ಗುರುವಾರ, ಜುಲೈ 1, 2021

ಸ್ವಾತಂತ್ರ್ಯ ಕುರಿತಂತೆ ಜೆ. ಎಸ್. ಮಿಲ್ನ ವಿಚಾರಗಳು:

ಪೀಠಿಕೆ: ಸ್ವಾತಂತ್ರ್ಯವು ರಾಜಕೀಯ ಸಿದ್ಧಾಂತದ ಮೂಲಭೂತ ಪರಿಕಲ್ಪನೆಗಳಲ್ಲಿ ಒಂದಾಗಿದೆ. ಪ್ರಾಚೀನ ಹಾಗು ಮಧ್ಯಯುಗದಲ್ಲಿ ಸಮಕಾಲಿನ ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಜಾರಿಯಲ್ಲಿರಲಿಲ್ಲ. ಗ್ರೀಕ್ ಚಿಂತಕರು ವೈಯಕ್ತಿಕ ಸ್ವಾತಂತ್ರ್ಯವು ಸಮಾಜ ಹಾಗೂ ರಾಜ್ಯದ ಕಾನೂನಿಗೆ ಅಧೀನವೆಂದು ನಂಬಿದ್ದರು. ಆದ್ದರಿಂದಲೇ ಚಿಂತಕ ಸಾಕ್ರಟಿಸ್ ಜೈಲುವಾಸ ಅನುಭವಿಸಿದನಲ್ಲದೇ ಹೇಮ್ಲಾಕ್ ವಿಷ ಸೇವಿಸಿದ್ದನು. ಅಂದು ವ್ಯಕ್ತಿಗಳಿಗೆ ರಾಜ್ಯದ ವಿರುದ್ಧ ಯಾವ ಹಕ್ಕುಗಳೂ ಇರದಿದ್ದರಿಂದ ಸ್ವಾತಂತ್ರ್ಯದ ಚರ್ಚೆ ಮುನ್ನೆಲೆಗೆ ಬರಲಿಲ್ಲ ಎನ್ನಬಹುದು. ಮಧ್ಯಯುಗದಲ್ಲಿ ವ್ಯಕ್ತಿ ಸ್ವಾತಂತ್ರ್ಯ ದೈವಿಕ ನಂಬಿಕೆಯಡಿ ಬಂಧಿಸಲ್ಪಟ್ಟಿತ್ತು. ಈ ಯುಗದ ಕೊನೆಯಲ್ಲಿ ಘಟಿಸಿದ ಪುನರುಜ್ಜೀವನ ಚಳುವಳಿ ಫಲವಾಗಿ ಚರ್ಚ್ ವಿರುದ್ಧ ಧಾರ್ಮಿಕ, ಪಾಳೇಗಾರರ ವಿರುದ್ಧ ಆರ್ಥಿಕ ಹಾಗು ಅರಸರ ವಿರುದ್ಧ ರಾಜಕಿಯ ಸ್ವಾತಂತ್ರ್ಯದ ಕೂಗು ಕೇಳಲಾರಂಭಿಸಿತು. ಆಧುನಿಕ ಯುಗದಲ್ಲಿ ಜರುಗಿದ ಕೈಗಾರಿಕಾ ಕ್ರಾಂತಿಯಿಂದ  ವ್ಯಕ್ತಿವಾದ ಸಿದ್ಧಾಂತವು ಉದಯಗೊಂಡಿತು. ಗಮನಿಸಬೇಕಾದ ಅಂಶವೇನೆಂದರೆ ಫ್ರಾನ್ಸಿನ ಮಹಾ ಕ್ರಾಂತಿಯ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯ ಮೌಲ್ಯಗಳು  ಈ ಸಿದ್ಧಾಂತಕ್ಕೆ ಸ್ಪೂರ್ತಿಯನ್ನೊದಗಿಸಿದವು. ಪರಿಣಾಮ ಸಮಕಾಲಿನ ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಎಲ್ಲೆಡೆ ಬಲಗೊಂಡಿತು. ಜಾನ್ ಮಿಲ್ಟನ್, ವೊಲ್ಟೇರ್, ಥಾಮಸ್ ಪೇಯ್ನ್, ರೂಸೊ, ಥಾಮಸ್ ಜಫರ್ಸನ್ ಮುಂತಾದ ಚಿಂತಕರು ವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ತಮ್ಮದೇಯಾದ ವಿಚಾರಗಳನ್ನು ಮಂಡಿಸಿದರು.


