ಗುರುವಾರ, ಮೇ 27, 2021

ತತ್ವಜ್ಙಾನಿ ಅರಸು ಪರಿಕಲ್ಪನೆಯ ಲಕ್ಷಣಗಳು: ಪ್ಲೇಟೊ ಪ್ರತಿಪಾದಿಸಿರುವ ತತ್ವಜ್ಙಾನಿ ಅರಸು ಪರಿಕಲ್ಪನೆ ಆತನ ಆದರ್ಶ ರಾಜ್ಯದ ಕೇಂದ್ರ ಬಿಂದುವಾಗಿದ್ದು ಕೆಳಗಿನ ಲಕ್ಷಣಗಳಿಂದ ಕೂಡಿದೆ.

1. ಸುದೀರ್ಘ ಶಿಕ್ಷಣದ ಫಲ: ತತ್ವಜ್ಙಾನಿ ಅರಸು ಆರು ಹಂತಗಳ ನಿರಂತರ ಐವತ್ತು ವರ್ಷಗಳ ಶಿಕ್ಷಣದ ಬಳಿಕ ರೂಪುಗೊಂಡಿರುತ್ತಾನೆ. ಆರಂಭದಲ್ಲಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಮತ್ತು ನಂತರದಲ್ಲಿ  ಖಗೋಳಶಾಸ್ತ್ರ, ಜೋತಿಷ್ಯಶಾಸ್ತ್ರ, ತರ್ಕಶಾಸ್ತ್ರ, ಗಣಿತ ಮುಂತಾದ ವಿಷಯಗಳನ್ನು ತತ್ವಜ್ಙಾನಿ ಅರಸು ತನ್ನ ಶಿಕ್ಷಣದಿಂದ ಪಡೆದಿರುತ್ತಾನೆ. ಜೊತೆಗೆ ಸಂವಾದದ ಮೂಲಕ ಸತ್ಯಾನ್ವೇಷಣೆ ಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತಾನೆ. ಇದರೊಡನೆ ಸೈನಿಕ ಮತ್ತು ಆಡಳಿತಾತ್ಮಕ ತರಬೇತಿಯನ್ನು ಪಡೆದು ಸಮರ್ಥ ಆಡಳಿತಗಾರನಾಗಿ ಸುದೀರ್ಘ ಶಿಕ್ಷಣದಿಂದ ಸಿದ್ಧಗೊಂಡಿರುತ್ತಾನೆ.

2. ಸ್ತ್ರೀ ಮತ್ತು ಪುರುಷರಿಗೆ ಸಮಾನವಕಾಶ: ಪ್ಲೇಟೊನ ತತ್ವಜ್ಙಾನಿ ಅರಸು ಪರಿಕಲ್ಪನೆಯಲ್ಲಿ ಲಿಂಗ ತಾರತಮ್ಯವನ್ನು ನಿರಾಕರಿಸಲಾಗಿತ್ತು. ಪುರುಷನಂತೆ ಸ್ತ್ರೀಯರಿಗೂ ತತ್ವಜ್ಙಾನಿ ಅರಸರಾಗಲು ಸಮಾನ ಅವಕಾಶ ನೀಡಲಾಗಿತ್ತು. ಸ್ತ್ರೀಯರ ಶಿಕ್ಷಣಕ್ಕೆ ಮುಕ್ತ ಅವಕಾಶವನ್ನು ಪುರುಷರಿಗೆ ಸಮಾನವಾಗಿ ಕಲ್ಪಿಸಲಾಗಿತ್ತು. ಇದರೊಡನೆ ಪ್ರತ್ಯೇಕ ಶಿಬಿರಗಳಲ್ಲಿ ಸ್ತ್ರೀ ಹಾಗು ಪುರುಷ ತತ್ವಜ್ಙಾನಿಗಳ ವಾಸಕ್ಕೆ ವ್ಯವಸ್ಥೆ ಒದಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಲಿಂಗ ತಾರತಮ್ಯ ನಿರಾಕರಿಸಿದ ಸಮಾನ ಅವಕಾಶಗಳನ್ನು ಸ್ತ್ರೀ ಹಾಗೂ ಪುರುಷರು ತತ್ವಜ್ಙಾನಿ ಅರಸರಾಗಲು ಪಡೆದಿದ್ದರೆಂಬುದು ಸ್ಪಷ್ಟವಾಗುತ್ತದೆ

