ಶಿಕ್ಷಣ ವ್ಯವಸ್ಥೆಯ ಲಕ್ಷಣಗಳು: ಪ್ಲೇಟೊ ತನ್ನ ಗುರುವಾದ ಸಾಕ್ರಟಿಸ್ನ (ಸದ್ಗುಣವೇ ಜ್ಙಾನ) ಎಂಬ ಉಕ್ತಿಯಿಂದ ಪ್ರಭಾವಿತನಾಗಿದ್ದನು. ಪ್ರಜೆಗಳು ಸದ್ಗುಣಿಯಾಗಲು ಯೋಗ್ಯ ಜ್ಙಾನ ಒದಗಿಸಬಲ್ಲ ಶಿಕ್ಷಣ ವ್ಯವಸ್ಥೆ ಅಗತ್ಯವೆಂದು ಪ್ಲೇಟೊ ಭಾವಿಸಿದ್ದನು. ಇದರೊಡನೆ ಅಥೆನ್ಸ್ ನಗರದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಸೃಜನಶೀಲತೆ, ಪರಿಣತಿ ಹಾಗೂ ವೈಯಕ್ತಿಕ ಸಾಧನೆಯಂತಹ ಮೌಲ್ಯಗಳನ್ನು ಪ್ಲೇಟೊ ಮೆಚ್ಚಿಕೊಂಡಿದ್ದ. ಅಂತೆಯೇ ಸ್ಪಾರ್ಟಾದ ನಾಗರಿಕ ತರಬೇತಿಯೊದಗಿಸುವ ಕಡ್ಡಾಯ ಹಾಗೂ ರಾಜ್ಯ ನಿಯಂತ್ರಿತ ಶಿಕ್ಷಣ ವ್ಯವಸ್ಥೆಯಿಂದ ಪ್ರಭಾವಿತನಾಗಿದ್ದನು. ಈ ಹಿನ್ನೆಲೆಯಲ್ಲಿ ಆದರ್ಶ ರಾಜ್ಯಕ್ಕಾಗಿ ಪ್ಲೇಟೊ ನೂತನ ಶಿಕ್ಷಣ ವ್ಯವಸ್ಥೆಯೊಂದನ್ನು ರೂಪಿಸಿದ್ದನು. ಆತನ ವಿಶಿಷ್ಠ ಶಿಕ್ಷಣ ವ್ಯವಸ್ಥೆಯ ಪ್ರಧಾನ ಲಕ್ಷಣಗಳ ಸಂಕ್ಷಿಪ್ತ ವಿವರಣೆ ಕೆಳಗಿನಂತಿದೆ.
1. ರಾಜ್ಯ ನಿಯಂತ್ರಿತ ಶಿಕ್ಷಣ: ಜನರಿಗೆ ಸೂಕ್ತ ಶಿಕ್ಷಣ ಒದಗಿಸುವ ಸಮರ್ಪಕ ಸಾಧನ ರಾಜ್ಯವೆಂದು ಪ್ಲೇಟೊ ಭಾವಿಸಿದ್ದನು. ನಿಯಂತ್ರಣವಿಲ್ಲದ ಶಿಕ್ಷಣವು ವೈಯಕ್ತಿಕ ಸ್ವಾರ್ಥವನ್ನು ಬೆಳೆಸಿ ಸಾಮಾಜಿಕ ಕಲ್ಯಾಣವನ್ನು ಉಪೇಕ್ಷಿಸಬಹುದೆಂಬುದು ಪ್ಲೇಟೊನ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣವು ರಾಜ್ಯದ ನಿಯಂತ್ರಣದಲ್ಲಿರಬೇಕೆಂದು ಪ್ಲೇಟೊ ಪ್ರತಿಪಾದಿಸಿದ್ದನು. ಸ್ಪಾರ್ಟಾ ನಗರ ರಾಜ್ಯದ ಶಿಕ್ಷಣ ಪದ್ಧತಿಯು ಪ್ಲೇಟೊನ ಈ ನಿಲುವಿಗೆ ಪ್ರಭಾವ ಬೀರಿರುವುದನ್ನು ಗುರುತಿಸಬಹುದಾಗಿದೆ.
2. ಸ್ತ್ರೀ ಹಾಗೂ ಪುರುಷರಿಗೆ ಸಮಾನವಕಾಶ: ಪ್ಲೇಟೊ ಶಿಕ್ಷಣವು ಪುರುಷನಂತೆ ಮಹಿಳೆಗೂ ದೊರೆಯಬೇಕೆಂದು ಆಶಿಸಿದ್ದನು. ಪುರುಷನಿಗೆ ಸಮಾನವಾದ ಶಿಕ್ಷಣ ಹೊಂದಲು ಮಹಿಳೆಯರಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿದ್ದನು. ಸ್ತ್ರೀ ಮತ್ತು ಪುರುಷ ರಾಜ್ಯವೊಂದರ ಪ್ರಜೆಗಳಾಗಿ ಅದರ ಕಲ್ಯಾಣಕ್ಕೆ ಕಾರ್ಯ ನಿರ್ವಹಿಸುವುದರಿಂದ ಆ ಎರಡೂ ವರ್ಗದವರಿಗೆ ಏಕರೂಪದ ಸಮಾನ ಶಿಕ್ಷಣದ ಅವಕಾಶ ಲಭ್ಯವಾಗಬೇಕೆಂಬುದು ಆತನ ವಿಚಾರವಾಗಿತ್ತು. ಹೀಗಾಗಿ ತನ್ನ ಅಕಾಡೆಮಿಯಲ್ಲಿ ಸ್ತ್ರೀ ಮತ್ತು ಪುರುಷ ವಿದ್ಯಾರ್ಥಿಗಳಿಗೆ ಸಮಾನವಕಾಶವನ್ನು ಪ್ಲೇಟೊ ಒದಗಿಸಿದ್ದನು.
3. ಪರಿಶುದ್ಧ ಸಾಹಿತ್ಯಕ್ಕೆ ಮಹತ್ವ: ಜನರು ತಾವು ಅಧ್ಯಯನ ಮಾಡುವ ಸಾಹಿತ್ಯದಿಂದ ಪ್ರಭಾವಿತಗೊಳ್ಳುವರೆಂಬುದು ಪ್ಲೇಟೊನ ನಂಬಿಕೆಯಾಗಿತ್ತು. ಕೆಟ್ಟ ಹಾಗೂ ಅಪರಿಪೂರ್ಣ ಸಾಹಿತ್ಯವು ಜನರನ್ನು ದಾರಿ ತಪ್ಪಿಸಬಹುದೆಂಬ ಆತಂಕವನ್ನೂ ಪ್ಲೇಟೊ ಹೊಂದಿದ್ದನು. ಹೀಗಾಗಿ ಆತ ಕೇವಲ ಉತ್ತಮ ಹಾಗೂ ಪರಿಪೂರ್ಣ ಸಾಹಿತ್ಯ ಮಾರುಕಟ್ಟೆ ಪ್ರವೇಶಿಸಬೇಕೆಂದು ಪ್ರತಿಪಾದಿಸಿದನು. ಜೊತೆಗೆ ಕೆಟ್ಟ ಹಾಗೂ ಅಪರಿಪೂರ್ಣ ಸಾಹಿತ್ಯ ಜನರನ್ನು ತಲುಪದಂತೆ ರಾಜ್ಯವು ಸೂಕ್ತ ಕ್ರಮಗಳನ್ನು ಅಂದರೆ ಸಾಹಿತ್ಯದ ಕಠಿಣ ಸೆನ್ಸಾರನ್ನು ಪಾಲಿಸಲು ಸೂಚಿಸಿದ್ದನು.
