[E] ರಾಜಕೀಯ ಸಿದ್ಧಾಂತದ ಮಹತ್ವ: ರಾಜಕೀಯ ಸಿದ್ಧಾಂತವು ರಾಜ್ಯಶಾಸ್ತ್ರ ಮತ್ತು ರಾಜಕೀಯ ತತ್ವಶಾಸ್ತ್ರಗಳಿಂದ ಭಿನ್ನವಾಗಿದೆ. ಆದರೆ ಅವೆರಡೂ ಕ್ಷೇತ್ರಗಳ ಅನುಕೂಲಗಳನ್ನು ರಾಜಕೀಯ ಸಿದ್ಧಾಂತ ಮೈಗೂಡಿಸಿಕೊಂಡಿದೆ. ಫಲವಾಗಿ ರಾಜಕೀಯ ಸಿದ್ಧಾಂತ ಅಪಾರ ಮಹತ್ವ ಗಳಿಸಿಕೊಂಡ ಪರಿಕಲ್ಪನೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಸಿದ್ಧಾಂತದ ಮಹತ್ವವನ್ನು ಸರಳವಾಗಿ ಕೆಳಗಿನ ಅಂಶಗಳ ನೆರವಿನಿಂದ ಅರಿತುಕೊಳ್ಳಬಹುದಾಗಿದೆ.
1. ರಾಜ್ಯಶಾಸ್ತ್ರ ವಿಷಯದ ಪರಿಪೂರ್ಣತೆಗೆ ಸಹಾಯಕ: ಸಿದ್ಧಾಂತಗಳು ವಿಷಯವೊಂದರ ಅಧ್ಯಯನಕ್ಕೆ ಚೌಕಟ್ಟನ್ನು ಒದಗಿಸುತ್ತವೆ. ಜೊತೆಗೆ ಲಭ್ಯವಿರುವ ನೈಜ ಮಾಹಿತಿಯನ್ನು ಸಂಗ್ರಹಿಸಿ ಸಂಶೋಧನೆ ನಡೆಸಲು ಪ್ರೇರಣೆ ನೀಡುತ್ತವೆ. ಇದರೊಡನೆ ಏನನ್ನು ಸ್ವೀಕರಿಸಬೇಕು ಮತ್ತು ಏನನ್ನು ತಿರಸ್ಕರಿಸಬೇಕೆಂಬುದನ್ನು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಸಿದ್ಧಾಂತಗಳು ಹಡುಗಿನ ದಿಕ್ಸೂಚಿಯಂತೆ ರಾಜ್ಯಶಾಸ್ತ್ರದ ಮುಂದುವರಿಕೆಗೆ ದಾರಿ ದೀಪವಾಗಿವೆ. ಇಂದು ರಾಜ್ಯಶಾಸ್ತ್ರವು ಸಮಗ್ರ, ಪರಿಪಕ್ವ, ಭವಿಷ್ಯವುಳ್ಳ ಮತ್ತು ವೈಜ್ಙಾನಿಕ ತಳಹದಿಯುಳ್ಳ ವಿಷಯವಾಗಿ ಬೆಳವಣಿಗೆ ಹೊಂದಲು ರಾಜಕೀಯ ಸಿದ್ಧಾಂತಗಳು ಪ್ರಧಾನ ಪಾತ್ರ ನಿರ್ವಹಿಸಿವೆ.
