ರಾಜ್ಯಶಾಸ್ತ್ರದ ವ್ಯಾಪ್ತಿ: ವ್ಯಾಪ್ತಿ ಎಂದರೆ ಪದಶಃ ಗಡಿ, ಸೀಮೆ, ಎಲ್ಲೆ ಎಂದಾಗುತ್ತದೆ. ಒಂದು ವಿಷಯದ ಅಧ್ಯಯನವು ಒಳಗೊಂಡಿರುವ ವಿಷಯ ವಸ್ತುವನ್ನು ಸೂಚಿಸಲು ವ್ಯಾಪ್ತಿ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ದಿಷ್ಟ ವಿಷಯವೊಂದರ ಜ್ಙಾನದ ಗಡಿಯನ್ನು ಆ ವಿಷಯದ ವ್ಯಾಪ್ತಿ ನಿರ್ಧರಿಸುತ್ತದೆ. ರಾಜ್ಯಶಾಸ್ತ್ರ ವಿಷಯದ ಗಡಿ ಅಥವ ವ್ಯಾಪ್ತಿಯಲ್ಲಿ ಯಾವೆಲ್ಲ ಅಂಶಗಳಿರಬೇಕೆಂಬ ವಿಚಾರವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ಪರಿಣಾಮ ರಾಜ್ಯಶಾಸ್ತ್ರದ ವ್ಯಾಪ್ತಿ ಕುರಿತು ವಿಭಿನ್ನ ದೃಷ್ಟಿಕೋನವುಳ್ಳ ಚಿಂತಕರ ಮೂರು ಗುಂಪುಗಳನ್ನು ಕಾಣಬಹುದಾಗಿದೆ. ಪ್ರತಿಯೊಂದು ಗುಂಪಿನ ಚಿಂತಕರು ನಿರ್ದಿಷ್ಟ ವಿಷಯಕ್ಕೆ ಮಾತ್ರ ಬೆಂಬಲ ನೀಡಿರುವುದನ್ನು ಗಮನಿಸಬಹುದಾಗಿದ್ದು ಅದರ ಸಂಕ್ಷಿಪ್ತ ವಿವರ ಕೆಳಗಿನಂತಿದೆ.
ಅ. ರಾಜ್ಯದ ಅಧ್ಯಯನ: ಗ್ಯಾರಿಸ್, ಗುಡ್ನೌ, ಗಾರ್ನರ್ ಹಾಗು ಬ್ಲಂಟ್ಷ್ಲಿಯಂತಹ ಚಿಂತಕರು ರಾಜ್ಯಶಾಸ್ತ್ರದ ವ್ಯಾಪ್ತಿಯನ್ನು ರಾಜ್ಯದ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸಿದರು. ಇವರನ್ವಯ ರಾಜ್ಯದ ಉಗಮ, ಸ್ವರೂಪ, ಉದ್ದೇಶ, ಕಾರ್ಯಗಳು ಮಾತ್ರ ರಾಜ್ಯಶಾಸ್ತ್ರದ ವಿಷಯ ವಸ್ತುಗಳೆನಿಸಿದವು. ಈ ಗುಂಪಿನ ಚಿಂತಕರು ರಾಜ್ಯವೇ ರಾಜ್ಯಶಾಸ್ತ್ರದ ಕೇಂದ್ರ ಬಿಂದು ಎಂಬುದನ್ನು ಪ್ರತಿಪಾದಿಸಿ ರಾಜ್ಯದ ಸಾಧನವಾದ ಸರ್ಕಾರವನ್ನು ಕಡೆಗಣಿಸಿದರು.
ಆ. ಸರ್ಕಾರದ ಅಧ್ಯಯನ: ಜಾನ್ ಸೀಲೆ ಹಾಗು ಸ್ಟೀಫನ್ ಲಿಕಾಕ್ ರಾಜ್ಯಶಾಸ್ತ್ರವು ಕೇವಲ ಸರ್ಕಾರಕ್ಕೆ ಸಂಬಂಧಿಸಿದ ವಿಷಯವೆಂದು ಪ್ರತಿಪಾದಿಸಿದರು. ಇವರನ್ವಯ ಸರ್ಕಾರದ ಮಾದರಿಗಳು, ಅಂಗಗಳು, ಅವುಗಳ ರಚನೆ, ಕಾರ್ಯಗಳು ಮುಂತಾದ ಸರ್ಕಾರ ಸಂಬಂಧಿತ ಅಂಶಗಳು ಮಾತ್ರ ರಾಜ್ಯಶಾಸ್ತ್ರದ ವಿಷಯ ವಸ್ತುಗಳೆನಿಸುತ್ತವೆ. ಈ ಗುಂಪಿನ ಚಿಂತಕರು ಸರ್ಕಾರಕ್ಕೆ ಒಡೆಯನ ರೂಪದಲ್ಲಿರುವ ರಾಜ್ಯವನ್ನೇ ರಾಜ್ಯಶಾಸ್ತ್ರದ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ಗಮನಿಸಬಹುದಾಗಿದೆ.
