ಮಂಗಳವಾರ, ಮೇ 11, 2021

[I.] ಪ್ಲೇಟೊ:

ಪೀಠಿಕೆ: (ಬುದ್ಧಿವಂತ ತ್ರಿವಳಿಗಳು) ಎಂದು ಖ್ಯಾತರಾದ ಗ್ರೀಕ್ ಚಿಂತಕರಲ್ಲಿ ಪ್ಲೇಟೊನೂ ಒಬ್ಬ. ಆದರ್ಶವಾದಿಯಾಗಿದ್ದ ಪ್ಲೇಟೊ ಜಗತ್ತಿನ ರಾಜಕೀಯ ಚಿಂತನೆಗೆ ತನ್ನದೇಯಾದ ಕೊಡುಗೆ ನೀಡಿರುವ. ತನ್ನ ಪೂರ್ವದ ಚಿಂತಕರಂತೆ ಸಂವಾದ ರೂಪದಲ್ಲಿ ರಾಜಕೀಯ ಚರ್ಚೆ ನಡೆಸಿದ ಪ್ಲೇಟೊ ಅವುಗಳಿಗೆ ಬರಹ ರೂಪವನ್ನೂ ನೀಡಿರುವನು. ಸಾಕ್ರಟಿಸ್ನ ಶಿಷ್ಯನಾಗಿ ಮತ್ತು ಅರಿಸ್ಟಾಟಲ್ನ ಗುರುವಾಗಿ ರಾಜಕೀಯ ಚಿಂತನೆಗೆ ಅಮೂಲ್ಯ ಕಾಣಿಕೆಯನ್ನು ಪ್ಲೇಟೊ ನೀಡಿರುವನು. ಆತನ ಅನೇಕ ಚಿಂತನೆಗಳು ಪ್ರಸ್ತುತ ದಿನಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಕೆಳಗೆ ಪ್ಲೇಟೊನ ಜೀವನ, ಶಿಕ್ಷಣ ವ್ಯವಸ್ಥೆ, ತತ್ವಜ್ಙಾನಿ ಅರಸು ಹಾಗೂ ಆದರ್ಶ ರಾಜ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

[A] ಜೀವನ ಮತ್ತು ಕೃತಿಗಳು:

ಜನನ ಮತ್ತು ಸ್ಥಳ: ನಿಖರವಾದ ಆಧಾರಗಳು ಲಭ್ಯವಿಲ್ಲದ ಕಾರಣ ಪ್ಲೇಟೊನ ಜನನದ ಕಾಲವನ್ನು ಕುರಿತಂತೆ ಚಿಂತಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹುತೇಕ ತಜ್ಙರ ಪ್ರಕಾರ ಕ್ರಿ. ಪೂ. 427 ರಲ್ಲಿ ಪ್ಲೇಟೊ ಜನಿಸಿದನು. ಗ್ರೀಕ್ ನಗರ ರಾಜ್ಯವಾದ ಅಥೆನ್ಸಿನ ಎಜಿನಾ ೀತನ ಜನ್ಮ ಸ್ಥಳವಾಗಿತ್ತು. ಪ್ಲೇಟೊನ ತಂದೆ ಅರಿಸ್ಟಾನ್ ಅಥೆನ್ಸಿನ ಆರಂಭಿಕ ಅರಸು ಮನೆತನಕ್ಕೆ ಸೇರಿದವನಾಗಿದ್ದು ತಾಯಿ ಪೆರಿಶಿಯನ್ ಪ್ರಸಿದ್ಧ ಸೋಲನ್ ಎಂಬ ಕಾನೂನುಕಾರನ ವಂಶಸ್ಥಳಾಗಿದ್ದಳು. ಅರಿಸ್ಟೋಕ್ಲಸ್ ಎಂಬ ಮೂಲ ಹೆಸರನ್ನುಳ್ಳ ಬಾಲಕ ಮುಂದೆ ಸದೃಢ ಮೈಕಟ್ಟು ಹಾಗೂ ವಿಶಾಲ ಬಾಹುಗಳನ್ನು ಹೊಂದಿದ್ದರಿಂದ ಪ್ಲೇಟಿಸ್ ಪದದಿಂದ ಉತ್ಪತ್ತಿಯಾದ ಪ್ಲೇಟೊ ಎಂಬುದಾಗಿ ಕರೆಯಲ್ಪಟ್ಟನು. ಪ್ಲೇಟೊನಿಗೆ ಪಾಟೋನ್ (POTONE) ಎಂಬ ಸಹೋದರಿ ಮತ್ತು ಅಡೇಯ್ಮಾಂತಸ್ (ADEIMANTUS) ಹಾಗು ಗ್ಲೊಕನ್ (GLAUCON) ಎಂಬ ಸಹೋದರರಿದ್ದರು.

