ರಾಜ್ಯಶಾಸ್ತ್ರ ಅಧ್ಯಯನದ ಆಧುನಿಕ ವಿಧಾನಗಳು: ರಾಜ್ಯಶಾಸ್ತ್ರ ಅಧ್ಯಯನದ ಆಧುನಿಕ ವಿಧಾನಗಳು ವಾಸ್ತವಿಕತೆಯನ್ನಾಧರಿಸಿದ್ದು ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವೈಜ್ಙಾನಿಕ ಹಾಗು ನಿಖರ ತೀರ್ಮಾನವನ್ನು ಪ್ರತಿಪಾದಿಸುತ್ತವೆ. ಕೈಗಾರಿಕೀಕರಣ ಮತ್ತು ವರ್ತನಾ ಕ್ರಾಂತಿಯ ಫಲವಾಗಿ ರಾಜ್ಯಶಾಸ್ತ್ರದಲ್ಲಿನ ಆಧುನಿಕ ಅಧ್ಯಯನ ವಿಧಾನಗಳು ಭವಿಷ್ಯದಲ್ಲಿ ಏನಿರಬೇಕು ಎಂಬುದರ ಬದಲು ಪ್ರಸ್ತುತ ಏನಿದೆ ಎಂಬುದರೆಡೆ ಒಲವು ಹೊಂದಿದವು. ಈ ನಡುವೆ ಅಮೇರಿಕದ ರಾಜ್ಯಶಾಸ್ತ್ರಜ್ಙರ ಗುಂಪೊಂದು ಸಮಾಜಶಾಸ್ತ್ರ, ಮನಸ್ಶಾಸ್ತ್ರ, ಮಾನವಶಾಸ್ತ್ರಗಳಲ್ಲಿ ಜಾರಿಗೊಂಡ ನವೀನ ತಂತ್ರಗಳಿಂದ ಪ್ರೇರೇಪಣೆಗೊಂಡು ರಾಜ್ಯಶಾಸ್ತ್ರದಲ್ಲಿಯೂ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರು. ಪರಿಣಾಮ ವಾಸ್ತವಿಕ ರಾಜಕೀಯ ವಿದ್ಯಮಾನಗಳ ಅಂಕಿಸಂಕೆಗಳ ಮಾಹಿತಿ ಸಂಗ್ರಹಿಸಿ ವೈಜ್ಙಾನಿಕ ಅಧ್ಯಯನಕ್ಕೆ ಚಾಲನೆ ದೊರಕಿತು. ಇದರಿಂದ ರಾಜಕೀಯ ವಿದ್ಯಮಾನ ಕುರಿತಂತೆ ಮಾನವರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಹೇಗೆ ವರ್ತಿಸುವರೆಂದು ತಿಳಿದು ನಿಖರ ಭವಿಷ್ಯ ನುಡಿಯಲು ರಾಜ್ಯಶಾಸ್ತ್ರಜ್ಙರಿಗೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಬಳಸಲ್ಪಟ್ಟ ಪ್ರಧಾನ ಆಧುನಿಕ ವಿಧಾನಗಳನ್ನು ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಅ. ಸಮಾಜಶಾಸ್ತ್ರೀಯ ವಿಧಾನ: ಸಮಾಜಶಾಸ್ತ್ರೀಯ ವಿಧಾನ ರಾಜಕಿಯ ಅಧ್ಯಯನದ ಅಂತರ್ಗತ ವಿಧಾನವೆಂದರೆ ತಪ್ಪಾಗಲಾರದು. ಈ ವಿಧಾನವು ರಾಜ್ಯದ ಪ್ರಜೆಗಳ ರಾಜಕಿಯ ವರ್ತನೆಯನ್ನು ಅರಿಯಲು ನೆರವಾಗುತ್ತದೆ. ಒಂದು ಪೀಳಿಗೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಕ್ರಿಯೆ ರಾಜಕಿಯ ಸಾಮಾಜಿಕರಣವಾಗಿದ್ದು ಈ ಪರಿಕಲ್ಪನೆಯ ಬಲವರ್ಧನೆಗೆ ಸಮಾಜಶಾಸ್ತ್ರೀಯ ವಿಧಾನದ ಕೊಡುಗೆ ಅಪಾರವಾಗಿದೆ. ಜೊತೆಗೆ ದೇಶದ ಪ್ರಜೆಗಳ ಜೀವನ ವಿಧಾನ, ವಿವೇಚನಾ ಮಾದರಿ, ಕ್ರಿಯೆಗಳು ಹಾಗು ಭಾವನೆಗಳನ್ನುಳ್ಳ ರಾಜಕಿಯ ಸಂಸ್ಕೃತಿ ಮನವರಿಕೆಗೆ ಸಮಾಜಶಾಸ್ತ್ರೀಯ ವಿಧಾನ ರಾಜ್ಯಶಾಸ್ತ್ರಜ್ಞರಿಗೆ ಸಹಕಾರಿಯಾಗುತ್ತದೆ. ಆದ್ದರಿಂದಲೇ ರಾಜ್ಯಶಾಸ್ತ್ರವು ರಾಜಕಿಯ ಸಂಸ್ಥೆಗಳಿಗಿಂತ ಹೆಚ್ಚು ಸಾಮಾಜಿಕ ವ್ಯವಸ್ಥೆಯನ್ನು ಅವಲಂಬಿಸಿದೆ ಎಂಬ ಸಮಾಜಶಾಸ್ತ್ರಜ್ಞರ ಹೇಳಿಕೆಯನ್ನು ರಾಜ್ಯಶಾಸ್ತ್ರಜ್ಞರು ಅನುಮೋದಿಸಿದ್ದಾರೆ. ಭಾರತವು ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಹೊಂದಿದ್ದು ಗ್ರಾಮೀಣ ಹಾಗು ನಗರ ಸಾಮಾಜಿಕ ಸನ್ನಿವೇಶ ಭಿನ್ನವಾಗಿರುತ್ತದೆ. ಜೊತೆಗೆ ನಗರಗಳ ಸಾಮಾಜಿಕ ಬದಲಾವಣೆ ತೀವ್ರ ಗತಿಯಲ್ಲಾದರೆ ಹಳ್ಳಿಗಳಲ್ಲಿ ನಿಧಾನವಾಗುತ್ತದೆ. ಅಲ್ಲದೇ ಜಾತಿ, ಧರ್ಮ, ಭಾಷೆ, ಪ್ರದೇಶ ಆಧರಿಸಿ ಸಾಮಾಜಿಕ ಚಿತ್ರಣ ವ್ಯತ್ಯಾಸವಾಗುತ್ತದೆ. ಹೀಗಾಗಿ ಬಾರತದಲ್ಲಿನ ರಾಜಕಿಯ ಅಧ್ಯಯನಕ್ಕೆ ಸಮಾಜಶಾಸ್ತ್ರೀಯ ವಿಧಾನದ ನೆರವು ಅಥವ ಬಳಕೆ ಅನಿವಾರ್ಯ ಎನ್ನಬಹುದು.
