ಅಧ್ಯಾಯ 2: ಮಧ್ಯ ಯುಗೀನ ರಾಜಕೀಯ ಚಿಂತನೆ.
ಪ್ರಸ್ತಾವನೆ: ಸಾಮಾನ್ಯವಾಗಿ ಕ್ರಿ. ಶ. 5 ನೇ ಶತಮಾನದಿಂದ 15 ನೇ ಶತಮಾನದವರೆಗಿನ ಕಾಲಾವಧಿಯನ್ನು ಮಧ್ಯ ಯುಗವೆಂದು ಪರಿಗಣಿಸಲಾಗುತ್ತದೆ. ಈ ಕಾಲಾವಧಿಯಲ್ಲಿ ಮಂಡಿಸಲ್ಪಟ್ಟ ರಾಜಕೀಯ ಚಿಂತನೆಯನ್ನು ಮಧ್ಯ ಯುಗೀನ ರಾಜಕೀಯ ಚಿಂತನೆ ಎನ್ನಲಾಗುತ್ತದೆ. ಮಧ್ಯ ಯುಗದ ಯುರೋಪಿನಲ್ಲಿ ಕ್ರಿಶ್ಚಿಯನ್ ಧರ್ಮವು ಸಮಾಜದ ಮೇಲೆ ಗಾಢ ಪ್ರಭಾವವನ್ನು ಹೊಂದಿತ್ತು. ಇದರಿಂದಾಗಿ ಧರ್ಮವು ಅಂದಿನ ಸಮಾಜದ ಇತರ ರಂಗಗಳಂತೆ ರಾಜಕೀಯ ಚಿಂತನೆಯನ್ನೂ ಸಹಜವಾಗಿ ಆವರಿಸಿತ್ತು. ಮಧ್ಯ ಯುಗದಲ್ಲಿ ಜನರಿಗೆ ಆಲೋಚನಾ ಸ್ವಾತಂತ್ರ್ಯವಿರಲಿಲ್ಲ. ಜೊತೆಗೆ ವ್ಯಕ್ತಿಗಳ ಎಲ್ಲ ಬಗೆಯ ಸ್ವಾತಂತ್ರ್ಯ ಮತ್ತು ಕ್ರಿಯೆಗಳು ಚರ್ಚಿನಿಂದ ನೀಡಲ್ಪಟ್ಟ ಬೋಧನೆಗಳನ್ನೇ ಆಧರಿಸಿದ್ದವು. ಪರಿಣಾಮ ಧಾರ್ಮಿಕ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಮತ್ತು ಚರ್ಚಿನ ಶ್ರೇಷ್ಠತೆಗಾಗಿ ಜನರ ಆಲೋಚನೆಗಳನ್ನು ನಿರ್ದೇಶಿಸುತ್ತಿದ್ದರು. ತಮ್ಮ ಹಾಗೂ ಚರ್ಚಿನ ಸ್ಥಾನಮಾನ ಮತ್ತು ಸಂಪತ್ತನ್ನು ರಕ್ಷಿಸಿಕೊಳ್ಳುವುದು ಧಾರ್ಮಿಕ ಮುಖಂಡರ ಉದ್ದೇಶವಾಗಿತ್ತು. ಜೊತೆಗೆ ಧರ್ಮ ಹಾಗೂ ದೇವರ ಹೆಸರಿನಲ್ಲಿ ಧಾರ್ಮಿಕ ಮುಖ್ಯಸ್ಥರು ಜನ ಸಾಮಾನ್ಯರನ್ನು ನಿಯಂತ್ರಿಸುತ್ತಿದ್ದರು. ಜನ ಜೀವನದ ವಿವಿಧ ಆಯಾಮಗಳಾದ ಕಲೆ, ಸಾಹಿತ್ಯ, ರಾಜಕೀಯ ಚಿಂತನೆ ಮುಂತಾದವುಗಳನ್ನು ಬೈಬಲ್ ಮುಂದಿಟ್ಟು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರು. ಈ ವೇಳೆ ಧಾರ್ಮಿಕ ಮುಖಂಡರು ಬೈಬಲ್ಲನ್ನು ತಮ್ಮ ಸಂಪತ್ತು ಹಾಗೂ ಅಧಿಕಾರದ ಹೆಚ್ಚಳಕ್ಕೆ ಪೂರಕವಾಗಿ ವ್ಯಾಖ್ಯಾನಿಸಿ ಜನರನ್ನು ಪ್ರಭಾವಿಸಿದ್ದರು. ಒಟ್ಟಾರೆಯಾಗಿ ಚರ್ಚಿನ ಮುಖಂಡರು ತಮ್ಮ ಬಯಕೆ, ಸ್ವಾರ್ಥ, ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಬಳಸಿಕೊಳ್ಳುತ್ತಿದ್ದರು. ಅಂದಿನ ಜನರ ಜೀವನವು ನಿಂತ ನೀರಿನಂತಾದ್ದರಿಂದ ಮಧ್ಯ ಯುಗವನ್ನು (ಅಂಧಕಾರ ಯುಗ) ಎಂದು ಪರಿಗಣಿಸಲಾಗಿತ್ತು.