ಕೈಗಾರಿಕಾ ಕ್ರಾಂತಿಯ ಪರಿಣಾಮ ಇಂಗ್ಲೆಂಡಿನಲ್ಲಿ ಸರ್ಕಾರಗಳು ವೈವಿಧ್ಯಮಯ ಸವಾಲುಗಳನ್ನು ಎದುರಿಸಬೇಕಾಯಿತು. ನಿರುದ್ಯೋಗ, ಬಡತನ, ಹಸಿವು, ಸಾರಿಗೆ ಸಂಪರ್ಕ, ಕೊಳಗೇರಿಗಳ ನಿರ್ವಹಣೆ, ಆರೋಗ್ಯ ರಕ್ಷಣೆ ಅವುಗಳಲ್ಲಿ ಪ್ರಮುಖವಾಗಿದ್ದವು. ಇದರೊಡನೆ ಕಲ್ಯಾಣ ರಾಜ್ಯದ ಗುರಿಯನ್ನು ಸಾಕಾರಗೊಳಿಸಲು ನಾನಾ ಯೋಜನೆ ಮತ್ತು ಕಾನೂನುಗಳನ್ನು ಅನುಷ್ಟಾನಗೊಳಿಸಬೇಕಾದ ಅನಿವಾರ್ಯತೆ ಸರ್ಕಾರಗಳಿಗೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಜಾರಿಗೊಂಡ ಸರ್ಕಾರದ ಕಾನೂನು, ನೀತಿ ಅಥವಾ ನಿರ್ಧಾರಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡತೊಡಗಿದವು. ಇಂತಹ ಸಮಯದಲ್ಲಿ ಇಂಗ್ಲೆಂಡಿನ ಶ್ರೇಷ್ಠ ರಾಜಕೀಯ ಚಿಂತಕರಲ್ಲೊಬ್ಬನಾದ ಜೆ. ಎಸ್. ಮಿಲ್ ಸ್ವಾತಂತ್ರ್ಯ ಕುರಿತಾದ ತನ್ನ ವಿಚಾರಗಳನ್ನು ಆನ್ ಲಿಬರ್ಟಿ ಎಂಬ ಗ್ರಂಥದಲ್ಲಿ ಮಂಡಿಸಿದನು. ಸಮಾಜ ಕಲ್ಯಾಣದ ಕಾರಣಕ್ಕಾಗಿ ವ್ಯಕ್ತಿ ಸ್ವಾತಂತ್ರ್ಯ ಬಲಿ ಕೊಡುವ ಸರ್ಕಾರದ ನೀತಿಗಳನ್ನು ಮಿಲ್ ಖಂಡಿಸಿದ. ಸ್ವಾತಂತ್ರ್ಯ ಕುರಿತಂತೆ ಚಿಂತನೆ ಮಂಡಿಸಿದ ಇತರ ಚಿಂತಕರಿಗಿಂತ ಭಿನ್ನವಾದ ತನ್ನ ವಿಚಾರಗಳನ್ನು ಪ್ರತಿಪಾದಿಸಿ (ಸ್ವಾತಂತ್ರ್ಯದ ಹರಿಕಾರ) ಎನಿಸಿದನು. ಸ್ವಾತಂತ್ರ್ಯದ ವ್ಯಾಪ್ತಿ, ಮಹತ್ವ, ಅರ್ಹತೆಗಳು, ವರ್ಗೀಕರಣ ಕುರಿತಾದ ಮಿಲ್ನ ವಿಚಾರಗಳು ಅತ್ಯಂತ ಆಕರ್ಷಣೀಯವಾಗಿವೆ. ಈ ಕೆಳಗೆ ಸ್ವಾತಂತ್ರ್ಯ ಕುರಿತಂತೆ ಜೆ. ಎಸ್. ಮಿಲ್ ಮಂಡಿಸಿರುವ ಸಮಗ್ರ ವಿಚಾರಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

1. ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಶಸ್ತ್ಯ: ಮಿಲ್ನು ಪ್ರತಿಪಾದಿಸಿರುವ ಸ್ವಾತಂತ್ರ್ಯದ ವಿಚಾರಗಳು ವ್ಯಕ್ತಿ ಕೇಂದ್ರಿತವಾಗಿದ್ದವು. ವ್ಯಕ್ತಿಗೆ ಅನಿರ್ಬಂಧಿತ ಸ್ವಾತಂತ್ರ್ಯ ಇರಬೇಕೆಂದು ಮಿಲ್ ಪ್ರತಿಪಾದಿಸಿದನು. ನಿರ್ಬಂಧ ರಹಿತ ಸ್ವಾತಂತ್ರ್ಯದಿಂದ ವ್ಯಕ್ತಿ ತನ್ನ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ನಾನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾನೆ. ಆಗ ಸಮಾಜದಲ್ಲಿ ವೈವಿಧ್ಯತೆ ಮೂಡಿ ಬರುವುದೆಂಬುದು ಆತನ ನಂಬಿಕೆಯಾಗಿತ್ತು. ಜೊತೆಗೆ ನಿರ್ಬಂಧ ಹೇರುವುದರಿಂದ ವ್ಯಕ್ತಿಯ ಜೀವನವೇ ನೀರಸಗೊಳ್ಳುವ ಸಾಧ್ಯತೆಯನ್ನು ಮಿಲ್ ಊಹಿಸಿದ್ದನು. ಈ ಹಿನ್ನೆಲೆಯಲ್ಲಿ ವ್ಯಕ್ತಿ ಆಕಾಶದಲ್ಲಿ ಮುಕ್ತವಾಗಿ ಹಾರಾಡುವ ಹಕ್ಕಿಗಳಂತೆ ಸಮಾಜದಲ್ಲಿ ವ್ಯಕ್ತಿಗಳು ಜೀವಿಸುವ ವಾತಾವರಣ ಕಲ್ಪಿಸಲು ಒಲವು ವ್ಯಕ್ತಪಡಿಸಿದನು. ಮುಂದುವರೆದು ಮಿಲ್ ವ್ಯಕ್ತಿ ಸ್ವಾತಂತ್ರ್ಯ ನೀಡಿಕೆ ವ್ಯಕ್ತಿಗಳ ವೈಯಕ್ತಿಕ ಸಾಧನೆಗೆ ತನ್ಮೂಲಕ ಸಮಾಜದ ಪ್ರಗತಿಗೆ ಕಾರಣವಾಗಬಲ್ಲದು ಎಂಬ ವಿಶ್ವಾಸ ಹೊಂದಿದ್ದನು. ಹೀಗಾಗಿ ಜೆ. ಎಸ್. ಮಿಲ್ ವ್ಯಕ್ತಿ ಸ್ವಾತಂತ್ರ್ಯಕ್ಕೆ ತನ್ನ ಚಿಂತನೆಯಲ್ಲಿ ಅಗ್ರ ಸ್ಥಾನ ನೀಡಿದ್ದ ಎನ್ನಬಹುದಾಗಿದೆ.