ಇ. ರಾಜ್ಯ ಮತ್ತು ಸರ್ಕಾರದ ಅಧ್ಯಯನ: ಆರ್. ಜೆ. ಗೆಟಲ್, ಗಿಲ್ಕ್ರೈಸ್ಟ್, ಪಾಲ್ ಜಾನೆಟ್, ಎಚ್, ಜೆ, ಲಾಸ್ಕಿ ಮುಂತಾದ ಮೂರನೇ ಗುಂಪಿನ ಚಿಂತಕರು ರಾಜ್ಯಶಾಸ್ತ್ರದ ವ್ಯಾಪ್ತಿ ರಾಜ್ಯ ಮತ್ತು ಸರ್ಕಾರಗಳೆರಡರ ಅಧ್ಯಯನವನ್ನು ಒಳಗೊಂಡಿದೆ ಎಂಬುದಾಗಿ ನಂಬುತ್ತಾರೆ. ಇವರನ್ವಯ ರಾಜ್ಯ ಮತ್ತು ಸರ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯವೆಂಬ ಹಡಗಿಗೆ ಸರ್ಕಾರ ದಿಕ್ಸೂಚಿಯಂತಿದ್ದು ವಾಸ್ತವದಲ್ಲಿ ಸರ್ಕಾರವೇ ರಾಜ್ಯವನ್ನು ಪ್ರತಿನಿಧಿಸುತ್ತದೆ. ರಾಜ್ಯವು ರಾಜ್ಯಶಾಸ್ತ್ರದ ಕೇಂದ್ರ ಬಿಂದುವಾಗಿದ್ದು ಸರ್ಕಾರದ ಯಂತ್ರವು ಸತತವಾಗಿ ರಾಜ್ಯದೊಡನೆ ಸಾಗುತ್ತದೆ. ಈ ಗುಂಪಿನ ಚಿಂತಕರ ವಿವರಣೆಯನ್ನು ಬಹುತೇಕರು ಸಮ್ಮತಿಸುತ್ತಾರೆ.
ರಾಜ್ಯಶಾಸ್ತ್ರವು ಅತ್ಯಂತ ಹಳೆಯ ಸಮಾಜ ವಿಜ್ಙಾನಗಳಲ್ಲಿ ಒಂದಾಗಿದ್ದು ಮೇಲಿನ ವಿವರಣೆಯಿಂದ ಮಾತ್ರ ಅದರ ವ್ಯಾಪ್ತಿಯನ್ನು ಅರಿಯಲಾಗದು. ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೆ ಅನೇಕ ತಜ್ಙರು ಮಾನವನ ರಾಜಕೀಯ ಚಟುವಟಿಕೆ ಹಾಗು ವಿದ್ಯಮಾನಗಳನ್ನು ಚರ್ಚಿಸಿದ್ದು ರಾಜ್ಯಶಾಸ್ತ್ರದ ವ್ಯಾಪ್ತಿಗೆ ಇಂಬು ನೀಡಿದ್ದಾರೆ. ಸಮಕಾಲಿನ ರಾಜ್ಯಶಾಸ್ತ್ರದ ವ್ಯಾಪ್ತಿ ವಿಶಾಲವಾಗಿದ್ದು ನಿರಂತರವಾಗಿ ವಿಖಾಸಗೊಳ್ಳುತ್ತಲಿದೆ. 1948 ರಲ್ಲಿ ಅಂತರರಾಷ್ಟ್ರಿಯ ರಾಜ್ಯಶಾಸ್ತ್ರ ಸಂಘಟನೆಯ ಕರಡನ್ನು ರಚಿಸಲು ಯುನೆಸ್ಕೊದಿಂದ ಸ್ಥಾಪಿತ ಸಮಿತಿಯು ರಾಜ್ಯಶಾಸ್ತ್ರ ವಿಷಯದ ವ್ಯಾಪ್ತಿಗೊಳಪಡಬಲ್ಲ ವಸ್ತು ವಿಷಯಗಳ ಪಟ್ಟಿ ನೀಡಿತು. ಆ ಪಟ್ಟಿಯನ್ವಯ ರಾಜ್ಯಶಾಸ್ತ್ರದ ವ್ಯಾಪ್ತಿಗೊಳಪಡುವ ವಿಷಯ ವಸ್ತುವನ್ನು ಸರಳವಾಗಿ ಕೆಳಗಿನಂತೆ ಕಾಣಬಹುದಾಗಿದೆ.