ವಿದ್ಯಾಭ್ಯಾಸ: ಪ್ಲೇಟೊ ಬಾಲ್ಯದಿಂದಲೂ ಸಂಗೀತ, ಗಣಿತ, ಕಾವ್ಯ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದನು. ಕ್ರಾಟಿಲಸ್ ಸೇರಿದಂತೆ ಪ್ರಖ್ಯಾತ ಗ್ರೀಕ್ ಜ್ಙಾನಿಗಳ ಚಿಂತನೆಗಳಿಂದ ಪ್ರಭಾವಿತನಾಗಿದ್ದನು. ಇದರೊಡನೆ ಮೂರು ಯುದ್ಧಗಳಲ್ಲಿ ಭಾಗವಹಿಸಿದ್ದ ಪ್ಲೇಟೊ ಪ್ರಶಸ್ತಿ ಪಡೆದಿದ್ದನು. ಈ ನಡುವೆ ಕ್ರಿ. ಪೂ. 407 ರಲ್ಲಿ ಸಾಕ್ರಟಿಸ್ನನ್ನು ಭೇಟಿಯಾಗಿ ಆತನ ಶಿಷ್ಯನಾದನು. ಸಂವಾದ ವಿಧಾನದೊಡನೆ ಸತ್ಯವನ್ನು ಅನ್ವೇಷಿಸುವ ಕಲೆಯನ್ನು ಪ್ಲೇಟೊ ಸಾಕ್ರಟಿಸ್ನಿಂದ ಮೈಗೂಡಿಸಿಕೊಂಡನು. ಅಲ್ಲದೇ ಸಾಕ್ರಟಿಸ್ನ ಸದ್ಗುಣವೇ ಜ್ಙಾನ, ಕಾನೂನಿಗೆ ನಿಷ್ಠೆ, ಆದರ್ಶವಾದುದೇ ಸತ್ಯವಾದುದು ಎಂಬ ವಿಚಾರಗಳಿಂದ ಪ್ರಭಾವಿತಗೊಂಡು ತತ್ವಜ್ಙಾನದತ್ತ ಾಕರ್ಷಿತನಾದನು. ಕ್ರಿ. ಪೂ. 431 ರಿಂದ 404 ರ ನಡುವೆ ಜರುಗಿದ ಪೆಲೊಫನೇಶಿಯನ್ ಯುದ್ಧದಲ್ಲಿ ಅಥೆನ್ಸ್ ಸೋತಾಗ ಪ್ರಜಾಪ್ರಭುತ್ವ ಸರ್ಕಾರವು ಅಸ್ತಿತ್ವಕ್ಕೆ ಬಂದಿತು. ಈ ಸರ್ಕಾರದ ಬ್ರಷ್ಟಾಚಾರ ಮತ್ತು ಅನ್ಯಾಯಗಳ ವಿರುದ್ಧ ಸಾಕ್ರಟಿಸ್ ತನ್ನ ಚಿಂತನೆಗಳ ಮೂಲಕ ದ್ವನಿ ಎತ್ತಿದನು. ಆಗ ಸರ್ಕಾರವು ಆತನಿಗೆ ಕ್ರಿ. ಪೂ. 399 ರಲ್ಲಿ ಹೇಮ್ಲಾಕ್ ವಿಷವುಣಿಸಿ ಮರಣ ದಂಡನೆಗೆ ಗುರಿಪಡಿಸಿತು. ಗುರುವಿನ ಸಾವಿಗೆ ಕಾರಣವಾದ ಪ್ರಜಾಪ್ರಭುತ್ವ ಸರ್ಕಾರವನ್ನು ದ್ವೇಷಿಸಿದ ಪ್ಲೇಟೊ ಅದನ್ನು ಟೀಕಿಸಿದನು. 

