ಸೋಮವಾರ, ಸೆಪ್ಟೆಂಬರ್ 7, 2020

unit 3

ಅಧ್ಯಾಯ 3: ಭಾರತದಲ್ಲಿ ಆಡಳಿತ ಯಂತ್ರ:

ಒಂದು ಅಂಕದ ಪ್ರಶ್ನೋತ್ತರಗಳು:

1. ಆಡಳಿತ ಎಂದರೇನು?
ಉ: ನಿರ್ದಿಷ್ಟ ಗುರಿ ಸಾಧನೆಗಾಗಿ ನಡೆಸುವ ಸಾಮೂಹಿಕ ಚಟುವಟಿಕೆಗಳನ್ನು ಆಡಳಿತ ಎನ್ನಬಹುದು
2. ಆಡಳಿತದ ಮೂಲ ಪದಗಳು ಯಾವುವು?
ಉ: ಲ್ಯಾಟಿನ್ ಭಾಷೆಯ ಆಯ್ಡ್ ಹಾಗು ಮಿನ್ಸ್ಟ್ರೇರ್ ಆಡಳಿತದ ಮೂಲ ಪದಗಳಾಗಿವೆ.ಆಯ್ಡ್ ಎಂದರೆ ಸಾರ್ವಜನಿಕರು ಮತ್ತು ಮಿನ್ ಸ್ಟ್ರೇರ್ ಎಂದರೆ ಸೇವೆ ಮಾಡು ಎಂದಾಗುತ್ತದೆ.
3. ಕೇಂದ್ರಾಡಳಿತದ ಮುಖ್ಯಸ್ಥ ಯಾರು?
ಉ: ಕೇಂದ್ರಾಡಳಿತದ ಮುಖ್ಯಸ್ಥ ಕೇಂದ್ರ ಸಚಿವಾಲಯದ ಮುಖ್ಯ ಕಾರ್ಯದರ್ಶಿ.
4. ರಾಜ್ಯಾಡಳಿತದ ಮುಖ್ಯಸ್ಥ ಯಾರು?
ಉ: ರಾಜ್ಯಾಡಳಿತದ ಮುಖ್ಯಸ್ಥ ರಾಜ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ.
5. ಜಿಲ್ಲಾಡಳಿತದ ಮುಖ್ಯಸ್ಥ ಯಾರು?
ಉ: ಜಿಲ್ಲಾಡಳಿತದ ಮುಖ್ಯಸ್ಥ ಜಿಲ್ಲಾಧಿಕಾರಿ.
6. ತಾಲೂಕು ಆಡಳಿತದ ಮುಖ್ಯಸ್ಥ ಯಾರು?
ಉ: ತಾಲೂಕು ಆಡಳಿತದ ಮುಖ್ಯಸ್ಥ ತಹಶೀಲ್ದಾರ.
7. CAT ವಿಸ್ತರಿಸಿ.
ಉ:  CAT ವಿಸ್ತರಿಸಿದರೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ [CENTRAL ADMINSTRATIVE TRIBUNAL] ಎಂದಾಗುತ್ತದೆ.
8. KAT ವಿಸ್ತರಿಸಿ.
ಉ: KAT ವಿಸ್ತರಿಸಿದರೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ [KARNATAKA ADMINSTRATIVE TRIBUNAL] ಎಂದಾಗುತ್ತದೆ.
9. UPSC ವಿಸ್ತರಿಸಿ.
ಉ: UPSC ವಿಸ್ತರಿಸಿದರೆ ಕೇಂದ್ರ ಲೋಕಸೇವಾ ಆಯೋಗ [UNION PUBLIC SERVICE COMMISSION] ಎಂದಾಗುತ್ತದೆ.
10. KPSC ವಿಸ್ತರಿಸಿ.
ಉ: KPSC ವಿಸ್ತರಿಸಿದರೆ ಕರ್ನಾಟಕ ಲೋಕಸೇವಾ ಆಯೋಗ [KARNATAKA PUBLIC SERVICE COMMISSION] ಎಂದಾಗುತ್ತದೆ.
11. JPSC ವಿಸ್ತರಿಸಿ.
ಉ: JPSC ವಿಸ್ತರಿಸಿದರೆ ಜಂಟಿ ಲೋಕಸೇವಾ ಆಯೋಗ [JOINT PUBLIC SERVICE COMMISSION] ಎಂದಾಗುತ್ತದೆ.
12. IAS ವಿಸ್ತರಿಸಿ.
ಉ: IAS ವಿಸ್ತರಿಸಿದರೆ ಭಾರತೀಯ ಆಡಳಿತಾತ್ಮಕ ಸೇವೆ[INDIAN ADMINSTRATIVE SERVICE] ಎಂದಾಗುತ್ತದೆ.
13. IPS ವಿಸ್ತರಿಸಿ.
ಉ: IPS ವಿಸ್ತರಿಸಿದರೆ ಭಾರತೀಯ ಆರಕ್ಷಕ ಸೇವೆ [INDIAN POLICE SERVICE] ಎಂದಾಗುತ್ತದೆ.
14. KAS ವಿಸ್ತರಿಸಿ.
ಉ: KAS ವಿಸ್ತರಿಸಿದರೆ ಕರ್ನಾಟಕ ಆಡಳಿತಾತ್ಮಕ ಸೇವೆ [KARNATAKA ADMINSTRATIVE SERVICE] ಎಂದಾಗುತ್ತದೆ.
15. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?
ಉ: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ರಾಷ್ಟ್ರಪತಿ ನೇಮಿಸುತ್ತಾರೆ.
16. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?
ಉ: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕದ ರಾಜ್ಯಪಾಲರು ನೇಮಿಸುತ್ತಾರೆ.
17. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗು ಸದಸ್ಯರ ನಿವ್ರುತ್ತಿ ವಯಸ್ಸೆಷ್ಟು?
ಉ: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗು ಸದಸ್ಯರ ನಿವ್ರುತ್ತಿ ವಯಸ್ಸು 65 ವರ್ಷಗಳು.
18. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗು ಸದಸ್ಯರ ನಿವ್ರುತ್ತಿ ವಯಸ್ಸೆಷ್ಟು?
ಉ: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗು ಸದಸ್ಯರ ನಿವ್ರುತ್ತಿ ವಯಸ್ಸು 62 ವರ್ಷಗಳು.
19. ರಾಜ್ಯ ಸೇವೆಗೆ ಒಂದು ಉದಾಹರಣೆ ಕೊಡಿ.
ಉ: KAS, KPS, KES ರಾಜ್ಯ ಸೇವೆಗೆ ಉದಾಹರಣೆಗಳಾಗಿವೆ.
20. ಸಂವಿಧಾನದ ಯಾವ ವಿಧಿಯು ಅಖಿಲ ಭಾರತೀಯ ಸೇವೆಗೆ ಅವಕಾಶ ಕಲ್ಪಿಸಿದೆ?
ಉ: ಸಂವಿಧಾನದ 308ನೇ ವಿಧಿಯು ಅಖಿಲ ಭಾರತೀಯ ಸೇವೆಗೆ ಅವಕಾಶ ಕಲ್ಪಿಸಿದೆ.
21. ಅಖಿಲ ಭಾರತೀಯ ಸೇವೆಗೆ ಒಂದು ಉದಾಹರಣೆ ಕೊಡಿ.
ಉ: IAS, IPS, IFS ಅಖಿಲ ಭಾರತೀಯ ಸೇವೆಗೆ ಉದಾಹರಣೆಗಳಾಗಿವೆ.
22. ಲಾಲ್ಬಹದೂರ್ ಶಾಸ್ತ್ರಿ ಅಖಾಡೆಮಿಯು ಎಲ್ಲಿದೆ?
ಉ: ಲಾಲ್ಬಹದೂರ್ ಶಾಸ್ತ್ರಿ ಅಖಾಡೆಮಿಯು ಮಸ್ಸೂರಿಯಲ್ಲಿದೆ.
23. ಸರ್ದಾರ್ ವಲ್ಲಬಬಾಯ್ ಪಟೇಲ್ ಅಖಾಡೆಮಿಯು ಎಲ್ಲಿದೆ?
ಉ: ಸರ್ದಾರ್ ವಲ್ಲಬಬಾಯ್ ಪಟೇಲ್ ಅಖಾಡೆಮಿಯು ಹೈದರಾಬಾದಿನಲ್ಲಿದೆ.
24. ಕೇಂದ್ರ ಸೇವೆಗೆ ಒಂದು ಉದಾಹರಣೆ ನೀಡಿ.
ಉ: ಭಾರತೀಯ ಅಂಚೆ ಸೇವೆ ಕೇಂದ್ರ ಸೇವೆಗೆ ಉದಾಹರಣೆಯಾಗಿದೆ.
25. ಕೇಂದ್ರ ಸೇವೆಯನ್ನು ವರ್ಗೀಕರಣ ಮಾಡಿ.
ಉ: ಕೇಂದ್ರ ಸೇವೆಯನ್ನು ABCD ಗುಂಪುಗಳಾಗಿ ವರ್ಗೀಕರಿಸಬಹುದಾಗಿದೆ.
26. ಜಿಲ್ಲಾಡಳಿತ ಎಂದರೇನು?
ಉ: ಜಿಲ್ಲೆ ಎಂಬ ನಿಗದಿತ ಪ್ರದೇಶದಲ್ಲಿ ನಡೆಯುವ ಆಡಳಿತಕ್ಕೆ ಜಿಲ್ಲಾಡಳಿತ ಎನ್ನಬಹುದಾಗಿದೆ.
27. ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರವಧಿ ಎಷ್ಟು?
ಉ: ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರವಧಿ 6 ವರ್ಷಗಳು.
28. ಸರ್ಕಾರದ ನಾಲ್ಕನೆಯ ಅಂಗ ಯಾವುದು?
ಉ: ಆಡಳಿತಾಂಗ ಅಥವ ನಾಗರಿಕ ಸೇವಾ ವರ್ಗವನ್ನು ಸರ್ಕಾರದ ನಾಲ್ಕನೆಯ ಅಂಗ ಎನ್ನಲಾಗುತ್ತದೆ.
29. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರ ಸಂಖೆ ಎಷ್ಟು?
ಉ: ಕೇಂದ್ರ ಲೋಕಸೇವಾ ಆಯೋಗದ ಸದಸ್ಯರ ಸಂಖೆ10. 
30. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖೆ ಎಷ್ಟು?
ಉ: ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖೆ 8.
31. CAT ಯಾವಾಗ ಸ್ಥಾಪನೆಯಾಯಿತು?
ಉ: CAT ಜುಲೈ 1985ರಲ್ಲಿ ಸ್ಥಾಪನೆಯಾಯಿತು.
32. KAT ಯಾವಾಗ ಸ್ಥಾಪನೆಯಾಯಿತು?
ಉ: KAT 8ಅಕ್ಟೋಬರ್ 1989ರಂದು ಸ್ಥಾಪನೆಗೊಂಡಿತು.
33. ಸಂವಿಧಾನದ ಯಾವ ವಿಧಿಯು ಭಾರತದಲ್ಲಿ ಲೋಕಸೇವಾ ಆಯೋಗಗಳಿಗೆ ಅವಕಾಶ ಕಲ್ಪಿಸಿದೆ?
ಉ: ಸಂವಿಧಾನದ 315ನೆಯ ವಿಧಿಯು ಭಾರತದಲ್ಲಿ ಲೋಕಸೇವಾ ಆಯೋಗಗಳಿಗೆ ಅವಕಾಶ ಕಲ್ಪಿಸಿದೆ.
34. ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಶಹ ಸಮಿತಿಯನ್ನು ಯಾವಾಗ ನೇಮಿಸಿತ್ತು?
ಉ: ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಶಹ ಸಮಿತಿಯನ್ನು 1969ರಲ್ಲಿ ನೇಮಿಸಿತ್ತು.