ಈ ನಡುವೆ ಮಧ್ಯ ಯುಗದ ಜಾತ್ಯಾತೀತವಾದಿಗಳು ಜನ ಜೀವನದ ಮೇಲಣ ಚರ್ಚಿನ ಹಿಡಿತವನ್ನು ಖಂಡಿಸಿದ್ದರು. ದೇವರು ಸತ್ಯ ಹಾಗೂ ಅಸತ್ಯಗಳ ಅಥವಾ ಸರಿ ಹಾಗೂ ತಪ್ಪುಗಳ ನಿರ್ಧಾರ ಕೈಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೆ ಸ್ವತಂತ್ರ್ಯ ನೀಡಿರುವನೆಂದು ಜಾತ್ಯಾತೀತವಾದಿಗಳು ಪ್ರತಿಪಾದಿಸಿದ್ದರು. ಜೊತೆಗೆ ದೇವರು ಚರ್ಚಿನ ಸಹಾಯವನ್ನು ಬಯಸಲಾರನೆಂಬ ಬಲವಾದ ನಂಬಿಕೆಯನ್ನು ಅವರು ಮಂಡಿಸಿದ್ದರು. ಇದಲ್ಲದೇ ಜನರ ರಾಜಕೀಯ ಸ್ವಾತಂತ್ರ್ಯವನ್ನು ಜಾತ್ಯಾತೀತವಾದಿಗಳು ಎತ್ತಿ ಹಿಡಿದಿದ್ದರು. ಮುಂದುವರೆದು ಚರ್ಚು ಕೇವಲ ಅಲೌಕಿಕ ಅಂದರೆ ದೇವರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾತ್ರ ನೋಡಿಕೊಂಡು ಲೌಕಿಕ ಅಂದರೆ ರಾಜ್ಯದ ವ್ಯವಹಾರಗಳನ್ನು ರಾಜನಿಗೆ ಬಿಡಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ ಚರ್ಚ್ ಮತ್ತು ಜಾತ್ಯಾತೀತವಾದಿಗಳ ನಡುವೆ ಭಿನ್ನಾಭಿಪ್ರಾಯ ಮನೆ ಮಾಡಿತ್ತು. ಫಲವಾಗಿ ಜನ ಸಾಮಾನ್ಯರ ಜೀವನ ಹಲವು ತೊಂದರೆಗಳನ್ನು ಎದುರಿಸಬೇಕಿತ್ತು. ಇಂತಹ ವಿಷಮ ಸಮಯದಲ್ಲಿ ಥಾಮಸ್ ಅಕ್ವಿನಾಸ್ನು ತನ್ನ ರಾಜಕೀಯ ಚಿಂತನೆಗಳನ್ನು ಮಂಡಿಸಿದ್ದನು. ಇದರೊಡನೆ ಮಧ್ಯ ಯುಗದ ಅಂತ್ಯದಲ್ಲಿ ಜರುಗಿದ ಪುನರುಜ್ಜೀವನ ಚಳುವಳಿಯ ಪ್ರಭಾವಕ್ಕೊಳಗಾದ ನಿಕೊಲೊ ಮೆಕೆವೆಲ್ಲಿ ತನ್ನ ವಾಸ್ತವಿಕ ರಾಜಕೀಯ ಚಿಂತನೆಗಳನ್ನು ಪ್ರತಿಪಾದಿಸಿದ್ದ. ಪ್ರಸ್ತುತ ಅಧ್ಯಾಯದಲ್ಲಿ ಮಧ್ಯ ಯುಗದ ಈ ಇಬ್ಬರೂ ಚಿಂತಕರ ಪ್ರಮುಖ ಕೊಡುಗೆಗಳ ಮೇಲೆ ಮಾತ್ರವೇ ಬೆಳಕು ಚೆಲ್ಲಲಾಗಿದೆ.
