ಸಾರ್ವಜನಿಕ ಆಡಳಿತದ ಪರಿಚಯ ಎಂಬ ಐದನೇ ಸೆಮಿಸ್ಟರಿನ ರಾಜ್ಯಶಾಸ್ತ್ರ ಪತ್ರಿಕೆಯ ಐದನೇ ಅಧ್ಯಾಯದ ಅಧ್ಯಯನಕ್ಕಾಗಿ:
ವಿದ್ಯುನ್ಮಾನ ಆಳ್ವಿಕೆ: ಸಾರ್ವಜನಿಕ ಆಡಳಿತದ ಪದ ಕೋಶದಲ್ಲಿ ಇತ್ತೀಚೆಗೆ ಸೇರ್ಪಡೆಯಾದ ಪರಿಕಲ್ಪನೆಯೇ ವಿದ್ಯುನ್ಮಾನ ಆಳ್ವಿಕೆ. ಉತ್ತಮ ಆಳ್ವಿಕೆಯ ಗುರಿ ಸಾಧನೆಗೆ ವಿದ್ಯುನ್ಮಾನ ಆಳ್ವಿಕೆಯು ಪ್ರಧಾನ ಸಾಧನವೆನಿಸಿದೆ. ಮುಂದುವರಿದ, ಮುಂದುವರಿಯುತ್ತಿರುವ ಹಾಗೂ ಹಿಂದುಳಿದ ರಾಷ್ಟ್ರಗಳೂ ಸಹ ಈ ವಿದ್ಯುನ್ಮಾನ ಆಳ್ವಿಕೆಯನ್ನು ಅವಲಂಬಿಸಿರುವುದು ಅದರ ಮಹತ್ವವನ್ನು ಹೆಚ್ಚಿಸಿದೆ.
ವಿದ್ಯುನ್ಮಾನ ಆಳ್ವಿಕೆಯ ಅರ್ಥ: ಪದಶಃ ವಿದ್ಯುನ್ಮಾನ ಆಳ್ವಿಕೆ ಎಂದರೆ ವಿದ್ಯುಚ್ಚಾಲಿತ ಸಾಧನಗಳನ್ನು ಆಡಳಿತ ನಿರ್ವಹಣೆಗೆ ಬಳಸಿಕೊಳ್ಳುವುದು ಎಂದಾಗುತ್ತದೆ. ಸರಳಾರ್ಥದಲ್ಲಿ ಸರ್ಕಾರವೊಂದು ತನ್ನ ದೈನಂದಿನ ಆಡಳಿತ ನಿರ್ವಹಣೆಗೆ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸಾಧನಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿದ್ಯುನ್ಮಾನ ಆಳ್ವಿಕೆ ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ಸಾರ್ವಜನಿಕ ವ್ಯವಹಾರಗಳನ್ನು ನಿರ್ವಹಿಸುವಾಗ ಮಹಾತಿತಿ ತಂತ್ರಜ್ಞಾನದ ವಿವಿಧ ತಂತ್ರಾಂಶಗಳನ್ನು ಹಾಗೂ ಸಂವಹನ ಸಾಧನಗಳನ್ನು ಬಳಸಿಕೊಂಡು ಸರ್ಕಾರವು ಪರಿಣಾಮಕಾರಿಯಾಗಿ ಪ್ರಜೆಗಳಿಗೆ ವಿವಿಧ ಸೇವೆಗಳನ್ನೊದಗಿಸಲು ಮುಂದಾಗುವುದೇ ವಿದ್ಯುನ್ಮಾನ ಆಳ್ವಿಕೆಯಾಗಿದೆ. ವಿದ್ಯುನ್ಮಾನ ಆಳ್ವಿಕೆಯು ಸರ್ಕಾರದ ಸೇವೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಸ್ಥಳದಲ್ಲಿ ಸುಲಭವಾಗಿ ದೊರೆಯುವಂತೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ಸರ್ಕಾರವು ಜವಾಬ್ದಾರಿತ್ವ, ಸ್ಪಂದನಾಶೀಲತೆ, ಪಾರದರ್ಶಕತೆ ಮೈಗೂಡಿಸಿಕೊಂಡು ಪರಿಣಾಮಕಾರಿಯಾಗಿ ಆಡಳಿತ ನಿರ್ವಹಿಸಲು ವಿದ್ಯುನ್ಮಾನ ಆಳ್ವಿಕೆ ಸಹಕಾರಿಯಾಗಿದೆ. ಉತ್ತಮ ಆಳ್ವಿಕೆಯ ಕನಸನ್ನು ನನಸಾಗಿಸುವಲ್ಲಿ ವಿದ್ಯುನ್ಮಾನ ಆಳ್ವಿಕೆಯ ಪಾತ್ರ ಅಗಾಧವಾಗಿದೆ. ಇದರೊಡನೆ ಸರ್ಕಾರದ ಸೇವೆಗಳನ್ನು ತಂತ್ರಜ್ಞಾನದ ನೆರವಿನಿಂದ ಸುಲಭವಾಗಿ ಪಡೆಯುವಂತೆ ಮಾಡಿರುವ ಈ ಆಳ್ವಿಕೆಯು ಸ್ಮಾರ್ಟ್ ಗೌರ್ನೆನ್ಸ್ ಪರಿಕಲ್ಪನೆಗೆ ಚಾಲನೆ ಒದಗಿಸಿದೆ.
ವಿದ್ಯುನ್ಮಾನ ಆಳ್ವಿಕೆಯ ಪ್ರಕಾರಗಳು: ವಿದ್ಯುನ್ಮಾನ ಆಳ್ವಿಕೆಯು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಕೆಳಗೆ ಪ್ರಸ್ತಾಪಿಸಲಾದ ನಾಲ್ಕು ಬಗೆಯ ಅಥವಾ ಆಯಾಮದ ವಿದ್ಯುನ್ಮಾನ ಆಳ್ವಿಕೆಯನ್ನು ನಾವು ಗುರುತಿಸುವಂತಾಗಿದೆ.
ಅ. ಸರ್ಕಾರದಿಂದ ಪ್ರಜೆಗಳಿಗೆ (G to C): ಈ ಮಾದರಿಯ ವಿದ್ಯುನ್ಮಾನ ಆಳ್ವಿಕೆಯು ದೇಶದ ಪ್ರಜೆಗಳು ಸರ್ಕಾರದ ವಿವಿಧ ಯೋಜನೆಗಳು ಕೊಡಮಾಡುವ ನಾನಾ ಸೇವೆಗಳನ್ನು ಪಡೆಯುವ ವೇಳೆಯಲ್ಲಿ ಕಂಡು ಬರುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ, ರೈತರು ತಮ್ಮ ಪಹಣಿಗಾಗಿ, ನಿರುದ್ಯೋಗಿಗಳು ಸರ್ಕಾರದ ಧನ ಸಹಾಯಕ್ಕಾಗಿ ಪ್ರಯತ್ನಿಸುವಾಗಿದರ ಅನುಭವವಾಗುತ್ತದೆ.
ಆ. ಸರ್ಕಾರದಿಂದ ವ್ಯಾಪಾರಿಗಳಿಗೆ (G to B): ಸರ್ಕಾರವು ವಾಣಿಜ್ಯ ಚಟುವಟಿಕೆಗೆ ಅನುಮತಿ ನೀಡುವ, ಯೋಜನೆಯೊಂದರ ಟೆಂಡರ್‌ನ ಪ್ರಕ್ರಿಯೆ, ಸರಕು ಮತ್ತು ಸೇವಾ ತೆರಿಗೆಯ ನಿಯಂತ್ರಣದ ವೇಳೆಯಲ್ಲಿ ವಿದ್ಯುನ್ಮಾನ ಆಳ್ವಿಕೆಯು ಸಹಕಾರಿಯಾಗಿರುವುದು.