ಎರಡು ಅಂಕಗಳ ಪ್ರಶ್ನೋತ್ತರಗಳು:

1. ಆಡಳಿತ ಸೇವೆ [ನಾಗರಿಕ ಸೇವಾ ವರ್ಗ] ಎಂದರೇನು?
ಉ:ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಶ್ರಮಿಸುವ ದೇಶದ ಮುಖ್ಯಸ್ಥ,ಪ್ರಧಾನಿ ನಾಯಕತ್ವದ ಮಂತ್ರಿಮಂಡಳ ಹಾಗು ಉನ್ನತ ಹಂತದ ಕಾರ್ಯದರ್ಶಿಯಿಂದ ಹಿಡಿದು ಕೆಳ ಹಂತದ ಜವಾನನವರೆಗಿನ ನೌಕರರ ಸಮೂಹವನ್ನು ಆಡಳಿತ ಸೇವಾ ವರ್ಗವೆಂದು ಪರಿಗಣಿಸಲಾಗುತ್ತದೆ.
2. ಆಡಳಿತ ಸೇವೆಯ [ನಾಗರಿಕ ಸೇವಾ ವರ್ಗದ] ವರ್ಗೀಕರಣ,  ಮಾಡಿ.
ಉ:ಆಡಳಿತ ಸೇವಾ ವರ್ಗವನ್ನು ಭಾರತದಲ್ಲಿ ಈ ಕೆಳಗಿನಂತೆ ವರ್ಗೀಕರಿಸಲಾಗುತ್ತದೆ.
A.ಅಖಿಲ ಭಾರತೀಯ ಸೇವೆಗಳು
B.ಕೇಂದ್ರೀಯ ಸೇವೆಗಳು
C.ರಾಜ್ಯ ಸೇವೆಗಳು
3. ಕೇಂದ್ರ ಸೇವೆಗಳಿಗೆ ಎರಡು ಉದಾಹರಣೆ ನೀಡಿ?
ಉ: ಕೇಂದ್ರ ಸೇವೆಗಳಿಗೆ ಎರಡು ಉದಾಹರಣೆಗಳೆಂದರೆ
A.ಭಾರತೀಯ ವಿದೇಶಾಂಗ ಸೇವೆ[INDIAN FORIGNE SERVICE]
B.ಭಾರತೀಯ ಅಂಚೆ ಸೇವೆ[INDIAN POSTAL SERVICE]
C.ಭಾರತೀಯ ಆರ್ಥಿಕ ಸೇವೆ[INDIAN ECONOMIC SERVICE]
4. ನಾಗರಿಕ ಸೇವಾ ವರ್ಗದ ಎರಡು ಲಕ್ಷಣಗಳನ್ನು ತಿಳಿಸಿ.
ನಾಗರಿಕ ಸೇವಾ ವರ್ಗದ ಪ್ರಮುಖ ಲಕ್ಷಣಗಳೆಂದರೆ
ಅ.ವ್ರುತ್ತಿ ನಿರತ ವರ್ಗ ಆ.ಅಧಿಕಾರ ಶ್ರೇಣಿ ಪದ್ಧತಿ ಇ.ಅನಾಮಕತ್ವ ಈ.ರಾಜಕೀಯ ತಾಟಸ್ತ್ಯ 
5. ಆಡಳಿತ ಸೇವೆಯ ರಾಜಕೀಯ ತಾಟಸ್ತ್ಯ ಎಂದರೇನು?
ಉ:ಆಡಳಿತ ಸೇವಾ ವರ್ಗದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ.ಅವರು ಚುನಾವಣೆಯಲ್ಲಿ ಒಂದು ಪಕ್ಷದ ಪರವಾಗಿ ಮಾತನಾಡುವುದಾಗಲಿ ಅಥವ ಪ್ರಚಾರ ಮಾಡುವುದಾಗಲಿ ಮಾಡುವಂತಿಲ್ಲ.ಯಾವ ಪಕ್ಷವೇ ಅಧಿಕಾರದಲ್ಲಿರಲಿ ಆಡಳಿತ ಸೇವಾ ವರ್ಗದವರು ದಕ್ಷತೆಯಿಂದ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.ಇದನ್ನೇ ಆಡಳಿತ ಸೇವಾ ವರ್ಗದ ರಾಜಕೀಯ ತಾಟಸ್ತ್ಯ ಎನ್ನುವರು.
6. ಕೇಂದ್ರ ಲೋಕಸೇವಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ?
ಉ:ಅ.ಅಖಿಲ ಭಾರತೀಯ ಸೇವೆ,ಕೇಂದ್ರ ಸೇವೆ ಹಾಗು ಕೇಂದ್ರಾಡಳಿತಗಳಿಗೆ ಅಗತ್ಯವಾದ ನೌಕರರನ್ನು ನೇಮಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.
ಆ.ನೇಮಕಾತಿಯ ವಿಧಾನವನ್ನು ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
7. ಕರ್ನಾಟಕ ಲೋಕಸೇವಾ ಆಯೋಗದ ಮೂರು ಕಾರ್ಯಗಳನ್ನು ತಿಳಿಸಿ?
ಉ:ಅ.ರಾಜ್ಯ ಸೇವೆಗಳಿಗೆ ಅಗತ್ಯವಾದ ಸೇವಾ ವರ್ಗವನ್ನು ನೇಮಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.
ಆ.ನೇಮಕಾತಿಯ ವಿಧಾನ ಕುರಿತು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
ಇ.ಬಡ್ತಿ ನೀಡುವಾಗ ಅನುಸರಿಸಬೇಕಾದ ಮಾರ್ಗಗಳನ್ನು ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು.
8. ಅಧಿಕಾರ ಶ್ರೇಣಿ ಪದ್ಧತಿ ಎಂದರೇನು?
ಉ:ನಾಗರಿಕ ಸೇವಾ ವರ್ಗದ ಸಿಬ್ಬಂದಿಯನ್ನು ಹಲವು ಗುಂಪುಗಳಾಗಿ ವಿಂಗಡಿಸಿ ವಿವಿಧ ದರ್ಜೆಗಳನ್ನು ನೀಡಲಾಗಿರುತ್ತದೆ ಉದಾ:ಗುಂಪು A[1],ಗುಂಪು B[2] ಇತ್ಯಾದಿ.ಬೇರೆಬೇರೆ ದರ್ಜೆಗಳನ್ನು ಪಡೆದ ಅಧಿಕಾರಿಗಳ ನಡುವೆ ಮೇಲಾಧಿಕಾರಿ ಹಾಗು ಅಧಿನಾಧಿಕಾರಿ ಎಂಬ ಸಂಬಂಧವಿರುತ್ತದೆ.ಮೇಲಾಧಿಕಾರಿಯು ಆದೇಶಗಳನ್ನು ನೀಡುವ ಹಾಗು ಮೇಲ್ವಿಚಾರಣೆ ನಡೆಸುವ ಕಾರ್ಯ ಮಾಡಿದರೆ ಅಧಿನಾಧಿಕಾರಿಯು ಆದೇಶಗಳನ್ನು ಪಾಲಿಸಬೇಕಾಗುತ್ತದೆ.ಇದನ್ನೇ ಅಧಿಕಾರ ಶ್ರೇಣಿ ಪದ್ಧತಿ ಎನ್ನುವರು.
9.  ಮುಖ್ಯ ಕಾರ್ಯದರ್ಶಿಯ ಎರಡು ಕಾರ್ಯಗಳನ್ನು ತಿಳಿಸಿ.
ಉ:ಅ.ಸಚಿವಾಲಯದ ಕಾರ್ಯದರ್ಶಿಗಳ ನಡುವೆ ಸಮನ್ವಯ ತರುವುದು ಆ.ಆಡಳಿತ ಸೇವಾ ವರ್ಗ ಹಾಗು ಸರ್ಕಾರದ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವುದು ಇವು ಮುಖ್ಯ ಕಾರ್ಯದರ್ಶಿಯ ಎರಡು ಪ್ರಮುಖ ಕಾರ್ಯಗಳಾಗಿವೆ.
10. 
11. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಹೇಗೆ ಪದಚ್ಯುತಗೊಳಿಸಲಾಗುತ್ತದೆ?
ಉ: ಬ್ರಷ್ಟಾಚಾರ, ದುರ್ವರ್ತನೆಯಂತಹ ಕಾರಣಗಳನ್ನು ಕುರಿತು ಸರ್ವೋಚ್ಚ ನ್ಯಾಯಾಲಯ ನೀಡುವ ತನಿಖಾ ವರದಿಯ ಆಧಾರದ ಮೇಲೆ ರಾಷ್ಟ್ರಪತಿ ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಪದಚ್ಯುತಗೊಳಿಸುವರು.
12. ಜಿಲ್ಲಾಧಿಕಾರಿಯ ಎರಡು ಕಾರ್ಯಗಳನ್ನು ತಿಳಿಸಿ?
ಉ:ಅ.ಕಾನೂನು ಹಾಗು ಶಾಂತಿ ಪಾಲನೆ ಆ.ಕಂದಾಯ ಆಡಳಿತ ನಿರ್ವಹಣೆ ಇ.ಅಭಿವ್ರುದ್ಧಿ ಕಾರ್ಯಕ್ರಮಗಳ ಮೇಲ್ವಿಚಾರಣೆ ಈ.ಚುನಾವಣಾ ಕಾರ್ಯಗಳು ಮುಂತಾದವುಗಳು ಜಿಲ್ಲಾಧಿಕಾರಿಯ ಕಾರ್ಯಗಳಾಗಿವೆ.
13. ಆಡಳಿತ ಸೇವೆಯ ಅನಾಮಕತ್ವ ಎಂದರೇನು?
ಉ:ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ತಮ್ಮ ಇಲಾಖೆಯ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸುತ್ತಾರೆ.ಇದರಿಂದ ಇಲಾಖೆಯು ಗಮನಾರ್ಹ ಸಾಧನೆ ಮಾಡುತ್ತದೆ.ಆಗ ಇಲಾಖೆಯ ರಾಜಕೀಯ ಮುಖ್ಯಸ್ಥನಾದ ಮಂತ್ರಿಯು ಮಾಧ್ಯಮಗಳಲ್ಲಿ ಕೀರ್ತಿ ಪಡೆದು ಹೆಸರುವಾಸಿಯಾಗುತ್ತಾನೆ.ಹಗಲಿರುಳು ಶ್ರಮಿಸುವ ಆಡಳಿತ ಸೇವೆಯವರು ಎಲೆ ಮರೆಯ ಕಾಯಿಯಂತೆ ಉಳಿದುಕೊಳ್ಳುತ್ತಾರೆ.ಇದನ್ನೇ ಆಡಳಿತ ಸೇವಾ ವರ್ಗದ ಅನಾಮಕತ್ವ ಎನ್ನುವರು.
14. ಸರ್ಕಾರದ ಮೂರು ಇಲಾಖೆಗಳನ್ನು ತಿಳಿಸಿರಿ.
ಉ: ಹಣಕಾಸು ಇಲಾಖೆ, ಕ್ರುಷಿ ಇಲಾಖೆ, ನಗರಾಭಿವ್ರುದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮುಂತಾದವು ಸರ್ಕಾರದ ಇಲಾಖೆಗಳಾಗಿವೆ.
15. ಸಚಿವಾಲಯ ಎಂದರೇನು?
ಉ: ಸರ್ಕಾರದ ವಿವಿಧ ಖಾತೆಗಳ ಕಾರ್ಯದರ್ಶಿಗಳ ಕಚೇರಿಗಳನ್ನು ಒಳಗೊಂಡಿರುವುದನ್ನು ಸಚಿವಾಲಯ ಎನ್ನುವರು. ಇದರ ಮುಖ್ಯಸ್ಥ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುತ್ತಾನೆ.
16. ಇಲಾಖೆ ಎಂದರೇನು?
ಉ:ಒಂದು ದೊಡ್ಡ ಸಚಿವಾಲಯದ ಕಾರ್ಯವನ್ನು ದಕ್ಷತೆಯಿಂದ ನಡೆಸಲು ರಚನೆಯಾಗುವ ಆಡಳಿತ ಘಟಕಗಳಿಗೆ ಇಲಾಖೆ ಎನ್ನುವರು.ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ ಕಾರ್ಯದರ್ಶಿಯು ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ.
17. ಭಾಗ ಎಂದರೇನು?
ಉ:ಒಂದು ಇಲಾಖೆಯ ಕಾರ್ಯವನ್ನು ದಕ್ಷತೆಯಿಂದ ನಡೆಸಲು ರಚಿಸಲಾಗುವ ಘಟಕಗಳೇ ಭಾಗ.ಬೇರೆಬೇರೆ ವಿಭಾಗಗಳನ್ನು ಸೇರಿಸಿ ಭಾಗದ ರಚನೆಯಾಗಿರುತ್ತದೆ.ಹೆಚ್ಚುವರಿ ಅಥವ ಜಂಟಿ ಕಾರ್ಯದರ್ಶಿಯು ಭಾಗದ ಮುಖ್ಯಸ್ಥನಾಗಿರುತ್ತಾನೆ.
18. ಅಖಿಲ ಭಾರತೀಯ ಸೇವೆ ಎಂದರೇನು? ಉದಾಹರಣೆ ನೀಡಿ.
ಉ:ಕೇಂದ್ರ ಶಾಸಕಾಂಗದಿಂದ ಸ್ರುಷ್ಟಿಸಲ್ಪಟ್ಟು,ಕೇಂದ್ರ ಲೋಕಸೇವಾ ಆಯೋಗದಿಂದ ನೇಮಕಗೊಂಡು,ಕೇಂದ್ರ ಹಾಗು ರಾಜ್ಯ ಸರ್ಕಾರಗಳಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳಿಗೆ ಅಖಿಲ ಭಾರತೀಯ ಸೇವೆಗಳು ಎನ್ನುವರು ಉದಾ:ಭಾರತೀಯ ಆಡಳಿತ ಸೇವೆ[IAS],ಭಾರತೀಯ ಆರಕ್ಷಕ ಸೇವೆ[IPS],ಭಾರತೀಯ ಅರಣ್ಯ ಸೇವೆ[IFS]
19. ಜಿಲ್ಲಾಧಿಕಾರಿಗೆ ಜಿಲ್ಲಾಡಳಿತದಲ್ಲಿ ನೆರವಾಗುವ ಅಧಿಕಾರಿಗಳು ಯಾರು?
ಉ:ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ,ಜಿಲ್ಲಾ ಆರೋಗ್ಯಾಧಿಕಾರಿ,ಜಿಲ್ಲಾ ಖಜಾನಾಧಿಕಾರಿ,ಪದವಿ ಪೂರ್ವ ಶಿಕ್ಷಣದ ಉಪ ನಿರ್ದೇಶಕರು,ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರು ಮುಂತಾದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಜಿಲ್ಲಾಡಳಿತ ನಡೆಸಲು ನೆರವಾಗುತ್ತಾರೆ.
20. ಕೇಂದ್ರ ಲೋಕಸೇವಾ ಆಯೋಗದ ಸದಸ್ಯನಾಗಲು ಇರಬೇಕಾದ ಅರ್ಹತೆಗಳನ್ನು ತಿಳಿಸಿ?
ಉ:ಕೇಂದ್ರ,  ಲೋಕಸೇವಾ ಆಯೋಗದ ಸದಸ್ಯನಾಗಲು ಇರಬೇಕಾದ ಅರ್ಹತೆಗಳೆಂದರೆ
A.ಭಾರತದ ಪ್ರಜೆಯಾಗಿರಬೇಕು.
B.ಹತ್ತು ವರ್ಷಗಳ ಕಾಲ ಸರ್ಕಾರಿ ಸೇವಾ ಅನುಭವ ಹೊಂದಿರಬೇಕು.
C.ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹೆಸರು ಮಾಡಿರಬೇಕು.
21. ರಾಜ್ಯ ಸೇವೆಗಳು ಎಂದರೇನು? ಉದಾಹರಣೆ ನೀಡಿ.
ಉ:ರಾಜ್ಯ ಶಾಸಕಾಂಗದಿಂದ ಸ್ರುಷ್ಟಿಸಲ್ಪಟ್ಟು,ರಾಜ್ಯ ಲೋಕಸೇವಾ ಆಯೋಗದಿಂದ ನೇಮಕಗೊಂಡು,ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳಿಗೆ ರಾಜ್ಯ ಸೇವೆಗಳು ಎನ್ನುವರು ಉದಾ:ಕರ್ನಾಟಕ ಆಡಳಿತ ಸೇವೆ[KAS],ಕರ್ನಾಟಕ ಆರಕ್ಷಕ ಸೇವೆ[KPS],ಕರ್ನಾಟಕ ಶಿಕ್ಷಣ ಸೇವೆ[KES]
22. ಆಡಳಿತ ಸೇವಾ ವರ್ಗವನ್ನು ಶಾಶ್ವತ ಕಾರ್ಯಾಂಗ ಎನ್ನಲು ಕಾರಣವೇನು?
ಉ:ನಾಗರಿಕ ಸೇವಾ ವರ್ಗದವರು ಸರ್ಕಾರಿ ಸೇವೆಯನ್ನು ಬಿಟ್ಟು ಯಾವುದೇ ಉದ್ಯೋಗವನ್ನು ಮಾಡುವಂತಿಲ್ಲ.ಅವರು ನೇಮಕಗೊಂಡಾಗಿನಿಂದ ನಿವ್ರುತ್ತಿಯವರೆಗೆ ಜೀವನೋಪಾಯಕ್ಕಾಗಿ ಸರ್ಕಾರಿ ಸೇವೆಯನ್ನೇ ಅವಲಂಬಿಸಿರುತ್ತಾರೆ.ವೇತನ,ಬಡ್ತಿ,ಪಿಂಚಣಿಯನ್ನು ಕಾಲಕಾಲಕ್ಕೆ ಪಡೆಯುವ ಇವರು ಸರ್ಕಾರಗಳು ಬದಲಾದರೂ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ.ಹೀಗಾಗಿ ಆಡಳಿತ ಸೇವಾ ವರ್ಗವನ್ನು ಶಾಶ್ವತ ಕಾರ್ಯಾಂಗ ಎನ್ನಲಾಗುತ್ತದೆ.
23. ಆಡಳಿತಾತ್ಮಕ ನ್ಯಾಯ ಮಂಡಳಿ ಎಂದರೇನು?
ಉ:ನಾಗರಿಕ ಸೇವಾ ವರ್ಗದ ಸಿಬ್ಬಂದಿಗೆ ಸಂಬಂಧಿಸಿದ ನೇಮಕ,ವರ್ಗಾವಣೆ,ಬಡ್ತಿ, ನಿವ್ರುತ್ತಿ ಮುಂತಾದವುಗಳನ್ನು ಕುರಿತಾದ ವಿವಾದಗಳನ್ನು ಬಗೆ ಹರಿಸಲು ಸ್ಥಾಪನೆಯಾದ ನ್ಯಾಯಾಲಯಗಳಿಗೆ ಆಡಳಿತಾತ್ಮಕ ನ್ಯಾಯ ಮಂಡಳಿ ಎನ್ನುವರು ಉದಾ:CAT,KAT. 
24. ಭಾರತದಲ್ಲಿ ಆಡಳಿತಾತ್ಮಕ ನ್ಯಾಯಮಂಡಳಿಗಳು ಹೇಗೆ ಜಾರಿಗೊಂಡವು?
ಭಾರತದಲ್ಲಿ ಆಡಳಿತಾತ್ಮಕ ನ್ಯಾಯ ಮಂಡಳಿಗಳು ಸಂವಿಧಾನಕ್ಕೆ 42ನೆಯ ತಿದ್ದುಪಡಿಯ ಮೂಲಕ ಸೇರಿಸಲಾದ 323A ಹಾಗು 323B ಉಪ ವಿಧಿಯಂತೆ ಜಾರಿಗೊಂಡಿವೆ.
25. ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯ ರಚನೆಯನ್ನು ತಿಳಿಸಿ?
ಉ:ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಒಬ್ಬ ಅಧ್ಯಕ್ಷ,ಹದಿನೇಳು ಉಪಾಧ್ಯಕ್ಷರು ಹಾಗು ನಲವತ್ತೊಂಬತ್ತು ಸದಸ್ಯರಿಂದ ಕೂಡಿರುತ್ತದೆ.ಅಧ್ಯಕ್ಷನು ಉಚ್ಚ ನ್ಯಾಯಾಲಯದ ಹಾಲಿ ಅಥವ ನಿವ್ರುತ್ತ ನ್ಯಾಯಾಧೀಶನಾಗಿರುತ್ತಾನೆ.
26. ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ ಎಲ್ಲಿದೆ? ಅದರ ಹೆಸರೇನು?
ಉ: ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯು ಬೆಂಗಳೂರಿನಲ್ಲಿದೆ. ಅದನ್ನು ಉದ್ಯೋಗ ಸೌಧ ಎನ್ನುವರು.

ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು

1. ಆಡಳಿತದ ಅರ್ಥ ಮತ್ತು ಪಾತ್ರವನ್ನು ವಿವರಿಸಿ?
ಉ: ಆಡಳಿತ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಅಡ್ಮಿನ್ಸ್ಟ್ರೇಷನ್ ಪದದ ತರ್ಜಿಮೆಯಾಗಿದೆ. ಲ್ಯಾಟಿನ್ ಭಾಷೆಯ ಆಯ್ಡ್ ಹಾಗು ಮಿನ್ಸ್ಟ್ರೇರ್ ಆಡಳಿತದ ಮೂಲ ಪದಗಳಾಗಿವೆ.ಆಯ್ಡ್ ಎಂದರೆ ಸಾರ್ವಜನಿಕರು ಮತ್ತು ಮಿನ್ ಸ್ಟ್ರೇರ್ ಎಂದರೆ ಸೇವೆ ಮಾಡು ಎಂದಾಗುತ್ತದೆ. ಸರಳವಾಗಿ ನಿರ್ದಿಷ್ಟ ಗುರಿ ಸಾಧನೆಗಾಗಿ ನಡೆಸುವ ಸಾಮೂಹಿಕ ಚಟುವಟಿಕೆಗಳನ್ನು ಆಡಳಿತ ಎನ್ನಬಹುದು.ವಿಶಾಲಾರ್ಥದಲ್ಲಿ ಸಾಮಾನ್ಯ ಗುರಿ ಸಾಧನೆಗಾಗಿ ಸಂಘಟನೆ ಹಾಗು ವ್ಯವಸ್ಥಾಪನೆಗಳ ಮೂಲಕ ನಡೆಸುವ ಸಾಮೂಹಿಕ ಚಟುವಟಿಕೆಗಳನ್ನು ಆಡಳಿತ ಎನ್ನಬಹುದು.
ಪಾತ್ರ: ತಾಂತ್ರಿಕತೆಯ ಪ್ರಗತಿ, ಕೈಗಾರಿಕಾ ಕ್ರಾಂತಿ, ಜನಸಂಖೆಯ ಹೆಚ್ಚಳ, ಕಲ್ಯಾಣ ರಾಜ್ಯದ ಸ್ಥಾಪನೆಯಿಂದ ಇಂದು ಆಡಳಿತ ಯಂತ್ರದ ಕಾರ್ಯಗಳು ಏರುತ್ತಾ ಸಾಗಿವೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತ ಯಂತ್ರದ ಪಾತ್ರ ಅಥವ ಮಹತ್ವವನ್ನು ಕೆಳಗಿನಂತೆ ಕಾಣಬಹುದು.
A ರಾಜಕೀಯ ವ್ಯವಸ್ಥೆಯ ರಕ್ಷಣೆ: ಆಯಾ ದೇಶದ ರಾಜಕೀಯ ವ್ಯವಸ್ಥೆಯನ್ನು ಆಡಳಿತ ಯಂತ್ರಕಾಪಾಡುತ್ತದೆ. ಚುನಾವಣೆಯ ಬಳಿಕ ಆಳುವ ರಾಜಕಾರಣಿಗಳು ಬದಲಾದರೂ ಆಡಳಿತಯಂತ್ರ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ.
B ಸ್ಥಿರತೆ ಹಾಗು ವ್ಯವಸ್ಥೆಯ ಮುಂದುವರಿಕೆಗೆ ಶ್ರಮಿಸುವುದು: ಆಡಳಿತ ಯಂತ್ರವು ದೇಶದ ಸ್ಥಿರತೆಗೆ ಕಾರಣವಾಗಿದೆ. ಜೊತೆಗೆ ನಾನಾ ವ್ಯವಸ್ಥೆಗಳು ಮುಂದುವರೆಯಲು ಆಡಳಿತಗಾರರು ಶ್ರಮಿಸುತ್ತಾರೆ. ಉ: ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕರು ಹಾಗು ಶಿಕ್ಷಕೇತರ ಸಿಬ್ಬಂದಿಗಳು ಶಿಕ್ಷಣ ವ್ಯವಸ್ಥೆ ಮುಂದುವರೆಯಲು ಪ್ರಯತ್ನಿಸುವರು.
C ಸಮಾಜದ ದುರ್ಬಲ ವರ್ಗಗಳ ರಕ್ಷಣೆ: ಸಹಜವಾಗಿ ಸಮಾಜದಲ್ಲಿ ಕೆಲ ದುರ್ಬಲ ವರ್ಗಗಳು ವಿವಿಧ ತೊಂದರೆ ಅನುಭವಿಸುತ್ತವೆ. ಆಡಳಿತ ಯಂತ್ರವು ಆ  ವರ್ಗಗಳಿಗೆ ಸೌಲಭ್ಯಗಳನ್ನು ಒದಗಿಸಿ ರಕ್ಷಿಸುತ್ತವೆ. ಉ: ಅನಾಥರು, ಅಂಗವಿಕಲರು, ವ್ರುದ್ಧರು, ಅಬಲೆಯರಿಗೆ ಶ್ರಮಿಸುವುದು.
D ಸವಾಲುಗಳ ನಿರ್ವಹಣೆ: ದೇಶ ಎದುರಿಸುವ ಕ್ರುತಕ ಮತ್ತು ನೈಸರ್ಗಿಕ ಸವಾಲುಗಳಿಂದ ಆಡಳಿತ ಯಂತ್ರವು ಜನರನ್ನು ಕಾಪಾಡುತ್ತದೆ. ಭೂಕಂಪ, ಸುನಾಮಿ, ಅಪಘಾತ, ಭಯೋತ್ಪಾದಕರ ದಾಳಿಯ ಸಮಯದಲ್ಲಿ ಆಡಳಿತಗಾರರು ತಮ್ಮ ಪ್ರಾಣವನ್ನು ಪಣವಿಟ್ಟು ಶ್ರಮಿಸುತ್ತಾರೆ.
E ಆರ್ಥಿಕ ಬೆಳವಣಿಗೆಗೆ ಪ್ರಯತ್ನ: ದೇಶವು ಆರ್ಥಿಕವಾಗಿ ಪ್ರಗತಿ ಹೊಂದುವಲ್ಲಿ ಆಡಳಿತಗಾರರು ನೆರವಾಗುತ್ತಾರೆ. ವ್ಯಾಪಾರ, ತೆರಿಗೆ ವಸೂಲಿ, ಉತ್ಪಾದನಾ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲು ಆಡಳಿತಗಾರರು ಶ್ರಮಿಸುತ್ತಾರೆ. ಇದರಿಂದ ಯೋಜನೆಗಳು ಫಲಪ್ರದವಾಗಿ ದೇಶ ಅಭಿವ್ರುದ್ಧಿ ಹೊಂದುವುದು.

