ಗುರುವಾರ, ಸೆಪ್ಟೆಂಬರ್ 24, 2020

impartance of political science

ರಾಜ್ಯಶಾಸ್ತ್ರದ ಮಹತ್ವ: ಪ್ರತಿಯೊಂದು ಅಧ್ಯಯನ ವಿಷಯವು ತನ್ನದೇ ಉಪಯುಕ್ತತೆಗಳಿಂದ ಮಹತ್ವ ಹೊಂದಿರುತ್ತದೆ. ಇದಕ್ಕೆ ರಾಜ್ಯಶಾಸ್ತ್ರವೂ ಹೊರತಾಗಿಲ್ಲ. ಸಮಾಜ ವಿಜ್ಙಾನಗಳಲ್ಲಿ ಪ್ರಧಾನವಾಗಿರುವ ರಾಜ್ಯಶಾಸ್ತ್ರವು ಮಾನವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶಗಳ ಆಗರವಾಗಿದೆ. ವ್ಯಕ್ತಿ ಹಾಗು ಸಮಾಜದ ಪ್ರಗತಿಗೆ ರಾಜ್ಯಶಾಸ್ತ್ರದ ಕೊಡುಗೆ ಅಮೂಲ್ಯವಾದುದಾಗಿದೆ. ಆದ್ದರಿಂದಲೇ ಜಾರ್ಜ್ ಬರ್ನಾರ್ಡ್ ಷಾ ನಾಗರೀಕತೆಯನ್ನು ರಕ್ಷಿಸಬಲ್ಲ ಏಕಮಾತ್ರ ಅಧ್ಯಯನ ವಿಷಯವೆಂದು ರಾಜ್ಯಶಾಸ್ತ್ರವನ್ನು ಬಣ್ಣಿಸಿದ್ದಾರೆ. ರಾಜ್ಯಶಾಸ್ತ್ರ ಅಧ್ಯಯನದ ಕೆಳಗಿನ ಉಪಯುಕ್ತತೆಗಳು ಅದರ ಮಹತ್ವವನ್ನು ಸ್ಪಷ್ಟಪಡಿಸುತ್ತವೆ..
[A] ರಾಜ್ಯ ಮತ್ತು ಸರ್ಕಾರದ ತಿಳುವಳಿಕೆ: ರಾಜ್ಯಶಾಸ್ತ್ರದ ಅಧ್ಯಯನವು ಓದುಗರಿಗೆ ರಾಜ್ಯ ಮತ್ತು ಸರ್ಕಾರಗಳ ಸ್ಪಷ್ಟ ಪರಿಕಲ್ಪನೆ ಹೊಂದಲು ಸಹಕಾರಿಯಾಗಿದೆ. ಪ್ರತಿಯೊಬ್ಬ ಮಾನವ ರಾಜ್ಯವನ್ನು ಬಿಟ್ಟು ಬಾಳಲಾರ. ಇಷ್ಟವಿರಲಿ ಅಥವ ಇಲ್ಲದಿರಲಿ ನಿರ್ದಿಷ್ಟ ರಾಜ್ಯದೊಡನೆ ವ್ಯಕ್ತಿ ಸಂಬಂಧ ಪಡೆದಿರಲೇಬೇಕಾಗುತ್ತದೆ. ತಾನು ಸೇರಿರುವ ರಾಜ್ಯದ ಮೂಲ, ಹಿನ್ನೆಲೆ, ಸ್ವರೂಪ, ಉದ್ದೇಶಗಳನ್ನು ವ್ಯಕ್ತಿ ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ರಾಜ್ಯದ ಪ್ರತಿನಿಧಿಯಾಗಿರುವ ಸರ್ಕಾರದ ರಚನೆ, ವಿವಿಧ ಅಂಗಗಳು, ತನ್ನ ಹಾಗು ಸರ್ಕಾರದ ನಡುವಿನ ಸಂಬಂಧ ಅರಿಯಲು ಇದರ ಅಧ್ಯಯನ ಉಪಯುಕ್ತವಾಗಿದೆ. ಒಟ್ಟಾರೆ ವ್ಯಕ್ತಿಯೊಬ್ಬ ಸಾಮಾಜಿಕ ಹಾಗು ರಾಜಕೀಯ ವ್ಯವಹಾರಗಳಲ್ಲಿ ಭಾಗವಹಿಸಲು ುಪಯುಕ್ತವಾದ ರಾಜ್ಯ ಮತ್ತು ಸರ್ಕಾರಗಳ ತಿಳುವಳಿಕೆ ೊದಗಿಸುವಲ್ಲಿ ರಾಜ್ಯಶಾಸ್ತ್ರವು ಸಹಕಾರಿಯಾಗಿದೆ.