2. ಕ್ರಿಯೆಗಳ ವರ್ಗೀಕರಣ: ಮಿಲ್ನು ಒಬ್ಬ ವ್ಯಕ್ತಿಯ ಜೀವನದ ಎರಡು ಆಯಾಮಗಳನ್ನು ಪ್ರತಿಪಾದಿಸಿದ್ದನು. ಅವುಗಳೆಂದರೆ ಜೀವನದ ವೈಯಕ್ತಿಕ ಾಯಾಮ ಹಾಗೂ ಸಾಮಾಜಿಕ ಆಯಾಮ. ಮುಂದುವರೆದು ವ್ಯಕ್ತಿಯ ಜೀವನದ ವೈಯಕ್ತಿಕ ಆಯಾಮದ ಕ್ರಿಯೆ ಅಥವಾ ಚಟುವಟಿಕೆಗಳನ್ನು ತನಗೆ ಸಂಬಂಧಿಸಿದ (ಸ್ವ ನಿಷ್ಠ) ಮತ್ತು ಇತರರಿಗೆ ಸಂಬಂಧಿಸಿದ (ಪರ ನಿಷ್ಠ) ಎಂಬ ಎರಡು ವರ್ಗಗಳಲ್ಲಿ ವಿಂಗಡಿಸಿ ತನ್ನ ಸ್ವಾತಂತ್ರ್ಯದ ವಿಚಾರಗಳನ್ನು ಮಂಡಿಸಿರುವನು.
ಅ. ತನಗೆ ಸಂಬಂಧಿಸಿದ ಕ್ರಿಯೆಗಳು: ವ್ಯಕ್ತಿ ಕೈಗೊಳ್ಳುವ ಚಟುವಟಿಕೆಗಳು ಆತನಿಗೆ ಮಾತ್ರ ಅನ್ವಯಿಸುತ್ತಿದ್ದರೆ ಅವುಗಳನ್ನು ಸ್ವ ನಿಷ್ಠ ಅಥವಾ ತನಗೆ ಸಂಬಂಧಿಸಿದ ಕ್ರಿಯೆಗಳೆಂಬುದು ಮಿಲ್ನ ವಿಚಾರವಾಗಿತ್ತು. ಈ ಬಗೆಯ ಕ್ರಿಯೆಗಳಿಂದ ಇತರರಿಗೆ ಯಾವುದೇ ಹಾನಿಯಾಗಲಿ, ತೊಂದರೆಯಾಗಲಿ, ಧಕ್ಕೆಯಾಗಲಿ ಉಂಟಾಗುವುದಿಲ್ಲ. ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಗೆ ಮಾತ್ರ ಅದರ ಪರಿಣಾಮ ಅನ್ವಯಿಸುತ್ತದೆ. ಉದಾ: ಆಹಾರವನ್ನು ಬಿಟ್ಟರೆ ಬಿಟ್ಟವನನ್ನು ಮಾತ್ರ ಹಸಿವು ಬಾಧಿಸುವುದು, ಶ್ರಮವಹಿಸಿ ಓದಿದ ವಿದ್ಯಾರ್ಥಿಗೆ ಅಧಿಕ ಅಂಕಗಳು ದೊರೆಯುವುದು, ಆರೋಗ್ಯವನ್ನು ನಿರ್ಲಕ್ಷಿಸಿದವನು ಅನಾರೋಗ್ಯಕ್ಕೆ ತುತ್ತಾಗುವುದು ಇತ್ಯಾದಿ. ಮಿಲ್ನ ಪ್ರಕಾರ ನಾವೆಲ್ಲ ದೈನಂದಿನ ಜೀವನದಲ್ಲಿ ಕೈಗೊಳ್ಳುವ  ಆಹಾರ ಸೇವನೆ, ಉಡುಪುಗಳ ಆಯ್ಕೆ, ಧರ್ಮದ ಪಾಲನೆ, ಅನುರೂಪವಾದ ಅರ್ಧಾಂಗಿಯನ್ನು ಆರಿಸಿಕೊಳ್ಳುವುದು ಮುಂತಾದವು ತನಗೆ ಸಂಬಂಧಿಸಿದ ಕ್ರಿಯೆಗಳೆನಿಸುತ್ತವೆ. ವ್ಯಕ್ತಿಯ ಈ ಕ್ರಿಯೆಗಳ ಮೇಲೆ ವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕೆಂದು ಮಿಲ್ ಪ್ರತಿಪಾದಿಸಿರುವ. ಅಲ್ಲದೇ ವ್ಯಕ್ತಿ ತನ್ನ ಶರೀರ ಹಾಗೂ ಮನಸ್ಸಿನ ಮೇಲೆ  ಸಾರ್ವಭೌಮ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ. ವ್ಯಕ್ತಿ ತನಗೆ ಸಂಬಂಧಿಸಿದ ಕ್ರಿಯೆಗಳ ಮೂಲಕ ತನ್ನ ಹಿತವನ್ನೇ ಕಡೆಗಣಿಸಲು ಮುಂದಾದಾಗ ಮಾತ್ರವೇ ಸರ್ಕಾರವು ಹಸ್ತಕ್ಷೇಪ ಮಾಡಬಹುದೆಂಬುದು ಮಿಲ್ನ ವಾದವಾಗಿತ್ತು. ಉದಾ: ಮಾಧಕ ವಸ್ತುಗಳ ಸೇವನೆ, ಪ್ರಕ್ಷುಬ್ದ ಸ್ಥಳದಲ್ಲಿ ಸಂಚಾರ, ವಿಷ ಪ್ರಹಶನದಂತಹ ಕ್ರಿಯೆಗಳ ಸಮಯದಲ್ಲಿ ಮಾತ್ರ ಸರ್ಕಾರ ತನಗೆ ಸಂಬಂಧಿಸಿದ ಕ್ರಿಯೆಗಳಲ್ಲಿ ಹಸ್ತಕ್ಷೇಪಕ್ಕೆ ಮುಂದಾಗುವುದು. ಸರ್ಕಾರದ ಈ ಕ್ರಮವು ವ್ಯಕ್ತಿ ಸ್ವಾತಂತ್ರ್ಯದ ಹರಣವಾಗಲಾರದು ಎಂಬುದು ಮಿಲ್ನ ನಂಬಿಕೆಯಾಗಿತ್ತು.

