಯಾಗಿದ್ದನು. ತಂದೆಯ ನ್ಯಾಯವಾದಿ ವೃತ್ತಿ ಮತ್ತು ಭೂ ಬಾಡಿಗೆಯ ಆದಾಯದೊಡನೆ ತೃಪ್ತ ಜೀವನವನ್ನು ಮೆಕೆವೆಲ್ಲಿಯ ಕುಟುಂಬ ಸಾಗಿಸುತ್ತಿತ್ತು. ಈತನ ಬಾಲ್ಯದ ಹೆಚ್ಚಿನ ವಿವರಗಳು ದೊರೆತಿಲ್ಲವಾದರೂ ತಾನು ಜನಿಸಿದ್ದ ಫ್ಲಾರೆನ್ಸನ್ನು ಮೆಕೆವೆಲ್ಲಿ ಶೈಶವದಲ್ಲಿ ಅತಿಯಾಗಿ ಪ್ರೀತಿಸುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ.
ವಿದ್ಯಾಭ್ಯಾಸ: ನಿಕೊಲೊ ಮೆಕೆವೆಲ್ಲಿಯ ಶಿಕ್ಷಣದಲ್ಲಿ ಆತನ ತಂದೆ ಬರ್ನಾಡೊ ಮಹತ್ವದ ಪಾತ್ರ ನಿರ್ವಹಿಸಿದ್ದ. ಬಾಲ್ಯದಲ್ಲಿಯೇ ಲ್ಯಾಟಿನ್ ಭಾಷೆಯನ್ನು ಶ್ರದ್ಧೆಯಿಂದ ಮೆಕೆವೆಲ್ಲಿ ಕಲಿತನು. ಕ್ರಮೇಣ ಫ್ಲಾರೆನ್ಸಿನಲ್ಲಿ ಅಸ್ತಿತ್ವದಲ್ಲಿದ್ದ ಮಾನವತಾವಾದದ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದನು. ಮುಂದೆ ಫ್ಲಾರೆನ್ಸ್ ವಿಶ್ವ ವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಮೆಕೆವೆಲ್ಲಿ ಪಡೆದುಕೊಂಡನು. ಗಮನಾರ್ಹ ಅಂಶವೇನೆಂದರೆ ವಿದ್ಯಾರ್ಥಿ ದೆಸೆಯಲ್ಲಿ ಮಾತ್ರವಲ್ಲದೇ ವೃತ್ತಿಗೆ ಸೇರಿದ ನಂತರವೂ ಮೆಕೆವೆಲ್ಲಿಯ ಅಧ್ಯಯನದ ಆಸಕ್ತಿ ಕುಗ್ಗಿರಲಿಲ್ಲ. ವಿಶೇಷವಾಗಿ ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದ ಈತ ಜೀವನಾನುಭವ ಒಳಗೊಂಡಿದ್ದ ಕೃತಿಗಳನ್ನು ಹೆಚ್ಚಾಗಿ ಓದುತ್ತಿದ್ದ. ಆಸಕ್ತಿದಾಯಕ ಅಂಶವೇನೆಂದರೆ ಸುಂದರ ಉಡುಪುಗಳನ್ನು ಧರಿಸಿದ ಮೆಕೆವೆಲ್ಲಿಯು ತಾನು ಅಧ್ಯಯನ ಮಾಡುತ್ತಿರುವ ವ್ಯಕ್ತಿಯೊಡನೆ ಮುಖಾಮುಖಿಯಾಗುತ್ತಿದ್ದೇನೆಂಬ ಕಲ್ಪನೆಯೊಡನೆ ಅಧ್ಯಯನಕ್ಕೆ ತೊಡಗುತ್ತಿದ್ದನು.