ಒಟ್ಟಿನಲ್ಲಿ ಪೋಲಿಸ್ ರಾಜ್ಯದಲ್ಲಿ ಆಡಳಿತ ಯಂತ್ರದ ಪಾತ್ರ ಕಡಿಮೆಯಾಗಿತ್ತು. ಕಲ್ಯಾಣ ರಾಜ್ಯಗಳ ಜಾರಿಯೊಡನೆ ಆಡಳಿತದ ಕಾರ್ಯಭಾರ ಅಧಿಕವಾಗಿದೆ. ಆಡಳಿತಾಂಗ ಇಂದು ದೇಶದ ಜನರ ಸೇವೆಯನ್ನು ಗರ್ಭದಿಂದ ಗೋರಿಯವರೆಗೆ ಮಾಡಬೇಕಾಗಿದೆ. ಹೀಗಾಗಿ ಆಡಳಿತಾಂಗವನ್ನು ಸರ್ಕಾರದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ.

2. ನಾಗರಿಕ ಸೇವಾ ವರ್ಗದ ಅರ್ಥ ಮತ್ತು ಲಕ್ಷಣಗಳನ್ನು ವಿವರಿಸಿ?
ಉ: ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಶ್ರಮಿಸುವ ದೇಶದ ಮುಖ್ಯಸ್ಥ,ಪ್ರಧಾನಿ ನಾಯಕತ್ವದ ಮಂತ್ರಿಮಂಡಳ ಹಾಗು ಉನ್ನತ ಹಂತದ ಕಾರ್ಯದರ್ಶಿಯಿಂದ ಹಿಡಿದು ಕೆಳ ಹಂತದ ಜವಾನನವರೆಗಿನ ನೌಕರರ ಸಮೂಹವನ್ನು ನಾಗರಿಕ ಸೇವಾ ವರ್ಗ ಅಥವ ಆಡಳಿತ ಸೇವಾ ವರ್ಗವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ರಾಜಕೀಯ ಕಾರ್ಯಾಂಗ ಮತ್ತು ಶಾಶ್ವತ ಕಾರ್ಯಾಂಗಗಳವರು ಸೇರಿರುತ್ತಾರೆ.
ಲಕ್ಷಣಗಳು: ನಾಗರಿಕ ಸೇವೆಯು ಸೈನಿಕ ಅಥವ ನ್ಯಾಯಿಕ ಸೇವೆಗಿಂತ,  ಭಿನ್ನವಾಗಿರುತ್ತದೆ. ಒಂದು ದೇಶದ ನಾಗರಿಕ ಸೇವಾ ವರ್ಗ ಈ ಕೆಳಗಿನ ಲಕ್ಷಣಗಳಿಂದ ಕೂಡಿರುತ್ತದೆ.
ಅ.ವ್ರುತ್ತಿ ನಿರತ ವರ್ಗ: ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ಸರ್ಕಾರಿ ಸೇವೆಯನ್ನು ಜೀವನಾಧಾರ ಉದ್ಯೋಗವಾಗಿ ಸ್ವೀಕರಿಸಿರುತ್ತಾರೆ. ಇತರ ಯಾವುದೇ ಉದ್ಯೋಗ ಕೈಗೊಳ್ಳಲು ಇವರಿಗೆ ಅವಕಾಶವಿಲ್ಲ. ಕಾಲಕಾಲಕ್ಕೆ ಅಗತ್ಯ ತರಬೇತಿ ಪಡೆದು ನಿವ್ರುತ್ತಿಯವರೆಗೆ ಸರ್ಕಾರಿ ಸೇವೆ ಸಲ್ಲಿಸುವರು. ಇವರು ಲಾಭದ ಉದ್ದೇಶ ಹೊಂದಿರುವುದಿಲ್ಲ.
ಆ.ಅಧಿಕಾರ ಶ್ರೇಣಿ ಪದ್ಧತಿ: ನಾಗರಿಕ ಸೇವಾ ವರ್ಗದ ಸಿಬ್ಬಂದಿಯನ್ನು ಹಲವು ಗುಂಪುಗಳಾಗಿ ವಿಂಗಡಿಸಿ ವಿವಿಧ ದರ್ಜೆಗಳನ್ನು ನೀಡಲಾಗಿರುತ್ತದೆ ಉದಾ:ಗುಂಪು A[1],ಗುಂಪು B[2] ಇತ್ಯಾದಿ.ಬೇರೆಬೇರೆ ದರ್ಜೆಗಳನ್ನು ಪಡೆದ ಅಧಿಕಾರಿಗಳ ನಡುವೆ ಮೇಲಾಧಿಕಾರಿ ಹಾಗು ಅಧಿನಾಧಿಕಾರಿ ಎಂಬ ಸಂಬಂಧವಿರುತ್ತದೆ.ಮೇಲಾಧಿಕಾರಿಯು ಆದೇಶಗಳನ್ನು ನೀಡುವ ಹಾಗು ಮೇಲ್ವಿಚಾರಣೆ ನಡೆಸುವ ಕಾರ್ಯ ಮಾಡಿದರೆ ಅಧಿನಾಧಿಕಾರಿಯು ಆದೇಶಗಳನ್ನು ಪಾಲಿಸಬೇಕಾಗುತ್ತದೆ.ಇದನ್ನೇ ಅಧಿಕಾರ ಶ್ರೇಣಿ ಪದ್ಧತಿ ಎನ್ನುವರು.
ಇ.ರಾಜಕೀಯ ತಾಟಸ್ತ್ಯ: ಆಡಳಿತ ಸೇವಾ ವರ್ಗದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ.ಅವರು ಚುನಾವಣೆಯಲ್ಲಿ ಒಂದು ಪಕ್ಷದ ಪರವಾಗಿ ಮಾತನಾಡುವುದಾಗಲಿ ಅಥವ ಪ್ರಚಾರ ಮಾಡುವುದಾಗಲಿ ಮಾಡುವಂತಿಲ್ಲ.ಯಾವ ಪಕ್ಷವೇ ಅಧಿಕಾರದಲ್ಲಿರಲಿ ಆಡಳಿತ ಸೇವಾ ವರ್ಗದವರು ದಕ್ಷತೆಯಿಂದ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.ಇದನ್ನೇ ಆಡಳಿತ ಸೇವಾ ವರ್ಗದ ರಾಜಕೀಯ ತಾಟಸ್ತ್ಯ ಎನ್ನುವರು.
ಈ.ಅನಾಮಕತ್ವ: ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ತಮ್ಮ ಇಲಾಖೆಯ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸುತ್ತಾರೆ.ಇದರಿಂದ ಇಲಾಖೆಯು ಗಮನಾರ್ಹ ಸಾಧನೆ ಮಾಡುತ್ತದೆ.ಆಗ ಇಲಾಖೆಯ ರಾಜಕೀಯ ಮುಖ್ಯಸ್ಥನಾದ ಮಂತ್ರಿಯು ಮಾಧ್ಯಮಗಳಲ್ಲಿ ಕೀರ್ತಿ ಪಡೆದು ಹೆಸರುವಾಸಿಯಾಗುತ್ತಾನೆ.ಹಗಲಿರುಳು ಶ್ರಮಿಸುವ ಆಡಳಿತ ಸೇವೆಯವರು ಎಲೆ ಮರೆಯ ಕಾಯಿಯಂತೆ ಉಳಿದುಕೊಳ್ಳುತ್ತಾರೆ.ಇದನ್ನೇ ಆಡಳಿತ ಸೇವಾ ವರ್ಗದ ಅನಾಮಕತ್ವ ಎನ್ನುವರು. ಉ: S S L C ಫಲಿತಾಂಶ ಹೆಚ್ಚಾದರೆ ಅದಕ್ಕಾಗಿ ಶ್ರಮಿಸಿದ ಶಿಕ್ಷಕರಿಗಿಂತ ಶಿಕ್ಷಣ ಮಂತ್ರಿಯು ಮಾಧ್ಯಮದಲ್ಲಿ ಮಿಂಚುತ್ತಾನೆ.
ಉ.ನಿಷ್ಪಕ್ಷಪಾತತೆ: ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ಯಾವುದೇ ಗುಂಪು ಅಥವ ವರ್ಗದ ಪರವಾಗಿ ಕಾರ್ಯ ನಿರ್ವಹಿಸುವಂತಿಲ್ಲ. ಇವರು ತಮ್ಮ ಕಾರ್ಯದಲ್ಲಿ ಸ್ವಜನ ಪಕ್ಷಪಾತ ಮಾಡುವಂತಿಲ್ಲ. ಕಾನೂನಿನ ಪ್ರಕಾರ ಸಮಾಜದ ಸರ್ವರಿಗೂ ಸಮಾನ ಸೇವೆಯನ್ನು ಒದಗಿಸಬೇಕು. ಇದನ್ನೇ ನಾಗರಿಕ ಸೇವಾ ವರ್ಗದ ನಿಷ್ಪಕ್ಷಪಾತತೆ ಎನ್ನುವರು.
ಊ.ಸೇವಾ ಮನೋಭಾವನೆ: ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ಸಮಾಜದ ಕಲ್ಯಾಣಕ್ಕಾಗಿ ದುಡಿಯಬೇಕಾಗುತ್ತದೆ. ಜನರ ಸೇವೆ ಮಾಡುವ ಹಂಬಲ ಹಾಗು ಮನಸ್ಸನ್ನು ಇವರು ಹೊಂದಿರಬೇಕು. ಯಾವುದೇ ಸಮಯ ಮತ್ತು ಸ್ಥಳದಲ್ಲಿ ಸೇವೆ ನೀಡಲು ಸಿದ್ಧನಾಗಿರುವ ಮನೋಭಾವ ಹೊಂದಿರಬೇಕು..
ರು. ಶಾಶ್ವತತೆ: ನಾಗರಿಕ ಸೇವಾ ವರ್ಗದವರು ಸರ್ಕಾರಿ ಸೇವೆಯನ್ನು ಬಿಟ್ಟು ಯಾವುದೇ ಉದ್ಯೋಗವನ್ನು ಮಾಡುವಂತಿಲ್ಲ.ಅವರು ನೇಮಕಗೊಂಡಾಗಿನಿಂದ ನಿವ್ರುತ್ತಿಯವರೆಗೆ ಜೀವನೋಪಾಯಕ್ಕಾಗಿ ಸರ್ಕಾರಿ ಸೇವೆಯನ್ನೇ ಅವಲಂಬಿಸಿರುತ್ತಾರೆ.ವೇತನ,ಬಡ್ತಿ,ಪಿಂಚಣಿಯನ್ನು ಕಾಲಕಾಲಕ್ಕೆ ಪಡೆಯುವ ಇವರು ಸೇವಾ ಭದ್ರತೆ ಹೊಂದಿರುತ್ತಾರೆ. ಇವರು ಗಂಭೀರ ಕಾರಣಕ್ಕೆ ಶಿಸ್ತು ಕ್ರಮ ಹೊರತುಪಡಿಸಿ ಸರ್ಕಾರಗಳು ಬದಲಾದರೂ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ.ಹೀಗಾಗಿ ಆಡಳಿತ ಸೇವಾ ವರ್ಗವನ್ನು ಶಾಶ್ವತ ಕಾರ್ಯಾಂಗ ಎನ್ನಲಾಗುತ್ತದೆ.
ಎ. ಕಾನೂನಿನ ಚೌಕಟ್ಟು: ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ನಿರ್ದಿಷ್ಟ ಕಾನೂನಿನ ಚೌಕಟ್ಟಿಗೆ ಒಳಪಡುತ್ತಾರೆ. ಇವರ ನೇಮಕ, ವರ್ಗಾವಣೆ, ಬಡ್ತಿ, ನಿವ್ರುತ್ತಿ, ಕಾರ್ಯವ್ಯಾಪ್ತಿ ಕುರಿತು ಹಲವು ಕಾನೂನಿನ ಮಿತಿಗೆ ಇವರು ಒಳಪಟ್ಟಿರುತ್ತಾರೆ. ಕಾನೂನುಗಳನ್ನು ಮೀರಿದ ಸಿಬ್ಬಂದಿಗಳು ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.
ಏ. ವಿಶೇಷ ತರಬೇತಿ: ನಾಗರಿಕ ಸೇವೆಯ ಸಿಬ್ಬಂದಿಗಳು ತಮ್ಮ ಕಾರ್ಯಕ್ಕೆ ಅನುಗುಣವಾದ ವಿಶೇಷ ತರಬೇತಿ ಪಡೆಯುವರು. ಉ: ಮಸ್ಸೂರಿಯ ಲಾಲ್ಬಹದೂರ್ ಶಾಸ್ತ್ರಿ ಅಖಾಡೆಮಿಯಲ್ಲಿ ಐ. ಎ. ಎಸ್ ಮತ್ತು ಹೈದರಾಬಾದಿನ ಸರ್ದಾರ್ ಪಟೇಲ್ ಅಖಾಡೆಮಿಯಲ್ಲಿ ಐ. ಪಿ. ಎಸ್. ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ಒಟ್ಟಿನಲ್ಲಿ ಆಡಳಿತ ಸೇವಾ ವರ್ಗ ದೇಶದ ಸ್ಥಿರತೆಗೆ ಅಗತ್ಯವಾಗಿದೆ. ದೇಶದ ಏಳಿಗೆ ಹಾಗು ಅವನತಿ ಈ ಸೇವಾ ವರ್ಗದ ಗುಣಮಟ್ಟವನ್ನು ಆಧರಿಸಿದೆ.

