ಪ್ಲೇಟೊನ ತತ್ವಜ್ಙಾನಿ ಅರಸು ಪರಿಕಲ್ಪನೆ:
ಪೀಠಿಕೆ: ಪ್ಲೇಟೊ ತನ್ನ ಸಮಕಾಲಿನ ನಗರ ರಾಜ್ಯಗಳ ದುರಾಡಳಿತದಿಂದ ಬೇಸರಗೊಂಡಿದ್ದನು. ಅಜ್ಙಾನಿಗಳ ಅವಿವೇಕದ ತೀರ್ಮಾನಗಳಿಂದ ಪ್ರಜೆಗಳು ಸಂಕಷ್ಟ ಅನುಭವಿಸುವುದನ್ನು ಸಹಿಸದಾಗಿದ್ದನು. ಆಗ ತನ್ನ ಆದರ್ಶ ರಾಜ್ಯದ ಭಾಗವಾಗಿ ುತ್ತಮರು ಯಾರು? ಅವರು ಹೇಗೆ ಉತ್ತಮರೆನಿಸಿಕೊಳ್ಳುವರು? ಉತ್ತಮ ರಾಜ್ಯದ ಆಡಳಿತಗಾರ ಹೇಗಿರಬೇಕು? ಎಂಬಿತ್ಯಾದಿ ನೈತಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ಸಾಗಿ ತತ್ವಜ್ಙಾನಿ ಅರಸು ಪರಿಕಲ್ಪನೆ ಪ್ರತಿಪಾದಿಸಿದನು. ಆದರ್ಶ ರಾಜ್ಯದ ಸಾಕಾರಕ್ಕೆ ಜ್ಙಾನಿಗಳ ಆಳ್ವಿಕೆ ಅಗತ್ಯವೆಂದು ನಂಬಿದ್ದ ಪ್ಲೇಟೊ ತತ್ವಜ್ಙಾನಿ ಅರಸು ಪರಿಕಲ್ಪನೆಯನ್ನು ತನ್ನ ರಿಪಬ್ಲಿಕ್ ಗ್ರಂಥದ ಐದು ಹಾಗೂ ಆರನೇ ಭಾಗದಲ್ಲಿ ವಿವರಿಸಿದ್ದಾನೆ. (ಎಲ್ಲಿಯವರೆಗೆ ತತ್ವಜ್ಙಾನಿಗಳು ಅರಸರಾಗುವುದಿಲ್ಲವೋ ಅಥವಾ ರಾಜ್ಯವನ್ನಾಳುವ ಅರಸರು ತತ್ವಜ್ಙಾನವನ್ನು ಮೈಗೂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಗರಗಳು ಸಂಕಷ್ಟಗಳಿಂದ ದೂರವಾಗಲಾರವು) ಎಂಬುದಾಗಿ ಉಚ್ಚರಿಸಿದ್ದ ಪ್ಲೇಟೊ ತನ್ನ ಆದರ್ಶ ರಾಜ್ಯದ ಕೇಂದ್ರ ಸ್ಥಾನವನ್ನು ತತ್ವಜ್ಙಾನಿ ಅರಸನಿಗೆ ಕಲ್ಪಿಸಿದ್ದಾನೆ. ಈ ಕೆಳಗೆ ತತ್ವಜ್ಙಾನಿ ಅರಸುವಿನ ಪರಿಕಲ್ಪನೆ, ಗುಣಗಳು, ಲಕ್ಷಣಗಳು ಹಾಗು ಜವಾಬ್ದಾರಿಗಳನ್ನು ಚರ್ಚಿಸಿ ವಿಮರ್ಷೆಗಳನ್ನು ವಿವರಿಸಲಾಗಿದೆ.