ಇ. ಸರ್ಕಾರದಿಂದ ನೌಕರರಿಗೆ (G to E): ಸರ್ಕಾರದ ಭಾಗವಾಗಿರುವ ನಾಗರಿಕ ಸೇವಾ ವರ್ಗದೊಡನೆ ಸಂಪರ್ಕ ಹೊಂದಲು ಈ ಮಾದರಿಯ ವಿದ್ಯುನ್ಮಾನ ಆಳ್ವಿಕೆ ನೆರವಾಗುತ್ತದೆ. ನಿರ್ದಿಷ್ಟ ಇಲಾಖೆಯ ಮುಖ್ಯಸ್ಥ ತನ್ನ ಇಲಾಖೆಯ ಅಧೀನ ನೌಕರರೊಡನೆ ಮಾಹಿತಿ ಹಂಚಿಕೊಳ್ಳಲು, ನೌಕರರ ಹಾಜರಾತಿ ನಿಯಂತ್ರಿಸಲು, ಸಂಬಂಧಪಟ್ಟ ಅಧಿಕಾರಗಳೊಡನೆ ಶೀಘ್ರವಾಗಿ ಸಂವಾದ ನಡೆಸಿ ತೀರ್ಮಾನ ಕೈಗೊಳ್ಳು ಮುಂತಾದ ಉದಾಹರಣೆಗಳ ಬೆಳಕಿನಲ್ಲಿ ಈ ಬಗೆಯ ಆಡಳಿತವನ್ನು ಗುರುತಿಸಬಹುದಾಗಿದೆ.
ಈ. ಸರ್ಕಾರದಿಂದ ಸರ್ಕಾರಕ್ಕೆ (G to G): ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಡನೆ, ರಾಜ್ಯ ಸರ್ಕಾರವೊಂದು ತನ್ನ ನೆರೆಯ ರಾಜ್ಯ ಸರ್ಕಾರಗಳೊಡನೆ, ಸ್ಥಳೀಯ ಸರ್ಕಾರಗಳು ಪರಸ್ಪರ ಸಂಪರ್ಕದೊಡನೆ ಆಡಳಿತದಲ್ಲಿ ಪರಿಣಾಮಕಾರತ್ವ ತರಲು ಈ ಮಾದರಿಯ ಆಳ್ವಿಕೆ ನೆರವಾಗಿದೆ. ಉದಾ: ಪ್ರಧಾನಿ ಕೋವಿಡ್ ಕಾಲದಲ್ಲಿ ಮುಖ್ಯಮಂತ್ರಿಗಳೊಡನೆ ಸಭೆ ಆಯೋಜಿಸಿದುದು.
ಈ ಮೇಲೆ ಸಂಕ್ಷೀಪ್ತವಾಗಿ ಚರ್ಚಿಸಿದಂತೆ ವಿದ್ಯುನ್ಮಾನ ಆಳ್ವಿಕೆಯು ವಿವಿಧ ವರ್ಗದ ಜನರು ಮತ್ತು ಸಂಸ್ಥೆಗಳ ನಡುವೆ ಸಂಬಂಧವನ್ನು ಏರ್ಪಡಿಸಿ ಆಡಳಿತವನ್ನು ಸುಲಭ, ಪಾರದರ್ಶಕ, ಫಲಪ್ರದಗೊಳಿಸುವ ಆಡಳಿತಾತ್ಮಕ ಮಾದರಿಯಾಗಿದೆ. ಎನ್ನಬಹುದು.