[B] ಸಂವಿಧಾನದ ಅರಿವು: ದೇಶವೊಂದರ ಆಡಳಿತಾತ್ಮಕ ನಿಯಮಾವಳಿಗಳ ಧಾಕಲೆಯೇ ಸಂವಿಧಾನ. ದೇಶದ ಸ್ವರೂಪ, ಸರ್ಕಾರದ ರಚನೆ, ಪ್ರಜೆಗಳ ಹಕ್ಕುಗಳು, ಪ್ರಜೆಗಳು ಹಾಗು ಸರ್ಕಾರದ ನಡುವಿನ ಸಂಬಂಧಗಳನ್ನು ಸಂವಿಧಾನ ನಿರ್ಧರಿಸುತ್ತದೆ. ಇಂತಹ ಸಂವಿಧಾನದ ಅರಿವನ್ನು ಹೊಂದಲು ರಾಜ್ಯಶಾಸ್ತ್ರದ ಅಧ್ಯಯನ ನೆರವಾಗುತ್ತದೆ. ಸಂವಿಧಾನದ ರಚನೆ, ಹಿನ್ನೆಲೆ, ಮುಖ್ಯಾಂಶಗಳು, ತಿದ್ದುಪಡಿ ವಿಧಾನ ಮುಂತಾದವುಗಳನ್ನು ರಾಜ್ಯಶಾಸ್ತ್ರದ ಅಧ್ಯಯನವು ಮನವರಿಕೆ ಮಾಡಿಕೊಡುತ್ತದೆ. ಈ ತಿಳುವಳಿಕೆಯನ್ನುಳ್ಳ ಪ್ರಜೆಗಳು ಕಾನೂನಿನ ವಿಧೇಯತೆ ಮೈಗೂಡಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ.
[C] ಹಕ್ಕು ಮತ್ತು ಕರ್ತವ್ಯಗಳ ಮನವರಿಕೆ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಹಕ್ಕು ಎನ್ನಲಾಗುತ್ತದೆ. ಪ್ರತಿಯೊಂದು ದೇಶದ ಸಂವಿಧಾನ ತನ್ನ ಪ್ರಜೆಗಳಿಗೆ ಕೆಲವು ಮೂಲಭೂತ ಹಕ್ಕುಗಳನ್ನು ಒದಗಿಸಿರುತ್ತದೆ. ತಾನು ಪಡೆದ ಹಕ್ಕುಗಳಾವುವು? ಅವುಗಳ ಮೇಲಿನ ಮಿತಿಗಳಾವುವು? ಹಕ್ಕುಗಳ ಉಲ್ಲಂಘನೆಯಾದಾಗ ಎಲ್ಲಿ ಪ್ರಶ್ನಿಸಬೇಕು? ಮುಂತಾದ ವಿಷಯಗಳನ್ನು ವ್ಯಕ್ತಿ ಅರಿತುಕೊಳ್ಳಲು ರಾಜ್ಯಶಾಸ್ತ್ರದ ಅಧ್ಯಯನ ನೆರವಾಗುತ್ತದೆ. ಜೊತೆಗೆ ಪ್ರತಿಯೊಂದು ಹಕ್ಕು ನಿರ್ದಿಷ್ಟ ಕರ್ತವ್ಯ ಪಡೆದಿದ್ದು ಅವುಗಳ ಪಾಲನೆಯ ಕುರಿತು ಿದರ ಅಧ್ಯಯನ ಬೆಳಕು ಚೆಲ್ಲುತ್ತದೆ. ವ್ಯಕ್ತಿ ತನ್ನ ಕರ್ತವ್ಯಗಳಾವುವು? ಅವುಗಳ ಉಲ್ಲಂಘನೆಯ ಪರಿಣಾಮ ಏನಾಗುತ್ತದೆ? ಕರ್ತವ್ಯಗಳ ಅಗತ್ಯವೇನು? ಎಂಬುದನ್ನು ಮನದಟ್ಟು ಮಾಡುವಲ್ಲಿ ರಾಜ್ಯಶಾಸ್ತ್ರದ ಅಧ್ಯಯನವು ಉಪಯುಕ್ತವಾಗಿದೆ.