ತತ್ವಜ್ಙಾನಿ ಅರಸು ಯಾರು?: ಪ್ಲೇಟೊ ಪ್ರತಿಪಾದಿಸಿರುವ ತತ್ವಜ್ಙಾನಿ ಅರಸು ಸಾಮಾನ್ಯ ಅರಸರಿಗಿಂತ ಭಿನ್ನನಾಗಿದ್ದನು. ತತ್ವಜ್ಙಾನಿ ಅರಸುವಿನ ಚಿತ್ರಣವನ್ನು ಹೊಂದುವ ಮೊದಲು ತತ್ವಜ್ಙಾನ ಪದದ ಅರ್ಥವನ್ನು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ತತ್ವಜ್ಙಾನ ಎಂಬ ಪದವು ಅಧ್ಯಯನ ವಿಷಯ ಅಥವಾ ಪರಿಪೂರ್ಣ ಜ್ಙಾನವನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ವ ಶ್ರೇಷ್ಠ ಹಾಗೂ ಪರಿಪೂರ್ಣ ಜ್ಙಾನವನ್ನು ಪಡೆದಿರುವ ವ್ಯಕ್ತಿ ತತ್ವಜ್ಙಾನಿ ಎನಿಸಿಕೊಳ್ಳುತ್ತಾನೆ. ಅಂತೆಯೇ ತನ್ನ ಸರ್ವಶ್ರೇಷ್ಠ ಜ್ಙಾನದ ಸಾಮರ್ಥ್ಯದೊಂದಿಗೆ ರಾಜ್ಯವನ್ನು ಆಳುವ ವ್ಯಕ್ತಿ ತತ್ವಜ್ಙಾನಿ ಅರಸು ಎನಿಸಿಕೊಳ್ಳುತ್ತಾನೆ. ಹುಟ್ಟು ಅಥವಾ ಸಂಪತ್ತಿನ ಬಲಗಳ ಬದಲು ಜ್ಙಾನದ ಬಲದಿಂದ ರಾಜ್ಯಾಡಳಿತ ನಡೆಸುವ ವ್ಯಕ್ತಿಯೇ ತತ್ವಜ್ಙಾನಿ ಅರಸು ಎಂಬುದು ಪ್ಲೇಟೊನ ಪ್ರತಿಪಾದನೆಯಾಗಿದೆ. ತತ್ವಜ್ಙಾನಿ ಅರಸು ಸದ್ಗುಣಗಳ ಆಗರವಾಗಿದ್ದು ಅಸಾಮಾನ್ಯ ಮಾನವ ಅಥವಾ ದೈವಾಂಶವನ್ನುಳ್ಳ ಮಾನವನಾಗಿದ್ದನು. ಜೊತೆಗೆ ಕಾನೂನುಗಳನ್ನು ರಚಿಸುವ, ಜಾರಿಗೊಳಿಸುವ ಹಾಗು ರಾಜ್ಯಕ್ಕೆ ಧುರಿಣತ್ವ ಒದಗಿಸಲು ಶಕ್ತನಾಗಿದ್ದನು. ಆದ್ದರಿಂದಲೇ ಪ್ಲೇಟೊ ರಾಜ್ಯವೆಂಬ ಹಡುಗಿಗೆ ತತ್ವಜ್ಙಾನಿ ಅರಸು ನಾವಿಕನಂತೆ ಎಂದಿರುವ. ಒಟ್ಟಾರೆ ರಾಜ್ಯವೊಂದರ ಸೈದ್ಧಾಂತಿಕ ಹಾಗೂ ವಾಸ್ತವಿಕ ಅಗತ್ಯಗಳನ್ನು ಪೂರೈಸಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿಯೇ ತತ್ವಜ್ಙಾನಿ ಅರಸು ಎಂಬುದು ಪ್ಲೇಟೊನ ಅಭಿಪ್ರಾಯವಾಗಿತ್ತು.
ತತ್ವಜ್ಙಾನಿ ಅರಸುವಿನ ಗುಣಗಳು: ಪ್ಲೇಟೊ ಆಧ್ಯಾತ್ಮ, ವಿವೇಚನೆ ಹಾಗು ರಾಜಕೀಯ ಅಧಿಕಾರಗಳ ಸಂಗಮವಾಗಿರುವ ತತ್ವಜ್ಙಾನಿ ಅರಸನಾಗಲು ಬಯಸುವ ವ್ಯಕ್ತಿಯೊಬ್ಬ ಕೆಳಗಿನ ಹಲವು ನಿರ್ದಿಷ್ಟ ಗುಣಗಳನ್ನು ಪಡೆದಿರಬೇಕು ಎಂದಿರುವ.
