ಆದರ್ಶ ರಾಜ್ಯದ ಅರ್ಥ: ಸರಳಾರ್ಥದಲ್ಲಿ ಪ್ರಜೆಗಳಿಗೆ ಉತ್ತಮ ಜೀವನವನ್ನು ಒದಗಿಸುವ ರಾಜ್ಯವೇ ಆದರ್ಶ ರಾಜ್ಯವೆನಿಸುತ್ತದೆ. ಮುಂದುವರೆದು ವಿಶಾಲಾರ್ಥದಲ್ಲಿ ಪ್ರಜೆಗಳಿಗೆ ಪರಿಪೂರ್ಣ ಜೀವನಕ್ಕೆ ಪೂರಕವಾದ ನ್ಯಾಯ, ಶಿಕ್ಷಣ, ಆಸ್ತಿ ಹಾಗೂ ಪತ್ನಿಯರ ಸಮತಾವಾದ ಮತ್ತು ತತ್ವಜ್ಙಾನಿಗಳ ಆಳ್ವಿಕೆಯಂತಹ ಮೂಲಾಂಶವನ್ನುಳ್ಳ ಕಾಲ್ಪನಿಕ ರಾಜ್ಯವೇ ಆದರ್ಶ ರಾಜ್ಯ. ಆದರ್ಶ ರಾಜ್ಯದಲ್ಲಿ ನ್ಯಾಯವು ಗುರಿಯಾದರೆ ಶಿಕ್ಷಣವು ಅದನ್ನು ಸಾಧಿಸುವ ಸಾಧನವಾಗಿದ್ದು ಸದ್ಗುಣವುಳ್ಳ ತತ್ವಜ್ಙಾನಿಗಳ ಆಡಳಿತ ಅಸ್ತಿತ್ವದಲ್ಲಿರುತ್ತದೆ. ಪ್ರಜೆಗಳಲ್ಲಿನ ಮೂರು ಗುಣಗಳನ್ನಾಧರಿಸಿದ ಮೂರು ವರ್ಗಗಳು ಆದರ್ಶ ರಾಜ್ಯದ ಸಮಾಜದಲ್ಲಿದ್ದು ಸರ್ವರಿಗೂ ಉತ್ತಮ ಜೀವನದ ಭರವಸೆ ದೊರಕಿರುತ್ತದೆ. ಗಮನಿಸಬೇಕಾದ ಅಂಶವೇನೆಂದರೆ ಪ್ಲೇಟೊ ಪ್ರತಿಪಾದಿಸಿದ ಆದರ್ಶ ರಾಜ್ಯವು ವಾಸ್ತವದಲ್ಲಿರದ ಹಾಗೂ ಭವಿಷ್ಯದಲ್ಲಿ ಜಾರಿಗೊಳ್ಳಬಹುದಾದ ಊಹಾತ್ಮಕ ಅಥವಾ ಕಾಲ್ಪನಿಕ ರಾಜ್ಯವಾಗಿತ್ತು. ಈ ಆದರ್ಶ ರಾಜ್ಯವು ಗಾಂಧೀಜಿಯವರ ರಾಮ ರಾಜ್ಯ ಮತ್ತು ಥಾಮಸ್ ಮೋರ್ನ ಯುಟೊಪಿಯಾ (ಕಾಲ್ಪನಿಕ ರಾಜ್ಯ) ವನ್ನು ಮೇಲ್ನೋಟಕ್ಕೆ ಹೋಲುವಂತಹುದಾಗಿತ್ತು.
ಆದರ್ಶ ರಾಜ್ಯದ ಲಕ್ಷಣಗಳು: ಪ್ಲೇಟೊ ಪ್ರತಿಪಾದಿಸಿದ್ದ ಆದರ್ಶ ರಾಜ್ಯವು ನ್ಯಾಯ, ಶಿಕ್ಷಣ, ಆಸ್ತಿ ಹಾಗೂ ಪತ್ನಿಯರ ಸಮತಾವಾದ ಮತ್ತು ತತ್ವಜ್ಙಾನಿಗಳ ಆಳ್ವಿಕೆ ಎಂಬ ನಾಲ್ಕು ಸ್ಥಂಬಗಳಿಂದ ಕೂಡಿತ್ತು. ಆದರೆ ಆದರ್ಶ ರಾಜ್ಯದ ಪರಿಪೂರ್ಣ ತಿಳುವಳಿಕೆಗಾಗಿ ಅವುಗಳಲ್ಲಿ ಅಂತರ್ಗತವಾಗಿರುವ ಹಲವು ಅಂಶಗಳನ್ನು ವಿಂಗಡಿಸಿ ಸಂಕ್ಷಿಪ್ತವಾಗಿ ಈ ಕೆಳಗೆ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದರ್ಶ ರಾಜ್ಯದ ಪ್ರಧಾನ ಲಕ್ಷಣಗಳೆಂದರೆ
1. ಸಾಮಾಜಿಕ ವರ್ಗಗಳ ವಿಂಗಡಣೆ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ಸಮಾಜವು ಮೂರು ವರ್ಗಗಳಾಗಿ ಪ್ರತ್ಯೇಕಿಸಲ್ಪಟ್ಟಿತ್ತು. ಪ್ರಜೆಗಳು ಹೊಂದಿರುವ ಮೂರು ಗುಣಗಳು ಈ ಸಾಮಾಜಿಕ ವರ್ಗೀಕರಣಕ್ಕೆ ಆಧಾರಗಳಾಗಿದ್ದವು. ಪ್ರಜೆಗಳಲ್ಲಿ ಪ್ಲೇಟೊ ಗುರುತಿಸಿದ ಆ ಗುಣಗಳೆಂದರೆ ವಿವೇಕ/ಜ್ಙಾನ/ಸಾತ್ವಿಕ ಗುಣ (REASON), ಚೈತನ್ಯ/ಉತ್ಸಾಹ/ರಜೋ ಗುಣ (COURAGE ) ಹಾಗೂ ಲೋಭ/ತಾಮಸ ಗುಣ (DESIRE). ಪ್ರಸ್ತಾಪಿತ ಮೂರು ಗುಣಗಳನ್ನಾಧರಿಸಿ ಸಮಾಜದಲ್ಲಿನ ಪ್ರಜೆಗಳನ್ನು ಕ್ರಮವಾಗಿ ಆಳುವ/ಪೋಷಕ/ಬಂಗಾರದ ವರ್ಗ, ಸೈನಿಕ/ರಕ್ಷಕ/ಬೆಳ್ಳಿಯ ವರ್ಗ ಹಾಗೂ ಉತ್ಪಾದಕ/ಾರ್ಥಿಕ/ತಾಮ್ರದ ವರ್ಗವೆಂದು ವಿಂಗಡಿಸಲಾಗಿತ್ತು. ಶ್ರೇಣ್ಯಾತ್ಮಕವಾಗಿದ್ದ ಸಾಮಾಜಿಕ ವರ್ಗಗಳಲ್ಲಿ ಆಳುವ ವರ್ಗ ಉನ್ನತವಾಗಿದ್ದು ರಾಜ್ಯಾಡಳಿತವು ಅದರ ಜವಾಬ್ದಾರಿಯಾಗಿತ್ತು. ನಂತರದ ಸ್ಥಾನದಲ್ಲಿ ಸೈನಿಕ ವರ್ಗವಿದ್ದು ರಾಜ್ಯದ ರಕ್ಷಣೆಯ ಹೊಣೆ ಪಡೆದುಕೊಂಡಿತ್ತು. ಕೊನೆಯ ಸ್ಥಾನದಲ್ಲಿ ಉತ್ಪಾದಕ ವರ್ಗವಿದ್ದು ಕೃಷಿ, ವ್ಯಾಪಾರ, ಉದ್ದಿಮೆಯಂತಹ ವಿವಿಧ ಆರ್ಥಿಕ ಕಾರ್ಯಗಳನ್ನು ನಿರ್ವಹಿಸಬೇಕಿತ್ತು. ಗಮನಾರ್ಹ ಅಂಶವೇನೆಂದರೆ ಆದರ್ಶ ರಾಜ್ಯದ ಸಮಾಜದಲ್ಲಿ ವ್ಯಕ್ತಿಯೊಬ್ಬನ ವರ್ಗದ ನಿರ್ಧಾರವು ಹುಟ್ಟನ್ನು ಆಧರಿಸದೇ ಆತ ಶಿಕ್ಷಣದ ಮೂಲಕ ಬೆಳೆಸಿಕೊಂಡ ಗುಣಗಳನ್ನು ಆಧರಿಸಿತ್ತು. ಇದರರ್ಥ ಉತ್ಪಾದಕ ವರ್ಗದಲ್ಲಿ ಜನಿಸಿದವ ಉತ್ಸಾಹ ಗುಣ ಹೊಂದಿ ಸೈನಿಕ ವರ್ಗದಲ್ಲಿ ಹಾಗೂ ಸೈನಿಕ ವರ್ಗದವ ವಿವೇಕ ಗುಣ ಬೆಳೆಸಿಕೊಂಡು ಆಳುವ ವರ್ಗದಲ್ಲಿ ಗುರುತಿಸಿಕೊಳ್ಳಲು ಆದರ್ಶ ರಾಜ್ಯದಲ್ಲಿ ಅವಕಾಶವಿತ್ತು.
2. ಕಾರ್ಯ ನೈಪುಣ್ಯತೆ: ಪ್ಲೇಟೊನ ಆದರ್ಶ ಸಮಾಜವು ಮೂರು ವರ್ಗಗಳಿಂದ ಕೂಡಿತ್ತು. ಪ್ರತಿಯೊಂದು ವರ್ಗ ತನ್ನ ಸ್ವಾಭಾವಿಕ ಗುಣಾಧಾರಿತ ಕರ್ತವ್ಯಗಳನ್ನು ಪಡೆದುಕೊಂಡಿತ್ತು. ಆಯಾ ವರ್ಗದ ಜನರು ತಮ್ಮ ವರ್ಗಕ್ಕೆ ನಿಗಧಿಯಾದ ಕಾರ್ಯಗಳನ್ನೇ ನಿರಂತರವಾಗಿ ನಿರ್ವಹಿಸುತ್ತಿದ್ದರು. ಪರಿಣಾಮ ಆಯಾ ವರ್ಗದ ಜನರು ತಮ್ಮ ಕಾರ್ಯಗಳಲ್ಲಿ ನೈಪುಣ್ಯತೆ ಪಡೆಯುತ್ತಿದ್ದರು. ಉದಾ: ಆಳುವ ವರ್ಗ ಆಡಳಿತ ನಡೆಸುವಲ್ಲಿ, ಸೈನಿಕ ವರ್ಗ ರಕ್ಷಣಾ ಕಾರ್ಯದಲ್ಲಿ ಹಾಗೂ ಉತ್ಪಾದಕ ವರ್ಗವು ವಸ್ತುಗಳ ತಯಾರಿಕೆಯಲ್ಲಿ ಪಾಂಡಿತ್ಯವನ್ನು ಬೆಳೆಸಿಕೊಂಡಿದ್ದರು. ಗಮನಿಸಬೇಕಾದ ಅಂಶವೇನೆಂದರೆ ಸಮಾಜದ ವಿವಿಧ ಮೂರು ವರ್ಗಗಳ ಕಾರ್ಯ ವೈಶಿಷ್ಠ್ಯತೆಯು ಜನರಲ್ಲಿ ಸಂಶಯ, ಗೊಂದಲ ಅಥವ ದ್ವೇಷಗಳನ್ನು ದೂರಗೊಳಿಸಿ ಆದರ್ಶ ರಾಜ್ಯದ ಸೃಷ್ಟಿಗೆ ನೆರವಾಗಿತ್ತು.