ಆ. ಇತರರಿಗೆ ಸಂಬಂಧಿಸಿದ ಕ್ರಿಯೆಗಳು: ವ್ಯಕ್ತಿ ಕೈಗೊಳ್ಳುವ ಚಟುವಟಿಕೆಗಳು ಸಮಾಜದಲ್ಲಿನ ಇತರರಿಗೂ ಅನ್ವಯವಾಗುವಂತಿದ್ದರೆ ಅವುಗಳು ಪರನಿಷ್ಠ ಅಥವಾ ಇತರರಿಗೆ ಸಂಬಂಧಿಸಿದ ಕ್ರಿಯೆಗಳೆಂಬುದು ಮಿಲ್ನ ವಿಚಾರವಾಗಿತ್ತು. ಈ ಬಗೆಯ ಕ್ರಿಯೆಗಳಿಂದ ಸಮಾಜದಲ್ಲಿನ ಇತರರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಾನಿ, ತೊಂದರೆ ಅಥವಾ ಧಕ್ಕೆ ಉಂಟಾಗುತ್ತದೆ. ಈ ಪ್ರಕಾರದ ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಗೆ ಮಾತ್ರವಲ್ಲದೇ ಆತನ ಸುತ್ತಲಿರುವ ವ್ಯಕ್ತಿಗಳಿಗೂ ಅದು ಪ್ರಭಾವ ಬೀರುತ್ತದೆ. ಉದಾ: ಸಿಗರೇಟು ಸೇವನೆ, ಜೋರಾಗಿ ಸಂಗೀತ ಆಲಿಸುವಿಕೆ, ಗೃಹ ಬಂಧನ ಉಲ್ಲಂಘಿಸಿ ಸಾಂಕ್ರಾಮಿಕ ರೋಗಿ ಸಂಚರಿಸುವಿಕೆ ಇತ್ಯಾದಿ. ಮಿಲ್ನ ಪ್ರಕಾರ ನಾವೆಲ್ಲ ದೈನಂದಿನ ಜೀವನದಲ್ಲಿ ಗಮನಿಸುವ ಭಯೋತ್ಪಾದನೆ, ಕಲಬೆರಕೆ ವಸ್ತುಗಳ ಮಾರಾಟ, ನಕಲಿ ವೈಧ್ಯಕೀಯ ಸೇವೆ ಮುಂತಾದವು ಇತರರಿಗೆ ಸಂಬಂಧಿಸಿದ ಕ್ರಿಯೆಗಳೆನಿಸುತ್ತವೆ. ವ್ಯಕ್ತಿಯ ಈ ಕ್ರಿಯೆಗಳ ಮೇಲೆ ಸರ್ಕಾರವು ಅಗತ್ಯ ನಿರ್ಬಂಧ ಹೇರಬಹುದೆಂಬುದು ಮಿಲ್ನ ಅಭಿಮತವಾಗಿತ್ತು. ಮುಂದುವರೆದು ಮಿಲ್ ವ್ಯಕ್ತಿಯ ಇತರರಿಗೆ ಸಂಬಂಧಿಸಿದ ಕ್ರಿಯೆಗಳ ಮೇಲೆ ಸಕಾರಣಕ್ಕೆ ನಿರ್ಬಂಧ ಹೇರಲು ಸಮ್ಮತಿಸಿದ್ದನು.

