ರಾಜ್ಯಶಾಸ್ತ್ರದ ಸ್ವರೂಪ: ಅನೇಕ ರಾಜಕೀಯ ಚಿಂತಕರು ರಾಜ್ಯಶಾಸ್ತ್ರ ಎಂಬ ಪದದ ಬದಲು ರಾಜಕೀಯ ಎಂಬ ಪದದ ಬಳಕೆಗೆ ಒಲವು ಹೊಂದಿರುವುದನ್ನು ನಾವು ಗುರುತಿಸಬಹುದು. ರಾಜ್ಯಶಾಸ್ತ್ರದ ಪಿತಾಮಹನೆಂದು ಪರಿಗಣಿಸಲಾಗುವ ಅರಿಸ್ಟಾಟಲ್ನು ರಾಜಕೀಯ ವಿದ್ಯಮಾನಗಳನ್ನೊಳಗೊಂಡ ತನ್ನ ಗ್ರಂಥಕ್ಕೆ ಪಾಲಿಟಿಕ್ಸ್ ಅಂದರೆ ರಾಜಕೀಯ ಎಂಬುದಾಗಿ ಹೆಸರಿಸಿದ್ದನು. 1925 ರಲ್ಲಿ ಪ್ರಕಟವಾದ ತನ್ನ ಕೃತಿಗೆ ಹೆರಾಲ್ಡ್ ಲಾಸ್ಕಿ ರಾಜ್ಯಶಾಸ್ತ್ರದ ಬದಲು ಗ್ರ್ಯಾಮರ್ ಆಫ್ ಪಾಲಿಟಿಕ್ಸ್ ಅಂದರೆ ರಾಜಕೀಯ ವ್ಯಾಕರಣ ಎಂಬ ಶಿರ್ಶಿಕೆ ನೀಡಿದ್ದನು. ಅಂತೆಯೇ ಆರ್. ಎಚ್. ಸಾಲ್ಟೊ 1950 ರ ತನ್ನ ಮೊದಲ ಗ್ರಂಥಕ್ಕೆಾಯಾನ್ ಇಂಟ್ರಡಕ್ಷನ್ ಟು ಪಾಲಿಟಿಕ್ಸ್ ಎಂಬ ಹೆಸರು ನೀಡಿದನು. ಮುಂದುವರೆದು ಎಫ್. ಡಬ್ಲ್ಯು. ಮೈಟ್ಲ್ಯಾಂಡ್ ರಾಜ್ಯಶಾಸ್ತ್ರ ಶಿರ್ಶಿಕೆಯುಳ್ಳ ಒಂದು ಉತ್ತಮ ಪ್ರಶ್ನಾ ಪತ್ರಿಕೆಯನ್ನು ನೋಡಿದಾಗ ಬೇಸರವಾಗುವುದು ಪ್ರಶ್ನೆಗಳಿಂದಲ್ಲ, ಬದಲಾಗಿ ಅದರ ಶಿರ್ಶಿಕೆಯಿಂದ ಎಂಬುದಾಗಿ ಅಭಿಪ್ರಾಯಪಟ್ಟನು. ಆದರೆ ರಾಜಕೀಯ ವಿದ್ಯಮಾನಗಳ ಅಧ್ಯಯನ ನಡೆಸುವ ವಿಷಯಕ್ಕೆ ಮೊಟ್ಟ ಮೊದಲು ಗಾಡ್ವಿನ್ ಮತ್ತು ವೊಲ್ಲಸ್ಟ್ರೊನ್ಕ್ರಾಫ್ಟ್ ರಾಜ್ಯಶಾಸ್ತ್ರ ಎಂಬ ಪದವನ್ನು ಬಳಸಿದನು. ನಂತರ ವಿಕೊ ಮತ್ತು ಹ್ಯೂಮ್ ಸೇರಿದಂತೆ ಆಧುನಿಕ ಬರಹಗಾರರು ರಾಜ್ಯಶಾಸ್ತ್ರ ಎಂಬ ಪದವನ್ನು ವ್ಯಾಪಕವಾಗಿ ಬಳಸಲಾರಂಭಿಸಿದರು. ಸರ್ ಫೆಡ್ರಿಕ್ ಪೊಲಾಕ್ ಹಾಗು ಸರ್ ಜಾನ್ ಸೆಕ್ಲಿ ಕೂಡ ರಾಜ್ಯಶಾಸ್ತ್ರದ ಬಳಕೆಯನ್ನು ಬೆಂಬಲಿಸಿದರು. ಪ್ರಸ್ತುತ ರಾಜ್ಯಶಾಸ್ತ್ರ ತನ್ನ ಪೂರ್ವದಲ್ಲಿದ್ದ ವೈವಿಧ್ಯಮಯ ಶಿರ್ಶಿಕೆಗಳಡಿ ಅಭ್ಯಸಿಸಲಾಗುತ್ತಿದ್ದ ಎಲ್ಲ ವಿಷಯಗಳನ್ನೊಳಗೊಂಡ ವಿಶಾಲ ಸ್ವರೂಪದೊಂದಿಗೆ ಅಸ್ತಿತ್ವದಲ್ಲಿದೆ.
