ಥಾಮಸ್ ಅಕ್ವಿನಾಸ್ನ ಕಾನೂನುಗಳ ವರ್ಗೀಕರಣ ಸಿದ್ಧಾಂತ:
ಪೀಠಿಕೆ: ಮಧ್ಯ ಯುಗದ 13 ನೇ ಶತಮಾನದಲ್ಲಿ ಬದುಕಿದ್ದ ಆಲ್ಬರ್ಟ್ ದಿ ಗ್ರೇಟ್ನು ಅರಿಸ್ಟಾಟಲ್ನ ರಾಜಕೀಯ ಚಿಂತನೆಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಪಾಶ್ಚಿಮಾತ್ಯ ಚಿಂತಕನೆನಿಸಿದ್ದನು. ಈತನ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡ ಥಾಮಸ್ ಅಕ್ವಿನಾಸ್ನು ಸಹಜವಾಗಿ ಅರಿಸ್ಟಾಟಲ್ನ ರಾಜಕೀಯ ವಿಚಾರಗಳಿಂದ ಆಕರ್ಷಿತನಾಗಿದ್ದ. ಈಗಾಗಲೇ ಅರಿಸ್ಟಾಟಲ್ನ ಚಿಂತನೆಗಳ ಅಧ್ಯಯನ ಮಾಡಿದ್ದ ಅಕ್ವಿನಾಸ್ಗೆ ಆಲ್ಬರ್ಟ್ನ ಸಖ್ಯವು ಮತ್ತಷ್ಟು ಆಸಕ್ತಿ ಮತ್ತು ಶ್ರದ್ಧೆಯನ್ನು ಬೆಳೆಸಿತು. ಫಲವಾಗಿ ಅಕ್ವಿನಾಸ್ನು ಅರಿಸ್ಟಾಟಲ್ನ ಚಿಂತನೆಗಳನ್ನು ಕ್ರಿಶ್ಚಿಯನ್ ನಂಬಿಕೆಗಳಿಗೆ ಅನ್ವಯಿಸಿ ತನ್ನದೇ ರಾಜಕೀಯ ಚಿಂತನೆಗಳನ್ನು ಮಂಡಿಸಲು ಪ್ರಯತ್ನಿಸಿದನು. ಅಕ್ವಿನಾಸ್ನ ಚಿಂತನೆಯು ರಾಜಕೀಯ ರಂಗದ ಹಲವು ಪರಿಕಲ್ಪನೆಗಳಿಗೆ ವ್ಯಾಪಿಸಿತ್ತು.
ಜಗತ್ತಿನ ರಾಜಕೀಯ ತತ್ವಶಾಸ್ತ್ರಕ್ಕೆ ಥಾಮಸ್ ಅಕ್ವಿನಾಸ್ನು ನೀಡಿರುವ ಬಹು ಮುಖ್ಯ ಕೊಡುಗೆ ಎಂದರೆ ಆತನ ಕಾನೂನುಗಳ ವರ್ಗೀಕರಣ ಸಿದ್ಧಾಂತ ಎನ್ನಬಹುದು. ಅಕ್ವಿನಾಸ್ನು ಕಾನೂನು ಮತ್ತು ನ್ಯಾಯದ ನಡುವಿನ ಅಂತರ್ಸಂಬಂಧ ಗುರುತಿಸಿದ್ದು ನ್ಯಾಯದ ಸಾಕಾರಕ್ಕೆ ಕಾನೂನು ಅಗತ್ಯವೆಂಬ ನಂಬಿಕೆ ಹೊಂದಿದ್ದನು. ಕಾನೂನುಗಳಿಗೆ ಸಂಬಂಧಿಸಿರುವ ವಿಚಾರಗಳನ್ನು ಅಕ್ವಿನಾಸ್ನು ತನ್ನ ಮೇರು ಕೃತಿಯಾದ ಸುಮ್ಮ ಥಿಯೊಲೊಜಿಕಾದ ಎರಡನೇ ಭಾಗದಲ್ಲಿ ವಿವರಿಸಿದ್ದಾನೆ. ಕಾನೂನಿನ ಅರ್ಥ ಹಾಗೂ ವರ್ಗೀಕರಣ ಕುರಿತಾದ ಅಕ್ವಿನಾಸ್ನ ವಿಚಾರಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