3. ಸದ್ಗುಣಗಳ ಸಂಗಮ: ಪ್ಲೇಟೊನ ತತ್ವಜ್ಙಾನಿ ಅರಸು ಉದಾತ್ತ ಸದ್ಗುಣಗಳನ್ನು ಮೈಗೂಡಿಸಿಕೊಂಡ ಆಡಳಿತಗಾರನಾಗಿರುತ್ತಾನೆ. ಸಾಮಾನ್ಯರಲ್ಲಿ ಕಾಣಲಾಗದ ಸತ್ಯ ನಿಷ್ಠೆ, ಆತ್ಮ ಸಂಯಮ, ನಿಸ್ವಾರ್ಥ, ಸಮಚಿತ್ತ ಮುಂತಾದ ಸದ್ಗುಣಗಳು ಆತನಲ್ಲಿರುತ್ತವೆ. ಮಾನವ ಸಹಜ ದುರ್ಗುಣಗಳನ್ನು ತತ್ವಜ್ಙಾನಿ ಅರಸು ನಿಗ್ರಹಿಸಿಕೊಂಡಿರುತ್ತಾನೆ.

4. ನ್ಯಾಯ ಸ್ಥಾಪನೆಯ ಜವಾಬ್ದಾರಿ: ತತ್ವಜ್ಙಾನಿ ಅರಸು ಪರಿಕಲ್ಪನೆಯು ಸಮಾಜದಲ್ಲಿ ನ್ಯಾಯ ಸ್ಥಾಪನೆಯ ಉದ್ದೇಶಕ್ಕಾಗಿ ರೂಪುಗೊಂಡಿದೆ. ಸಮಾಜದಲ್ಲಿರುವ ಆಳುವ, ಸೈನಿಕ ಹಾಗೂ ಉತ್ಪಾದಕ ವರ್ಗಗಳು ತಮ್ಮ ಕಾರ್ಯಗಳನ್ನು ಇತರ ವರ್ಗದ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡದೇ ನಿರ್ವಹಿಸುವುದು ನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಮೂರು ವರ್ಗಗಳ ಪರಸ್ಪರ ಹಸ್ತಕ್ಷೇಪ ತಡೆಯಲು ಹಾಗೂ ತನ್ಮೂಲಕ ನ್ಯಾಯವನ್ನು ರಕ್ಷಿಸಲು ಸದ್ಗುಣಗಳ ಸಂಗಮವಾಗಿರುವ ತತ್ವಜ್ಙಾನಿ ಅರಸರನ್ನು ಪ್ಲೇಟೊ ತಿಳಿಸಿದ್ದಾನೆ.

5. ಆಸ್ತಿ ಮತ್ತು ಕುಟುಂಬ ತ್ಯಾಗ: ತತ್ವಜ್ಙಾನಿ ಅರಸರು ಸ್ವಂತ ಆಸ್ತಿ ಮತ್ತು ಕುಟುಂಬ ಹಕ್ಕನ್ನು ಪಡೆದಿರುವುದಿಲ್ಲ. ಇವರ ಜೀವನದ ವೆಚ್ಚವನ್ನು ರಾಜ್ಯವೇ ಭರಿಸುತ್ತದೆ. ತತ್ವಜ್ಙಾನಿಗಳು ಸಾಮಾನ್ಯ ಶಿಬಿರಗಳಲ್ಲಿ ಸೈನಿಕರೊಡನೆ ವಾಸಿಸುತ್ತಾರೆ. ನಿರ್ದಿಷ್ಟ ಹೆಂಡತಿ ಹಾಗೂ ಮಕ್ಕಳನ್ನು ಹೊಂದಿರದ ಇವರು ರಾಜ್ಯದ ಸದಸ್ಯತ್ವ ಪಡೆದಿರುವರೇ ಹೊರತು ಕುಟುಂಬದ ಸದಸ್ಯರಾಗಿರುವುದಿಲ್ಲ.