ಶಿರ್ಶಿಕೆಯ ಭಿನ್ನತೆಯಂತೆ ತಜ್ಙರಲ್ಲಿ ರಾಜ್ಯಶಾಸ್ತ್ರ ವಿಜ್ಙಾನವೇ ಅಥವ ಕಲೆಯೇ ಎಂಬುದರ ಕುರಿತಾದ ಭಿನ್ನಾಭಿಪ್ರಾಯವು ವ್ಯಕ್ತವಾಗುತ್ತದೆ. ಕೆಲವು ಚಿಂತಕರು ರಾಜ್ಯಶಾಸ್ತ್ರಕ್ಕೆ ವಿಜ್ಙಾನದ ಸ್ಥಾನ ನೀಡಲು ಸಮ್ಮತಿಸಿದರೆ ಇತರರು ವಿಜ್ಙಾನವೆಂದು ರಾಜ್ಯಶಾಸ್ತ್ರವನ್ನು ಪರಿಗಣಿಸಲು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರದ ಸ್ವರೂಪವನ್ನು ಅರಿತುಕೊಳ್ಳಲು ಅದು ವಿಜ್ಙಾನವೇ ಎಂಬುದರ ಪರವಾದ ಮತ್ತು ವಿರುದ್ಧವಾದ ಅಂಶಗಳನ್ನು ಮನವರಿಕೆ ಮಾಡಿಕೊಳ್ಳುವುದು ಅನಿವಾರ್ಯ. ಆಗ ರಾಜ್ಯಶಾಸ್ತ್ರವು ಕಲೆಯೇ ಅಥವ ವಿಜ್ಙಾನವೇ ಎಂಬುದನ್ನರಿತು ಅದರ ಸ್ಪಷ್ಟ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ರಾಜ್ಯಶಾಸ್ತ್ರವು ವಿಜ್ಙಾನವಲ್ಲ, ಒಂದು ಕಲೆ: ನಾವು ನಿತ್ಯ ಜೀವನದಲ್ಲಿ ನಾನಾ ಚಟುವಟಿಕೆಗಳನ್ನು ನಿರ್ವಹಿಸುತ್ತೇವೆ. ಆ ಚಟುವಟಿಕೆಗಳಿಗೆ ಕ್ರಮಬದ್ಧ ಅಧ್ಯಯನವಾಗಲಿ, ನಿರ್ದಿಷ್ಟ ಫಲಿತಾಂಶವಾಗಲಿ, ಏಕರೂಪತೆಯಾಗಲಿ ಕಂಡು ಬರುವುದಿಲ್ಲ. ವಿವಿಧ ಸ್ಥಳ ಮತ್ತು ಕಾಲಗಳಲ್ಲಿ ನಿರ್ದಿಷ್ಟ ಚಟುವಟಿಕೆ ರೂಪಾಂತರಗೊಂಡು ಆಚರಿಸಲ್ಪಡುತ್ತದೆ. ಇಂತಹ ಚಟುವಟಿಕೆ ತರಬೇತಿ, ಅನುಭವ ಹಾಗು ಕೌಶಲ್ಯಗಳಿಂದ ಕೂಡಿದಾಗ ಕಲೆ ಎಂಬುದಾಗಿ ಪರಿಗಣಿಸಲ್ಪಡುತ್ತವೆ. ರಾಜಕೀಯ ಚಟುವಟಿಕೆಗಳನ್ನು ಅಭ್ಯಸಿಸುವ ರಾಜ್ಯಶಾಸ್ತ್ರವೂ ಸಹ ಇಂತಹ ಚಟುವಟಿಕೆಯ ಭಾಗವಾಗಿದ್ದು ನೈಸರ್ಗಿಕ ವಿಜ್ಙಾನಗಳ ಸ್ವರೂಪವನ್ನು ಪಡೆಯದಿದ್ದರಿಂದ ಕಲೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಈ ಕೆಳಗಿನ ಅಂಶಗಳು ರಾಜ್ಯಶಾಸ್ತ್ರ ವಿಜ್ಙಾನದ ಸ್ವರೂಪವನ್ನು ಪಡೆದಿರದೇ ಕಲೆಯಾಗಿದೆ ಎಂಬುದನ್ನು ವಿವರಿಸುತ್ತವೆ.
