[B] ಪ್ಲೇಟೊನ ಶಿಕ್ಷಣ ವ್ಯವಸ್ಥೆ:
ಪೀಠಿಕೆ: ಪ್ಲೇಟೊ ತನ್ನ ಸಮಕಾಲಿನ ಗ್ರೀಕ್ ನಗರ ರಾಜ್ಯಗಳಲ್ಲಿದ್ದ ಅಜ್ಙಾನಿಗಳ ಆಳ್ವಿಕೆ, ಪ್ರಜಾಪ್ರಭುತ್ವದ ದಬ್ಬಾಳಿಕೆ ಹಾಗೂ ಪ್ರಜೆಗಳ ಸಂಕಷ್ಟಗಳಿಂದ ಸಾಕಷ್ಟು ನೊಂದಿದ್ದನು. ಪರಿಣಾಮವಾಗಿ ಅಂದಿನ ನಗರ ರಾಜ್ಯಗಳ ಪರಿಸ್ಥಿತಿಯಲ್ಲಿ ಸುಧಾರಣೆ ತರಲು ಆದರ್ಶ ರಾಜ್ಯ ಮಂಡಿಸಲು ಮುಂದಾದನು. ತನ್ನ ಆದರ್ಶ ರಾಜ್ಯ ಸಿದ್ಧಾಂತದಲ್ಲಿ ಪ್ಲೇಟೊ ಶಿಕ್ಷಣಕ್ಕೆ ಮಹತ್ವ ನೀಡಿದ್ದನು. ಆತನ ಪ್ರಕಾರ ನಗರ ರಾಜ್ಯಗಳ ಅಂದಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಸೂಕ್ತ ಪರಿಹಾರವಾಗಿತ್ತು. ಜೊತೆಗೆ ಸಾರ್ವತ್ರಿಕ ಶಿಕ್ಷಣವು ಆದರ್ಶ ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ಸಾಧನವಾಗಿತ್ತು. ಇದರೊಡನೆ ಆದರ್ಶ ರಾಜ್ಯವನ್ನಾಳುವ ತತ್ವಜ್ಙಾನಿ ಅರಸರನ್ನು ರೂಪಿಸುವ ಸಾಮರ್ಥ್ಯವನ್ನು ಶಿಕ್ಷಣ ಪಡೆದಿತ್ತು. ಹೀಗಾಗಿ ತನ್ನ ಮೇರು ಕೃತಿಯಾದ ರಿಪಬ್ಲಿಕ್ನಲ್ಲಿ ಪ್ಲೇಟೊ ಆದರ್ಶ ರಾಜ್ಯಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾನೆ. ಗಮನಿಸಬೇಕಾದ ಅಂಶವೇನೆಂದರೆ ಅರಿಸ್ಟಾಟಲ್ ಸೇರಿದಂತೆ ಇತರ ಗ್ರೀಕ್ ಚಿಂತಕರು ಪ್ಲೇಟೊನಷ್ಟು ಶಿಕ್ಷಣಕ್ಕೆ ಮಹತ್ವ ನೀಡಿಲ್ಲದಿರುವುದು. ಆದ್ದರಿಂದ ರೂಸೊ ತನ್ನ ಎಮಿಲಿ ಗ್ರಂಥದಲ್ಲಿ (ಪ್ಲೇಟೊನ ರಿಪಬ್ಲಿಕ್ ಶಿಕ್ಷಣವನ್ನು ಕುರಿತಾದ ಮಹಾ ಪ್ರಬಂಧ) ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ.