2. ರಾಜಕೀಯ ಪರಿಕಲ್ಪನೆಗಳ ಸ್ಪಷ್ಟತೆಗೆ ನೆರವು: ಮಾನವನ ಸಾಮಾಜಿಕ ಮತ್ತು ರಾಜಕೀಯ ಜೀವನದ ವಿಶ್ಲೇಷಣೆಗಾಗಿ ಚಿಂತಕರಿಂದ ವಿಭಿನ್ನ ರಾಜಕೀಯ ಸಿದ್ಧಾಂತಗಳು ಪ್ರತಿಪಾದಿಸಲ್ಪಟ್ಟಿವೆ. ಹೀಗೆ ಮಂಡಿಸಲ್ಪಟ್ಟ ಸಿದ್ಧಾಂತಗಳು ವಿವಿಧ ಹಾಗು ಸಂಕೀರ್ಣ ರಾಜಕೀಯ ಪರಿಕಲ್ಪನೆಗಳ ಸ್ಪಷ್ಟತೆಗೆ ನೆರವಾಗುತ್ತವೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಪ್ರಜಾಪ್ರಭುತ್ವ, ಅಧಿಕಾರ ಮುಂತಾದ ಪ್ರತಿಯೊಂದು ರಾಜಕೀಯ ಪರಿಕಲ್ಪನೆ ವಿವರಿಸಲು ಹಲವಾರು ಚಿಂತಕರು ತಮ್ಮದೇಯಾದ ಸಿದ್ಧಾಂತಗಳನ್ನು ಮಂಡಿಸಿರುವರು. ಇಂತಹ ಸಿದ್ಧಾಂತಗಳಲ್ಲಿ ನಿರ್ದಿಷ್ಟ ಪರಿಕಲ್ಪನೆ ಕುರಿತು ಸಾಮ್ಯತೆ ಅಥವ ಭಿನ್ನತೆ ವ್ಯಕ್ತಗೊಂಡು ಪರಿಕಲ್ಪನೆಯು ಸ್ಪಷ್ಟವಾಗುತ್ತಾ ಸಾಗುತ್ತದೆ. ಇದರೊಡನೆ ಪರಿಕಲ್ಪನೆಯೊಂದರ ವಿವಿಧ ಸಿದ್ಧಾಂತಗಳಲ್ಲಿನ ದೋಷಗಳನ್ನರಿತು ಸ್ಪಷ್ಟ ಅರಿವನ್ನು ಪಡೆಯಲು ಸುಲಭವಾಗುತ್ತದೆ. ಉದಾ: ರಾಜ್ಯೋತ್ಪತ್ತಿ ಕುರಿತಂತೆ ಹಾಬ್ಸ್, ಜಾನ್ ಲಾಕ್ ಹಾಗು ರೂಸೋ ಮಂಡಿಸಿದ ಸಾಮಾಜಿಕ ಒಪ್ಪಂದ ಸಿದ್ಧಾಂತಗಳು ರಾಜ್ಯಾಡಳಿತದ ಅಧಿಕಾರವು ಯಾರಲ್ಲಿರಬೇಕು ಮತ್ತು ಹೇಗೆ ಚಲಾಯಿಸಲ್ಪಡಬೇಕು ಎಂಬ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸಲು ನೆರವಾದದ್ದು.
3. ರಾಜ್ಯ ಮತ್ತು ಸರ್ಕಾರಗಳ ವ್ಯವಸ್ಥಿತ ತಿಳುವಳಿಕೆ: ಸಮಾಜದಲ್ಲಿನ ಜನರು ತಿರಸ್ಕರಿಸಲಾಗದ ರಾಜ್ಯ ಹಾಗು ಸರ್ಕಾರ ಕುರಿತಂತೆ ತಿಳುವಳಿಕೆ ಹೊಂದುವುದು ಅಗತ್ಯ. ರಾಜ್ಯವು ಹೇಗೆ ಉಗಮವಾಯಿತು? ರಾಜ್ಯದ ಉದ್ದೇಶ ಏನಾಗಿರಬೇಕು? ಆದರ್ಶ ರಾಜ್ಯ ಯಾವುದು? ರಾಜ್ಯಾಡಳಿತದ ಮೂಲ ಎಲ್ಲಿದೆ? ಯಾವುದು ಉತ್ತಮ ಮಾದರಿಯ ಸರ್ಕಾರ? ರಾಜ್ಯ ಮತ್ತು ಪ್ರಜೆಗಳ ನಡುವಿನ ಸಂಬಂಧ ಎಂತಹುದು? ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡಲು ವಿವಿಧ ಸಿದ್ಧಾಂತಗಳು ಪ್ರಾಚೀನ ಕಾಲದಿಂದಲೂ ಮಂಡಿಸಲ್ಪಟ್ಟಿವೆ. ಈ ಸಿದ್ಧಾಂತಗಳು ರಾಜ್ಯ ಹಾಗು ಸರ್ಕಾರಗಳ ಹಿನ್ನೆಲೆ, ಸ್ವರೂಪ, ಉದ್ದೇಶ, ಮಹತ್ವವನ್ನು ಕುರಿತಂತೆ ಬೆಳಕು ಚೆಲ್ಲಿವೆ. ಇಂತಹ ರಾಜಕೀಯ ಸಿದ್ಧಾಂತಗಳ ಅಧ್ಯಯನದ ಮೂಲಕ ಜನರು ರಾಜ್ಯ ಹಾಗು ಸರ್ಕಾರಗಳ ಪರಿಪೂರ್ಣ ತಿಳುವಳಿಕೆಯನ್ನು ಹೊಂದಲು ಸಾಧ್ಯವಾಗುತ್ತದೆ.