ಕಾನೂನಿನ ಅರ್ಥ: ಥಾಮಸ್ ಅಕ್ವಿನಾಸ್ನ ಪ್ರಕಾರ ಸಮುದಾಯದ ಕಲ್ಯಾಣವನ್ನು ಸಾಧಿಸಲು ಜಾರಿಗೊಂಡಿರುವ ವಿವೇಚನಾಧರಿತ ಆಜ್ಙೆಗಳೇ ಕಾನೂನು. ಆತನ ಅಭಿಪ್ರಾಯದಲ್ಲಿ ಸರ್ವರ ಹಿತರಕ್ಷಣೆಯ ಉದ್ದೇಶವನ್ನುಳ್ಳ ಸಾಮಾಜಿಕ ನಿಯಮಗಳು ಕಾನೂನು ಎನಿಸುತ್ತವೆ. ಕಾನೂನುಗಳು ಜನರು ಪಾಲಿಸಬೇಕಾದ ನಿಯಮಗಳಷ್ಟೇ ಆಗಿರದೇ ಅವರ ಕರ್ತವ್ಯಗಳ ಗುಣಮಟ್ಟದ ಪ್ರತೀಕ ಎಂಬುದು ಅಕ್ವಿನಾಸ್ನ ನಂಬಿಕೆಯಾಗಿತ್ತು. ಜೊತೆಗೆ ವ್ಯಕ್ತಿಗಳ ಸಂತೋಷವನ್ನು ಹೆಚ್ಚಿಸುವ ಮೂಲಕ ಸರ್ವರ ಒಳಿತಿನ ಗುರಿಯನ್ನು ಸಾಧಿಸಲು ಕಾನೂನುಗಳು ನೆರವಾಗಬಲ್ಲವು ಎಂಬ ವಿಚಾರ ಅಕ್ವಿನಾಸ್ನದಾಗಿತ್ತು. ಕಾನೂನು ಮತ್ತು ನ್ಯಾಯ ಅಂತರ್ಸಂಬಂಧವುಳ್ಳ ಪರಿಕಲ್ಪನೆಗಳೆಂದು ಅಕ್ವಿನಾಸ್ನು ಬಲವಾಗಿ ನಂಬಿದ್ದನು. ಮುಂದುವರೆದು ಅಕ್ವಿನಾಸ್ನು ಸಾರ್ವಭೌಮನ ಇಚ್ಛೆಯು ಕಾನೂನುಗಳ ಹಿಂದಿರುವ ಬಲವೆಂದು ಪ್ರತಿಪಾದಿಸಿದ್ದನು. ಹೀಗೆ ಕಾನೂನನ್ನು ಕುರಿತಂತೆ ತನ್ನದೇ ಅರ್ಥ ವಿವರಣೆಯನ್ನು ಥಾಮಸ್ ಅಕ್ವಿನಾಸ್ ನೀಡಿದ್ದನು.
ಕಾನೂನಿನ ವರ್ಗೀಕರಣ: ಥಾಮಸ್ ಅಕ್ವಿನಾಸ್ನು ವಿವಿಧ ಕಾನೂನುಗಳ ಮೂಲ, ಸ್ವರೂಪ ಹಾಗೂ ಪರಿಣಾಮಗಳನ್ನು ತನ್ನ ಚಿಂತನೆಯಲ್ಲಿ ಪ್ರತಿಪಾದಿಸಿರುವನು. ಮುಂದುವರೆದು ಆ ವೈವಿಧ್ಯಮಯ ಕಾನೂನುಗಳ ಸ್ವರೂಪವನ್ನಾಧರಿಸಿ ಕಾನೂನುಗಳ ವರ್ಗೀಕರಣ ಸಿದ್ಧಾಂತ ಮಂಡಿಸಿರುವ. ನಾಲ್ಕು ಬಗೆಯ ಪ್ರಧಾನ ಕಾನೂನುಗಳನ್ನು ಮತ್ತು ಅವುಗಳ ಉಪ ಪ್ರಕಾರಗಳನ್ನು ಅಕ್ವಿನಾಸ್ನ ವರ್ಗೀಕರಣ ಒಳಗೊಂಡಿದೆ. ಪ್ರಸ್ತುತ ನಾಲ್ಕು ಬಗೆಯ ಪ್ರಧಾನ ಕಾನೂನಿನ ಪ್ರಕಾರಗಳನ್ನು ಮಾತ್ರ ಕೆಳಗೆ ಚರ್ಚಿಸಲಾಗಿದೆ.