ವಿದೇಶಿ ಪ್ರವಾಸ: ಸಾಕ್ರಟಿಸ್ನ ಪಕ್ಷದವನೆಂಬ ಕಾರಣಕ್ಕೆ ಸರ್ಕಾರ ಪ್ಲೇಟೊನನ್ನು ಅಥೆನ್ಸಿನಿಂದ ಗಡಿಪಾರು ಮಾಡಿತು. ಗುರುವಾದ ಸಾಕ್ರಟಿಸ್ನ ಸಾವು ಮತ್ತು ಸರ್ಕಾರದ ದುರಾಡಳಿತದಿಂದ ನೊಂದಿದ್ದ ಪ್ಲೇಟೊ 12 ವರ್ಷಗಳ ಕಾಲ ವಿದೇಶಗಳಲ್ಲಿ ಸುತ್ತಾಡಿದನು. ಇಟಲಿ, ಶಿಶಿಲಿ ಮತ್ತು ಇಜಿಪ್ತ್ ದೇಶಗಳಿಗೆ ಭೇಟಿ ನೀಡಿದ್ದ ಪ್ಲೇಟೊ ಅನೇಕ ತತ್ವಜ್ಙಾನಿಗಳ ಸ್ನೇಹ ಸಂಪಾದಿಸಿದನು.

ಅಖಾಡೆಮಿಯ ಸ್ಥಾಪನೆ: ಅಥೆನ್ಸಿಗೆ ಮರಳಿದ ಪ್ಲೇಟೊನಿಗೆ ಆತನ ಸ್ನೇಹಿತರು  ಅಕಡೆಮಸ್ (ACADEMUS) ಎಂಬ ಉದ್ಯಾನವನ್ನು ಕೊಡುಗೆಯಾಗಿ ನೀಡಿದರು. ಅಲ್ಲಿಯೇ ಅಖಾಡೆಮಿ ಎಂಬ ಶಿಕ್ಷಣ ಸಂಸ್ಥೆಯೊಂದನ್ನು ಪ್ಲೇಟೊ ಕ್ರಿ. ಪೂ. 386 ರಲ್ಲಿ ಸ್ಥಾಪಿಸಿದ. ಅಕಾಡೆಮಿಯು ಉನ್ನತ ಶಿಕ್ಷಣ ನೀಡುವ ಬೌದ್ಧಿಕ ತಾಣವೆನಿಸಿತು. ಜೊತೆಗೆ ಗ್ರೀಸ್ನ ಇತರ ಶಿಕ್ಷಣ ಸಂಸ್ಥೆಗಳಿಗಿಂತ ಪ್ರಸಿದ್ಧ ಕಲಿಕಾ ಸಂಸ್ಥೆ ಎನಿಸಿತು. ಅಕಾಡೆಮಿಯಲ್ಲಿ ಜ್ಯೋತಿಷ್ಯಶಾಸ್ತ್ರ, ಸಂಗೀತ, ಕಾನೂನು, ತತ್ವಶಾಸ್ತ್ರದಂತಹ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿತ್ತು. ಇದರೊಡನೆ ಗಣಿತಕ್ಕೆ ವಿಶೇಷ ಆಧ್ಯತೆ ಅಕಾಡೆಮಿಯಲ್ಲಿದ್ದು ಅದರ ದ್ವಾರದಲ್ಲಿ ಅಳವಡಿಸಿದ್ದ (ರೇಖಾ ಗಣಿತದ ಜ್ಙಾನವಿಲ್ಲದವರಿಗೆ ಇಲ್ಲಿ ಪ್ರವೇಶವಿಲ್ಲ) ಎಂಬ ಫಲಕವು ಅದನ್ನು ಸ್ಪಷ್ಟಪಡಿಸುತ್ತದೆ. ಗಮನಿಸಬೇಕಾದ ಅಂಶವೇನೆಂದರೆ ಮಹಿಳೆಯರಿಗೂ ಅಕಾಡೆಮಿಯಲ್ಲಿ ಅವಕಾಶ ನೀಡಲಾಗಿತ್ತು. ಸಮಾಜವನ್ನು ಸುಧಾರಿಸಲು ವ್ಯವಸ್ಥಿತ ಜ್ಙಾನದಿಂದ ಸಾಧ್ಯವೆಂಬ ಅಂಶವನ್ನು ಅಕಾಡೆಮಿ ಗಟ್ಟಿಗೊಳಿಸಲು ಪ್ರಯತ್ನಿಸಿತು. ಸಂವಾದ ಮತ್ತು ಚರ್ಚೆಯ ಮೂಲಕ ನಡೆಯುತ್ತಿದ್ದ ಅಕಾಡೆಮಿಯ ಬೋಧನೆಯು ಭವಿಷ್ಯದ ತತ್ವಜ್ಙಾನಿಗಳನ್ನು ತಯಾರಿಸುವ ಖಾರ್ಕಾನೆ ಎನಿಸಿತು.