ಪ್ಲೇಟೊ ಪ್ರಕಾರ ಶಿಕ್ಷಣವು ವ್ಯಕ್ತಿಯ ಜೀವನದ ಬಹು ಮುಖ್ಯ ಸಂಗತಿಯಾಗಿದೆ. ದುರ್ಗುಣಗಳನ್ನು ಮೂಲದಿಂದಲೇ ನಿರ್ಮೂಲನೆಗೊಳಿಸಿ ಪ್ರಜೆಗಳ ಜೀವನದಲ್ಲಿನ ದುರ್ವರ್ತನೆಗಳನ್ನು ಶಿಕ್ಷಣವು ಸುಧಾರಿಸುತ್ತದೆ. ಆದ್ದರಿಂದ ರಾಜ್ಯವು ಶಿಕ್ಷಣವನ್ನು ರಕ್ಷಿಸಿದರೆ ರಾಜ್ಯದೊಳಗಿನ ಉಳಿದೆಲ್ಲವ್ಯವಸ್ಥೆಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತವೆ ಎಂಬುದಾಗಿ ಪ್ಲೇಟೊ ಅಭಿಪ್ರಾಯಪಟ್ಟಿದ್ದನು. ಈ ಹಿನ್ನೆಲೆಯಲ್ಲಿಯೇ ರಾಜ್ಯವನ್ನು ಶೈಕ್ಷಣಿಕ ಸಂಸ್ಥೆ ಎಂಬುದಾಗಿ ಪ್ಲೇಟೊ ಪರಿಗಣಿಸಿದ್ದನು. ರಾಜ್ಯ ನಿಯಂತ್ರಿತ ಶಿಕ್ಷಣದ ಮೂಲಕ ನೂತನ ಸಾಮಾಜಿಕ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವೆಂದು ಪ್ಲೇಟೊ ನಂಬಿದ್ದನು. ಹೀಗಾಗಿ ಅಥೆನ್ಸ್ ಮತ್ತು ಸ್ಪಾರ್ಟಾ ನಗರ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ಮೈಗೂಡಿಸಿಕೊಂಡ ವೈಯಕ್ತಿಕ ಮತ್ತು ಸಾಮಾಜಿಕ ಆಯಾಮವನ್ನುಳ್ಳ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸಿದನು. ತನ್ನ ಆದರ್ಶ ರಾಜ್ಯಕ್ಕನುಗುಣವಾಗಿ ಪ್ರತಿಪಾದಿಸಿರುವ ಪ್ಲೇಟೊನ ಶಿಕ್ಷಣ ವ್ಯವಸ್ಥೆಯ ಹಂತಗಳು, ಪಠ್ಯಕ್ರಮ, ಲಕ್ಷಣಗಳು ಮತ್ತು ದೋಷಗಳನ್ನು ಕೆಳಗೆ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
ಶಿಕ್ಷಣದ ಹಂತಗಳು ಮತ್ತು ಪಠ್ಯಕ್ರಮ: ಪ್ಲೇಟೊ ಪ್ರತಿಪಾದಿಸಿರುವ ಶಿಕ್ಷಣ ಪದ್ಧತಿಯು ಸಂಕೀರ್ಣ, ಸವಿವರ ಹಾಗೂ ಸುದೀರ್ಘ ಸ್ವರೂಪವನ್ನು ಪಡೆದಿತ್ತು. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಎಂಬ ಎರಡು ಪ್ರಧಾನ ಹಂತಗಳನ್ನು ಗುರುತಿಸಬಹುದಾಗಿದ್ದರೂ ಪ್ರತಿಯೊಂದು ಹಂತ ತನ್ನೊಳಗೆ ಮತ್ತೆ ಕೆಲವು ಹಂತಗಳಲ್ಲಿ ವರ್ಗೀಕರಣಗೊಂಡಿತ್ತು. ಗಮನಾರ್ಹ ಅಂಶವೇನೆಂದರೆ ಆಯಾ ಹಂತಕ್ಕೆ ಪೂರಕವಾದ ವಿಶಿಷ್ಟ ಪಠ್ಯಕ್ರಮವನ್ನು ಪ್ರತಿಯೊಂದು ಹಂತವೂ ಒಳಗೊಂಡಿದುದು. ಸರಳವಾಗಿ ಪ್ಲೇಟೊ ಪ್ರತಿಪಾದಿಸಿರುವ ಶಿಕ್ಷಣ ವ್ಯವಸ್ಥೆಯ ಹಂತಗಳನ್ನು ಹಾಗೂ ಆಯಾ ಹಂತದ ಪಠ್ಯಕ್ರಮವನ್ನು ಕೆಳಗೆ ವಿವರಿಸಲಾಗಿದೆ.