6. ನಿರಂಕುಶ ಅಧಿಕಾರ: ತತ್ವಜ್ಙಾನಿ ಅರಸು ನಿರಂಕುಶಾಧಿಕಾರ ಪಡೆದಿರುತ್ತಾನೆ. ಸಾಮಾನ್ಯರಿಗಿಂತ ಭಿನ್ನವಾದ ಸದ್ಗುಣಗಳನ್ನು ತತ್ವಜ್ಙಾನಿ ಮೈಗೂಡಿಸಿಕೊಂಡು ಸರಿ ಅಥವಾ ತಪ್ಪುಗಳನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಜೊತೆಗೆ ರಾಜ್ಯದ ನಾನಾ ಸಮಸ್ಯೆಗಳನ್ನರಿತು ಪರಿಹಾರ ಸೂಚಿಸಬಲ್ಲ ಶಕ್ತಿ ತತ್ವಜ್ಙಾನಿಯಲ್ಲಿರುತ್ತದೆ. ಹೀಗಾಗಿ ಯಾವುದೇ ಕಾನೂನಿನ ಮಿತಿಗೊಳಪಡದ ಅಧಿಕಾರವನ್ನು ಪ್ಲೇಟೊ ತತ್ವಜ್ಙಾನಿ ಅರಸರಿಗೆ ನೀಡಲು ಸೂಚಿಸಿದ್ದಾನೆ.

7. ರಾಜ್ಯದ ಹಿತಕ್ಕೆ ಮಹತ್ವ: ತತ್ವಜ್ಙಾನಿ ಅರಸರು ವೈಯಕ್ತಿಕ ಹಿತಾಸಕ್ತಿ ಹೊಂದಿರುವುದಿಲ್ಲ. ಸಾಮೂಹಿಕ ಹಿತದಲ್ಲಿ ತಮ್ಮ ಹಿತವನ್ನು ತತ್ವಜ್ಙಾನಿ ಅರಸು ಕಾಣುತ್ತಾನೆ. ಹೀಗಾಗಿ ವೈಯಕ್ತಿಕ ಹಿತಕ್ಕಿಂತ ರಾಜ್ಯದ ಹಿತಕ್ಕೆ ತತ್ವಜ್ಙಾನಿ ಅರಸು ಸದಾ ಚಿಂತಿತನಾಗಿರುತ್ತಾನೆ.

ವಿಮರ್ಷೆ: ತತ್ವಜ್ಙಾನಿ ಅರಸು ವ್ಯಾಪಕ ಸದ್ಗುಣಗಳ ಆಗರವಾಗಿದ್ದು ರಾಜ್ಯದ ಹಿತದಲ್ಲಿ ತನ್ನ ಹಿತವನ್ನು ಕಾಣುವ ಆಡಳಿತಗಾರ. ಆದ್ದಾಗ್ಯೂ ತತ್ವಜ್ಙಾನಿ ಅರಸು ಪರಿಕಲ್ಪನೆಯಲ್ಲಿ ವಿಮರ್ಷಕರು ಕೆಳಗಿನ ದೋಷಗಳನ್ನು ಗುರುತಿಸಿದ್ದಾರೆ. ಪ್ಲೇಟೊನ ತತ್ವಜ್ಙಾನಿ ಅರಸು ಚಿತ್ರಣವನ್ನು ಕೆಳಗೆ ಸಂಕ್ಷಿಪ್ತವಾಗಿ ವಿಮರ್ಷಿಸಲಾಗಿದೆ.

