ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದ್ದು ಗಜ ಗಾತ್ರದ ಸಂವಿಧಾನ ಎನಿಸಿದೆ. ಇದಕ್ಕೆ ಕಾರಣವೇನೆಂದರೆ ಭಾರತ ಸಂವಿಧಾನ ರಚನಾಕಾರರು ದೇಶದ ಭವಿಷ್ಯದ ದೃಷ್ಟಿಯಿಂದ ನಾನಾ ವಿಷಯಗಳನ್ನು ಬೇರೆ ಬೇರೆ ಭಾಗದಲ್ಲಿ ಹಲವು ವಿಧಿಗಳ ಮೂಲಕ ವಿವರವಾಗಿ ಚರ್ಚಿಸಿದ್ದಾರೆ. ಸರ್ಕಾರದ ಮೂರು ಅಂಗಗಳ ರಚನೆ ಹಾಗು ಕಾರ್ಯವ್ಯಾಪ್ತಿ, ಪ್ರಜೆಗಳ ಮೂಲಭೂತ ಹಕ್ಕು ಹಾಗು ಕರ್ತವ್ಯಗಳು, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ, ಸಂವಿಧಾನ ತಿದ್ದುಪಡಿ ವಿಧಾನ ಮೂಂತಾದ ಪ್ರಮುಖ ವಿಷಯಗಳ ಜೊತೆಗೆ ಪೌರತ್ವ, ಬುಡಕಟ್ಟು ಪ್ರದೇಶಗಳು, ನಾಗರಿಕ ಸೇವಾ ವರ್ಗ, ವಾಣಿಜ್ಯ ಚಟುವಟಿಕೆಗಳು ಮುಂತಾದ ವಿಷಯಗಳನ್ನೂ ದೇಶದ ಹಿತ ದೃಷ್ಟಿಯಿಂದ ಸಂವಿಧಾನದಲ್ಲಿ ವಿವರಿಸಿದ್ದಾರೆ. ಇಂತಹ ಭಾರತ ಸಂವಿಧಾನದಲ್ಲಿರುವ ದೂರ ದೃಷ್ಟಿಯ ವಿಷಯಗಳಲ್ಲಿ ಚುನಾವಣೆಯೂ ಒಂದಾಗಿದೆ. ಚುನಾವಣೆಗಳು ಪ್ರಜಾಪ್ರಭುತ್ವದ ಜೀವಂತಿಕೆಗೆ ಅನಿವಾರ್ಯವಾಗಿರುವುದನ್ನು ಅರಿತು ಅದಕ್ಕೆ ಸಂಬಂಧಿಸಿದ ಹಲವು ಅವಕಾಶಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಲಾಗಿದೆ. ಪ್ರಮುಖ ಚುನಾವಣಾ ಸಂಬಂಧಿತ ಸಂವಿಧಾನಾತ್ಮಕ ಅವಕಾಶಗಳನ್ನು 15 ನೇ ಭಾಗದ 324 ರಿಂದ 329 ನೇ ವಿಧಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಸಂವಿಧಾನದ ಉದ್ದಕ್ಕೂ ಅಗತ್ಯವಿದ್ದಾಗಲೆಲ್ಲ ಚುನಾವಣಾ ಸಂಬಂಧಿ ಅವಕಾಶಗಳನ್ನು ಚರ್ಚಿಸಲಾಗಿದೆ. ಬಹು ಮುಖ್ಯ ಸಂವಿಧಾನಾತ್ಮಕ ಚುನಾವಣಾ ಅವಕಾಶಗಳನ್ನು ಕೆಳಗಿನಂತೆ ಅರಿತುಕೊಳ್ಳಬಹುದಾಗಿದೆ.
A. 54 ನೇ ವಿಧಿ ರಾಷ್ಟ್ರಪತಿ ಚುನಾವಣೆ ಕುರಿತು ತಿಳಿಸುತ್ತದೆ. ಭಾರತದ ರಾಷ್ಟ್ರಪತಿ ಚುನಾವಣೆಯು ಸಂಸತ್ತಿನ ಉಭಯ ಸದನಗಳ ಹಾಗು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾಯಿತ ಜನಪ್ರತಿನಿಧಿಗಳಿಂದ ಕೂಡಿರುವ ವಿಶೇಷ ಮತದಾತೃ ವರ್ಗದ ಮತದಾನದಿಂದ ಜರುಗಬೇಕೆಂದು ವಿವರಿಸಿದೆ.
55 ನೇ ವಿಧಿಯು ರಾಷ್ಟ್ರಪತಿ ಚುನಾವಣಾ ವಿಧಾನವನ್ನು ತಿಳಿಸುತ್ತದೆ. ಸಂಸತ್ನ ಭಯ ಸದನಗಳ ಚುನಾಯಿತ ಸದಸ್ಯರ ಮತದ ಮೌಲ್ಯ ಹಾಗು ವಿಧಾನಸಭಾ ಸದಸ್ಯರ ಮತದ ಮೌಲ್ಯ ನಿರ್ಧರಿಸುವ ವಿಧಾನ, ಕ್ವೋಟಾ ನಿರ್ಧರಿಸುವ ಬಗೆ, ಚಲಾವಣೆಗೊಂಡ ಮತಗಳನ್ನು ಎಣಿಕೆ ಮಾಡುವ ತತ್ವವನ್ನು ವಿವರಿಸುತ್ತದೆ. ಜೊತೆಗೆ ರಾಷ್ಟ್ರಪತಿಯ ಚುನಾವಣೆ ಪ್ರಮಾಣಾನುಗುಣ ಪ್ರಾತಿನಿಧ್ಯತಾ, ಏಕಮತ ವರ್ಗಾವಣಾ, ರಹಸ್ಯ ಮತದಾನ ಪದ್ಧತಿಯ ಮೂಲಕ ಜರುಗುವುದೆಂದು ವಿವರಿಸುತ್ತದೆ.
57 ನೇ ವಿಧಿಯು ರಾಷ್ಟ್ರಪತಿ ಹುದ್ದೆಗೆ ಮರು ಚುನಾವಣೆಗೊಳ್ಳುವ ಕುರಿತು ತಿಳಿಸುತ್ತದೆ. ಸಂವಿಧಾನ ತಿಳಿಸುವ ಅರ್ಹತೆಯುಳ್ಳ ವ್ಯಕ್ತಿ ಮರು ಚುನಾವಣೆಗೆ ಅರ್ಹನೆಂದು ಹೇಳುವ ಮೂಲಕ ಯಾವುದೇ ಮಿತಿಯನ್ನು ಸಂವಿಧಾನ ಮರು ಚುನಾವಣೆಗೆ ಹೇರಿಲ್ಲ ಉದಾ: ಬಾಬೂ ರಾಜೇಂದ್ರ ಪ್ರಸಾದ್ ಎರಡು ಅವಧಿಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಆದರೆ ಒಬ್ಬ ವ್ಯಕ್ತಿ ಎರಡು ಅವಧಿಗಿಂತ ಹೆಚ್ಚು ರಾಷ್ಟ್ರಪತಿ ಹುದ್ದೆ ಹೊಂದಬಾರದೆಂಬ ಸಂಪ್ರದಾಯವನ್ನು ಭಾರತದಲ್ಲಿ ಪಾಲಿಸಲಾಗುತ್ತದೆ.
66 ನೇ ವಿಧಿ ಉಪ ರಾಷ್ಟ್ರಪತಿಯ ಚುನಾವಣೆಯನ್ನು ತಿಳಿಸುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಂದ ಕೂಡಿದ ವಿಶೇಷ ಮತದಾತೃ ವರ್ಗವು ಪ್ರಮಾಣಾನುಗುಣ ಪ್ರಾತಿನಿಧ್ಯತಾ, ಏಕಮತ ವರ್ಗಾವಣಾ, ರಹಸ್ಯ ಮತದಾನ ಪದ್ಧತಿಯಂತೆ ಉಪ ರಾಷ್ಟ್ರಪತಿ ಚುನಾವಣೆಗೊಳ್ಳಬೇಕೆಂದು ವಿವರಿಸುತ್ತದೆ.
71 ನೇ ವಿಧಿ ರಾಷ್ಟ್ರಪತಿ ಹಾಗು ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುತ್ತದೆ. ಈ ಎರಡೂ ಹುದ್ದೆಗಳ ಚುನಾವಣಾ ಸಂಬಂಧಿತ ಸಂಶಯ ಅಥವ ವಿವಾದಗಳನ್ನು ಸರ್ವೋಚ್ಛ ನ್ಯಾಯಾಲಯವು ಮಾತ್ರ ಪರಿಶೀಲಿಸಿ ತೀರ್ಪು ನೀಡಬಹುದಾಗಿದ್ದು ಅದರ ತೀರ್ಮಾನವೇ ಅಂತಿಮವಾಗಿರುತ್ತದೆ. ಅಲ್ಲದೇ ಸಂವಿಧಾನದ ಅವಕಾಶಗಳಿಗೆ ಒಳಪಟ್ಟು ರಾಷ್ಟ್ರಪತಿ ಹಾಗು ಉಪ ರಾಷ್ಟ್ರಪತಿ ಚುನಾವಣೆ ಕುರಿತು ಸಂಸತ್ತು ಕಾಯಿದೆ ರಚಿಸಬಹುದು.
