ಶುಕ್ರವಾರ, ಏಪ್ರಿಲ್ 30, 2021

[B] ಸಂವಿಧಾನದ ಬೇಡಿಕೆಯ ಇತಿಹಾಸ:

ಭಾರತೀಯರಲ್ಲಿ 20 ನೇ ಶತಮಾನದ ಎರಡನೇ ದಶಕದವರೆಗೆ ಸಂವಿಧಾನದ ಸ್ಪಷ್ಟ ಪರಿಕಲ್ಪನೆ ಇರಲಿಲ್ಲ. ರಾಷ್ಟ್ರೀಯತೆಯ ಉದಯ, ಸ್ವದೇಶಿ ಚಳುವಳಿ, ಗಾಂಧಿ ನೇತೃತ್ವದ ರಾಷ್ಟ್ರೀಯ ಹೋರಾಟಗಳು ಭಾರತೀಯರಲ್ಲಿ ಸಂವಿಧಾನದ ಬಯಕೆಯನ್ನು ಕ್ರಮೇಣ ಬಿತ್ತಿದವು. ಆರಂಭದಲ್ಲಿ ಸಂವಿಧಾನದ ಬೇಡಿಕೆಯು ಅಸ್ಪಷ್ಟವಾಗಿದ್ದು ಕ್ರಮೇಣ ಅದೊಂದು ಭಾರತೀಯರ ನಿರ್ದಿಷ್ಟ ಬೇಡಿಕೆಯಾಗಿ ರೂಪುಗೊಂಡಿತು. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನಾತ್ಮಕ ಇತಿಹಾಸದ ಪರಿಪೂರ್ಣ ಮನವರಿಕೆಗೆ ಸಂವಿಧಾನದ ಬೇಡಿಕೆಯ ಇತಿಹಾಸವನ್ನು ಅರಿತುಕೊಳ್ಳುವುದು ಅಗತ್ಯ. ಹೀಗಾಗಿ ಸಂವಿಧಾನ ಬೇಡಿಕೆಯ ವಿವಿಧ ಹಂತಗಳನ್ನು ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ಕೆಳಗೆ ನೀಡಲಾಗಿದೆ.

1. ಸಂವಿಧಾನ ರಚನಾ ಸಭೆಯ ಬೇಡಿಕೆಯ ಕುರುಹನ್ನು ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಡಿಸೆಂಬರ್ 1918 ರ 33 ನೇ ದೆಹಲಿ ಅಧಿವೇಶನದ ನಿರ್ಣಯದಲ್ಲಿ ಗುರುತಿಸಬಹುದು. ಈ ನಿರ್ಣಯವು ಸ್ವಯಂ ನಿರ್ಧಾರ ತತ್ವವನ್ನು ಭಾರತೀಯರಿಗೆ ಅನ್ವಯಿಸಲು ಬ್ರಿಟಿಷರ ಮುಂದೆ ಬೇಡಿಕೆ ಇಟ್ಟಿತು. ಜೊತೆಗೆ ಭಾರತೀಯರು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಅಭಿವ್ಯಕ್ತಿಯ ಹಕ್ಕನ್ನು ಹೊಂದುವಂತಾಗಬೇಕೆಂದು ಈ ನಿರ್ಣಯ ಾಶಿಸಿತು. ಪ್ರತಿನಿಧಿಗಳು ಮುಕ್ತವಾಗಿ ನಿರ್ಧಾರ ಕೈಗೊಳ್ಳಲು ಅಗತ್ಯವಾದ ನಿಯಮಾವಳಿಗಳ ಅನಿವಾರ್ಯತೆಯನ್ನು ನಿರ್ಣಯವು ಎತ್ತಿ ಹಿಡಿಯಿತು.