ಅ. ರಾಜಕೀಯ ಸಿದ್ಧಾಂತ: ರಾಜಕೀಯ ಸಿದ್ಧಾಂತವು ಪ್ರಧಾನವಾಗಿ ರಾಜ್ಯದ ಉಗಮ, ಸ್ವರೂಪ, ಉದ್ದೇಶ, ಕಾರ್ಯಗಳನ್ನು ಕುರಿತ ವಿವರಣೆಯನ್ನು ನೀಡುತ್ತದೆ.
ಆ. ಸರ್ಕಾರ: ರಾಜ್ಯಶಾಸ್ತ್ರವು ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಳ್ಳುತ್ತದೆ. ಸರ್ಕಾರದ ಅಂಗಗಳು ಅಂದರೆ ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗಗಳ ರಚನೆ ಮತ್ತು ಕಾರ್ಯಗಳನ್ನು ವಿವರಿಸುತ್ತದೆ. ಜೊತೆಗೆ ಸರ್ಕಾರದ ಮಾದರಿಗಳು ಅಂದರೆ ಸಂಸಧೀಯ, ಅಧ್ಯಕ್ಷೀಯ, ಸರ್ವಾಧಿಕಾರಿ, ಪ್ರಜಾಪ್ರಭುತ್ವ, ಏಕಾತ್ಮಕ ಹಾಗು ಸಂಯುಕ್ತ ಮಾದರಿ ಸರ್ಕಾರಗಳ ವಿವರಣೆಯನ್ನು ಹೊಂದಿರುತ್ತದೆ.
ಇ. ರಾಜಕೀಯ ಸಂಸ್ಥೆಗಳು: ರಾಜ್ಯಶಾಸ್ತ್ರದ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಸಂಸ್ಥೆಗಳನ್ನು ಗುರುತಿಸಬಹುದಾಗಿದೆ. ಸಂವಿಧಾನ ಅದರಲ್ಲೂ ಲಿಖಿತ, ಅಲಿಖಿತ, ನಮ್ಯ ಹಾಗು ಸಂವಿಧಾನಗಳ ಅಧ್ಯಯನ ಸೇರಿರುತ್ತದೆ. ಜೊತೆಗೆ ಸರ್ಕಾರ ಅಂದರೆ ರಾಷ್ಟ್ರ, ಪ್ರಾಂತ್ಯ ಹಾಗು ಸ್ಥಳೀಯ ಮಟ್ಟದ ಸರ್ಕಾರಗಳನ್ನು ರಾಜ್ಯಶಾಸ್ತ್ರ ಒಳಗೊಳ್ಳುತ್ತದೆ. ಇದರೊಡನೆ ಒತ್ತಡ ಗುಂಪುಗಳು, ಸಾರ್ವಜನಿಕ ಅಭಿಪ್ರಾಯದ ನಿಯೋಗಿಗಳು, ಆಡಳಿತ ಸೇವಾ ವರ್ಗ, ತೌಲುನಿಕ ಸರ್ಕಾರಿ ಸಂಸ್ಥೆಗಳು ಇದರೊಳಗೆ ಕಂಡು ಬರುತ್ತವೆ.
