ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲ ಒಳಗೊಂಡ ವಿವರಣೆಯನ್ನು ಆಧರಿಸಿದ ಮಾಹಿತಿ:
ಭಾರತದಲ್ಲಿ ಪ್ರತಿಯೊಂದು ಲೋಕಸಭಾ ಹಾಗು ವಿಧಾನಸಭಾ ಮತಕ್ಷೇತ್ರವು ತನ್ನದೇ ಮತದಾರರ ಪಟ್ಟಿಯನ್ನು ಹೊಂದಿರುತ್ತದೆ. ಸಂವಿಧಾನದ 326 ನೇ ವಿಧಿ ಹಾಗು 1950 ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 19 ರಂತೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹದಿನೆಂಟು ವರ್ಷ ವಯಸ್ಸಾಗಿರಬೇಕಾಗುತ್ತದೆ. ಮತದಾರ ಮತದಾನದ ಹಕ್ಕನ್ನು ಪಡೆಯಲು ಆರಂಭದಲ್ಲಿ ವಯೋಮಿತಿ 21 ವರ್ಷವಾಗಿತ್ತು. ಆದರೆ 1988 ರ 61 ನೇ ಸಂವಿಧಾನದ ತಿದ್ದುಪಡಿ ಮತ್ತು ಪ್ರಜಾಪ್ರತಿನಿಧಿ ಕಾಯಿದೆಯಲ್ಲಿನ ಬದಲಾವಣೆಯಿಂದ 28 ಮಾರ್ಚ್ 1989 ರಿಂದ ಮತದಾರರ ಪಟ್ಟಿಗೆ ಸೇರುವ ಮತದಾರನ ವಯೋಮಿತಿ ಹದಿನೆಂಟಕ್ಕೆ ನಿಗಧಿಯಾಯಿತು.
ಭಾರತದ ಪೌರತ್ವ ಹೊಂದದ ವ್ಯಕ್ತಿ ಮತದಾರನಾಗಲು ಸಾಧ್ಯವಿಲ್ಲ ಬುದನ್ನು ಸಂವಿಧಾನದ 326 ನೇ ವಿಧಿ ಮತ್ತು 1950 ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 16 ಸ್ಪಷ್ಟಪಡಿಸಿದೆ. ಮತದಾರನೊಬ್ಬ ತನ್ನ ಜನ್ಮ ಸ್ಥಳವನ್ನು ಉದ್ಯೋಗದ ಕಾರಣಕ್ಕೆ ತೊರೆದು ದೂರದ ನಗರದಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದರೆ ಆತ ತಾನು ವಾಸವಾಗಿರುವ ನಗರದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೇ ಹೊರತು ತನ್ನ ಜನ್ಮ ಸ್ಥಳಕ್ಕೆ ಬರಬೇಕಾಗಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ 1950 ರ ಸೆಕ್ಷನ್ 19 [B] ತಾತ್ಕಾಲಿಕ ವಾಸದ ಧಾರದ ಮೇಲೆ ಮತದಾರನೊಬ್ಬ ತನ್ನ ಹೆಸರನ್ನು ಪ್ರಸ್ತುತ ವಾಸವಾಗಿರುವ ಸ್ಥಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಲು ಅವಕಾಶ ಕಲ್ಪಿಸಿದೆ. ಒಬ್ಬ ಮತದಾರ ದೇ ಮತಕ್ಷೇತ್ರದ ಬೇರೆ ಬೇರೆ ಸ್ಥಳದಲ್ಲಿ ಹೆಸರು ನೊಂದಾಯಿಸಲು ಹಾಗು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ಮತದಾರ ಪಟ್ಟಿಗೆ ಹೆಸರು ನೊಂದಾಯಿಸಲು ಪ್ರಜಾಪ್ರತಿನಿಧಿ ಕಾಯಿದೆ 1950 ರ ಸೆಕ್ಷನ್ 17 ಮತ್ತು 18 ಅವಕಾಶ ನಿರಾಕರಿಸುತ್ತವೆ.