3. ವ್ಯವಸ್ಥಿತ ನ್ಯಾಯಾಡಳಿತ: ನ್ಯಾಯವು ಪ್ಲೇಟೊನ ಆದರ್ಶ ರಾಜ್ಯದ ಅನಿವಾರ್ಯ ಹಾಗೂ ಅಂತರ್ಗತ ಅಂಶವಾಗಿತ್ತು. ಸಮಾಜದಲ್ಲಿನ ಪ್ರತಿಯೊಂದು ವರ್ಗದವರು ಇತರ ವರ್ಗಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡದೇ ತಮ್ಮ ವರ್ಗದ ಕಾರ್ಯಗಳನ್ನು ದಕ್ಷವಾಗಿ ನಿರ್ವಹಿಸುವುದೇ ನ್ಯಾಯ. ಈ ಮಾದರಿಯ ನ್ಯಾಯವು (ಒಂದು ವರ್ಗ ಒಂದು ಕರ್ತವ್ಯ) ತತ್ವವನ್ನು ಆಧರಿಸಿತ್ತು. ಆದರ್ಶ ರಾಜ್ಯದಲ್ಲಿ ಆಳುವ ವರ್ಗ ಆಡಳಿತ ನಡೆಸುವ, ಸೈನಿಕ ವರ್ಗ ರಕ್ಷಣೆ ಒದಗಿಸುವ ಹಾಗೂ ಉತ್ಪಾದಕ ವರ್ಗವು ವಸ್ತುಗಳ ಉತ್ಪಾದನೆಯಲ್ಲಿ ತೊಡಗುವ ಕರ್ತವ್ಯಕ್ಕೆ ಬದ್ಧತೆ ತೋರಬೇಕಿತ್ತು. ನಿರ್ದಿಷ್ಟ ವರ್ಗದ ಕರ್ತವ್ಯದಲ್ಲಿ ಬೇರೆ ವರ್ಗದವರು ಹಸ್ತಕ್ಷೇಪ ಮಾಡುವುದು ನ್ಯಾಯದ ಉಲ್ಲಂಘನೆ ಎನಿಸಿತ್ತು. ವ್ಯವಸ್ಥಿತ ನ್ಯಾಯಾಡಳಿತದಿಂದ ಆದರ್ಶ ರಾಜ್ಯ ಸಾಕಾರಗೊಳ್ಳುವುದೆಂಬುದು ಪ್ಲೇಟೊನ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ಲೇಟೊ (ಇತರರು ನಿಮ್ಮ ಕಾರ್ಯ ಮಾಡಬೇಕೆಂದು ಬಯಸದಿರಿ ಮತ್ತು ಇತರರ ಕಾರ್ಯವನ್ನು ಮಾಡಲು ಪ್ರಯತ್ನಿಸದಿರಿ) ಎಂಬುದಾಗಿ ಎಚ್ಚರಿಕೆ ನೀಡಿದ್ದ ಎಂಬುದಾಗಿ ಅರ್ನೆಸ್ಟ್ ಬಾರ್ಕರ್ ಅಭಿಪ್ರಾಯಪಟ್ಟಿರುವರು. ಒಟ್ಟಾರೆ ವಿವಿಧ ವರ್ಗಗಳ ನಡುವೆ ಸಮನ್ವಯತೆ ಸ್ಥಾಪಿಸಲು ಮತ್ತು ಪರಸ್ಪರರಲ್ಲಿ ಸಹಕಾರ ಮೂಡಿಸಲು ದಕ್ಷ ನ್ಯಾಯಾಡಳಿತವು ಆದರ್ಶ ರಾಜ್ಯಕ್ಕೆ ನೆರವಾಗಿತ್ತು.