ವಿದ್ಯುನ್ಮಾನ ಆಳ್ವಿಕೆಯ ವಿಕಾಸ: ಭಾರತದಲ್ಲಿ ವಿದ್ಯುನ್ಮಾನದ ಆರಂಭಿಕ ಕುರುಹುಗಳನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಗುರುತಿಸಬಹುದಾಗಿದೆ. ಆಗ ಅಧಿಕಾರಿಗಳು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಟೆಲಿಗ್ರಾಫ್ ವ್ಯವಸ್ಥೆಯನ್ನು ಹೊಂದಿದ್ದರು. ಇದಾದ ಬಳಿಕ ಸ್ವಾತಂತ್ರ್ಯೋತ್ತರ ಭಾರತವು ವಿಶಾಲ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ವಿದ್ಯುನ್ಮಾನ ಆಳ್ವಿಕೆಗೆ ಒಳಪಡಲು ಆಸಕ್ತಿ ತೋರಿತು. 1977 ರಾಷ್ಟ್ರೀಯ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಬೆಳವಣಿಗೆಯು ಭಾರತದ ಜಿಲ್ಲಾ ಕೇಂದ್ರಗಳನ್ನು ಜೋಡಿಸಲು ಸಹಕಾರಿಯಾಯಿತು. ಈ ಬಗೆಯ ವಿದ್ಯುನ್ಮಾನ ಆಳ್ವಿಕೆಯನ್ನು ಮೈಗೂಡಿಸಿಕೊಂಡ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವು ಮೊದಲನೆಯದು. 1987 ರ ಹೊತ್ತಿಗೆ ಗಣಕಯಂತ್ರ ಆಧಾರಿತ ಸಂಪರ್ಕವನ್ನು ಭಾರತದಲ್ಲಿ ಜಾರಿಗೊಳಿಸಲಾಯಿತು. ಜೊತೆಗೆ 1990 ರ ದಶಕದಲ್ಲಿ ಮಾಹಿತಿ ತಂತ್ರಜ್ಞಾನದ ಬಲವರ್ಧನೆಗೊಂಡು ವಿದ್ಯುನ್ಮಾನ ಆಳ್ವಿಕೆ ವಿಸ್ತರಿಸಿತು. 2000 ರ ವೇಳೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆಯೊಂದು ಜಾರಿಗೊಂಡು ಔಪಚಾರಿಕವಾಗಿ ವಿದ್ಯುನ್ಮಾನ ಆಳ್ವಿಕೆ ಪಾಲಿಸಲ್ಪಟ್ಟಿತು. ಈ ನಡುವೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲು ಭಾರತ ಸಿದ್ಧವಾಯಿತು. ಕಳೆದ ದಶಕದಲ್ಲಿ ವಿದ್ಯುನ್ಮಾನ ಆಳ್ವಿಕೆಗೆ ಫುರಕವಾದ ಹಲವು ಯೋಜನೆಗಳ್ನು ಹಮ್ಮಿಕೊಂಡ ಸರ್ಕಾರಗಳು ಅದರ ಯಶಸ್ವಿ ಕಾರ್ಯಾಚರಣೆಗೆ ಕಾರಣವಾಗಿವೆ. ಪ್ರಸ್ತುತ ಭಾರತದಲ್ಲಿ ಆರೋಗ್ಯ, ಸಾಮಾಜಿಕ ಭದ್ರತೆ, ಸರ್ಕಾರಿ ಸೇವೆ, ಸಾರಿಗೆ ಸೌಲಭ್ಯಗಳ ರಂಗಗಳಲ್ಲಿ ಸಮರ್ಪಕವಾಗಿ ವಿದ್ಯುಮಾನ ಆಡಳಿತವು ಕಂಡು ಬರುತ್ತಿದೆ.
ವಿದ್ಯುನ್ಮಾನ ಆಳ್ವಿಕೆಯ ಅನುಕೂಲಗಳು: ವಿದ್ಯುನ್ಮಾನ ಆಳ್ವಿಕೆಯು ಇಂದು ಸಾಮಾನ್ಯ ವಿದ್ಯಮಾನವೆನಿಸಿದೆ. ಇದಕ್ಕೆ ಅದು ಹೊಂದಿರುವ ಈ ಕೆಳಗಿನ ಅನುಕೂಲಗಳು ಪ್ರಧಾನ ಕಾರಣವಾಗಿವೆ.
