ಮಂಗಳವಾರ, ಮೇ 4, 2021

[III.] ಸಂವಿಧಾನ ರಚನಾ ಸಭೆಯ ಸ್ವರೂಪ: ಜಗತ್ತಿನ ಸುದೀರ್ಘ ಸಂವಿಧಾನ ರಚನೆಗೆ ಭಾರತ ಸಂವಿಧಾನ ರಚನಾ ಸಭೆ ಶ್ರಮಿಸಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಿದ ಸಂವಿಧಾನ ರಚನಾ ಸಭೆಯು ಹಲವು ವಿಶೇಷತೆಗಳಿಂದ ಕೂಡಿತ್ತು. ಆ ವಿಶೇಷತೆಗಳ ನೆರಳಿನಲ್ಲಿ ಸಂವಿಧಾನ ರಚನಾ ಸಭೆಯ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ.

[1. ಕಾರ್ಯಾರಂಭ: ಸಂವಿಧಾನ ರಚನಾ ಸಭೆಯು 9 ಡಿಸೆಂಬರ್ 1946 ಸೋಮವಾರ ಬೆಳಿಗ್ಗೆ  11 ಗಂಟೆಗೆ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಮೊದಲ ಅಧಿವೇಶನ ಸೇರಿತು. ಮುಸ್ಲೀಮ್ ಲೀಗ್ ಸದಸ್ಯರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ ಸಂವಿಧಾನ ರಚನಾ ಸಭೆಗೆ ಹಾಜರಾಗಲಿಲ್ಲ. ಮೊದಲ ದಿನ ೊಟ್ಟು 207 ಸದಸ್ಯರು ಹಾಜರಾಗಿದ್ದರು. ಫ್ರಾನ್ಸ್ ಸಂಪ್ರದಾಯದಂತೆ ಸಭೆಯ ಹಿರಿಯ ಸದಸ್ಯರಾದ ಸತ್ಚಿದಾನಂದ ಸಿನ್ಹಾರನ್ನು ಹಂಗಾಮಿ ಅಧ್ಯಕ್ಷತೆ ವಹಿಸಿಕೊಳ್ಳಲು ಜೆ. ಬಿ. ಕೃಪಲಾನಿ ಆಹ್ವಾನಿಸಿದರು. 11 ಡಿಸೆಂಬರ್ 1946 ರಂದು ಸಂವಿಧಾನ ರಚನಾ ಸಭೆಯ ಸದಸ್ಯರು ಡಾ. ಬಾಬು ರಾಜೇಂದ್ರ ಪ್ರಸಾದರನ್ನು ಖಾಯಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು. ಅಲ್ಲದೇ ಎಚ್. ಸಿ. ಮುಖರ್ಜಿ ಹಾಗೂ ವ್ಹಿ. ಟಿ. ಕೃಷ್ಣಮಾಚಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಜೊತೆಗೆ ಸಂವಿಧಾನ ರಚನಾ ಸಭೆಯ ಸದಸ್ಯನಲ್ಲದ ಕನ್ನಡಿಗ ಬಿ. ಎನ್. ರಾವ್ ಸಂವಿಧಾನಾತ್ಮಕ ಸಲಹೆಗಾರರಾಗಿ ನೇಮಕಗೊಂಡರು.

2. ಧ್ಯೇಯಗಳ ನಿರ್ಣಯದ ಮಂಡನೆ: 13 ಡಿಸೆಂಬರ್ 1946 ರಂದು ಜವಾಹರಲಾಲ್ ನೆಹರು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸ್ವಾಯತ್ತ ಪ್ರಾಂತ್ಯಗಳಿಂದ ಕೂಡಿದ ೊಕ್ಕೂಟ, ಜನತಾ ಪರಮಾಧಿಕಾರ, ವಿವಿಧ ವರ್ಗಗಳಿಗೆ ಹಕ್ಕುಗಳ ಭರವಸೆ, ಮನುಕುಲದ ಕಲ್ಯಾಣ, ದೇಶದ ಸಾರ್ವಬೌಮತ್ವ ಹಾಗೂ ಐಖ್ಯತೆಯನ್ನು ಪ್ರತಿಪಾದಿಸಿತು. ಸರಳವಾಗಿ ಸಂವಿಧಾನ ರಚನಾ ಸಭೆಯು ಸಾಧಿಸಬೇಕಾದ ಗುರಿಗಳು, ಸಂವಿಧಾನ ೊಳಗೊಳ್ಳಬೇಕಾದ ತತ್ವಾದರ್ಶಗಳು ಹಾಗೂ ಸಂವಿಧಾನ ರಚನಾ ಸಭೆಯ ಕಾರ್ಯವ್ಯಾಪ್ತಿಯ ಮೇಲೆ ಬೆಳಕು ಚೆಲ್ಲಿತು. ನೆಹರೂ ಮಂಡಿಸಿದ ಧ್ಯೇಯಗಳ ನಿರ್ಣಯ ಕುರಿತು ಸಂವಿಧಾನ ರಚನಾ ಸಭೆಯ ಸದಸ್ಯರು ಸುದೀರ್ಘ ಚರ್ಚೆ ನಡೆಸಿ 22 ಜನೇವರಿ 1947 ರಂದು ನಿರ್ಣಯವನ್ನು ಅಂಗೀಕರಿಸಿದರು.