1. ಸತ್ಯ ನಿಷ್ಠೆ: ರಾಜ್ಯದ ನಾಯಕನಾಗಿರುವ ತತ್ವಜ್ಙಾನಿಯನ್ನು ಪ್ರಜೆಗಳು ಅನುಕರಿಸುತ್ತಾರೆ. ಹೀಗಾಗಿ ಪ್ರಜೆಗಳು ಸತ್ಯ ನಿಷ್ಠರಾಗಲು ತತ್ವಜ್ಙಾನಿ ಅರಸನು ಸತ್ಯ ಪಾಲನೆಗೆ ಆದರ್ಶನಾಗಬೇಕಾಗುತ್ತದೆ. ತತ್ವಜ್ಙಾನಿ ಅರಸು ಮೇಲ್ನೋಟಕ್ಕೆ ಸತ್ಯ ಪಾಲಕನಾಗಿರದೇ ವಾಸ್ತವದಲ್ಲಿ ಸತ್ಯ ನಿಷ್ಠೆ ಪಾಲಿಸುವವನಾಗಿರಬೇಕೆಂದು ಪ್ಲೇಟೊ ಬಯಸುತ್ತಾನೆ.
2. ವಾಸ್ತವ ಪ್ರಜ್ಙೆ: ತತ್ವಜ್ಙಾನಿ ಅರಸು ತನ್ನ ಮಾತು ಹಾಗೂ ಕಾರ್ಯಗಳಲ್ಲಿ ವಾಸ್ತವಿಕತೆ ಪಾಲಿಸಬೇಕೆಂದು ಪ್ಲೇಟೊ ಬಯಸುತ್ತಾನೆ. ಈಡೇರಿಸಲಾಗದ ಪೊಳ್ಳು ಭರವಸೆ ಮಾತನಾಡುವ ಅರಸ ಪ್ರಜೆಗಳ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಅಂತೆಯೇ ತನ್ನ ದೌರ್ಬಲ್ಯ ಮತ್ತು ಶತ್ರುವಿನ ಸಾಮರ್ಥ್ಯಗಳ ವಾಸ್ತವಿಕತೆ ಅರಿಯದ ಅರಸು ಸೋಲು ಅನುಭವಿಸಬೇಕಾಗುತ್ತದೆ. ಹೀಗಾಗಿ ತತ್ವಜ್ಙಾನಿ ಅರಸು ಹೊಗಳು ಬಟ್ಟರನ್ನು ದೂರವಿಟ್ಟು ಪ್ರಜೆಗಳ ಕಲ್ಯಾಣಕ್ಕೆ ಸಾಮರ್ಥ್ಯಾನುಸಾರ ಶ್ರಮಿಸಿ ರಾಜ್ಯವನ್ನು ಮುನ್ನಡೆಸಲು ವಾಸ್ತವ ಪ್ರಜ್ಙೆಯ ಗುಣವು ತತ್ವಜ್ಙಾನಿ ಅರಸರಿಗೆ ಅವಶ್ಯಕ.
3. ಸ್ವಯಂ ನಿಗ್ರಹ: ತತ್ವಜ್ಙಾನಿ ಅರಸು ತನ್ನ ಪಂಚೇಂದ್ರಿಯಗಳ ಮೇಲೆ ಹಿಡಿತ ಹೊಂದಿರಬೇಕು. ಮಾನವ ಸಹಜ ಕಾಮ, ಕ್ರೋಧ, ಮದ, ಮೋಹ, ಲೋಭ ಹಾಗು ಮತ್ಸರಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ತತ್ವಜ್ಙಾನಿ ಅರಸನಲ್ಲಿರಬೇಕು. ಆತ್ಮ ಸಂಯಮ ಅಂದರೆ ಸ್ವಯಂ ನಿಗ್ರಹ ಗುಣವು ಕಠಿಣವಾದರೂ ಅದನ್ನು ತತ್ವಜ್ಙಾನಿ ಅರಸು ಗಳಿಸಿಕೊಳ್ಳಬೇಕೆಂದು ಪ್ಲೇಟೊ ಪ್ರತಿಪಾದಿಸಿರುವನು.
4. ಧೈರ್ಯ: ತತ್ವಜ್ಙಾನಿ ಅರಸು ಪ್ರಜೆಗಳು, ಸೈನ್ಯ ಹಾಗೂ ರಾಜ್ಯದ ನಾಯಕನಾಗಿರುತ್ತಾನೆ. ಎಂತಹ ಸವಾಲು ಎದುರಾದರೂ ಅದನ್ನು ಧೈರ್ಯವಾಗಿ ಎದುರಿಸಬಲ್ಲ ಗುಣವನ್ನು ಹೊಂದಿರಬೇಕಾಗುತ್ತದೆ. ಮಹತ್ವಾಕಾಂಕ್ಷೆ ಮೂಡಿಸಿ ಪ್ರಜೆಗಳು ಹಾಗೂ ರಾಜ್ಯದ ಪ್ರಗತಿಗೆ ಪ್ರಯತ್ನಿಸಲು ಧೈರ್ಯ ಕಾರಣವಾಗುವುದರಿಂದ ಅದನ್ನು ತತ್ವಜ್ಙಾನಿ ಅರಸು ಬೆಳೆಸಿಕೊಳ್ಳಲು ಪ್ಲೇಟೊ ಸೂಚಿಸಿರುವ.