ಅ. ಭಿನ್ನತೆ: ರಾಜ್ಯಶಾಸ್ತ್ರ ವಿಷಯದ ವ್ಯಾಖ್ಯಾನ, ವ್ಯಾಪ್ತಿ, ವಿಧಾನ, ತತ್ವಗಳನ್ನು ಕುರಿತು ತಜ್ಙರಲ್ಲಿ ಭಿನ್ನಾಭಿಪ್ರಾಯಗಳಿವೆ. ವಿದ್ಯಾರ್ಥಿಗಳು ಈ ವಿಷಯವನ್ನು ಅಧ್ಯಯನ ಮಾಡಲು ಅನುಸರಿಸಬೇಕಾದ ನಿರ್ದಿಷ್ಟ ಸಾರ್ವತ್ರಿಕ ವಿಧಾನವಿಲ್ಲದೇ ವೈವಿಧ್ಯಮಯ ವಿಧಾನಗಳನ್ನು ಅವಲಂಬಿಸಬೇಕಾಗಿದೆ. ಜೊತೆಗೆ ರಾಜ್ಯಶಾಸ್ತ್ರದ ತತ್ವಗಳ ಪಾಲನೆಯೂ ಸಹ ಏಕಮುಖವಾಗಿಲ್ಲ. ಉದಾ: ಮಾನವ ಹಕ್ಕುಗಳು, ರಾಜ್ಯದ ಹಸ್ತಕ್ಷೇಪ, ಚುನಾವಣಾ ವಿಧಾನದಂತಹ ವಿಷಯಗಳಲ್ಲಿ ಚಿಂತಕರು ತಮ್ಮದೇ ಹಲವು ತತ್ವಗಳನ್ನು ಬೆಂಬಲಿಸಿದ್ದಾರೆ. ಹೀಗಾಗಿ ವಿಜ್ಙಾನದ ಲಕ್ಷಣವಾದ ಸರ್ವಸಮ್ಮತತೆ ಪಡೆಯುವಲ್ಲಿ ರಾಜ್ಯಶಾಸ್ತ್ರ ವಿಫಲವಾಗಿದೆ ಎನ್ನಬಹುದು.
ಆ. ಪರಿಕಲ್ಪನೆಗಳಲ್ಲಿ ವೈವಿಧ್ಯತೆ: ರಾಜ್ಯಶಾಸ್ತ್ರವು ಅನೇಕ ಪರಿಕಲ್ಪನೆಗಳಿಂದ ಕೂಡಿರುವ ವಿಷಯವಾಗಿದೆ. ಮೂಲಭೂತ ರಾಜಕೀಯ ಪರಿಕಲ್ಪನೆಗಳಾದ ಅಧಿಕಾರ, ಸಮಾನತೆ, ಸ್ವತಂತ್ರ್ಯ, ಹಕ್ಕು ಮುಂತಾದವುಗಳೊಡನೆ ಪ್ರಜಾಪ್ರಭುತ್ವ, ಸಮಾಜವಾದ, ಸಮತಾವಾದ, ಉದಾರವಾದ, ಇತ್ಯಾದಿ ಪ್ರಧಾನ ಪರಿಕಲ್ಪನೆಗಳು ರಾಜ್ಯಶಾಸ್ತ್ರದ ಭಾಗವಾಗಿವೆ. ರಾಜನೀತಿಜ್ಙರಲ್ಲಿ ವಿವಿಧ ಪರಿಕಲ್ಪನೆಗಳ ಕುರಿತು ಏಕಾಭಿಪ್ರಾಯವಿಲ್ಲದೇ ನಿರ್ದಿಷ್ಟ ಪರಿಕಲ್ಪನೆಯನ್ನು ವೈವಿಧ್ಯಮಯವಾಗಿ ಪ್ರತಿಪಾದಿಸಿದ್ದಾರೆ. ಉದಾ: ಸಮಾನತೆಯಲ್ಲಿ ಸಕಾರಾತ್ಮಕ ಹಾಗು ನಕಾರಾತ್ಮಕ ಸಮಾನತೆ, ಪ್ರಜಾಪ್ರಭುತ್ವದಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷ ಪ್ರಜಾಪ್ರಭುತ್ವ, ಸಮಾಜವಾದದಲ್ಲಿ ಪ್ರಜಾಸತ್ತಾತ್ಮಕ, ಉದಾರವಾದಿ, ಗಿಲ್ಡ್ ಮುಂತಾದ ಸಮಾಜವಾದದ ಪ್ರತಿಪಾದನೆಯನ್ನು ಮಾಡಲಾಗಿದೆ. ಗಮನಿಸಬೇಕಾದ ಅಂಶವೇನೆಂದರೆ ವಿಜ್ಙಾನದಲ್ಲಿ ಪರಿಕಲ್ಪನೆಯೊಂದರ ವೈವಿಧ್ಯಮಯ ಪ್ರತಿಪಾದನೆ ಅಸಾಧ್ಯವಾಗಿರುತ್ತದೆ.