3. ಸಮೀತಿಗಳ ರಚನೆ: ಸಂವಿಧಾನ ರಚನಾ ಸಭೆಯು ಪ್ರಮುಖ ವಿಚಾರಗಳ ಕುರಿತು ತೀರ್ಮಾನ ಕೈಗೊಳ್ಳಲು ವಿವಿಧ ಸಮೀತಿಗಳನ್ನು ರಚಿಸಿತು. 22 ಪ್ರಧಾನ ಹಾಗು 5 ಉಪ ಸಮೀತಿಗಳು ತಮಗೆ ಸೂಚಿತ ವಿಷಯದಲ್ಲಿ ವರದಿಯನ್ನು ತಯಾರಿಸಿ ಸಲ್ಲಿಸಬೇಕಿತ್ತು. ಎಲ್ಲ ಸಮೀತಿಗಳು ಫೇಬ್ರವರಿ ಮತ್ತು ಆಗಸ್ಟ್ 1947 ರವರೆಗೆ ತಮ್ಮ ವರದಿ ಸಲ್ಲಿಸಿದವು. ಪ್ರಮುಖ ಸಂವಿಧಾನ ರಚನಾ ಸಭೆಯ ಸಮೀತಿಗಳು ಹಾಗು ಅವುಗಳ ಅಧ್ಯಕ್ಷರ ವಿವರ ಕೆಳಗಿನಂತಿವೆ.
[* ಆಡ್ಹಾಕ್ ಕಮೀಟಿ ಆನ್ ನ್ಯಾಷನಲ್ ಫ್ಲಾಗ್, ಸ್ಟೀರಿಂಗ್ ಕಮೀಟಿ, ಫೈನಾನ್ಸ್ ಆಯಂಡ್ ಸ್ಟ್ಯಾಫ್ ಕಮೀಟಿ, ಕಮೀಟಿ ಆನ್ ದಿ ರೂಲ್ಸ್ ಆಫ್ ಪ್ರೊಸೀಜರ್: ಅಧ್ಯಕ್ಷತೆ ಬಾಬೂ ರಾಜೇಂದ್ರ ಪ್ರಸಾದ್.
* ಯೂನಿಯನ್ ಪವರ್ಸ್ ಕಮೀಟಿ, ಯೂನಿಯನ್ ಕಾನ್ಸ್ಟಿಟ್ಯೂಷನ್ ಕಮೀಟಿ, ಸ್ಟೇಟ್ಸ್ ಕಮೀಟಿ  ಅಧ್ಯಕ್ಷತೆ ಜವಾಹರಲಾಲ್ ನೆಹರು.
* ಅಡ್ವಾಯ್ಜರಿ ಕಮೀಟಿ ಆನ್ ಫಂಡಮೆಂಟಲ್ ರೈಟ್ಸ್, ಮೈನಾರಿಟಿಸ್, ಟ್ರೈಬಲ್ಸ್ ಾಯ್ಂಡ್ ಎಕ್ಸಕ್ಲುಡೆಡ್ ಏರಿಯಾಸ್ ಅಧ್ಯಕ್ಷತೆ ಸರ್ದಾರ್ ಪಟೇಲ್.
* ಫಂಡಮೆಂಟಲ್ ರೈಟ್ಸ್ ಸಬ್ ಕಮೀಟಿ ಅಧ್ಯಕ್ಷತೆ ಜೆ. ಬಿ. ಕೃಪಲಾನಿ.
* ಮೈನಾರಿಟಿಸ್ ಸಬ್ ಕಮೀಟಿ  ಅಧ್ಯಕ್ಷತೆ ಎಚ್ ಸಿ. ಮುಖರ್ಜಿ.
* ನಾರ್ತ್ ಈಸ್ಟ್ ಫ್ರಂಟಿಯರ್ ಟ್ರೈಬಲ್ ಏರಿಯಾಸ್, ಅಸ್ಸಾಂ ಎಕ್ಸ್ಕ್ಲುಡೆಡ್ ಏರಿಯಾ ಆಯ್ಂಡ್ ಪಾರ್ಶಲಿ ಎಕ್ಸ್ಕ್ಲುಡೆಡ್ ಏರಿಯಾಸ್ ಸಬ್ ಕಮೀಟಿ ಅಧ್ಯಕ್ಷತೆ ಗೋಪಿನಾಥ್ ಬಾರ್ಡೊಲಿ.
* ಎಕ್ಸ್ಕ್ಲುಡೆಡ್ ಆಯ್ಂಡ್ ಪಾರ್ಶಲಿ ಎಕ್ಸ್ಕ್ಲುಡೆಡ್ ಏರಿಯಾಸ್ [ಅದರ್ ದ್ಯಾನ್ ದೋಜ್ ಇನ್ ಅಸ್ಸಾಂ] ಸಬ್ ಕಮೀಟಿ ಅಧ್ಯಕ್ಷತೆ ಎ. ವ್ಹಿ. ಠಾಕೂರ್
* ಕ್ರಿಡೆನ್ಶಿಯಲ್ ಕಮೀಟಿ ಅಧ್ಯಕ್ಷತೆ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್.