3. ಅಖಿಲ ಭಾರತೀಯ ಸೇವೆ, ಕೇಂದ್ರ ಸೇವೆ ಮತ್ತು ರಾಜ್ಯ ಸೇವೆ ಕುರಿತು ಟಿಪ್ಪಣಿ ಬರೆಯಿರಿ?
ಉ: ಕೇಂದ್ರ ಶಾಸಕಾಂಗದಿಂದ ಸ್ರುಷ್ಟಿಸಲ್ಪಟ್ಟು,ಕೇಂದ್ರ ಲೋಕಸೇವಾ ಆಯೋಗದಿಂದ ನೇಮಕಗೊಂಡು,ಕೇಂದ್ರ ಹಾಗು ರಾಜ್ಯ ಸರ್ಕಾರಗಳಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳಿಗೆ ಅಖಿಲ ಭಾರತೀಯ ಸೇವೆಗಳು ಎನ್ನುವರು. ಭಾರತ ಸಂವಿಧಾನದ ಭಾಗ 14ರ 312 ನೆಯ ವಿಧಿಯಲ್ಲಿ ಅಖಿಲ ಭಾರತೀಯ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಬರೆದು ಈ ಸೇವಾ ವರ್ಗಕ್ಕೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ಸೇವಾ ವರ್ಗಕ್ಕೆ ಆಯ್ಕೆಯಾದವರು ಕೇಂದ್ರ ಅಥವ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಾರೆ.ಅಗತ್ಯವಾದಲ್ಲಿ ಇವರನ್ನು ಕೇಂದ್ರದಿಂದ ರಾಜ್ಯಕ್ಕೆ ಅಥವ ರಾಜ್ಯದಿಂದ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ. ಈ ಸೇವೆಯವರು ತಮ್ಮ ಅನುಭವವನ್ನು ಕೇಂದ್ರ ಹಾಗು ರಾಜ್ಯಗಳ ಆಡಳಿತದಲ್ಲಿ ನೇಮಕವಾದಾಗ ಸದುಪಯೋಗ ಮಾಡಿಕೊಳ್ಳಲು ಸಾಧ್ಯವೆಂದು ಆಡಳಿತ ಸುಧಾರಣಾ ಆಯೋಗ ಅಭಿಪ್ರಾಯಪಟ್ಟಿದೆ. ಕಾಲಕಾಲಕ್ಕೆ ಅಗತ್ಯವಾದ ಹೊಸ ಅಖಿಲ ಭಾರತೀಯ ಸೇವೆಗಳನ್ನು ರಾಜ್ಯಸಭೆ ಮೂರನೇ ಎರಡರಷ್ಟು ಬಹುಮತದೊಡನೆ ಸ್ರುಷ್ಟಿಸುವ ಅಧಿಕಾರ ಪಡೆದಿದೆ. ಪ್ರಸ್ತುತ ಭಾರತದಲ್ಲಿ ಮೂರು ಅಖಿಲ ಭಾರತೀಯ ಸೇವೆಗಳಿವೆ. ಅವೆಂದರೆ  ಭಾರತೀಯ ಆಡಳಿತ ಸೇವೆ[IAS],ಭಾರತೀಯ ಆರಕ್ಷಕ ಸೇವೆ[IPS],ಭಾರತೀಯ ಅರಣ್ಯ ಸೇವೆ[IFS]

ಕೇಂದ್ರ ಶಾಸಕಾಂಗದಿಂದ ಸ್ರುಷ್ಟಿಸಲ್ಪಟ್ಟು, ಕೇಂದ್ರ ಲೋಕಸೇವಾ ಆಯೋಗದಿಂದ ನೇಮಕಗೊಂಡು, ಕೇಂದ್ರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳಿಗೆ ಕೇಂದ್ರ,  ಸೇವೆಗಳು ಎನ್ನುವರು. ಭಾರತ ಸಂವಿಧಾನದ ಭಾಗ 14ರ 312 ನೆಯ ವಿಧಿಯಲ್ಲಿ ಕೇಂದ್ರ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಬರೆದು ಈ ಸೇವಾ ವರ್ಗಕ್ಕೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ಸೇವಾ ವರ್ಗಕ್ಕೆ ಆಯ್ಕೆಯಾದವರು ಕೇಂದ್ರ ಸರ್ಕಾರದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಕೇಂದ್ರ ಪಟ್ಟಿಯಲ್ಲಿನ ಆಡಳಿತ ನೋಡಿಕೊಳ್ಳುವ ಇವರು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತಾರೆ. ಕೇಂದ್ರ ಸೇವಾ ವರ್ಗವನ್ನು ದರ್ಜೆ 1, ದರ್ಜೆ 2, ದರ್ಜೆ 3 ಹಾಗು ದರ್ಜೆ 4 ಎಂದು ವರ್ಗೀಕರಿಸಲಾಗಿದೆ. ಪ್ರಮುಖ ಕೇಂದ್ರ ಸೇವೆಗಳೆಂದರೆ ಭಾರತೀಯ ವಿದೇಶಾಂಗ ಸೇವೆ [IFS], ಭಾರತೀಯ ಅಂಚೆ ಸೇವೆ [IPS], ಭಾರತೀಯ ಕಂದಾಯ ಸೇವೆ [IRS], ಭಾರತೀಯ ರೈಲ್ವೆ ಸೇವೆ [IRS], ಭಾರತೀಯ ಮಾಹಿತಿ ಸೇವೆ [IIS], ಭಾರತೀಯ ಆರ್ಥಿಕ ಸೇವೆ [IES] ಇತ್ಯಾದಿ.
 
ರಾಜ್ಯ ಶಾಸಕಾಂಗದಿಂದ ಸ್ರುಷ್ಟಿಸಲ್ಪಟ್ಟು,ರಾಜ್ಯ ಲೋಕಸೇವಾ ಆಯೋಗದಿಂದ ನೇಮಕಗೊಂಡು,ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳಿಗೆ ರಾಜ್ಯ ಸೇವೆಗಳು ಎನ್ನುವರು. ಭಾರತ ಸಂವಿಧಾನದ ಭಾಗ 14ರ 309 ನೆಯ ವಿಧಿಯಲ್ಲಿ ರಾಜ್ಯ ಸೇವೆಗಳಿಗೆ ಅವಕಾಶ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಪರೀಕ್ಷೆ ಬರೆದು ಈ ಸೇವಾ ವರ್ಗಕ್ಕೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ಸೇವಾ ವರ್ಗಕ್ಕೆ ಆಯ್ಕೆಯಾದವರು ರಾಜ್ಯ ಸರ್ಕಾರದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯ ಪಟ್ಟಿಯಲ್ಲಿನ ಆಡಳಿತ ನೋಡಿಕೊಳ್ಳುವ ಇವರು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತಾರೆ. ರಾಜ್ಯ ಸೇವಾ ವರ್ಗವನ್ನು ದರ್ಜೆ 1, ದರ್ಜೆ 2, ದರ್ಜೆ 3 ಹಾಗು ದರ್ಜೆ 4 ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ದರ್ಜೆ 1 ಮತ್ತು ದರ್ಜೆ 2 ಹುದ್ದೆಯವರು ಪತ್ರಾಂಕಿತ ಅಧಿಕಾರಿಗಳಾಗಿರುತ್ತಾರೆ.ಪ್ರಮುಖ ರಾಜ್ಯ ಸೇವೆಗಳೆಂದರೆ  ಕರ್ನಾಟಕ ಆಡಳಿತ ಸೇವೆ[KAS],ಕರ್ನಾಟಕ ಆರಕ್ಷಕ ಸೇವೆ[KPS],ಕರ್ನಾಟಕ ಶಿಕ್ಷಣ ಸೇವೆ[KES], ಕರ್ನಾಟಕ ಅರಣ್ಯ ಸೇವೆ, ಕರ್ನಾಟಕ ಅಬಕಾರಿ ಸೇವೆ, ಕರ್ನಾಟಕ ಮಾರಾಟ ತೆರಿಗೆ ಸೇವೆ, ಕರ್ನಾಟಕ ಸಹಕಾರ ಸೇವೆ ಇತ್ಯಾದಿಗಳು