ವೃತ್ತಿ ಜೀವನ: 1498 ರಲ್ಲಿ ಪರಿಣಾಮಕಾರಿ ಗಣರಾಜ್ಯವು ಇಟಲಿಯಲ್ಲಿ ಜಾರಿಗೊಂಡಿತು. ಉನ್ನತ ಶಿಕ್ಷಣ ಮುಗಿಸಿದ್ದ ಮೆಕೆವಲ್ಲಿಗೆ ಇದೇ ವರ್ಷ ಫ್ಲಾರೆನ್ಸಿನ ರಾಯಬಾರಿ ಕಛೇರಿಯ ಕಾರ್ಯದರ್ಶಿ ಸ್ಥಾನ ದೊರಕಿತು. ಆಡಳಿತಾತ್ಮಕ, ಸೈನಿಕ ಹಾಗೂ ರಾಯಬಾರಕ ಕ್ಷೇತ್ರದಲ್ಲಿ ವಾಸ್ತವಿಕ ರಾಜಕೀಯದ ಅನುಭವ ಮೆಕೆವಲ್ಲಿಗೆ ದೊರೆಯಿತಲ್ಲದೇ ತನ್ನ ಭವಿಷ್ಯದ ಚಿಂತನೆಗಳನ್ನು ರೂಪಿಸಿಕೊಳ್ಳಲು ನೆರವಾದವು. ಇದಲ್ಲದೇ ಅಂದಿನ ಪ್ರಭಾವಿ ಜಾಗತಿಕ ನಾಯಕರನ್ನು ಭೇಟಿಯಾಗುವ ಅವಕಾಶ ಈ ವೃತ್ತಿಯಿಂದ ಮೆಕೆವೆಲ್ಲಿಗೆ ಕೂಡಿ ಬಂದಿತು. ಪೋಪ್ ಎರಡನೇ ಜ್ಯೂಲಿಯಸ್, ಜರ್ಮನಿಯ ಸಾಮ್ರಾಟ ಒಂದನೇ ಮ್ಯಾಕ್ಸಿಮಿಲಿಯನ್, ಫ್ರಾನ್ಸ್ ದೊರೆ ಹನ್ನೆರಡನೇ ಲೂಯಿ ಮುಂತಾದವರ ಭೇಟಿ ಮೆಕೆವೆಲ್ಲಿಗೆ ಸಾಧ್ಯವಾಯಿತು. ಜುಲೈ 1500 ರಿಂದ ಆರು ತಿಂಗಳವರೆಗೆ ಮೆಕೆವಲ್ಲಿ ಫ್ರಾನ್ಸ್ ದೊರೆ ಹನ್ನೆರಡನೇ ಲೂಯಿಯ ಆಸ್ಥಾನದಲ್ಲಿದ್ದನು. 1512 ರಲ್ಲಿ ಫ್ಲಾರೆನ್ಸಿನ ಗಣರಾಜ್ಯ ಪಥನಗೊಳ್ಳುವವರೆಗೆ ವಿವಿಧ ಜವಾಬ್ದಾರಿಯ ಸರ್ಕಾರಿ ವೃತ್ತಿಯಲ್ಲಿ ಮೆಕೆವಲ್ಲಿ ಶ್ರಮಿಸಿದ್ದನು.
ಕೊನೆಯ ದಿನಗಳು: ಗಣರಾಜ್ಯದ ಪಥನದೊಡನೆ ಅಧಿಕಾರಕ್ಕೇರಿದ ಮೆಡಿಸ್ಸಿ ಕುಟುಂಬವು ಮೆಕೆವಲ್ಲಿಯನ್ನು 7 ನವೆಂಬರ್ 1512 ರಂದು ಅಧಿಕಾರದಿಂದ ಕಿತ್ತೊಗೆಯಿತು. ಕಿರುಕುಳ ಮತ್ತು ಜೈಲುವಾಸ ಅನುಭವಿಸಿದ ಮೆಕೆವೆಲ್ಲಿಯನ್ನು ಒಂದು ವರ್ಷದ ಬಳಿಕ 1513 ರಲ್ಲಿ ವಿಮೋಚನೆಗೊಳಿಸಲಾಯಿತು. ಈ ನಂತರದ ವಿರಾಮದ ವೇಳೆಯಲ್ಲಿ ಮೆಕೆವೆಲ್ಲಿ ಅನೇಕ ತತ್ವಜ್ಙಾನಿಗಳ ಕೃತಿಗಳನ್ನು ಅಧ್ಯಯನ ಮಾಡಿದನು. ಅಂತಿಮವಾಗಿ 22 ಜೂನ್ 1527 ರಂದು ನಿಧನ ಹೊಂದಿದನು.