1. ಪ್ರಾಥಮಿಕ ಶಿಕ್ಷಣ ಹಂತ: ಪ್ಲೇಟೊ ತಿಳಿಸಿರುವ ಪ್ರಾಥಮಿಕ ಶಿಕ್ಷಣ ಹಂತವು ವಿದ್ಯಾರ್ಥಿಯ ಹುಟ್ಟಿನಿಂದ ಆತನ ಇಪ್ಪತ್ತನೇ ವಯಸ್ಸಿನವರೆಗೆ ಸಾಗುತ್ತದೆ. ಗಮನಾರ್ಹ ಅಂಶವೇನೆಂದರೆ ಪ್ರಾಥಮಿಕ ಶಿಕ್ಷಣವು ಸಮಾಜದಲ್ಲಿನ ಮೂರು ವರ್ಗದವರಿಗೆ ಅನ್ವಯವಾಗುತ್ತಿತ್ತು. ವಿದ್ಯಾರ್ಥಿಗೆ ಸರಳ ಮತ್ತು ಸಹಜ ಪಠ್ಯಕ್ರಮವನ್ನು ಈ ಹಂತದಲ್ಲಿ ಪ್ಲೇಟೊ ಪ್ರತಿಪಾದಿಸಿರುವ. ಈ ಹಂತವು ಮತ್ತೆ ಮೂರು ಹಂತಗಳನ್ನು ಒಳಗೊಂಡಿದ್ದು ಅವುಗಳ ಕಾಲ ಹಾಗೂ ಬೋಧನಾ ವಿಷಯವನ್ನು ಕೆಳಗೆ ಚರ್ಚಿಸಲಾಗಿದೆ.
ಅ. ಮೊದಲ ಹಂತ: ಇದು ಪ್ಲೇಟೊನ ಪ್ರಾಥಮಿಕ ಶಿಕ್ಷಣದ ಆರಂಭಿಕ ಹಂತವಾಗಿತ್ತು. ವಿದ್ಯಾರ್ಥಿಯ ಹುಟ್ಟಿನಿಂದ ಆತನು ಆರನೇ ವರ್ಷ ತಲುಪುವವರೆಗೆ ಈ ಹಂತವು ಸಾಗುತ್ತಿತ್ತು. ಇಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಅವರ ಭಾಷಾಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿತ್ತು. ಜೊತೆಗೆ ಧರ್ಮ ಮತ್ತು ನೀತಿ ಕುರಿತಂತೆ ಮೂಲ ಪರಿಕಲ್ಪನೆಗಳನ್ನು ಕಥೆಗಳ ರೂಪದಲ್ಲಿ ಮನನ ಮಾಡಲಾಗುತ್ತಿತ್ತು. ಈ ಹಂತದಲ್ಲಿ ಮಕ್ಕಳಿಂದ ಭಯ, ದುರಂತ, ಅನೈತಿಕತೆ, ಅಸತ್ಯದಂತಹ ನಕಾರಾತ್ಮಕ ಗುಣಗಳು ದೂರವಿರುವಂತೆ ಎಚ್ಚರಿಕೆ ವಹಿಸಬೇಕಲ್ಲದೇ ದೇವರು ಹಾಗು ಆಳುವವರಲ್ಲಿ ವಿಧೇಯತೆ ಬೆಳೆಸಬೇಕೆಂಬುದು ಪ್ಲೇಟೊನ ಆಶಯವಾಗಿತ್ತು.
ಆ. ಎರಡನೇ ಹಂತ: ಇದು ಪ್ಲೇಟೊನ ಪ್ರಾಥಮಿಕ ಶಿಕ್ಷಣದ ಎರಡನೇ ಹಂತವಾಗಿದ್ದು ಆರನೇ ವಯಸ್ಸಿನಿಂದ ಹದಿನೆಂಟನೇ ವಯಸ್ಸನ್ನು ತಲುಪುವವರೆಗೆ ಸಾಗುತ್ತಿತ್ತು. ಇಲ್ಲಿ ಸಂಗೀತ ಹಾಗೂ ವ್ಯಾಯಾಮಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿತ್ತು. ಸಂಗೀತವು ವಿದ್ಯಾರ್ಥಿಯ ಾತ್ಮದ ಮತ್ತು ವ್ಯಾಯಾಮವು ದೈಹಿಕ ಬೆಳವಣಿಗೆಗೆ ಸಹಾಯಕವೆಂಬುದು ಇದರ ಉದ್ದೇಶ. ಇವುಗಳೊಡನೆ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕಲೆ ಹಾಗೂ ಗಣಿತಗಳ ಮೂಲ ಪರಿಕಲ್ಪನೆಗಳನ್ನು ಇದೇ ಹಂತದಲ್ಲಿ ಪರಿಚಯಿಸಲಾಗುತ್ತಿತ್ತು.