2. ಜನೇವರಿ 5, 1922 ರಂದು ಮಹಾತ್ಮಾ ಗಾಂಧೀಜಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಸ್ವಯಂ ಆಳ್ವಿಕೆ ಪರಿಕಲ್ಪನೆಯು ಬ್ರಿಟಿಷ್ ಸಂಸತ್ತಿನ ುಚಿತ ಕೊಡುಗೆಯಾಗಿರದೇ ಭಾರತೀಯರು ತಮ್ಮ ಪ್ರತಿನಿಧಿಗಳ ಮೂಲಕ ಮನದಾಶಯಗಳನ್ನು ಅಭಿವ್ಯಕ್ತಗೊಳಿಸುವುದಾಗಿದೆ ಎಂದು ಪ್ರತಿಪಾದಿಸಿದರು. ಗಾಂಧೀಜಿಯವರ ಈ ಹೇಳಿಕೆಯು ಸ್ವಯಂ ನಿರ್ಧಾರ ತತ್ವವನ್ನು ಬೆಂಬಲಿಸಿ ಸಂವಿಧಾನದ ಅನಿವಾರ್ಯತೆಯನ್ನು ಧ್ವನಿಸಿತು.

3. ಫೇಬ್ರವರಿ 8, 1924 ರಂದು ಸ್ವರಾಜ್ ಪಕ್ಷದ ನಾಯಕರಾಗಿದ್ದ ಮೋತಿಲಾಲ್ ನೆಹರು ಕೇಂದ್ರ ಶಾಸಕಾಂಗದಲ್ಲಿ  ನಿಲುವಳಿಯೊಂದನ್ನು ಮಂಡಿಸಿ ಭಾರತಕ್ಕೆ ಸಂವಿಧಾನ ರಚನೆಯನ್ನು ಕುರಿತು ಚರ್ಚಿಸಲು ಪ್ರತಿನಿಧಿಗಳ ದುಂಡು ಮೇಜಿನ ಸಮ್ಮೇಳನವೊಂದನ್ನು ಆಯೋಜಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದರು. ಸ್ವರಾಜ್ ಪಕ್ಷ 1925 ರಲ್ಲೂ ತನ್ನ ಭಾರತಕ್ಕೆ ಸಂವಿಧಾನ ರಚನೆಯ ಬೇಡಿಕೆಯನ್ನು ಪ್ರತಿಪಾದಿಸಿತು. ಆದರೆ ಬ್ರಿಟಿಷ್ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.

4. ಮೇ 17, 1927 ರಂದು ಬಾಂಬೆನಲ್ಲಿ ಜರುಗಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧಿವೇಶನದಲ್ಲಿ ಮೋತಿಲಾಲ್ ನೆಹರು ನಿಲುವಳಿಯೊಂದನ್ನು ಮಂಡಿಸಿ ಕಾಂಗ್ರೆಸ್ ವರ್ಕಿಂಗ್ ಕಮೀಟಿಯು ಕೇಂದ್ರ ಹಾಗು ಪ್ರಾಂತ್ಯ ಶಾಸನಸಭೆಯ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮೀತಿಯ ಮೂಲಕ ಭಾರತದ ಸಂವಿಧಾನ ರಚನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು. ಪರಿಣಾಮ 19 ಮೇ 1928 ರಂದು ಜರುಗಿದ ಸರ್ವ ಪಕ್ಷಗಳ ಸಮ್ಮೇಳನವು ಮೋತಿಲಾಲ್ ನೆಹರು ಅಧ್ಯಕ್ಷತೆಯಲ್ಲಿ ಮಾದರಿ ಸಂವಿಧಾನ ರಚನೆಗೆ ಸರ್ವ ಪಕ್ಷಗಳ ಸಮೀತಿಯೊಂದನ್ನು ರಚಿಸಿತು. 10 ಆಗಸ್ಟ್ 1928 ರಂದು ಮೋತಿಲಾಲ್ ನೆಹರು ನೇತೃತ್ವದ ಸರ್ವ ಪಕ್ಷಗಳ ಸಮೀತಿಯು ನೆಹರೂ ವರದಿ ಎಂದೇ ಚಿರಪರಿಚಿತವಾದ ತನ್ನ ವರದಿ ನೀಡಿತು. ಭಾರತಕ್ಕೆ ಡೊಮೀನಿಯನ್ ಸ್ಥಾನಮಾನ ಹಾಗು ಪೂರ್ಣ ಜವಾಬ್ದಾರಿಯುಳ್ಳ ಸಂಸಧೀಯ ಮಾದರಿಯ ಸರ್ಕಾರವನ್ನುಳ್ಳ ಮಾದರಿ ಸಂವಿಧಾನವನ್ನು ಈ ವರದಿಯು  ಪ್ರತಿಪಾದಿಸಿತು. ಭಾರತೀಯರ ಈ ಮಾದರಿ ಸಂವಿಧಾನದ ರಚನೆಯು ಬ್ರಿಟಿಷ್ ಸರ್ಕಾರ ಸಂವಿಧಾನಾತ್ಮಕ ಸುಧಾರಣೆಗೆ ಶಿಫಾರಸ್ಸು ಮಾಡಲು ರಚಿಸಿದ್ದ ಜಾನ್ ಸೈಮನ್ ಆಯೋಗದ ಪ್ರತಿಗಾಮಿ ಕ್ರಮವಾಗಿತ್ತು.