ಆ. ಮನಸ್ಶಾಸ್ತ್ರಿಯ ವಿಧಾನ: ಆಧುನಿಕ ಯುಗದಲ್ಲಿ ಮನಸ್ಶಾಸ್ತ್ರವು ರಾಜ್ಯಶಾಸ್ತ್ರದ ಅಂತರ್ಸಂಬಂಧಿ ವಿಷಯವೆನಿಸಿದೆ. ಹೀಗಾಗಿ ಅನೇಕ ರಾಜ್ಯಶಾಸ್ತ್ರಜ್ಙರು ಮಾನವನ ರಾಜಕೀಯ ವರ್ತನೆ ಕುರಿತಾದ ನಿಯಮಾವಳಿಗಳ ರಚನೆಗೆ ಪ್ರಮುಖ ಮನಸ್ಶಾಸ್ತ್ರಜ್ಙರ ಬರಹಗಳಿಂದ ಪ್ರಭಾವಿತರಾಗಿರುವರು. ಇದರೊಡನೆ ಮನಸ್ಶಾಸ್ತ್ರದ ವಿಷಯ ವಸ್ತುವಾಗಿರುವ ಮಾನವನ ಬಯಕೆಗಳು, ಭಾವನೆಗಳು, ಅಭ್ಯಾಸಗಳು, ಅಹಂ ಮುಂತಾದವು ವ್ಯಕ್ತಿಗಳ ರಾಜಕೀಯ ಚಟುವಟಿಕೆ ಮತ್ತು ವರ್ತನೆಗಳ ಮೇಲೆ ಅಗಾಧ ಪ್ರಭಾವ ಹೊಂದಿವೆ. ಇಂತಹ ಮನಸ್ಶಾಸ್ತ್ರಿಯ ವಿಧಾನ ಅಧಿಕಾರ ವಿಧಾನವೆಂದೇ ಪರಿಚಿತವಾಗಿದೆ. ಹೀಗಾಗಿ ಅಧಿಕಾರದ ಮೂಲ, ಸ್ಥಾನ, ಹಂಚಿಕೆ, ಪ್ರತ್ಯೇಕತೆ ರಾಜ್ಯಶಾಸ್ತ್ರದ ಕೇಂದ್ರಬಿಂದು ವಿಷಯವಾಗಿದ್ದು ಮನಸ್ಶಾಸ್ತ್ರಿಯ ವಿಧಾನ ರಾಜಕೀಯ ವಿದ್ಯಮಾನಗಳ ಅಧ್ಯಯನಕ್ಕೆ ಅಗತ್ಯವಾಗಿದೆ. ಆದ್ದರಿಂದಲೇ ಮೆಕೆವಲ್ಲಿ ಹಾಗು ಹಾಬ್ಸ್ ಮಾನವನ ಸ್ವಭಾವವನ್ನು ವಿವರಿಸುವಾಗ ಮನಸ್ಶಾಸ್ತ್ರಿಯ ಅಂಶಗಳಿಗೆ ತಮ್ಮ ಚಿಂತನೆಯಲ್ಲಿ ಪ್ರಾಶಸ್ತ್ಯವನ್ನು ನೀಡಿದ್ದರು. ಮಾತ್ರವಲ್ಲ, ಮಾನವನ ರಾಜಕೀಯ ವಿದ್ಯಮಾನಗಳನ್ನು ಅರಿಯಲು ಗ್ರಹಾಂ ವಾಲ್ಸ್, ಚಾರ್ಲ್ಸ್ ಮೇರಿಯಂ, ಲಾಸ್ವೆಲ್, ರಾಬರ್ಟ್ ದಾಲ್ ಮನಸ್ಶಾಸ್ತ್ರಿಯ ವಿಧಾನಗಳನ್ನೇ ಹೆಚ್ಚಾಗಿ ಬಳಸಿದರು.
ಇ. ಪರಿಮಾಣಾತ್ಮಕ ವಿಧಾನ: ಇದನ್ನು ಸಂಖ್ಯಾ ವಿಧಾನವೆಂದೂ ಕರೆಯಲಾಗುತ್ತದೆ. ರಾಜಕೀಯ ವಿದ್ಯಮಾನಗಳನ್ನು ಲಭ್ಯವಿರುವ ಅಂಕಿ ಸಂಖೆಗಳ ನೆರವಿನಿಂದ ಅಧ್ಯಯನ ನಡೆಸಲು ಈ ವಿಧಾನವು ಸಹಾಯಕವಾಗಿದೆ. ಯಾವ ರಾಜಕೀಯ ಪಕ್ಷದೆಡೆ ಮತದಾರ ಒಲವು ಹೊಂದಿರುವನೆಂಬುದನ್ನು ಅಳೆದು ಸರ್ಕಾರ ರಚನೆ ಕುರಿತಂತೆ ಭವಿಷ್ಯ ನುಡಿಯಲು ತಜ್ಙರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಪರಿಮಾಣಾತ್ಮಕ ವಿಧಾನ ಉಪಯುಕ್ತವಾಗಿದೆ. ಜೊತೆಗೆ ಸರ್ಕಾರದ ನೀತಿ, ನಿರ್ಧಾರ, ಯೋಜನೆ ಅಥವ ಕಾನೂನುಗಳ ಅನುಷ್ಟಾನದ ವೇಳೆ ಜನರ ಬೆಂಬಲವನ್ನು ಅರಿಯಲು ಈ ವಿಧಾನ ಅನುಕೂಲಕರವಾಗಿದೆ. ಇದರೊಡನೆ ದೇಶಗಳ ನಡುವೆ ಯುದ್ಧ ಜರುಗಲು ಅಥವ ಶಾಂತಿ ಒಪ್ಪಂದ ಏರ್ಪಡಲು ನಿಖರ ಕಾರಣಗಳನ್ನು ಆ ದೇಶಗಳ ಸೈನ್ಯ ಮತ್ತು ಆರ್ಥಿಕ ಬಲಗಳ ಪರಿಮಾಣಾತ್ಮಕ ವಿಧಾನದ ಅಧ್ಯಯನವು ಒದಗಿಸುತ್ತದೆ.