3. ಸಮಾಜ ಅಥವಾ ರಾಜ್ಯದ ನಿಯಂತ್ರಣಕ್ಕೆ ವಿರೋಧ: ಮಿಲ್ನು ರೂಢಿ ಹಾಗೂ ಸಂಪ್ರದಾಯಗಳಿಂದ ಕೂಡಿರುವ ಸಾಮಾಜಿಕ ನಿಯಂತ್ರಣವನ್ನು ಸರ್ವಾಧಿಕಾರತ್ವಕ್ಕೆ ಹೋಲಿಸಿದ್ದನು. ಕಾನೂನಿಗಿಂತ ರೂಢಿ ಹಾಗೂ ಸಂಪ್ರದಾಯಗಳು ವ್ಯಕ್ತಿಯನ್ನು ಪ್ರಭಾವಿಸಿ ಆತನ ಚಿಂತನಾ ಸಾಮರ್ಥ್ಯ ಕುಸಿಯುವಂತೆ ಮಾಡುವವೆಂಬುದು ಮಿಲ್ನ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ತೊಡಕಾಗುವ ರೂಢಿ ಹಾಗೂ ಸಂಪ್ರದಾಯಗಳ ರೂಪದಲ್ಲಿನ ಸಾಮಾಜಿಕ ನಿಯಂತ್ರಣವನ್ನು ಮಿಲ್ ಸಮ್ಮತಿಸಲಿಲ್ಲ. ಭಾರತೀಯ ಸಮಾಜದಲ್ಲಿರುವ ಜೀತ ಪದ್ಧತಿ, ವಿಧವಾ ಮರು ವಿವಾಹ ನಿಷೇಧ, ಅಸ್ಪೃಷ್ಯತಾ ಪಾಲನೆಯಂತಹ ಸಾಮಾಜಿಕ ನಿಯಂತ್ರಣದ ಸಾಧನಗಳನ್ನು ಮಿಲ್ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವೆಂಬ ಆಧಾರದ ಮೇಲೆ ವಿರೋಧಿಸಿದನು. ಮುಂದುವರೆದು ರಾಜ್ಯವು ತನ್ನ ಸೇವಕನಾದ ಸರ್ಕಾರದ ಮೂಲಕ ವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವುದನ್ನೂ ಮಿಲ್ ಬಲವಾಗಿ ಟೀಕಿಸಿದ್ದನು. ಸಮಾಜ ಕಲ್ಯಾಣದ ನೆಪವೊಡ್ಡಿ ಸರ್ಕಾರಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಕಾನೂನು, ನೀತಿ ಅಥವಾ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಂಡಿಸಿದ್ದನು. ನಿರ್ಬಂಧ ರಹಿತತೆಯೇ ಸ್ವಾತಂತ್ರ್ಯ ಎಂಬುದನ್ನು ಪ್ರತಿಪಾದಿಸಿದ ಮಿಲ್ ವ್ಯಕ್ತಿಯ ಮೇಲೆ ಸಮಾಜ ಅಥವಾ ರಾಜ್ಯ ಹೇರುವ ನಿಯಂತ್ರಣಗಳನ್ನು ಸಮ್ಮತಿಸಿರಲಿಲ್ಲ.

4. ಸ್ವಾತಂತ್ರ್ಯ ಅನುಭವಿಸಲು ಅರ್ಹತೆಗಳ ಪ್ರತಿಪಾದನೆ: ಮಿಲ್ನು ಸಮಾಜದಲ್ಲಿನ ಸರ್ವರಿಗೂ ಸಮಾನ ಸ್ವಾತಂತ್ರ್ಯ ನೀಡಿಕೆಯನ್ನು ಸಮ್ಮತಿಸಿರಲಿಲ್ಲ. ಆತನ ಪ್ರಕಾರ ಪ್ರಜ್ಙಾವಂತ ಪ್ರೌಢ ವ್ಯಕ್ತಿಗಳು ಮಾತ್ರ ಸ್ವಾತಂತ್ರ್ಯವನ್ನು ಮುಕ್ತವಾಗಿ ಅನುಭವಿಸಲು ಅರ್ಹರಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಮಕ್ಕಳು, ಯುವಕರು, ಮತಿ ವಿಕಲರು ಮತ್ತು ಹಿಂದುಳಿದ ಜನಾಂಗದವರು ಸ್ವಾತಂತ್ರ್ಯ ಅನುಭವಿಸಲು ಅನರ್ಹರೆಂಬುದು ಮಿಲ್ನ ಅಭಿಮತವಾಗಿತ್ತು. ತಾವು ಪಡೆದಿರುವ ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಹಾಗೂ ಸದುದ್ದೇಶಕ್ಕಾಗಿ ಬಳಸಲು ಪ್ರಸ್ತಾಪಿತ ವರ್ಗದ ವ್ಯಕ್ತಿಗಳಿಗೆ ಸಾಧ್ಯವಾಗದು ಎಂಬುದು ಮಿಲ್ನ ನಂಬಿಕೆಯಾಗಿತ್ತು. ಇದರೊಡನೆ ಸನ್ನಿವೇಶಕ್ಕೆ ಅನುಗುಣವಾಗಿ ಸ್ವಾತಂತ್ರ್ಯ ಬಳಸುವ ಸೂಕ್ತ ವಿವೇಚನೆ ಹೊಂದಿರದ ಅವಿದ್ಯಾವಂತ ವ್ಯಕ್ತಿಗಳೂ ಕೂಡಾ ಸ್ವಾತಂತ್ರ್ಯಕ್ಕೆ ಮಿಲ್ನ ದೃಷ್ಟಿಯಲ್ಲಿ ಅನರ್ಹರೆನಿಸಿದ್ದರು.