4. ಕಡ್ಡಾಯ ಹಾಗೂ ಸಾರ್ವತ್ರಿಕ ಶಿಕ್ಷಣಕ್ಕೆ ಒಲವು: ಪ್ಲೇಟೊನ ದೃಷ್ಟಿಯಲ್ಲಿ ಶಿಕ್ಷಣವು ಕುಟುಂಬವೊಂದರ ಐಚಿಕ ಅಂಶವಾಗಿರಲಿಲ್ಲ. ಆತನ ಪ್ರಕಾರ ತಮ್ಮ ಮಕ್ಕಳಿಗೆ ಶಿಕ್ಷಣ ದೊರಕಿಸುವುದು ಪೋಷಕರಾದವರ ಬಾಧ್ಯತೆಯಾಗಿತ್ತು. ಇದರ ಪರಿಣಾಮ ಶಿಕ್ಷಣ ಸರ್ವರನ್ನೂ ಒಳಗೊಂಡು ಸಾರ್ವತ್ರಿಕ ಸ್ವರೂಪವನ್ನು ಹೊಂದುವಂತಾಗಿತ್ತು.
5. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಆಧ್ಯತೆ: ಪ್ಲೇಟೊ ಸದೃಢ ದೇಹದಲ್ಲಿ ಸದೃಢ ಮನಸ್ಸು (SOUND MIND IN A SOUND BODY) ಇರಬೇಕೆಂಬುದಾಗಿ ನಂಬಿದ್ದನು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳೆರಡೂ ವ್ಯಕ್ತಿಯೊಬ್ಬನ ಪರಿಪೂರ್ಣತೆಗೆ ಅಗತ್ಯವೆಂಬುದು ಪ್ಲೇಟೊನ ವಿಚಾರವಾಗಿತ್ತು. ಹೀಗಾಗಿ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಇವೆರಡೂ ಅಂಶಗಳ ಬೆಳವಣಿಗೆಗೆ ಸಮಾನವಾದ ಮಹತ್ವ ನೀಡಿದ್ದನು.
6. ದೀರ್ಘ ಕಾಲದ ಶಿಕ್ಷಣ: ಪ್ಲೇಟೊನ ಶಿಕ್ಷಣ ವ್ಯವಸ್ಥೆಯು ಸಮಕಾಲಿನ ಶಿಕ್ಷಣದಂತೆ ಕಡಿಮೆ ಅವಧಿಯದಾಗಿರಲಿಲ್ಲ. ಹುಟ್ಟಿನಿಂದ ಆರಂಭವಾಗಿ ಐವತ್ತು ವರ್ಷಗಳವರೆಗೆ ವಿವಿಧ ಹಂತಗಳಲ್ಲಿ ಸಾಗುವಂತಹುದಾಗಿತ್ತು. ಆಯುಷ್ಯದ ಬಹು ಭಾಗವನ್ನು ವಿದ್ಯಾರ್ಥಿ ಶಿಕ್ಷಣದಲ್ಲಿಯೇ ಕಳೆಯುವಷ್ಟು ಸುದೀರ್ಘ ಶಿಕ್ಷಣವನ್ನು ಪ್ಲೇಟೊ ಪ್ರತಿಪಾದಿಸಿದ್ದನು.