4. ರಾಜ್ಯ ನಿಯಂತ್ರಿತ ಶಿಕ್ಷಣ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಲಾಗಿತ್ತು. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸಂಗೀತ, ವ್ಯಾಯಾಮ, ವಿಜ್ಙಾನ ಮುಂತಾದ ಪಠ್ಯಕ್ರಮವನ್ನುಳ್ಳ ವಿವಿಧ ಹಂತಗಳ ಸುದೀರ್ಘ ಶಿಕ್ಷಣವನ್ನು ಆದರ್ಶ ರಾಜ್ಯ ಹೊಂದಲು ಪ್ಲೇಟೊ ಸೂಚಿಸಿದ್ದ. ಶಿಕ್ಷಣವು ವ್ಯಕ್ತಿಯ ಖಾಸಗಿ ವ್ಯವಹಾರವೆಂದು ಪರಿಗಣಿಸಿದರೆ ಅವರಲ್ಲಿ ಸ್ವಾರ್ಥ ಬೆಳೆದು ಸಾಮಾಜಿಕ ಹಿತಾಸಕ್ತಿಯ ಾಧ್ಯತೆ ಕಡಿಮೆಯಾಗುತ್ತದೆ. ಈ, ಹಿನ್ನೆಲೆಯಲ್ಲಿ ವ್ಯಕ್ತಿ ಮತ್ತು ಸಮಾಜದ ಪ್ರಗತಿಗಾಗಿ ರಾಜ್ಯವೇ ಶಿಕ್ಷಣವನ್ನು ನಿಯಂತ್ರಿಸಬೇಕೆಂಬುದಾಗಿ ಪ್ಲೇಟೊ ಪ್ರತಿಪಾದಿಸಿದ್ದ. ಆಗ ಸಮಾಜದಲ್ಲಿ ಸರ್ವರ ಒಳಿತನ್ನು ಕಾಣಲು ಮತ್ತು ವೈಯಕ್ತಿಕವಾಗಿ ಆತ್ಮವನ್ನು ವಾಸ್ತವೀಕತೆಗೆ ಸಾಮಿಪ್ಯಗೊಳಿಸಲು ಸುಲಭವಾಗುತ್ತದೆ. ಆದ್ದರಿಂದಲೇ ತನ್ನ ಆದರ್ಶ ರಾಜ್ಯದಲ್ಲಿ ಪ್ಲೇಟೊ ಸ್ಪಾರ್ಟಾ ನಗರ ರಾಜ್ಯದಲ್ಲಿದ್ದಂತೆ ರಾಜ್ಯ ನಿಯಂತ್ರಿತ ಶಿಕ್ಷಣವನ್ನು ಮಂಡಿಸಿದ್ದಾನೆ.
5. ಕಲೆ ಹಾಗೂ ಸಾಹಿತ್ಯಗಳ ಮೇಲೆ ನಿರ್ಬಂಧ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ವಿವಿಧ ಕಲೆ ಹಾಗೂ ಸಾಹಿತ್ಯಗಳಿಗೆ ಮುಕ್ತ ಅವಕಾಶವಿರಲಿಲ್ಲ. ಕೇವಲ ಪ್ರಜೆಗಳ ನೈತಿಕ ಮಟ್ಟವನ್ನು ಹೆಚ್ಚಿಸುವ ಕಲೆಗಳು ಮತ್ತು ಸಾಹಿತ್ಯಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಜೆಗಳಲ್ಲಿ ಅನೈತಿಕತೆ, ಅಶಾಂತಿ ಹಾಗೂ ಅವಗುಣಗಳನ್ನು ಪ್ರೇರೇಪಿಸುವ ಕಳಪೆ ದರ್ಜೆಯ ಕಲೆ ಹಾಗೂ ಸಾಹಿತ್ಯಗಳನ್ನು ನಿರ್ಬಂಧಿಸಲಾಗಿತ್ತು. ಸದ್ಗುಣಕ್ಕೆ ತೊಡಕಾಗುವ ಕಲೆ ಅಥವ ಸಾಹಿತ್ಯವನ್ನು ಪ್ರಜೆಗಳಿಂದ ದೂರವಿಡಲು ಅವುಗಳ ಮೇಲೆ ಸಾಕಷ್ಟು ನಿರ್ಬಂಧ ಹೇರಬಹುದಾಗಿತ್ತು.
6. ಸ್ತ್ರೀ ಮತ್ತು ಪುರುಷರಿಗೆ ಸಮಾನ ಉಪಚಾರ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ಸ್ತ್ರೀ ಮತ್ತು ಪುರುಷರ ನಡುವೆ ತಾರತಮ್ಯವಿರಲಿಲ್ಲ. ಶಿಕ್ಷಣವನ್ನು ಹೊಂದುವ ಅವಕಾಶ ಇವರಿಬ್ಬರಿಗೂ ಸಮಾನವಾಗಿತ್ತು. ಪುರುಷನಂತೆ ಸ್ತ್ರೀಯರೂ ತತ್ವಜ್ಙಾನಿಗಳಾಗಿ ಆಳ್ವಿಕೆ ನಡೆಸಲು ಮುಕ್ತ ಅವಕಾಶವಿತ್ತು. ಜೊತೆಗೆ ಆಳುವ ತತ್ವಜ್ಙಾನಿಯು ಆದರ್ಶ ರಾಜ್ಯದಲ್ಲಿನ ಸ್ತ್ರೀ ಹಾಗೂ ಪುರುಷ ಪ್ರಜೆಗಳ ಮಧ್ಯೆ ವ್ಯತ್ಯಾಸ ತೋರುವಂತಿರಲಿಲ್ಲ.