[I. ಥಾಮಸ್ ಅಕ್ವಿನಾಸ್:
ಪೀಠಿಕೆ: ಥಾಮಸ್ ಅಕ್ವಿನಾಸ್ನು ಮಧ್ಯ ಯುಗದಲ್ಲಿ ಕಂಡು ಬರುವ ಯುರೋಪಿನ ಶ್ರೇಷ್ಠ ರಾಜಕೀಯ ಚಿಂತಕ. ಅರಿಸ್ಟಾಟಲ್ನ ವಿಚಾರಗಳಿಂದ ಪ್ರೇರಿತನಾಗಿ ಅವನ ವಿಚಾರಗಳ ಪುನರುತ್ತಾನಕ್ಕೆ ಅಕ್ವಿನಾಸ್ನು ಪ್ರಯತ್ನಿಸಿದ್ದನು. ತನ್ನ ಜೀವನ ಶೈಲಿ ಮತ್ತು ರಾಜಕೀಯ ವಿಚಾರಗಳನ್ನು ಧರ್ಮದೊಡನೆ ಸಂಮಿಶ್ರಣಗೊಳಿಸಿದ ಚಿಂತನೆಗಳಿಂದ ಸಂತ ಎಂದೇ ಅಕ್ವಿನಾಸ್ ಕರೆಯಲ್ಪಟ್ಟಿರುವ. ಅಂಧಕಾರ ಯುಗವೆಂದು ಕರೆಯಲ್ಪಡುವ ಮಧ್ಯ ಯುಗದಲ್ಲಿ ರಾಜಕೀಯ ಚಿಂತನೆಗಳನ್ನು ಮಂಡಿಸಿದ ಅಕ್ವಿನಾಸ್ನ ಕೊಡುಗೆ ಅಮೋಘ. ಪ್ರಸ್ತುತ ಅಧ್ಯಾಯದಲ್ಲಿ ಥಾಮಸ್ ಅಕ್ವಿನಾಸ್ನ ಜೀವನ ಮತ್ತು ಆತನ ಕಾನೂನುಗಳ ವರ್ಗೀಕರಣ ಸಿದ್ಧಾಂತದ ಮೇಲೆ ಬೆಳಕು ಚೆಲ್ಲಲಾಗಿದೆ.
[A. ಥಾಮಸ್ ಅಕ್ವಿನಾಸ್ನ ಜೀವನ ಮತ್ತು ಕೃತಿಗಳು:
ಜನನ ಮತ್ತು ಕಾಲ: ಥಾಮಸ್ ಅಕ್ವಿನಾಸ್ನು ಕ್ರಿ. ಶ. ೧೨೨೫ ರಲ್ಲಿ ಸಮಕಾಲಿನ ಇಟಲಿಗೆ ಸೇರಿದ್ದ ಶಿಶಿಲಿಯ ಅಕ್ವಿನೊ ಸಮೀಪದ ರಾಕೆಸೆಕ್ಕಾ ಎಂಬಲ್ಲಿ ಜನಿಸಿದ್ದನು. ಕೆಲ ಚಿಂತಕರನ್ವಯ ಥಾಮಸ್ ಎಂಬ ಮೂಲ ಹೆಸರಿನೊಡನೆ ಅಕ್ವಿನಾಸ್ ಎಂಬುದು ಆತನ ಜನ್ಮ ಸ್ಥಳಕ್ಕೆ ಸಂಬಂಧಿಸಿದ ಅಕ್ವಿನೊದಿಂದ ಸೇರಿಕೊಂಡಿದೆ. ಲ್ಯಾಂಡಲ್ಫ್ ಹಾಗೂ ಥಿಯೋಡೊರಾ ಎಂಬುವವರು ಥಾಮಸ್ ಅಕ್ವಿನಾಸ್ನ ತಂದೆ ತಾಯಿಗಳಾಗಿದ್ದರು. ಥಾಮಸ್ನು ತನ್ನ ಪೋಷಕರ ಎಂಟು ಮಕ್ಕಳಲ್ಲಿ ಕಿರಿಯ ಪುತ್ರನಾಗಿದ್ದನು. ಥಾಮಸ್ನು ರಾಜ ಮನೆತನದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ್ದು ಶ್ರೀಮಂತಿಕೆಯ ವಾತಾವರಣದಲ್ಲಿ ತನ್ನ ಬಾಲ್ಯವನ್ನು ಕಳೆದ. ಗಮನಿಸಬೇಕಾದ ಅಂಶವೇನೆಂದರೆ ದೇವದೂತನೊಬ್ಬ ಅಕ್ವಿನಾಸ್ನ ಜನನದ ಮೊದಲೇ ಅವನ ತಾಯಿಗೆ (ನಿನ್ನ ಮಗು ಹೆಸರಾಂತ ಜ್ಙಾನಿ ಮತ್ತು ಸನ್ಯಾಸಿಯಾಗಿ ಅಸಾಮಾನ್ಯ ಸ್ಥಾನಕ್ಕೇರುವ) ಎಂಬುದಾಗಿ ಭವಿಷ್ಯ ನುಡಿದಿದ್ದನು. ಥಾಮಸ್ನು ಐದು ವರ್ಷದವನಿದ್ದಾಗ ಜಾರಿಯಲ್ಲಿದ್ದ ಸಂಪ್ರದಾಯದಂತೆ ಮಾಂಟಿ ಕಸ್ಸಿನೊಗೆ ಬೆನೆಡಿಕ್ಟಿನ್ ಸನ್ಯಾಸಿಗಳಿಂದ ದೊರೆಯುತ್ತಿದ್ದ ತರಬೇತಿಗಾಗಿ ಕಳುಹಿಸಲಾಯಿತು.
ವಿದ್ಯಾಭ್ಯಾಸ: ರಾಜಕೀಯ ಕಾರಣಕ್ಕಾಗಿ ಥಾಮಸ್ನು ಮಾಂಟಿ ಕಸ್ಸಿನೊದಿಂದ ನೇಪಲ್ಸ್ಗೆ ಸ್ಥಳಾಂತರಗೊಂಡನು. ನೇಪಲ್ಸ್ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರೈಸಲು ಐದು ವರ್ಷ ಅಧ್ಯಯನ ಕೈಗೊಂಡನು. ಈ ಸಮಯದಲ್ಲಿ ಅರಿಸ್ಟಾಟಲ್ನ ಕೃತಿಗಳನ್ನು ಅಭ್ಯಸಿಸಿ ಆತನ ವಿಚಾರಗಳಿಂದ ಅಕ್ವಿನಾಸ್ ಪ್ರಭಾವಿತಗೊಂಡನು. ಮುಂದೆ 1239 ರಲ್ಲಿ ಥಾಮಸ್ನು ನೇಪಲ್ಸ್ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನಕ್ಕೆ ಮುಂದಾದನು. ಈ ನಡುವೆ ಸಾಂಪ್ರದಾಯಿಕ ಜೀವನ ಶೈಲಿಯನ್ನು ಪ್ರತಿಪಾದಿಸುತ್ತಿದ್ದ ಸನ್ಯಾಸಿ ಪಂಥಗಳಿಗಿಂತ ಆಧ್ಯಾತ್ಮಿಕ ಸೇವಾ ಜೀವನವನ್ನು ಬೆಂಬಲಿಸುತ್ತಿದ್ದ ಸಮಕಾಲಿನ ಪಂಥಗಳತ್ತ ಆಕರ್ಷಿತನಾದನು. ಫಲವಾಗಿ 1243, ರಲ್ಲಿ ಥಾಮಸ್ನು ರಹಸ್ಯವಾಗಿ ಡೊಮೆನಿಕನ್ ಸನ್ಯಾಸಿ ಗುಂಪನ್ನು ಸೇರಿಕೊಂಡನು. ಇದನ್ನು ಸಹಿಸದ ಕುಟುಂಬದ ಸದಸ್ಯರು ಥಾಮಸ್ನನ್ನು ಬಂಧನದಲ್ಲಿಟ್ಟು ಆತನನ್ನು ಪರಿವರ್ತಿಸಲು ಶ್ರಮಿಸಿ ವಿಫಲರಾದರು. ಬಳಿಕ 1245 ರಲ್ಲಿ ಮುಕ್ತಗೊಂಡ ಅಕ್ವಿನಾಸ್ 1252 ರವರೆಗೆ ನೇಪಲ್ಸ್ ಮತ್ತು ಪ್ಯಾರಿಸ್ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಕೈಗೊಂಡನು. ಪ್ಯಾರಿಸ್ನಲ್ಲಿ ಆಲ್ಬರ್ಟ್ ದಿ ಗ್ರೇಟ್ ಎಂಬಾತನ ಮಾರ್ಗದರ್ಶನದಲ್ಲಿ ತಿಯಾಲಜಿ ವಿಷಯದ ಮೇಲೆ ಸಂಶೋಧನೆ ಕೈಗೊಂಡು 1252 ರಲ್ಲಿ ಪಿ. ಎಚ್. ಡಿ ಪದವಿ ಪಡೆದನು.
ವೃತ್ತಿ ಜೀವನ: ಥಾಮಸ್ ಅಕ್ವಿನಾಸ್ ಧರ್ಮಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಗಳಿಸಿಕೊಂಡಿದ್ದನು. ಹೀಗಾಗಿ ಜರ್ಮನಿ, ರೋಂ ಹಾಗೂ ಪ್ಯಾರಿಸ್ ವಿಶ್ವ ವಿದ್ಯಾಲಯಗಳಲ್ಲಿ ಕೆಲ ಕಾಲದವರೆಗೆ ಬೋಧಕನಾಗಿ ಅಕ್ವಿನಾಸ್ ಸೇವೆ ಸಲ್ಲಿಸಿದನು. ಮುಂದೆ 1256 ರಲ್ಲಿ ಚರ್ಚ್ ಮುಖ್ಯಸ್ಥ ಪೋಪ್ನಿಂದ (ಮಾಸ್ಟರ್ ಆಫ್ ತಿಯಾಲೊಜಿ) ಸ್ಥಾನವನ್ನು ಗಳಿಸಿ ಚರ್ಚಿನ ಕಾರ್ಯಗಳಲ್ಲಿ ಅಂದರೆ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡನು. ಇದರೊಡನೆ ಪ್ರತಿಭೆಯ ಗಣಿಯಾಗಿದ್ದ ಅಕ್ವಿನಾಸ್ ಅಸಂಖ್ಯ ರಾಜರುಗಳಿಗೆ ಅಗತ್ಯ ಸಲಹೆ ನೀಡುವ ಕಾರ್ಯದಲ್ಲಿಯೂ ಭಾಗವಹಿಸುತ್ತಿದ್ದನು.