7. ತತ್ವಜ್ಙಾನಿಗಳ ಸೃಷ್ಟಿಯ ಉದ್ದೇಶ: ರಾಜ್ಯವೊಂದರ ಸಾಮಾಜಿಕ ವ್ಯವಸ್ಥೆಯ ಕೆನೆ ಪದರದಲ್ಲಿ ಅಂದರೆ ಉನ್ನತ ಶ್ರೇಣಿಯಲ್ಲಿ ತತ್ವಜ್ಙಾನಿಗಳಿಗೆ ಪ್ಲೇಟೊ ಸ್ಥಾನ ನೀಡಿದ್ದನು. ತತ್ವಜ್ಙಾನಿಗಳಾದವರೇ ಜನ ಸಮುದಾಯವನ್ನು ಆಳಬೇಕೆಂಬುದು ಪ್ಲೇಟೊನ ಆಶಯವಾಗಿತ್ತು. ಹೀಗಾಗಿ ಸದ್ಗುಣ ಸಂಪನ್ನರಾದ ಮತ್ತು ಆಳುವ ಸಾಮರ್ಥ್ಯವನ್ನುಳ್ಳ ತತ್ವಜ್ಙಾನಿಗಳನ್ನು ನಿರ್ಮಿಸುವುದೇ ಪ್ಲೇಟೊನ ಶಿಕ್ಷಣದ ಪ್ರಾಥಮಿಕ ಗುರಿಯಾಗಿತ್ತು.
ವಿಮರ್ಷೆ: ಪ್ಲೇಟೊನ ಶಿಕ್ಷಣದ ವ್ಯವಸ್ಥೆಯಲ್ಲಿ ಇಂದಿಗೂ ಮಾದರಿಯಾಗುವ ಹಲವು ಅಂಶಗಳಿರುವುದು ನಿರ್ವಿವಾದ. ಶಿಕ್ಷಣದ ಹಂತಗಳು, ಸಾರ್ವತ್ರಿಕ ಶಿಕ್ಷಣ, ರಾಜ್ಯ ನಿಯಂತ್ರಿತ ಶಿಕ್ಷಣ, ಪರೀಕ್ಷಾ ಪ್ರಕ್ರಿಯೆಗಳು ಪ್ರಸ್ತುತ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು ಪ್ಲೇಟೊನ ಶಿಕ್ಷಣ ಪದ್ಧತಿಯ ಪ್ರಾಮುಖ್ಯತೆಯನ್ನು ವಿವರಿಸುತ್ತವೆ. ಆದರೆ ಆತನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ದೋಷಗಳಿದ್ದು ವಿಮರ್ಷಕರು ಅವುಗಳನ್ನು ಗುರುತಿಸಿದ್ದಾರೆ. ಈ ಕೆಳಗೆ ಪ್ಲೇಟೊನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಂತಕರು ವ್ಯಕ್ತಪಡಿಸಿರುವ ವಿಮರ್ಷೆಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
1. ಅಪರಿಪೂರ್ಣ ವ್ಯವಸ್ಥೆ: ಪ್ಲೇಟೊ ಪ್ರತಿಪಾದಿಸಿರುವ ಶಿಕ್ಷಣದ ವ್ಯವಸ್ಥೆ ಪರಿಪೂರ್ಣ ಸ್ವರೂಪವನ್ನು ಪಡೆದಿಲ್ಲ. ಸಮಾಜದಲ್ಲಿನ ಬಹುಸಂಖ್ಯಾತ ಉತ್ಪಾದಕ ವರ್ಗದವರನ್ನು ಕೇವಲ ಪ್ರಾಥಮಿಕ ಹಂತಕ್ಕೆ ಪ್ಲೇಟೊ ಸೀಮಿತಗೊಳಿಸಿರುವ. ಜೊತೆಗೆ ಆತನ ಶಿಕ್ಷಣದ ಪಠ್ಯಕ್ರಮವು ಸರ್ವರ ಬದಲು ಆಳುವ ಹಾಗು ಸೈನಿಕ ವರ್ಗದ ಸೃಷ್ಟಿಗೆ ಮಾತ್ರ ಆಧ್ಯತೆ ನೀಡುವಂತಿದೆ. ಿದರೊಡನೆ ತತ್ವಜ್ಙಾನಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ಲೇಟೊನ ಶಿಕ್ಷಣ ವ್ಯವಸ್ಥೆ ಅಪರಿಪೂರ್ಣ ಎಂಬುದಾಗಿ ವಿಮರ್ಷಕರು ಪರಿಗಣಿಸಿರುವರು.