1. ಅವಾಸ್ತವಿಕ ಪರಿಕಲ್ಪನೆ: ಜಗತ್ತಿನ ಯಾವುದೇ ಭಾಗದಲ್ಲಿ ತತ್ವಜ್ಙಾನಿಗಳು ಅರಸರಾಗಿ ಯಶಸ್ವಿಯಾದ ಐತಿಹಾಸಿಕ ನಿದರ್ಶನಗಳು ಈವರೆಗೆ ಲಭ್ಯವಾಗಿಲ್ಲ. ಜೊತೆಗೆ ವ್ಯವಹಾರಿಕವಾಗಿ ತತ್ವಜ್ಙಾನಿಗಳು ಸಂಕೀರ್ಣ ರಾಜ್ಯಾಡಳಿತದಲ್ಲಿ ಸಫಲಗೊಳ್ಳುವುದು ಕಠಿಣವಾದ ಸಂಗತಿಯಾಗಿದೆ. ಜೀವನದ ಬಹು ಕಾಲವನ್ನು ಶಿಕ್ಷಣದಲ್ಲಿಯೇ ಕಳೆಯುವ ತತ್ವಜ್ಙಾನಿ ರಾಜ್ಯವೊಂದರ ಸರ್ವರಾಶಯದಂತೆ ಆಳುವುದು ಸಾಧ್ಯವಿಲ್ಲದ ವಿಚಾರ. ಸಾಮಾನ್ಯರ ದೈನಂದಿನ ಸವಾಲುಗಳನ್ನು ತನ್ನ ಬುದ್ಧಿವಂತಿಕೆಯಿಂದ ತತ್ವಜ್ಙಾನಿ ಪರಿಹರಿಸಬಲ್ಲ ಎಂಬುದು ನಂಬಲರ್ಹವಾದುದಲ್ಲ. ಹೀಗಾಗಿ ಪ್ಲೇಟೊನ ತತ್ವಜ್ಙಾನಿ ಅರಸು ಪರಿಕಲ್ಪನೆ ಅವಾಸ್ತವಿಕ ಹಾಗೂ ಅವ್ಯವಹಾರಿಕ ಕಲ್ಪನೆ ಎಂಬುದಾಗಿ ಟೀಕಿಸಲ್ಪಟ್ಟಿದೆ.

2. ಸಮರ್ಥ ಆಡಳಿತವನ್ನು ನಿರಿಕ್ಷಿಸಲಾಗದು: ತತ್ವಜ್ಙಾನಿ ಅರಸರಿಗೆ ಸುದೀರ್ಘ ಶಿಕ್ಷಣ ನೀಡುವುದೇನೊ ಸರಿ. ಆದರೆ ಶಿಕ್ಷಣದ ಪಠ್ಯಕ್ರಮದಲ್ಲಿ ರಾಜ್ಯಾಡಳಿತಕ್ಕೆ ಪೂರಕವಾದ ವಿಷಯಗಳನ್ನು ಸೇರಿಸಲಾಗಿಲ್ಲ. ಹಣಕಾಸು, ವಿದೇಶಿ ವ್ಯವಹಾರ, ಯುದ್ಧ ತಂತ್ರಗಳು ಮುಂತಾದ ಆಡಳಿತಾತ್ಮಕ ವಿಚಾರಗಳನ್ನು ತತ್ವಜ್ಙಾನಿಗೆ ಒದಗಿಸುವ ಪ್ರಯತ್ನಗಳಾಗಿಲ್ಲ. ಇದರೊಡನೆ ಆಡಳಿತದಲ್ಲಿನ ಪ್ರಾಯೋಗಿಕ ಸವಾಲುಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಲು ವ್ಯಾಪಕ ಅವಕಾಶಗಳಿಲ್ಲ. ಈ ಹಿನ್ನೆಲೆಯಲ್ಲಿ ತತ್ವಜ್ಙಾನಿ ಅರಸರಿಂದ ಸಮರ್ಥ ಆಡಳಿತದ ನಿರಿಕ್ಷೆಯನ್ನು ಮಾಡಲಾಗದು ಎಂಬುದಾಗಿ ಚಿಂತಕರು ಟೀಕಿಸಿದ್ದಾರೆ.