ಕೊನೆಯ ದಿನಗಳು: ಪ್ಲೇಟೊ ತನ್ನ ಜೀವನದ ಬಹು ಕಾಲವನ್ನು ಅಕಾಡೆಮಿಯಲ್ಲಿಯೇ ಬೋಧನೆ ಹಾಗೂ ಬರಹದಲ್ಲಿ ಕಳೆದನು. ಕ್ರಿ. ಪೂ. 367 ರಲ್ಲಿ ಡಿಯೊನ್ನನ ಆಹ್ವಾನದ ಮೇರೆಗೆ ರಾಜಕುಮಾರ ಡಯನಿಸಿಯಸ್ II ನನ್ನು ತತ್ವಜ್ಙಾನಿ ಅರಸನನ್ನಾಗಿ ತರಬೇತಿಗೊಳಿಸಲು ಸಿರಾಕ್ಯೂಸ್ಗೆ ತೆರಳಿದ. ಮುಂದೆ ಕ್ರಿ. ಪೂ. 361 ರಲ್ಲಿ ಎರಡನೇ ಬಾರಿ ತೆರಳಿದನಾದರೂ ತನ್ನ ಉದ್ದೇಶದಲ್ಲಿ ಪ್ಲೇಟೊ ಸಫಲನಾಗಲಿಲ್ಲ. ತನ್ನ ಶಿಷ್ಯನೊಬ್ಬನ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿದ್ದ ಪ್ಲೇಟೊ ಕ್ರಿ. ಪೂ. 347  ರಲ್ಲಿ ನಿಧನನಾದನು.

ಕೃತಿಗಳು: ಪ್ಲೇಟೊ ತನ್ನ ಜೀವಿತಾವಧಿಯಲ್ಲಿ ಅನೇಕ ಸಂವಾದ ರೂಪದ ಬರಹಗಳನ್ನು ರಚಿಸಿದ್ದಾನೆ. ಪ್ಲೇಟೊನ 22 ಅನುಮೋದಿತ ಮತ್ತು 11 ವಿವಾದಿತ ಸಂವಾದ ಮತ್ತು 13 ಪತ್ರಗಳು ಲಭ್ಯವಿದ್ದು ಅವುಗಳ ನಿಖರ ಕಾಲ ತಿಳಿದು ಬಂದಿಲ್ಲ. ಅಪಾಲಜಿ (APOLOGY), ಕ್ರಿಟೊ (CRITO), ಫೀಡೊ (PHAEDO), ಚಾರ್ಮಿಡಿಸ್ (CHARMIDES), ಮಿನೊ (MENO), ಗೊರ್ಜಸ್ (GORGIAS), ಸಿಂಪೊಜಿಯಂ (SYMPOSIUM), ಟಿಮಿಯಸ್ (TIMAEUS), ಪ್ರೊಟಾಗೊರಸ್ (PROTAGORAS) ಸೇರಿದಂತೆ  ಹಲವು ಸಂವಾದಗಳೊಡನೆ ಕೆಳಗಿನ ಮೂರು ಪ್ರಧಾನ,  ಕೃತಿಗಳನ್ನು ಪ್ಲೇಟೊ ರಚಿಸಿದ್ದಾನೆ. ಅವುಗಳೆಂದರೆ
• ದಿ ರಿಪಬ್ಲಿಕ್ ಕ್ರಿ. ಪೂ. 386
• ದಿ ಸ್ಟೇಸ್ಟ್ಮನ್ ಕ್ರಿ. ಪೂ. 360
• ದಿ ಲಾಸ್ ಕ್ರಿ. ಪೂ.  347

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...