ಈ. ನಡವಳಿಕಾ ಅಥವ ವರ್ತನಾ ವಿಧಾನ: ಸಾಮಾನ್ಯ ವ್ಯವಸ್ಥಾ ಸಿದ್ಧಾಂತದಲ್ಲಿ ವರ್ತನಾವಾದದ ಬೇರುಗಳನ್ನು ಗುರುತಿಸಬಹುದು. ವರ್ತನಾ ವಿಧಾನದ ಾರಂಭವನ್ನು ೨೦ ನೇ ಶತಮಾನದ ಪೂರ್ವಾರ್ಧದಲ್ಲಿ ಗ್ರಹಾಂ ವಾಲ್ಸ್ ಹಾಗು ಆರ್ತರ್ ಬೆಂಟ್ಲಿ ಬರಹಗಳಲ್ಲಿ ಕಾಣಬಹುದಾಗಿದೆ. ಮುಂದೆ ಚಾರ್ಲ್ಸ್ ಇ ಮೇರಿಯಂ, ಕ್ಯಾಟಲಿನ್, ಹೆರಾಲ್ಡ್ ಡಿ. ಲಾಸ್ವೆಲ್ ವರ್ತನಾ ವಿಧಾನವನ್ನು ಮುನ್ನಡೆಸಿದರು. ಎರಡನೇ ಮಹಾ ಯುದ್ಧದ ಬಳಿಕ ಅಮೇರಿಕದಲ್ಲಿ ವರ್ತನಾ ಚಳುವಳಿ ಡೆವಿಡ್ ಈಸ್ಟನ್ ನೇತೃತ್ವದಲ್ಲಿ ಜನಪ್ರಿಯವಾಯಿತು. ಪರಿಣಾಮ ವರ್ತನಾ ವಿಧಾನ ಎಲ್ಲೆಡೆ ಬಳಸತೊಡಗಿತು. ವರ್ತನಾ ವಿಧಾನವು ಮಾನವನ ರಾಜಕಿಯ ವರ್ತನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ರಾಜಕಿಯ ವ್ಯವಸ್ಥೆಯಲ್ಲಿ ಭಾಗವಹಿಸುವಾಗ ಮಾನವರ ಕ್ರಿಯೆಗಳು, ನಡುವಳಿಕೆಗಳು, ಆಧ್ಯತೆಗಳು ಹಾಗು ನಿರಿಕ್ಷೆಗಳನ್ನು ವರ್ತನಾ ವಿಧಾನವು ಅಧ್ಯಯನ ಮಾಡಲು ನೆರವಾಗುತ್ತದೆ. ವರ್ತನಾ ವಿಧಾನವು ರಾಜಕಿಯ ಸಂಸ್ಥೆಗಳಿಗಿಂತ ಮಾನವರ ವರ್ತನೆಗಳ ವಿಶ್ಲೇಷಣೆಗೆ ಮಹತ್ವ ನೀಡುತ್ತದೆ. ರಾಜ್ಯಶಾಸ್ತ್ರವನ್ನು ಇತರ ಸಮಾಜ ವಿಜ್ಞಾನಗಳೊಡನೆ ನಿಕಟವಾಗಿರಲು ಪ್ರಯತ್ನಿಸುತ್ತದೆ. ಅವಲೋಕನ, ವರ್ಗೀಕರಣ, ಮಾಹಿತಿಯ ಪ್ರಮಾಣಿಕರಣ ಮುಂತಾದ ತಂತ್ರಗಳ ಬಳಕೆಯನ್ನು ಅಗತ್ಯಾನುಸಾರ ಬಳಸಲು ಪ್ರೇರೇಪಿಸುತ್ತದೆ. ಭಾರತದಲ್ಲಿ ಬಹು ಪಕ್ಷ ಪದ್ಧತಿ ಜಾರಿಯಲ್ಲಿದ್ದು ಮತದಾರರ ವರ್ತನೆ ಅಧ್ಯಯನ ಅಗತ್ಯವಾಗಿದೆ. ಜೊತೆಗೆ ರಾಜಕಿಯ ಧುರೀಣರ ನಿಲುವುಗಳು ಚಂಚಲತೆಯಿಂದ ಕೂಡಿರುತ್ತವೆ. ಮತದಾರರ ಮೇಲೆ ಚುನಾವಣಾ ಸಮಯದಲ್ಲಿ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಭಾರತದ ಗ್ರಾಮೀಣ ಹಾಗು ನಗರ ವಾಸಿಗಳ ವರ್ತನೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇಂತಹ ಬೆಳವಣಿಗೆಗಳ ಸ್ಪಷ್ಟ ಚಿತ್ರಣ ಪಡೆಯಲು ರಾಜ್ಯಶಾಸ್ತ್ರಜ್ಞರು ವರ್ತನಾ ವಿಧಾನ ಅವಲಂಬಿಸಬೇಕಾಗಿದೆ. ಎ. ಎಚ್. ಸೋಮ್ಜೀ, ಮೈರಾನ್ ವೀನರ್, ರಜನಿ ಕೊಠಾರಿ ಮುಂತಾದವರು ವರ್ತನಾ ವಿಧಾನವನ್ನು ಬಳಸಿದ್ದಾರೆ. ಜೊತೆಗೆ ವಿವಿಧ ಮಾಧ್ಯಮ ಸಂಸ್ಥೆಗಳು ಚುನಾವಣಾ ಪೂರ್ವ ಹಾಗು ಚುನಾವಣೋತ್ತರ ಸಮೀಕ್ಷೆ ನಡೆಸುವಾಗ ವರ್ತನಾ ವಿಧಾನವನ್ನು ಭಾರತದಲ್ಲಿ ಇಂದಿಗೂ ಬಳಸುತ್ತಿರುವುದು ಗಮನಾರ್ಹ.
ಮೇಲ್ಕಂಡ ಪ್ರಮುಖ ಆಧುನಿಕ ವಿಧಾನಗಳಲ್ಲದೇ ಪ್ರಾಯೋಗಿಕ ವಿಧಾನ, ಅವಲೋಕನಾ ವಿಧಾನ, ಆರ್ಥಿಕ ವಿಧಾನ, ಮಾರ್ಕ್ಸ್ವಾದಿ ವಿಧಾನಗಳ ಬಳಕೆಯನ್ನು ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ತಜ್ಙರು ಬಳಸುತ್ತಾರೆ. ರಾಜ್ಯಶಾಸ್ತ್ರದ ವಿವಿಧ ವಿಷಯವನ್ನು ನಿರ್ದಿಷ್ಟ ವಿಧಾನಗಳಿಂದ ಪರಿಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಿಲ್ಲ. ಆಯಾ ವಿಷಯ ಅಪೇಕ್ಷಿಸುವ ವಿಭಿನ್ನ ವಿಧಾನಗಳ ಬಳಕೆ ಅನಿವಾರ್ಯವಾಗಿದೆ. ಹೀಗಾಗಿ ಆಧುನಿಕ ವಿಧಾನಗಳ ನಡುವೆಯೂ ಸಾಂಪ್ರದಾಯಿಕ ವಿಧಾನಗಳು ಇಂದಿಗೂ ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಮಹತ್ವ, ಪಡೆದಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