5. 1929 ರ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ತನ್ನ ಗುರಿಯೆಂದು ಘೋಷಿಸಿದ ಬಳಿಕ ಸಂವಿಧಾನ ರಚನೆ ಕಾಂಗ್ರೆಸ್ನ ಪ್ರಮುಖ ಬೇಡಿಕೆಗಳಲ್ಲಿ ಒಂದಾಯಿತು. 1930 ರಿಂದ 1932 ರವರೆಗೆ ಲಂಡನ್ನಿನಲ್ಲಿ ಜರುಗಿದ ಮೂರು ದುಂಡು ಮೇಜಿನ ಸಮ್ಮೇಳನಗಳ ಚರ್ಚೆಯನ್ನಾಧರಿಸಿ ಬ್ರಿಟಿಷ್ ಸರ್ಕಾರ ಹೊರಡಿಸಿದ ೇಕಪಕ್ಷೀಯ ಸಂವಿಧಾನಾತ್ಮಕ ಸುಧಾರಣೆಗಳ ಶ್ವೇತ ಪತ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಒಪ್ಪಲಿಲ್ಲ.

6. ಅಕ್ಟೋಬರ್ 2, 1933 ರಂದು ಲಕ್ನೌ ಡೇಲಿ ಹೆರಾಲ್ಡ್ಗೆ ಬರೆದ ಲೇಖನದಲ್ಲಿ ಜವಾಹರಲಾಲ್ ನೆಹರು ಭಾರತದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಭಾರತೀಯರ ಪ್ರತಿನಿಧಿಗಳಿಂದ ರಚನೆಗೊಂಡ ಸಂವಿಧಾನದ ಜಾರಿಯು ಮಾತ್ರ ರಾಜಕೀಯ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು. ನೆಹರೂರ ಅಭಿಪ್ರಾಯವನ್ನು 1934 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸಿತು. ಈ ನಡುವೆ ಎಂ. ಎನ್. ರಾಯ್ ಭಾರತಕ್ಕೆ ಭಾರತೀಯರಿಂದ ಸಂವಿಧಾನ ರಚನಾ ಅಗತ್ಯವನ್ನು ಬೆಂಬಲಿಸಿ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಮೊದಲ ಬಾರಿಗೆ 1934 ರಲ್ಲಿ ಪ್ರತಿಪಾದಿಸಿದರು.