7. ತತ್ವಜ್ಙಾನಿಯ ಆಳ್ವಿಕೆ: ಪ್ಲೇಟೊನ ಪ್ರಕಾರ ಆದರ್ಶ ರಾಜ್ಯದ ಆಡಳಿತವು ತತ್ವಜ್ಙಾನಿಗಳ ಕೈಯಲ್ಲಿರುತ್ತದೆ. ತತ್ವಜ್ಙಾನಿಗಳು ಪ್ರಾಮಾಣಿಕತೆ, ನಿಸ್ವಾರ್ಥ, ಬುದ್ಧಿವಂತಿಕೆ, ಸೇವಾ ಮನೋಭಾವ, ಜ್ಙಾನದಂತಹ ಸದ್ಗುಣಗಳನ್ನು ಹೊಂದಿರುತ್ತಾರೆ. ಜೊತೆಗೆ ದೀರ್ಘ ಶಿಕ್ಷಣದ ಕಾರಣ ಅವರ ಯೋಚನೆ ಹಾಗು ಯೋಜನೆಗಳು ುದಾತ್ತ ದೃಷ್ಟಿಕೋನ ಪಡೆದಿರುತ್ತವೆ. ಅಲ್ಲದೇ ತತ್ವಜ್ಙಾನಿಗಳು ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವುದಿಲ್ಲ. ಗಮನಿಸಬೇಕಾದ ಅಂಶವೇನೆಂದರೆ ಆಳುವ ತತ್ವಜ್ಙಾನಿ ರಾಜ್ಯದ ಹಿತವನ್ನೇ ತನ್ನ ಹಿತವೆಂದು ಭಾವಿಸುತ್ತಾನೆ. ಹೀಗಾಗಿ ಒಂದು ರಾಜ್ಯ ಆದರ್ಶ ರಾಜ್ಯವೆನಿಸಿಕೊಳ್ಳಲು ತತ್ವಜ್ಙಾನಿಗಳೇ ಅರಸರಾಗಬೇಕು ಅಥವಾ ಆಳುವ ಅರಸರು ತತ್ವಜ್ಙಾನವನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಪ್ಲೇಟೊ ಅಭಿಪ್ರಾಯ ವ್ಯಕ್ತಪಡಿಸಿರುವ. ಮುಂದುವರೆದು ರಾಜಕೀಯ ಸ್ವಾರ್ಥ ಮತ್ತು ಅಸಮರ್ಥತೆ ನಿರ್ಮೂಲನೆಗೆ ತತ್ವಜ್ಙಾನಿಗಳ ಆಳ್ವಿಕೆ ಅತ್ಯಗತ್ಯವೆಂದು ಪ್ಲೇಟೊ ಪ್ರತಿಪಾದಿಸಿರುವ. ತತ್ವಜ್ಙಾನಿಯು ಯಾವುದೇ ಕಾನೂನುಗಳಿಂದ ಬಂಧಿತನಲ್ಲವೆಂದು ಪ್ಲೇಟೊ ವಿವರಿಸಿ ಆದರ್ಶ ರಾಜ್ಯದ ಆಳ್ವಿಕೆಯನ್ನು ತತ್ವಜ್ಙಾನಿಗಳಿಗೆ ಮೀಸಲಿಟ್ಟಿದ್ದಾನೆ.
8. ತತ್ವಜ್ಙಾನಿಗಳ ನಿರಂಕುಶಾಧಿಕಾರ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ಆಳುವ ತತ್ವಜ್ಙಾನಿಗಳು ನಿರಂಕುಶಾಧಿಕಾರ ಪಡೆದಿದ್ದರು. ಅವರ ಅಧಿಕಾರದ ಮೇಲೆ ಯಾವುದೇ ಕಾನೂನು ಮಿತಿಗಳನ್ನು ಹೇರುವಂತಿರಲಿಲ್ಲ. ಸದ್ಗುಣ ಮತ್ತು ಸುದೀರ್ಘ ಶಿಕ್ಷಣ ಪಡೆದ ತತ್ವಜ್ಙಾನಿಗಳು ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಳಸುವರೆಂಬ ಭರವಸೆಯೊಡನೆ ಅವರಿಗೆ ಆದರ್ಶ ರಾಜ್ಯದಲ್ಲಿ ಅಮಿತ ಅಧಿಕಾರ ನೀಡಲಾಗಿತ್ತು. ಹೀಗೆ ಆದರ್ಶ ರಾಜ್ಯದಲ್ಲಿ ತತ್ವಜ್ಙಾನಿಗಳ ನಿರಂಕುಶಾಧಿಕಾರ ಸಹಜ ಸಂಗತಿ ಎನಿಸಿಕೊಂಡಿತ್ತು.