4. ಸಾಮಾಜಿಕ ವಿಮರ್ಷೆ ಮತ್ತು ಪುನರ್ರಚನೆಗೆ ಪ್ರಾಶಸ್ತ್ಯ: ರಾಜಕೀಯ ಚಿಂತಕರು ತಮ್ಮ ಸಿದ್ಧಾಂತಗಳಲ್ಲಿ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅದರ ದೋಷಗಳನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ, ಸಾಮಾಜಿಕ ದೋಷಗಳ ನಿವಾರಣೆಗೆ ಸೂಕ್ತ ಪರಿಹಾರವನ್ನು ಮಂಡಿಸಿದ್ದಾರೆ. ಇದರಿಂದ ಸಾಮಾಜಿಕ ಪಿಡುಗುಗಳು ಮಾಯವಾಗಿ ಸಮಾಜದಲ್ಲಿ ಬದಲಾವಣೆ ತರಲು ಆಯಾ ಕಾಲಗಳಲ್ಲಿ ಸಾಧ್ಯವಾಗಿದೆ. ಉದಾ: ಪ್ಲೇಟೊ ಪ್ರಜಾಪ್ರಭುತ್ವದ ದೋಷಗಳ ನಿವಾರಣೆಗೆ ತತ್ವಜ್ಙಾನಿ ಅರಸರ ಆಳ್ವಿಕೆಯನ್ನು ಮಂಡಿಸಿದ್ದ. ಅಂತೆಯೇ ಮಾರ್ಕ್ಸನು ಸಮತಾವಾದ ಸಿದ್ಧಾಂತದ ಮೂಲಕ ಬಂಡವಾಳಶಾಹಿಗಳ ವರ್ತನೆಯನ್ನು ವಿಮರ್ಷಿಸಿ ಕಾರ್ಮಿಕ ಸರ್ವಾಧಿಕಾರವನ್ನು ಪ್ರತಿಪಾದಿಸಿದ್ದ. ಸಮಾಜದಲ್ಲಿನ ದೋಷಗಳನ್ನು ಸುಧಾರಣೆ ಅಥವ ಕ್ರಾಂತಿಕಾರಕ ಹೋರಾಟಗಳ ಮೂಲಕ ಬದಲಾಯಿಸಲು ರಾಜಕೀಯ ಸಿದ್ಧಾಂತಗಳು ಉಪಯುಕ್ತವಾಗಿವೆ. ಆದ್ದರಿಂದಲೇ ಲೆನಿನ್ ಕ್ರಾಂತಿಯ ಸಿದ್ಧಾಂತ ಮಂಡಿಸಲ್ಪಡದಿದ್ದರೆ ಕ್ರಾಂತಿಕಾರಕ ಹೋರಾಟ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದಿರುವ. ಒಟ್ಟಾರೆ ಸಾಮಾಜಿಕ ವಿಮರ್ಷೆಯೊಡನೆ ಅದರ ಬದಲಾವಣೆಗೆ ಕಾರಣವಾಗಿ ರಾಜಕೀಯ ಸಿದ್ಧಾಂತವು ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