5. ಸಮಚಿತ್ತ: ತತ್ವಜ್ಙಾನಿ ಅರಸು ಆಡಳಿತದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಸಮಾಜದ ಎಲ್ಲ ವರ್ಗಗಳೊಡನೆ ಬೆರೆತು ಅವರ ಕುಂದು ಕೊರತೆಗಳನ್ನು ಪರಿಹರಿಸಬೇಕು. ಜೊತೆಗೆ ರಾಜ್ಯದ ಸೈನಿಕ, ವಾಣಿಜ್ಯ, ಆರ್ಥಿಕ ಬೆಳವಣಿಗೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಇದರಿಂದ ರಾಜ್ಯದ ಪ್ರಗತಿ ವೇಗ ಪಡೆಯುವುದರಿಂದ ಪ್ಲೇಟೊ ಸಮಚಿತ್ತ ಗುಣವನ್ನು ಬೆಳೆಸಿಕೊಳ್ಳಬೇಕೆಂದು ತತ್ವಜ್ಙಾನಿಗೆ ನಿರ್ದೇಶಿಸಿರುವ.
6. ಜ್ಙಾನ: ಸರ್ವ ಸದ್ಗುಣಗಳಿಗೂ ಜ್ಙಾನವೇ ಮೂಲಾಧಾರ. ಹೀಗಾಗಿ ತತ್ವಜ್ಙಾನಿ ಅರಸು ಜ್ಙಾನ ಗುಣವನ್ನು ಹೊಂದಲು ಪ್ಲೇಟೊ ಪ್ರತಿಪಾದಿಸಿರುವ. ಅಜ್ಙಾನಿ ಅರಸು ಅನ್ಯರ ಸಲಹೆಯಂತೆ ನಡೆದುಕೊಂಡು ಸಮಸ್ಯೆಗಳಿಗೆ ತುತ್ತಾಗಬಹುದು. ಅಂತೆಯೇ ಅಜ್ಙಾನಿ ಆಡಳಿತಗಾರನಿಂದ ರಾಜ್ಯವು ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಯಾವುದೇ ವಿಷಯವನ್ನು ಸುಲಭವಾಗಿ ಅರಿತುಕೊಂಡು ನೆನಪಿನಲ್ಲಿಟ್ಟುಕೊಳ್ಳುವ ಜ್ಙಾನ ಗುಣವನ್ನು ತತ್ವಜ್ಙಾನಿಯು ಹೊಂದಿರಬೇಕು. ಸುದೀರ್ಘ ಶಿಕ್ಷಣದ ಮೂಲಕ ರಾಜ್ಯಾಡಳಿತಕ್ಕೆ ಸೂಕ್ತವಾದ ವೈವಿಧ್ಯಮಯ ಜ್ಙಾನವನ್ನು ಬೆಳೆಸಿಕೊಳ್ಳಲು ಪ್ಲೇಟೊ ಸೂಚಿಸಿರುವ.
ಮೇಲೆ ಚರ್ಚಿಸಲಾದ ಗುಣಗಳನ್ನು ತತ್ವಜ್ಙಾನಿ ಅರಸು ಕಡ್ಡಾಯವಾಗಿ ಮೈಗೂಡಿಸಿಕೊಳ್ಳಲೇಬೇಕೆಂದು ಪ್ಲೇಟೊ ಪ್ರತಿಪಾದಿಸಿರುವ. ರಾಜ್ಯಾಧಿಕಾರವು ಅಸಮರ್ಥರಿಗೆ ದೊರೆತು ಅಧಿಕಾರದ ದುರುಪಯೋಗವಾಗುವುದನ್ನು ನಿಯಂತ್ರಿಸಲು ಈ ಗುಣಗಳು ಸಹಾಯಕವೆಂಬುದು ಪ್ಲೇಟೊನ ನಂಬಿಕೆಯಾಗಿತ್ತು. ತತ್ವಜ್ಙಾನಿಯು ಆಧ್ಯಾತ್ಮಿಕ ಹಾಗೂ ವಾಸ್ತವಿಕ ಅಂಶಗಳನ್ನು ಬೆಳೆಸಿಕೊಳ್ಳಲು ಪ್ಲೇಟೊ ಪ್ರತಿಪಾದಿಸಿರುವ ಗುಣಗಳು ನೆರವಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ತತ್ವಜ್ಙಾನಿ ಅಸಾಮಾನ್ಯ ಮಾನವನ ಸ್ಥಾನವನ್ನು ಗಳಿಸಿಕೊಳ್ಳಲು ಈ ಗುಣಗಳು ಸಹಾಯಕವೆಂಬುದು ನಿರ್ವಿವಾದ.
ತತ್ವಜ್ಙಾನಿ ಅರಸುವಿನ ಜವಾಬ್ದಾರಿಗಳು: ಸುದೀರ್ಘ ಶಿಕ್ಷಣ, ಸದ್ಗುಣ ಸಂಪನ್ನತೆ ಹಾಗೂ ಜ್ಙಾನದ ಗಣಿಯಾದ ತತ್ವಜ್ಙಾನಿ ಅರಸನಿಗೆ ಆದರ್ಶ ರಾಜ್ಯದ ಅಧಿಕಾರವನ್ನೆಲ್ಲ ನೀಡಲಾಗಿದೆ. ಆತನ ಈ ಅಧಿಕಾರದ ಮೇಲೆ ಯಾವುದೇ ಕಾನೂನಿನ, ಸಂಪ್ರದಾಯಗಳ ಅಥವಾ ಜನರ ಇಚ್ಚೆಗಳ ನಿರ್ಬಂಧಗಳನ್ನು ಹೇರಿಲ್ಲ. ಆದ್ದಾಗ್ಯೂ ತತ್ವಜ್ಙಾನಿ ಅರಸು ಪಾಲಿಸಬೇಕಾದ ಹಲವು ಜವಾಬ್ದಾರಿ ಅಥವಾ ಕರ್ತವ್ಯಗಳನ್ನು ಪ್ಲೇಟೊ ಸೂಚಿಸಿದ್ದಾನೆ. ಅವುಗಳಲ್ಲಿ ಪ್ರಧಾನವಾದ ಕೆಲವನ್ನು ಈ ಕೆಳಗೆ ನೀಡಲಾಗಿದೆ
1. ಯಾವುದೇ ವಿಷಯವನ್ನು ಕುರಿತಂತೆ ಅತಿರೇಕದ ಅಥವಾ ದುಡುಕಿನ ನಿರ್ಧಾರ ಕೈಗೊಳ್ಳದಿರುವುದು.
2. ನಿಶ್ಪಕ್ಷಪಾತ ಆಡಳಿತಕ್ಕಾಗಿ ದುರಾಸೆಯನ್ನು ತ್ಯಜಿಸುವುದು.
3. ಸಮಾಜದಲ್ಲಿ ನ್ಯಾಯವನ್ನು ಸ್ಥಾಪಿಸುವುದು.
4. ರಾಜ್ಯದಲ್ಲಿ ಬಡತನವನ್ನು ಹೋಗಲಾಡಿಸಿ ಆಸ್ತಿ ಅಥವಾ ಸಂಪತ್ತಿನ ಪ್ರಭಾವದ ಹೆಚ್ಚಳವನ್ನು ನಿಯಂತ್ರಿಸುವುದು.
5. ರಾಜ್ಯದ ಜನಸಂಖೆ ಮತ್ತು ಭೂ ಪ್ರದೇಶದ ಗಾತ್ರವನ್ನು ಸ್ವಯಂ ಪರಿಪೂರ್ಣತೆ (ಸ್ವಾವಲಂಬನೆ) ಹಾಗೂ ಐಖ್ಯತೆಗೆ ಧಕ್ಕೆಯಾಗದಂತೆ ಮಿತಿಗೊಳಿಸುವುದು.
6. ಪ್ರಜೆಗಳು ತಾವು ಪಡೆದಿರುವ ಕಾರ್ಯಗಳನ್ನು ನಿರ್ವಹಿಸುತ್ತಿರುವ ಕುರಿತಂತೆ ಮೇಲ್ವಿಚಾರಣೆ ನಡೆಸುವುದು.
7. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗೊಳ್ಳದಂತೆ ಗಮನ, ಹರಿಸುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