* ಹೌಸ್ ಕಮೀಟಿ ಅಧ್ಯಕ್ಷತೆ ಬಿ. ಪಟ್ಟಾಬಿ ಸೀತಾರಾಮಯ್ಯಾ.
* ಆರ್ಡರ್ ಆಫ್ ಬಿಜ್ನೆಸ್ಸ್ ಕಮೀಟಿ ಅಧ್ಯಕ್ಷತೆ ಕೆ. ಎಂ. ಮುನ್ಶಿ
* ಕಮೀಟಿ ಆನ್ ದಿ ಫಂಕ್ಷನ್ಸ್ ಆಫ್ ದಿ ಕನ್ಸಿಸ್ಟುಯಂಟ್ ಅಸೆಂಬ್ಲಿ ಅಧ್ಯಕ್ಷತೆ ಜಿ. ವ್ಹಿ. ಮಾವಳಂಕರ್.
* ಡ್ರಾಫ್ಟಿಂಗ್ ಕಮೀಟಿ ಅಧ್ಯಕ್ಷತೆ ಬಿ. ಆರ್. ಅಂಬೇಡ್ಕರ್

4. ದೇಶ ವಿಭಜನೆ ಹಾಗೂ ಪುನರ್ರಚನೆ: ಸಂವಿಧಾನ ರಚನಾ ಸಭೆ ಕಾರ್ಯಾಚರಿಸುತ್ತಿರುವ  ನಡುವೆಯೇ 3 ಜೂನ್ 1947 ರ ಮೌಂಟ್ ಬ್ಯಾಟನ್ ಯೋಜನೆಯಂತೆ ಭಾರತವು ಭಾರತ ಮತ್ತು ಪಾಕಿಸ್ತಾನ ಎಂಬುದಾಗಿ ವಿಭಜನೆಗೊಂಡಿತು. 26 ಜುಲೈ 1947 ರಂದು ಭಾರತದಂತೆ ಪಾಕಿಸ್ತಾನಕ್ಕೆ ಪ್ರತ್ಯೇಕವಾದ ಸಂವಿಧಾನ ರಚನಾ ಸಭೆ ಹೊಂದಲು ಅವಕಾಶ ದೊರೆಯಿತು. ಮುಸ್ಲೀಮ್ ಪ್ರಾಬಲ್ಯದ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಬೇಕಾದ್ದರಿಂದ ಾ ಪ್ರದೇಶಗಳ ಸ್ಥಾನಗಳು ಸಂವಿಧಾನ ರಚನಾ ಸಭೆಯಲ್ಲಿ ಕಡಿತಗೊಂಡವು. ಹೀಗಾಗಿ ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖೆ 389 ರಿಂದ 299ಕ್ಕೆ ಸೀಮಿತವಾಯಿತು. 299 ಸದಸ್ಯರ ಪೈಕಿ ಬ್ರಿಟಿಷ್ ಪ್ರಾಂತ್ಯಗಳಿಂದ 229 ಹಾಗೂ ದೇಶೀಯ ಸಂಸ್ಥಾನಗಳಿಂದ 70 ಸದಸ್ಯರು ಸಂವಿಧಾನ ರಚನಾ ಸಭೆಯಲ್ಲಿ ಉಳಿದುಕೊಂಡರು. ಗಮನಿಸಬೇಕಾದ ಅಂಶವೇನೆಂದರೆ ಅಂಬೇಡ್ಕರರು ಮುಸ್ಲೀಮ್ ಲೀಗ್ ಅಧಿಕಾರದಲ್ಲಿದ್ದ ಅವಿಭಜಿತ ಬಂಗಾಳ ಪ್ರಾಂತ್ಯದಿಂದ ಾರಂಭದಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಗೊಂಡಿದ್ದರು. ಆದರೆ ಅವರು ಆಯ್ಕೆಯಾಗಿದ್ದ ಜೆಸ್ಸೊರ್ ಹಾಗೂ ಕುಲ್ನಾ ಕ್ಷೇತ್ರ ದೇಶ ವಿಭಜನೆಯಿಂದ ಪಾಕಿಸ್ತಾನಕ್ಕೆ ಸೇರಿದ ಕಾರಣ ಅಂಬೇಡ್ಕರ್ ರಾಜೀನಾಮೆ ನೀಡಿದರು. ಬಳಿಕ ೆಂ. ಆರ್. ಜಯಕರ್ ಸ್ಥಾನ ತೆರವುಗೊಳಿಸಿ ಬಾಂಬೆ ಪ್ರಾಂತ್ಯದಿಂದ ಜುಲೈ 1947 ರಲ್ಲಿ ಸಂವಿಧಾನ ರಚನಾ ಸಭೆಗೆ ಮರು ಆಯ್ಕೆಯಾದರು. ೊಟ್ಟಾರೆ ದೇಶ ವಿಭಜನೆಯ ಬಳಿಕ 12 ಬ್ರಿಟಿಷ್ ಪ್ರಾಂತ್ಯಗಳು 229 ಮತ್ತು 29 ದೇಶೀಯ ಸಂಸ್ಥಾನಗಳು 70 ಸ್ಥಾನಗಳನ್ನು ಪ್ರತಿನಿಧಿಸುತ್ತಿದ್ದು 31 ಡಿಸೆಂಬರ್, 1947 ರಲ್ಲಿದ್ದಂತೆ ಭಾರತೀಯ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆಯನ್ನು ಈ ಕೆಳಗೆ ನೀಡಲಾಗಿದೆ.
ಬ್ರಿಟಿಷ್ ಪ್ರಾಂತ್ಯಗಳು ಹಾಗು ಅವುಗಳ ಸದಸ್ಯರ,  ಸಂಖೆ
1. ಮದ್ರಾಸ್ - 49
2. ಬಾಂಬೇ - 21
3. ಪಸ್ಚಿಮ ಬಂಗಾಳ - 19
4. ಯುನೈಟೆಡ್ ಪ್ರಾವಿನ್ಸ್ಸ್ - 55
5. ಪೂರ್ವ ಪಂಜಾಬ್ - 12
6. ಬಿಹಾರ್ - 36
7. C.P. and Berar - 17 
8. ಅಸ್ಸಾಂ - 8
9. ಒರಿಸ್ಸಾ - 9
10. ದೆಹಲಿ - 1
11. ಅಜ್ಮೀರ್ ಹಾಗು ಮೇರ್ವಾರ - 1
12. ಕೂರ್ಗ್ - 1
ದೇಶೀಯ ಸಂಸ್ಥಾನಗಳು ಮತ್ತು ಅವುಗಳ ಸದಸ್ಯರ ಸಂಖೆ
1. ಆಳ್ವಾರ್ - 1
2. ಬರೋಡಾ - 3
3. ಭೋಪಾಲ್ - 1
4. ಬಿಕನೇರ್ - 1
5. ಕೊಚ್ಚಿನ್ - 1
6. ಗ್ವಾಲಿಯರ್ - 4
7. ಇಂಧೋರ್ - 1
8. ಜಯ್ಪುರ್ - 3
9. ಜೋಧ್ಪುರ - 2
10. ಕೊಲ್ಹಾಪುರ - 1
11. Kotah - 1
12. ಮಯೂರ್ಭಂಜ್ - 1
13. ಮೈಸೂರು - 7
14. ಪಾಟಿಯಾಲಾ - 2
15. ರೇವಾ - 2
16. ಟ್ರಾವಂಕೂರ್ - 6
17. ಉದಯಪುರ - 2
18. ಸಿಕ್ಕಿಂ ಹಾಗು ಕೂಚ್ ಬಿಹಾರ್ - 1
19. ತ್ರಿಪುರ, ಮಣಿಪುರ ಹಾಗು ಖಾಸಿ - 1
20 ಉತ್ತರ ಪ್ರದೇಶ ರಾಜ್ಯಗಳ ಗುಂಪು. - 1
21. ಪೂರ್ವ ರಜಪುತಾನ ರಾಜ್ಯಗಳ ಗುಂಪು - 3
22. ಕೇಂದ್ರ ಭಾರತ ರಾಜ್ಯಗಳ ಗುಂಪು (ಬುಂದೇಲ್ಕಂಡ ಹಾಗು ಮಾಳ್ವಾ ಸೇರಿದಂತೆ) - 3
23. ಪಶ್ಚಿಮ ಭಾರತದ ರಾಜ್ಯಗಳ ಗುಂಪು - 4
24. ಗುಜರಾತ್ ರಾಜ್ಯಗಳ ಗುಂಪು - 2
25. ಡೆಕ್ಕನ್ ಹಾಗು ಮದ್ರಾಸ್ ರಾಜ್ಯಗಳ ಗುಂಪು - 2
26. ಪಂಜಾಬ್ ರಾಜ್ಯಗಳ ಗುಂಪು I - 3
27. ಪೂರ್ವ ರಾಜ್ಯಗಳ ಗುಂಪು I - 4
28. ಪೂರ್ವ ರಾಜ್ಯಗಳ ಗುಂಪು II - 3
29. ಉಳಿದ ರಾಜ್ಯಗಳ ಗುಂಪು – 4

ಗಮನಿಸಿ: 1947 ರಲ್ಲಿ ಇಂದಿನ ಕರ್ನಾಟಕವು ಮೈಸೂರು ಸಂಸ್ಥಾನವೆನಿಸಿತ್ತು. ಮೈಸೂರು ಸಂಸ್ಥಾನದಿಂದ ಸಂವಿಧಾನ ರಚನಾ ಸಭೆಗೆ 7 ಸದಸ್ಯರು ನೇಮಕವಾಗಿದ್ದರು. ಅವರುಗಳೆಂದರೆ ಕೆ. ಸಿ. ರೆಡ್ಡಿ, ಟಿ. ಸಿದ್ಧಲಿಂಗಯ್ಯ, ೆಚ್. ಆರ್. ಗುರುವರೆಡ್ಡಿ, ಎಸ್. ವ್ಹಿ. ಕೃಷ್ಣಮೂರ್ತಿ ರಾವ್, ಕೆ. ಹನುಮಂತಯ್ಯ, ೆಚ್. ಸಿದ್ಧವೀರಪ್ಪ ಹಾಗೂ ಟಿ. ಚನ್ನಯ್ಯ. ಇವರೊಡನೆ ಕನ್ನಡಿಗರಾದ ೆನ್ ಮಾಧವರಾವ್, ಆರ್. ಆರ್. ದಿವಾಕರ್ ಹಾಗೂ ಎಸ್. ನಿಜಲಿಂಗಪ್ಪ ಅನ್ಯ ಪ್ರದೇಶದಿಂದ ಸಂವಿಧಾನ ರಚನಾ ಸಭೆಯ ಭಾಗವಾಗಿದ್ದರು.