ಇ. ನಿಖರತೆಯ ಕೊರತೆ: ಬೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರಗಳಲ್ಲಿ ಬಳಸಲ್ಪಡುವ ನಿಯಮ ಅಥವ ತತ್ವಗಳು ನಿಖರವಾಗಿರುತ್ತವೆ. ಜಗತ್ತಿನಾದ್ಯಂತ ಏಕರೂಪ ಪರಿಣಾಮ ಬೀರಿ ಸಂದೇಹಗಳಿಗೆ ಆ ತತ್ವಗಳ ಪಾಲನೆ ಅವಕಾಶ ನೀಡುವುದಿಲ್ಲ. ರಾಜ್ಯಶಾಸ್ತ್ರದಲ್ಲಿ ತತ್ವಗಳಿದ್ದರೂ ಅವು ವಿಶಾಲ, ಸುದೀರ್ಘ ಹಾಗು ಆಳವಾಗಿವೆ. ಜೊತೆಗೆ ಇತರೆ ವಿಜ್ಙಾನಗಳ ತತ್ವದಂತೆ ಸ್ಪಷ್ಟತೆ, ಸಾರ್ವತ್ರಿಕತೆ ಅಥವ ಸರ್ವ ಸಮ್ಮತತೆ ಹೊಂದುವಲ್ಲಿ ಸಮರ್ಥವಾಗಿಲ್ಲ. ಉದಾ: ಪ್ರಜಾಪ್ರಭುತ್ವದ ತತ್ವಗಳು ಸರ್ವಮಾನ್ಯವಾಗಿಲ್ಲದಿರುವುದು, ೇಕ ಸದನ ಮತ್ತು ದ್ವೀ ಸದನ ರಚಿಸಿ ಶಾಸಕಾಂಗದ ತತ್ವದ ಪಾಲನೆ ಒಪ್ಪದಿರುವುದು ಇತ್ಯಾದಿ. ಹೀಗೆ ನಿಖರತೆಯ ಕೊರತೆಯಿಂದ ರಾಜ್ಯಶಾಸ್ತ್ರ ಬಳಲುತ್ತಿದೆ.
ಈ. ಪ್ರಯೋಗಗಳ ಅಸಾಧ್ಯತೆ: ಬೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದ ವಿಜ್ಙಾನಗಳಲ್ಲಿ ವಸ್ತುಗಳನ್ನು ಬಳಸಿ ಪ್ರಯೋಗಾಲಯದಲ್ಲಿ ಪ್ರಯೋಗ, ನಡೆಸಿ ಫಲಿತಾಂಶ ಪಡೆಯಬಹುದಾಗಿದೆ. ಆದರೆ ರಾಜನೀತಿಜ್ಙರು ಪ್ರಯೋಗ ನಡೆಸಲು ವಸ್ತುಗಳ ಬದಲು ಮಾನವರನ್ನು ಬಳಸಬೇಕಾಗುತ್ತದೆ. ಮಾನವರ ಭಾವನೆ ಅಥವ ವರ್ತನೆಗಳನ್ನು ವಸ್ತುವಿನಂತೆ ನಿಯಂತ್ರಿಸಲಾಗದು. ಇದರೊಡನೆ ಪ್ರತಿಯೊಬ್ಬ ಮಾನವ ಭಿನ್ನವಾಗಿದ್ದು ಒಬ್ಬನೇ ವ್ಯಕ್ತಿ ಸಮಯಾನುಸಾರ ಭಿನ್ನವಾಗಿ ವರ್ತಿಸುತ್ತಾನೆ. ಹೀಗಾಗಿ ವಿವಿಧ ವಿಜ್ಙಾನಗಳಲ್ಲಿ ನಡೆಸುವ ಪ್ರಯೋಗಗಳನ್ನು ರಾಜ್ಯಶಾಸ್ತ್ರಜ್ಙರು ನಡೆಸಲು ಸಾಧ್ಯವಿಲ್ಲ.