5. ಮಹಿಳಾ ಸ್ವಾತಂತ್ರ್ಯಕ್ಕೆ ಮಹತ್ವ: ಮಿಲ್ನು ತನ್ನ ಪೂರ್ವದ ಉದಾರವಾದಿ ಸಂಪ್ರದಾಯದ ಚಿಂತಕರಿಗಿಂತ ಭಿನ್ನವೆನಿಸಲು ಆತ ಮಹಿಳಾ ಸ್ವಾತಂತ್ರ್ಯಕ್ಕೆ ನೀಡಿದ ಮಹತ್ವ ಕಾರಣವಾಗಿದೆ. ಮಹಿಳೆಯರಿಗೆ ಮತದಾನ, ಸಮಾನ ಶಿಕ್ಷಣ, ಉದ್ಯೋಗದಂತಹ ಸ್ವಾತಂತ್ರ್ಯಗಳನ್ನೊದಗಿಸಿದರೆ ಮಹಿಳೆಯರ ಸ್ಥಾನಮಾನ ಸಮಾಜದಲ್ಲಿ ಸುಧಾರಿಸುತ್ತದೆ ಎಂಬುದು ಮಿಲ್ನ ನಂಬಿಕೆಯಾಗಿತ್ತು. ಆದ್ದರಿಂದ ಮಹಿಳೆಯರ ಮೇಲೆ ಹೇರಲಾಗುವ ನಿರ್ಬಂಧಗಳನ್ನು ಖಂಡಿಸಿದ ಮಿಲ್ ಅವರ ಸ್ವಾತಂತ್ರ್ಯವನ್ನು ಎತ್ತಿ ಹಿಡಿದನು. ಮಹಿಳೆ ವಿವಾಹದೊಡನೆ ಪುರುಷನ ಅಧೀನಳಾಗಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳುವಳೆಂಬುದನ್ನು ಮಿಲ್ನು ಗುರುತಿಸಿದ್ದ. ಜೊತೆಗೆ ಅವಿವಾಹಿತ ಮಹಿಳೆಯೂ ಸಹ ಸಮಾಜದ ಕಟ್ಟುಪಾಡುಗಳಿಗೆ ಒಳಗಾಗುವಳೆಂಬ ಸಂಗತಿಯನ್ನೂ ಮಿಲ್ ಅರಿತಿದ್ದ. ಹೀಗಾಗಿ ಮಹಿಳೆ ವಿವಾಹವಾದರೂ ಅಥವಾ ಅವಿವಾಹಿತೆಯಾದರೂ ಸ್ವಾತಂತ್ರ್ಯದಿಂದ ವಂಚಿತಳಾಗುತ್ತಾಳೆಂಬ ಅಭಿಪ್ರಾಯ ವ್ಯಕ್ತಪಡಿಸಿ ಅವಳ ಸುಧಾರಣೆಗೆ ಅಗತ್ಯ ಸ್ವಾತಂತ್ರ್ಯಗಳನ್ನು ಮಿಲ್ನು ತನ್ನ ವಿಚಾರಗಳಲ್ಲಿ ಪ್ರತಿಪಾದಿಸಿದ್ದನು.

6. ವಿವಿಧ ಸ್ವಾತಂತ್ರ್ಯಗಳ ಮಂಡನೆ: ವ್ಯಕ್ತಿಯ ಬೆಳವಣಿಗೆಗೆ ಸ್ವಾತಂತ್ರ್ಯ ಅನಿವಾರ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ ಮಿಲ್ನು ಅದಕ್ಕೆ ಪೂರಕವಾದ ಹಲವು ಸ್ವಾತಂತ್ರ್ಯಗಳನ್ನು ಮಂಡಿಸಿದ್ದನು. ವ್ಯಕ್ತಿಯ ಅರ್ಥಪೂರ್ಣ ಜೀವನಕ್ಕೆ ಆತ್ಮಸಾಕ್ಷಿಯ ಸ್ವಾತಂತ್ರ್ಯ, ವಿಚಾರ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ, ಸಂಘ ಸ್ಥಾಪನೆಯ ಸ್ವಾತಂತ್ರ್ಯ, ಅಭಿರುಚಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮುಂತಾದವುಗಳು ಅಗತ್ಯ ಎಂಬುದು ಮಿಲ್ನ ಅನಿಸಿಕೆಯಾಗಿತ್ತು. ಪ್ರಸ್ತಾಪಿತ ವಿವಿಧ ಸ್ವಾತಂತ್ರ್ಯಗಳಲ್ಲಿ ವಿಚಾರ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ವಿಶೇಷ ಒಲವನ್ನು ಮಿಲ್ನು ಹೊಂದಿದ್ದನು. ವಿವಿಧ,  ಸ್ವಾತಂತ್ರ್ಯಗಳು ವ್ಯಕ್ತಿಯಲ್ಲಿ ಸೃಜನಶೀಲತೆ ಬೆಳೆಸುವವೆಂಬುದು ಮಿಲ್ನ ನಂಬಿಕೆಯಾಗಿತ್ತು. ಮುಂದುವರೆದು ನಾಗರಿಕ ಮತ್ತು ನೈತಿಕ ಲಕ್ಷಣವನ್ನು ಮೈಗೂಡಿಸಿಕೊಳ್ಳಲು ಈ ವೈವಿಧ್ಯಮಯ ಸ್ವಾತಂತ್ರ್ಯಗಳು ವ್ಯಕ್ತಿಗೆ ನೆರವಾಗುವವೆಂಬುದು ಆತನ ಅಭಿಮತವಾಗಿತ್ತು.

ಒಟ್ಟಾರೆ ಸ್ವಾತಂತ್ರ್ಯ ಕುರಿತಂತೆ ಮಿಲ್ನು ತನ್ನ ಆನ್ ಲಿಬರ್ಟಿ ಕೃತಿಯಲ್ಲಿ ಮೇಲಿನ ವಿಚಾರಗಳನ್ನು ವ್ಯಕ್ತಪಡಿಸಿದ್ದಾನೆ. ಿವುಗಳ ಅವಲೋಕನದಿಂದ ಉಪಯುಕ್ತತೆ ಅಥವಾ ಸಂತೋಷಕ್ಕೂ ಮತ್ತು ಸ್ವಾತಂತ್ರ್ಯಕ್ಕೂ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ ವ್ಯಕ್ತಿಯ ಸಂತೋಷದ ಪ್ರಧಾನ ಮೂಲವಾಗಿರುವ ಸ್ವಾತಂತ್ರ್ಯವು ವ್ಯಕ್ತಿತ್ವದ ಬೆಳವಣಿಗೆಯ ಸಾಧನವೆಂಬ ಅಂಶ ಪ್ರತಿಫಲನಗೊಂಡಿದೆ. ಇದರೊಡನೆ ವ್ಯಕ್ತಿ ಮತ್ತು ರಾಜ್ಯ ಅಥವಾ ಸಮಾಜಗಳ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲೂ ಮಿಲ್ನ ವಿಚಾರಗಳು ಸಹಕಾರಿ ಎನಿಸಿವೆ. ಸಕಾರಣಿಕ ನಿರ್ಬಂಧ ಹೇರಲು ಮಿಲ್ನು ಸಮ್ಮತಿಸಿರುವ ಸಂಗತಿಯೂ ಮೇಲಿನ ಆತನ ವಿಚಾರಗಳಲ್ಲಿ ವ್ಯಕ್ತವಾಗಿದೆ. ಆದ್ದರಿಂದಲೇ ಸಬೈನ್ ಎಂಬ ಚಿಂತಕ ಜೆ. ಎಸ್. ಮಿಲ್ನು ಸಮಾಜ ಅನುಮೋದಿಸುವ ಹಾಗೂ ವ್ಯಕ್ತಿ ಅನುಭವಿಸುವ ಸ್ವಾತಂತ್ರ್ಯ ಮಂಡಿಸಿರುವ ಎಂದಿರುವರು.