ಇ. ಮೂರನೇ ಹಂತ: ಇದು ಪ್ಲೇಟೊನ ಪ್ರಾಥಮಿಕ ಶಿಕ್ಷಣದ ಕೊನೆಯ ಹಂತವಾಗಿತ್ತು. ಹದಿನೆಂಟರಿಂದ ಇಪ್ಪತ್ತನೇ ವಯಸ್ಸಿನ ಯುವಕರಿಗೆ ಈ ಹಂತ ಸಂಬಂಧಿಸಿತ್ತು. ಇಲ್ಲಿ ಯುವಕ ಮತ್ತು ಯುವತಿಯರಿಗೆ ವಿವಿಧ ವಿಷಯಗಳೊಡನೆ ಕಡ್ಡಾಯ ಸೈನಿಕ ತರಬೇತಿ ನೀಡಲಾಗುತ್ತಿತ್ತು. ರಾಜ್ಯದ ರಕ್ಷಣೆಗೆ ಸರ್ವರನ್ನೂ ಸಿದ್ಧಗೊಳಿಸುವ ಉದ್ದೇಶವನ್ನು ಈ ಹಂತ ಒಳಗೊಂಡಿರುವುದನ್ನು ಕಾಣಬಹುದಾಗಿದೆ.
ಪ್ರಾಥಮಿಕ ಶಿಕ್ಷಣದ ಮೂರೂ ಹಂತಗಳ ಅಂತ್ಯದಲ್ಲಿ ಅಂದರೆ ಇಪ್ಪತ್ತನೇ ವಯಸ್ಸಿನಲ್ಲಿ ಸಾರ್ವತ್ರಿಕ ಪರೀಕ್ಷೆಯೊಂದನ್ನು ನಡೆಸಲಾಗುತ್ತಿತ್ತು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಂತಕ್ಕೆ ತೆರಳುತ್ತಿದ್ದರು. ಅನುತ್ತೀರ್ಣರಾದವರು ಆ ಶಿಕ್ಷಣದಿಂದ ವಂಚಿತಗೊಂಡು ಉತ್ಪಾದಕ ವರ್ಗದ ಕೃಷಿ, ವ್ಯಾಪಾರ, ವಿವಿಧ ಸೇವೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು.
2. ಉನ್ನತ ಶಿಕ್ಷಣ ಹಂತ: ಪ್ಲೇಟೊ ಪ್ರತಿಪಾದಿಸಿರುವ ಉನ್ನತ, ಶಿಕ್ಷಣ ಹಂತವು ಇಪ್ಪತ್ತರಿಂದ ಐವತ್ತನೇ ವರ್ಷದವರೆಗೆ ಸಾಗುತ್ತದೆ. ವಿದ್ಯಾರ್ಥಿಯನ್ನು ಹೋರಾಡುವ ಸೈನಿಕನಾಗಿ ಅಥವಾ ಆಳುವ ತತ್ವಜ್ಙಾನಿಯಾಗಿ ರೂಪಿಸುವ ಉದ್ದೇಶವನ್ನು ಈ ಹಂತ ಪ್ರತಿನಿಧಿಸುತ್ತಿತ್ತು. ಹೀಗಾಗಿ ಸಂಕೀರ್ಣ ಮತ್ತು ಸರ್ವ ವ್ಯಾಪಕ ಪಠ್ಯಕ್ರಮವನ್ನು ಈ ಹಂತದಲ್ಲಿ ಕಲಿಕಾರ್ಥಿಗೆ ಪ್ಲೇಟೊ ನಿಗಧಿಪಡಿಸಿದ್ದಾನೆ. ಗಮನಾರ್ಹ ವಿಷಯವೇನೆಂದರೆ ಸಮಾಜದಲ್ಲಿನ ಉತ್ಪಾದಕ ವರ್ಗದವರಿಗೆ ಈ ಶಿಕ್ಷಣಕ್ಕೆ ಅವಕಾಶವಿರುವುದಿಲ್ಲ. ಉನ್ನತ ಶಿಕ್ಷಣದಲ್ಲಿಯೂ ಕೆಳಗಿನ ಒಳ ಹಂತಗಳನ್ನು ಗುರುತಿಸಬಹುದಾಗಿದ್ದು ಅವುಗಳ ಸಂಕ್ಷಿಪ್ತ ವಿವರ ಕೆಳಗಿನಂತಿದೆ.