1. ಶಾಶ್ವತ ಕಾನೂನು: ಥಾಮಸ್ ಅಕ್ವಿನಾಸ್ನ ಪ್ರಕಾರ ಸಮಸ್ತ ಬ್ರಮ್ಹಾಂಡವನ್ನಾಳುವ ಕಾನೂನು ಶಾಶ್ವತ ಕಾನೂನಾಗಿದೆ. ಈ ಬಗೆಯ ಕಾನೂನು ಮಾನವರ ಬುದ್ಧಿಗೆ ನಿಲುಕದ ಅಗೋಚರ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತದೆ ಎಂಬುದು ಅಕ್ವಿನಾಸ್ನ ಅಭಿಪ್ರಾಯವಾಗಿತ್ತು. ಶಾಶ್ವತ ಕಾನೂನು ಜೈವಿಕ ಮತ್ತು ಅಜೈವಿಕ ಸಾಮ್ರಾಜ್ಯವನ್ನು ವ್ಯಾಪಿಸಿರುವ ಸಮಗ್ರ ಪರಿಕಲ್ಪನೆಯಾಗಿದೆ ಎಂಬುದಾಗಿ ಅಕ್ವಿನಾಸ್ನು ನಂಬಿದ್ದನು. ಆತನ ಪ್ರಕಾರ ಶಾಶ್ವತ ಕಾನೂನಿನ ಪರಿಣಾಮಗಳು ವಿವೇಚನಾ ಸಾಮರ್ಥ್ಯವನ್ನುಳ್ಳ ಮಾನವ, ವಿವೇಚಣಾ ಸಾಮರ್ಥ್ಯವನ್ನು ಹೊಂದಿರದ ಪ್ರಾಣಿ ಹಾಗೂ ಜಡತ್ವದಿಂದ ಕೂಡಿರುವ ಅಜೈವಿಕ ವಸ್ತುಗಳಿಗೂ ಸಮಾನವಾಗಿ ಅನ್ವಯವಾಗುತ್ತವೆ. ಉದಾ: ನಿರ್ದಿಷ್ಟ ಸಮಯದ ಬಳಿಕ ಅವಸಾನ ಎಂಬ ನಿಯಮಕ್ಕೆ ಮಾನವ, ಪ್ರಾಣಿ ಹಾಗೂ ಅಜೈವಿಕ ಕಲ್ಲು, ಮಣ್ಣು, ಬೆಟ್ಟ ಮುಂತಾದವು ಒಳಪಟ್ಟಿರುವುದು. ಗಮನಾರ್ಹ ಅಂಶವೇನೆಂದರೆ ಸತ್ಯವನ್ನಾಧರಿಸಿರುವ ಶಾಶ್ವತ ಕಾನೂನು ತನ್ನದೇ ಕಾರಣಗಳಿಂದ ಗುರುತಿಸಲ್ಪಡುತ್ತದೆ. ಇದರೊಡನೆ ಶಾಶ್ವತ ಕಾನೂನು ಎಂಬುದು ಸರ್ವ ವ್ಯಾಪಿ ಹಾಗೂ ಸಾರ್ವಕಾಲಿಕ ಸ್ವರೂಪದ ದೈವಿಕ ಯೋಜನೆಯಾಗಿದ್ದು ಸೃಷ್ಟಿಯನ್ನೆಲ್ಲ ಆವರಿಸಿಕೊಂಡಿರುತ್ತದೆ. ಉದಾ: ಗ್ರಹಗಳ ಚಲನೆ, ಸೂರ್ಯ ಹಾಗೂ ಚಂದ್ರ ಗ್ರಹಣ, ಭೂಮಿಯ ಗುರುತ್ವಾಕರ್ಷಣೆ, ಜೀವಿಗಳ ಖಚಿತ ಅವಸಾನ ಇತ್ಯಾದಿಗಳು.