2. ಕಲಿಕಾ ಸ್ವಾತಂತ್ರ್ಯದ ನಿರ್ಲಕ್ಷ: ಪ್ಲೇಟೊ ತನ್ನ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಸಂಗೀತ ಹಾಗೂ ವ್ಯಾಯಾಮಕ್ಕೆ ಮತ್ತು ಉನ್ನತ ಹಂತದಲ್ಲಿ ಗಣಿತ ಹಾಗೂ ತರ್ಕಶಾಸ್ತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿರುವ. ವೃತ್ತಿಪರ ಅಥವಾ ಸಾಹಿತ್ಯದ ಕಲಿಕೆಗೆ ಸಾಕಾದಷ್ಟು ಅವಕಾಶ ಕಲ್ಪಿಸಿಲ್ಲ. ಜೊತೆಗೆ ಪರಿಶುದ್ಧ ಸಾಹಿತ್ಯವು ಮಾತ್ರ ಜನರಿಗೆ ಲಭ್ಯವಾಗಬೇಕೆಂದು ಪ್ರತಿಪಾದಿಸಿ ರಾಜ್ಯವು ಕಳಪೆ ಸಾಹಿತ್ಯವನ್ನು ನಿಯಂತ್ರಿಸಲು ಸೂಚಿಸಿರುವ. ಇದರಿಂದಾಗಿ ತನ್ನ ಆಸಕ್ತಿ ಹಾಗು ಸಾಮರ್ಥ್ಯಾನುಸಾರ ಮುಕ್ತವಾಗಿ ಕಲಿಕೆಯಲ್ಲಿ ತೊಡಗುವ ಸ್ವಾತಂತ್ರ್ಯವನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ.
3. ಪ್ರಜಾಪ್ರಭುತ್ವಕ್ಕೆ ಮಾರಕ: ಪ್ಲೇಟೊ ಉತ್ಪಾದಕ ವರ್ಗದವರಿಗೆ ಉನ್ನತ ಶಿಕ್ಷಣವನ್ನು ನಿರಾಕರಿಸಿ ಸಮಾನತೆಯನ್ನು ಕಡೆಗಣಿಸಿರುವ. ಜೊತೆಗೆ ಪರಿಶೋಧಿತ ಸಾಹಿತ್ಯವನ್ನು ಮಾತ್ರ ಓದಬೇಕೆಂದು ಪ್ರತಿಪಾದಿಸಿ ಕಲಿಕಾ ಸ್ವಾತಂತ್ರ್ಯವನ್ನು ಉಪೇಕ್ಷಿಸಿರುವ. ಇದರೊಡನೆ ಸಮಾಜದಲ್ಲಿನ ಿತರರ ಬದಲು ತತ್ವಜ್ಙಾನಿಗಳು ಮಾತ್ರ ಆಳಬೇಕೆಂದು ಪ್ರತಿಪಾದಿಸಿ ಪ್ರಜಾಪ್ರಭುತ್ವದ ಬೇರಿನಂತಿರುವ ಚುನಾವಣೆಗಳನ್ನು ಮರೆತಿರುವ. ಹೀಗಾಗಿ ವಿಮರ್ಷಕರು ಪ್ಲೇಟೊನ ಶಿಕ್ಷಣವು ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿರುವರು.