9. ಆಸ್ತಿ ಹಾಗೂ ಪತ್ನಿಯರ ಸಮತಾವಾದ: ಪ್ಲೇಟೊನ ಆದರ್ಶ ರಾಜ್ಯದಲ್ಲಿ ಆಳುವ ತತ್ವಜ್ಙಾನಿಗಳಿಗೆ ಮತ್ತು ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಆಸ್ತಿ ಹಾಗೂ ಕುಟುಂಬವನ್ನು ಹೊಂದುವ ಅವಕಾಶವಿರಲಿಲ್ಲ. ಇದನ್ನೇ ಆಸ್ತಿ ಹಾಗೂ ಪತ್ನಿಯರ ಸಮತಾವಾದ ಎನ್ನಲಾಗುತ್ತದೆ. ಸ್ವಂತ ಆಸ್ತಿ ಹಾಗೂ ಕುಟುಂಬವನ್ನು ಹೊಂದಿದರೆ ಸ್ವಾರ್ಥ, ದುರಾಸೆ, ಮೋಸ, ವಂಚನೆಯಂತಹ ದುರ್ಗುಣಗಳು ಬೆಳೆಯುವುವೆಂಬುದು ಪ್ಲೇಟೊನ ನಂಬಿಕೆಯಾಗಿತ್ತು. ಇದರೊಡನೆ ಆಸ್ತಿ ಹಾಗೂ ಕುಟುಂಬ ಕರ್ತವ್ಯದಲ್ಲಿ ಅದಕ್ಷತೆ ಬೆಳೆಸಿ ನಿಷ್ಠೆಯನ್ನು ಕ್ಷೀಣಿಸುವ ಸಾಧ್ಯತೆ ಅಧಿಕವೆಂದು ಆತ ಭಾವಿಸಿದ್ದನು. ಜೊತೆಗೆ ಸಾಮಾಜಿಕ ಹಿತವನ್ನು ಕಡೆಗಣಿಸಬಹುದೆಂಬ ಆತಂಕವೂ ಪ್ಲೇಟೊನದಾಗಿತ್ತು. ಈ ಕಾರಣಕ್ಕೆ ಆಳುವ ಹಾಗೂ ಸೈನಿಕ ವರ್ಗಗಳಿಗೆ ಪ್ಲೇಟೊನ ಆದರ್ಶ ರಾಜ್ಯದಲ್ಲಿ ಅವುಗಳನ್ನು ನಿರಾಕರಿಸಲಾಗಿತ್ತು. ಆದರೆ ವಿಶೇಷ ದಿನಗಳಂದು ಸಾಮಾನ್ಯ ಶಿಬಿರದಲ್ಲಿ ಬೇರೆ ಬೇರೆ ವಾಸವಾಗಿದ್ದ ಸ್ತ್ರೀ ಮತ್ತು ಪುರುಷ ತತ್ವಜ್ಙಾನಿ ಹಾಗೂ ಸೈನಿಕರು ದೈಹಿಕವಾಗಿ ಸಂಧಿಸಲು ಅವಕಾಶ ನೀಡಲಾಗಿತ್ತು. ಈ ಅವಕಾಶದ ಹಿಂದೆ ಆದರ್ಶ ರಾಜ್ಯದ ಭವಿಷ್ಯಕ್ಕಾಗಿ ಗುಣಾತ್ಮಕ ಸಂತಾನೋತ್ಪತ್ತಿಯ ಉದ್ದೇಶವಿರುವುದು ಗಮನಾರ್ಹ ಸಂಗತಿ. ವಿಶೇಷವೇನೆಂದರೆ ಈ ಆಸ್ತಿ ಹಾಗೂ ಕುಟುಂಬ ಸಮತಾವಾದ ಸಮಾಜದಲ್ಲಿದ್ದ ಉತ್ಪಾದಕ ವರ್ಗದವರಿಗೆ ಅನ್ವಯವಾಗುತ್ತಿರಲಿಲ್ಲ.
ವಿಮರ್ಷೆ: ಪ್ಲೇಟೊ ಪ್ರತಿಪಾದಿಸಿರುವ ಆದರ್ಶ ರಾಜ್ಯದ ಪರಿಕಲ್ಪನೆಯು ಕಾರ್ಯ ನೈಪುಣ್ಯತೆ, ಹಸ್ತಕ್ಷೇಪ ರಹಿತತೆ, ಪ್ರಗತಿಪರ ಶಿಕ್ಷಣ ವ್ಯವಸ್ಥೆ, ಸದ್ಗುಣಿಗಳ ನಿಸ್ವಾರ್ಥ ಆಳ್ವಿಕೆಯಂತಹ ಗುಣಗಳಿಂದ ಕೂಡಿದೆ. ಆದ್ದಾಗ್ಯೂ ಅರಿಸ್ಟಾಟಲ್ ಸೇರಿದಂತೆ ಅನೇಕ ರಾಜ್ಯಶಾಸ್ತ್ರಜ್ಙರಿಂದ ಪ್ಲೇಟೊನ ಆದರ್ಶ ರಾಜ್ಯ ಪರಿಕಲ್ಪನೆಯು ವಿಮರ್ಷೆಗೊಳಗಾಗಿದೆ. ವಿಮರ್ಷಕರು ಆದರ್ಷ ರಾಜ್ಯದಲ್ಲಿ ಗುರುತಿಸಿರುವ ಪ್ರಮುಖ ದೋಷಗಳನ್ನು ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
1. ಸರ್ವಾಧಿಕಾರತ್ವಕ್ಕೆ ಹಾದಿ: ಪ್ಲೇಟೊ ಆದರ್ಶ ರಾಜ್ಯವನ್ನು ತತ್ವಜ್ಙಾನಿಗಳೇ ಆಳಬೇಕೆಂದು ಪ್ರತಿಪಾದಿಸಿರುವ. ಜೊತೆಗೆ ಆದರ್ಶ ರಾಜ್ಯದ ಅಧಿಕಾರವನ್ನು ಪರಿಪೂರ್ಣವಾಗಿ ಆಳುವ ತತ್ವಜ್ಙಾನಿಗೆ ನೀಡಲು ಸೂಚಿಸಿರುವ. ಇದರೊಡನೆ ತತ್ವಜ್ಙಾನಿಗಳನ್ನು ನಿಯಂತ್ರಿಸುವ ವ್ಯಕ್ತಿ ಅಥವ ಕಾನೂನುಗಳನ್ನು ನಿರಾಕರಿಸಿರುವ. ಇದರಿಂದಾಗಿ ಆಳುವ ತತ್ವಜ್ಙಾನಿಯಲ್ಲಿ ರಾಜ್ಯಾಧಿಕಾರ ಕೇಂದ್ರೀಕರಣಗೊಂಡು ಆತ ಸರ್ವಾಧಿಕಾರತ್ವ ಚಲಾಯಿಸಬಹುದಾಗಿದೆ. (ಅಧಿಕಾರ ಆಳುವವರನ್ನು ಬ್ರಷ್ಟಗೊಳಿಸುತ್ತದೆ ಹಾಗೂ ನಿರಂಕುಶಾಧಿಕಾರ ಆಳುವವರನ್ನು ನಾಶಗೊಳಿಸುತ್ತದೆ) ಎಂಬ ಸೂಕ್ತಿಯನ್ನು ಪ್ಲೇಟೊ ಮರೆತಂತಿದೆ ಎಂಬುದಾಗಿ ಹಲವರು ಆದರ್ಶ ರಾಜ್ಯವನ್ನು ವಿಮರ್ಷಿಸಿದ್ದಾರೆ.