5. ಪರಸ್ಪರ ಸಹಿಷ್ಣುತೆ ಮತ್ತು ಗೌರವಗಳಿಗೆ ಪ್ರೋತ್ಸಾಹ: ಒಂದೇ ರಾಜಕೀಯ ಪರಿಕಲ್ಪನೆ ಅಥವ ವಿಚಾರವನ್ನು ಕುರಿತಂತೆ ಪ್ರಾಚೀನ ಕಾಲದಿಂದ ಇಂದಿನವರೆಗೆ ಅನೇಕ ಚಿಂತಕರು ವಿವಿಧ ಸಿದ್ಧಾಂತ ಮಂಡಿಸುತ್ತಾ ಬಂದಿರುವರು. ಇಂತಹ ರಾಜಕೀಯ ಸಿದ್ಧಾಂತಗಳು ಆಯಾ ಚಿಂತಕರ ವಿಭಿನ್ನ ಚರ್ಚೆಗೆ ಅವಕಾಶ ಕಲ್ಪಿಸಿತಲ್ಲದೇ ನವೀನ ವಿಚಾರಧಾರೆ ಹೊರಹೊಮ್ಮಲು ಕಾರಣವಾಗಿದೆ. ಹೀಗಾಗಿಯೇ ಚಿಂತಕ ಆಯಂಡ್ರೂ ಹ್ಯಾಕರ್ ರಾಜಕೀಯ ಸಿದ್ಧಾಂತವು ಅಂತ್ಯವಿಲ್ಲದ ಸಿದ್ಧಾಂತಿಗಳ ನಡುವಿನ ಸಂಭಾಷಣೆ ಎಂದಿರುವ. ರಾಜಕೀಯ ವಾಸ್ತವಿಕತೆ ಮತ್ತು ಉತ್ತಮ ಜೀವನ ಅರಿಯಲು ರಾಜಕೀಯ ಸಿದ್ಧಾಂತದ ಅಧ್ಯಯನಕ್ಕೆ ಮುಂದಾದಾಗ ತತ್ವಜ್ಙಾನಿಗಳ ಸಿದ್ಧಾಂತಗಳು ಪರಸ್ಪರ ಪ್ರೇರೇಪಿಸುತ್ತವೆ. ಜೊತೆಗೆ ವಿವಿಧ ಸಿದ್ಧಾಂತಗಳ ಅಂತರ್ಸಂಬಂಧದ ಅರಿವಿನ ಪರಿಣಾಮ ನಾವು ಪರಸ್ಪರ ಗೌರವ ಬೆಳೆಸಿಕೊಳ್ಳುತ್ತೇವೆ. ಉದಾ: ಸಮಾನತೆಯ ಸಿದ್ಧಾಂತ ಮತ್ತು ಸ್ವಾತಂತ್ರ್ಯಗಳ ಅಂತರ್ಸಂಬಂಧ ನಮ್ಮಲ್ಲಿ ಸಹಿಷ್ಣುತೆ ಹಾಗು ಗೌರವವನ್ನು ಮೂಡಿಸುತ್ತದೆ. ಹೀಗೆ ಜನರು ಪರಸ್ಪರ ಗೌರವ ನೀಡುವ ಅಥವ ತಮ್ಮಲ್ಲಿನ ಭಿನ್ನತೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ.