ಅಕ್ವಿನಾಸ್ ಪ್ರತಿಪಾದಿಸಿರುವ ಶಾಶ್ವತ ಕಾನೂನು ಉಳಿದೆಲ್ಲ ಕಾನೂನುಗಳನ್ನು ಪ್ರಭಾವಿಸುತ್ತದೆ. ಇಂದಿಗೂ ಶಾಶ್ವತ ಕಾನೂನಿನ ಕುರುಹುಗಳು ಅಸ್ತಿತ್ವದಲ್ಲಿದ್ದು ಅದನ್ನು ಬದಲಾಯಿಸಲು ಮಾನವನಿಗೆ ಸಾಧ್ಯವಾಗಿಲ್ಲ. ಸಮಕಾಲಿನ ವಿಜ್ಙಾನ ಮತ್ತು ತಂತ್ರಜ್ಙಾನವೂ ಸಹ ಈ ಕಾನೂನುಗಳ ಮೇಲೆ ಹಿಡಿತ ಹೊಂದಲು ಯಶಸ್ವಿಯಾಗದಿರುವುದು ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಅಕ್ವಿನಾಸ್ನ ಚಿಂತನೆ ಮಹತ್ವ ಪಡೆದಿದೆ ಎಂದರೆ ತಪ್ಪಾಗಲಾರದು.
2. ಸ್ವಾಭಾವಿಕ ಕಾನೂನು: ಸ್ವಾಭಾವಿಕ ಕಾನೂನು ಮಾನವರ ಹೃದಯದಲ್ಲಿ ಸ್ಥಾನ ಗಳಿಸಿಕೊಂಡ ನಿಯಮಗಳಾಗಿರುತ್ತವೆ ಎಂಬುದು ಅಕ್ವಿನಾಸ್ನ ಪ್ರತಿಪಾದನೆಯಾಗಿತ್ತು. ಮಾನವರಲ್ಲಿನ ದೈವಿಕ ನಂಬಿಕೆಗಳ ಕಾರಣದ ಪರಿಣಾಮ ಈ ಬಗೆಯ ಕಾಯಿದೆಗಳು ಅಸ್ತಿತ್ವಕ್ಕೆ ಬಂದಿರುತ್ತವೆ ಎಂದು ಆತ ಬಲವಾಗಿ ನಂಬಿದ್ದ. ಆದ್ದರಿಂದಲೇ ಥಾಮಸ್ ಅಕ್ವಿನಾಸ್ನು (ಮಾನವರ ವಿಚಾರ ಹಾಗೂ ವರ್ತನೆಗಳಲ್ಲಿ ಪರಿವರ್ತನೆ ತರಬಲ್ಲ ದೈವಿಕ ಪ್ರೇರಣೆಯೇ ಸ್ವಾಭಾವಿಕ ಕಾನೂನು) ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನು. ಆತನ ಪ್ರಕಾರ ಸ್ವಾಭಾವಿಕ ಕಾನೂನುಗಳು ಜನರು ಸದ್ಗುಣಗಳನ್ನು ಬೆಳೆಸಿಕೊಳ್ಳಲು ಕಾರಣವಾಗುತ್ತವೆ. ಜೊತೆಗೆ ಕೆಟ್ಟದ್ದನ್ನು ಒಳ್ಳೆಯದರಿಂದ ಪ್ರತ್ಯೇಕಿಸಲು ನೆರವಾಗುತ್ತವೆ. ಅಲ್ಲದೇ ಮಾನವರು ಕೆಟ್ಟದ್ದರಿಂದ ದೂರವಿರಲು ಮತ್ತು ಒಳ್ಳೆಯದನ್ನು ಅಳವಡಿಸಿಕೊಳ್ಳಲು ಮುಂದಾಗುವಂತೆ ಸ್ವಾಭಾವಿಕ ಕಾನೂನುಗಳು ಪ್ರೋತ್ಸಾಹಿಸುತ್ತವೆ.