4. ಅವಾಸ್ತವಿಕ ಚರ್ಚೆ: ಪ್ಲೇಟೊನ ಶಿಕ್ಷಣವು ಹುಟ್ಟಿನಿಂದ ಐವತ್ತು ವರ್ಷಗಳವರೆಗೆ ಸಾಗುತ್ತದೆ. ಇಷ್ಟೊಂದು ಕಾಲದವರೆಗೆ ಆಸಕ್ತಿ ಹಾಗೂ ಶ್ರದ್ಧೆ ಉಳಿಸಿಕೊಳ್ಳುವುದು ಕಲಿಕಾರ್ಥಿಗೆ ಅಸಾಧ್ಯ. ಜೀವಿತದ ಬಹು ಭಾಗವನ್ನೇ ಶಿಕ್ಷಣದಲ್ಲಿ ಕಳೆಯಬೇಕೆಂಬ ಪ್ಲೇಟೊನ ಶಿಕ್ಷಣ ವ್ಯವಸ್ಥೆಯು ವಾಸ್ತವಿಕತೆಗೆ ದೂರವಾಗಿದೆ. ಈ ಶಿಕ್ಷಣ ಪದ್ಧತಿಯು ಚರ್ಚೆಗೆ ಸೀಮಿತವೇ ಹೊರತು ವಾಸ್ತವಿಕವಾಗಿ ಅನುಷ್ಟಾನಗೊಳಿಸಲು ಕಠಿಣವಾಗಿದೆ. ಹೀಗಾಗಿ ಪ್ಲೇಟೊನ ಶಿಕ್ಷಣದ ವ್ಯವಸ್ಥೆ ಅವಾಸ್ತವಿಕ ಚರ್ಚೆ ಎಂಬುದಾಗಿ ವಿಮರ್ಷಿಸಲ್ಪಟ್ಟಿದೆ.
5. ಆಡಳಿತ ತರಬೇತಿಯ ಕೊರತೆ: ಪ್ಲೇಟೊ ಹೇಳುವಂತೆ ಆಳುವ ತತ್ವಜ್ಙಾನಿಯನ್ನು ಸೃಷ್ಟಿಸುವುದು ಆತನ ಶಿಕ್ಷಣ ವ್ಯವಸ್ಥೆಯ ಅಂತಿಮ ಗುರಿಯಾಗಿದೆ. ಆದರೆ ಪ್ರಾಥಮಿಕ ಅಥವಾ ಉನ್ನತ ಶಿಕ್ಷಣದ ಹಂತದಲ್ಲಿ ಆಡಳಿತಕ್ಕೆ ಪೂರಕವಾದ ತರಬೇತಿಯ ಪ್ರಸ್ತಾಪವನ್ನೇ ಮಾಡಿಲ್ಲ. ಆಡಳಿತಕ್ಕೆ ಪೂರಕವಾದ ಹಣಕಾಸು, ಯುದ್ಧ, ವಿದೇಶಿ ವ್ಯವಹಾರ, ಪ್ರಜಾನುರಾಗ ನೀತಿಯ ಕುರಿತು ಯಾವುದೇ ಪ್ರಸ್ತಾಪಗಳಿಲ್ಲ. ಹೀಗಾಗಿ ಆತನ ಶಿಕ್ಷಣವು ಆಡಳಿತ ತರಬೇತಿ ನೀಡುವಲ್ಲಿ ವಿಫಲಗೊಳ್ಳುವುದೆಂದು ಟೀಕಿಸಲಾಗಿದೆ.
6. ದ್ವಂಧ್ವ ನಿಲುವು: ಪ್ಲೇಟೊ ಕಡ್ಡಾಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಬೇಕೆಂದು ಸೂಚಿಸಿದ್ದಾನೆ. ಇನ್ನೊಂದೆಡೆ ಪ್ರತ್ಯೇಕ ಶಿಬಿರಗಳಲ್ಲಿ ವಾಸಿಸುವ ಆಳುವ ಹಾಗು ಸೈನಿಕ ವರ್ಗದ ಪೋಷಕರಿಗೆ ಜನಿಸಿರುವ ಮಕ್ಕಳಿಗೆ ಯಾರು ಶಿಕ್ಷಣ ಒದಗಿಸಬೇಕೆಂಬುದನ್ನು ತಿಳಿಸಿಲ್ಲ. ಹೀಗೆ ಹಲವು ದ್ವಂಧ್ವ ನಿಲುವುಗಳನ್ನು ಪ್ಲೇಟೊನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುತಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