ವಿಮರ್ಷೆ: ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಜೆ. ಎಸ್. ಮಿಲ್ನು ಪ್ರತಿಪಾದಿಸಿರುವ ವಿಚಾರಗಳು ಗಂಭೀರ ಟೀಕೆಗಳಿಗೆ ಒಳಗಾಗಿವೆ. ಕೆಳಗಿನ ದೋಷಗಳ ಆಧಾರದಲ್ಲಿ ಮಿಲ್ನ ಸ್ವಾತಂತ್ರ್ಯದ ವಿಚಾರಗಳು ವಿಮರ್ಷಿಸಲ್ಪಟ್ಟಿವೆ.

1. ವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾನಿ: ಮಿಲ್ನು ವ್ಯಕ್ತಿಗೆ ನಿರ್ಬಂಧ ರಹಿತ ಸ್ವಾತಂತ್ರ್ಯ ಒದಗಿಸಲು ಸೂಚಿಸಿರುವ. ಈ ರೀತಿಯ ಅನಿಯಂತ್ರಿತ ಸ್ವಾತಂತ್ರ್ಯವು ಸಮಾಜದಲ್ಲಿನ ಇತರ ವ್ಯಕ್ತಿಗಳ ಸ್ವಾತಂತ್ರ್ಯದ ಾಕ್ರಮಣಕ್ಕೆ ಸಹಜವಾಗಿ ಕಾರಣವಾಗುತ್ತದೆ. ವ್ಯಕ್ತಿ ಮಾನವ ಸಹಜ ಸ್ವಾರ್ಥ, ಮತ್ಸರ, ದುರಾಸೆ ಮುಂತಾದ ದುರ್ಗುಣ ಪಡೆದಿರುವ ಅಂಶವನ್ನು ಲೆಕ್ಕಿಸದೇ ಮಿಲ್ ಅನಿರ್ಬಂಧಿತ ಸ್ವಾತಂತ್ರ್ಯ ನೀಡಿರುವುದು ವಿಮರ್ಷಕರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಅರ್ನೆಸ್ಟ್ ಬಾರ್ಕರ್ ಶೂನ್ಯ ಸ್ವಾತಂತ್ರ್ಯದ ಪ್ರತಿಪಾದಕ ಎಂಬುದಾಗಿ ಮಿಲ್ನನ್ನು ಟೀಕಿಸಿರುವ.  ಹೀಗೆ ವ್ಯಕ್ತಿ ಸ್ವಾತಂತ್ರ್ಯವು ಇತರರ ಸ್ವಾತಂತ್ರ್ಯದ ುಲ್ಲಂಘನೆಗೆ ಕಾರಣವಾಗಿ ವ್ಯಕ್ತಿ ಸ್ವಾತಂತ್ರ್ಯವನ್ನೇ ನಾಶಗೊಳಿಸಬಲ್ಲದೆಂಬ ನಿಲುವು ವಿಮರ್ಷಕರದಾಗಿದೆ.

2. ಸ್ವೇಚ್ಛಾಚಾರಕ್ಕೆ ಆಸ್ಪದ: ಮಿಲ್ನು ನಿರ್ಬಂಧ ರಹಿತವಾದ ನಕಾರಾತ್ಮಕ ಸ್ವಾತಂತ್ರ್ಯವನ್ನು ವ್ಯಕ್ತಿಗೆ ನೀಡಲು ಒಲವು ತೋರಿರುವ. ಇದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಾತಂತ್ರ್ಯವನ್ನು ತನಗಿಷ್ಟ ಬಂದಂತೆ ಚಲಾಯಿಸಲು ಮುಂದಾಗುತ್ತಾನೆ. ಆಗ ಸಮಾಜದಲ್ಲಿ ಸುವ್ಯವಸ್ಥೆ ಕಣ್ಮರೆಯಾಗಿ ಗೊಂದಲ, ಅಶಾಂತಿ, ಅವ್ಯವಸ್ಥೆ ತಾಂಡವವಾಡುವ ಸಾಧ್ಯತೆ ಅಧಿಕಗೊಳ್ಳುತ್ತದೆ. ಹೀಗಾಗಿ ನಿಯಂತ್ರಣಕ್ಕೊಳಪಡದ ಸ್ವೇಚ್ಛಾಚಾರಕ್ಕೆ ಮಿಲ್ನ ವಿಚಾರಗಳು ಕಾರಣವಾಗಿವೆ ಎಂಬುದಾಗಿ ವಿಮರ್ಷಿಸಲಾಗಿದೆ.