[D] ರಾಜಕಾರಣಿಗಳಿಗೆ ತರಬೇತಿ: ದೈನಂದಿನ ರಾಜಕೀಯ ವ್ಯವಹಾರದಲ್ಲಿ ಆಸಕ್ತಿ ಹೊಂದಿದ್ದು ಸಕ್ರೀಯವಾಗಿ ಭಾಗವಹಿಸುವ ವ್ಯಕ್ತಿಯನ್ನು ರಾಜಕಾರಣಿ ಎನ್ನಬಹುದು. ಪ್ರಸ್ತುತ ಪ್ರಾತಿನಿಧಿಕ ಸರ್ಕಾರ ಪದ್ಧತಿ ಎಲ್ಲೆಡೆ ಜಾರಿಯಲ್ಲಿದ್ದು ಅಸಂಖ್ಯ ರಾಜಕಾರಣಿಗಳನ್ನು ನಮ್ಮ ಸುತ್ತಮುತ್ತ ಕಾಣಬಹುದಾಗಿದೆ. ಇಂತಹ ರಾಜಕಾರಣಿಗಳು ದೇಶವೊಂದರ ಶಾಸನ ರಚನೆ, ಯೋಜನೆಗಳ ರೂಪಿಸುವಿಕೆ, ಕಾರ್ಯಕ್ರಮಗಳ ಜಾರಿ ಮುಂತಾದ ರಾಜಕೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ರಾಜ್ಯಶಾಸ್ತ್ರದ ಅಧ್ಯಯನವು ಇವರಿಗೆ ಸೂಕ್ತ ಮಾರ್ಗದರ್ಶನ ಒದಗಿಸುತ್ತದೆ. ಜೊತೆಗೆ ಜನ ವಿರೋಧಿ ನೀತಿ, ಕಾರ್ಯಕ್ರಮ ಹಾಗು ಯೋಜನೆಗಳ ಪರಿಣಾಮವನ್ನು ಮನವರಿಕೆ ಮಾಡಿ ಜನಪರ ಕಾರ್ಯ ನಿರ್ವಹಣೆಗೆ ಸಿದ್ಧಗೊಳಿಸುತ್ತದೆ. ಇದರೊಡನೆ ರಾಜಕಾರಣಿಗಳಿಗೆ ಯಶಸ್ಸಿನ ಸೂತ್ರಗಳನ್ನು ರಾಜ್ಯಶಾಸ್ತ್ರದ ಅಧ್ಯಯನ ಮನದಟ್ಟು ಮಾಡಲು ಸಹಕಾರಿಯಾಗಿದೆ.
