ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲ ಒಳಗೊಂಡಿರುವ ಮಾಹಿತಿ ಆಧರಿಸಿದ ವಿವರಣೆ:
ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೆಲವು ಸಾಮಾನ್ಯ ನಿರ್ಭಂಧಗಳನ್ನು ಪೂರೈಸಿದರೆ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಪೌರ ಅನುಭವಿಸುವ ಹಲವು ರಾಜಕೀಯ ಹಕ್ಕುಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಹಕ್ಕೂ ಸೇರಿದೆ. ಸಂವಿಧಾನದ 84 [A] ಉಪವಿಧಿ ಸಂಸತ್ತಿಗೆ ಹಾಗು 173 [A] ಉಪವಿಧಿ ರಾಜ್ಯಗಳ ವಿಧಾನಸಭೆಗೆ ಪೌರನಲ್ಲದ ವಿದೇಶಿಗ ಸ್ಪರ್ಧಿಸುವುದನ್ನು ನಿರ್ಭಂಧಿಸಿದೆ. ಸಂವಿಧಾನದ 84 [B] ಹಾಗು 173 [B] ಉಪವಿಧಿಗಳು ಕ್ರಮವಾಗಿ ಲೋಕಸಭಾ ಮತ್ತು ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿಗಳು ಕನಿಷ್ಟ 25 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕೆಂದು ತಿಳಿಸಿವೆ. ಈ ವಯೋಮಿತಿಯ ವಿಚಾರವನ್ನು ಪ್ರಜಾಪ್ರತಿನಿಧಿ ಕಾಯಿದೆ 1950 ರ ಸೆಕ್ಷನ್ 36 [2] ಸಹ ಧ್ವನಿಸುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ಹೊಂದದ ವ್ಯಕ್ತಿಯು ಚುನಾವಣೆಯಲ್ಲಿ ಸ್ಪರ್ಧಾಳುವಾಗಲು ಅವಕಾಶವಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 4 [D] ಹಾಗು 5 [C] ಯಂತೆ ಕ್ರಮವಾಗಿ ಲೋಕಸಭಾ ಮತ್ತು ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಯಾವುದೇ ಒಂದು ಮತಕ್ಷೇತ್ರದಲ್ಲಿ ಮತದಾರನಾಗಿ ನೊಂದಾವಣೆಗೊಂಡಿರಬೇಕು. ದೆಹಲಿಯಲ್ಲಿ ಮತದಾರನಾಗಿ ನೊಂದಾಯಿತಗೊಂಡ ಅಭ್ಯರ್ಥಿಯು ಭಾರತದ ಕೇರಳ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಲೋಕಸಭಾ ಮತಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಬಹುದು. ಉದಾ: ಸೋನಿಯಾ ಗಾಂಧಿ 2004 ರಲ್ಲಿ ಬಳ್ಳಾರಿಯಿಂದ, ನರೇಂದ್ರ ಮೋದಿ 2014 ರಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದರು. ಈ ತತ್ವವು ರಾಜ್ಯಗಳ ವಿಧಾನಸಭಾ ಮತಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಅಂದರೆ ರಾಜ್ಯದ ಯಾವುದೇ ಮತಕ್ಷೇತ್ರದಲ್ಲಿ ನೊಂದಾಯಿತ ಮತದಾರನಾಗಿದ್ದರೂ ರಾಜ್ಯದ ಯಾವುದೇ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಬಹುದಾಗಿದೆ. ಉದಾ: 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಶಿಕಾರಿಪುರದ ವಿಜಯೇಂದ್ರ ಮೈಸೂರಿನ ವರುಣಾದಲ್ಲಿ, ಬಳ್ಳಾರಿಯ ಶ್ರೀರಾಮಲು ಚಿತ್ರದುರ್ಗದ ಮೊಣಕಾಲ್ಮೂರಿನಿಂದ, ಹಾಸನದ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿದ್ದರು. ಆದರೆ ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 4 [C], 4 [CC], 4 [CCC] ಯಂತೆ ಅಸ್ಸಾಂ, ಲಕ್ಷದ್ವೀಪ ಹಾಗು ಸಿಕ್ಕಿಂನಲ್ಲಿ ಆ ರಾಜ್ಯದಲ್ಲಿ ನೊಂದಾಯಿತ ಮತದಾರರು ಮಾತ್ರ ಲೋಕಸಭಾ ಹಾಗು ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 8 [3] ರಂತೆ ವಿವಿಧ ಅಪರಾಧಗಳಡಿ ಎರಡು ವರ್ಷಗಳು ಅಥವ ಎರಡಕ್ಕಿಂತ ಹೆಚ್ಚು ವರ್ಷಗಳ ಕಾಲ ಶಿಕ್ಷೆಗೊಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದನ್ನು ನಿರ್ಬಂಧಿಸಲಾಗಿದೆ. ಶಿಕ್ಷಿತ ವ್ಯಕ್ತಿಯು ಜಾಮೀನಿನ ಮೇಲೆ ಹೊರಗಿದ್ದು ಆತನ ಮೇಲ್ಮನವಿಯ ವಿಚಾರಣಾ ಹಂತದಲ್ಲಿದ್ದರೆ ಅಂಥವರೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 62 [5] ರಂತೆ ಜೈಲು ಶಿಕ್ಷೆಗೆ ಒಳಗಾದ ಅಥವ ನ್ಯಾಯಾಂಗ ಬಂಧನದಡಿ ಪೋಲೀಸರ ವಶದಲ್ಲಿರುವ ವ್ಯಕ್ತಿಯು ಚುನಾವಣೆಯ ವೇಳೆ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ತನ್ನ ನಾಮಪತ್ರದೊಡನೆ ಭದ್ರತಾ ಠೇವಣಿಯನ್ನು ನೀಡಬೇಕಾಗುತ್ತದೆ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 34 [1A] ಯಂತೆ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವ ಮೇದುವಾರ 25 ಸಾವಿರ ಭದ್ರತಾ ಠೇವಣಿ ಮೊತ್ತವನ್ನು ಭರಿಸಬೇಕಾಗುತ್ತದೆ. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಧದಷ್ಟು ಅಂದರೆ 12500 ರೂಗಳನ್ನು ಠೇವಣಿಯಾಗಿ ನೀಡಬೇಕಾಗುತ್ತದೆ. ಹಾಗೆಯೇ ರಾಜ್ಯಗಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು 10 ಸಾವಿರ ರೂಗಳನ್ನು ಠೇವಣಿ ಮೊತ್ತ ನೀಡಬೇಕಾಗುತ್ತದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಅರ್ಧದಷ್ಟು ಅಂದರೆ 5 ಸಾವಿರ ರೂಗಳನ್ನು ಠೇವಣಿ ಮೊತ್ತವೆಂದು ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 34 [1B] ತಿಳಿಸುತ್ತದೆ. 