5. ಕರಡು ರಚನಾ ಸಮೀತಿಯ ಪಾತ್ರ: ಕರಡು ರಚನಾ ಸಮೀತಿಯು ಸಂವಿಧಾನ ರಚನಾ ಸಭೆಯ ನಿರ್ಣಯದಂತೆ 29 ಆಗಸ್ಟ್ 1947 ರಂದು ಸ್ಥಾಪನೆಗೊಂಡಿತು. 7 ಸದಸ್ಯರನ್ನುಳ್ಳ ಕರಡು ರಚನಾ ಸಮೀತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬಿ. ಆರ್. ಅಂಬೇಡ್ಕರ್, ಕೆ. ಎಂ. ಮುನ್ಶಿ, ಸಯ್ಯದ್ ಮಹಮದ್ ಸಾದುಲ್ಲಾ, ಬಿ. ಎಲ್. ಮಿತ್ತರ್ ಹಾಗೂ ಡಿ. ಪಿ. ಕೈಥಾನ್ ಸದಸ್ಯರಾಗಿದ್ದರು. 30 ಆಗಸ್ಟ್ 1947ರಂದು ಸಭೆ ಸೇರಿದ ಕರಡು ರಚನಾ ಸಮೀತಿಯ ಸದಸ್ಯರು ಡಾ. ಅಂಬೇಡ್ಕರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು. ಕಾಲಾನಂತರ ಅನಾರೋಗ್ಯದ ಕಾರಣಕ್ಕೆ ಬಿ. ಎಲ್. ಮಿತ್ತರ್ ಬದಲು ಎನ್. ಮಾಧವರಾವ್ ಹಾಗೂ ಮರಣದ ಕಾರಣಕ್ಕೆ ಡಿ. ಪಿ. ಕೈಥಾನ್ ಬದಲು ಟಿ. ಟಿ. ಕೃಷ್ಣಮಾಚಾರಿ ಕರಡು ರಚನಾ ಸಮೀತಿಯ ಸದಸ್ಯರಾದರು. ೆನ್. ಮಾಧವರಾವ್ ಕರಡು ರಚನಾ ಸಮೀತಿಯಲ್ಲಿದ್ದ ೇಕೈಕ ಕನ್ನಡಿಗ ಸದಸ್ಯರಾಗಿದ್ದರು. ಸಂವಿಧಾನ ರಚನಾ ಸಭೆಯ ನಿರ್ಣಯಗಳು ಹಾಗೂ ವಿವಿಧ ಸಮೀತಿಗಳ ವರದಿಗಳನ್ನು ಆಧರಿಸಿ ಸಂವಿಧಾನಾತ್ಮಕ ಸಲಹೆಗಾರ ಬಿ. ಎನ್. ರಾವ್ 240 ವಿಧಿಗಳು ಹಾಗೂ 13 ಅನುಸೂಚಿಗಳುಳ್ಳ ಕರಡು ಸಂವಿಧಾನವನ್ನು ತಯಾರಿಸಿದ್ದರು. ಅಕ್ಟೋಬರ್ 1947 ರಿಂದ ಆ ಕರಡು ಸಂವಿಧಾನವನ್ನು ಪರಿಶೀಲಿಸಿ ಹಲವು ಅಗತ್ಯ ಬದಲಾವಣೆಯೊಂದಿಗೆ 315 ವಿಧಿಗಳು ಮತ್ತು 13 ಅನುಸೂಚಿಗಳುಳ್ಳ ಹೊಸ ಕರಡು ಸಂವಿಧಾನವನ್ನು ಈ ಸಮೀತಿ ತಯಾರಿಸಿತು. 21 ಫೇಬ್ರವರಿ 1948 ರಂದು ಸಮೀತಿಯು ತಾನು ತಯಾರಿಸಿದ ಕರಡು ಸಂವಿಧಾನವನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಿಗೆ ಸಲ್ಲಿಸಿತು. ಹೀಗೆ ರಚನೆಯಾದ ಕರಡು ಸಂವಿಧಾನವನ್ನು ಎಂಟು ತಿಂಗಳುಗಳ ಕಾಲ ಜನರ ಚರ್ಚೆ ಹಾಗೂ ವಿಮರ್ಷೆಗೆ ನೀಡಲಾಯಿತು. ಈ ಸಮಯದಲ್ಲಿ ಜನರಿಂದ ವ್ಯಕ್ತವಾದ ಸಲಹೆ, ಸೂಚನೆ ಹಾಗೂ ತಿದ್ದುಪಡಿಗಳನ್ನು ಆಧರಿಸಿ ಕರಡು ರಚನಾ ಸಮೀತಿಯು ಅಕ್ಟೋಬರ್ 1948 ರಲ್ಲಿ ಎರಡನೇ ಕರಡು ಸಂವಿಧಾನವನ್ನು ರಚಿಸಿತು.