ಈ. ಅಂತರರಾಷ್ಟ್ರಿಯ ಸಂಬಂಧಗಳು: ರಾಜ್ಯಶಾಸ್ತ್ರದ ಅಧ್ಯಯನವು ದೇಶ ದೇಶಗಳ ನಡುವಿನ ಸಂಬಂಧಗಳನ್ನು ಒಳಗೊಳ್ಳುತ್ತದೆ. ಅಂದರೆ ದೇಶಗಳ ನಡುವಿನ ವಿವಾದ, ಒಪ್ಪಂದ ಮತ್ತು ವೈವಿಧ್ಯಮಯ ಸಂಬಂಧಗಳನ್ನು ರಾಜ್ಯಶಾಸ್ತ್ರವು ಆವರಿಸುತ್ತದೆ. ಇದರೊಡನೆ ಯುದ್ಧ, ರಾಯಭಾರ, ನಿಶಸ್ತ್ರೀಕರಣ, ಸಾಮೂಹಿಕ ಭದ್ರತೆ, ಶಕ್ತಿ ಸಮತೋಲನ, ಅಂತರರಾಷ್ಟ್ರಿಯ ಶಾಂತಿಯ ಮಾರ್ಗೋಪಾಯಗಳನ್ನು ರಾಜ್ಯಶಾಸ್ತ್ರದ ಅಧ್ಯಯನ ಒಳಗೊಂಡಿರುತ್ತದೆ. ಜೊತೆಗೆ ವಿಶ್ವ ಸಂಸ್ಥೆ ಮತ್ತು ವಿವಿಧ ಪ್ರಾದೇಶಿಕ ಸಂಸ್ಥೆಗಳ ಅಧ್ಯಯನವನ್ನು ಪ್ರತಿನಿಧಿಸುತ್ತದೆ.
ಗಮನಿಸಬೇಕಾದ ಅಂಶವೇನೆಂದರೆ ರಾಜ್ಯಶಾಸ್ತ್ರದ ವಿಷಯ ವಸ್ತುವನ್ನು ಸರ್ ಫೆಡ್ರಿಕ್ ಪೊಲಾಕ್ ಸೈದ್ಧಾಂತಿಕ ರಾಜಕೀಯ ಮತ್ತು ಪ್ರಾಯೋಗಿಕ ರಾಜಕೀಯ ಎಂಬುದಾಗಿ ವರ್ಗೀಕರಿಸಿ ವಿವರಿಸಿದ್ದರು. ಅಂತೆಯೇ ಎಚ್. ಜೆ. ಮಾರ್ಗೆಂಥೊ ರಾಜಕೀಯ ಸಮಾಜಶಾಸ್ತ್ರ, ರಾಜಕೀಯ ಸಿದ್ಧಾಂತ ಹಾಗು ರಾಜಕೀಯ ಸಂಸ್ಥೆಗಳೆಂಬ ಮೂರು ಕ್ಷೇತ್ರಗಳನ್ನು ರಾಜ್ಯಶಾಸ್ತ್ರದ ವ್ಯಾಪ್ತಿ ಆಧರಿಸಿದೆ ಎಂದಿರುವರು. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ವ್ಯಾಪ್ತಿಯು ಚಿಂತಕರ ಚಿಂತನೆಯಲ್ಲಿ ಮೂಡಿದ ಸೈದ್ಧಾಂತಿಕ ಅಂಶಗಳೊಡನೆ ಪ್ರಾಯೋಗಿಕ ಅಂಶಗಳನ್ನು ಸಮ ಪ್ರಮಾಣದಲ್ಲಿ ಹೊಂದುವಂತಾಗಿದೆ. ಇದರೊಡನೆ ಪ್ರಸ್ತುತ ರಾಜ್ಯಶಾಸ್ತ್ರ ಅನಿವಾರ್ಯವಾಗಿ ಕೆಲವು ಕ್ಷೇತ್ರಗಳೊಡನೆ ವರ್ತಿಸಬೇಕಾಗಿದ್ದು ಹಸಿರು ರಾಜಕಾರಣ, ರಾಜಕೀಯ ಅರ್ಥಶಾಸ್ತ್ರ, ರಾಜಕೀಯ ಸಮಾಜಶಾಸ್ತ್ರದಂತಹ ನವೀನ ವಿಷಯ ವಸ್ತುಗಳು ರಾಜ್ಯಶಾಸ್ತ್ರದ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತಿವೆ. ಅಲ್ಲದೇ ಅಂತರರಾಷ್ಟ್ರಿಯ ಸಂಬಂಧಗಳು, ಸಾರ್ವಜನಿಕ ಆಡಳಿತ, ಹೋಲಿಕಾ ಸರ್ಕಾರ ಮತ್ತು ರಾಜಕೀಯದಂತಹ ರಾಜ್ಯಶಾಸ್ತ್ರದ ಶಾಖೆಗಳಲ್ಲಿನ ಬೆಳವಣಿಗೆಗಳು ರಾಜ್ಯಶಾಸ್ತ್ರದ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