[E] ರಾಜಕೀಯ ಜಾಗೃತಿ: ರಾಜ್ಯಶಾಸ್ತ್ರದ ಅಧ್ಯಯನವು ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುತ್ತದೆ. ತಮ್ಮ ದೇಶದ ಹಿನ್ನೆಲೆ, ಸ್ವರೂಪ ಹಾಗು ಸಮಸ್ಯೆಗಳನ್ನು ಅರಿಯಲು ರಾಜ್ಯಶಾಸ್ತ್ರದ ಅಧ್ಯಯನವು ಆಯಾ ದೇಶದ ಪ್ರಜೆಗಳಿಗೆ ನೆರವಾಗುತ್ತದೆ. ಇದರೊಡನೆ ತೆರಿಗೆ, ಆಯವ್ಯಯ, ಶಾಸನಗಳು, ಯೋಜನೆಗಳು, ರಾಜಕೀಯ ಪಕ್ಷಗಳ ಪರಿಚಯವಾಗಿ ರಾಜಕೀಯ ಜಾಗೃತಿ ಅಧಿಕಗೊಳ್ಳುತ್ತದೆ. ಅಲ್ಲದೇ ಸಹಕಾರ, ಹೊಂದಾಣಿಕೆ, ಸಹಿಷ್ಣುತೆಯಂತಹ ಗುಣಗಳನ್ನು ಜನರಲ್ಲಿ ಮೂಡಿಸುತ್ತದೆ. ಹೀಗೆ ರಾಜಕೀಯವಾಗಿ ಜಾಗೃತ ಮತದಾರ ವರ್ಗ ಸೃಷ್ಟಿಸಿ ಅವರನ್ನು ದೇಶದ ಸಂಪತ್ತನ್ನಾಗಿ ರೂಪಿಸುವಲ್ಲಿ ರಾಜ್ಯಶಾಸ್ತ್ರ ಅಧ್ಯಯನವು ನೆರವಾಗುತ್ತದೆ.
[F] ವ್ಯಕ್ತಿಯ ಸಾರ್ವಜನಿಕ ಜವಾಬ್ದಾರಿಯ ಮನನ: ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ಮಾನವ ಸಾಮಾಜಿಕ ಹಾಗು ರಾಜಕೀಯ ಜೀವಿ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಹೊಂದಿರುವ ಸ್ಥಳೀಯ, ರಾಷ್ಟ್ರಿಯ ಹಾಗು ಅಂತರರಾಷ್ಟ್ರಿಯ ಮಟ್ಟದ ಸಾರ್ವತ್ರಿಕ ಜವಾಬ್ದಾರಿಯನ್ನು ರಾಜ್ಯಶಾಸ್ತ್ರ ತಿಳಿಸುತ್ತದೆ. ಜೊತೆಗೆ ಸರ್ಕಾರದ ಅಂಗಗಳು, ರಾಜಕೀಯ ಪಕ್ಷಗಳು, ಒತ್ತಡ ಗುಂಪುಗಳು, ನಾನಾ ಸ್ವಯಂ ಸೇವಾ ಸಂಘಟನೆಗಳಂತಹ ಸಾರ್ವಜನಿಕ ಸಂಸ್ಥೆಗಳ  ರಚನೆ ಹಾಗು ನೀತಿಗಳನ್ನು ಅರಿತುಕೊಂಡು ಅವುಗಳೊಡನೆ ವ್ಯವಹರಿಸಲು ರಾಜ್ಯಶಾಸ್ತ್ರದ ಅಭ್ಯಾಸ ವ್ಯಕ್ತಿಗಳಿಗೆ ನೆರವಾಗಿದೆ. ವ್ಯಕ್ತಿ ಸಾರ್ವಜನಿಕವಾಗಿ ನಿರ್ದೇಶನ, ನಿಯಂತ್ರಣ ಅಥವ ಮೇಲ್ವಿಚಾರಣೆ ನಡೆಸಬಹುದಾದ ಸನ್ನಿವೇಶಗಳನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮಹತ್ವದ ಪಾತ್ರ ನಿರ್ವಹಿಸುತ್ತದೆ.