7. 1935 ರ ಕಾಯಿದೆಯಂತೆ ರಚನೆಗೊಂಡ ಕೇಂದ್ರ ಹಾಗು ಪ್ರಾಂತೀಯ ಸರ್ಕಾರಗಳು 1937 ರಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಿದವು. ಈ ನಿರ್ಣಯದಲ್ಲಿ 1935 ರ ಭಾರತ ಸರ್ಕಾರ ಕಾಯಿದೆಯು ಭಾರತೀಯರ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು ಅದನ್ನು ರದ್ದುಗೊಳಿಸಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.

8. ಜವಾಹರಲಾಲ್ ನೆಹರು ಕಾಂಗ್ರೆಸ್ ಭಾರತವನ್ನು ಸ್ವತಂತ್ರ ಹಾಗೂ ಪ್ರಜಾಸತ್ತಾತ್ಮಕ ರಾಜ್ಯವನ್ನಾಗಿ ಕಾಣಲು ಇಚ್ಚಿಸುತ್ತದೆ. ಜೊತೆಗೆ ಹೊರಗಿನವರ ಹಸ್ತಕ್ಷೇಪವಿಲ್ಲದೇ ವಯಸ್ಕ ಮತದಾನದ ಮೂಲಕ ಾಯ್ಕೆಯಾದ ಪ್ರತಿನಿಧಿಗಳ ಸಂವಿಧಾನ ರಚನಾ ಸಭೆಯನ್ನು ಹೊಂದಲು ಬಯಸುತ್ತದೆ ಎಂದು ಅಭಿಪ್ರಾಯಪಟ್ಟರು. 1938 ರ ಹರಿಪುರ ಕಾಂಗ್ರೆಸ್ ಅಧಿವೇಶನವು ನೆಹರೂರ ಅಭಿಪ್ರಾಯದಂತೆ ಭಾರತ ಸಂವಿಧಾನ ರಚನಾ ಸಭೆಯ ರಚನೆಗೆ ಬ್ರಿಟಿಷರನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು.

9. 1939 ರಲ್ಲಿ ಎರಡನೇ ಮಹಾಯುದ್ಧ ಾರಂಭವಾದಾಗ ಬ್ರಿಟಿಷ್ ಸರ್ಕಾರ ಭಾರತೀಯರ ಸಹಕಾರವನ್ನು ಕೋರಿತು. ಆಗ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಬ್ರಿಟಿಷರು ಭಾರತದ ಸ್ವತಂತ್ರ ಮತ್ತು ಸಂವಿಧಾನ ರಚಿಸಿಕೊಳ್ಳುವ ಭಾರತೀಯರ ಹಕ್ಕನ್ನು ಪರಿಗಣಿಸಿದರೆ  ಸಹಕಾರದ ಪರಿಶೀಲನೆ ಮಾಡಬಹುದೆಂಬ ನಿರ್ಣಯ ಕೈಗೊಂಡಿತು. ಮಾರ್ಚ್ 1940 ರ ರಾಮಘರ್ ಅಧಿವೇಶನದಲ್ಲಿ ಕಾಂಗ್ರೆಸ್ಸು ವಯಸ್ಕ ಮತದಾನದ ಮೂಲಕ ಾಯ್ಕೆಯಾದ ಭಾರತೀಯರಿಂದ ಭಾರತ ಸಂವಿಧಾನ ರಚನೆಗೊಳ್ಳಬೇಕೆಂಬ ತನ್ನ ಮೊದಲಿನ ಬೇಡಿಕೆಯನ್ನು ಪುನಃ ಪ್ರತಿಪಾದಿಸಿತು.