3. ಸರ್ವಾಧಿಕಾರತ್ವಕ್ಕೆ ಆಸ್ಪದ: ಪ್ಲೇಟೊನ ತತ್ವಜ್ಙಾನಿ ಅರಸು ಆದರ್ಶ ರಾಜ್ಯದ ಸಕಲ ಅಧಿಕಾರಗಳನ್ನು ಪಡೆದಿದ್ದನು. ಆತನ ಅಧಿಕಾರಗಳ ಮೇಲೆ ಯಾವ ಕಾನೂನು ಅಥವ ಸಂಪ್ರದಾಯಗಳ ಮಿತಿಯನ್ನು ಹೇರಲಾಗಿರಲಿಲ್ಲ. ಸದ್ಗುಣ,  ಸಂಪನ್ನನಾದ ತತ್ವಜ್ಙಾನಿ ನಿಸ್ವಾರ್ಥಿಯಾಗಿ ಆಳುವನೆಂಬ ಅತಿಯಾದ ನಂಬಿಕೆಯು ಆತನಿಗೆ ನಿರಂಕುಶಾಧಿಕಾರ ನೀಡಿಕೆಗೆ ಕಾರಣವಾಗಿತ್ತು. ಆದರೆ ಅಧಿಕಾರದ ಕೇಂದ್ರೀಕರಣವು ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬುದಾಗಿ ಹಲವರು ವಿಮರ್ಷಿಸಿದ್ದಾರೆ.

4. ಪ್ರಜಾಪ್ರಭುತ್ವಕ್ಕೆ ವಿರೋಧ: ತತ್ವಜ್ಙಾನಿ ಅರಸು ಪರಿಕಲ್ಪನೆಯನ್ನು ಸಮರ್ಥಿಸಲು ಪ್ಲೇಟೊ (ತತ್ವಜ್ಙಾನಿಗಳೇ ಆಳಬೇಕು ಅಥವಾ ಆಳುವವರು ತತ್ವಜ್ಙಾನ ಬೆಳೆಸಿಕೊಳ್ಳಬೇಕು) ಎಂದು ಅಭಿಪ್ರಾಯಪಟ್ಟಿರುವ. ಇದರಿಂದ ಸಾಮಾನ್ಯ ಪ್ರಜೆಗಳು ಆಡಳಿತದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ಜೊತೆಗೆ ರಾಜಕೀಯವಾಗಿ ಪ್ರಜೆಗಳ ಸಮಾನತೆ ಹಾಗು ಸ್ವಾತಂತ್ರ್ಯಗಳನ್ನು ತತ್ವಜ್ಙಾನಿ ಅರಸು ಪರಿಕಲ್ಪನೆ ಕಸಿದುಕೊಳ್ಳುತ್ತದೆ. ಮುಂದುವರೆದು ತತ್ವಜ್ಙಾನಿ ಅರಸರ ಆಡಳಿತಕ್ಕೆ ಜ್ಙಾನ ಆಧಾರವಾಗಿರುವುದೇ ಹೊರತು ಪ್ರಜೆಗಳ ಇಚ್ಚೆಯಲ್ಲ. ಈ ಹಿನ್ನೆಲೆಯಲ್ಲಿ ತತ್ವಜ್ಙಾನಿ ಅರಸು ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ವಿರೋಧಿ ಎಂದು ಕೆಲವರು ಪರಿಗಣಿಸಿದ್ದಾರೆ.

5. ಮಾನವನ ಸಹಜ ಸ್ವಭಾವದ ಕಡೆಗಣನೆ: ನಿರಂತರ ಶಿಕ್ಷಣದ ನಂತರ ಚಂಚಲ ಮನಸ್ಸುಳ್ಳ ವ್ಯಕ್ತಿ ಆಡಳಿತದಿಂದ ವಿಮುಖನಾಗಬಹುದಾಗಿದೆ. ಜೊತೆಗೆ ಜೀವನದಲ್ಲಿ ಸದಾ ಸ್ವಾತಂತ್ರ್ಯವನ್ನು ಬಯಸುವ ವ್ಯಕ್ತಿಯಿಂದ ಆಸ್ತಿ ಮತ್ತು ಕುಟುಂಬಗಳನ್ನು ಕಸಿದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ಲೇಟೊ ಮಾನವರ ಮಾನವ ಸಹಜ ಗುಣಗಳನ್ನು ಕಡೆಗಣಿಸಿರುವ ಎಂಬುದಾಗಿ  ವಿಮರ್ಷಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...