6. ಸಂವಿಧಾನದ ಅಂಗೀಕಾರ: 4 ನವೆಂಬರ್ 1948 ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿ ಕರಡು ಸಂವಿಧಾನದ ಪ್ರಥಮ ವಾಚನ ಮಾಡಲಾಯಿತು. 9 ನವೆಂಬರ್ 1948 ರವರೆಗೆ ಸಾಮಾನ್ಯ ಚರ್ಚೆ ನಡೆಸಲಾಯಿತು. 15 ನವೆಂಬರ್ 1948 ರಿಂದ 17 ಅಕ್ಟೋಬರ್ 1949 ರವರೆಗೆ ಕರಡು ಸಂವಿಧಾನದ ದ್ವಿತೀಯ ವಾಚನ ಜರುಗಿತು. ಈ ವೇಳೆಯಲ್ಲಿ ಕರಡು ಸಂವಿಧಾನದ ಪ್ರತಿಯೊಂದು ನಿಯಮಾವಳಿ ಕುರಿತು ಕೂಲಂಕುಶ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ಜರುಗಿತು. ಸಭೆಯು ಸೂಚಿಸಿದ್ದ 7653 ತಿದ್ದುಪಡಿಗಳ ಪೈಕಿ 2473 ಅಂಶಗಳ ಕುರಿತು ಚರ್ಚಿಸಲಾಯಿತು. ಚರ್ಚೆಯ ಸಮಯದಲ್ಲಿ ಸದಸ್ಯರ ಸಂದೇಹ, ಗೊಂದಲ, ಾತಂಕಗಳನ್ನು ಅಂಬೇಡ್ಕರರು ಬಗೆ ಹರಿಸುತ್ತಿದ್ದರು. 14 ನವೆಂಬರ್ 1949 ರಂದು ತೃತೀಯ ವಾಚನ ವಾಚಿಸಿದ ಅಂಬೇಡ್ಕರ್ ಕರಡು ಸಂವಿಧಾನದ ಅಂಗೀಕಾರಕ್ಕೆ ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂತಿಮವಾಗಿ ಸಂವಿಧಾನ ರಚನಾ ಸಭೆಯು 26 ನವೆಂಬರ್ 1949 ರಂದು ಸಂವಿಧಾನಕ್ಕೆ ಅಂಗೀಕಾರ ನೀಡಿತು. ಈ ದಿನದಂದು ಒಟ್ಟು 299 ಸದಸ್ಯರ ಪೈಕಿ 284 ಸದಸ್ಯರು ಹಾಜರಿದ್ದು ಭಾರತ ಸಂವಿಧಾನಕ್ಕೆ ತಮ್ಮ ಅಂಕಿತ ನೀಡಿದರು. ಆದರೆ ಮೂಲ ಸಂವಿಧಾನಕ್ಕೆ ಸದಸ್ಯರು ಅಂಕಿತ ನೀಡಿದ್ದು 24 ಜನೇವರಿ 1950 ರಂದು. ಭಾರತ ಸಂವಿಧಾನಕ್ಕೆ ಸಂವಿಧಾನ ರಚನಾ ಸಭೆಯ ಸದಸ್ಯರು ಅನುಮೋದನೆ ನೀಡಿದ 26 ನವೆಂಬರನ್ನು ನಾವಿಂದು ಸಂವಿಧಾನ ದಿನಾಚರಣೆ ಅಥವಾ ರಾಷ್ಟ್ರೀಯ ಕಾನೂನು ದಿನಾಚರಣೆಯಾಗಿ ಪ್ರತಿ ವರ್ಷ ಾಚರಿಸುತ್ತೇವೆ.

7. ಅವಧಿ ಮತ್ತು ಅಧಿವೇಶನಗಳು: ಭಾರತದ ಸಂವಿಧಾನ ರಚನೆಗೆ ಸಂವಿಧಾನ ರಚನಾ ಸಭೆ ಸುದೀರ್ಘ ಸಮಯ ತೆಗೆದುಕೊಂಡಿತು. 2 ವರ್ಷ, 11 ತಿಂಗಳು ಹಾಗೂ 18ದಿನಗಳ ಕಾಲ ಅಂದರೆ ಒಟ್ಟು 1022 ದಿನಗಳ ಅವಧಿಯನ್ನು ಸಂವಿಧಾನ ರಚನೆಗೆ ವ್ಯಯಿಸಲಾಯಿತು. ಈ ಸುದೀರ್ಘ ಅವಧಿಯಲ್ಲಿ ಭಾರತ ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಭೆಯು ಒಟ್ಟು ಹನ್ನೊಂದು ಬಾರಿ ಸಭೆ ಸೇರಿತ್ತು. ಈ ಅಧಿವೇಶನಗಳ ವಿವರ ಕೆಳಗಿನಂತಿದೆ.