10. 8 ಆಗಸ್ಟ್ 1940 ರಂದು ವೈಸ್ರಾಯ್ ಲಿನ್ಲಿತ್ಗೊ ಮೂಲಕ ಬ್ರಿಟಿಷ್ ಸರ್ಕಾರ ಘೋಷಣೆ ಹೊರಡಿಸಿ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಪರೋಕ್ಷವಾಗಿ ಮೊದಲ ಬಾರಿ ಅಂಗೀಕರಿಸಿತು. ಯುದ್ಧ ಮುಕ್ತಾಯದ ಬಳಿಕ ಸಂವಿಧಾನ ರಚನಾ ಸಭೆಯ ಸ್ಥಾಪನೆ ಮಾಡಲಾಗುವುದೆಂಬ ಭರವಸೆಯನ್ನು ವೈಸ್ರಾಯ್ ಘೋಷಣೆಯು ನೀಡಿತ್ತು. ಆದರೆ ಮಹಾಯುದ್ಧದಲ್ಲಿ ಬ್ರಿಟನ್ನಿನ ಭವಿಷ್ಯವೇ ಅಸ್ಪಷ್ಟವಾದಾಗ ಸಂವಿಧಾನ ರಚನಾ ಸಭೆಯ ಭರವಸೆ ಅವಾಸ್ತವಿಕ ೆಂದು ಭಾರತೀಯರು ಇದನ್ನು ಒಪ್ಪಿಕೊಳ್ಳಲಿಲ್ಲ.

11. ಮಾರ್ಚ್ 1942 ರ ಕ್ರಿಪ್ಸ್ ಆಯೋಗವು ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಜೊತೆಗೆಭಾರತಕ್ಕೆ ಡೊಮೀನಿಯನ್ ಸ್ಥಾನಮಾನ ನೀಡಿ ಭಾರತದ ಾಂತರಿಕ ಹಾಗೂ ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು. ಆದರೆ ಭಾರತದ ನಾಯಕರು ಕ್ರಿಪ್ಸ್ ಆಯೋಗದ ಸಲಹೆಗಳನ್ನು ಅಂಗೀಕರಿಸಲಿಲ್ಲ. ಗಾಂಧೀಜಿ ಈ ಆಯೋಗವನ್ನು ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಾಂಕವುಳ್ಳ ಚೆಕ್ ಎಂದು ಟೀಕಿಸಿದರು. ಅಲ್ಲದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು 8 ಆಗಸ್ಟ್ 1942 ರಂದು ಆರಂಭಿಸಿದರು.

12. ಎರಡನೇ ಮಹಾಯುದ್ಧದ ಬಳಿಕ ಬ್ರಿಟನ್ನಿನಲ್ಲಿ ಅಧಿಕಾರಕ್ಕೆ ಬಂದ ಕಾರ್ಮಿಕ ಪಕ್ಷವು ಭಾರತೀಯರ ಬೇಡಿಕೆಗಳನ್ನು ಪರಿಶೀಲಿಸಲು ಮಾರ್ಚ್ 1946 ರಲ್ಲಿ ಲಾರ್ಡ್ ಪೆತಿಕ್ ಲಾರೆನ್ಸ್, ಸರ್ ಸ್ಟ್ಯಾಫರ್ಡ್ ಕ್ರಿಪ್ಸ್ ಹಾಗು ಎ. ವ್ಹಿ. ಅಲೆಗ್ಸಾಂಡರ್ಸ್ ೆಂಬ ಮೂರು ಸದಸ್ಯರ ಕ್ಯಾಬಿನೆಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಮೇ 1946 ರ ಕ್ಯಾಬಿನೆಟ್ ಆಯೋಗದ ಸಲಹೆಯಂತೆ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಅಂತಿಮವಾಗಿ ಒಪ್ಪಿಕೊಳ್ಳಲಾಯಿತು. 389 ಸದಸ್ಯರನ್ನುಳ್ಳ ಭಾರತ ಸಂವಿಧಾನ ರಚನಾ ಸಭೆಯ ರಚನೆಗೆ ಕ್ಯಾಬಿನೆಟ್ ಆಯೋಗ ಅಂಗೀಕಾರ ನೀಡುವ ಮೂಲಕ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯ ಕನಸು  ನನಸಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...