ಸ್ವಾಭಾವಿಕ ಕಾನೂನುಗಳು ಮಾನವರು ಸಮಾಜದಲ್ಲಿನ ಇತರ ಮಾನವರೊಡನೆ ಸಂಗ ಜೀವನ ನಡೆಸಲು ಸಹಕಾರಿಯಾಗುತ್ತವೆ. ಇದರೊಡನೆ ಸ್ವಾರ್ಥವನ್ನು ತ್ಯಜಿಸಿ ಸಮುದಾಯದ ಸಮಗ್ರ ಕಲ್ಯಾಣವನ್ನು ಬಯಸುವ ಪ್ರವೃತ್ತಿಯನ್ನು ಮಾನವರಲ್ಲಿ ಮೂಡಿಸುತ್ತವೆ. ಈ ನಿಟ್ಟಿನಲ್ಲಿ ಮಾನವರಲ್ಲಿನ ಪರೋಪಕಾರ, ಅನುಕಂಪ, ನಿಸ್ವಾರ್ಥ, ಹೊಂದಾಣಿಕೆಯಂತಹ ಗುಣಗಳು ಸ್ವಾಭಾವಿಕ ಕಾನೂನುಗಳ ಆಧಾರವಾಗಿರುತ್ತವೆ. ಮೇಲ್ನೋಟಕ್ಕೆ ಪ್ರಸ್ತುತ ಸಮಾಜದಲ್ಲಿ ಜಾರಿಯಲ್ಲಿರುವ ಸಕಾರಾತ್ಮಕ ನೈತಿಕ ನಿಯಮಗಳು ಅಕ್ವಿನಾಸ್ನ ಸ್ವಾಭಾವಿಕ ಕಾನೂನುಗಳನ್ನು ಹೋಲುತ್ತವೆ. ಉದಾ: ಪೋಷಕರು ಶೈಶವದಲ್ಲಿ ಮಕ್ಕಳನ್ನು ಸಂರಕ್ಷಿಸಬೇಕು, ವೃದ್ಧ ಪೋಷಕರನ್ನು ಮಕ್ಕಳು ನೋಡಿಕೊಳ್ಳಬೇಕು, ಹಸಿದವರಿಗೆ ಅನ್ನಾಹಾರ ಒದಗಿಸಬೇಕು, ದುರ್ಬಲರಿಗೆ ಅಗತ್ಯ ನೆರವನ್ನು ಒದಗಿಸಬೇಕು ಮುಂತಾದ ಸಮಾಜದಲ್ಲಿನ ನಿಯಮಗಳು ಅಕ್ವಿನಾಸ್ನ ಸ್ವಾಭಾವಿಕ ಕಾನೂನನ್ನು ಪ್ರತಿನಿಧಿಸುತ್ತವೆ. ಏಕೆಂದರೆ ಮಕ್ಕಳು, ವೃದ್ಧರು, ಹಸಿದವರು, ದುರ್ಬಲರು ಸ್ವಾಭಾವಿಕವಾಗಿ ಇತರರನ್ನು ಅವಲಂಬಿಸಿರುತ್ತಾರೆ.
3. ದೈವಿಕ ಕಾನೂನು: ನಿಯಂತ್ರಣದ ರೂಪದಲ್ಲಿ ದೇವರ ಾಜ್ಙೆಗಳಿಂದ ಹೊರ ಹೊಮ್ಮುವ ಕಾನೂನುಗಳೇ ದೈವಿಕ ಕಾನೂನು ಎಂಬುದಾಗಿ ಅಕ್ವಿನಾಸ್ ವಿವರಿಸಿದ್ದನು. ಈ ಬಗೆಯ ಕಾನೂನು ಮನುಕುಲಕ್ಕೆ ದೇವರ ಕೊಡುಗೆಯೇ ಹೊರತು ಸ್ವಾಭಾವಿಕ ಕಾರಣಗಳ ಫಲವಲ್ಲ ಎಂಬುದು
ಆತನ ವಾದವಾಗಿತ್ತು. ಮಾನವರಲ್ಲಿ ನೈತಿಕತೆ, ಮೌಲ್ಯಗಳು ಮತ್ತು ಶ್ರದ್ಧೆಯನ್ನು ಬೆಳೆಸುವುದು ದೈವಿಕ ಕಾನೂನುಗಳ ಉದ್ದೇಶವಾಗಿರುತ್ತವೆ. ಗಮನಾರ್ಹ ಅಂಶವೇನೆಂದರೆ ದೈವಿಕ ಕಾನೂನುಗಳು ಮಾನವ ಸಮಾಜದಲ್ಲಿ ಶಾಶ್ವತ ಶಾಂತಿಯನ್ನು ನೆಲೆಗೊಳಿಸುವ ಉದ್ದೇಶ ಹೊಂದಿರುತ್ತವೆ. ಈ ಕಾನೂನುಗಳು ತನ್ನ ಭಕ್ತರಿಗೆ ದೇವರು ನೀಡಿರುವ ನಿರ್ದೇಶನಗಳ ರೂಪದಲ್ಲಿ ಅಸ್ತಿತ್ವದಲ್ಲಿರುತ್ತವೆ. ದೇವರ ಶಾಪ ಅಥವಾ ಕೋಪಕ್ಕೆ ಕಾರಣವಾಗಬಹುದೆಂಬ ನಂಬಿಕೆಯಿಂದ ಇವುಗಳ ಉಲ್ಲಂಘನೆಯು ಅತ್ಯಂತ ವಿರಳವಾಗಿರುತ್ತದೆ. ದೈವಿಕ ಕಾನೂನುಗಳು ಸಮುದಾಯದಿಂದ ಸಮುದಾಯಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತವೆ. ಉದಾ: ಯಹೂದಿಗಳಿಗೆ ಅನ್ವಯವಾಗುವ ದೈವಿಕ ಕಾನೂನುಗಳು ಕ್ರಿಶ್ಚಿಯನ್ನರಿಗೆ ಅನ್ವಯವಾಗದಿರುವುದು, ಮೋಕ್ಷ ಸಾಧನೆಗೆ ಹಿಂದೂಗಳಲ್ಲಿ ಜ್ಙಾನ, ಭಕ್ತಿ ಅಥವಾ ಕರ್ಮ ಮಾರ್ಗಗಳ ಪಾಲನೆ ಇತ್ಯಾದಿ.
ವಾಸ್ತವದಲ್ಲಿ ದೈವಿಕ ಕಾನೂನು ದೈವಾಂಶ ಸಂಭೂತರು ಅಂದರೆ ಧಾರ್ಮಿಕ ಮುಖಂಡರು ಅಥವಾ ಪ್ರವಾದಿಗಳು ನೀಡಿರುವ ನಿಯಮಗಳಾಗಿವೆ. ಸಾಮಾನ್ಯರು ಪ್ರತ್ಯಕ್ಷವಾಗಿ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಿಲ್ಲವಾಗಿದ್ದು ದೇವರ ಪ್ರತಿನಿಧಿಗಳಾದ ಇವರಲ್ಲಿ ದೇವರನ್ನು ಕಾಣುತ್ತಾರೆ. ಹೀಗಾಗಿ ದೇವರ ಪ್ರತಿರೂಪದಂತಿರುವ ದೇವ ಮಾನವರ ಉಪದೇಶಗಳನ್ನು ದೈವಿಕ ಕಾನೂನಿನಂತೆ ಭಾವಿಸಿ ಪಾಲಿಸುತ್ತಾರೆ. ಉದಾ: ಲಿಂಗ ದೀಕ್ಷೆ, ಸಲ್ಲೇಖನ ವೃತಾಚರಣೆ, ಇತ್ಯಾದಿ.
4. ಮಾನವ ಕಾನೂನು: ಕಾಲಾನುಕ್ರಮದಲ್ಲಿ ರೂಢಿ ಹಾಗೂ ಸಂಪ್ರದಾಯಗಳ ರೂಪದಲ್ಲಿ ಮಾನವರು ಪಾಲಿಸಲು ಮುಂದಾಗಿರುವ ಕಾನೂನುಗಳೇ ಮಾನವ ಕಾನೂನಾಗಿವೆ. ಈ ಬಗೆಯ ಕಾನೂನುಗಳು ಮಾನವರ ಬುದ್ಧಿ ಶಕ್ತಿಯ ನೆರಳಿನಲ್ಲಿ ರಚನೆಗೊಂಡಿರುತ್ತವೆ. ಅಕ್ವಿನಾಸ್ ಹೇಳುವಂತೆ ಮಾನವ ಕಾಯಿದೆಗಳನ್ನು ಆಳುವ ಅರಸರು ರಚಿಸಿರಬಹುದಾಗಿದೆ. ಈ ಕಾನೂನು ವೈಯಕ್ತಿಕ ಅಥವಾ ಸಾಮೂಹಿಕ ಕಲ್ಯಾಣದ ಗುರಿಯನ್ನು ಪ್ರತಿನಿಧಿಸುತ್ತವೆ. ಸಾಮಾನ್ಯವಾಗಿ ಮಾನವ ಕಾನೂನುಗಳು ಮಾನವರ ಹಿತಾಸಕ್ತಿಗೆ ವಿರುದ್ಧವಾಗಿರುವುದಿಲ್ಲ. ಈ ಕಾಯಿದೆಗಳು ಸ್ವಾಭಾವಿಕ ಕಾನೂನುಗಳನ್ನು ಆಧರಿಸಿದ್ದು ಅವುಗಳಿಗೆ ಅಧೀನವಾಗಿರುತ್ತವೆ ಎಂಬಂಶವನ್ನು ಅಕ್ವಿನಾಸ್ ಪ್ರತಿಪಾದಿಸಿದ್ದನು.