2. ವ್ಯಕ್ತಿತ್ವದ ಬೆಳವಣಿಗೆಗೆ ಮಾರಕ: ವ್ಯಕ್ತಿಗಳಿಗೆ ಜೀವನದ ಹಲವು ರಂಗಗಳಲ್ಲಿ ಮುಕ್ತ ಅವಕಾಶ ಅಂದರೆ ಸ್ವಾತಂತ್ರ್ಯಗಳಿದ್ದರೆ ಅವರ ವ್ಯಕ್ತಿತ್ವ ಬೆಳವಣಿಗೆ ಹೊಂದುತ್ತದೆ. ಆದರೆ ಪ್ಲೇಟೊ ಶಿಕ್ಷಣ, ಕುಟುಂಬ, ಉದ್ಯೋಗ ಮುಂತಾದ ರಂಗಗಳಲ್ಲಿ ಕಠಿಣ ನಿಯಮಗಳನ್ನು ಆದರ್ಶ ರಾಜ್ಯದಲ್ಲಿ ಪ್ರತಿಪಾದಿಸಿರುವ. ಜನರು ತಮಗೆ ಆಸಕ್ತಿಯುಳ್ಳ ವಿಷಯಗಳನ್ನು ಕಲಿಯಲು, ವ್ಯಕ್ತಿಗಳೊಡನೆ ಕುಟುಂಬ ಕಟ್ಟಿಕೊಳ್ಳಲು ಅಥವ ಉದ್ಯೋಗವನ್ನು ನಿರ್ವಹಿಸಲು ಅವಕಾಶ ನಿರಾಕರಿಸಿದ್ದಾನೆ. ಇದರೊಡನೆ ಜ್ಙಾನ, ುತ್ಸಾಹ ಹಾಗೂ ಲೋಭ ಗುಣಗಳನ್ನಾಧರಿಸಿ ಸಾಮಾಜಿಕ ವರ್ಗೀಕರಣ ಮಾಡಿದ್ದು ವ್ಯಕ್ತಿಗಳಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಸುತ್ತದೆ. ಹೀಗೆ ಪ್ಲೇಟೊನ ಆದರ್ಶ ರಾಜ್ಯದಲ್ಲಿ ನಾನಾ ಮಿತಿಗಳ ಹೇರಿಕೆಯು ವ್ಯಕ್ತಿತ್ವದ ಬೆಳವಣಿಗೆಗೆ ಮಾರಕವೆನಿಸಿದೆ ಎಂಬುದಾಗಿ ಚಿಂತಕರು ವಿಮರ್ಷಿಸಿರುವರು.
3. ವಾಸ್ತವಿಕತೆಗೆ ದೂರ: ಪ್ಲೇಟೊನ ಆದರ್ಶ ರಾಜ್ಯವು ಕೇವಲ ಕಲ್ಪನಾ ಯೋಗ್ಯ ರಾಜ್ಯ. ವಾಸ್ತವದಲ್ಲಿ ಅದನ್ನು ಜಾರಿಗೊಳಿಸುವುದು ಕಷ್ಟಕರ ಸಂಗತಿ. ಅಧಿಕಾರ ಮತ್ತು ತತ್ವಜ್ಙಾನಗಳ ಸಂಯೋಜನೆಗೊಂಡ ತತ್ವಜ್ಙಾನಿ ಅರಸರ ಆಳ್ವಿಕೆ ಕೈಗೂಡದ ಅವಾಸ್ತವಿಕ ವಿವರಣೆಯಾಗಿದೆ. ಸ್ವತಃ ಪ್ಲೇಟೊ ಆದರ್ಶ ರಾಜ್ಯದ ಸೃಷ್ಟಿಗೆ ಸಿರಾಕ್ಯೂಸ್ನ ರಾಜಕುಮಾರನಿಗೆ ನೀಡಿದ ತರಬೇತಿ ಸಫಲಗೊಳ್ಳಲಿಲ್ಲ. ಹೀಗಾಗಿ ವಿಮರ್ಷಕರು ಆದರ್ಶ ರಾಜ್ಯವನ್ನು ಕಾಲಾತೀತ ಮತ್ತು ಸ್ಥಳಾತೀತ ಕಾಲ್ಪನಿಕ ರಾಜ್ಯವೇ ಹೊರತು ಅನುಷ್ಟಾನಗೊಳ್ಳಬಲ್ಲ ರಾಜ್ಯವಲ್ಲ ಎಂದಿರುವರು. ಈ ಹಿನ್ನೆಲೆಯಲ್ಲಿ ವಾಸ್ತವಿಕತೆಗೆ ದೂರವಾದ ರಾಜ್ಯ ವ್ಯವಸ್ಥೆ ಎಂದು ಆದರ್ಶ ರಾಜ್ಯವನ್ನು ಪರಿಗಣಿಸಲಾಗಿದೆ.