ಅ. ಮೊದಲ ಹಂತ: ಉನ್ನತ ಶಿಕ್ಷಣದ ಮೊದಲ ಹಂತವು ವಿದ್ಯಾರ್ಥಿಯ ಇಪ್ಪತ್ತನೇ ವಯಸ್ಸಿನಿಂದ ಮೂವತ್ತನೇ ವಯಸ್ಸಿನವರೆಗೆ ಸಾಗುತ್ತದೆ. ಇಲ್ಲಿ ಗಣಿತ, ತರ್ಕಶಾಸ್ತ್ರ, ಜೋತಿಷ್ಯಶಾಸ್ತ್ರ, ಖಗೋಳಶಾಸ್ತ್ರ ಮುಂತಾದವುಗಳನ್ನು ಬೋಧಿಸಲಾಗುತ್ತಿತ್ತು. ಈ ಹಂತದ ಕೊನೆಯಲ್ಲಿ ಅಂದರೆ ಮೂವತ್ತನೇ ವಯಸ್ಸಿನಲ್ಲಿ ಪರೀಕ್ಷೆಯೊಂದನ್ನು ನಡೆಸಲಾಗುತ್ತಿತ್ತು. ಈ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಮುಂದಿನ ಎರಡನೇ ಹಂತಕ್ಕೆ ಆಯ್ಕೆಗೊಂಡರೆ ಅನುತ್ತೀರ್ಣರಾದವರು ಸೈನಿಕ ವರ್ಗಕ್ಕೆ ಅಥವಾ ಕೆಳ ಹಂತದ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗುತ್ತಿದ್ದರು.
ಆ. ಎರಡನೇ ಹಂತ: ಇದು ಉನ್ನತ ಶಿಕ್ಷಣದ ಕೊನೆಯ ಹಂತವಾಗಿದ್ದು ಐದು ವರ್ಷಗಳ ಅಂದರೆ ಮೂವತ್ತರಿಂದ ಮೂವತ್ತೈದನೇ ವಯಸ್ಸಿನವರೆಗೆ ಸಾಗುತ್ತದೆ. ಇಲ್ಲಿ ಧ್ವಂಧ್ವಾತ್ಮಕ ವಿಧಾನದೊಡನೆ ಸಂಭಾಷಣಾ ಕಲೆಯನ್ನು ಬೋಧಿಸಲಾಗುತ್ತಿತ್ತು. ಆಳುವವರಿಗೆ ಅಗತ್ಯವಾದ ಸಮಗ್ರ ಸಾಮರ್ಥ್ಯವನ್ನು ಈ ಹಂತದಲ್ಲಿ ಮೈಗೂಡಿಸಿಕೊಳ್ಳಲು ವಿವಿಧ ಅವಕಾಶಗಳನ್ನು ನೀಡಲಾಗುತ್ತಿತ್ತು.
ಉನ್ನತ ಶಿಕ್ಷಣದ ಎರಡೂ ಹಂತಗಳ ಮೂಲಕ ಕೆಳ ಹಾಗೂ ಉನ್ನತ ದರ್ಜೆಯ ಆಡಳಿತಗಾರರನ್ನು ಸೃಷ್ಟಿಸಲು ಪ್ಲೇಟೊ ಬಯಸಿದ್ದನು. ಮುಂದುವರೆದು ಮೂವತ್ತೈದನೇ ವಯಸ್ಸಿನಿಂದ ಐವತ್ತನೇ ವಯಸ್ಸಿನವರೆಗೆ ಆಡಳಿತದಲ್ಲಿ ಪ್ರಾಯೋಗಿಕ ಜ್ಙಾನವನ್ನು ಹೊಂದಿದ ಬಳಿಕ ಪರಿಪೂರ್ಣ ತತ್ವಜ್ಙಾನಿ ಅರಸ ಸೃಷ್ಟಿಸಲ್ಪಡುವ ಎಂಬುದು ಪ್ಲೇಟೊನ, ಪ್ರತಿಪಾದನೆಯಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