ಉ. ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ: ನೈಸರ್ಗಿಕ ವಿಜ್ಙಾನಗಳ ವಿದ್ಯಾರ್ಥಿಗಳು ಜಾರಿಯಲ್ಲಿರುವ ತತ್ವಗಳನ್ನಾಧರಿಸಿ ಪ್ರಯೋಗಗಳ ವೇಳೆ ನಿರಿಕ್ಷಿತ ಫಲಿತಾಂಶವನ್ನು ಊಹಿಸಬಲ್ಲರು. ಆದರೆ ರಾಜಕೀಯ ಚಟುವಟಿಕೆಗಳನ್ನಾಧರಿಸಿ ರಾಜ್ಯಶಾಸ್ತ್ರದಲ್ಲಿ ತಜ್ಙರು ಭವಿಷ್ಯವನ್ನು ಊಹಿಸಲಾಗದು. ಸಾಮಾಜಿಕ, ಆರ್ಥಿಕ, ಭಾವನಾತ್ಮಕ ಅಂಶಗಳ ಪ್ರಭಾವದಿಂದ ರಾಜಕೀಯ ವಿದ್ಯಮಾನಗಳು ಸದಾ ಚಲನಶೀಲವಾಗಿರುತ್ತವೆ. ಉದಾ: ಚುನಾವಣೆಗಳಲ್ಲಿ ಗೆಲುವು ಖಚಿತವೆಂದವರಿಗೆ ಸೋಲು ಹಾಗು ಸೋಲು ನಿಶ್ಚಿತವೆಂದವರಿಗೆ ಗೆಲುವು ದೊರಕುತ್ತದೆ. ಇದರೊಡನೆ ಅಧಿಕಾರಕ್ಕಾಗಿ ಮಿತ್ರರು ಶತ್ರುಗಳಾಗುವುದು ಹಾಗು ಶತ್ರುಗಳು ಮಿತ್ರರಾಗುವುದು ಊಹೆಗೆ ನಿಲುಕದಂತೆ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿರುತ್ತದೆ. ಆದ್ದರಿಂದ ಭವಿಷ್ಯದ ಊಹೆ ರಾಜ್ಯಶಾಸ್ತ್ರದಲ್ಲಿ ಸಾಮಾನ್ಯವಾಗಿ ನೈಸರ್ಗಿಕ ವಿಜ್ಙಾನಗಳಂತೆ ಘಟಿಸಲಾರದು.
ಊ. ಪೂರ್ವಾಗ್ರಹ ಮತ್ತು ವ್ಯಕ್ತಿ ನಿಷ್ಠತೆ: ನೈಸರ್ಗಿಕ ವಿಜ್ಙಾನಗಳಲ್ಲಿ ತಜ್ಙರು ವಸ್ತುನಿಷ್ಟತೆ ಹಾಗು ನಿಶ್ಪಕ್ಷಪಾತತೆ ಅನುಸರಿಸುತ್ತಾರೆ. ಆದರೆ ರಾಜ್ಯಶಾಸ್ತ್ರದಲ್ಲಿ ಪ್ರಮುಖ ಚಿಂತಕರೂ ಸಹ ತಮ್ಮ ಚಿಂತನೆಯನ್ನು ಮಂಡಿಸುವಾಗ ವಸ್ತುನಿಷ್ಟತೆ ಮತ್ತು ನಿಶ್ಪಕ್ಷಪಾತತೆ ಉಲ್ಲಂಘಿಸಿರುವುದನ್ನು ಗುರುತಿಸಬಹುದಾಗಿದೆ. ವಸಾಹತುಶಾಹಿತ್ವ, ರಾಷ್ಟ್ರಿಯತೆ, ಅಲ್ಪಸಂಖ್ಯಾತರು ಇತ್ಯಾದಿ ರಾಜಕೀಯ ಪ್ರಶ್ನೆಗಳನ್ನು ಕುರಿತಂತೆ ರಾಜನೀತಿಜ್ಙರು ಸಾಮಾಜಿಕ, ಆರ್ಥಿಕ ಹಾಗು ಧಾರ್ಮಿಕ ಪೂರ್ವಾಗ್ರಹಕ್ಕೆ ಒಳಗಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಹೀಗಾಗಿ ನೈಸರ್ಗಿಕ ವಿಜ್ಙಾನದ ಸ್ಥಾನಕ್ಕೇರಲು ರಾಜ್ಯಶಾಸ್ತ್ರ ಕಠಿಣವಾಗಿದೆ.