ಮೊದಲ ಅಧಿವೇಶನ:9 ರಿಂದ 23 ಡಿಸೆಂಬರ್, 1946 
ಎರಡನೇ  ಅಧಿವೇಶನ:20 ರಿಂದ 25 ಜನೇವರಿ, 1947
ಮೂರನೇ ಅಧಿವೇಶನ:28 ಏಪ್ರಿಲ್ - 2 ಮೇ, 1947 
ನಾಲ್ಕನೇ ಅಧಿವೇಶನ:14-31 ಜುಲೈ, 1947 
ಐದನೇ ಅಧಿವೇಶನ: 14 ರಿಂದ 30 ಾಗಸ್ಟ್, 1947 
ಆರನೇ ಅಧಿವೇಶನ: 27 ಜನೇವರಿ, 1948
ಏಳನೇ ಅಧಿವೇಶನ:4 ನವೆಂಬರ್,1948 ರಿಂದ 8 ಜನೇವರಿ, 1949 
ಎಂಟನೇ ಅಧಿವೇಶನ:16 ಮೇ ರಿಂದ 16 ಜೂನ್, 1949 
ಒಂಬತ್ತನೇ ಅಧಿವೇಶನ: 30 ಜುಲೈ ರಿಂದ 18 ಸೆಪ್ಟೆಂಬರ್, 1949
ಹತ್ತನೇ ಅಧಿವೇಶನ: 6 ರಿಂದ 17 ಅಕ್ಟೋಬರ್, 1949
ಹನ್ನೊಂದನೇ ಅಧಿವೇಶನ:14 ರಿಂದ 26 ನವೆಂಬರ್, 1949

ಮೇಲಿನ 11 ಅಧಿವೇಶನಗಳಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರು 165 ದಿನಗಳ ಕಾಲ ಅಧಿವೇಶನದಲ್ಲಿದ್ದರು. ಈ ಪೈಕಿ ಅಧಿವೇಶನದ 114 ದಿನಗಳನ್ನು ಕರಡು ಸಂವಿಧಾನವನ್ನು ಚರ್ಚಿಸಲು ಸಂವಿಧಾನ ರಚನಾಕಾರರು ಮೀಸಲಿಟ್ಟಿದ್ದರು. ಜೊತೆಗೆ 63,96273 ರೂಪಾಯಿಗಳನ್ನು ವೆಚ್ಚ ಮಾಡಲಾಯಿತು. ಸಂವಿಧಾನ ರಚನೆ ಪೂರ್ಣಗೊಂಡ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರು  24 ಜನೇವರಿ 1950 ರಂದು ಕೊನೆಯ ಬಾರಿ ಸಮಾವೇಶಗೊಂಡು ಸಂವಿಧಾನಕ್ಕೆ ಅಂಕಿತ ಹಾಕಿದರು. ಅಲ್ಲದೇ ಕೆಳಗಿನ ನಿರ್ಧಾರಗಳನ್ನು ಅಂದಿನ ಕೊನೆಯ ಸಂವಿಧಾನ ರಚನಾ ಸಭೆಯ ಸಮಾವೇಶದಲ್ಲಿ ಕೈಗೊಳ್ಳಲಾಯಿತು.
1. ರವೀಂದ್ರನಾಥ ಢಾಗೂರ್ ರಚಿಸಿದ ಜನಗಣಮನವನ್ನು ರಾಷ್ಟ್ರ ಗೀತೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಯಿತು.
2. ಬಂಕಿಮಚಂದ್ರ ಚಟರ್ಜಿಯವರ ೊಂದೇ ಮಾತರಂ ಗೀತೆಯನ್ನು ರಾಷ್ಟ್ರೀಯ ಹಾಡು ಎಂದು ಪರಿಗಣಿಸಲಾಯಿತು.
3. ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರಾಗಿದ್ದ ಬಾಬೂ ರಾಜೇಂದ್ರ ಪ್ರಸಾದರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಚುನಾಯಿಸಲಾಯಿತು. ಇದರಿಂದ ಸಿ. ರಾಜಗೋಪಾಲಾಚಾರಿ ನಿರ್ವಹಿಸುತ್ತಿದ್ದ ಗೌರ್ನರ್ ಜನರಲ್ ಸ್ಥಾನವು ರದ್ದಾಗಿ 26 ಜನೇವರಿ 1950 ರಿಂದ ಭಾರತ ಗಣರಾಜ್ಯವಾಗಲು ಸಾಧ್ಯವಾಯಿತು.