ಚಿಂತನಾ ಕ್ರಾಂತಿಯಲ್ಲಿ ಪಾತ್ರ: ಮಧ್ಯ ಯುಗವು ಹೊಸತನವಿಲ್ಲದ ಚಿಂತನೆಗಳ ಕೊರತೆಯಿಂದ ನಿಂತ ನೀರಾಗಿತ್ತು. ಜೊತೆಗೆ ಅಂದಿನ ಜನರ ಚಿಂತನೆಗಳನ್ನು ಕ್ರಿಶ್ಚಿಯನ್ ಧರ್ಮವು ವಿಶಾಲವಾಗಿ ವ್ಯಾಪಿಸಿತ್ತು. ಈ ವೇಳೆಯಲ್ಲಿ ಅಕ್ವಿನಾಸ್ನು ಅರಿಸ್ಟಾಟಲ್ನ ವಿಚಾರಗಳನ್ನು ಕ್ರಿಶ್ಚಿಯನ್ ನಂಬಿಕೆಗಳೊಡನೆ ಬೆಸೆಯಲು ಪ್ರಯತ್ನಿಸಿದನು. ವಿಶೇಷವಾಗಿ ಅರಿಸ್ಟಾಟಲ್ನ ವಿಚಾರಗಳಾದ ರಾಜ್ಯವು ನೈಸರ್ಗಿಕ ಸಂಸ್ಥೆ, ಮಾನವ ಸಂಗ ಜೀವಿ, ಸಾಮಾಜಿಕ ನ್ಯಾಯ, ಗುಣ ಮತ್ತು ಗಾತ್ರವನ್ನಾಧರಿಸಿದ ಸರ್ಕಾರಗಳ ವರ್ಗೀಕರಣ ಮುಂತಾದ ಅರಿಸ್ಟಾಟಲ್ನ ವಿಚಾರಗಳನ್ನು ಅಂದಿನ ಸಮಕಾಲಿನ ಕ್ರಿಶ್ಚಿಯನ್ ಶ್ರದ್ಧೆಗನುಗುಣವಾಗಿ ಪುನರುಜ್ಜೀವನಗೊಳಿಸಲು ಅಕ್ವಿನಾಸ್ ಪ್ರಯತ್ನಿಸಿದನು. ಹೀಗಾಗಿ ಚರ್ಚ್ ನಡವಳಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಆತ ಯಶಸ್ವಿಯೂ ಆದನು.
ಕೊನೆಯ ದಿನಗಳು: ಥಾಮಸ್ ಅಕ್ವಿನಾಸ್ನು ಸಾಮಾನ್ಯ ವ್ಯಕ್ತಿಗಳಂತೆ ತನ್ನ ಜೀವನದಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸಿದ್ದನು. ಅಂತಿಮವಾಗಿ ಚರ್ಚಿನ ಸೇವೆಗಾಗಿ ಪ್ರವಾಸದಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಇಟಲಿಯ ಫಸನೋವಾ ೆಂಬಲ್ಲಿ 7 ಮಾರ್ಚ್ 1274 ರಂದು ನಿಧನ ಹೊಂದಿದನು.
ಕೃತಿಗಳು: ಥಾಮಸ್ ಅಕ್ವಿನಾಸ್ನು ತನ್ನ ಜೀವಿತಾವಧಿಯಲ್ಲಿ ಸುಮಾರು 60 ಕೃತಿಗಳನ್ನು ರಚಿಸಿದ್ದ. ಈ ಕೃತಿಗಳು ಬೈಬಲ್, ಅರಿಸ್ಟಾಟಲ್ನ ವಿಚಾರಗಳ ಮೇಲಿನ ವಿಮರ್ಷೆ ಹಾಗೂ ಸ್ವಾಭಾವಿಕ ತತ್ವಶಾಸ್ತ್ರ ಕುರಿತಾಗಿದ್ದವು. ಗಮನಾರ್ಹ ಅಂಶವೇನೆಂದರೆ ಈತನ ಕೃತಿಗಳ ಹಸ್ತ ಪ್ರತಿಗಳನ್ನು ತಯಾರಿಸಿ ಯುರೋಪಿನ ಗ್ರಂಥಾಲಯಗಳಿಗೆ ಹಂಚಲಾಗಿತ್ತು. ಅಕ್ವಿನಾಸ್ ರಚಿಸಿರುವ ಪ್ರಮುಖ ಕೃತಿಗಳೆಂದರೆ
1. ಕಾಮೆಂಟರಿ ಆನ್ ದಿ ಸೆಂಟೆನ್ಸಸ್ (Commentary on the Sentences) ಸುಮಾರು 1250.
2. ಅಗೆನೆಸ್ಟ್ ದೋಜ್ ಹೂ ಅಸೇಲ್ ದಿ ವರ್ಶಿಪ್ ಆಫ್ ಗಾಡ್ ಆಯಂಡ್ ರಿಲಿಜಿಯನ್ (Againest Those Who Assail the Worship of God and Riligion) 1256.
3. ಸಮ್ಮ ಥಿಯೊಲಜಿಕಾ (Summa Teologica) 1265 / 1274.
4. ಸಮ್ಮ ಕಾಂಟ್ರ ಜೆಂಟೇಲ್ (Summa Cantra, gentil)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