4. ಮಾನವ ಸ್ವಭಾವಕ್ಕೆ ಆತಂಕ: ಆದರ್ಶ ರಾಜ್ಯದ ಕೆಲವು ಮೂಲಾಂಶಗಳು ಮಾನವನ ಸಹಜ ಪ್ರವೃತ್ತಿಯನ್ನು ಕಡೆಗಣಿಸಿದಂತಿದೆ. ಕಲೆ ಹಾಗೂ ಸಾಹಿತ್ಯಗಳನ್ನು ನಿರ್ಬಂಧಿಸಿ ಮನೋರಂಜನೆಯನ್ನು ಹತ್ತಿಕ್ಕಲಾಗಿದೆ. ಜೊತೆಗೆ ಇಷ್ಟಪಟ್ಟ ಹೆಂಡತಿ ಹಾಗು ಮಕ್ಕಳೊಡನೆ ಸುಖಮಯ ಜೀವನ ನಿರ್ವಹಣೆಯನ್ನು ಸೈನಿಕ ಹಾಗೂ ಆಳುವ ವರ್ಗದಿಂದ ಕಸಿದುಕೊಳ್ಳಲಾಗಿದೆ. ಇದರೊಡನೆ ಕಲಿಕಾ ಸಾಮರ್ಥ್ಯವನ್ನು ಮೀರಿದ ಸುದೀರ್ಘ ಶಿಕ್ಷಣವನ್ನು ಆಳುವವರಿಗೆ ಹೇರಲಾಗಿದೆ. ಹೀಗೆ ಮಾನವ ಸ್ವಭಾವಕ್ಕೆ ವ್ಯತಿರಿಕ್ತ ಅಂಶಗಳನ್ನು ಆದರ್ಶ ರಾಜ್ಯ ವ್ಯವಸ್ಥೆ ಮೈಗೂಡಿಸಿಕೊಂಡಿರುವುದನ್ನು ವಿಮರ್ಷಕರು ಗುರುತಿಸಿದ್ದಾರೆ.
5. ಪ್ರಜಾಪ್ರಭುತ್ವಕ್ಕೆ ವಿರುದ್ಧ: ಪ್ಲೇಟೊ ಆದರ್ಶ ರಾಜ್ಯವನ್ನು ತತ್ವಜ್ಙಾನಿಗಳೇ ಆಳಬೇಕು ಅಥವಾ ಆಳುವವರು ತತ್ವಜ್ಙಾನ ಬೆಳೆಸಿಕೊಳ್ಳಬೇಕು ಎಂದಿರುವ. ಇದರಿಂದಾಗಿ ಬಹುತೇಕ ಪ್ರಜೆಗಳು ಆಳ್ವಿಕೆಯಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತಗೊಳ್ಳುವರು. ಜೊತೆಗೆ ಆಳುವ ಹಾಗೂ ಸೈನಿಕ ವರ್ಗದವರಿಗೆ ಸಮಾನವಾದ ಶೈಕ್ಷಣಿಕ ಅವಕಾಶಗಳನ್ನು ಉತ್ಪಾದಕ ವರ್ಗದವರಿಗೆ ಒದಗಿಸಿಲ್ಲ. ಅಂತೆಯೇ ಮುಕ್ತ ಸ್ವಾತಂತ್ರ್ಯವನ್ನು ಪ್ಲೇಟೊ ನಿರಾಕರಿಸುತ್ತಾನೆ. ಸಾಮಾಜಿಕ ವರ್ಗೀಕರಣದ ಫಲವಾಗಿ ಸಹೋದರತೆ ಕುರಿತಂತೆ ಚಿಂತಿಸಿಲ್ಲ. ಆದ್ದರಿಂದ ಸಮಾನತೆ, ಸ್ವತಂತ್ರ್ಯ ಮತ್ತು ಸಹೋದರತೆಗಳ ತತ್ವಗಳ ಮತ್ತು ಸರ್ವರ ಭಾಗವಹಿಸುವಿಕೆಯ ಕೊರತೆಯಿಂದ ಪ್ರಜಾಪ್ರಭುತ್ವ ವಿರೋಧಿ ಎಂಬುದಾಗಿ ಆದರ್ಶ ರಾಜ್ಯವನ್ನು ವಿಮರ್ಷಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