8. ಸಂವಿಧಾನದ ಜಾರಿ: ಸಂವಿಧಾನ ರಚನಾಕಾರರು ಭಾರತ ಸಂವಿಧಾನಕ್ಕೆ 26 ನವೆಂಬರ್ 1949ರಂದು ಅಂಗೀಕಾರ ನೀಡಿದ್ದರು. ಅಂದಿನಿಂದಲೇ ಪೌರತ್ವ, ಚುನಾವಣೆ ಮುಂತಾದವುಗಳಿಗೆ ಸಂಬಂಧಿಸಿದ ಸಂವಿಧಾನದ ಕೆಲವು ವಿಧಿಗಳು ಜಾರಿಗೊಂಡವು. ಅಧಿಕೃತವಾಗಿ ಪೂರ್ಣ ಭಾರತೀಯ ಸಂವಿಧಾನವು 26  ಜನೇವರಿ 1950 ರಂದು ಜಾರಿಗೊಂಡಿತು. ಕಾರಣ 1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ  ಪೂರ್ಣ ಸ್ವರಾಜ್ಯವನ್ನು ಘೋಷಿಸಿ ಭಾರತದಾದ್ಯಂತ 26 ಜನೇವರಿ 1930ರಂದು ಸ್ವತಂತ್ರ ದಿನವನ್ನು ಆಚರಿಸಲು ಕರೆಕೊಟ್ಟಿತ್ತು. ಅಂದು ಜವಾಹರಲಾಲ್ ರಾವಿ ನದಿಯ ದಂಡೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದರಲ್ಲದೇ ಭಾರತ ಸ್ವಯಂ ಸ್ವತಂತ್ರ್ಯ ಘೋಷಿಸಿಕೊಂಡಿತ್ತು. ಆ ದಿನದ ಸವಿ ನೆನಪಿಗಾಗಿ ಸಂವಿಧಾಣ ಅಂಗೀಕಾರವಾದರೂ 26 ಜನೇವರಿ 1950ರವರೆಗೆ ಜಾರಿಗೊಳಿಸಿರಲಿಲ್ಲ. 26 ಜನೇವರಿ 1950ರಂದು ಸಂವಿಧಾನ ಜಾರಿಯೊಡನೆ ಭಾರತ ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವಾಯಿತು. ಈ ದಿನವನ್ನು ಇಂದಿಗೂ ನಾವು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಪ್ರತಿ ವರ್ಷ ಾಚರಿಸುತ್ತೇವೆ. ಚಿಂತಕ ಗ್ರ್ಯಾನ್ವಿಲ್ ಆಸ್ಟೀನ್ ಅಮೇರಿಕದ ಫಿಲೆಡೆಲ್ಫಿಯಾ ಸಮ್ಮೇಳನದ ನಂತರ ಜರುಗಿದ ಮಹತ್ವದ ರಾಜಕೀಯ ಮೈಲಿಗಲ್ಲು ಎಂದು ಭಾರತ ಸಂವಿಧಾನದ ಅನುಷ್ಟಾನವನ್ನು ಬಣ್ಣಿಸಿದ್ದಾರೆ.

ಮೇಲೆ ವಿವರಿಸಲಾಗಿರುವ ವಿವಿಧ ವಿಶೇಷತೆಗಳಿಂದ ಕೂಡಿದ್ದ ಭಾರತ ಸಂವಿಧಾನ ರಚನಾ ಸಭೆಯು ಭಾರತಕ್ಕೆ ಅನುರೂಪವಾದ ಸಂವಿಧಾನವೊಂದನ್ನು ರಚಿಸಲು ಯಶಸ್ವಿಯಾಯಿತು. 1950 ರಲ್ಲಿ ಜಾರಿಗೊಂಡ ಮೂಲ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳನ್ನು ಒಳಗೊಂಡಿತ್ತು. ಆದರೆ ಸಂವಿಧಾನಕ್ಕೆ ಕಾಲಾನುಕ್ರಮದಲ್ಲಿ ತರಲಾದ 104 ತಿದ್ದುಪಡಿಗಳಿಂದಾಗಿ ಪ್ರಸ್ತುತ ಭಾರತ ಸಂವಿಧಾನವು 460 ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಹೊಂದಿದೆ. ವಿಶ್ವದ ಬೃಹತ್ ಪ್ರಜಾಪ್ರಭುತ್ವಕ್ಕೆ ಪೂರಕವಾದ, ಪ್ರಪಂಚದ ಅತೀ ದೊಡ್ಡ ಹಾಗೂ ವೈವಿಧ್ಯತೆಯಲ್ಲಿ ೇಕತೆಯ ಗುರಿ ಸಾಧಿಸಬಲ್ಲ ಸಂವಿಧಾನವನ್ನು ಭಾರತೀಯರಿಗೆ ರಚಿಸಿದ ಕೀರ್ತಿ ಸಂವಿಧಾನ ರಚನಾ ಸಭೆಗೆ ಸಲ್ಲುತ್ತದೆ. ಅದರಲ್ಲೂ ಕರಡು ಸಂವಿಧಾನವನ್ನು ತಯಾರಿಸಿ, ಸಂವಿಧಾನ ರಚನಾಕಾರರ ಗೊಂದಲಗಳನ್ನು ಪರಿಹರಿಸಿ, ಆದರ್ಶ ಸಂವಿಧಾನಕ್ಕೆ ಅನುಮೋದನೆ ಪಡೆಯುವಲ್ಲಿ ಡಾ. ಬಿ. ಆರ್. ಅಂಬೇಡ್ಕರರ ಪಾತ್ರ ಅವರ್ಣನೀಯ. ಹೀಗಾಗಿ ಅಂಬೇಡ್ಕರರನ್ನು ಸಂವಿಧಾನದ ಶಿಲ್ಪಿ ಹಾಗೂ ಆಧುನಿಕ ಮನು  ಎನ್ನಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...