ಈ ಮೇಲೆ ಚರ್ಚಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರವು ವಿಜ್ಙಾನವಲ್ಲ ಬದಲಾಗಿ ಒಂದು ಕಲೆ ಎಂದು ಹಲವು ತಜ್ಙರು ಅಭಿಪ್ರಾಯಪಟ್ಟಿರುವರು. ರಾಜ್ಯಶಾಸ್ತ್ರ ವಿಜ್ಙಾನವಲ್ಲ ಎಂಬುದನ್ನು ಮುಂತಾದ ಚಿಂತಕರು ಬೆಂಬಲಿಸಿದ್ದಾರೆ. ರಾಜನೀತಿಜ್ಙರು ರಾಜಕೀಯ ವಿದ್ಯಮಾನಗಳನ್ನು ನೈತಿಕ ತತ್ವಗಳನ್ನಾಧರಿಸಿ ಚರ್ಚಿಸುತ್ತಾರೆ. ಇದರೊಡನೆ ಮೌಲ್ಯಗಳಲ್ಲಿನ ದೋಷಗಳಿಂದಲೂ ರಾಜ್ಯಶಾಸ್ತ್ರ ಅನಿಶ್ಚಿತ ಮತ್ತು ನಿಖರವಲ್ಲದ ವಿಷಯವೆಂದು ಪರಿಗಣಿಸಲ್ಪಟ್ಟಿದೆ. ಒಟ್ಟಾರೆ ರಾಜ್ಯಶಾಸ್ತ್ರ ಒಂದು ವಿಜ್ಙಾನದ ಬದಲು ಕಲೆಯ ಸ್ವರೂಪ ಹೊಂದಿರುವುದೆಂದು ಪರಿಗಣಿಸಲ್ಪಟ್ಟಿದೆ.
ರಾಜ್ಯಶಾಸ್ತ್ರ ಕಲೆಯಲ್ಲ, ಒಂದು ವಿಜ್ಙಾನ: ಸರಳಾರ್ಥದಲ್ಲಿ ಕ್ರಮಬದ್ಧವಾದ ಜ್ಙಾನವನ್ನು ವಿಜ್ಙಾನ ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಅವಲೋಕನದೊಡನೆ ಪ್ರಯೋಗಕ್ಕೊಳಪಡಿಸಿ, ವಿಮರ್ಷಾತ್ಮಕವಾಗಿ ಪರೀಕ್ಷಿಸಿ, ಸಾರ್ವತ್ರಿಕವಾಗಿ ಅನ್ವಯಿಸಬಲ್ಲ ವ್ಯವಸ್ಥಿತ ಜ್ಙಾನವನ್ನು ವಿಜ್ಙಾನ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಜ್ಙಾನವು ನಿಖರ ನಿಯಮಗಳು ಹಾಗು ತತ್ವಗಳನ್ನು ಆಧರಿಸಿರುತ್ತದೆ. ವಿಜ್ಙಾನಿಯು ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು, ಅಂಕಿ ಅಂಶಗಳನ್ನು ಸಂಗ್ರಹಿಸಿ, ಪ್ರಾಕಲ್ಪನೆಗಳನ್ನು ರಚಿಸಿಕೊಂಡು, ಸತ್ಯಾಂಶಗಳ ವರ್ಗೀಕರಣದೊಡನೆ ಫಲಿತಾಂಶದ ನೈಜತೆಯನ್ನು ವಿಶ್ಲೇಶಿಸುತ್ತಾ, ಅವಲೋಕನದೊಡನೆ ಪ್ರಯೋಗ ನಡೆಸಿ ತತ್ವಗಳನ್ನು ರಚಿಸುತ್ತಾನೆ. ಗಮನಿಸಬೇಕಾದ ಅಂಶವೇನೆಂದರೆ ರಾಜ್ಯಶಾಸ್ತ್ರವೂ ಸಹ ವಿಜ್ಙಾನದ ಸ್ವರೂಪ ಹೊಂದಿದೆ ಎಂಬುದನ್ನು ಬಹಳ ಹಿಂದೆಯೇ ಅರಿಸ್ಟಾಟಲ್ ಪ್ರತಿಪಾದಿಸಿರುವ. ಆತ ರಾಜ್ಯಶಾಸ್ತ್ರವನ್ನು ಶ್ರೇಷ್ಠ ವಿಜ್ಙಾನ ಎಂಬುದಾಗಿ ವ್ಯಾಖ್ಯಾನಿಸಿದ್ದನು. ಕೆಳಗಿನ ಅಂಶಗಳ ನೆರವಿನಿಂದ ರಾಜ್ಯಶಾಸ್ತ್ರ ಹೊಂದಿರುವ ವಿಜ್ಙಾನದ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ.