[G] ಆಡಳಿತ ಸೇವಾ ವರ್ಗಕ್ಕೆ ಸಹಕಾರಿ: ದೇಶವೊಂದರ ಸರ್ಕಾರದ ಮಾದರಿ ಯಾವುದೇ ಆಗಿರಲಿ ಅದು ಆಡಳಿತ ಸೇವಾ ವರ್ಗ ಹೊಂದಿರುತ್ತದೆ. ವಾಸ್ತವದಲ್ಲಿ ಸರ್ಕಾರವನ್ನು ಆಡಳಿತ ಸೇವಾ ವರ್ಗ ಪ್ರತಿನಿಧಿಸುತ್ತದೆ. ದೇಶದ ಪ್ರಜೆಗಳ ಸಮಸ್ಯೆಗಳಿಗೆ  ಕಿವಿಯಾಗಿ ಅವರ ಸುಖಮಯ ಜೀವನಕ್ಕೆ ಆಡಳಿತ ಸೇವಾ ವರ್ಗ ಕಾರಣವಾಗುತ್ತದೆ. ರಾಜ್ಯಶಾಸ್ತ್ರದ ಅಧ್ಯಯನವು ರಾಜ್ಯದ ಸ್ವರೂಪ, ಗುರಿ, ಪ್ರಜೆಗಳ ಪಾತ್ರ ಮುಂತಾದವುಗಳನ್ನು ಆಡಳಿತ ಸೇವಾ ವರ್ಗಕ್ಕೆ ಮನವರಿಕೆ ಮಾಡಿಕೊಳ್ಳಲು ಸಹಾಯಕವಾಗಿದೆ. ಜೊತೆಗೆ ಸರ್ವರ ಕಲ್ಯಾಣ ಸಾಧನೆಯ ಅಗತ್ಯ, ಮಾರ್ಗಗಳು ಹಾಗು ಜವಾಬ್ದಾರಿಯನ್ನು ಆಡಳಿತ ಸೇವಾ ವರ್ಗದವರಿಗೆ ರಾಜ್ಯಶಾಸ್ತ್ರ ಮನದಟ್ಟು ಮಾಡುತ್ತದೆ. ಅಲ್ಲದೇ ದೇಶವು ಸಮರ್ಥ ಹಾಗು ನ್ಯಾಯ ಸಮ್ಮತ ಸಾರ್ವಜನಿಕ ಆಡಳಿತ ಹೊಂದಲು ರಾಜ್ಯಶಾಸ್ತ್ರದ ಅರಿವು ಆಡಳಿತ ಸೇವಾ ವರ್ಗಕ್ಕೆ ನೆರವಾಗುತ್ತದೆ.
[H] ಅಂತರರಾಷ್ಟ್ರಿಯ ಸಂಬಂಧಗಳ ಅರಿವು: ಜಗತ್ತಿನಲ್ಲಿ ಇಂದು ಇನ್ನೂರಕ್ಕೂ ಹೆಚ್ಚು ದೇಶಗಳಿವೆ. ಇವುಗಳ ನಡುವಿನ ಸಂಬಂಧಗಳ ತಿಳುವಳಿಕೆಯನ್ನು ರಾಜ್ಯಶಾಸ್ತ್ರದ ಅಧ್ಯಯನ ಒದಗಿಸುತ್ತದೆ. ದೇಶ ದೇಶಗಳ ನಡುವಿನ ಸಂಬಂಧಗಳ ಸ್ವರೂಪ, ವ್ಯಾಪ್ತಿ ಹಾಗು ಮಹತ್ವವನ್ನು ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ಜೊತೆಗೆ ದೇಶ ದೇಶಗಳ ಸಂಬಂಧವನ್ನು ವ್ಯವಸ್ಥಿತಗೊಳಿಸಲು ಅಸ್ತಿತ್ವದಲ್ಲಿರುವ ವಿಶ್ವ ಸಂಸ್ಥೆ ಮತ್ತು ಅಸಂಖ್ಯ ಪ್ರಾದೇಶಿಕ ಸಂಸ್ಥೆಗಳ ಅರಿವನ್ನು ರಾಜ್ಯಶಾಸ್ತ್ರ ಒದಗಿಸುತ್ತದೆ. ಇದರೊಡನೆ ಅಂತರರಾಷ್ಟ್ರಿಯ ಶಾಂತಿ, ಕಾನೂನು, ವ್ಯಾಪಾರ, ಒಪ್ಪಂದಗಳ ಮೇಲೆ ಬೆಳಕು ಚೆಲ್ಲಿ ವಿಶ್ವ ಮಾನವ ಪರಿಕಲ್ಪನೆಯನ್ನು ಅಧ್ಯಯನಾರ್ಥಿಯಲ್ಲಿ ಮೂಡಿಸುತ್ತದೆ.