4. ಕೇಂದ್ರಾಡಳಿತವನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: ಕೇಂದ್ರ ಸರ್ಕಾರದ ಆಡಳಿತವನ್ನು ಕೇಂದ್ರಾಡಳಿತ ಎನ್ನುವರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ನಾಯಕತ್ವದ ಮಂತ್ರಿಮಂಡಲ ಹಾಗು ವಿವಿಧ ದರ್ಜೆಯ ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ಕೇಂದ್ರಾಡಳಿತವನ್ನು ನೋಡಿಕೊಳ್ಳುತ್ತಾರೆ.
* ಕೇಂದ್ರ ಸಚಿವಾಲಯ: ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಕಾರ್ಯಗಳನ್ನು ರಕ್ಷಣೆ, ವಿದೇಶಾಂಗ, ಹಣಕಾಸು, ರೈಲ್ವೆ, ಇಂಧನ ಮುಂತಾದ ಖಾತೆ ಅಥವ ಸಚಿವಾಲಯಗಳಾಗಿ ವಿಂಗಡಿಸಲಾಗಿರುತ್ತದೆ. ಪ್ರತಿ ಸಚಿವಾಲಯಕ್ಕೆ ಮಂತ್ರಿಯು ರಾಜಕೀಯ ಮುಖ್ಯಸ್ಥನಾಗಿದ್ದು ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ. ಕಾರ್ಯದರ್ಶಿಯ ಕಚೇರಿಯನ್ನು ಸಚಿವಾಲಯ ಅಥವ ಮಂತ್ರಾಲಯ ಎನ್ನುವರು. ಇಂತಹ ವಿವಿಧ ಖಾತೆಗಳ ಸಚಿವಾಲಯಗಳನ್ನು ಒಟ್ಟುಗೂಡಿಸಿ ಕೇಂದ್ರ ಸಚಿವಾಲಯ ಎನ್ನುವರು. ಕೇಂದ್ರ ಸಚಿವಾಲಯದ ಮುಖ್ಯಸ್ಥನನ್ನು ಸಂಪುಟ ಕಾರ್ಯದರ್ಶಿ ಅಥವ ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್ನುವರು.
* ಇಲಾಖೆ: ಒಂದು ದೊಡ್ಡ ಸಚಿವಾಲಯದ ಕಾರ್ಯವನ್ನು ದಕ್ಷತೆಯಿಂದ ನಡೆಸಲು ರಚನೆಯಾಗುವ ಆಡಳಿತ ಘಟಕಗಳಿಗೆ ಇಲಾಖೆ ಎನ್ನುವರು.ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ ಕಾರ್ಯದರ್ಶಿಯು ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ.
* ಭಾಗ: ಒಂದು ಇಲಾಖೆಯ ಕಾರ್ಯವನ್ನು ದಕ್ಷತೆಯಿಂದ ನಡೆಸಲು ರಚಿಸಲಾಗುವ ಘಟಕಗಳೇ ಭಾಗ.ಬೇರೆಬೇರೆ ವಿಭಾಗಗಳನ್ನು ಸೇರಿಸಿ ಭಾಗದ ರಚನೆಯಾಗಿರುತ್ತದೆ.ಹೆಚ್ಚುವರಿ ಅಥವ ಜಂಟಿ ಕಾರ್ಯದರ್ಶಿಯು ಭಾಗದ ಮುಖ್ಯಸ್ಥನಾಗಿರುತ್ತಾನೆ.
* ವಿಭಾಗ: ಒಂದು ಭಾಗದ ಕಾರ್ಯವನ್ನು ದಕ್ಶತೆಯಿಂದ ನಡೆಸಲು ವಿಭಾಗ ಎಂಬ ಆಡಳಿತ ಘಟಕಗಳನ್ನು ರಚಿಸಲಾಗುತ್ತದೆ. ಎರಡು ಅಥವ ಹೆಚ್ಚು ಶಾಖೆಗಳಿಂದ ಕೂಡಿರುವ ವಿಭಾಗಕ್ಕೆ ಉಪ ಕಾರ್ಯದರ್ಶಿಯು ಮುಖ್ಯಸ್ಥನಾಗಿರುತ್ತಾನೆ.
* ಶಾಖೆ: ವಿಭಾಗದ ಕಾರ್ಯವನ್ನು ದಕ್ಷತೆಯಿಂದ ನಡೆಸಲು ಶಾಖೆಗಳು ರಚನೆಯಾಗುತ್ತವೆ. ಇವುಗಳ ಮುಖ್ಯಸ್ಥರಾಗಿ ಅಧೀನ  ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಾನೆ.
* ಶಾಖಾ ವಿಭಾಗ: ಸಚಿವಾಲಯ ಸಂಘಟನೆಯ ಕಟ್ಟಕಡೆಗೆ ಶಾಖಾ ವಿಭಾಗವಿರುತ್ತದೆ. ಇಲ್ಲಿ ಮೇಲ್ದರ್ಜೆಯ ಸಹಾಯಕ, ಕೆಳ ದರ್ಜೆಯ ಸಹಾಯಕ, ಲಿಪಿಕಾರ, ಜವಾನ ಮುಂತಾದ ಸಿಬ್ಬಂದಿಗಳಿರುತ್ತಾರೆ. ಶಾಖಾಧಿಕಾರಿಯು ಶಾಖಾ ವಿಭಾಗದ ಮುಖ್ಯಸ್ಥನಾಗಿರುತ್ತಾನೆ.
ಒಟ್ಟಿನಲ್ಲಿ ಮೇಲಿನ ವಿವಿಧ ಹಂತಗಳಲ್ಲಿ ಕೇಂದ್ರ ಆಡಳಿತವು ಜರುಗುತ್ತದೆ. ವಿಶಾಲ ಭಾರತದ ಆಡಳಿತವನ್ನು ದಕ್ಷತೆಯಿಂದ ನೋಡಿಕೊಳ್ಳಲು ಈ ಆಡಳಿತ ವ್ಯವಸ್ಥೆ ನೆರವಾಗಿದೆ.

5. ರಾಜ್ಯಾಡಳಿತವನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: ರಾಜ್ಯ ಸರ್ಕಾರದ ಆಡಳಿತವನ್ನು ರಾಜ್ಯಾಡಳಿತ ಎನ್ನುವರು. ರಾಜ್ಯಪಾಲ, ಮುಖ್ಯಮಂತ್ರಿ ನಾಯಕತ್ವದ ಮಂತ್ರಿಮಂಡಲ ಹಾಗು ವಿವಿಧ ದರ್ಜೆಯ ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಾರೆ.
* ರಾಜ್ಯ ಸಚಿವಾಲಯ: ಆಡಳಿತದ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಕಾರ್ಯಗಳನ್ನು ಹಣಕಾಸು, ಲೋಕೋಪಯೋಗಿ, ಕಂದಾಯ, ಅರಣ್ಯ, ವಸತಿ ಮುಂತಾದ ಖಾತೆ ಅಥವ ಸಚಿವಾಲಯಗಳಾಗಿ ವಿಂಗಡಿಸಲಾಗಿರುತ್ತದೆ. ಪ್ರತಿ ಸಚಿವಾಲಯಕ್ಕೆ ಮಂತ್ರಿಯು ರಾಜಕೀಯ ಮುಖ್ಯಸ್ಥನಾಗಿದ್ದು ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ. ಕಾರ್ಯದರ್ಶಿಯ ಕಚೇರಿಯನ್ನು ಸಚಿವಾಲಯ ಅಥವ ಮಂತ್ರಾಲಯ ಎನ್ನುವರು. ಇಂತಹ ವಿವಿಧ ಖಾತೆಗಳ ಸಚಿವಾಲಯಗಳನ್ನು ಒಟ್ಟುಗೂಡಿಸಿ ರಾಜ್ಯ ಸಚಿವಾಲಯ ಎನ್ನುವರು. ರಾಜ್ಯ ಸಚಿವಾಲಯದ ಮುಖ್ಯಸ್ಥನನ್ನು ಸಂಪುಟ ಕಾರ್ಯದರ್ಶಿ ಅಥವ ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್ನುವರು.
* ಇಲಾಖೆ: ಒಂದು ದೊಡ್ಡ ಸಚಿವಾಲಯದ ಕಾರ್ಯವನ್ನು ದಕ್ಷತೆಯಿಂದ ನಡೆಸಲು ರಚನೆಯಾಗುವ ಆಡಳಿತ ಘಟಕಗಳಿಗೆ ಇಲಾಖೆ ಎನ್ನುವರು.ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ ಕಾರ್ಯದರ್ಶಿಯು ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ.
* ಭಾಗ: ಒಂದು ಇಲಾಖೆಯ ಕಾರ್ಯವನ್ನು ದಕ್ಷತೆಯಿಂದ,  ನಡೆಸಲು ರಚಿಸಲಾಗುವ ಘಟಕಗಳೇ ಭಾಗ.ಬೇರೆಬೇರೆ ವಿಭಾಗಗಳನ್ನು ಸೇರಿಸಿ ಭಾಗದ ರಚನೆಯಾಗಿರುತ್ತದೆ.ಹೆಚ್ಚುವರಿ ಅಥವ ಜಂಟಿ ಕಾರ್ಯದರ್ಶಿಯು ಭಾಗದ ಮುಖ್ಯಸ್ಥನಾಗಿರುತ್ತಾನೆ.
* ವಿಭಾಗ: ಒಂದು ಭಾಗದ ಕಾರ್ಯವನ್ನು ದಕ್ಶತೆಯಿಂದ ನಡೆಸಲು ವಿಭಾಗ ಎಂಬ ಆಡಳಿತ ಘಟಕಗಳನ್ನು ರಚಿಸಲಾಗುತ್ತದೆ. ಎರಡು ಅಥವ ಹೆಚ್ಚು ಶಾಖೆಗಳಿಂದ ಕೂಡಿರುವ ವಿಭಾಗಕ್ಕೆ ಉಪ ಕಾರ್ಯದರ್ಶಿಯು ಮುಖ್ಯಸ್ಥನಾಗಿರುತ್ತಾನೆ.
* ಶಾಖೆ: ವಿಭಾಗದ ಕಾರ್ಯವನ್ನು ದಕ್ಷತೆಯಿಂದ ನಡೆಸಲು ಶಾಖೆಗಳು ರಚನೆಯಾಗುತ್ತವೆ. ಇವುಗಳ ಮುಖ್ಯಸ್ಥರಾಗಿ ಅಧೀನ  ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಾನೆ.
* ಶಾಖಾ ವಿಭಾಗ: ಸಚಿವಾಲಯ ಸಂಘಟನೆಯ ಕಟ್ಟಕಡೆಗೆ ಶಾಖಾ ವಿಭಾಗವಿರುತ್ತದೆ. ಇಲ್ಲಿ ಮೇಲ್ದರ್ಜೆಯ ಸಹಾಯಕ, ಕೆಳ ದರ್ಜೆಯ ಸಹಾಯಕ, ಲಿಪಿಕಾರ, ಜವಾನ ಮುಂತಾದ ಸಿಬ್ಬಂದಿಗಳಿರುತ್ತಾರೆ. ಶಾಖಾಧಿಕಾರಿಯು ಶಾಖಾ ವಿಭಾಗದ ಮುಖ್ಯಸ್ಥನಾಗಿರುತ್ತಾನೆ.
ಒಟ್ಟಿನಲ್ಲಿ ಮೇಲಿನ ವಿವಿಧ ಹಂತಗಳಲ್ಲಿ ರಾಜ್ಯ ಆಡಳಿತವು ಜರುಗುತ್ತದೆ. ವಿಶಾಲ ರಾಜ್ಯಗಳ ಆಡಳಿತವನ್ನು ದಕ್ಷತೆಯಿಂದ ನೋಡಿಕೊಳ್ಳಲು ಈ ಆಡಳಿತ ವ್ಯವಸ್ಥೆ ನೆರವಾಗಿದೆ.