6. ಮೌಲ್ಯಗಳ ಮುಂದುವರಿಕೆಗೆ ಆಸ್ಪದ: ವಿವಿಧ ರಾಜಕೀಯ ಸಿದ್ಧಾಂತಗಳು ಕೆಲವು ನಿರ್ದಿಷ್ಟ ಮೌಲ್ಯಗಳಿಗೆ ಮಹತ್ವ ನೀಡಿ ಅವುಗಳ ಮುಂದುವರಿಕೆಗೆ ನೆರವಾಗಿವೆ. ಜೊತೆಗೆ ಮೌಲ್ಯಗಳ ಸ್ಥಾಪನೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳನ್ನು ಕೆಲ ರಾಜಕೀಯ ಸಿದ್ಧಾಂತಗಳು ಪ್ರತಿಪಾದಿಸಿವೆ. ಉದಾ: ಆಡಳಿತದಲ್ಲಿ ನಿಸ್ವಾರ್ಥ ಮೌಲ್ಯ ಅಗತ್ಯವೆಂದು ಪ್ರತಿಪಾದಿಸಿದ ಪ್ಲೇಟೊ ಅದಕ್ಕಾಗಿ ತತ್ವಜ್ಙಾನಿಗಳು ಆಳಬೇಕು ಅಥವ ಆಳುವವರು ತತ್ವಜ್ಙಾನಿಗಳಾಗಬೇಕು ಎಂಬುದಾಗಿ ತನ್ನ ಸಿದ್ಧಾಂತದಲ್ಲಿ ಮಂಡಿಸಿದ್ದ. ಇದಲ್ಲದೇ ರಾಜಕೀಯ ಸಿದ್ಧಾಂತಗಳು ವಾಸ್ತವಿಕ ಬೆಳವಣಿಗೆಗಳು ಮತ್ತು ಮೌಲ್ಯಗಳ ನಡುವೆ ಹೊಂದಾಣಿಕೆ ತರಲು ಪ್ರಯತ್ನಿಸುತ್ತವೆ. ಉದಾ: ಅಸಮಾನತೆ ತಾಂಡವವಾಡುವ ಸಮಾಜದಲ್ಲಿ ಪ್ರತಿಪಾದಿಸಲ್ಪಡುವ ಪ್ರಜಾಪ್ರಭುತ್ವ ಸಿದ್ಧಾಂತ ಸಮಾನತೆ ಮೌಲ್ಯಕ್ಕೆ ಮಹತ್ವ ನೀಡುತ್ತದೆ. ಹೀಗೆ ಕಾಲಾಂತರದಲ್ಲಿ ಮಂಡಿಸಲ್ಪಟ್ಟಿರುವ ರಾಜಕೀಯ ಸಿದ್ಧಾಂತಗಳು ಪ್ರಾಮಾಣಿಕತೆ, ಸ್ವಾತಂತ್ರ್ಯ, ಸಮಾನತೆ, ನ್ಯಾಯ, ದೇಶ ಪ್ರೇಮ ಮುಂತಾದ ಮೌಲ್ಯಗಳು ಮುಂದುವರೆಯಲು ಆಸ್ಪದ ಕಲ್ಪಿಸಿದೆ.
7. ವ್ಯಕ್ತಿಯ ಸರ್ವತೋಮುಖ ಪ್ರಗತಿಗೆ ಕಾಣಿಕೆ: ರಾಜಕೀಯ ಸಿದ್ಧಾಂತವು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿದೆ. ರಾಜಕೀಯ ಸಿದ್ಧಾಂತವು ಸಮಾಜದಲ್ಲಿ ವ್ಯಕ್ತಿಯೊಬ್ಬ ಹೊಂದಿರುವ ಹಕ್ಕು ಹಾಗು ಕರ್ತವ್ಯಗಳ ಮನವರಿಕೆಗೆ ಶ್ರಮಿಸುತ್ತದೆ. ಜೊತೆಗೆ ರಾಜಕೀಯ ಸಿದ್ಧಾಂತದ ತಿಳುವಳಿಕೆಯು ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳೊಡನೆ ಸಹ ಸಂಬಂಧ ಹೊಂದಲು ಸಹಕಾರಿಯಾಗುತ್ತದೆ. ಇದಲ್ಲದೇ ಬಡತನ, ನಿರುದ್ಯೋಗ, ಬ್ರಷ್ಟಾಚಾರ, ಜನಾಂಗದಂತಹ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಸ್ವರೂಪವನ್ನರಿತು ವರ್ತಿಸಲು ವ್ಯಕ್ತಿಗೆ ರಾಜಕೀಯ ಸಿದ್ಧಾಂತದ ತಿಳುವಳಿಕೆ ನೆರವಾಗುತ್ತದೆ. ಹೀಗೆ ವ್ಯಕ್ತಿಯೊಬ್ಬ ಸೂಕ್ತ ಗುರಿ ಹಾಗು ಮಾರ್ಗಗಳನ್ನು ನಿರ್ಧರಿಸಿಕೊಂಡು ಪರಿಪೂರ್ಣ ಜೀವನ ನಡೆಸಲು ರಾಜಕೀಯ ಸಿದ್ಧಾಂತ, ಸಹಾಯಕವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