ಮಾನವ ಕಾನೂನುಗಳ ಉಲ್ಲಂಘನೆಗೆ ನಿರ್ದಿಷ್ಟ ಶಿಕ್ಷೆ ನೀಡಲಾಗುತ್ತದೆ. ಸಮಾಜದಲ್ಲಿ ನಾಗರಿಕ ಜೀವನ ನಡೆಸಲು ಮಾನವ ನಿರ್ಮಿತ ಕಾನೂನುಗಳು ಸಹಕಾರಿಯಾಗಿರುತ್ತವೆ. ಉದಾ: ಇತರರನ್ನು ಹಿಂಸಿಸದಿರುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಪರಿಸರವನ್ನು ಕಾಪಾಡುವುದು, ಅಮಾನುಷ ಆಚರಣೆಗಳನ್ನು ಪಾಲಿಸದಿರುವುದು ಇತ್ಯಾದಿ ಕಾನೂನುಗಳು ಮಾನವ ಕಾನೂನುಗಳಾಗಿವೆ. ಗಮನಾರ್ಹ ಅಂಶವೇನೆಂದರೆ ಮಾನವ ಕಾನೂನುಗಳು ಸಕಾರಾತ್ಮಕ ಮತ್ತು ಹೆಚ್ಚಾಗಿ ನಕಾರಾತ್ಮಕ ಸ್ವರೂಪವನ್ನು ಪಡೆದಿರುತ್ತವೆ.
ಅಕ್ವಿನಾಸ್ನ ಪ್ರಕಾರ ನ್ಯಾಯವು ಮೇಲೆ ತಿಳಿಸಲಾದ ಪ್ರತಿಯೊಂದು ಕಾನೂನುಗಳ ಉದ್ದೇಶವಾಗಿತ್ತು. ನ್ಯಾಯವು ಕಾನೂನುಗಳ ನೆರವಿನಿಂದ ಅಸ್ತಿತ್ವಕ್ಕೆ ಬರುವ ಪರಿಕಲ್ಪನೆ ಎಂಬ ಅಕ್ವಿನಾಸ್ನ ವಿಚಾರ ಕಾನೂನುಗಳ ವರ್ಗೀಕರಣ ಸಿದ್ಧಾಂತದಿಂದ ಸ್ಪಷ್ಟವಾಗುತ್ತದೆ.. ಜೊತೆಗೆ ಅಕ್ವಿನಾಸ್ ಅರಿಸ್ಟಾಟಲ್ನಂತೆ ಕಾನೂನು ಶಾಶ್ವತ ಸ್ವರೂಪದ್ದಾಗಿದ್ದು ಸರ್ವರಿಗೂ ಯೋಗ್ಯವಾದುದನ್ನು ಒದಗಿಸಬಲ್ಲ ಅಂಶವೆಂದು ಬಲವಾಗಿ ನಂಬಿದುದು ಗೋಚರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯ ಅಂತರ್ಸಂಬಂಧವನ್ನುಳ್ಳ ಮತ್ತು ಪರಸ್ಪರಾವಲಂಬಿಯಾಗಿರುವ ಪರಿಕಲ್ಪನೆಗಳೆಂದು ಅಕ್ವಿನಾಸ್ ಪ್ರತಿಪಾದನೆ ನಂಬಲರ್ಹ ಎನಿಸುತ್ತದೆ. ಒಟ್ಟಾರೆ ಅಕ್ವಿನಾಸ್ ತನ್ನ ಕಾನೂನಿನ ವರ್ಗೀಕರಣ ಸಿದ್ಧಾಂತವನ್ನು ಮಂಡಿಸಿ ಜಗತ್ತಿನ ರಾಜಕೀಯ ಚಿಂತನೆಯಲ್ಲಿ ತನ್ನದೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿರುವನು..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