6. ಜಿಲ್ಲಾಧಿಕಾರಿಯ ಕಾರ್ಯಗಳನ್ನು ವಿವರಿಸಿ?
ಉ: ಜಿಲ್ಲೆ ಎಂಬ ನಿರ್ದಿಷ್ಟ ಪ್ರದೇಶದಲ್ಲಿ ನಡೆಯುವ ಆಡಳಿತವನ್ನು ಜಿಲ್ಲಾಡಳಿತ ಎನ್ನುವರು. ಜಿಲ್ಲಾಧಿಕಾರಿಯು ಜಿಲ್ಲಾಡಳಿತದ ಮುಖ್ಯಸ್ಥನಾಗಿರುತ್ತಾನೆ. ಆತನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ನೆರವಿನಿಂದ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತಾನೆ.
ಅ. ಕಾನೂನು ಮತ್ತು ಶಾಂತಿ ಪಾಲನೆ: ಜಿಲ್ಲಾಧಿಕಾರಿ ಜಿಲ್ಲೆಯ ದಂಡಾಧಿಕಾರಿಯಾಗಿರುತ್ತಾನೆ. ಪೋಲಿಸ್ ವರಿಷ್ಠಾಧಿಕಾರಿಯು ಇವನೊಡನೆ ಚರ್ಚಿಸಿ ಜಿಲ್ಲೆಯ ಸುವ್ಯವಸ್ಥೆಗೆ ಅಗತ್ಯ ನಿರ್ಧಾರ ಕೈಗೊಳ್ಳುತ್ತಾನೆ. ಜೈಲು ಹಾಗು ಪೋಲಿಸ್ ಠಾಣೆಗಳ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗೆ ಅವಕಾಶವಿದೆ. ಜೊತೆಗೆ ಹಿಂಸಾಚಾರ ಉಂಟಾದಾಗ ನಿಷೇಧಾಜ್ನೆ ಹೊರಡಿಸಿ ಶಾಂತಿಯನ್ನು ಕಾಪಾಡುತ್ತಾನೆ.
ಆ. ಕಂದಾಯ ಆಡಳಿತದ ನಿರ್ವಹಣೆ: ಜಿಲ್ಲಾಧಿಕಾರಿ ಜಿಲ್ಲೆಯೊಳಗಿನ ಭೂ ದಾಖಲೆಗಳ ರಕ್ಷಣೆ, ಭೂ ಕಂದಾಯ ನಿರ್ಧಾರ, ಭೂ ತೆರಿಗೆ ಸಂಗ್ರಹದಂತಹ ಕಂದಾಯ ಕಾರ್ಯಗಳನ್ನು ನೋಡಿಕೊಳ್ಳುತ್ತಾನೆ. ಜೊತೆಗೆ ಭೂ ವಿವಾದಗಳಿಗೆ ಸೂಕ್ತ ಪರಿಹಾರ ಒದಗಿಸುತ್ತಾನೆ.. ಈ ಕಾರ್ಯಗಳಲ್ಲಿ ಜಿಲ್ಲಾಧಿಕಾರಿಗೆ ಸಹಾಯಕ ಆಯುಕ್ತ, ತಹಶೀಲ್ದಾರ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ನೆರವಾಗುತ್ತಾರೆ.
ಇ. ಅಭಿವ್ರುದ್ಧಿ ಕಾರ್ಯಗಳ ಜಾರಿ: ಜಿಲ್ಲಾಧಿಕಾರಿ ರಸ್ತೆ, ಸೇತುವೆ, ಅಂಗವಿಕಲರ ಏಳಿಗೆ, ಮಹಿಳಾ ರಕ್ಷಣೆ, ಹಿಂದುಳಿದವರ ಪ್ರಗತಿಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ನೆರವಿನಿಂದ ಶ್ರಮಿಸುತ್ತಾನೆ. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಅನುಷ್ಟಾನಕ್ಕೆ ಮುಂದಾಗುತ್ತಾನೆ.
ಈ. ನಿಯಂತ್ರಕ ಕಾರ್ಯಗಳು: ಜಿಲ್ಲೆಯಲ್ಲಿ ಆಹಾರ ಸೇರಿ ಅವಶ್ಯಕ ವಸ್ತುಗಳ ಪೂರೈಕೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾನೆ. ಜೊತೆಗೆ ಆ ವಸ್ತುಗಳ ಸಮರ್ಪಕ ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತಾನೆ. ಅಬಕಾರಿ, ಸ್ಟ್ಯಾಂಪ್, ನೊಂದಣಿ ಮುಂತಾದವುಗಳ ನಿಯಂತ್ರಣಕ್ಕೆ ಗಮನ ನೀಡುತ್ತಾನೆ.
ಉ. ಚುನಾವಣಾ ಕಾರ್ಯಗಳು: ಜಿಲ್ಲಾಧಿಕಾರಿ ಜಿಲ್ಲಾ ಮಟ್ಟದ  ಚುನಾವಣಾ ಅಧಿಕಾರಿಯಾಗಿ ಕಾರ್ಯ ಮಾಡುತ್ತಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಜೊತೆಗೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಚುನಾವಣೆಗಳಲ್ಲಿ ಮೇಲ್ವಿಚಾರಕರಾಗಿರುತ್ತಾರೆ.
ಊ. ಪೌರಾಡಳಿತದ ನಿರ್ವಹಣೆ: ಜಿಲ್ಲೆಯೊಳಗಿನ ನಗರಗಳಲ್ಲಿ ಜನರು ಸುಖಮಯ ಜೀವನ ನಡೆಸಲು ಶ್ರಮಿಸುವನು. ಸ್ವಚ್ಚತೆ, ಕಸ ವಿಲೇವಾರಿ, ಮರಗಳ ಪೋಷಣೆ, ಕೊಳಗೆರಿಗಳ ನಿರ್ಮೂಲನೆಯಂತಹ ಪೌರಾಡಳಿತದ ಕಾರ್ಯಗಳಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾನೆ.
ರು. ವಿಪತ್ತುಗಳ ನಿರ್ವಹಣೆ: ಜಿಲ್ಲಾಧಿಕಾರಿ ಭೂಕಂಪ, ಬರಗಾಲ, ಅತೀ ವ್ರುಷ್ಟಿಗಳ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ನಡುವೆ ಸಮನ್ವಯವನ್ನು ಜಿಲ್ಲಾಧಿಕಾರಿ ಮೂಡಿಸುವರು.
ಎ. ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ: ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗೆ ಮನವಿ ನೀಡಿ ತಿಳಿಸುವರು. ಆಗ ಜಿಲ್ಲಾಧಿಕಾರಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನಕ್ಕೆ ತಂದು ಜನರಿಗೆ ಸ್ಪಂದಿಸಲು ಮುಂದಾಗುತ್ತಾನೆ. ಜನರ ಕೊರತೆಗಳನ್ನು ನಿವಾರಿಸಲು ಈತ ಹಗಲಿರುಳು ಶ್ರಮಿಸುತ್ತಾನೆ. 
ಏ. ಭೂ ಸ್ವಾಧೀನ ಕಾರ್ಯಗಳು: ಜಿಲ್ಲಾಧಿಕಾರಿಯು ರಸ್ತೆ, ಕಾಲುವೆ, ರೈಲು ಮಾರ್ಗ, ಆಣೆಕಟ್ಟು ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕೇಂದ್ರ ಅಥವ ರಾಜ್ಯ ಸರ್ಕಾರಕ್ಕೆ ನೀಡಲು ಸ್ವಾಧೀನ ಮಾಡಿಕೊಳ್ಳುವನು. ಭೂ ಮಾಲಿಕರು ಮತ್ತು ಸರ್ಕಾರಗಳ ನಡುವೆ ಸಂಧಾನ ಏರ್ಪಡಿಸಿ ಭೂ ವಸೂಲಿಗೆ ಸೂಕ್ತ ಪರಿಹಾರ ದೊರೆಯಲು ಶ್ರಮಿಸುವನು.

7. ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: ಸ್ವಾತಂತ್ರ್ಯ ನಂತರ ಆಡಳಿತ ಸೇವಾವರ್ಗ ಅಥವ ಸರ್ಕಾರಿ ನೌಕರರ ನೇಮಕ, ಬಡ್ತಿ, ವರ್ಗಾವಣೆ, ನಿವ್ರುತ್ತಿಗೆ ಸಂಬಂಧಿಸಿದ ವಿವಾದಗಳು ಕಂಡುಬರತೊಡಗಿದವು. ಈ ವಿವಾದಗಳನ್ನು ಸಾಮಾನ್ಯ ನ್ಯಾಯಾಲಯಗಳೇ ಸ್ವೀಕರಿಸಿ ಪರಿಹಾರ ನೀಡಬೇಕಾಗಿತ್ತು. ಇದರಿಂದ ನೌಕರರ ವಿವಾದಗಳು ಬಗೆಹರಿಯಲು ಹೆಚ್ಚು ಸಮಯ ಮತ್ತು ಹಣ ಅಗತ್ಯವಾಗಿತ್ತು. ಹೀಗಾಗಿ ನೌಕರರು ತೊಂದರೆ ಅನುಭವಿಸತೊಡಗಿದರು. ಆಗ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಷಾ ಸಮೀತಿಯನ್ನು ರಚಿಸಿ ವರದಿ ನೀಡಲು ತಿಳಿಸಿತು. ಈ ಸಮೀತಿಯು ಆಡಳಿತ ಸೇವಾವರ್ಗದ ವಿವಾದಗಳನ್ನು ಬಗೆಹರಿಸಲು ಆಡಳಿತಾತ್ಮಕ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಸಲಹೆ ನೀಡಿತು. ಮುಂದೆ 1976 ರಲ್ಲಿ ಸಂವಿಧಾನಕ್ಕೆ 42 ನೆಯ ತಿದ್ದುಪಡಿ ಮಾಡಿ 14:A ಭಾಗ 323:A ಉಪ ವಿಧಿಯನ್ನು ಸೇರಿಸಿ ಆಡಳಿತಾತ್ಮಕ ನ್ಯಾಯ ಮಂಡಳಿಯನ್ನು ಸ್ಥಾಪಿಸಲು ಸಂಸತ್ತಿಗೆ ಅವಕಾಶ ನೀಡಲಾಯಿತು. ಕೊನೆಗೆ 1985 ರಲ್ಲಿ ಸಂಸತ್ತು ಕೇಂದ್ರ ಆಡಳಿತಾತ್ಮಕ,  ನ್ಯಾಯಮಂಡಳಿ ಕಾಯಿದೆಯನ್ನು ಅಂಗೀಕರಿಸಿದಾಗ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಜಾರಿಗೊಂಡಿತು.

ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಒಬ್ಬ ಅಧ್ಯಕ್ಷ,ಹದಿನೇಳು ಉಪಾಧ್ಯಕ್ಷರು ಹಾಗು ನಲವತ್ತೊಂಬತ್ತು ಸದಸ್ಯರಿಂದ ಕೂಡಿರುತ್ತದೆ.ಅಧ್ಯಕ್ಷನು ಉಚ್ಚ ನ್ಯಾಯಾಲಯದ ಹಾಲಿ ಅಥವ ನಿವ್ರುತ್ತ ನ್ಯಾಯಾಧೀಶನಾಗಿರುತ್ತಾನೆ. ಸೈನ್ಯ ಪಡೆಗಳು, ಪ್ಯಾರಾ ಮಿಲಿಟರಿಪಡೆಗಳು, ಕೇಂದ್ರ ಸಚಿವಾಲಯಗಳ ಉದ್ಯೋಗಿಗಳನ್ನು ಬಿಟ್ಟು ಉಳಿದ ನಾಗರಿಕ ಸೇವಾವರ್ಗದ ಸಿಬ್ಬಂದಿಗಳ ಆಡಳಿತಾತ್ಮಕ ವಿವಾದಗಳನ್ನು C A T ಸ್ವೀಕರಿಸಿ ಬಗೆಹರಿಸುತ್ತದೆ. C A T ದೆಹಲಿಯಲ್ಲಿದ್ದು ಭಾರತದಾದ್ಯಂತ 17 ಬೆಂಚುಗಳನ್ನು ಉಚ್ಚ ನ್ಯಾಯಾಲಯಗಳಿರುವಲ್ಲಿ ಸ್ಥಾಪಿಸಿದೆ. 33 ವಿಭಾಗೀಯ ಪೀಠಗಳು ಹಲವು ಸಂಚಾರಿ ಪೀಠಗಳು C A T ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

8. ಕೇಂದ್ರ ಲೋಕಸೇವಾ ಆಯೋಗದ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ?
ಉ: ಭಾರತ ಸಂವಿಧಾನದ 315ನೆಯ ವಿಧಿಯು ಅಖಿಲ ಭಾರತೀಯ ಸೇವೆ ಹಾಗು ಕೇಂದ್ರ ಸೇವೆಗೆ ಅಗತ್ಯವಾದ ಸಿಬ್ಬಂದಿಗಳನ್ನು ನೇಮಿಸಲು ಸ್ವತಂತ್ರ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡಿದೆ. ಇದನ್ನು ಕೇಂದ್ರ ಲೋಕಸೇವಾ ಆಯೋಗ ಎನ್ನಲಾಗುತ್ತದೆ. ದೇಶಕ್ಕೆ ಅಗತ್ಯವಾದ ದಕ್ಷರನ್ನು ನೇಮಿಸಲು ಈ ಆಯೋಗ ಶ್ರಮಿಸುತ್ತಿದೆ. ಇದರ ರಚನೆಯನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

* ಸದಸ್ಯರ ಸಂಖೆ: UPSCಯ ಸದಸ್ಯರ ಸಂಖೆಯನ್ನು ಸಂಖೆಯನ್ನು ಸಂವಿಧಾನ ನಿಗದಿಪಡಿಸಿಲ್ಲ. ಈ ಸಂಖೆಯನ್ನು ಕಾಲಕಾಲಕ್ಕೆ  ರಾಷ್ಟ್ರಪತಿ ನಿರ್ಧರಿಸುತ್ತಾನೆ. ಪ್ರಸ್ತುತ ಒಬ್ಬ ಅಧ್ಯಕ್ಷ ಮತ್ತು ಹತ್ತು ಸದಸ್ಯರಿದ್ದಾರೆ.
* ನೇಮಕ: UPSCಯ ಅಧ್ಯಕ್ಷ ಮತ್ತು ಸದಸ್ಯರನ್ನು ಕೇಂದ್ರ ಸಚಿವ ಸಂಪುಟದ ಸಲಹೆಯಂತೆ ರಾಷ್ಟ್ರಪತಿಯವರು ನೇಮಿಸುತ್ತಾರೆ. ಈ ವೇಳೆ ಅರ್ಧದಷ್ಟು ಸದಸ್ಯರು ಕೇಂದ್ರ ಅಥವ ರಾಜ್ಯ ಸರ್ಕಾರಿ ಸೇವೆಯ ಹತ್ತು ವರ್ಷಗಳ ಅನುಭವ ಮತ್ತು ಉಳಿದವರು ವಿವಿಧ ರಂಗದಲ್ಲಿ ಅನುಭವ  ಹೊಂದಿರುವಂತೆ ನೋಡಿಕೊಳ್ಳಲಾಗುತ್ತದೆ.
* ಅಧಿಕಾರವಧಿ: UPSCಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರವಧಿ ಆರು ವರ್ಷ ಅಥವ ಅರವತ್ತೈದು ವಯಸ್ಸು ತುಂಬುವವರೆಗೆ. ಇವುಗಳಲ್ಲಿ ಯಾವುದು ಮೊದಲು ಬರುವುದೊ ಅದನ್ನು ಪಾಲಿಸಲಾಗುತ್ತದೆ.
* ವೇತನ ಮತ್ತು ಸೌಲಬ್ಯಗಳು: UPSCಯ ಅಧ್ಯಕ್ಷ ಮತ್ತು ಸದಸ್ಯರು ಸಂಸತ್ತು ಕಾಲಕಾಲಕ್ಕೆ ನಿರ್ಧರಿಸುವ ವೇತನ ಪಡೆಯುತ್ತಾರೆ. ಜೊತೆಗೆ ವಿವಿಧ ಬತ್ಯೆಗಳು ಹಾಗು ಪಿಂಚಣಿ ಪಡೆಯುವರು. ಇವರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ. ಸೌಲಭ್ಯಗಳನ್ನು ಇವರಿಗೆ ಅನಾನುಕೂಲವಾಗುವಂತೆ ಕಡಿತಗೊಳಿಸಲು ಸಂಸತ್ತಿಗೆ ಅವಕಾಶವಿಲ್ಲ. 
* ವಜಾಗೊಳಿಸುವಿಕೆ: UPSCಯ ಅಧ್ಯಕ್ಷ ಮತ್ತು ಸದಸ್ಯರನ್ನು ದುರ್ನಡತೆ, ಬ್ರಷ್ಟಾಚಾರ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ವರದಿ ಆಧರಿಸಿ ರಾಷ್ಟ್ರಪತಿ ವಜಾಗೊಳಿಸುತ್ತಾನೆ.
ಕಾರ್ಯಗಳು: ಸಂವಿಧಾನದ 320ನೆಯ ವಿಧಿಯು ಕೇಂದ್ರ ಲೋಕಸೇವಾ ಆಯೋಗ ಮಾಡಬೇಕಾದ ಕಾರ್ಯಗಳನ್ನು ಸೂಚಿಸಿದೆ. ಸಾಮಾನ್ಯವಾಗಿ ಸಲಹಾತ್ಮಕ ಕಾರ್ಯಗಳನ್ನು ಈ ಆಯೋಗ ನಿರ್ವಹಿಸಬೇಕಾಗಿದ್ದು ಪ್ರಮುಖವಾದವು ಕೆಳಗಿನಂತಿವೆ.
A. ಅಖಿಲ ಭಾರತೀಯ ಸೇವೆ, ಕೇಂದ್ರ ಸೇವೆ ಅಥವ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಾದ ನೌಕರರನ್ನು ನೇಮಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.
B. ನೇಮಕಾತಿ ವಿಧಾನ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
C. ಬಡ್ತಿ ನೀಡುವಾಗ ಅನುಸರಿಸಬೇಕಾದ ತತ್ವಗಳನ್ನು ಕುರಿತು ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದು.
D. ಒಂದು ಸೇವೆಯಿಂದ ಇನ್ನೊಂದು ಸೇವೆಗೆ ನೌಕರರನ್ನು ವರ್ಗಾಯಿಸುವಾಗ ಅನುಸರಿಸಬೇಕಾದ ತತ್ವಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
E. ನೇಮಕಗೊಂಡ ಉದ್ಯೋಗಿಗಳ ವಿರುದ್ಧದ ಶಿಸ್ತು ಕ್ರಮಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವುದು.
F. ನಾಗರಿಕ ಸೇವಾ ವರ್ಗಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಕೇಳುವ ಯಾವುದೇ ಮಾಹಿತಿಯನ್ನು ಒದಗಿಸುವುದು.
G. ತನ್ನ ಕಾರ್ಯನಿರ್ವಹಣೆ ಕುರಿತು ರಾಷ್ಟ್ರಪತಿಗೆ ವಾರ್ಷಿಕ ವರದಿಯನ್ನು ನೀಡುವುದು.
H. ರಾಜ್ಯಪಾಲರ ವಿನಂತಿ ಮತ್ತು ರಾಷ್ಟ್ರಪತಿ ಒಪ್ಪಿಗೆ ಪಡೆದ ರಾಜ್ಯ ಸೇವೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವುದು.
I. ಸಂಸತ್ತು ಕಾಯಿದೆಯ ಮೂಲಕ ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.

ಒಟ್ಟಿನಲ್ಲಿ ದೇಶದ ಆಡಳಿತಕ್ಕೆ ಸಮರ್ಥ ಉದ್ಯೋಗಿಗಳನ್ನು ಕೇಂದ್ರ ಲೋಕಸೇವಾ ಆಯೋಗ ನೇಮಿಸುತ್ತದೆ. ಸ್ವತಂತ್ರ ಹಾಗು ನಿಷ್ಪಕ್ಷಪಾತ ಆಯೋಗವಾಗಿ ಕಾರ್ಯ ನಿರ್ವಹಿಸುವ ಮೂಲಕ ದಕ್ಷ ಸೇವಾ ವರ್ಗವನ್ನು ಆಯ್ಕೆ ಮಾಡುವಲ್ಲಿ ಇದರ ಪಾತ್ರ ಅಪಾರವಾಗಿದೆ.

9. ಕರ್ನಾಟಕ ಲೋಕಸೇವಾ ಆಯೋಗದ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ?
ಉ: ಸಂವಿಧಾನದ 315ನೆಯ ವಿಧಿಯು ರಾಜ್ಯ ಸೇವೆಗೆ ಅಗತ್ಯವಾದ ಸಿಬ್ಬಂದಿಗಳನ್ನು ಆಯ್ಕೆ ಮಾಡಲು ಎಲ್ಲ ರಾಜ್ಯಗಳು ರಾಜ್ಯ ಲೋಕಸೇವಾ ಆಯೋಗವನ್ನು ಹೊಂದಲು ಅವಕಾಶ ನೀಡಿದೆ. ಎರಡು ಅಥವ ಹೆಚ್ಚಿನ ರಾಜ್ಯಗಳು ಸೇರಿ ಜಂಟಿ ಲೋಕಸೇವಾ ಆಯೋಗಗಳ ರಚನೆಗೂ ಅವಕಾಶವಿದೆ. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯದ ಲೋಕಸೇವಾ ಆಯೋಗವಾಗಿದೆ. ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದ್ದು ಉದ್ಯೋಗ ಸೌಧ ಎಂದು ಕರೆಸಿಕೊಳ್ಳುತ್ತಿದೆ. ಇದರ ರಚನೆಯನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

* ಸದಸ್ಯರ ಸಂಖೆ: KPSC ಯ ಸದಸ್ಯರ ಸಂಖೆಯನ್ನು ಸಂವಿಧಾನ ನಿಗದಿಪಡಿಸಿಲ್ಲ. ಈ ಸಂಖೆಯನ್ನು ಕಾಲಕಾಲಕ್ಕೆ ರಾಜ್ಯಪಾಲ ನಿರ್ಧರಿಸುತ್ತಾನೆ. ಪ್ರಸ್ತುತ ಒಬ್ಬ ಅಧ್ಯಕ್ಷ ಮತ್ತು ಎಂಟು ಸದಸ್ಯರಿದ್ದಾರೆ.
* ನೇಮಕ: KPSC ಯ ಅಧ್ಯಕ್ಷ ಮತ್ತು ಸದಸ್ಯರನ್ನು ರಾಜ್ಯ ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರು ನೇಮಿಸುತ್ತಾರೆ. ಈ ವೇಳೆ ಅರ್ಧದಷ್ಟು ಸದಸ್ಯರು ಕೇಂದ್ರ ಅಥವ ರಾಜ್ಯ ಸರ್ಕಾರಿ ಸೇವೆಯ ಹತ್ತು ವರ್ಷಗಳ ಅನುಭವ ಮತ್ತು ಉಳಿದವರು ವಿವಿಧ ರಂಗದಲ್ಲಿ ಅನುಭವ  ಹೊಂದಿರುವಂತೆ ನೋಡಿಕೊಳ್ಳಲಾಗುತ್ತದೆ.
* ಅಧಿಕಾರವಧಿ: KPSC ಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರವಧಿ ಆರು ವರ್ಷ ಅಥವ ಅರವತ್ತೆರಡು ವಯಸ್ಸು ತುಂಬುವವರೆಗೆ. ಇವುಗಳಲ್ಲಿ ಯಾವುದು ಮೊದಲು  ಬರುವುದೊ ಅದನ್ನು ಪಾಲಿಸಲಾಗುತ್ತದೆ.
* ವೇತನ ಮತ್ತು ಸೌಲಬ್ಯಗಳು: UPSCಯ ಅಧ್ಯಕ್ಷ ಮತ್ತು ಸದಸ್ಯರು ರಾಜ್ಯ ವಿಧಾನಸಭೆ ಕಾಲಕಾಲಕ್ಕೆ ನಿರ್ಧರಿಸುವ ವೇತನ ಪಡೆಯುತ್ತಾರೆ. ಜೊತೆಗೆ ವಿವಿಧ ಬತ್ಯೆಗಳು ಹಾಗು ಪಿಂಚಣಿ ಪಡೆಯುವರು. ಇವರ ವೇತನವನ್ನು ರಾಜ್ಯ ಸಂಚಿತ ನಿಧಿಯಿಂದ ನೀಡಲಾಗುತ್ತದೆ. ಸೌಲಭ್ಯಗಳನ್ನು ಇವರಿಗೆ ಅನಾನುಕೂಲವಾಗುವಂತೆ ಕಡಿತಗೊಳಿಸಲು ವಿಧಾನಸಭೆಗೆ ಅವಕಾಶವಿಲ್ಲ. 
* ವಜಾಗೊಳಿಸುವಿಕೆ: UPSCಯ ಅಧ್ಯಕ್ಷ ಮತ್ತು ಸದಸ್ಯರನ್ನು ದುರ್ನಡತೆ, ಬ್ರಷ್ಟಾಚಾರ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ವರದಿ ಆಧರಿಸಿ ರಾಷ್ಟ್ರಪತಿ ವಜಾಗೊಳಿಸುತ್ತಾನೆ.
ಕಾರ್ಯಗಳು: ಸಂವಿಧಾನದ 320ನೆಯ ವಿಧಿಯು ರಾಜ್ಯ ಲೋಕಸೇವಾ ಆಯೋಗ ಮಾಡಬೇಕಾದ ಕಾರ್ಯಗಳನ್ನು ಸೂಚಿಸಿದೆ. ಸಾಮಾನ್ಯವಾಗಿ ಸಲಹಾತ್ಮಕ ಕಾರ್ಯಗಳನ್ನು ಈ ಆಯೋಗ ನಿರ್ವಹಿಸಬೇಕಾಗಿದ್ದು ಪ್ರಮುಖವಾದವು ಕೆಳಗಿನಂತಿವೆ.
A. ರಾಜ್ಯ ಸೇವೆಗೆ ಅಗತ್ಯವಾದ ನೌಕರರನ್ನು ನೇಮಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.
B. ನೇಮಕಾತಿ ವಿಧಾನ ಕುರಿತು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
C. ಬಡ್ತಿ ನೀಡುವಾಗ ಅನುಸರಿಸಬೇಕಾದ ತತ್ವಗಳನ್ನು ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದು.
D. ಒಂದು ಸೇವೆಯಿಂದ ಇನ್ನೊಂದು ಸೇವೆಗೆ ನೌಕರರನ್ನು ವರ್ಗಾಯಿಸುವಾಗ ಅನುಸರಿಸಬೇಕಾದ ತತ್ವಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
E. ನೇಮಕಗೊಂಡ ಉದ್ಯೋಗಿಗಳ ವಿರುದ್ಧದ ಶಿಸ್ತು ಕ್ರಮಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವುದು.
F. ನಾಗರಿಕ ಸೇವಾ ವರ್ಗಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಕೇಳುವ ಯಾವುದೇ ಮಾಹಿತಿಯನ್ನು ಒದಗಿಸುವುದು.
G. ತನ್ನ ಕಾರ್ಯನಿರ್ವಹಣೆ ಕುರಿತು ರಾಜ್ಯಪಾಲರಿಗೆ ವಾರ್ಷಿಕ ವರದಿಯನ್ನು ನೀಡುವುದು.
H. ರಾಜ್ಯ ಶಾಸಕಾಂಗ ಕಾಯಿದೆಯ ಮೂಲಕ ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು.

ಒಟ್ಟಿನಲ್ಲಿ ರಾಜ್ಯದ ಆಡಳಿತಕ್ಕೆ ಸಮರ್ಥ ಉದ್ಯೋಗಿಗಳನ್ನು ಕರ್ನಾಟಕ ಲೋಕಸೇವಾ ಆಯೋಗ ನೇಮಿಸುತ್ತದೆ. ಸ್ವತಂತ್ರ ಹಾಗು ನಿಷ್ಪಕ್ಷಪಾತ ಆಯೋಗವಾಗಿ ಕಾರ್ಯ ನಿರ್ವಹಿಸುವ ಮೂಲಕ ದಕ್ಷ ಸೇವಾ ವರ್ಗವನ್ನು ಆಯ್ಕೆ ಮಾಡುವಲ್ಲಿ ಇದರ ಪಾತ್ರ ಅಪಾರವಾಗಿದೆ. ಇತ್ತೀಚೆಗೆ ಬ್ರಷ್ಟಾಚಾರದಲ್ಲಿ ಈ ಆಯೋಗ ಮುಳುಗಿರುವುದು ಆತಂಕದ,  ವಿಚಾರ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...