ಅ. ಕ್ರಮಬದ್ಧ ಅಧ್ಯಯನದ ಸಾಧ್ಯತೆ: ನೈಸರ್ಗಿಕ ವಿಜ್ಙಾನಗಳಂತೆ ರಾಜ್ಯಶಾಸ್ತ್ರದಲ್ಲಿಯೂ ವೈಜ್ಙಾನಿಕ ತತ್ವಗಳನ್ನು ಬಳಸಿ ಅಧ್ಯಯನ ನಡೆಸಬಹುದಾಗಿದೆ. ಅವಲೋಕನ, ಮಾಹಿತಿ ಸಂಗ್ರಹ, ಪ್ರಯೋಗ, ಸಂಶೋಧನಾತ್ಮಕ ಸತ್ಯಾನ್ವೇಷಣೆಗೆ ರಾಜ್ಯಶಾಸ್ತ್ರದಲ್ಲೂ ಅವಕಾಶಗಳಿವೆ. ಕಾರಣ ಹಾಗು ಪರಿಣಾಮಗಳ ನಡುವೆ ಸಂಪರ್ಕ ಸ್ಥಾಪಿಸಿ ಅಧ್ಯಯನ ನಡೆಸಬಹುದಾಗಿದೆ. ಉದಾ: ಜನ ವಿರೋಧಿ ಕಾರಣಗಳನ್ನು ಆಧರಿಸಿ ರಾಜಕೀಯ ಪಕ್ಷಗಳ ಸೋಲಿನ ಪರಿಣಾಮವನ್ನು ಗುರುತಿಸಬಹುದಾಗಿದೆ.
ಆ. ಸೀಮಿತ ಪ್ರಯೋಗಗಳಿಗೆ ಅವಕಾಶ: ನೈಸರ್ಗಿಕ ವಿಜ್ಙಾನಗಳಲ್ಲಿ ಸಹಜವಾಗಿರುವ ಪ್ರಯೋಗಗಳನ್ನು ರಾಜ್ಯಶಾಸ್ತ್ರದಲ್ಲಿಯೂ ಸೀಮಿತವಾಗಿ ಕೈಗೊಳ್ಳಲು ಸಾಧ್ಯವಿದೆ. ಪ್ರಯೋಗಾಲಯಗಳಲ್ಲಿ ರಾಜಕೀಯ ವಿದ್ಯಮಾನಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ದೇಶದ ಜನರ ಮೇಲೆ ರಾಜಕೀಯ ಪ್ರಯೋಗಗಳನ್ನು ನಡೆಸಲಾಗುತ್ತದೆ. ಉದಾ: ಸ್ವಿಟ್ಜರ್ಲ್ಯಾಂಡ್ನಲ್ಲಿ ಪ್ರಜಾ ನಿರ್ಧಾರದಂತಹ ಪ್ರತ್ಯಕ್ಷ ಪ್ರಜಾಪ್ರಭುತ್ವದ ಪ್ರಯೋಗ, ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು ತಡೆಯಲು ಜನತಾ ಪಕ್ಷದ ರಚನೆಯ ಪ್ರಯೋಗ, ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಇತ್ಯಾದಿ.
ಇ. ಸಾಮಾನ್ಯ ತತ್ವಗಳಿಗೆ ಆಸ್ಪದ: ರಾಜ್ಯಶಾಸ್ತ್ರದಲ್ಲೂ ಇತರ ವಿಜ್ಙಾನಗಳಂತೆ ಸಾಮಾನ್ಯ ತತ್ವಗಳನ್ನು ಗುರುತಿಸಬಹುದಾಗಿದೆ. ಈ ತತ್ವಗಳು ಸರ್ವ ರಾಜಕೀಯ ವಿದ್ಯಮಾನಗಳಿಗೆ ಅನ್ವಯಿಸದಿದ್ದರೂ ರಾಜಕೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುತ್ತವೆ. ಉದಾ: ಸರ್ಕಾರಿ ನೌಕರರ ರಾಜಕೀಯ ತಾಟಸ್ತ್ಯ, ಅಲ್ಪ ವಯಸ್ಕರರು ಮತದಾನಕ್ಕೆ ಅನರ್ಹರು, ನ್ಯಾಯಾಧೀಶರ ನಿಶ್ಪಕ್ಷಪಾತತೆ ಮುಂತಾದ ಸಾಮಾನ್ಯ ತತ್ವಗಳನ್ನು ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಗುರುತಿಸಬಹುದು. ಅಲ್ಲದೇ ಗಣಿತಶಾಸ್ತ್ರದಂತೆ ಕೋರಂ ನಿಗಧಿ, ಬಹುಮತ ಗಳಿಕೆ, ಶಾಸನಗಳ ಅಂಗೀಕಾರ, ರಾಷ್ಟ್ರಪತಿ ಚುನಾವಣೆ ಮುಂತಾದವುಗಳಲ್ಲಿ ಕೆಲವು ಸೂತ್ರಗಳನ್ನು ಗಮನಿಸಬಹುದಾಗಿದೆ.