ಮತದಾರನಿಗೆ ತಿಳಿಸಲಾಗುವ ಅನರ್ಹತೆಯನ್ನು ಹೊಂದದ ಭಾರತೀಯ ಪೌರಹದಿನೆಂಟು ವಯೋಮಿತಿ ಪೂರೈಸಿದೊಡನೆ ತನ್ನ ವಿಧಾನಸಭಾ ಮತಕ್ಷೇತ್ರದ ಮತದಾರ ನೊಂದಣಾ ಅಧಿಕಾರಿಯನ್ನು ಸಂಪರ್ಕಿಸಬೇಕು. ಮತದಾರ ನೊಂದಣಾ ಅಧಿಕಾರಿ ಅರ್ಜಿ ನಮೂನೆ 6 ನ್ನು ನೀಡಿ ಸೂಚಿತ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸುವರು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡವರು ತಮ್ಮ ಹೆಸರು, ವಿಳಾಸ, ಮತ್ತಿತರ ವಿವರಗಳ ಬದಲಾವಣೆಗಾಗಿ ಮತದಾರ ನೊಂದಣಾ ಅಧಿಕಾರಿಗೆ ಬೇರೆ ಬೇರೆ ನಮೂನೆಗಳಲ್ಲಿ ಮನವಿ ಸಲ್ಲಿಸಬೇಕಾಗುತ್ತದೆ. ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ನಮೂನೆ 6, ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ತಕರಾರುಗಳಿದ್ದರೆ ನಮೂನೆ 7, ಮತದಾರ ಪಟ್ಟಿಯಲ್ಲಿನ ವಿವರಗಳ ಪರಿಷ್ಕರಣೆಗೆ ನಮೂನೆ 8, ನಿರ್ದಿಷ್ಟ ಮತಕ್ಷೇತ್ರದಲ್ಲೇ ವಿಳಾಸ ಬದಲಿಸಲು ನಮೂನೆ 8 [A] ನ್ನು ಮತದಾರ ಭರ್ತಿ ಮಾಡಬೇಕಾಗುತ್ತದೆ. ಮತದಾರನೊಬ್ಬ ನಿರ್ದಿಷ್ಟ ಮತಕ್ಷೇತ್ರದ ಗಡಿಯೊಳಗೆ ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡರೆ ಮತದಾರ ನೊಂದಣಾ ಅಧಿಕಾರಿಗೆ ನಮೂನೆ 8 [A] ಭರ್ತಿ ಮಾಡಿ ನೀಡಬೇಕಾಗುತ್ತದೆ. ಒಂದು ವೇಳೆ ಮತದಾರನ ವಾಸುಸ್ಥಳ ಬೇರೊಂದು ಮತಕ್ಷೇತ್ರಕ್ಕೆ ವರ್ಗಾವಣೆಗೊಂಡರೆ ನಮೂನೆ 6 ನ್ನು ಭರ್ತಿ ಮಾಡಿ ಹೊಸ ವಾಸುಸ್ಥಳದ ಮತದಾರ ನೊಂದಣಾ ಅಧಿಕಾರಿ ಅಥವ ಸಹಾಯಕ ಮತದಾರ ನೊಂದಣಾ ಅಧಿಕಾರಿಗೆ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಮತದಾರೀ ವಿಧಾನವನ್ನು ಅನುಸರಿಸಿದರೆ ಆತನ ಭಾವಚಿತ್ರವುಳ್ಳ ಮತದಾರ ಗುರುತಿನ ಚೀಟಿಯಲ್ಲಿರುವ ವಿಳಾಸವನ್ನೂ ಹೊಸ ವಾಸುಸ್ತಳದಲ್ಲಿ ಮತದಾರ ಹೊಸ ಗುರುತಿನ ಚೀಟಿಯ ಮೂಲಕ ಬದಲಾಯಿಸಿಕೊಳ್ಳಬಹುದಾಗಿದೆ. ಮತದಾರನಿಗೆ ನೀಡಲಾದ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಳಾದಲ್ಲಿ ಅಗತ್ಯ ದಾಖಲೆ ನೀಡಿ ಹೊಸ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಪಡೆಯಲು ಅವಕಾಶವಿದೆ. ಒಬ್ಬನ ಭಾವಚಿತ್ರವುಳ್ಳ ಗುರುತಿನ ಚೀಟಿ ಕಳೆದು ಹೋದರೆ ಪೋಲಿಸ್ ಠಾಣೆಯಲ್ಲಿ ನೀಡುವ ಪ್ರಥಮ ತನಿಖಾ ವರದಿಯ ಪ್ರತಿಯನ್ನು ಮತದಾರ ನೊಂದಣಾ ಅಧಿಕಾರಿಗೆ ಸಲ್ಲಿಸಿ ರೂ 25 ನ್ನು ನೀಡಬೇಕು. ಪ್ರಮುಖ ದಿನ ಪತ್ರಿಕೆಗಳಲ್ಲಿ ದಿನಾಂಕವನ್ನು ಗಮನಿಸುತ್ತಿದ್ದು ನಿರ್ದಿಷ್ಟ ಕೇಂದ್ರಗಳಲ್ಲಿ ನೂತನ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಮತದಾರರು ಪಡೆಯಬಹುದು. ಹೊಸದಾದ ಮತಕ್ಷೇತ್ರದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಪಡಿತರ ಚೀಟಿ ಅನಿವಾರ್ಯವಲ್ಲ. ಸರ್ಕಾರ ಕಾಲಕಾಲಕ್ಕೆ ನೊಂದಾವಣೆಗೆ ನಿಗಧಿಪಡಿಸುವ ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಪಾಸ್ಪೋರ್ಟ್ ಮುಂತಾದವುಗಳ ನೆರವಿನಿಂದ ಮತದಾರ ಪಟ್ಟಿಗೆ ಸೇರಲು ಅವಕಾಶವಿರುತ್ತದೆ.
ಪ್ರಜಾಪ್ರತಿನಿಧಿ ಕಾಯೀದೆ 1950 ರ ಸೆಕ್ಷನ್ 13 [B] ಯಂತೆ ಭಾರತೀಯ ಚುನಾವಣಾ ಆಯೋಗವು ಆಯಾ ರಾಜ್ಯ ಅಥವ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳೊಡನೆ ಚರ್ಚಿಸಿ ಮತದಾರ ನೊಂದಣಾ ಅಧಿಕಾರಿಗಳನ್ನು ನೇಮಿಸುತ್ತದೆ. ಜೊತೆಗೆ ಮತದಾರ ನೊಂದಣಾ ಅಧಿಕಾರಿಯ ಕಾರ್ಯಭಾರವನ್ನು ಆಧರಿಸಿ ಸಹಾಯಕ ಮತದಾರ ನೊಂದಣಾ ಅಧಿಕಾರಿಗಳನ್ನು ಚುನಾವಣಾ ಆಯೋಗ ನೇಮಿಸಿಕೊಳ್ಳಬಹುದಾಗಿದೆ. ದೆಹಲಿಯಲ್ಲಿ ಮತದಾರ ನೊಂದಣಾ ಅಧಿಕಾರಿಯ ಕಾರ್ಯವನ್ನು ಏರಿಯಾ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅಥವ ಅಡಿಷನಲ್ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ನಿರ್ವಹಿಸುತ್ತಾರೆ. ಮತದಾರ ಪಟ್ಟಿಯಲ್ಲಿ ನೊಂದಾವಣೆಗೊಂಡು ಮತದಾನದ ಹಕ್ಕನ್ನು ಪಡೆಯುವುದು ಮೂಲಭೂತ ಹಕ್ಕಾಗಿರದೇ ಕಾನೂನುಬದ್ಧ ಹಕ್ಕಾಗಿದೆ. ಹೀಗಾಗಿ ಮತದಾರ ಪಟ್ಟಿಯಿಂದ ಯಾವುದೇ ವ್ಯಕ್ತಿ ಹೊರಗುಳಿಯಬಾರದು. ಕೀಳರಿಮೆ, ಭಯ, ದಾಸೀನತೆ ತೊರೆದು ಸರ್ವ ಪ್ರಜೆಗಳೂ ಮತದಾರರ ಪಟ್ಟಿಗೆ ಸೇರಲು ಮುಂದಾಗಲು ಭಾರತದಲ್ಲಿ ಸಾಕಷ್ಟು ಸೂಕ್ತ ವಾತಾವರಣವಿರುವುದು ಸಮಾಧಾನದ ಸಂಗತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