[I] ತೌಲುನಿಕ ರಾಜಕೀಯದ ಅರಿವು: ಎರಡು ಅಥವ ಹೆಚ್ಚು ದೇಶಗಳ ನಡುವಿನ ರಾಜಕೀಯ ವ್ಯವಸ್ಥೆಯನ್ನು ಹೋಲಿಕಾ ವಿಧಾನದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸುವುದನ್ನು ತೌಲುನಿಕ ರಾಜಕೀಯ ಎನ್ನಲಾಗುತ್ತದೆ. ದೇಶ ದೇಶಗಳ ನಡುವಿನ ಸಂವಿಧಾನದ ಸ್ವರೂಪ, ಸರ್ಕಾರ ಪದ್ಧತಿ, ಚುನಾವಣೆ, ನ್ಯಾಯಾಂಗ ವ್ಯವಸ್ಥೆ, ಹಕ್ಕುಗಳು, ರಾಜಕೀಯ ಪಕ್ಷಗಳಂತಹ ರಾಜಕೀಯ ಪರಿಕಲ್ಪನೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಹೋಲಿಕಾ ರಾಜಕೀಯ ನೆರವಾಗುತ್ತದೆ. ರಾಜ್ಯಶಾಸ್ತ್ರ ಅಧ್ಯಯನವು ತನ್ನ ಬಾಗವಾಗಿರುವ ತೌಲುನಿಕ ರಾಜಕೀಯದತ್ತ ಆಕರ್ಷಿಸುವ ಮೂಲಕ ಓದುಗರಿಗೆ ಹೋಲಿಕಾ ರಾಜಕೀಯದ ಅರಿವು ಮೂಡಿಸುತ್ತದೆ.
[J] ಪ್ರಮುಖ ರಾಜಕೀಯ ಘಟನೆಗಳ ಅರಿವು: ರಾಜ್ಯಶಾಸ್ತ್ರದ ಅಧ್ಯಯನವು ನಮಗೆ ವಿಶ್ವದ ಪ್ರಧಾನ ರಾಜಕೀಯ ಘಟನೆಗಳ ಮನವರಿಕೆ ಮಾಡಿಕೊಡುತ್ತದೆ. 1776 ರ ಅಮೇರಿಕ ಕ್ರಾಂತಿ, 1789 ರ ಪ್ರೆಂಚ್ ಮಹಾ ಕ್ರಾಂತಿ, 1911 ರ ಚೀನಾ ಕ್ರಾಂತಿ, 1917 ರ ರಷ್ಯಾ ಕ್ರಾಂತಿ ಮುಂತಾದ ರಾಜಕೀಯ ಘಟನೆಗಳ ಕಾರಣ ಮತ್ತು ಪರಿಣಾಮಗಳನ್ನು ಅರಿಯಲು ರಾಜ್ಯಶಾಸ್ತ್ರ ನೆರವಾಗುತ್ತದೆ. ಜೊತೆಗೆ ಭಾರತದ ಸ್ವತಂತ್ರ್ಯ ಹೋರಾಟದ ವಿವಿಧ ಮೈಲಿಗಲ್ಲುಗಳ ರಾಜಕೀಯ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಲು ರಾಜ್ಯಶಾಸ್ತ್ರದ ಅಧ್ಯಯನವು ಉಪಯುಕ್ತವಾಗಿದೆ. ಇದರೊಡನೆ ಪ್ರತಿಯೊಂದು ರಾಜಕೀಯ ಘಟನೆಗಳ ಮೌಲ್ಯಗಳನ್ನು ಸ್ಮರಿಸಿಕೊಂಡು ಆಚರಿಸಲು ರಾಜ್ಯಶಾಸ್ತ್ರದ ಅಧ್ಯಯನವು ಪ್ರೇರಣೆ ನೀಡುತ್ತದೆ. ಉದಾ: ಪ್ರೆಂಚ್ ಕ್ರಾಂತಿಯ ಸಮಾನತೆ, ಅಮೇರಿಕ ಕ್ರಾಂತಿಯ ಸ್ವಾತಂತ್ರ್ಯ, ಭಾರತದ ಸ್ವತಂತ್ರ್ಯ ಹೋರಾಟದ ಅಹಿಂಸಾತ್ಮಕ ಸಾಧನ ಇತ್ಯಾದಿ.