3. ಕ್ರಿಯೆಗಳ ಅವೈಜ್ಙಾನಿಕ ವಿಂಗಡಣೆ: ವ್ಯಕ್ತಿಯ ಕ್ರಿಯೆಗಳನ್ನು ಮಿಲ್ನು ತನಗೆ ಸಂಬಂಧಿಸಿದ ಹಾಗೂ ಇತರರಿಗೆ ಸಂಬಂಧಿಸಿದ ಎಂಬುದಾಗಿವರ್ಗೀಕರಿಸಿರುವುದು ಕ್ರಮಬದ್ಧವಾಗಿಲ್ಲ. ವೈಯಕ್ತಿಕ ಅಥವಾ ಸಾಮಾಜಿಕ ಪರಿಣಾಮ ಬೀರುವ ಚಟುವಟಿಕೆಗಳ ವರ್ಗೀಕರಣವು ಅಸಮಂಜಸವೆನಿಸುತ್ತದೆ. ಏಕೆಂದರೆ ಕ್ರಿಯೆಯೊಂದನ್ನು ನಿಖರವಾಗಿ ವೈಯಕ್ತಿಕ ಅಥವಾ ಸಾಮಾಜಿಕ ಎಂಬುದಾಗಿ ವಿಂಗಡಿಸುವುದು ಅಸಾಧ್ಯದ ಸಂಗತಿಯಾಗಿದೆ. ವ್ಯಕ್ತಿಯ ಪ್ರತಿಯೊಂದು ಕ್ರಿಯೆ ಅಲ್ಪ ಪ್ರಮಾಣದಲ್ಲಾದರೂ ಸಾಮಾಜಿಕ ಪರಿಣಾಮವನ್ನು ಮತ್ತು ಸಾಮಾಜಿಕ ಕ್ರಿಯೆಗಳು ಆತನ ವೈಯಕ್ತಿಕ ಪರಿಣಾಮವನ್ನು ಉಂಟು ಮಾಡುತ್ತವೆ. ಈ ಸೂಕ್ಷ್ಮತೆಯನ್ನು ಅಲಕ್ಷಿಸಿ ಅವೈಜ್ಙಾನಿಕವಾಗಿ ಕ್ರಿಯೆಗಳನ್ನು ಮಿಲ್ನ ಕ್ರಿಯೆಗಳ ವರ್ಗೀಕರಣ ಪ್ರತಿಪಾದಿಸಲ್ಪಟ್ಟಿದೆ.

4. ಸಮ್ಮತಿಸಲಾಗದ ಸಮಾಜ ಹಾಗೂ ರಾಜ್ಯದ ನಿಯಂತ್ರಣದ ವಿರೋಧ: ಮಿಲ್ನು ವ್ಯಕ್ತಿ ಸ್ವಾತಂತ್ರ್ಯ ಹರಣದ ಕಾರಣಕ್ಕೆ ಸಮಾಜ ಹಾಗೂ ರಾಜ್ಯದ ನಿಯಂತ್ರಣಗಳನ್ನು ಬಲವಾಗಿ ವಿರೋಧಿಸಿದ್ದ. ಆದರೆ ಸಾಮಾಜಿಕ ನಿಯಂತ್ರಣಗಳು ಸಮುದಾಯದ ಮತ್ತು ರಾಜ್ಯದ ನಿಯಂತ್ರಣವು ಸಮಸ್ತ ಪ್ರಜೆಗಳ ಕಲ್ಯಾಣಕ್ಕೆ ಅಗತ್ಯವಾಗಿರುತ್ತವೆ. ಈ ವಿಚಾರವನ್ನು ಪರಿಗಣಿಸದೇ ಮಿಲ್ನು ಸಮಾಜ ಹಾಗೂ ರಾಜ್ಯದ ನಿಯಂತ್ರಣವನ್ನು ವಿರೋಧಿಸಿರುವುದು ಸಮ್ಮತಿಸಲಾಗದು ಎಂಬುದು ವಿಮರ್ಷಕರ ನಿಲುವಾಗಿದೆ.

5. ಸ್ವಾತಂತ್ರ್ಯದ ಸೀಮಿತ ವ್ಯಾಪ್ತಿ: ಮಿಲ್ನು ಬೆರಳೆಣಿಕೆಯಷ್ಟು ವಿಧದ ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿರುವ. ವ್ಯಕ್ತಿಯ ಪರಿಪೂರ್ಣ ಬೆಳವಣಿಗೆಗೆ ನೆರವಾಗಬಲ್ಲ ಇತರ ಅಂದರೆ ಶೈಕ್ಷಣಿಕ, ಆರ್ಥಿಕ, ನಾಗರಿಕ ಸ್ವಾತಂತ್ರ್ಯಗಳನ್ನು ಅಲಕ್ಷಿಸಿದ್ದಾನೆ. ಸಮಕಾಲಿನ ವ್ಯಕ್ತಿಯ ವೈವಿಧ್ಯಮಯ ಸ್ವಾತಂತ್ರ್ಯಗಳ ಹಿನ್ನೆಲೆಯಲ್ಲಿ ಮಿಲ್ನ ವಿಚಾರಗಳು ಅತ್ಯಂತ ಸೀಮಿತ ವ್ಯಾಪ್ತಿ ಪಡೆದಿರುವವೆಂಬುದು ಸುಸ್ಪಷ್ಟ. ಹೀಗಾಗಿ ವಿಮರ್ಷಕರು ಮಿಲ್ನ ಸ್ವಾತಂತ್ರ್ಯದ ವಿಚಾರಗಳು ಸೀಮಿತ ಸ್ವರೂಪ ಹೊಂದಿವೆ ಎಂಬುದಾಗಿ ಅನಿಸಿಕೆ  ವ್ಯಕ್ತಪಡಿಸಿರುವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...