ಈ. ಭವಿಷ್ಯ ಊಹಿಸಲು ಅನುವು: ರಾಜ್ಯಶಾಸ್ತ್ರದಲ್ಲಿಯೂ ಸಮಕಾಲಿನ ಚಿಂತಕರು ರಾಜಕೀಯ ವಿದ್ಯಮಾನಗಳ ಭವಿಷ್ಯ ಊಹಿಸಲು ಶಕ್ತರಾಗಿದ್ದಾರೆ. ವೈಜ್ಙಾನಿಕ ತಂತ್ರಗಳನ್ನು ಬಳಸಿ ಮತದಾನ ಪೂರ್ವ ಹಾಗು ಮತದಾನೋತ್ತರ ಚುನಾವಣಾ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ರಾಜನೀತಿಜ್ಙರು ಊಹಿಸುತ್ತಾರೆ. ವಿಜ್ಙಾನಿಯಂತೆ ಸಮಸ್ಯೆ ಗುರುತಿಸಿ, ಮಾಹಿತಿ ಸಂಗ್ರಹಿಸಿ, ವರ್ಗೀಕರಣದೊಡನೆ ಅವಲೋಕಿಸಿ ಅಂತಿಮ ತೀರ್ಮಾನ ಪ್ರಕಟಿಸಲು ರಾಜನೀತಿಜ್ಙ ಪ್ರಸ್ತುತ ಶಕ್ತನಾಗಿರುವ. ಉದಾ: ರಾಜಕೀಯ ಪಕ್ಷಗಳ ಉಗಮ, ಪ್ರತ್ಯೇಕ ರಾಜ್ಯದ ಬೇಡಿಕೆ, ಸಂಮಿಶ್ರ ಸರ್ಕಾರಗಳ ವಿಫಲತೆ ಮುಂತಾದವುಗಳನ್ನು ವೈಜ್ಙಾನಿಕವಾಗಿ ಅಧ್ಯಯನ ನಡೆಸಿ ಊಹಿಸಲು ಅವಕಾಶಗಳಿವೆ.
ಒಟ್ಟಿನಲ್ಲಿ ರಾಜ್ಯಶಾಸ್ತ್ರವನ್ನು ವಿಜ್ಙಾನವಲ್ಲ ಎಂದು ನಿರಾಕರಿಸಲು ಅಥವ ಪರಿಪೂರ್ಣ ವಿಜ್ಙಾನವೆಂದು ಪರಿಗಣಿಸುವುದು ಕಷ್ಟಕರ ಸಂಗತಿ. ರಾಜ್ಯಶಾಸ್ತ್ರವನ್ನು ನಿಖರವಲ್ಲದ ಸಮಾಜ ವಿಜ್ಙಾನ ಎಂಬುದಾಗಿ ಪರಿಗಣಿಸಬಹುದಾಗಿದೆ. ರಾಜನೀತಿಜ್ಙರೂ ಸಹ ರಾಜಶಾಸ್ತ್ರವನ್ನು ಪರಿಪೂರ್ಣ ವಿಜ್ಙಾನ ಎಂಬುದಾಗಿ ಸಮರ್ಥಿಸಲು ಸಿದ್ಧರಿಲ್ಲ. ಆದ್ದರಿಂದಲೇ ಫೆಡ್ರಿಕ್ ಪೋಲಾಕ್ ನೈತಿಕ ವಿಜ್ಙಾನ, ಬರ್ಕ್ ಎಸ್ತಟಿಕ್ ವಿಜ್ಙಾನ ಮತ್ತು ಬ್ರೈಸ್ eteorologyಂತೆ ನಿಖರವಲ್ಲದ ನೈಸರ್ಗಿಕ ವಿಜ್ಙಾನ ಎಂಬುದಾಗಿ ರಾಜ್ಯಶಾಸ್ತ್ರವನ್ನು ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರ ಕಲೆ ಎಂಬುದು ಸುಸ್ಪಷ್ಟ. ವಿಜ್ಙಾನವಾಗಿ ತತ್ವಗಳನ್ನು ರಚಿಸಲು ನೆರವಾಗುವ ರಾಜ್ಯಶಾಸ್ತ್ರ ಕಲೆಯಾಗಿ ಅವುಗಳನ್ನು ಅಸ್ತಿತ್ವಕ್ಕೆ ತರಲು ಸಹಕಾರಿಯಾಗಿದೆ. ಆದ್ದರಿಂದ ರಾಜ್ಯಶಾಸ್ತ್ರ ಕಲೆ ಮತ್ತು ವಿಜ್ಙಾನಗಳ ಸ್ವರೂಪವನ್ನು ಮೈಗೂಡಿಸಿಕೊಂಡ ವಿಷಯವಾಗಿದೆ ಎನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