[K] ಅಧಿಕಾರದ ದುರುಪಯೋಗದ ತಡೆ: ಸಮಾಜ ಅಥವ ದೇಶವೊಂದರ ಪ್ರಮುಖ ಲಕ್ಷಣ ಸರ್ಕಾರ. ಪ್ರಜೆಗಳ ಕಲ್ಯಾಣಕ್ಕಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಂತೂ ಸರ್ಕಾರ ಪ್ರಜೆಗಳ ಪ್ರತಿನಿಧಿಗಳಿಂದ ಅವರಿಗಾಗಿ ಕಾರ್ಯಾಚರಿಸುತ್ತದೆ. ಇಂತಹ ಸರ್ಕಾರ ಜನ ವಿರೋಧಿ ನಿರ್ಧಾರ ಅಥವ ನೀತಿಗಳನ್ನು ಜಾರಿಗೊಳಿಸಿದಾಗ ಪ್ರಜೆಗಳಿಗೆ ರಾಜ್ಯಶಾಸ್ತ್ರದ ಅರಿವು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಭವಿಷ್ಯದ ಚುನಾವಣೆಯಲ್ಲಿ ಅಧಿಕಾರವನ್ನು ತಮ್ಮ ಹಿತಕ್ಕಾಗಿ ಬಳಸದವರನ್ನು ಅಧಿಕಾರದಿಂದ ದೂರವಿಡಲು ತನ್ಮೂಲಕ ಅಧಿಕಾರದ ದುರುಪಯೋಗವನ್ನು ನಿಯಂತ್ರಿಸಲು ಅಗತ್ಯ ಮಾಹಿತಿಯನ್ನು ಜನರಿಗೆ ರಾಜ್ಯಶಾಸ್ತ್ರ ಒದಗಿಸುತ್ತದೆ.
[L] ರಾಜಕೀಯ ಪಾರಿಭಾಷೆಗಳ ಸ್ಪಷ್ಟತೆ: ಪ್ರತಿಯೊಂದು ಅಧ್ಯಯನ ವಿಷಯ ತನ್ನದೇ ಕೆಲವು ಪಾರಿಭಾಷಿಕ ಪದಗಳನ್ನು ಃಒಂದಿರುತ್ತವೆ. ಅಂತೆಯೇ ವಿಶಾಲ ವ್ಯಾಪ್ತಿಯನ್ನುಳ್ಳ ರಾಜ್ಯಶಾಸ್ತ್ರದಲ್ಲಿ ರಾಜಕೀಯ, ಸರ್ಕಾರ, ಪೌರತ್ವ, ಸಮಾನತೆ, ಸ್ವತಂತ್ರ್ಯ, ಸಹೋದರತೆಯಂತಹ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳಲ್ಲದೇ ನಿರ್ಧಾರ ಕೈಗೊಳ್ಳುವಿಕೆ, ಕಾನೂನಿನ ಆಳ್ವಿಕೆ, ಅಧಿಕಾರ ಪ್ರತ್ಯೇಕತೆ, ಸರ್ವರ ಒಳಿತು, ಜನತಾ ಪರಮಾಧಿಕಾರ, ಗಣರಾಜ್ಯ, ಜಾತ್ಯಾತೀತತೆ ಮುಂತಾದ ಇತರ ಅನೇಕ ಸಂಕೀರ್ಣ ಪಾರಿಭಾಷಿಕ ಪದಗಳ ಬಳಕೆಯನ್ನೂ ಗುರುತಿಸಬಹುದಾಗಿದೆ. ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ರಾಜಕೀಯ ಜೀವಿಯಾಗಿರುವ ನಮಗೆಲ್ಲ ಈ ರಾಜಕೀಯ ಪಾರಿಭಾಷಿಕ ಸ್ಪಷ್ಟತೆ ಅತ್ಯಗತ್ಯ. ರಾಜ್ಯಶಾಸ್ತ್ರದ ಅಧ್ಯಯನವು ಮಾತ್ರ ರಾಜಕೀಯ ಪರಿಕಲ್ಪನೆಗಳ ಸ್ಪಷ್ಟತೆಯನ್ನು ಒದಗಿಸಬಲ್ಲ ಸಾಮರ್ಥ್ಯ,  ಹೊಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...