82 ನೇ ವಿಧಿ ಚುನಾವಣಾ ಮತ ಕ್ಷೇತ್ರಗಳ ಪುನರ್ವಿಂಗಡಣೆಯನ್ನು ತಿಳಿಸುತ್ತದೆ. ಜನಗಣತಿಯ ಬಳಿಕ ಅಗತ್ಯವೆನಿಸಿದಲ್ಲಿ ಸಂಸತ್ತು ಕಾಯಿದೆ ಮೂಲಕ ರಾಜ್ಯಗಳ ವಿಧಾನಸಭಾ ಮತ ಕ್ಷೇತ್ರಗಳ ಗಡಿ ನಿರ್ಧರಿಸುವ ಆಯೋಗವನ್ನು ರಚಿಸಲು ಅವಕಾಶವಿದೆ.
243 [K] ವಿಧಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ತಿಳಿಸುತ್ತದೆ. ಪಂಚಾಯಿತಿಗಳ ಚುನಾವಣೆಗಳ ನಿರ್ವಹಣೆ, ನಿರ್ದೇಶನ ಹಾಗು ನಿಯಂತ್ರಣಕ್ಕಾಗಿ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲು ರಾಜ್ಯಪಾಲರಿಗೆ ಅವಕಾಶವನ್ನು ನೀಡಲಾಗಿದೆ. ಜೊತೆಗೆ ಪಂಚಾಯಿತಿ ಚುನಾವಣೆಗಳಿಗೆ ಅಗತ್ಯವಾದ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿ ರಾಜ್ಯಪಾಲರದೆಂದು ವಿವರಿಸಲಾಗಿದೆ.
243 [ZA] ವಿಧಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ತಿಳಿಸುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಿರ್ವಹಣೆ, ನಿರ್ದೇಶನ ಹಾಗು ನಿಯಂತ್ರಣಕ್ಕಾಗಿ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲು ರಾಜ್ಯಪಾಲರಿಗೆ ಅವಕಾಶವನ್ನು ನೀಡಲಾಗಿದೆ. ಜೊತೆಗೆ ಚುನಾವಣೆಗಳಿಗೆ ಅಗತ್ಯವಾದ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿ ರಾಜ್ಯಪಾಲರದೆಂದು ವಿವರಿಸಲಾಗಿದೆ.
324 ನೇ ವಿಧಿ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಹಾಗು ನಿಯಂತ್ರಣಕ್ಕಾಗಿ ಕೇಂದ್ರ ಚುನಾವಣಾ ಆಯೋಗದ ರಚನೆಯನ್ನು ತಿಳಿಸುತ್ತದೆ. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಸಂಖೆ, ನೇಮಕ, ಅಧಿಕಾರವಧಿ, ಪದಚ್ಯುತಿ, ಸೇವಾ ಸೌಲಭ್ಯಗಳನ್ನು ವಿವರಿಸುವ ಮೂಲಕ ಅದರ ರಚನೆಯನ್ನು ಸ್ಪಷ್ಟಪಡಿಸಿದೆ. ಜೊತೆಗೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು, ರಾಷ್ಟ್ರಪತಿ ಹಾಗು ಉಪ ರಾಷ್ಟ್ರಪತಿ ಹುದ್ದೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿಯೆಂದು ವಿವರಿಸಿದೆ.
325 ನೇ ವಿಧಿ ಮತದಾರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆಯನ್ನು ಕುರಿತು ತಿಳಿಸುತ್ತದೆ. ಪ್ರತಿಯೊಂದು ಲೋಕಸಭಾ ಮತ್ತು ವಿಧಾನಸಭಾ ಮತಕ್ಷೇತ್ರವು ಸಾಮಾನ್ಯ ಮತದಾರ ಪಟ್ಟಿಯನ್ನು ಹೊಂದಿರುತ್ತದೆ. ಈ ಪಟ್ಟಿಯಲ್ಲಿ ಜಾತಿ, ಲಿಂಗ, ಧರ್ಮ, ಭಾಷೆ, ಸ್ಥಾನಮಾನಗಳ ಆಧಾರದ ಮೇಲೆ ಮತದಾರರ ಹೆಸರನ್ನು ಸೇರಿಸಲು ಹಾಗು ಕೈ ಬಿಡಲು ಅವಕಾಶವಿಲ್ಲ ಎಂಬುದನ್ನು ವಿವರಿಸಲಾಗಿದೆ.