1996 ರ ಸಾರ್ವತ್ರಿಕ ಚುನಾವಣೆಯಲ್ಲಿ ಹಾಗು ಅದಕ್ಕಿಂತ ಮೊದಲಿನ ಚುನಾವಣೆಗಳಲ್ಲಿ ಲೋಕಸಭೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರೂ ಮತ್ತು ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 250 ರೂಗಳನ್ನು ಮಾತ್ರ ಠೇವಣಿ ರೂಪದಲ್ಲಿ ನೀಡುತ್ತಿದ್ದರು. ರಾಜ್ಯಗಳ ವಿಧಾನಸಭೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದವರು ಕೇವಲ 250 ರೂಗಳನ್ನು ಮತ್ತು ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರು 125 ರೂಗಳನ್ನು ಮಾತ್ರ ಠೇವಣಿಯಾಗಿ ನೀಡುತ್ತಿದ್ದರು. ಕಡಿಮೆ ಮೊತ್ತದ ಠೇವಣಿಯಿಂದ ಚುನಾವಣಾ ಕಣದಲ್ಲಿ ಅಸಂಖ್ಯ ಸ್ಪರ್ಧಾಳುಗಳು ಕಾಣಿಸಿಕೊಳ್ಳತೊಡಗಿದರು. 1996 ರ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮೊದಕುರಿಚಿ ಮತಕ್ಷೇತ್ರದಲ್ಲಿದೇಶದ ಚುನಾವಣಾ ಇತಿಹಾಸದಲ್ಲಿ ದಾಖಲೆಯ 1033 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಆದರೆ 2009 ರಿಂದ ಠೇವಣಿ ಮೊತ್ತದಲ್ಲಿ ಮೇಲಿನಂತೆ ಬದಲಾವಣೆಯನ್ನು ತರಲಾಯಿತು. ನಿರ್ದಿಷ್ಟ ಮತಕ್ಷೇತ್ರದಲ್ಲಿ ಚಲಾವಣೆಗೊಂಡ ಯೋಗ್ಯ ಮತಗಳಲ್ಲಿ ಆರನೇ ಒಂದರಷ್ಟು ಮತಗಳಿಸದ ಅಭ್ಯರ್ಥಿ ನಾಮಪತ್ರದೊಡನೆ ಸಲ್ಲಿಸಿದ ಠೇವಣಿ ಮೊತ್ತವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಭ್ಯರ್ಥಿಯು ಚುನಾವಣೆಯಲ್ಲಿ ಸೋತು ಆರನೇ ಒಂದರಷ್ಟು ಮತಕ್ಕಿಂತ ಹೆಚ್ಚು ಮತ ಗಳಿಸಿದ್ದರೆ ಆತನ ಠೇವಣಿ ಮೊತ್ತವನ್ನು ಹಿಂತಿರುಗಿಸಲು ಅವಕಾಶವಿದೆ. ಚುನಾವಣಾ ಕಣಕ್ಕೆ ಧುಮುಕುವ ಮಾನ್ಯತೆ ಪಡೆದ ರಾಷ್ಟ್ರೀಯ ಅಥವ ಪ್ರಾದೇಶಿಕ ಪಕ್ಷದ ಉಮೇದುವಾರನು ನಾಮಪತ್ರ ಸಲ್ಲಿಸುವಾಗ ಸ್ಪರ್ಧಿಸುವ ಮತಕ್ಷೇತ್ರದ ಬ್ಬ ಮತದಾರ ಮಾತ್ರ ಸೂಚಕನಾಗಬೇಕೆಂದು ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 33 ತಿಳಿಸುತ್ತದೆ. ಸ್ಪರ್ಧಾಳು ಪಕ್ಷೇತರನಾಗಿ ಅಥವ ಮಾನ್ಯತೆ ಪಡೆಯದ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲಿ ಆತನು ನಾಮಪತ್ರ ಸಲ್ಲಿಸುವಾಗ ಸ್ಪರ್ಧಿಸುವ ಮತಕ್ಷೇತ್ರದ ಹತ್ತು ಮತದಾರರು ಸೂಚಕರನ್ನು ಹೊಂದಬೇಕೆಂದು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 33 ತಿಳಿಸುತ್ತದೆ. ಒಬ್ಬ ವ್ಯಕ್ತಿಯು ತಾನು ಇಷ್ಟಪಡುವಷ್ಟು ಮತಕ್ಷೇತ್ರಗಳಿಗೆ ಸ್ಪರ್ಧಿಸಲು ಅವಕಾಶವಿಲ್ಲ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 33 [7] ತಿಳಿಸುವಂತೆ ವ್ಯಕ್ತಿಯೊಬ್ಬ ರಡು ಮತಕ್ಷೇತ್ರಕ್ಕಿಂತ ಹೆಚ್ಚು ಮತಕ್ಷೇತ್ರದಲ್ಲಿ ಸ್ಪರ್ಧಾಳುವಾಗಿ ನಾಮಪತ್ರ ಸಲ್ಲಿಸಲು ಸಾಧ್ಯವಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