ಅ. ತ್ವರಿತ ಸೇವೆಗಳಿಗೆ ನೆರವಾಗಿದೆ: ಈ ಬಗೆಯ ಆಳ್ವಿಕೆಯು ಸರ್ಕಾರವು ಪ್ರಜೆಗಳಿಗೆ ಒದಗಿಸುವ ನಾನಾ ಸೇವೆಗಳ ತ್ವರಿತ ಪೂರೈಕೆಗೆ ಸಹಕಾರಿಯಾಗಿದೆ. ಅಂತರ್‌ಜಾಲ ಮತ್ತು ಗಣಕಯಂತ್ರ ಆಧಾರಿತ ಜಾಲಗಳ ನೆರವಿನಿಂದ ಪ್ರಜೆಗಳು ತಾವಿದ್ದಲ್ಲಿಯೇ ಸೇವೆಯನ್ನು ಹೊಂದುವಂತಾಗಿದೆ. ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಿದುದು ಸೇವೆಗಳ ಮತ್ತಷ್ಟು ವೇಗ ಒದಗಿಸಿದೆ.
ಆ. ಕಡಿಮೆ ವೆಚ್ಚದಾಯಕ: ವಿದ್ಯುನ್ಮಾನ ಆಳ್ವಿಕೆಯು ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ಪಡೆಯಲು ನೆರವಾಗಿದೆ. ವಿವಿಧ ತಂತ್ರಾಂಶಗಳ ಅಭಿವೃದ್ಧಿಯೊಡನೆ ವಿದ್ಯುನ್ಮಾನ ಆಳ್ವಿಕೆಯಡಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಿಂದ ಏಕಕಾಲದಲ್ಲಿ ಬಹುಸಂಖ್ಯಾತ ಜನರಿಗೆ ಸೇವೆಯೊದಗಿಸಲು ಸಾಧ್ಯವಾಗಿದೆ. ಬೆರಳ ತುದಿಯಲ್ಲಿ ನಾನಾ ಸೇವೆಗಳನ್ನು ಅಲ್ಪ ವೆಚ್ಚದಲ್ಲಿ ಪಡೆಯಲು ಈ ಆಳ್ವಿಕೆಯು ಸಹಕಾರಿಯಾಗಿದೆ.
ಇ. ಪಾರದರ್ಶಕತೆಗೆ ಆಸ್ಪದ: ವಿದ್ಯುನ್ಮಾನ ಆಳ್ವಿಕೆಯ ಫಲವಾಗಿ ಮಾಹಿತಿಯು ಮುಕ್ತವಾಗಿ ದೊರೆಯುವಂತಾಗಿದೆ. ಫಲವಾಗಿ ವಿವಿಧ ಮಾಹಿತಿಯನ್ನು ಜನರು ಕುಳಿತಲ್ಲಿಯೇ ಪಡೆಯುವಂತಾಗಿದೆ. ಪ್ರತಿ ಇಲಾಖೆಯು ತನ್ನದೇಯಾದ ಜಾಲತಾಣವನ್ನು ಹೊಂದಿದ್ದುದು ಇದಕ್ಕೆ ಸಹಕಾರಿ.
ಈ. ಜವಾಬ್ದಾರಿತ್ವದ ಹೆಚ್ಚಳ: ವಿದ್ಯುನ್ಮಾನ ಆಳ್ವಿಕೆಯು ಸರ್ಕಾರ ಮತ್ತು ಪ್ರಜೆಗಳ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತದೆ. ವಿದ್ಯುನ್ಮಾನ ಅಳವಡಿಕೆಯು ಸರ್ಕಾರಕ್ಕೆ ತ್ವರಿತತೆ, ಪಾರದರ್ಶಕತೆ, ದಕ್ಷತೆಯನ್ನು ಬೆಳೆಸಿದರೆ ಪ್ರಜೆಗಳಲ್ಲಿ ಸಮಯ ಪ್ರಜ್ಞೆ, ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ಉ. ಸರ್ಕಾರದ ಸಂವಹನಾ ಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ. ಈ ಬಗೆಯ ಆಡಳಿತವು ವೇಗವಾಗಿ ಸರ್ಕಾರಿ ನೌಕರರನ್ನು ಸಂಪರ್ಕಿಸಲು ಪೂರಕವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