326, ನೇ ವಿಧಿ ವಿಧಾನಸಭೆ ಹಾಗು ಲೋಕಸಭೆ ಚುನಾವಣೆಗಳು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯಂತೆ ಜರುಗುವ ಕುರಿತು ತಿಳಿಸುತ್ತದೆ. ಪ್ರತಿಯೊಬ್ಬ ನಿರ್ದಿಷ್ಟ ವಯೋಮಿತಿ ದಾಟಿದ ಪೌರ ಮತದಾನದ ಹಕ್ಕನ್ನು ಪಡೆದಿರುವನೆಂದು ಸ್ಪಷ್ಟವಾಗಿ ವಿವರಿಸಲಾಗಿದೆ. ಮತಿ ವಿಕಲರು, ಅಲ್ಪ ವಯಸ್ಕರರು, ಅಪರಾಧಿಗಳು, ವಿದೇಶಿಗರು ಮಾತ್ರ ಮತದಾನದ ಹಕ್ಕನ್ನು ಪಡೆದಿರುವುದಿಲ್ಲ.
327 ನೇ ವಿಧಿ ಚುನಾವಣೆಗೆ ಸಂಬಂಧಿಸಿದ ಕಾನೂನು ರಚಿಸಲು ಸಂಸತ್ತು ಹೊಂದಿರುವ ಅಧಿಕಾರವನ್ನು ತಿಳಿಸುತ್ತದೆ. ಚುನಾವಣೆಗೆ ಪೂರಕವಾದ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ, ಮತಕ್ಷೇತ್ರಗಳ ಗಡಿ ನಿರ್ಧರಿಸುವಿಕೆ, ಠೇವಣಿ ಮೊತ್ತದ ನಿರ್ಧಾರ ಮುಂತಾದ ವಿಷಯಗಳ ಕುರಿತು ಕಾಯಿದೆ ರಚಿಸಲು ಸಂಸತ್ತಿಗೆ ಅಧಿಕಾರ ನೀಡಿದೆ. ಈ ಅವಕಾಶದ ಬಳಕೆಯಿಂದ ಸಂಸತ್ತು 1950 ಮತ್ತು 1951 ರ ಪ್ರಜಾ ಪ್ರತಿನಿಧಿ ಕಾಯಿದೆಗಳನ್ನು ರಚಿಸಿದೆ.
328 ನೇ ವಿಧಿ ಚುನಾವಣಾ ಸಂಬಂಧಿ ಕಾನೂನು ರಚಿಸಲು ರಾಜ್ಯ ಶಾಸಕಾಂಗಗಳು ಹೊಂದಿರುವ ಅಧಿಕಾರವನ್ನು ತಿಳಿಸುತ್ತದೆ. ಸಂಸತ್ತು ಹೊಂದಿರುವ ಅಧಿಕಾರವನ್ನು ಬಳಸದಿದ್ದಾಗ ತಮ್ಮ ಅಗತ್ಯಾನುಸಾರ ರಾಜ್ಯ ಶಾಸಕಾಂಗಗಳು ಕಾನೂನು ರಚಿಸಲು ಅವಕಾಶ ಹೊಂದಿರುವುದನ್ನು ಇಲ್ಲಿ ವಿವರಿಸಲಾಗಿದೆ
329 ನೇ ವಿಧಿ ಚುನಾವಣಾ ವ್ಯವಹಾರದಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿರ್ಬಂಧಿಸಿರುವುದನ್ನು ತಿಳಿಸುತ್ತದೆ. ಸಂವಿಧಾನದ 327 328 ನೇ ವಿಧಿಯಂತೆ ರಚಿಸಲಾದ ಮತಕ್ಷೇತ್ರಗಳ ಗಡಿ ನಿರ್ಧಾರ ಅಥವ ಸ್ಥಾನಗಳ ಮರು ಹೊಂದಾಣಿಕೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂಬುದನ್ನು ವಿವರಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