ಕೃತಿಗಳು: ಮೆಕೆವೆಲ್ಲಿ ಇತಿಹಾಸದಲ್ಲಿ ಅಪಾರ ಆಸಕ್ತಿ ಹೊಂದಿ ಅಧ್ಯಯನ ಮಾಡಿದ್ದನು. ಜೊತೆಗೆ ಪ್ರಾಚೀನ ಕಾಲದ ಅಸಂಖ್ಯ ತತ್ವಜ್ಙಾನಿಗಳ ಚಿಂತನೆಗಳನ್ನು ಆಳವಾಗಿ ಅರಿತಿದ್ದನು. ಇದರೊಡನೆ ರಾಯಬಾರಿಯ ವೃತ್ತಿ ಆತನಿಗೆ ವಾಸ್ತವಿಕ ರಾಜಕೀಯದ ಅನುಭವ ನೀಡಿತ್ತು. ಫಲವಾಗಿ ಮೆಕೆವೆಲ್ಲಿ ಈ ಕೆಳಗಿನ ಹಲವು ಕೃತಿಗಳನ್ನು ರಚಿಸಲು ಸಾಧ್ಯವಾಗಿತ್ತು. ಮೆಕೆವೆಲ್ಲಿಯ ಪ್ರಮುಖ ಕೃತಿಗಳೆಂದರೆ
1. ದಿ ಪ್ರಿನ್ಸ್ (The Prince) 1513: ಇದನ್ನು ಮೆಡಿಸ್ಸಿ ಕುಟುಂಬದ ಒಂದನೇ ಲಾರೆಂಜೊನಿಗೆ ಸಮರ್ಪಿಸಲು ರಚಿಸಿದ್ದನು. ಈ ಕೃತಿಯು ರಾಜ್ಯಗಳ ಏಳು ಬೀಳುಗಳನ್ನು ವಿವರಿಸುತ್ತದೆ. ಜೊತೆಗೆ ರಾಜಕೀಯದ ವಾಸ್ತವಿಕ ಅನುಭವಗಳನ್ನು ಪ್ರತಿನಿಧಿಸುತ್ತದೆ. ಮೆಕೆವೆಲ್ಲಿ ನಿಧನದವರೆಗೆ ದಿ ಪ್ರಿನ್ಸ್ ಪ್ರಕಟಗೊಳ್ಳಲಿಲ್ಲ. 1532 ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ ಮುಂದೆ 25 ಬಾರಿ ಮರು ಮುದ್ರಣಗೊಂಡಿದೆ.
2. ಮಂಡ್ರಗೊಲ (Mandragola): ಿದು ಆ ಕಾಲದ ಪ್ರಸಿದ್ಧ ಹಾಸ್ಯ ನಾಟಕವಾಗಿತ್ತು. ಇದರಲ್ಲಿ ಅನೈತಿಕತೆ, ದ್ವಿಧೋರಣೆ, ಗುರಿ ಹಾಗೂ ಸಾಧನಗಳ ಸಂಬಂಧ ಮುಂತಾದವುಗಳ ಮೇಲೆ ಮೆಕೆವೆಲ್ಲಿ ಬೆಳಕು ಚೆಲ್ಲಿದ್ದನು.
3. ಬೆಲ್ಫಗೊರ್ (Belfagor) 1521.
4. ಆರ್ಟ್ ಆಫ್ ವಾರ್ (Art of War) 1521.
5. ಹಿಸ್ಟರಿ ಆಫ್ ಫ್ಲಾರೆನ್ಸ್ (History of Florence) 1525.
6. ದಿ ಡಿಸ್ಕೋರ್ಸಸ್ ಆನ್ ಲೆವಿ (The Discourses on Levy) 1531.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